ಸ್ರಗ್ದರೆ || (ಸಂಸ್ಕೃತ)
ವಂದೇ ಕ್ಷಿಪ್ರ ಪ್ರಸಾದಂ ಕವಿಜನ ಹೃದಯಂ ಶೃಂಗಖಂಡೇ ನಿವಾಸಂ
ಅಶ್ಮಪ್ರಾಪ್ತಸ್ವರೂಪಂ ಸಕೃದಪಿ ಚ ನಿಜಾಕಾರವದ್ ರಾಜಮಾನಂ|
ನಿತ್ಯಂ ಪುಷ್ಪೈಃಸುಪೂಜ್ಯಂ ಪರಿಮಲ ಭರಿತೈರ್ವಾಸಿತಂ ಯಜ್ಞಧೂಪೈಃ
ಪಶ್ಚಾತ್ತಪ್ತಾನ್ ಕ್ಷಮಸ್ವ ದ್ವಿಪವದನ! ಜನಾನ್ ನಿತ್ಯತೃಪ್ತಾನ್ ಕುರು ತ್ವಂ ||
(ಇದೊಂದು ಮಾತ್ರ ಆಶು ಕವಿತೆಯಲ್ಲ. ಹಿಂದೆಯೇ ಬರೆದದ್ದನ್ನು ಶತಾವಧಾನಿ ಆರ್ ಗಣೇಶ್ ಅವರ ಬಳಿ ತಿದ್ದಿಸಿ ಇಲ್ಲಿ ಹಾಕುತ್ತಿದ್ದೇನೆ. )
![]() |
ಮಹಿಷಾಸುರ ಮರ್ದಿನಿ ಶಿಲ್ಪ |
ಭಾಮಿನಿ||
ಹಿಂದೆ ಮಹಿಷನ ಕೊಂದಳಂಬಿಕೆ
ಮುಂದೆ ಕಾಲದಿ ಭವದಿ ಭೂಸುರ
ವೃಂದದಲಿ ತಾ ಪೂಜ್ಯಳಾದಳು ಸತ್ತನೆಸಗುತ್ತ
ನಂದಿಪಳು ಕೃತಕಾಲದಲಿ ತಾ
ನಿಂದು ಕಲಿಗಾಲದಲಿ ಖಳರಂ
ಕೊಂದು ಸತ್ಯವ ಸ್ಥಾಪಿಸಲು ಸಂಭವಿಸಲಳ್ಕುವಳೇ!! ||1||
ಹರಸತಿಯು ಮಿಗೆ ಭವಿಸಿ ಕಲಿಯಂ
ಪರಮ ಪಾವನ ಮಾಳ್ಪಳಲ್ಲದೆ
ಧರುಮ ಸಂಸ್ಥಾಪನೆಯಗೊಳಿಸಲು ನೋಂತು ಬರುತಿಹಳು
ಜರಿವರಂ ಸಂಹರಿಸಿ ಕೊರತೆಯ
ಸರಿಪಡಿಸಿ ಲೋಗರಲಿ ನನ್ನಿಯ
ಪುರದಿ ಶಾಂತಿಯ ತುಂಬುವಳು ಗಡ ಸತ್ಯವಾಕ್ಯವಿದು ||2||
![]() |
ಸಿಂಧೂ ನಾಗರೀಕತೆಯ ಅವಶೇಷಗಳು |
ಸಿಂಧೂ ನಾಗರೀಕತೆಯ ಅವಶೇಷಗಳು
ಕಂದ||
ಭಾರತದ ಸಂಸ್ಕೃತಿಗಳಿಗೆ
ಸಾರವಹುದಿದು ಗಡ ಸಿಂಧುನದಿತೀರದಲಾ-
ಕಾರಂತಳೆದಾ ಸಂಸ್ಕೃತಿ
ಭಾರತರಂ ದಲ್ ವಿಶೇಷ ನಾಗರಿಕತೆಯುಂ||
![]() |
ಜೋಗ ಜಲಪಾತ |
ಜಲಪಾತಗಳು
ಪಂಚಮಾತ್ರಾ ಚೌಪದಿ||
ಗಂಗೆ ತಾ ಹರಮುಕುಟದಿಂದಿಳಿದು ಬಂದಿಹಳೊ
ಸಂಗವಂ ತ್ಯಜಿಸಿ ಹರಿಪದವ ಬಿಟ್ಟು|
ಮಂಗಳವ ತಾನೆಸಗಿ ಸಾಗರವ ಸೇರಲಾ
ವಂಗದೇಶವ ಹಾಯ್ದು ಹೋಗುತಿಹಳೋ||1||
ಪಾಲಧಾರೆಯು ಕಾಮಧೇನುವಿನ ಕೆಚ್ಚಲಿಂ
ನೀಲಸಾಲಾಗಿ ತಾ ಸುರಿಯುತಿಹುದೋ|
