ಶುಕ್ರವಾರ, ಡಿಸೆಂಬರ್ 30, 2011

ವಿಷ್ಣುವರ್ಧನ-ನಮನಗಳ ಪದ್ಯಮಾಲಿಕೆ

ಕನ್ನಡದ ಚಲನಚಿತ್ರ ಲೋಕ ಕಂಡ ಮೇರು ನಟ.. ಅವರು ನಮ್ಮನ್ನಗಲಿ ಸರಿಯಾಗಿ ಎರಡು ವರ್ಷಗಳಾದರೂ ನಮ್ಮೆಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರಿಗೆ ಅರ್ಪಿತವೀ ಆಶವ ರಚನೆಗಳ  ಪದ್ಯಮಾಲಿಕೆ.
ಚೌಪದಿ||
ಕನ್ನಡದ ಕುವರರೇ ನಮ್ಮಗಲಿ ಹೋದಿರೌ
ಮುನ್ನತೀರಿರಲುಮಾಯುಷ್ಯವುಂ ನೀಂ|
ತನ್ನತನ ತೋರಿಮೀ ಚಲನಚಿತ್ರಗಳಲ್ಲಿ
ಹೊನ್ನಗಣಿಯಾಗಿಜೀವನದಿ ದಿಟದಿ||1||

ಕಂ||
ಸಂಪತ್ಕುಮಾರನೆಂದುಂ
ಸಂಪತ್ತಿಗೆ ನೀವು ದಾಸರಾಗದೆ ನಿಂತುಂ|
ತಂಪಾಗಿ ಕಳೆದು ಚಿತ್ರಗ
ಳಿಂಪಿಂ ಜನಮಾನಸಾಂತರಂಗಸ್ಥರು ನೀಂ||2||

ಭಾಮಿನಿ||
ನಿಜದಮೋಹವ ತೊರೆದುಮಾದಿರಿ
ವಿಜಯಿ ಕಲೆಯಲಿ ಕೋವಿದರು ಮಿಗೆ
ಸೃಜಿಸಿ ಪೂರ್ಣತೆಯನ್ನು ನಟನೆಯಲಿಂತು ಚಿತ್ರದಲಿ|
ಗಜಸುಗಂಭೀರ ಖಳನಾಯಕ
ರಜನಿಕಾರಕನೋಲು ಸುಂದರ
ಸುಜನ ನಾಯಕಪಾತ್ರಗಳಲೈತಂದು ತೆರೆಯಲ್ಲಿ||3||

ಆಹ ಕಳೆಯೇನದುವೆ ಮೊಗದಲಿ
ಆಹ ನಿಮ್ಮಯ ನೋಟವೇನಿದು
ಆಹ ಪ್ರತಿಭಾಸಂಪನರು ನೀವಲ್ತೆ ನಟನೆಯಲಿ|
ದೇಹಸೌಷ್ಠವವೆಂತು ನಿಮ್ಮದು
ಬಾಹುಬಲಿಯುಂ ಕಂಠಸಿರಿಯುಂ
ಮೋಹಿಸದೆ ಪ್ರೇಕ್ಷಕರ ಕನ್ನಡ ಭಕ್ತರನು ಸೊಗದಿ||4||

ಚೌಪದಿ||
ನಾಗರಹಾವೊಳು ದುರ್ಗದ ತರುಣಂ
ವೇಗದ ಚೋರಂ ಮತ್ತೊರ್ಮೆ|
ಭೋಗಿಯರಸನಂತಿನ್ನೊರ್ಮೆಗೆ ದಲ್
ಸಾಗಿತು ನಿಮ್ಮೀ ಚಿತ್ರಂಗಳ್||5||

ಭೂಮಿಪನಾದಿರಿ ರಕ್ಷಕನಾದಿರಿ
ನಾಮದಿ ಖ್ಯಾತರು ನೀವಾಗಿ|
ಈ ಮಾನವತೆಯ ತೋರುತ ಚಿತ್ರದಿ
ಹೋಮಂಗೈದಿರಿ ಜೀವನವಂ||6||ಸಿರಿವಂತ ನೀವಾಗಿ ಕುಳ್ಳನಾ ಜೊತೆಯಾಗಿ
ಮರೆಯಲಾರದ ಚಿತ್ರ ನೀಡಿ ನಮಗೆ||
ತೊರೆದು ಹೋದಿರಿ ಜಗವನೇಕಿಂತು ಮಾಡಿದಿರಿ
ತಿರೆಗೆ ಭಾರವೆ ನೀವು? ಮೇಣು ಕಾಲಂ||7||

