ಹಂಪಿ ಕನ್ನಡ ವಿಶ್ವವಿದ್ಯಾಲಯದವರು ಕಳೆದ ವರ್ಷ ಗೇರುಸೊಪ್ಪಾದಲ್ಲಿ ನಡೆಸಿದ ಶಾಸನ ಶಾಸ್ತ್ರ ಅಧ್ಯಯನ ತರಬೇತಿ ಕಮ್ಮಟದಲ್ಲಿ ಭಾಗವಹಿಸಲೇಬೇಕೆಂಬ ಮಹದಾಸೆಯಿಂದ ಒಂದು ಅರ್ಜಿ ಕಳಿಸಿದೆ, ಶಿಬಿರಕ್ಕೆ ಕೆಲವೇ ದಿನಗಳುಳಿದರೂ ನನ್ನ ಪತ್ರಕ್ಕೆ ಪ್ರತಿಕ್ರಿಯೆಯೇನೂ ಬರಲಿಲ್ಲ. ಆದರೂ ನನ್ನನ್ನು ತಿರಸ್ಕರಿಸಿರಬಹುದು ಎಂದೂ ಯೋಚನೆಯಾಯಿತಾದರೂ 'ಏಕೆ?' ಒಂದು ಕಾರಣ ಬೇಕಲ್ಲ, ಅಭ್ಯರ್ಥಿಗಳ ಅರ್ಜಿಗಳು ಹೆಚ್ಚು ಬಂದು ನಾನು ಕಳಿಸಿದ್ದು ತಲುಪದಿದ್ದರೆ ಅಥವಾ ಕೊನೆಯದಾಗಿ ತಲುಪಿದ್ದರೆ; ಅಥವಾ ನಾನು ಶಾಸನಶಾಸ್ತ್ರ ಕಲಿಯಲು ಸಮರ್ಥನಲ್ಲದಿದ್ದರೆ (ನಾನು ಬಿ.ಇ ಕಲಿಯುತ್ತಿರುವ ಕಾರಣ!!)-ಈ ಎರಡು ಕಾರಣಗಳನ್ನು ಮಾತ್ರ ನಾನು ಊಹಿಸಿದ್ದೆ. ಕೊನೆಗೆ ಫೋನು ಮಾಡಿ ಕೇಳಿಬಿಡೋಣ ಎಂದು ಹಂಪಿ ವಿವಿ ಶಾಸನಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ|| ಎಂ ಕೊಟ್ರೇಶ್ ಅವರಿಗೆ ಫೋನು ಮಾಡಿದೆ. ನಿರೀಕ್ಷಿಸಿದಂತೆಯತಯೇ ಹೆಸರನ್ನು ಕೇಳಿ 'ನಿಮಗಾಗಲೇ ಆಹ್ವಾನ ಕಳಿಸಿದ್ದೇವೆ, ಅದು ತಲುಪದಿದ್ದರೂ ಬಂದುಬಿಡಿ,' ಎಂದು ಹೇಳಿದರು. ನಾನು ಗೇರುಸೊಪ್ಪೆಗೆ ಹೋಗಲು ತಯಾರಿ ಮಾಡಿಕೊಂಡು ಸಿದ್ದಾಪುರದಲ್ಲಿದ್ದ ನನ್ನ ಚಿಕ್ಕಮ್ಮನ ಮನೆಗೆ ಹಿಂದಿನ ರಾತ್ರಿ ಹೋಗಿ ಉಳಿದುಕೊಂಡೆ. ಮಾರನೇ ದಿನ ಬೆಳಿಗ್ಗೆ ಕೂಡ ಅವರೇ ಫೋನು ಮಾಡಿ ಬರುತ್ತಿದ್ದೀರಾ ಹೇಗೆ, ಎಲ್ಲಿದ್ದೀರಾ ಎಂದೆಲ್ಲ ವಿಚಾರಿಸಿದರು.