ಭಾಲ ನೇತ್ರನ ಶಿರದ ಮೇಲಿರ್ಪ ಚಂದಿರನು
ಕಾಲಾಗ್ನಿಯಿಂದ ತಾ ಕರಗುತಿಹನೋ||2||
ಆ ಶರಾವತಿಯು ಸಾಗರವ ಸೇರಲ್ಕೆಂದು
ನಾಶಗೆಯ್ಯುವ ಕೋಪ ತಾಳಿಹಳು ತಾನ್|
ಕ್ರೋಶ ದೂರಕೆ ಕೇಳ್ವ ಭೀಷಣ ಸ್ವರದಿಂದ
ತಾ ಶರಧಿಯೆಡೆಗೋಡಿ ಹೋಗುತಿಹಳು||3||
ಜೋಗವೆಂಬೂರಲ್ಲಿ ಪಯಧಾರೆಯೆಂಬಂತೆ
ಬಾಗಿ ಧುಮ್ಮಿಕ್ಕಿಹಳು ಮೇಲಿನಿಂದ|
ಲೋಗರಿಗೆ ತಾನುಣಿಸಿ ಸೌಂದರ್ಯ ರಸವನಂ
ಭೋಗದಾ ನಾಕವಂ ತೋರುತಿಹಳೊ||4||
ಪಂಚಮಾತ್ರಾ ಚೌಪದಿ||
ಗಂಗೆ ತಾ ಹರಮುಕುಟದಿಂದಿಳಿದು ಬಂದಿಹಳೊ
ಸಂಗವಂ ತ್ಯಜಿಸಿ ಹರಿಪದವ ಬಿಟ್ಟು|
ಮಂಗಳವ ತಾನೆಸಗಿ ಸಾಗರವ ಸೇರಲಾ
ವಂಗದೇಶವ ಹಾಯ್ದು ಹೋಗುತಿಹಳೋ||1||
ಪಾಲಧಾರೆಯು ಕಾಮಧೇನುವಿನ ಕೆಚ್ಚಲಿಂ
ನೀಲಸಾಲಾಗಿ ತಾ ಸುರಿಯುತಿಹುದೋ|
ಭಾಲ ನೇತ್ರನ ಶಿರದ ಮೇಲಿರ್ಪ ಚಂದಿರನು
ಕಾಲಾಗ್ನಿಯಿಂದ ತಾ ಕರಗುತಿಹನೋ||2||
ಆ ಶರಾವತಿಯು ಸಾಗರವ ಸೇರಲ್ಕೆಂದು
ನಾಶಗೆಯ್ಯುವ ಕೋಪ ತಾಳಿಹಳು ತಾನ್|
ಕ್ರೋಶ ದೂರಕೆ ಕೇಳ್ವ ಭೀಷಣ ಸ್ವರದಿಂದ
ತಾ ಶರಧಿಯೆಡೆಗೋಡಿ ಹೋಗುತಿಹಳು||3||
ಜೋಗವೆಂಬೂರಲ್ಲಿ ಪಯಧಾರೆಯೆಂಬಂತೆ
ಬಾಗಿ ಧುಮ್ಮಿಕ್ಕಿಹಳು ಮೇಲಿನಿಂದ|
ಲೋಗರಿಗೆ ತಾನುಣಿಸಿ ಸೌಂದರ್ಯ ರಸವನಂ
ಭೋಗದಾ ನಾಕವಂ ತೋರುತಿಹಳೊ||4||
![]() |
ಹಂಪಿ ಕಲ್ಲಿನ ರಥ |
ವಿಜಯನಗರ ಸಾಮ್ರಾಜ್ಯ- ಹಂಪಿ
ಕಂದ||
ವಿಜಯಂ ಪೊಂದಲ್ ಮ್ಲೇಚ್ಛರ್
ವಿಜಯಂ ಪೊಂದಲ್ ಮ್ಲೇಚ್ಛರ್
ಧ್ವಜದೇವಾಲಯವಿನಾಶಮಾಳ್ಪುದ ನೋಡಿಂ
ವಿಜಯನಗರಕೆಂದು ಮುದದಿ
ಬಿಜಯಂಗೆಯ್ದ ರಥಮೋ ಶಿಲೆಯದಾಯ್ತಲ್ತೇ||1||
ಇನನನ್ವಯರಿಂ ಪಾಲಿತ
ಸನಾತನದ ಧರ್ಮಪಾಲನೆಗೆಪುಟ್ಟಿತ್ತಾ
ಮನುನಿಭ ವಿದ್ಯಾರಣ್ಯರ್
ಮನದೊಳ್ ವಿಜಯನಗರಂ ಮಹೋನ್ನತರಾಜ್ಯಂ ||2||
ಕಂದ||
ಛಲದೊಳ್ ದುರ್ಗದ ನಾಯಕ