ಮನವೆಂಬ ದೇಗುಲದಿ ಮನೆ ಕಟ್ಟಿ ಮರೆಯಾಗಿ
ತನುವಿಂದ ದೂರ ನೀವಾದರೂ ನಾವ್|
ದಿನದಿನವು ಚಿತ್ರಗಳಲೀಕ್ಷಿಸುತ ನಿಮ್ಮನ್ನೆ
ಕೊನೆವರೆಗು ನೆನಪಿಟ್ಟು ಸ್ಮರಿಸುತಿರುವೆಂ||8||


ನಮಿಪೆನೀ ಪದ್ಯಗಳ ಮಾಲಿಕೆಯನರ್ಪಿಸಿಂ
ನಮಿಪೆನಿಮ್ಮಾ ನಿತ್ಯತೃಪ್ತಾತ್ಮಕೆ||
ನಮಿಸಿಮೀ ಕನ್ನಡದ ತೇರನೆಳೆಯುವೆನಿಂತು
ನಮಿಸುವೆಂ ವಿಷ್ಣುವರ್ಧನನಡಿಗೆ ನಾಂ||9||


-ಗಣೇಶ ಕೊಪ್ಪಲತೋಟ

ಗುರುವಾರ, ಡಿಸೆಂಬರ್ 29, 2011

ಕುವೆಂಪು ಅವರಿಗೆ ಹಾಗೂ ಸಿ.ಅಶ್ವತ್ಥ ಅವರಿಗೆ ನಮನ

ಕುವೆಂಪು ,ಅಶ್ವತ್ಥ ಜೊತೆಯಲ್ಲಿ
  ಕುವೆಂಪು ಅವರ ಜನ್ಮ ದಿನದಂದು (ಡಿಸೆಂಬರ್ 29) ಅವರು "ಶ್ರೀ ರಾಮಾಯಣ ದರ್ಶನಂ" "ಚಿತ್ರಾಂಗದಾ" ಮೊದಲಾದ ಕೃತಿಗಳನ್ನು ಬರೆದ ಮಹಾಛಂದಸ್ಸು ಅಥವಾ ಸರಳರಗಳೆಯ ಹಾದಿಯಲ್ಲಿ ನಮನ.(ಇವಷ್ಟೂ ಆಶವ ಕವಿತೆಗಳೇ ಆಗಿವೆ. ಲೋಪದೋಷಗಳನ್ನು ತಿದ್ದುವುದು ಬಲ್ಲವರ ಕಾರ್ಯ)ವಾಲ್ಮೀಕಿಯಂ ಪೋಲ್ವ ಕವಿವರ್ಯರಲ್ತೆ ನೀಂ
ರಾಮಕಥೆಯಂ  ಪೇಳಿದಿರಿ ನಮ್ಮ ಭಾಷೆಯಲಿ
ದಾರ್ಶನಿಕಪಂಕ್ತಿಯಲಿ ಮೇಣ್  ನಿಂತು ರಚಿಸಿರ್ಪ
ದರ್ಶನಕೆ ನಮಿಪೆನಾಂ ಭವದೀಯ ಮಾರ್ಗಸ್ಥ.
ಸಕ್ಕದವದಾಗಿತ್ತು ಲೋಹದಾ ಕಡಲೆಯೋಲ್.
ಕನ್ನಡದಿ ಪೇಳಿಮಾಗಾನಮಂ  ನುಡಿವೆಣ್ಣ
ಸಖ್ಯದಿಂ ಕವಿಕುಲಕೆ ಪೊಸಮಾರ್ಗ ತೋರಿದಿರಿ
ಛಂದಸ್ಸೆನುವ ಮಾರ್ಗತೊರೆದಿರ್ದ ಕವಿನಿಕರ
ಪೊಸರೀತಿಯಿಂದಮೀ ಲೋಕಕ್ಕೆ ಬರಲಾಗಿ 
ಸತ್ಕಾರಣಂ, ನೀವು ಮಲರಾಗಿ ಮುಕುಟಕ್ಕೆ                                                             10
ತಾಯಿವಾಣಿಯ ಸೇರಿದಿರಿ ಗಡಾ ಕಾಲದೊಳ್
ಕಾಲಪುರುಷನ ಮೀರಲಾರದೆಯೆ ತೊರೆದುಮೀ
ಸನ್ನಿಕೇತನಮಂ, ಮುದದನಿಕೇತನರಾಗಿ
ಚೈತನ್ಯದಿಂ ಸಾಗಿ ಮತ್ತೆ ಭವಿಸಿರಿ ಭವದಿ
ಕನ್ನಡದ ಕವಿಯಾಗಿ ಕವಿಕುಲಕೆ ಮಣಿಯಾಗಿ 
ತಾಯ ಸೇವೆಗೆ ನೋಂತು ನಿಂತಿರ್ಪರಲಿ ನೀವು 
ಅಗ್ರಮಾನ್ಯರುಮಾಗಿ ಸಂಭವಿಸಿ ಬನ್ನಿ