ಅಂತೂ ಕಾರ್ಯಕ್ರಮ ಉದ್ಘಾಟನೆಯಾಗುವ ಹೊತ್ತಿಗೆ ಗೇರುಸೊಪ್ಪೆಯನ್ನು ತಲುಪಿದ್ದೆ, ಎಲ್ಲರೂ
ಅಪರಿಚಿತರಾಗಿದ್ದರೂ ಒಂದೆರಡು ಜನರ ಪರಿಚಯ ಮಾಡಿಕೊಂಡು ಅವರ ಜೊತೆಗೆ ಅಡ್ಡಾಡಿದೆ.
ಮೂರು ದಿನಗಳಲ್ಲಿ ನಮಗೆಲ್ಲ ಶಾಸನಗಳನ್ನು ಹೇಗೆ ಅಚ್ಚು ತೆಗೆಯುವುದು ಹೇಗೆ ಓದುವುದು, ಶಾಸನದ ಕಾಲ ನಿರ್ಣಯ
ಮಾಡುವುದು ಹೇಗೆ, ಕನ್ನಡ ಲಿಪಿ ವಿಕಾಸವಾದ ಹಂತಗಳು, ಬ್ರಾಹ್ಮೀ ಲಿಪಿಯಿಂದ ರೂಪಾಂತರವಾದ
ಬಗೆ ಇವನ್ನೆಲ್ಲ ಚೆನ್ನಾಗಿ ವಿವರಿಸಿ ಹೇಳಿದರು, ಶಾಸನದ ಅಚ್ಚು ತೆಗೆಯುವ ಪ್ರಾತ್ಯಕ್ಷಿಕೆಯೂ ಇತ್ತು. ಮೂರು ದಿನವೂ ನಮಗೆಲ್ಲ ವಾಸ್ತವ್ಯ ಹಾಗೂ ಊಟೋಪಚಾರಾದಿಗಳು ಅಲ್ಲೇ ಗೇರುಸೊಪ್ಪೆಯಲ್ಲೇ ಇತ್ತು. ಅದೆಲ್ಲ ಆದ ಮೇಲೆ ಮೂರನೇ ದಿನ ಎಲ್ಲರಿಗೂ ಪ್ರಮಾಣ ಪತ್ರ ಕೊಟ್ಟು ಬೀಳ್ಕೊಂಡರು. ಕಮ್ಮಟದಲ್ಲಿ ನನಗೆ ಮುಖ್ಯವಾಗಿ ಕೇಳುತ್ತಿದ್ದ ಪ್ರಶ್ನೆ "ಯಾವ ಕಾಲೇಜು? ಯಾವ ಕೋರ್ಸು?" ಅಂತ ನಾನು "ದಾವಣಗೆರೆ ಯುಬಿಡಿಟಿ ಕಾಲೇಜು. ಮೆಕ್ಯಾನಿಕಲ್ ಇಂಜನೀರಿಂಗ್" ಅಂತ ಹೇಳಿದ ಕೂಡಲೇ "ಮತ್ತೆ ಇಲ್ಲಿ ಹೇಗೆ ಬಂದಿರಿ?" ಎಂದು, ನಾನು "ಆಸಕ್ತಿ" ಎನ್ನುತ್ತಿದ್ದೆ. ಅಲ್ಲಿ ಬಂದಿದ್ದವರಲ್ಲಿ ಅನೇಕರು "ಇತಿಹಾಸದಲ್ಲಿ ಎಂ.ಎ ಮಾಡುತ್ತಿದ್ದವರು, ಇತಿಹಾಸದಲ್ಲಿ ಅಧ್ಯಾಪಕ,ಪ್ರಾಧ್ಯಾಪಕರುಗಳಾಗಿದ್ದವರು, ಬಿ.ಎ ವಿದ್ಯಾರ್ಥಿಗಳು ಕೆಲವೊಂದಿಷ್ಟು ಜನ ಉದ್ಯೋಗಸ್ಥರೂ ನನ್ನಂತೆ ಆಸಕ್ತರೂ ಆಗಿದ್ದರು. ಬಿ,ಇ ಕಲಿಯುತ್ತಿದ್ದವನು ನಾನೊಬ್ಬನೇ! ಹಾಗೇ ಶ್ರೀ ಮಧುಸೂದನ ಎಂಬವರೊಬ್ಬರು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ "ಹಳತು ಹೊನ್ನು" ಎಂಬ ಕಾಲಂ ಬರೆಯುತ್ತಿದ್ದವರು. ಇನ್ನೂ ಅನೇಕರು ಪಿ.ಹೆಚ್.ಡಿ ಮಾಡಿದ್ದವರೂ ಮಾಡುತ್ತಿದ್ದವರೂ ಆಗಿದ್ದರು. ಅಲ್ಲಿ ಬಂದ ನೂರಾರು ಜನರಲ್ಲಿ ಎಲ್ಲರನ್ನೂ ಪರಿಚಯ ಮಾಡಿಕೊಳ್ಳಲಾಗದಿದ್ದರೂ ಅನೇಕ ಸುಹೃದರು ಸಿಕ್ಕಿದರೆಂಬುದೇ ನನ್ನ ಸಂತೋಷ.