ಕುಲಭವರೆಂಬುದಿತಿಹಾಸ ಕಲ್ಲಿನ ದುರ್ಗಂ
ದಲವರ ಗಾಥೆಯ ಪೇಳ್ವುದು
ಕಲಿಗಳ್ ತರ್ಪಣದಿ ತೊಯ್ದ ವೀರ ಚರಿತೆಯಂ||1||
ಮದಕರಿನಾಯಕ ನಡೆಸಿದ
ಕದನಂ ಹೈದರನೊಡಂ ಸ್ವರಾಜ್ಯವನುಳಿಸಲ-
ಲ್ಕದರೊಳ್ ವೀರಸ್ವರ್ಗಕೆ
ಪದವಿಟ್ಟ ನೃಪಾಭಿಮನ್ಯುವಂತೆಯೆ ಕಲಿ ತಾಂ||2||
![]() |
ಭಗ್ನ ಶಕಟಗಳು ಹಾಗೂ ಬಯಲು ಕೆಸರು ಜಾಗ |
ಪರಿಸ್ಥಿತಿ
ಪಂಚಮಾತ್ರಾ ಚೌಪದಿ||
ಭಾರತದ ಸಂಸ್ಕೃತಿಯ ಕಥೆಯನ್ನು ಸೂಚಿಸಿಹು-
ದೀ ರಥಗಳಾಗಿರ್ದು ಭಗ್ನರೂಪಂ|
ಸಾರಗಳನರಿಯದೆಯೆ ಯುವಜನತೆ ಮೌಢ್ಯದಲಿ
ಪಾರಮಾರ್ಥವ ಬಿಟ್ಟು ನಡೆಯುತಿಹುದು||1||
ಜೀವನದ ಸದ್ಗುಣಗಳಾಗರದೊಲೀ ಧರ್ಮ
ನಾವೆಯೋಲಿಹುದಲ್ತೆ ಸಂಸಾರಕೆ|
ಕಾವುದೈ ತಾನಾಶ್ರಿತರನಿಂತು ಭಾರತದ-
ಲಾವುದೀ ಧರ್ಮವನು ಮೀರಿರ್ಪುದೈ||2||
ಶಕಟಗಳು ಭಗ್ನವಾಗಿಹವಲ್ತೆ ನಿಸ್ಸಾರ
ದ ಕೆಸರಿಂ ಪೂರಿತವು ಹೊಲಗಳೆಲ್ಲ|
ವಿಕೃತ ಮೋಹದ ಹೇತು ಪಾಶ್ಚಿಮಾತ್ಯಗಳಿಂದ
ವಿಕಲವಾಯಿತು ಕೂಳ ಕೊಡುವ ನೆಲವು||3||
ಕಾಣಲೊಲ್ಲದು ಶುದ್ಧ ನೀರಿಗಾಸರೆಯಿಂದು
ಬಾನೊಳಾ ವಿಷಗಾಳಿ ತುಂಬಿಕೊಂಡು|
ಗೌಣವಾಯ್ತಾ ಬದುಕದಾತ್ಮತೃಪ್ತಿಯು ಜನತೆ
ಮಾನಾವಮಾನಗಳ ತೊರೆದ ದಿನದಿ||4||
(ಇಲ್ಲಿ ಬರೆದವುಗಳಲ್ಲಿ ಮೊದಲನೆಯದು ಮಾತ್ರ ಆಶು ಕವಿತೆ ಅಲ್ಲ. ಉಳಿದವೆಲ್ಲ ಆಶು ಕವಿತೆಗಳು. ಆಶು ಕವಿತೆಗಳು-ಎಂದರೆ ಸ್ಥಳದಲ್ಲೇ ವಿಷಯ ಆಯ್ದುಕೊಂಡು ಅದರ ಕುರಿತು ಪದ್ಯ ರಚನೆ ಮಾಡುವುದು. ಈ ಚಿತ್ರಗಳನ್ನೆಲ್ಲ 'ಗೂಗಲ್' ನಲ್ಲಿ ಗೂಗಲಿಸಿ ಹುಡುಕಾಡಿ ಆಯ್ದುಕೊಂಡಿದ್ದು. ಹಾಗೂ ಪದ್ಯವನ್ನು ನೇರವಾಗಿ ಇಲ್ಲಿಯೇ ಟೈಪಿಸಿದ್ದು. ಮೊದಲನೆಯದು ಮಾತ್ರ ಹಿಂದೆ ಬರೆದ ಪದ್ಯಕ್ಕೆ ಚಿತ್ರ ಹುಡುಕಾಡಿ ಹಾಕಿದ್ದು. ಅವಧಾನ ಕಲೆಯಲ್ಲಿ ಆಶುಕವಿತೆ ಕೂಡ ಒಂದು ಅಂಗ)