ಶನಿವಾರ, ಡಿಸೆಂಬರ್ 10, 2011

ಅಯೋನಿಜಾ ಪರಿಣಯ ದ್ವಿಸಂಧಾನಕಾವ್ಯ- ಕಥಾಮುಖ

||ಕಥಾಮುಖಂ||
ಭಾಮಿನಿ ಷಟ್ಪದಿ||                  ಶ್ರೀತಮೋನುದ್ವಂಶಭವರಾ | ಮಾತಿರೋಹಿತ ವರ್ಣ ಸಾನುಜ|
ರಾ ತಪೋಧನ ವಿಪ್ರಜನ ಸಹಿತದಲಿ ಪುರದೊಳಕೆ||
ಪೂತ ಧರ್ಮಜ ಮಾರ್ಗ ದರ್ಶಿಸೆ | ನೀತಿಪರಜನಕಾಯತನದೆಡೆ|
ಮಾತನಾಡುತ ಗಮಿಸಿದರು ವಿಶ್ರಾಂತಿ ಪೊಂದಲಿಕೆ||1||
ಕಾರಣಾಂತರದಿಂದ ರಾಜಕು | ಮಾರರಟವೀಚರರು ತಾವಾ|
ಗಾರವಿಯ ತೇಜಸ್ವಿಗಳು ಸಂಚಾರ ಮಾಡುತ್ತ||
ವೀರರಾಯತನವಿಹ ನಗರಿಯ | ತಾರೆಗಳ ನಡುವಿರ್ಪ ರಜನೀ|
ಕಾರಕನವೋಲ್ ಪೊಕ್ಕಿದರ್ಗಡ ವಿಪ್ರ ವೇಷದಲಿ||2||
ದಿವಿಜರಲ್ಲಿಯ ರಾಜಕುವರಿಗೆ | ನವವಧುವು ವರನರಸಿ ಮಾಳ್ಪಾ |
ಭುವನಭೂಷಣದಾ ಸ್ವಯಂವರ ನೋಡಲೆಂತೆಂದು||
ಕವಿವಿರಿಂಚಿಯ ಸನ್ನಿಧಿಗಳ | ನ್ನ ವಿವಿಧ ಸುದೇಶದ ಸುರಾಷ್ಟ್ರದ |
ಭವನ ತೊರೆದಾಗಮಿಸಿದರು ಕಾಲದಲಿ ನಗರಕ್ಕೆ ||3||
ಹಲವು ಸೌಧಗಳಿಂದ ಶೋಭಿತ | ವಲರಿನಿಂ ದಾರಿಗಳು ರಾಜಿತ |
ವಲಕೆಯಂತೆಯೆ ಸಕಲ ಸಂಪತ್ತನ್ನ ಪೊಂದಿರುವಾ ||
ನೆಲವು ಶುಭ್ರವು ನಿಖಿಲ ವೀಥಿಗ | ಳಲಿಹವಾಪಣ ಸರ್ವಲಭ್ಯ ಬ|
ಹಳ ಸೊಬಗಿನಿಂದಿತ್ತು ಪಟ್ಟಣ ವಸುಧೆ ಮುಕುಟದೊಲು||4||
ಅರಳಿ ವೃಕ್ಷದ ಕೆಳಗೆ ಪಸರಿಪ | ನೆರಳಿನಲ್ಲಿಹ ವಿಪ್ರವೃಂದಗ|
ಳರಸನಂ ಪೊಗಳುತ್ತ ಕುಳಿತಿಹುದೊಂದು ಕಡೆಯಲ್ಲಿ||
ಮರಳಿ ಶಾಸ್ತ್ರ ವಿಚಾರ ಮಂಥನ | ತರಳರಿಗೆ ವಿದ್ಯೋಪದೇಶವ  |
ನರಳಿದುತ್ಸಾಹದಲಿ ಬೋಧಿಪರಿರ್ದರತ್ತಕಡೆ||5||
ಕಥಾಮುಖದ ಮೊದಲ ಪದ್ಯದಿಂದ ದ್ವಿಸಂಧಾನತೆ ಶುರುವಾಗುತ್ತದೆ. ಇದನ್ನು ನನಗೆ ತಿಳಿದಷ್ಟರ ಮಟ್ಟಿಗೆ ಯಾವುದೇ ದೋಷವಿಲ್ಲದಂತೆ ತಿದ್ದಿದ್ದೇನೆ. ಆದರೂ ಕೆಲವು ದೋಷಗಳೂ ಕಥೆಯ ಅಸ್ಪಷ್ಟತೆಯೂ ಇರಬಹುದು(ಇದೆ). ನನ್ನ ಬುದ್ಧಿಗೆ ತೋಚಿದಷ್ಟನ್ನು ನಾನು ಬರೆಯಲು ಸಮರ್ಥನಷ್ಟೆ!
ರಾಮಾಯಣ ಪರ- (ಶ್ರೀತಮೋನುದ್ವಂಶ) ಸೂರ್ಯವಂಶ ಸಂಭವರು ರಾಮ, ಅತಿರೋಹಿತವರ್ಣ(ಕೆಂಪಾದ ಬಣ್ಣದ)ದ ತಮ್ಮನ ಜೊತೆ(ಸಾನುಜರ್) ಆ ತಪೋಧನರಾದ ವಿಪ್ರಜನ(ವಿಶ್ವಾಮಿತ್ರ-ಹೆಸರು ಪ್ರಸ್ತಾಪಿಸಿಲ್ಲದ ಕಾರಣ ಅಸ್ಪಷ್ಟ!)ರು  ಪಾವನವಾದ (ಪೂತ)ರ್ಮದಿಂದ ಹುಟ್ಟಿದ ಮಾರ್ಗವನ್ನು ದರ್ಶಿಸಲು ನೀತಿ ಪರ ಜನಕನ ಮನೆಯೆಡೆಗೆ (ಜನಕ ಆಯತನ) ಮಾತನಾಡುತ್ತ ವಿಶ್ರಾಂತಿ ಹೊಂದಲಿಕ್ಕೆ ಗಮಿಸಿದರು.
ಮಹಾಭಾರತಪರ- (ಶ್ರೀತಮೋನುದ್ವಂಶ)ಚಂದ್ರವಂಶ ಸಂಭವರು ಆ ಮಾ(ಮಹಾ)ಕ್ಷತ್ರಿಯವರ್ಣವನ್ನು ಮರೆಮಾಚಿ (ವರ್ಣ ತಿರೋಹಿತ) ಸಾನುಜರು ಪೂತ ಧರ್ಮಜ(ಯುಧಿಷ್ಠಿರ) ಮಾರ್ಗದರ್ಶಿಸಲು ವಿಪ್ರಜನ ಸಹಿತರಾಗಿ ನೀತಿಪರ ಜನರಿಗೆ ಮನೆಯಾದ (ಜನಕೆ ಆಯತನ) ಪುರದೊಳಗೆ ಮಾತನಾಡುತ ವಿಶ್ರಾಂತಿ ಹೊಂದಲು ಹೋದರು..
ಉಳಿದ ಪದ್ಯಗಳು ಕೇವಲ ಒಂದೇ ಅರ್ಥ ಹೊಂದಿದ್ದರೂ ಎರಡೂ ಕಥೆಗಳಿಗೆ ಸಮಾನರೀತಿಯಲ್ಲಿ ಸಾಗುತ್ತವೆ.