ಮೂರುದಿನದ ಕಾರ್ಯಕ್ರಮ ಮುಗಿಸಿಕೊಂಡು ಸಮೀಪದ ಸಾಗರ ತಾಲೂಕಿನ ಕೋಗಾರು ಗ್ರಾಮದ ಸೌಳಿಜಡ್ಡು ಊರಿನಲ್ಲಿದ್ದ ನನ್ನ ದೊಡ್ಡಮ್ಮನ ಮನೆಗೆ ಹೋದೆ. ಅಲ್ಲಿ ದೊಡ್ಡಪ್ಪನ ಜೊತೆ ಸುದ್ದಿ ಹೇಳುತ್ತಾ ಕಾಲಕಳೆದಿದ್ದಷ್ಟೇ ಆಗುತ್ತಿತ್ತೇನೋ ಆದರೆ ಅವರು ಒಂದು ದಿನ ನನ್ನ ತಮ್ಮ ಭೂಷಣನಿಗೂ ಮನೆಗೆ ಬರಲು ಹೇಳಿದರು. ಮರುದಿನ ನಾವಿಬ್ಬರೂ ಭೀಮೇಶ್ವರ ದೇವಸ್ಥಾನಕ್ಕ ಹೋಗಬೇಕೆಂದೂ ಅಲ್ಲಿ ಒಂದು ಶಾಸನವಿದೆ ಅದನ್ನು ನಾನು ಅಚ್ಚು ತೆಗೆದುಕೊಂಡು ಬಂದು ಏನಿದೆ ಅಂತ ಹೇಳಬೇಕೆಂಧು ಹೇಳಿದರು. ನನಗೂ ಒಂದು ಪರೀಕ್ಷೆಯಾಯಿತು ಅಂತ ನಾನೂ ಒಪ್ಪಿದೆ ಭೀಮೇಶ್ವರ ದೇವಸ್ಥಾನದಲ್ಲಿ ಒಂದು ವಾರದೊಳಗೇ ಯಾವುದೋ ಕಾರ್ಯಕ್ರಮವಿದ್ದ ಕಾರಣ ಅಲ್ಲಿ ಅನೇಕ ಸಿದ್ಧತೆಗಳಾಗುತ್ತಿದ್ದವು. ದಟ್ಟ ಕಾನನದ ಮಧ್ಯೆ ಇರುವ ಭೀಮೇಶ್ವರ ದೇವಾಲಯವನ್ನು ನೋಡಲು ಎರಡು ಕಣ್ಣು ಸಾಲದು ಎಂದರೆ ಅತಿಶಯೋಕ್ತಿ ಏನಲ್ಲ.