ರಾಮಾಯಣಂ ಪೇಳಿ ಭಾರತವನುಲಿದು
ಮಾ ವಿವಿಧ ಕಥೆಗಳಂ ಪೇಳಿ ಕಿಂದರಿಜೋಗಿ
ಜಲಗಾರ ಮಧುಮಗಳು ಹೆಗ್ಗಡತಿಗಳ ಮೀರಿ                                                          20
ಬಾಲಗೋಪಾಲನಂತೊರ್ಮೆ ಬಂದಿಳಿಯಿರೌ
ನಮಿಸಿಂ ಭವದ್ವಿಶ್ವರೂಪದಾತ್ಮಕೆ ನಾನು
ಪಾಡುವೆನು ನಿಮ್ಮಯಸ್ತುತಿಯ.
                                       ಕುಪ್ಪಳ್ಳಿ
ಯೆಂಬೂರಿನಲಿ ನೋಡಿಹೆನು ನಿಮ್ಮ ಲೀಲೆಗಳ
ಭಾವಚಿತ್ರಗಳನಂತು, ಕಲಿತೆ ಕಥೆಬರೆವುದನ
ನಿಮ್ಮೂರಿನ ಕುವೆಂಪು ಭವನದಲಿ ಪಿಂತೆಯಾಂ
ಹರಸಿರೌ ಎನ್ನನುಂ ಮೇಣಿರಲರಿತನವುಂ
ಮತ್ತೊರ್ಮೆ ಮಗದೊರ್ಮೆ ಇನ್ನೊರ್ಮೆ ಪೇಳುವೆಂ
ಕಾವ್ಯಲೋಕದಿ ನೀವು ಧ್ರುವತಾರೆ! ನನ್ನಿಯುಂ !!                                                  30
ಇದೇದಿನ ಹುಟ್ಟಿದ ಹಾಗೂ ಕಾಲನ ವಶವಾದ ಇನ್ನೊಬ್ಬ ಮಹಾನ್ ಪ್ರತಿಭಾನ್ವಿತ ಗಾಯಕರು ಸಿ. ಅಶ್ವತ್ಥಅವರು. ಅವರು ಕಳೆದೆರಡು ವರ್ಷಗಳ ಹಿಂದೆ ಕಾಲನ ವಶವಾದದ್ದು ದುಃಖಕರ. ಅವರ ಗೀತೆಗಳು ಕುವೆಂಪು ಹಾಗೂ ಬೇಂದ್ರೆ ಅವರನ್ನು ಮನೆಮನೆಗೂ ಕೊಂಡೊಯ್ದವು ಎಂದರೆ ಅತಿಶಯೋಕ್ತಿಯೇನಲ್ಲ. ಅವರಿಗೂ ನನ್ನ ನುಡಿನಮನಗಳು.ಗಾನಕೋವಿದರಾಗಿ ಜನಿಸಿರ್ದು ಕನ್ನಡದ
ಕೋಕಿಲಂಗಳ ಯೂಥದಲಿ ನಿಂತಿರೌ ಮುಂದೆ
ಭಿನ್ನಮಾ ಧ್ವನಿಯಲ್ಲಿ ಸೂರೆಗೊಂಡಿರಿ ಜಗವ
ನಿಮ್ಮಳಿವು ನಿಜವಲ್ಲ, ಗಾಯನದಿ ಚಿರಜೀವಿ
ನೀವು, ಮೇಣ್ ಸರ್ವಕಾಲದಲಿ ಕೇಳಲ್ಕೆಂದು
ನಿಮ್ಮದನಿಯಂ ನಾವು ಸಂಚಾರವಾಣಿಯಲಿ
ಸಂಗ್ರಹಿಸಿ ಸೇರಿಸಿಹೆವಿಂದುಮೀ ದಿನದಲ್ಲಿ
ಜಗದೀಶ ನೀಡಲೌ ಸುಖವನಿಮ್ಮಾತ್ಮಕ್ಕೆ
ನೀವುವುಂ ಸಂಭವಿಸಿ ನಮ್ಮ ನಾಡಲಿ ಮತ್ತೆ
ಹಾಡಿ ಹಾಡನು ತಾಯ ಮನಕೊಪ್ಪುವಂತೆ, ದಲ್                                                10
ನಮ್ಮ ಮಾತಿಗೆ ದೈವವೊಪ್ಪಿಗೆಯನಿತ್ತೊಡೀ
ಭವದಿ ಸಂಭವ ಸಾಧ್ಯವಲ್ತೆ ಮುಂತೊರ್ಮೆಗೇಂ!