ಅಲ್ಲಿ ಬೆಳಿಗ್ಗೆಯೆಲ್ಲಾ ಹುಡುಕಾಡಿದರೂ ಯಾವ ಶಾಸನವೂ ಕಾಣಲಿಲ್ಲ. ಆಮೇಲೆ ಮಧ್ಯಾಹ್ನದ ಮೇಲೆ ಅರ್ಚಕರನ್ನು ವಿಚಾರಿಸಿದಾಗ ಅವರು ಅಲ್ಲಿಯೇ ಇದ್ದ ಬಸವನ ಮೂರ್ತಿಯ ಕಡೆ ತೋರಿಸಿದರು. 'ಇದರ ಮಂಟಪದಲ್ಲೇ ಇದೆ' ಎಂದರು.. ನಾನೂ ಭೂಷಣನೂ ಹುಡುಕಾಡಿ ಸೋತೆವು.. ಬಳಿಕ ನನ್ನ ಅದೃಷ್ಟವೆಂಬಂತೆ ಬಸವನ ಕಾಲ ಬುಡದಲ್ಲಿ ಅಕಸ್ಮಾತ ಕಂಡಿತು ಈ ಶಾಸನ. ಅದನ್ನು ನನ್ನ ಬಳಿ ಇದ್ದ ಸಾಮಾನುಗಳಿಂದ ಮೂರ್ನಾಲ್ಕು ಅಚ್ಚು ತೆಗೆದುಕೊಂಡೆ. ಆಮೇಲೆ ಓದಲು ಪ್ರಯತ್ನಿಸಿದರೂ ಅದು ಏನೆಂದು ಬಗೆಹರಿಯಲಿಲ್ಲ. ಮೊಬೈಲಿನಲ್ಲಿ ಫೋಟೋ ತೆಗೆದುಕೊಂಡೆ. "ನಮ್ಮ ಪ್ರಾತ್ಯಕ್ಷಿಕೆಯಲ್ಲಿ ತೋರಿಸಿದ್ದ ಶಾಸನ ಬಯಲಿನಲ್ಲಿ ಇದ್ದದ್ದು ಹಾಗೂ ಅಕ್ಷರಗಳು ಸ್ಪಷ್ಟವಾಗಿ ಇದ್ದದ್ದು, ಇದರಲ್ಲಿ ಸಾಲಿಗೆ ನಾಲ್ಕಾರು ಅಕ್ಷರಗಳು ಮಾತ್ರವೇ ಇದ್ದರೂ ಒಂದೋ ಎರಡೋ ಮಾತ್ರ ಗೊತ್ತಾಗುವಂತಿದ್ದವು.!! ನನಗೆ ದಿಕ್ಕೆಟ್ಟಿತು.
ಆದದ್ದಾಗಲಿ ಶಾಸನದ ಅಚ್ಚನ್ನು ಇಟ್ಟುಕೊಂಡು ಪ್ರಯತ್ನಿಸೋಣ ಎಂದು ಹೊರಟು ಬಂದೆವು. ರಾತ್ರಿ ಅವರ ಮನೆಯಲ್ಲಿ ಕುಳಿತು ಏನು ಮಾಡಿದರೂ ಅರ್ಥೈಸಲಾಗಲಿಲ್ಲ. ಆಮೇಲೆ ನನ್ನ ದೊಡ್ಡಪ್ಪನ ಭಾವ "ಅತ್ತೀಮುರುಡು ವಿಶ್ವೇಶ್ವರ" ಅವರಿಗೆ ನಾವಿಬ್ಬರೂ ಹೋಗಿ ಬಂದದ್ದೂ ಹಾಗೇ ಶಾಸನವನ್ನು ಅಚ್ಚು ತೆಗೆದುಕೊಂಡು ಬಂದದ್ದನ್ನೂ ಹೇಳಿದರು. ಅವರು ಇತಿಹಾಸ ಸಂಶೋಧಕರೂ ಅನೇಕ ಪುಸ್ತಕಗಳನ್ನು ಬರೆದವರೂ ಹಾಗೇ ಯಕ್ಷಗಾನ ಲೇಖಕ/ಕಲಾವಿದರೂ ಆಗಿದ್ದವರು. ಆಮೇಲೆ ನನಗೆ ಅವರನ್ನು ಭೆಟ್ಟಿಯಾದರೆ ಆ ಶಾಸನ ಓದಲು ಅವರು ಸಹಾಯ ಮಾಡುತ್ತಾರೆ ಎಂದರು. ನಾನು ಅಲ್ಲಿಂದ ಹೊರಟು ಮನೆಗೆ ಬಂದವನು ಅವರಿದ್ದಲ್ಲಿ ಹೋಗಲು ನಿಶ್ಚಯಿಸಿದ್ದೆನಾದರೂ ಕಾಲೇಜು ಪ್ರಾರಂಬವಾದ ಕಾರಣ ದಾವಣಗೆರೆಗೆ ಹೊರಟೆ.
ದಾವಣಗೆರೆಗೆ ಬಂದ ಮೇಲೆ ಅದನ್ನು ನಿಧಾನಕ್ಕೆ ಕೂತು ಸೂಕ್ಷ್ಮವಾಗಿ ನೋಡಿದಾಗ ನನಗೆ ಕಂಡದ್ದು ಇಷ್ಟು (ಸಂಖ್ಯೆಗಳು ಸಾಲನ್ನು ಸೂಚಿಸುತ್ತವೆ)
1. __0 ಸ್ವಸ್ತಿರ್ದುಮತಿಸಂವತ್ಸರ
2. ದವಯಿಸಾಖಸು__ಸನಿವರದಲು
3. ಬಪ್ಪಣನದ(ಡ?) ಸಂಗರಸ ಅ(ಆ?)
4. ಚಾರಿಗನಮಗ
5. ಬಸವಪ್ಪ ಆ ತಿ(ತ?)
6. ಪೋನ__(ಡ/ದ?)ಲಿ(?) ಭೀ
7.ಮೆಶ್ವರದ ದರ್ಸ್ಯನ
8.ಡ(ದ?)ಲಿನಂದಿಗೆಸ್ವರನತಿದ್ದಿಸಿಪ್ರದಿಷ್ಟಿಯನುಮಾಡಿಸಿದರು| ಶುಭಮಸ್ತು
ನನ್ನ ಮತಿಗೆ ತೋಚಿದಂತೆ ಶಾಸನದ ಸಾರಾಂಶ :-
"ಓಂ ಸ್ವಸ್ತಿ ದುರ್ಮತಿ ಸಂವತ್ಸರದ ವೈಶಾಖ ಶು__ ಶನಿವಾರದಲು (ತಿಥಿ ಗೊತ್ತಾಗಲಿಲ್ಲ) ಬಪ್ಪಣನದ(ನಾಡ?) ಸಂಗರಸ ಆಚಾರಿಗನ ಮಗ ಬಸವಪ್ಪ ಆ ತಪೋ ನಾಡಲಿ ಭೀಮೇಶ್ವರದ ದರ್ಶನದಲಿ ನಂದಿಕೇಶ್ವರನ ತಿದ್ದಿಸಿ ಪ್ರತಿಷ್ಠೆಯನು ಮಾಡಿಸಿದರು| ಶುಭಮಸ್ತು"
ಆಮೇಲೆ ಇಲ್ಲಿ ಕೂತು ನಾನು ಕಂಡುಹಿಡಿದಷ್ಟನ್ನು ಅತ್ತೀಮುರುಡು ವಿಶ್ವೇಶ್ವರ ಅವರಿಗೆ ಬರೆದು ಪೋಸ್ಟಿನಲ್ಲಿ ಕಳಿಸಿದೆ. ಅದಕ್ಕೆ ಅವರ ಸೂಕ್ತ ಉತ್ತರವೂ ಶೀಘ್ರದಲ್ಲೇ ಬಂತು. ಅವರು ಹೇಳಿದಂತೆ ಒಟ್ಟಾರೆ ಆ ಶಾಸನದ ವಿಷಯ ಹೀಗಿದೆ--
"ದುರ್ಮತಿ ಸಂವತ್ಸರದ ವೈಶಾಖ ಶುದ್ಧ____ ಶನಿ ವಾರದಲ್ಲಿ ಬಪ್ಪಣನದ ಸಂಗರಸ ಶಿಲ್ಪಿಯ ಮಗನಾದ ಬಸವಪ್ಪನು ಆ ತಪೋವನದಲ್ಲಿ ಭೀಮೇಶ್ವರನ ದರ್ಶನ ಮಾಡುವ ಸ್ಥಳದಲ್ಲಿ ನಂದಿಕೇಶ್ವರನನ್ನು ಕೆತ್ತಿಸಿ ಪ್ರತಿಷ್ಠೆ ಮಾಡಿಸಿದ"
ಇದರೊಂದಿಗೆ ಅವರು ಬರೆದ ಪತ್ರವನ್ನೂ ಕೊಟ್ಟರೆ ಶಾಸನ ಬಹುಶಃ ಸೂಕ್ತರೀತಿಯಲ್ಲಿ ಅರ್ಥವಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪತ್ರ ಹೀಗಿದೆ
"ಅತ್ತೀಮುರುಡು ವಿಶ್ವೇಶ್ವರ
ಹೇರೂರು ಉ.ಕ
581450
3/3/2011
ಶ್ರೀ ಗಣೇಶ ಕೊಪ್ಪಲತೋಟ ಅವರಿಗೆ,
ಪ್ರಿಯರೇ,
ನೀವು ಅಭಿಮಾನವಿಟ್ಟು ಕಳಿಸಿರುವ ಶಾಸನದ ಪ್ರತಿ ಕೈ ಸೇರಿದೆ. ಶಾಸನವನ್ನು ಓದಿ ದಾಖಲಿಸಿರುವುದಕ್ಕೆ ಧನ್ಯವಾದಗಳು.
ಪ್ರಸಕ್ತ ಶಾಸನವು ಶಕವರ್ಶ ನಮೂದಿಸಿರುವುದರಿಂದ ಲಿಪಿಶಾಸ್ತ್ರ ಬಲ್ಲವರಿಗೆ ತೋರಿಸಿದರೆ, ಲಿಪಿ ರೂಪದ ಆಧಾರದ ಮೇಲೆ ಕಾಲಮಾನವನ್ನು ಊಹಿಸಬಹುದು. ಕಲ್ಲಿನ ಮೇಲೆ ಶಾಸನವನ್ನು ಕೊರೆಯುವಾಗ ಸಾಲಿನ ಶುರುವಿನಲ್ಲಿ ಸೊನ್ನೆಯಿಡುವುದು ರೂಢಿಯಿದೆ. ಅದರಿಂದ ಶಾಸನ ಪಾಠವನ್ನು ಓದುವಾದ ಸಾಲು ಕಣ್ತಪ್ಪದಿರಲು ಸಹಾಯಕವಾಗುತ್ತದೆ. ಆ ರೂಢಿಯನ್ವಯ ಪ್ರಸಕ್ತ ಶಾಸನದ ಸೊನ್ನೆಯಿದೆ. ಅದರ ಹಿಂದೆ "ಓಂ"ಕಾರವನ್ನು ಊಹಿಸುವ ಅಗತ್ಯವಿಲ್ಲ
ಇನ್ನು ಶಾಸನದಲ್ಲಿ ಬರೆಯಲಾಗಿರುವ ಕೆಲವು ಪದಗಳಿಗೆ ನೀವು ಸರಿಯಾಗಿಯೇ ಅರ್ಥಯಿಸಿರುವಿರಿ. ಉದಾ- ರ್ದುಮತಿ-ದುರ್ಮತಿ, ವಯಿಸಾಕ- ವೈಶಾಖ, ಸನಿವರ-ಶನಿವಾರ, ಅಲು-ಅಲ್ಲು, ಇ.. ಆದರೆ ಬಪ್ಪಣನದ- ಬಪ್ಪಣನಾಡ ತಪೋನ__ಲಿ- ತಪೋನಾಡಲಿ ಇವು ಇನ್ನೂ ಪರಿಶೀಲನೆಗೆ ಅರ್ಹ
ಭೀಮೇಶ್ವರವು ಐತಿಹಾಸಿಕವಾಗಿ ಗೇರುಸೊಪ್ಪೆ-ಹಾಡುವಳ್ಳಿ ರಾಜ್ಯದ ಭಾಗವಾಗಿದ್ದರಿಂದ ಆ ಚರಿತ್ರೆಯ ಬೆಳಕಿನಲ್ಲಿ ಪ್ರಸಕ್ತ ಶಾಸನದ ಅಧ್ಯಯನವಾಗಬೇಕು. ಅಲ್ಲಿಯ ಅರಸುಗಳ ವಂಶಾವಳಿಯಲ್ಲಿ
ಸಂಗೀರಾಯ ಎಂಬ ಹೆಸರಿದೆ. ಶಾಸನೋಕ್ತ ಸಂಗರಸ ಹಾಗೂ ಸಂಗೀರಾಯ ಏಕವ್ಯಕ್ತಿಯೇ, ಬೇರೆಯೇ? ಈ ಅರಸರು ಜೈನರು, ಶಾಸನದಲ್ಲಿ ಬಂದಿರುವ 'ಆಚಾರಿಯ ಮಗ ಬಸವಪ್ಪ' ಎಂಬುದು ಶೈವನಾಮ. 'ಸಂಗಮೇಶ' 'ಸಂಗಣ್ಣ' ಇತ್ಯಾದಿ ಶೈವರ ಹೆಸರುಗಳಾಗಿರುತ್ತವೆ. ಹಾಗಾಗಿ ಈ 'ಸಂಗರಸ' ಚರಿತ್ರೆಯ ಸಂಗೀರಾಯನಾಗಿರದೇ ಆಚಾರಿಗ-ಆಚಾರ್ಯಕ-ಶಿಲ್ಪಿಯಾಗಿರಬೇಕು ಎಂದು ತೋರುತ್ತದೆ.
ಶಾಸನದಲ್ಲಿ ಬಂದಿರುವ "ಭೀಮೇಶ್ವರದ ದರ್ಸ್ಯನದಲಿ" ಅರ್ಥಾತ್ 'ಭೀಮೇಶ್ವರದ ದರ್ಶನದಲಿ" ಎಂಬ ವಾಕ್ಯಾಂಗದ ದರ್ಶನ-- 1)ದರ್ಶನ ಮಾಡುವ ಸ್ಥಳ 2) ಕನಸಿನಲ್ಲಿ ಕಾಣಿಸಿಕೊಂಡು ಸೂಚಿಸುವುದು--ಸ್ವಪ್ನದರ್ಶನ ಎಂಬರ್ಥ ಕೊಡುತ್ತಿದ್ದು ಇಲ್ಲಿ ದರ್ಶನದ ಸ್ಥಳ ಎನ್ನುವುದು ಸೂಕ್ತ.
ಒಟ್ಟಾರೆ ಶಾಸನದ ಸಾರಾಂಶ "___________"(ಹಿಂದೆ ಹೇಳಿದೆ)
ಇಲ್ಲಿ '
ಬಪ್ಪಣನದ'
-ಬಪ್ಪಣ ನಾಡು ಹೌದೇ? ಈ ಪ್ರದೇಶಕ್ಕೆ
ಸೌಳನಾಡು ಎಂಬ ಹೆಸರಿತ್ತು. ಇದು ಯಾವುದಾದರೂ ಊರಿನ ಹೆಸರೇ, ವ್ಯಕ್ತಿಯದೇ? ಇತ್ಯಾದಿ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಬೇಕಲ್ಲವೇ?
ನಿಮ್ಮ ಆಸಕ್ತಿಗೆ ಅಭಿನಂದನೆಗಳು. ಈ ದಿಸೆಯಲ್ಲಿ ನಿಮ್ಮ ಕೆಲಸವು ನಿರಾತಂಕವಾಗಿ ಮುಂದುವರೆಯುತ್ತಿರಲಿ. ಈ ಶಾಸನವು ದಾಖಲೆಗೆ ಒಳಪಟ್ಟಿದೆಯೇ? ಎಂದು ವಿಚಾರಿಸಿ ತಿಳಿದುಕೊಳ್ಳಿ. ನನ್ನ ಲೇಖನದಲ್ಲಿ ಪ್ರಸಕ್ತ ಶಾಸನವನ್ನು ಬಳಸಿಕೊಳ್ಳಲು ಅನುಮತಿಸುವಿರೆಂದು ನಂಬುವೆ
ಉಳಿದೆಲ್ಲ ಒಳ್ಳಿತು
ಇಂತು
ಸಹಿ/-
copy of this epigraph will be mailed to Sri K. Gunda Jois, historian, Keladi research center Sagar, Shimogga for information and guidance.
To,
Ganesh Koppalatota
2256/1 Shree Krishna hostel
Near Shri ramakrishna Ashrama
MCC 'A' block
Davanagere 577004"
ಅವರ ಈ ಸುದೀರ್ಘ ಪತ್ರಕ್ಕೆ ನಾನು ಅದೆಷ್ಟು ಋಣಿಯಾಗಿದ್ದರೂ ಸಾಲದು. ಹಾಗೇ ಅವರು ಹೇಳಿದಂತೆ ದಾಖಲೆಯಾಗಿದೆಯೋ ಇಲ್ಲವೋ ಎಂದು ಇನ್ನೂ ತಿಳಿದುಕೊಳ್ಳಲಾಗಲಿಲ್ಲ. ಒಂದು ಶಾಸನವನ್ನು ಓದಲು ಅರ್ಥೈಸಿಕೊಳ್ಳಲು ಎಷ್ಟು ಮಾಹಿತಿಗಳು ಇರಬೇಕು ಹಾಗೂ ಆ ಪ್ರದೇಶದ ಇತಿಹಾಸದ ಬಗ್ಗೆ ಹೇಗೆ ಅಧ್ಯಯನ ನಡೆಸಿರಬೇಕು ಎಂದೆಲ್ಲ ನನಗೆ ಅವರ ಪತ್ರದಿಂದ ತಿಳಿಯಿತು.
ನಾನು ಸಂಶೋಧನೆ ಮಾಡಿದ ಮೊದಲ ಶಾಸನ ಇದು. ಇದರ ನಂತರ ಎರಡನೇಯದಾಗಿ ಇನ್ನೂ ಯಾವುದನ್ನೂ ಹುಡುಕಲಿಲ್ಲ. "ಉತ್ತರಕನ್ನಡ-ಸಿದ್ದಾಪುರ ತಾಲೂಕು ಶಿರಗುಣಿಯ ಬಳಿ ಕೆಲವು ವೀರಗಲ್ಲುಗಳಿವೆ ಸಾಧ್ಯವಾದಾಗ ನೋಡು" ಎಂದು ಅವರೇ ಹೇಳಿದ್ದರೂ ನನಗಿನ್ನೂ ಕಾಲಕೂಡಿಬಂದಿಲ್ಲ. ಹಾಗೇ ಶಾಸನಗಳನ್ನು ಓದುವ ಆಸಕ್ತಿ ಕಮ್ಮಿಯೇನೂ ಆಗಿಲ್ಲ. ಆದರೆ ಸಮಯ ಅದಕ್ಕೆಲ್ಲ ಕೂಡಿ ಬರಬೇಕಷ್ಟೇ!! ಒಟ್ಟಾರೆ ಇದೊಂದು ರೀತಿಯಲ್ಲಿ ಬಹಳ ಆಸಕ್ತಿದಾಯಕ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ.