Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೫ ಶಾಕುಂತಲದ ಶ್ಲೋಕಚತುಷ್ಟಯ



ಭಾರತೀಯಕವಿಕಾವ್ಯಪರಂಪರೆಯಲ್ಲಿ ವ್ಯಾಸವಾಲ್ಮೀಕಿಗಳ ಬಳಿಕ ಕಾಳಿದಾಸನಷ್ಟು ವಿಶ್ರುತವಾದ ಹೆಸರು ಇನ್ನೊಂದಿಲ್ಲವೆಂದೇ ಹೇಳಬಹುದು. ಕಾಳಿದಾಸನ ಪ್ರತಿಭೆ ಯಾರನ್ನೂ ಆಕರ್ಷಿಸುವಂತಹದು. ಅದಕ್ಕೆ ನಿದರ್ಶನವೆಂದರೆ ಶಾಕುಂತಲದ ಕಥಾನಕ! ಮೂಲ ವ್ಯಾಸರು ಬರೆದ ಭಾರತದಲ್ಲಿ ಇದ್ದ ಕಥೆಯಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಕಾಳಿದಾಸ ಈ ಕಥಾನಕವನ್ನು ಪುನಃಸೃಷ್ಟಿಸಿದ್ದಾನೆ. ದೂರ್ವಾಸ ಮಹರ್ಷಿಯ ಶಾಪದಿಂದ ದುಷ್ಯಂತನಿಗೆ ಶಾಕುಂತಲೆಯ ವಿಷಯದಲ್ಲಿ ಮರೆವುಂಟಾಗುತ್ತದೆ ಎಂಬ ಕಲ್ಪನೆಯ ಮೂಲಕ ಬೇರೆಯದೇ ಆದ ಆಯಾಮವನ್ನು ಕೊಟ್ಟು ಅದ್ಭುತವಾದ ಈ ರಸಗ್ರಂಥಿಯನ್ನು ಸೃಷ್ಟಿಸಿದ್ದಾನೆ ಕಾಳಿದಾಸ!ಅದೆಷ್ಟು ಜನಪ್ರಿಯವಾಗಿದೆಯೆಂದರೆ ಮೂಲ ಭಾರತದಲ್ಲಿದ್ದ ಕಥಾನಕವನ್ನು ಮರೆತು ಇದೇ ಮೂಲವೆಂಬಷ್ಟರ ಮಟ್ಟಿಗೆ ಭಾರತೀಯರೆಲ್ಲ ಒಪ್ಪಿಕೊಂಡುಬಿಟ್ಟಿದ್ದಾರೆ ಎಂದರೆ ಅತಿಶಯವಲ್ಲ! ದುಷ್ಯಂತ ಶಕುಂತಲೆಯರ ಕಥೆಯೆಂದೊಡನೆ ನಮಗೆ ಉಂಗುರವನ್ನು ನೆನಪಿಗೆಂದು ಕೊಟ್ಟು ಹೋದದ್ದು, ದೂರ್ವಾಸರ ಶಾಪ, ಉಂಗುರವನ್ನು ಶಕುಂತಲೆ ಕಳೆದುಕೊಂಡದ್ದು, ದುಷ್ಯಂತ ಅವಳನ್ನು ಮರೆತ ಕಾರಣ ಒಪ್ಪದೇ ಕಳುಹಿಸಿಬಿಡುವುದು, ಹಲವು ಕಾಲದ ನಂತರ ಉಂಗುರ ಬೆಸ್ತನೊಬ್ಬನ ಮೂಲಕ ರಾಜನಿಗೆ ತಲುಪಿ ಅವನಿಗೆ ಮತ್ತೆ ಎಲ್ಲವೂ ನೆನಪಾಗುವುದು ಇದೆಲ್ಲವೂ ನಮ್ಮ ಕಣ್ಣ ಮುಂದೆ ಸಾಗುತ್ತದೆ. ಇಂತಹ ಶಾಕುಂತಲದಲ್ಲಿ ನಾಲ್ಕು ಶ್ಲೋಕಗಳು ತುಂಬ ರಸಮಯ ಎಂದು ಹಲವು ಕಾಲದಿಂದ ಒಪ್ಪಿಕೊಂಡಿರುವುದುಂಟು.
ಕಾವ್ಯೇಷು ನಾಟಕಂ ರಮ್ಯಂ ತತ್ರಾಪಿ ಚ ಶಕುಂತಲಂ
ತತ್ರಾಪಿ ಚತುರ್ಥೋಽಂಕಸ್ತತ್ರಶ್ಲೋಕಚತುಷ್ಟಯಂ ||
ಎಂಬ ಒಂದು ಶ್ಲೋಕದಲ್ಲಿ "ಕಾವ್ಯಗಳಲ್ಲಿ ನಾಟಕವೇ ರಮ್ಯವಾದದ್ದು, ನಾಟಕಗಳಲ್ಲಿ ಶಾಕುಂತಲನಾಟಕವೇ ರಮ್ಯವಾದದ್ದು. ಅದರಲ್ಲಿ ಕೂಡ ನಾಲ್ಕನೇ ಅಂಕವೇ ರಮ್ಯವಾದದ್ದು. ಅದರಲ್ಲಿ ಆ ನಾಲ್ಕು ಶ್ಲೋಕಗಳು ರಮ್ಯವಾದವು" ಎಂದು ಯಾರೋ ಕವಿಯೊಬ್ಬ ಹೇಳಿದ್ದಾನೆ. ಈ ಲೇಖನದಲ್ಲಿ ಆ ನಾಲ್ಕು ಶ್ಲೋಕಗಳನ್ನು ಕನ್ನಡದ ಬಸವಪ್ಪ ಶಾಸ್ತ್ರಿಗಳ ಅನುವಾದ ಸಹಿತವಾಗಿ ನೋಡೋಣ.
ಬಸವಪ್ಪ ಶಾಸ್ತ್ರಿಗಳು-(೧೮೪೩-೧೮೯೧) ಅಭಿನವ ಕಾಳಿದಾಸ ಎಂಬ ಬಿರುದನ್ನು ಪಡೆದಿದ್ದವರು. ಬೆಂಗಳೂರಿನ ನಾಗಸಂದ್ರದ ರುದ್ರಾಕ್ಷಿಮಠದ ಸ್ವಾಮಿಗಳಾಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿ ಬೆಳೆದವರು. ತಮ್ಮ ೧೮ರ ಹರೆಯದಲ್ಲಿಯೇ "ಕೃಷ್ಣರಾಜಾಭ್ಯುದಯ" ಎಂಬ ಕೃತಿಯನ್ನು ರಚಿಸಿದರು. ಕೃಷ್ಣರಾಜ ಒಡೆಯರ ಬಳಿಕ ಪಟ್ಟಕ್ಕೆ ಬಂದ ಚಾಮರಾಜ ಒಡೆಯರ ಪೋಷಣೆಯಲ್ಲಿದ್ದ "ಅರಮನೆ ನಾಟಕ ಮಂಡಳಿ"ಗೆ ನಾಟಕವನ್ನು ಬರೆಯುವ ಸಂದರ್ಭ ಒದಗಿ ಬಂದಾಗ ಕಾಳಿದಾಸನ ಶಾಕುಂತಲ ಮತ್ತು ವಿಕ್ರಮೋರ್ವಶೀಯ ನಾಟಕಗಳನ್ನು ಮತ್ತೂ ಅನೇಕ ನಾಟಕಗಳನ್ನು ಅನುವಾದಿಸಿದರು. ಅದಲ್ಲದೇ ಸ್ವತಃ ಇಂಗ್ಲಿಷ್ ಜ್ಞಾನವಿಲ್ಲದಿದ್ದರೂ ಶ್ರೀ ಸಿ ಸುಬ್ಬರಾಯರು ಎಂಬವರ ಸಹಾಯದಿಂದ ಷೇಕ್ಸ್ ಪಿಯರ್ ನ ಒಥೆಲೋ ನಾಟಕವನ್ನು ಶೂರಸೇನಚರಿತ್ರೆ ಎಂದು ಅನುವಾದಿಸಿದರು. ಅವರ ಗಮಕವಾಚನವಂತೂ ಅತ್ಯದ್ಭುತವೆಂದು ಅವರ ಸಮಕಾಲೀನರನೇಕರು ಹೊಗಳಿದ್ದಾರೆ. ಪ್ರಸಿದ್ಧವಾದ "ಕಾಯೌ ಶ್ರೀಗೌರೀ" ಹಾಡನ್ನು ರಚಿಸಿದವರು ಇವರೇ! ಡಿವಿಜಿ ಅವರು ಜ್ಞಾಪಕಚಿತ್ರಶಾಲೆಯಲ್ಲಿ ಬಸವಪ್ಪ ಶಾಸ್ತ್ರಿಗಳ ಆಶುಕವಿತ್ವದ ಕುರಿತು ಹಾಗೂ ಅವರ ಕಾವ್ಯವಾಚನವನ್ನು ತಮಗೆ ಕೇಳುವ ಭಾಗ್ಯವೊದಗಲಿಲ್ಲ ಎಂದೂ ಬರೆದಿದ್ದಾರೆ. ಅವರ ದಮಯಂತೀಸ್ವಯಂವರವೆಂಬ ಚಂಪೂಕಾವ್ಯವು ಒಂದು ಅನರ್ಘರತ್ನವೇ ಆಗಿದೆ. ಡಿವಿಜಿಯವರು "ದಮಯಂತೀಸ್ವಯಂವರ ಕಾವ್ಯದಲ್ಲಿ ಬರುವ ಸರಸ್ವತೀದಂಡಕವನ್ನು ಈಗಿನ ವಿದ್ಯಾರ್ಥಿಗಳಿಗೆ ಬಾಯಿಪಾಠ ಮಾಡಿಸಿದರೆ ಅವರ ಉಚ್ಚಾರಣೆ ಕಿವಿಯಿಂದ ಕೇಳುವಂತಾದೀತು" ಎಂದು ಬರೆಯುತ್ತಾರೆ.
೧೬೮೦ರಲ್ಲಿ ಸಿಂಗರಾರ್ಯನು ರಚಿಸಿದ ಮಿತ್ರವಿಂದಾಗೋವಿಂದವೇ ಕನ್ನಡದ ಮೊದಲ ನಾಟಕ. ಆ ಬಳಿಕ ಬಹುಕಾಲ ನಾಟಕಗಳ ರಚನೆಯೇ ಆಗದಿದ್ದ ಕಾಲದಲ್ಲಿ ಬಸವಪ್ಪ ಶಾಸ್ತ್ರಿಗಳಿಂದ ಹಲವು ನಾಟಕಗಳು ರಚನೆಯಾದವು. ಅವರ ಪ್ರತಿಭೆಗೆ ಕೈಗನ್ನಡಿಯಾದ ಇವುಗಳಲ್ಲಿ "ಕರ್ಣಾಟಕಶಾಕುಂತಲನಾಟಕ"ದ ನಾಲ್ಕನೆಯ ಅಂಕದ ಆ ನಾಲ್ಕು ಪ್ರಸಿದ್ಧ ಪದ್ಯಗಳನ್ನೂ ಕಾಳಿದಾಸನ ಮೂಲ ಪದ್ಯಗಳನ್ನೂ ನೋಡೋಣ.
ಕಥಾಸಂದರ್ಭ- ಶಕುಂತಲೆ ಆಶ್ರಮಕ್ಕೆ ಬಂದ ದೂರ್ವಾಸಮಹರ್ಷಿಗಳನ್ನು ಗಮನಿಸದೇ ಇದ್ದ ಕಾರಣ ಅವರು "ನೀನು ಯಾರನ್ನು ನೆನೆಸಿಕೊಳ್ಳುತ್ತಿರುವೆಯೋ ಅವನು ನಿನ್ನನ್ನು ಮರೆತುಬಿಡಲಿ" ಎಂದು ಶಪಿಸುತ್ತಾರೆ. ಶಕುಂತಲೆಯ ಸಖಿಯಾದ ಪ್ರಿಯಂವದೆಯು ಅರಿಯದ ಬಾಲಕಿಯ ಪ್ರಥಮಾಪರಾಧವೆಂದು ಮನ್ನಿಸಬೇಕೆಂದು ಬೇಡಿಕೊಂಡಾಗ "ಆತ ಕೊಟ್ಟ ಉಂಗುರವನ್ನು ತೋರಿಸಿದರೆ ಪುನಃ ಎಲ್ಲವೂ ನೆನಪಾಗುತ್ತದೆ" ಎಂದು ಹೇಳಿ ಹೋಗುತ್ತಾರೆ. ಆ ಬಳಿಕ ಕಣ್ವರು ಬರುತ್ತಾರೆ. ಅವರಿಗೆ ದುಷ್ಯಂತ ಶಕುಂತಕೆಯರ ಗಾಂಧರ್ವವಿವಾಹದ ಪ್ರಸಂಗ ತಿಳಿಯುತ್ತದೆ. ಶಕುಂತಲೆಯನ್ನು ದುಷ್ಯಂತನ ಅರಮನೆಗೆ ಕಳಿಸುವುದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆಯುತ್ತಿರುತ್ತವೆ, ಆಗ ಅವಳ ಅಲಂಕಾರಕ್ಕೆಂದು ಒಂದು ಮರ ಒಳ್ಳೆಯ ವಸ್ತ್ರಗಳನ್ನು ಕೊಟ್ಟರೆ ಇನ್ನೊಂದು ಕಾಲಿನ ಅಲತಿಗೆಯನ್ನು ಕೊಟ್ಟಿತು. ಎತ್ತಿದ ಚಿಗುರಿನ ಕೈಗಳಿಂದ ವನದೇವತೆಯರು ಎಲ್ಲ ಮರಗಿಡಗಳಿಂದ ಆಭರಣಗಳನ್ನು ಕೊಟ್ಟರು. ಆಗ ಶಕುಂತಲೆಯನ್ನು ಸಾಕಿದ ತಂದೆಯಾದ ಕಣ್ವಮಹರ್ಷಿಗಳು ಬರುತ್ತಾರೆ. ಅವರಿಗೆ ಮಗಳನ್ನು ಕಳಿಸಬೇಕೆಂಬ ಕಾರಣದಿಂದ ಕಳವಳ- ಅದನ್ನು ಕಾಳಿದಾಸ ಈ ಪದ್ಯದಲ್ಲಿ ಅವರ ಮಾತುಗಳ ಮೂಲಕ ಬಣ್ಣಿಸಿದ್ದಾನೆ.
ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ ಸಂಸ್ಪೃಷ್ಟಮುತ್ಕಂಠಯಾ
ಕಂಠಃ ಸ್ತಂಭಿತಬಾಷ್ಪವೃತ್ತಿಕಲುಷಶ್ಚಿಂತಾಜಡಂ ದರ್ಶನಂ
ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಾಣ್ಯೌಕಸಃ
ಪೀಡ್ಯಂತೇ ಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈಃ||||
ಅದನ್ನು ಬಸವಪ್ಪಶಾಸ್ತ್ರಿಗಳು ಅನುವಾದಿಸಿದ್ದು ಹೀಗೆ-
ಕಳವಳವಾಂತುದೆನ್ನೆರ್ದೆ ಶಕುಂತಳೆ ಪೋದಪಳೆಂದು ಕಂಠಮು-
ಮ್ಮಳಿಸುವುದೊತ್ತುವಶ್ರುಭರದಿಂ ಜಡಮಾದುದು ದೃಷ್ಟಿ ಚಿಂತೆಯಿಂ-
ದಳಲಿನಿತಾಗೆ ಕಾಡ ಮನುಜಂಗೆನಗಂ ಕಡುನೇಹದಿಂದಮಿ-
ನ್ನುಳಿದ ಗೃಹಸ್ಥರಾತ್ಮಭವೆಯಂ ಕಳುಪುತ್ತಕಟೆಂತಳಲ್ವರೋ! ||||
(ನನ್ನ ಹೃದಯದಲ್ಲಿ ಕಳವಳವಾಗುತ್ತಿದೆ. ಶಕುಂತಳೆ ಹೋಗುತ್ತಿದ್ದಾಳೆ ಎಂದು ಗಂಟಲು ಕಟ್ಟುತ್ತಿದೆ ಉಮ್ಮಳಿಸುತ್ತಿದೆ. ಒತ್ತಿ ಬರುತ್ತಿರುವ ಕಣ್ಣೀರಿನಿಂದ, ಚಿಂತೆಯಿಂದ ದೃಷ್ಟಿ ಜಡವಾಗಿದೆ. ಈ ಗಾಢವಾದ ಸ್ನೇಹದಿಂದ ಕಾಡಿನ ಮನುಜನಾದ ನನಗೇ ಇಷ್ಟು ಅಳಲುಂಟಾಗುತ್ತಿದೆಯೆಂದಾದರೆ ಅಯ್ಯೋ! ಗೃಹಸ್ಥರಾದವರು ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಇನ್ನೆಷ್ಟು ಅಳುತ್ತಾರೋ!)
ಮದುವೆ ಮಾಡಿಕೊಟ್ಟು ಮಗಳನ್ನು ಗಂಡನ ಮನೆಗೆ ಕಳುಹಿಸುವುದು ಹೆಣ್ಣು ಹೆತ್ತವರ ಪ್ರತಿಯೊಬ್ಬರ ಅನುಭವ. ಅದನ್ನು ಸರಳವಾಗಿ ಮಾತಿನಲ್ಲಿ ಹೀಗೆ ಕಟ್ಟಿಕೊಡುತ್ತಾನೆ ಕಾಳಿದಾಸ. ಅದನ್ನು ಕನ್ನಡದ್ದೇ ಪದ್ಯವೆಂಬಂತೆ ಸೊಗಸಾಗಿ ಬಸವಪ್ಪಶಾಸ್ತ್ರಿಗಳೂ ಅನುವಾದ ಮಾಡಿದ್ದಾರೆ. ಅಲ್ಲಿ "ಅಕಟ"(ಅಯ್ಯೋ) ಎಂಬ ಶಬ್ದವೊಂದನ್ನು ಇವರೇ ಸೇರಿಸಿರುವುದೂ ಆ ಪ್ರಸಂಗಕ್ಕೆ ಇನ್ನಷ್ಟು ಪುಷ್ಟಿಯನ್ನು ಕೊಡುವಂತಹದ್ದಾಗಿದೆ. ಕಣ್ವರು ತಪಸ್ವಿಯಾದ ತನಗೇ ಇಷ್ಟು ದುಃಖವಾಗುತ್ತಿದೆಯೆಂದಾದರೆ ಇನ್ನುಳಿದ ಸಾಮಾನ್ಯರಿಗೆ ಅದೆಷ್ಟು ಸಂಕಟ ಎಂದು ಹೇಳುವುದೂ ಕೂಡ ಕರುಣಾರಸಘಟ್ಟಿಯೇ ಆಗಿದೆ.
ಆ ಬಳಿಕ ಅವಳನ್ನು ಕಳುಹಿಸುತ್ತಾ ಕಣ್ವರು ವನದೇವತೆಗಳಿಗೆ ಮರಗಿಡಗಳಿಗೆ ಹೀಗೆ ಹೇಳುತ್ತಾರೆ.
ಪಾತುಂ ನ ಪ್ರಥಮಂ ವ್ಯವಸ್ಯತಿ ಜಲಂ ಯುಷ್ಮಾಸ್ವಪೀತೇಷು ಯಾ
ನಾದತ್ತೇ ಪ್ರಿಯಮಂಡನಾಪಿ ಭವತಾಂ ಸ್ನೇಹೇನ ಯಾ ಪಲ್ಲವಂ
ಆದ್ಯೇ ವಃ ಕುಸುಮಪ್ರಸೂತಿ ಸಮಯೇ ಯಸ್ಯಾ ಭವತ್ಯುತ್ಸವಃ
ಸೇಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಜ್ಞಾಯತಾಂ||||
ಅನುವಾದ-
ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗಂಬುವಂ
ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರದಾಸೆಯುಳ್ಳೊಡಂ
ಅಲರ್ಗಳ ತಾಳೆ ನೀವು ಮೊದಲುತ್ಸವವಾಂತಪಳಾವಳಾ ಶಕುಂ-
ತಳೆ ಪತಿಸದ್ಮಕೈದಿದಪಳಾಕೆಗನುಜ್ಞೆಯನೀವುದೆಲ್ಲರುಂ||||
(ನೀವುಗಳು ನಿಮ್ಮ ಪಾತಿಗೆರೆದ ನೀರನ್ನು ಕುಡಿಯುವ ತನಕ ಯಾರು ತಾನು ನೀರು ಕುಡಿಯುತ್ತಿರಲಿಲ್ಲವೋ, ಯಾರು ತನೆಗೆ ಸಿಂಗರಿಸಿಕೊಳ್ಳುವ ಆಸೆಯಿದ್ದರೂ ಕೂಡ ನಿಮ್ಮ ಸ್ನೇಹದ ಕಾರಣ ಚಿಗುರುಗಳನ್ನು ಕೊಯ್ಯಿತ್ತಿರಲಿಲ್ಲವೋ, ಯಾರು ನಿಮಗೆ ಹೊಸ ಚಿಗುರು ಬಂದಾಗ ನಿಮಗಿಂತ ಮೊದಲು ಉತ್ಸವವನ್ನು ಹೊಂದುತ್ತಿದ್ದಳೋ ಆ ಶಕುಂತಳೆ ಈಗ ಗಂಡನ ಮನೆಗೆ ಹೋಗುತ್ತಿದ್ದಾಳೆ. ನೀವೆಲ್ಲರೂ ಅವಳಿಗೆ ಅನುಜ್ಞೆಯನ್ನು ಕೊಡಿ) ಗಂಡನ ಮನೆಗೆ ಹೊರಟ ಹೆಣ್ಣು ಮಗಳು ಮನೆಯಲ್ಲಿ ಮಾಡುತ್ತಿದ್ದ ಎಲ್ಲ ಬಾಲ್ಯದ ಆಟಗಳನ್ನೂ ಮನೆಯವರು ನೆನೆಸಿಕೊಳ್ಳುವುದಿಲ್ಲವೇ!
ಆಶ್ರಮವಾಸಿ ಶಕುಂತಲೆಗೆ ಹೂಬಳ್ಳಿಗಳಲ್ಲಿ ಮರಗಿಡಗಳಲ್ಲಿ ಎಷ್ಟು ಸ್ನೇಹವಿತ್ತೆಂಬುಬದನ್ನು ಕವಿ ಚಿತ್ರಿಸುತ್ತಾನೆ. ಒಂದು ಬಳ್ಳಿಗೆ "ವನಜ್ಯೋತ್ಸ್ನೆ" ಎಂಬ ಹೆಸರನ್ನು ಇಟ್ಟಿದ್ದಳು. ಹೋಗುವಾಗ ಸಖಿಯರಿಗೆ "ಸಖಿಯರೇ! ಈ ವನಜ್ಯೋತ್ಸ್ನೆಯನ್ನು ನಿಮ್ಮ ಕೈಗೊಪ್ಪಿಸುತ್ತಿರುವೆ" ಎಂದು ಹೇಳುತ್ತಾಳೆ. ಆಗ ಸಖಿಯರು "ಇದನ್ನೇನೋ ನಮ್ಮ ಕೈಗೆ ಕೊಟ್ಟೆ! ನಮ್ಮನ್ನು ಯಾರ ಕೈಗೆ ಒಪ್ಪಿಸುವೆ" ಎಂದು ಕಣ್ಣೀರುಗರೆಯುವ ಮಾತುಗಳೂ ಇವೆ.
ಆ ಬಳಿಕ ಕಣ್ವರು ದುಷ್ಯಂತರಾಜನಿಗೆ ಕಳಿಸುವ ಸಂದೇಶ-
ಅಸ್ಮಾನ್ ಸಾಧು ವಿಚಿನ್ತ್ಯ ಸಂಯಮಧನಾನುಚ್ಚೈಃ ಕುಲಂ ಚಾತ್ಮನ-
ಸ್ತ್ವಯ್ಯಸ್ಯಾಃ ಕಥಮಪ್ಯುಬಾನ್ಧವಕೃತಾಂ ಸ್ನೇಹಪ್ರವೃತ್ತಿಂ ಚ ತಾಮ್
ಸಾಮಾನ್ಯ ಪ್ರತಿಪತ್ತಿಪೂರ್ವಕಮಿಯಂ ದಾರೇಷು ದೃಶ್ಯಾ ತ್ವಯಾ
ಭಾಗ್ಯಾಯತ್ತಮತಃ ಪರಂ ನ ಖಲು ತದ್ವಾಚ್ಯಂ ವಧೂಬಂಧುಭಿಃ||೧೭||
ಅನುವಾದ-
ಪಿರಿದುಂ ಚಿಂತಿಸಿ ಸಂಯಮಾರ್ಥರೆನಿಪೆಮ್ಮಂ ಮೇಣ್ ಭವದ್ವಂಶದೆ-
ಳ್ತರಮಂ ನಿನ್ನೊಳಗೀಕೆ ತಾನೆಯೊಲವೆತ್ತಾ ಪಾಂಗುಮಂ ಪೆಂಡಿರೊಳ್
ಸರಿಗಂಡೀಕೆಯ ನೀಂ ಬರ್ದುಂಕಿಪುದು ಭಾಗ್ಯಾಧೀನಮಿನ್ನಂತರಿಂ
ಪೆರತೆಲ್ಲಂ ಬಗೆಯಲ್ಕದಂ ನುಡಿವುದಲ್ಲಂ ದಲ್ ವಧೂಬಂಧುಗಳ್||೧೭||
(ಸರಿಯಾದದನ್ನು ಚಿಂತಿಸಿ ಸಂಯಮಾರ್ಥರಾದ ನಮ್ಮನ್ನು ಹಾಗೂ ನಿನ್ನ ವಂಶದ ಔನ್ನತ್ಯವನ್ನು ಗಮನಿಸಿಕೊಂಡು ನಿನ್ನಲ್ಲಿ ಈಕೆ ತಾನಾಗಿಯೇ ಒಲವನ್ನು ಹೊಂದಿರುವ ರೀತಿಯನ್ನೂ ಕಂಡು ನಿನ್ನ ಹೆಂಡತಿಯರಲ್ಲಿ ಈಕೆಯನ್ನು ಸರಿಗಂಡಂತೆ ನೀನು ಬದುಕಿಸಬೇಕು. ಇದಕ್ಕಿಂತ ಹೆಚ್ಚಾಗಿ ಉಳಿದುದ್ದೆಲ್ಲ ಭಾಗ್ಯಾಧೀನವಾದದ್ದು. ಉಳಿದದ್ದನ್ನು ವಧುವಿನ ಬಂಧುಗಳು ನುಡಿಯುವುದೂ ಸರಿಯಲ್ಲ!)
ಯೋಗ್ಯವಾದದ್ದನ್ನು ಯೋಚಿಸಿ ವಿಚಾರಿಸಿಕೊಂಡು ನೀನು ಇವಳನ್ನು ನೋಡಿಕೊಳ್ಳುವುದು! ಉಳಿದದ್ದೆಲ್ಲ ಅವಳ ಅದೃಷ್ಟದಲ್ಲಿ ಇರುವಂತೆ ಆಗುತ್ತದೆ. ಇನ್ನುಳಿದದ್ದೇನನ್ನೂ ವಧುವಿನ ಬಂಧುಗಳು ನುಡಿಯಬಾರದು ಎಂದು ಹೇಳುವ ಮೂಲಕ ಅವರ ಮಿತಿಯನ್ನೂ ರಾಜನ ಕರ್ತವ್ಯವನ್ನೂ ಸೂಚಿಸುವ ಮಾತುಗಳು!
ಆ ಬಳಿಕ ಶಕುಂತಲೆಗೆ ಗಂಡನ ಮನೆಯಲ್ಲಿ ಹೇಗಿರಬೇಕೆಂಬ ಉಪದೇಶ-
ಶುಶ್ರೂಷಸ್ವ ಗುರೂನ್ ಕುರು ಪ್ರಿಯಸಖೀವೃತ್ತಂ ಸಪತ್ನೀಜನೇ
ಭರ್ತುರ್ವಿಪ್ರಕೃತಾಪಿ ರೋಷಣತಯಾ ಮಾಸ್ಮ ಪ್ರತೀಪಂ ಗಮಃ
ಭೂಯಿಷ್ಠಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ
ಯಾನ್ತ್ಯೇವಂ ಗೃಹಿಣೀಪದಂ ಯುವತಯೋ ವಾಮಾಃ ಕುಲಸ್ಯಾಧಯಃ||೧೮||
ಅನುವಾದ-
ಪಿರಿಯರ ಸೇವೆಗೈ ಸವತಿಯರ್ಕಳೊಳಿಷ್ಟವಯಸ್ಯೆಯಂದದಿಂ-
ದಿರು ಪತಿಯೊರ್ಮೆ ಹೇವಗೊಳಿಸಲ್ ಮುಳಿಸಿಂ ಪ್ರತಿಕೂಲೆಯಾಗದಿರ್
ಪರಿಜನವಂ ಕರಂ ಸಲಹು ಭಾಗ್ಯದೆ ಬಾಗಿರು ಪೆಣ್ಗಳಿಂತಿರಲ್
ಗರತಿಯರಪ್ಪರಿಂತಿರದರನ್ವಯಕಾಧಿಯನುಂಟುಮಾಳ್ಪರೌ||
(ಗಂಡನ ಮನೆಯಲ್ಲಿ ಹಿರಿಯರ ಸೇವೆಯನ್ನು ಮಾಡು, ಸವತಿಯರಲ್ಲಿ ಒಳ್ಳೆಯ ಸ್ನೇಹಿತೆಯಾಗಿರು. ಗಂಡನಲ್ಲಿ ವೈಮನಸ್ಯವುಂಟಾದರೆ ಕೋಪಗೊಂಡು ಅವನಿಗೆ ಪ್ರತಿಕೂಲೆಯಾಗದಿರು(ಹೊಂದಿಕೊಂಡು ಹೋಗು). ಸೇವಕರನ್ನು ಪರಿಜನರನ್ನು ಸಲಹು. ಭಾಗ್ಯದಲ್ಲಿ ಬಾಗಿರು, ಸ್ತ್ರೀಯರು ಹೀಗಿದ್ದರೆ ಗೃಹಿಣಿಯಾಗುತ್ತಾರೆ. ಇಲ್ಲದಿದ್ದರೆ ಕುಲಕ್ಕೇ ಹಾನಿಯಾಗುತ್ತಾರೆ, ಶಾಪವಾಗುತ್ತಾರೆ.)
ಗಂಡನ ಮನೆಗೆ ಹೊರಟ ಹೆಣ್ಣು ಮಕ್ಕಳಿಗೆ ಇಂತಹ ಮಾತುಗಳನ್ನು ಹೇಳುವುದು ತುಂಬಾ ಸಹಜವಾದದ್ದು, ಇದು ಪ್ರತಿಯೊಂದು ಮನೆಯ ಕಥಾನಕವೇ ಆಗಿದೆ. ನಮ್ಮ ಮನಸ್ಸಿನಲ್ಲಿ ಕೂಡ ಇಂತಹ ಭಾವನೆ ಹುಟ್ಟುತ್ತದೆಯಾದರೂ ಅದು ಮಾತುಗಳಲ್ಲಿ ಹೊಮ್ಮಿರುವುದಿಲ್ಲ. ಕವಿಗಳು ಮಾತನ್ನು ವಶಪಡಿಸಿಕೊಂಡವರು. ಭಾವನೆಯನ್ನು ಸೂಕ್ತಪದಗಳ ಮೂಲಕ ಸೆರೆಹಿಡಿದಿಡಬಲ್ಲವರು. ಹಾಗಾಗಿ ಇಂತಹ ಸಂದರ್ಭದ ಸೂಕ್ಷ್ಮಗಳನ್ನು ಯಥಾವತ್ತಾಗಿ ತೋರಿಸುತ್ತಾರೆ. ಕಾವ್ಯಗಳೆಂದರೆ ನಮ್ಮ ಬದುಕನ್ನೇ ಕನ್ನಡಿ ಹಿಡಿದು ತೋರಿಸುವುದೇ ಅಲ್ಲವೇ! ಇಂತಹ ಕಾವ್ಯವನ್ನು ರಚಿಸುವವನೇ ಮಹಾಕವಿಯಲ್ಲವೇ! ಇಂತಹ ಅಮೂಲ್ಯವಾದ ಕೃತಿಯನ್ನು ಕೊಟ್ಟ ಕಾಳಿದಾಸನೂ ಅದನ್ನು ಕನ್ನಡಕ್ಕೆ ತಂದ ಬಸವಪ್ಪ ಶಾಸ್ತ್ರಿಗಳೂ ಭುವನದ ಭಾಗ್ಯದಿಂದಲೇ ಉದಯಿಸಿದವರಲ್ಲವೇ!

ಕಾವ್ಯಾವಲೋಕನ-೪ ಕುವೆಂಪು ಅವರ ಸಂಸ್ಕೃತಮಾತೆ ಕವಿತೆ



ಕನ್ನಡದ ಕವಿಗಳ ಸಾಲಿನಲ್ಲಿ ಕುವೆಂಪು ಅವರ ಸ್ಥಾನ ಚಿರಸ್ಥಾಯಿಯಾಗಿರುವುದು ಅವರ ಅದ್ಭುತವಾದ ಕವಿತ್ವಶಕ್ತಿಯಿಂದಷ್ಟೇ ಅಲ್ಲದೇ ಮಹಾಕಾವ್ಯಗಳ ಕಾಲ ಮುಗಿದು ಹೋಗಿದೆ ಎಂಬಂತಹ ಕಾಲದಲ್ಲಿ ಶ್ರೀರಾಮಾಯಣದರ್ಶನದಂತಹ ಅದ್ಭುತವಾದ ರಸಸೃಷ್ಟಿಮಾಡಿರುವ ಸರ್ಜನಶೀಲತೆಗಾಗಿ! ಕುಮಾರವ್ಯಾಸನೇ "ತಿಣಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ" ಎಂದು ಹೇಳಿದ್ದಾನೆ ಎಂದರೆ ರಾಮಾಯಣವನ್ನು ಆಧರಿಸಿ ಅದೆಷ್ಟು ಕವಿಗಳು ಬರೆದಿದ್ದಾರೆ ಎಂದು ಅರಿವಾಗುತ್ತದೆ. ಅಂತಿದ್ದರೂ ಈಗ ಕನ್ನಡದ ಮಟ್ಟಿಗೆ ರಾಮಾಯಣ ಕಾವ್ಯವೆಂದರೆ ಕುವೆಂಪು ಅವರ "ಶ್ರೀರಾಮಾಯಣದರ್ಶನಂ" ಮಾತ್ರ ಎಂಬಂತಾಗಿದೆ. ಕನ್ನಡದಲ್ಲಿ ಅದಕ್ಕೂ ಹಿಂದೆ ಇದ್ದ ಎಲ್ಲ ರಾಮಾಯಣಾಧಾರಿತ ಕೃತಿಗಳು ವಿಶೇಷತಃ ಜೈನಪರಂಪರೆಯ ರಾಮಾಯಣಗಳು ಹೆಸರಿಲ್ಲದಂತಾಗಿವೆ ಎಂಬುದಂತೂ ಸತ್ಯ! ಕುವೆಂಪು ಅವರ ನಂತರ ಬಂದ ಮೊಯ್ಲಿಯವರ ರಾಮಾಯಣಮಹಾನ್ವೇಷಣೆಯಂತಹವೂ ಕೂಡ ಗಾತ್ರದಲ್ಲಿನ ಬೃಹತ್ತತೆಯಿಂದ ಹೊರತು ಪಡಿಸಿದರೆ ಗುಣದಿಂದ ಯಾವರೀತಿಯಲ್ಲೂ ಸಾಟಿಯಾಗಲಾರದೇ ಸೂರ್ಯನ ಎದುರು ನಿಂತ ಬೀದಿಯ ದೀಪದಂತಾಗಿದೆ.
ಮಹಾಕಾವ್ಯವನ್ನು ಓದಲು ಅಧ್ಯಯನ ಮಾಡಲು ತುಂಬಾ ದೀರ್ಘಕಾಲಾವಕಾಶ ಬೇಕು ಎಂಬಬುದು ಒಂದು ಹಾಗೂ ಅದಕ್ಕೆ ತಕ್ಕ ಭಾಷೆಯ ಪ್ರಭುತ್ವವೂ ಬೇಕು ಎಂಬುದು ಇನ್ನೊಂದು ಅವಶ್ಯಕತೆಯಾಗಿದೆ. ಅದಕ್ಕೆಲ್ಲ ಬೇಕಾದ ತಾಳ್ಮೆಯೂ ಓದುಗನಿಗೆ ಮುಖ್ಯ! ಕಾವ್ಯದಲ್ಲಿ ನಾರಿಕೇಳಪಾಕ, ಕದಳೀಪಾಕ,ದ್ರಾಕ್ಷಾಪಾಕ ಎಂದು ಮೂರು ವಿಧಗಳನ್ನು ಹೇಳುತ್ತಾರೆ. ನಾರಿಕೇಳ ಎಂದರೆ ತೆಂಗಿನಕಾಯಿ. ಅದರ ರುಚಿ ಗೊತ್ತಾಗಬೇಕಾದರೆ ಮೊದಲು ಸಿಪ್ಪೆಯನ್ನು ಸುಲಿದು ಆ ಬಳಿಕ ಒಡೆದು ತಿರುಳನ್ನು ಆಸ್ವಾದಿಸಬೇಕು. ಅಂದರೆ ನಾರಿಕೇಳಪಾಕದ ಕಾವ್ಯ ಎಂದರೆ ಅದನ್ನು ಓದಿ ಅರ್ಥ ಮಾಡಿಕೊಳ್ಳಲು ಅಂತಹ ಶ್ರಮವಂತೂ ಆವಶ್ಯಕ! ಕದಳಿ ಎಂದರೆ ಬಾಳೆ ಹಣ್ಣು- ಅದರ ಸಿಪ್ಪೆಯನ್ನು ಸುಲಿದ ಬಳಿಕ ನೇರವಾಗಿ ಆಸ್ವಾದಿಸಬಹುದು. ಕದಳೀಪಾಕದ ಕಾವ್ಯವೆಂದರೆ ಅದನ್ನು ಆಸ್ವಾದಿಸುವುದು ಬಾಳೆಯ ಹಣ್ಣನ್ನು ತಿಂದಷ್ಟೇ ಸರಳ ಎಂದು. ಇನ್ನು ದ್ರಾಕ್ಷಾಪಾಕದ ಕಾವ್ಯ ಎಂದರೆ ದ್ರಾಕ್ಷಿಯ ಹಣ್ಣನ್ನು ತಿಂದಷ್ಟು ಸುಲಭದಲ್ಲಿ ಆಸ್ವಾದ್ಯವಾಗಿರುವುದು ಎಂಬುದಂತೂ ಸ್ಪಷ್ಟ! ಹೀಗೆ ಹೇಳುವುದಾದರೆ ಕುವೆಂಪು ರಾಮಾಯಣದರ್ಶನಂ, ಚಿತ್ರಾಂಗದಾ ಮೊದಲಾದವು ನಾರಿಕೇಳಪಾಕಕ್ಕೇ ಸೇರುವಂತಹವು. ಕಿಂದರಿಜೋಗಿಯಂತಹವು ದ್ರಾಕ್ಷಾಪಾಕಕ್ಕೆ ಸಲ್ಲುವಂತಹವು. ಪ್ರಸ್ತುತ ವಿವೇಚಿಸಲು ಹೊರಟಿರುವ ಸಂಸ್ಕೃತಮಾತೆ ಎಂಬ ಕವಿತೆ ಕದಳೀಪಾಕ ಎನ್ನಬಹುದು.
ವಸ್ತುತಃ ಈ ಲೇಖನದಲ್ಲಿ ಕುವೆಂಪು ಅವರ ಸಂಸ್ಕೃತಮಾತೆ ಕವಿತೆಯ ಸ್ವಾರಸ್ಯವನ್ನು ತೋರಿಸುವುದರ ಜೊತೆಗೆ ಇರುವ ಇನ್ನೊಂದು ಉದ್ದೇಶವೆಂದರೆ ಅವರ ಸಂಸ್ಕೃತಪ್ರೇಮವನ್ನು ಕೂಡ ಬಿಂಬಿಸುವುದಾಗಿದೆ. ಕುವೆಂಪು ಅವರ ಹೆಸರನ್ನು ಇಂದಿನವರು ಅನವಶ್ಯಕವಾಗಿ ಜಾತಿಯ ಜೊತೆಗೆ ರಾಜಕೀಯದ ದುರುದ್ದೇಶಗಳಿಗೆ ಬಳಸಿಕೊಳ್ಳುವುದಷ್ಟೇ ಆಗಿದೆಯೆಂಬುದು ಬೇಸರದ ಸಂಗತಿ. ಸಂಸ್ಕೃತವನ್ನು ಹಳಿಯುವುದು ಕನ್ನಡದ ಪ್ರೀತಿ ಎಂಬಂತೆ ಬಿಂಬಿಸುವ ಜನರಿಂದ ಕನ್ನಡ ಎಷ್ಟು ಅಧೋಗತಿಗೆ ಹೋಗಿದೆ ಎಂಬುದಂತೂ ಸುವೇದ್ಯ! ಬ್ರಾಹ್ಮಣದ್ವೇಷಕ್ಕಾಗಿ ಕುವೆಂಪು ಅವರನ್ನು ಮೆಚ್ಚುವಂತಹವರು ಒಂದೆಡೆಯಾದರೆ ಅವರನ್ನು ಹಿಂದೂ ಧರ್ಮದ ವಿರುದ್ಧವಾಗಿ ಬಳಸಿಕೊಳ್ಳುತ್ತಿರುವವರು ಅದೆಷ್ಟು ಜನ! ವಿಪರ್ಯಾಸವೆಂದರೆ ಇವರು ಯಾರೂ ಕುವೆಂಪು ಅವರ ಕೃತಿಗಳನ್ನು ಓದಿಲ್ಲ, ಓದಿದ್ದರೂ ಸರಿಯಾಗಿ ಅರ್ಥಯಿಸಿಕೊಂಡಿಲ್ಲ! ರಾಮಾಯಣದರ್ಶನದಲ್ಲಿಯಾಗಲೀ ಅಥವಾ ಇನ್ನಾವುದೇ ಕಾವ್ಯದಲ್ಲಿಯಾಗಲೀ ಕುವೆಂಪು ಅವರ ದೃಷ್ಟಿ -ಸ್ಪಷ್ಟವಾಗಿ ಹಿಂದೂ ಧರ್ಮದ ಪರಂಪರೆಯನ್ನು ಪ್ರತಿನಿಧಿಸುವುದು ಕಾಣುತ್ತದೆ. ಸ್ವಾಮಿವಿವೇಕಾನಂದರ ಚಿಂತನೆಗಳಿಂದ ರಾಮಕೃಷ್ಣಾಶ್ರಮದ ದರ್ಶನಗಳಿಂದ ಪ್ರಭಾವಿತರಾದ ಕುವೆಂಪು ಅವರ ಚಿಂತನೆಗಳು ನಿಸ್ಸಂದಿಗ್ಧವಾಗಿ ವೈದಿಕಧರ್ಮಕ್ಕೆ ಬದ್ಧವಾಗಿವೆ. ಹೆಚ್ಚೇಕೆ! ಅವರ ಬರವಣಿಗೆಯ ಮೂರು ಆಯಾಮಗಳಲ್ಲಿ ಮಹಾಕಾವ್ಯವಾದ ರಾಮಾಯಣದರ್ಶನದ ಆಧ್ಯಾತ್ಮಿಕ ದೃಷ್ಟಿಕೋನಕ್ಕೂ, ಗದ್ಯಕಾವ್ಯವಾದ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕಾಣ್ಮೆಗೂ, ಚಿಕ್ಕದಾದ 'ಕರಿಸಿದ್ಧ' ಎಂಬ ಕಥನಕವನದ ಅಂತಸ್ಸತ್ತ್ವಕ್ಕೂ ಸಾಮ್ಯವನ್ನು ನೋಡಿದಾಗಳೇ ಸ್ಪಷ್ಟವಾಗುತ್ತವೆ. “ನೂರು ದೇವರನೆಲ್ಲ ನೂಕಾಚೆ ದೂರ" ಎಂದು ಹೇಳಿದ್ದಾರೆ ಎಂದು ಅವರನ್ನು ಹಿಂದೂ ಧರ್ಮಕ್ಕೆ ವಿರುದ್ಧವಾದ ಚಿಂತನೆಯವರೆಂದು ಬಿಂಬಿಸಲೂ ಆಗುವುದಿಲ್ಲ. ಏಕೆಂದರೆ ಅಲ್ಲಿ "ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ" ಎಂಬ ಸಾಲೂ ಇದೆ. ಅದು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ೧೯೩೩ನೇ ಇಸವಿಯಲ್ಲಿ ಬರೆದದ್ದು (ಪಾಂಚಜನ್ಯ ೧೯೩೩) ಹಾಗಾಗಿ ಈ ಕವಿತೆಯ ಉದ್ದೇಶ ಸ್ಪಷ್ಟವಾಗುತ್ತದೆ.
ಕವಿಯನ್ನು ಹೀಗೆ ತತ್ತ್ವ ಸಿದ್ಧಾಂತಗಳಿಗೆ ಜಾತಿಮತದ ಕಟ್ಟಿಗೆ ಸಿಕ್ಕಿಸುತ್ತ ಹೋದಂತೆ ಅವರ ಕಾವ್ಯವನ್ನು ಆಸ್ವಾದಿಸುವ ಶಕ್ತಿ ನಮ್ಮಲ್ಲೇ ಕುಗ್ಗುತ್ತದೆಯೇ ಹೊರತು ಕವಿಯ ಮಹತ್ತ್ವವಾಗಲೀ ಅವರ ಪ್ರೌಢಿಯಾಗಲೀ ಎಳ್ಳಷ್ಟೂ ಕಡಿಮೆಯಾಗುವುದಿಲ್ಲ! ಕವಿಯಾದವನು ಕೂಡ ರಸೈಕದೃಷ್ಟಿಯಿಂದ ಕಾವ್ಯವನ್ನು ರಚಿಸದೇ ತನ್ನ ಮನಸ್ಸಿನ ಯಾವುದೋ ಒಂದು ಬಲವತ್ತರವಾದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಕಾವ್ಯವನ್ನು ರಚಿಸಿದರೆ ಆ ಕಾವ್ಯ ನಿಜವಾದ ಸಹೃದಯರನ್ನು ತಲುಪಲು ಸಾಧ್ಯವಿಲ್ಲ! ಹಾಗಾಗಿ ಕೇವಲ ಆಸ್ವಾದನೆಯದೃಷ್ಟಿಯಿಂದ ನವಿಲು(೧೯೩೫) ಕವನ ಸಂಕಲನದ ಸಂಸ್ಕೃತಮಾತೆ ಕವಿತೆಯನ್ನು ಅವಲೋಕಿಸೋಣ. ಮೊದಲ ಎತ್ತುಗಡೆಯಲ್ಲೇ ವಿಯಚ್ಚುಂಬಿಯಾಗಿ ಪದಗಳು ಪುಂಖಾನುಪುಂಖವಾಗಿ ಸಾಗುವುದನ್ನು ನೋಡಿ
ಪೃಥಿವಿಯಾ ಪ್ರಥಮಪ್ರಭಾತದಲಿ ಇತಿಹಾಸ
ದೃಷ್ಟಿಗಸ್ಪಷ್ಟ ಅಜ್ಞಾತಪ್ರಾಚೀನದಲಿ
ಚಿರಧವಲಹಿಮಶೈಲಪೃಥುಲೋರುಪ್ರೇಂಖದಲಿ
ನವಜಾತಶಿಶುವಾಗಿ ನಲಿದ ಮಂಗಲಮಯೀ
ಆರ್ಯಮಾತೆಯ ಮೊದಲ ತೊದಲ ನಾಗರಿಕತೆಯ
ಸಾಮಗಾನದ ವಾಣಿಯಿಂದೆ ಮೂಡಿದ ಮೂರ್ತಿ
ನೀನೆಲೌ ಸಂಸ್ಕೃತದ ವಾಗ್ದೇವಿ!”
"ಈ ಭೂಮಿಗೆ ಮೊದಲ ಬಾರಿ ಸೂರ್ಯೋದಯವಾದಾಗ, ಇತಿಹಾಸದ ದೃಷ್ಟಿಗೇ ಕಾಣದಾದ ಅಜ್ಞಾತವಾದ ಕಾಲದಲ್ಲಿ ಸದಾ ಹಿಮದಿಂದ ಕೂಡಿದ ಬೆಳ್ಳಗಿರುವ ಹಿಮಗಿರಿಯ ಉಯ್ಯಾಲೆಯಲ್ಲಿ ನವಜಾತ ಶಿಶುವಾಗಿ ನಲಿದ ಮಂಗಲಮಯಿಯಾದ ಆರ್ಯಮಾತೆಯ ಮೊದಲ ತೊದಲು ಮಾತಿನ ಸಾಮಗಾನದಿಂದ ಮೂಡಿದ ಮೂರ್ತಿ ನೀನು!” ಎಂದು ಸಂಸ್ಕೃತದ ವಾಗ್ದೇವಿಯನ್ನು ಸಂಬೋಧಿಸುತ್ತಾರೆ. ಆ ಬಳಿಕ
ಮಾನವನು
ವನ ಭವನದಲಿ ಮೊದಲು ಬಾನೆಡೆಗೆ ಮೊಗವೆತ್ತಿ
ಕೈಮುಗಿದು ದೇವನಾಶೀರ್ವಾದವನೆ ಬಯಸಿ
ವೇದದಲಿ ಪ್ರಾರ್ಥಿಸಿದ ದನಿ ನಿನ್ನದೆಲೆ ತಾಯಿ!
ಉಪನಿಷತ್ತಿನಲಿ ಋಷಿಗಳು ನಿನ್ನನಾಶ್ರಯಿಸಿ
ತಮ್ಮ ಮಹದಾಲೋಚನಾ ಮಂಜರಿಯ ನೆಯ್ದು
........................................
..............................ಮಂತ್ರ
ತೂರ್ಯದಲಿ ಶಿಶು ನರಗೆ ಅಭಯ ಮತವನು ಹೇಳಿ
.................................................................
............................................................
ಮೈತ್ರೇಯಿ ಯಾಜ್ಞವಲ್ಕ್ಯಾದಿಗಳು ತವಸ್ತನ್ಯ
ಪೀಯೂಷಪಾನದಿಂ ಮೃತ್ಯುವನೆ ಉತ್ತರಿಸಿ
ಅಮೃತರಾಗಿಹರಲ್ತೆ? ವ್ಯಾಸವಾಲ್ಮೀಕಿಗಳು
ಮೃದುಮಧುರಧೀರಗಂಭೀರ ತವ ವಾಣಿಯಿಂ
ಕಾವ್ಯಕಾಹಿನಿಯ ರಸವಾಹಿನಿಯ ಸ್ರೋತದಲಿ
.........................
...................................ಆನಂದವರ್ಷವ ಕರೆದು ಲೋಕದಲಿ
ಸ್ವರ್ಣಸ್ವಪ್ನದ ನಂದನೋದ್ಯಾನವನು ಸೃಜಿಸಿ
ಕವಿಕುಲಶಿರೋಮಣಿಗಳಾಗಿ ರಂಜಿಪರಲ್ತೆ?
ಕಾಳಿದಾಸಾದಿಗಳು ಭಾಸ ಭವಭೂತಿಗಳು
ಜ್ಞಾನಿ,ವೈಯಾಕರಣ,ರಸಋಷಿ,ವಿಭೂತಿಗಳು
ನಿನ್ನ ನಿರ್ಜರನಿರ್ಝರಿಣಿಯಲ್ಲಿ ಕ್ರೀಡಿಸುವ
ಶಿಶುಗಳಾಗಿಹರು!
ಇಲ್ಲಿ ಪ್ರತಿಯೊಂದು ಕಲ್ಪನೆಯಲ್ಲೂ ಅಲಂಕಾರಯುತವಾದ ಭಾಷೆಯಿದೆ. ಸಂಸ್ಕೃತಮಾತೆಯ ದನಿಯಿಂದಲೇ ಮಾನವನು ಮೊದಲು ವೇದಗಳ ಮೂಲಕ ದೇವನ ಆಶೀರ್ವಾದವನ್ನು ಬಯಸಿ ಪ್ರಾರ್ಥಿಸಿದ ಎಂಬಲ್ಲಿ ಸಂಸ್ಕೃತದ ಪ್ರಾಚೀನತೆಯನ್ನೂ ವೇದಗಳ ಕಾಲದಲ್ಲಿ ಸಂಸ್ಕೃತ ವ್ಯಾವಹಾರಿಕಭಾಷೆಯಾಗಿತ್ತೆಂಬ ಸೂಚನೆಯೂ ಇದೆ. ಉಪನಿಷತ್ತಿನ ಋಷಿಗಳು ಆಲೋಚನೆಯ ಮಂಜರಿಯನ್ನು ನೆಯ್ದರು, ಮಂತ್ರಗಳೆಂಬ ತೂರ್ಯದಲ್ಲಿ (ಕಹಳೆ) ಮನುಷ್ಯಶಿಶುವಿಗೆ ಅಭಯಮತವನ್ನು ಹೇಳಿದರು, ಸಂಸ್ಕೃತಮಾತೆಯ ಸ್ತನ್ಯವಾದ ಅಮೃತದ ಪಾನದಿಂದ ಯಾಜ್ಞವಲ್ಕ್ಯಾದಿಗಳು ಮೃತ್ಯುವನ್ನೆ ಉತ್ತರಿಸುವಂತಾದರು. ವ್ಯಾಸವಾಲ್ಮೀಕಿಗಳು ಆನಂದವರ್ಷವನ್ನು ಕರೆಯುತ್ತಾ ಬಂಗಾರದ ಕನಸಿನಲ್ಲಿ ನಂದನೋದ್ಯಾನವನ್ನೇ ಸೃಷ್ಟಿಸಿದ್ದಾರೆ! ಕಾಳಿದಾಸಾದಿ ಕವಿಗಳು ನಿನ್ನ ಚಿರಯೌವನದ ಝರಿಯಲ್ಲಿ ಕ್ರೀಡಿಸುವ ಶಿಶುಗಳು! ಎಂದೆಲ್ಲ ಸಂಸ್ಕೃತವನ್ನು ಕೊಂಡಾಡಿರುವಲ್ಲಿ ಕವಿಗೆ ಸಂಸ್ಕೃತದ ಬಗ್ಗೆ ಇರುವ ಗೌರವ ಹಾಗೂ ಅಧ್ಯಯನವನ್ನೂ ಸೂಚಿಸುತ್ತವೆ. ಮುಂದೆ
ಆರ್ಯರಾಗಿಹ ನಾವು
ನಿನ್ನ ಮೊಲೆವಾಲ ಸವಿಯಿಲ್ಲದೆಯೆ ಬದುಕುವೆವೆ?
ನೀನಿಲ್ಲದೆಲ್ಲಿಯದು ಭರತಖಂಡದ ಬದುಕು,
ಸಂಪತ್ತು ಸಂಸ್ಕೃತಿ? ನಮ್ಮ ಜೀವನಗಂಗೆ
ನಿನ್ನೆದೆಯ ಅಕ್ಷಯಹಿಮಾಲಯವು ಸರ್ವದಾ
ದಾನ ಮಾಡುವ ಪುಣ್ಯಜಲ ತೀರ್ಥದಿಂದಲ್ತೆ
ಬತ್ತದೆಯೆ ತುಂಬಿ ನೂತನವಾಗಿ ಚಿರವಾಗಿ
ಹರಿಯುತಿದೆ?
ಸಂಸ್ಕೃತದ ಮೊಲೆವಾಲ ಸವಿಯಿಲ್ಲದೆಯೇ ಆರ್ಯರಾಗಿಹ ನಾವು ಬದುಕಲು ಸಾಧ್ಯವೇ? ಭರತಖಂಡದ ಬದುಕು ಸಂಪತ್ತು ಸಂಸ್ಕೃತಿ ನೀನಿಲ್ಲದೇ ಎಲ್ಲಿರಲು ಸಾಧ್ಯ! ಎಂಬ ಪ್ರಶ್ನೆಯಿಂದ ಭಾರತದಲ್ಲಿ ಹೇಗೆ ಎಲ್ಲ ಭಾಷೆಗಳಲ್ಲೂ ಸಂಸ್ಕೃತದ ಬಳಕೆಯಿದೆ ಎಂಬುದನ್ನು ಸೂಚಿಸುತ್ತಾರೆ. ನಮ್ಮ ಜೀವನ ಎಂಬ ಗಂಗಾ ನದಿಯು ಸಂಸ್ಕೃತಮಾತೆಯೆಂಬ ಹಿಮಾಲಯದ ಬತ್ತದ ಎದೆಯಿಂದ ದಾನ ಮಾಡುವ ಪುಣ್ಯತೀರ್ಥದಿಂದ ತುಂಬಿ ಚಿರಕಾಲದಿಂದ ಹರಿಯುತ್ತಿದೆ- ಎಂದು ಸದಾ ತುಂಬಿ ಹರಿಯುತ್ತಿರುವ ಗಂಗೆಯನ್ನು ನಮ್ಮ ಜೀವನಕ್ಕೆ ಹೋಲಿಸಿ ಅದಕ್ಕೆ ಪೂರಣವಾದರೂ ಸಂಸ್ಕೃತದ ಹಿಮಾಲಯದಿಂದ ಬರುತ್ತಿದೆ ಎಂದು ವರ್ಣಿಸುತ್ತಾರೆ! ಇಲ್ಲಿ ಗಮನಿಸಬಹುದು- ಹಿಮಾಲಯ ಎಷ್ಟು ಕೊಟ್ಟರೂ ಕರಗಿ ಕಿರಿದಾಗಿಲ್ಲ! ಗಂಗೆಯ ಒಡಲನ್ನು ತುಂಬುವಷ್ಟನ್ನೂ ಹಿಮಾಲಯ ಕೊಡಬಲ್ಲದು! ಗಂಗೆ ಕೂಡ ಹಿಮಾಲಯದಿಂದಲೇ ನೀರನ್ನು ಪಡೆದಿದ್ದರೂ ಹಿಮಾಲಯಕ್ಕಿಲ್ಲದ ಪಾವಿತ್ರ್ಯವನ್ನು ಅಥವಾ ಪುಣ್ಯಪ್ರದಾಯಕತ್ವವನ್ನು ಪಡೆದಿದೆ. ಹೀಗೆ ಹಲವು ಸಾರ್ಥಕವಾದ ಬಹುಧಾಪರೀಶೀಲನಯೋಗ್ಯವಾದ ಉಪಮೆಗಳನ್ನು ಕೊಡುತ್ತಾರೆ. ಆ ಬಳಿಕ
ಹೇ ದಿವ್ಯ ಸಂಸ್ಕೃತ ಹಿಮಾಚಲವೆ,
ಗಗನ ಚುಂಬಿತಮಾಗಿ ಬೆಳೆದು ನೀ ನಿಂತಿರುವೆ
ಸ್ಥಿರತೆಯದು ಸಾವಲ್ಲ, ಜೀವಿತ ಚರಮಲಕ್ಷ್ಯ!
ಅದೇ ಕಲ್ಪನೆಯನ್ನು ಮುಂದುವರೆಸಿಕೊಂಡು ಸಂಸ್ಕೃತವನ್ನು ಹಿಮಾಲಯಕ್ಕೆ ಹೋಲಿಸುತ್ತಾರೆ. ನೀನು ಗಗನಚುಂಬಿಯಾಗಿ ಬೆಳೆದಿರುವೆ. ನಿಂತುಕೊಂಡಿರುವುದು ಎಂಬುದು ಸಾವಲ್ಲ! ಅದೇ ಜೀವಿತದ ಕೊನೆಯ ಗುರಿ.
ಬೆಳೆಯುತಿಹ ನಿನ್ನೀ ಹಸುಳೆಗಳಿಗೆ ತಾವ ಕೊಡು
ಹರಕೆಗೈ! ಸ್ತನ್ಯಪಾನವ ನೀಡು ಹೇ ಜನನಿ!
ಹಸಿದ ಹಸುಳೆಯ ಕೈಯ ಅಶನವನು ಕಸಿಯುವುದು
ಹಿರಿಯ ಸಂಸ್ಕೃತಿ ಪಡೆದ ಸಂಸ್ಕೃತ ಮಹೀಯಸಿಗೆ
ಗೌರವದ ಕುರುಹಲ್ಲ! ತಾಯಿ ಮಗುವಿಗೆ ಕರುಬಿ
ವೈಯಾರಿಯಾಗುವುದು, ಅಯ್ಯೊ, ಲಕ್ಷಣವಲ್ಲ!
ಮಗು ಬೆಳೆಯಲೆಳಸುವುದು ಜನನಿಯ ಮರಣಕಲ್ಲ;
ಜನನಿಗದು ಅಭಿಮಾನ, ತೇಜಸ್ಸು , ಶ್ರೇಯಸ್ಸು!
ಸಂಪ್ರದಾಯದ ಆರ್ಯೆ, ನಿನಗೇಕೆ ತರಳೆಯರ
ಈ ನವನವೀನ ಪರಸಂಸ್ಕೃತಿಯ ಅನುಕರಣ
ಲೋಲುಪತೆ? ಅದು ನಮಗಿರಲಿ ಬಿಡು, ಜಗದ್ವಂದ್ಯೆ!
ಹೀಗೆ ಮುಗಿಯುವ ಕವಿತೆಯ ಕೊನೆಯ ಸಾಲುಗಳಲ್ಲಿ ಕುವೆಂಪು ಅವರ ದೃಷ್ಟಿ ಸ್ಪಷ್ಟವಾಗುತ್ತದೆ. "ಸಂಸ್ಕೃತಮಾತೆಯೇ ಬೆಳೆಯುತ್ತಿರುವ ನಿನ್ನ ಹಸುಳೆಗಳಿಗೆ ತಾಣವನ್ನು ಕೊಡು, ಹರಸು, ಸ್ತನ್ಯಪಾನವ ನೀಡು" ಎಂದು ಉಳಿದ ಭಾಷೆಗಳು ಸಂಸ್ಕೃತದ ಜೊತೆಯಲ್ಲಿ ಹೋಲಿಸಿದರೆ ಶೈಶವದಲ್ಲಿದೆ ಅವುಗಳು ಬೆಳೆಯುವುದಕ್ಕೆ ನಿನ್ನ ಪೋಷಣೆ ಅವಶ್ಯಕವಾಗಿದೆ, ಮಕ್ಕಳ ಮೇಲೆ ತಾಯಿ ಕೋಪಿಸಿಕೊಳ್ಳುವುದು ಹಿತವಲ್ಲ! ಮಗು ಬೆಳೆಯುವುದು ತಾಯಿಯ ಮರಣಕ್ಕಲ್ಲ. ತಾಯಿಗೆ ಅದು ಅಭಿಮಾನ ಶ್ರೇಯಸ್ಸನ್ನು ಕೊಡುತ್ತದೆ. ಪರಸಂಸ್ಕೃತಿಯ ಅನುಕರಣ ಮಾಡುವ ಲೋಲುಪತೆ ನಿನಗೆ ಬೇಡ. ಅದು ನಮಗಿರಲಿ ಎಂದು.
ಇಲ್ಲಿ ಕವಿಗಳ ಅಂತರಂಗದಲ್ಲಿ ಸಂಸ್ಕೃತದ ಕುರಿತು ಅವರಿಗಿರುವ ಗೌರವ ತಿಳಿಯುತ್ತದೆ. ಕಾರಣ ಆ ಪ್ರೌಢಿಯನ್ನು ಒದಗಿಸುವ ಸಂಸ್ಕೃತದ ಶಕ್ತಿಯ ಬಗ್ಗೆ ಚೆನ್ನಾಗಿ ಅರಿವಿರುವುದೇ ಆಗಿದೆ. ಹಾಗಾಗಿಯೇ ನಾರಿಕೇಳಪಾಕದ ಸಂಸ್ಕೃತಭೂಯಿಷ್ಠವಾದ ಸಮಸ್ತಪದಗಳ ಗುಂಫನವನ್ನು ಮಾಡುವ ಶಕ್ತಿ ಅವರಿಗೆ ಒದಗಿದೆ. ಅವರ ಕಾವ್ಯದಲ್ಲಿ ಹಲವು ಹೊಸಗನ್ನಡದ ರೂಪಗಳಿದ್ದರೂ ಸಂಸ್ಕೃತದ ಸಂಲೇಪದಿಂದ ಪ್ರೌಢವಾದ ಹಳಗನ್ನಡದ ರೂಪವೆಂಬಂತೆ ಭಾಸವಾಗುತ್ತದೆ. ಹಾಗಿದ್ದರೂ ಕೂಡ ಅದು ಅರ್ಥವಾಗದ ಕಗ್ಗಂಟಾಗದೇ ಸವಿಯಲೂ ಸಾಧ್ಯವಾಗುತ್ತದೆ. ಇಂತಹ ರಸವತ್ಕವಿತೆಗಳನ್ನು ಅಗಣಿತವಾಗಿ ಬರೆದವರನ್ನು ಕೇವಲ ಜಾತಿಗೋ ಮತಕ್ಕೋ ಅಥವಾ ಇನ್ನಾವುದೋ ದುರುದ್ದೇಶಕ್ಕೋ ಬಳಸಿಕೊಳ್ಳುತ್ತಿರುವುದು ವಿಡಂಬನೆಯಷ್ಟೇ!

ಕಾವ್ಯಾವಲೋಕನ-೩ ದ್ರೌಪದಿಯ ಸ್ವಯಂವರ



ದ್ರೌಪದಿಯ ಸೌಂದರ್ಯವನ್ನು ಕಂಡು ಎಲ್ಲರೂ ಮಂತ್ರಮುಗ್ಧರಾಗಿ ಕುಳಿತಿದ್ದಾಗ ದ್ರುಪದರಾಜ ಒಂದು ಬಿಲ್ಲನ್ನೂ ಮತ್ಸ್ಯಯಂತ್ರವನ್ನೂ ತಂದಿರಿಸಿ ಆ ಬಿಲ್ಲಿನಲ್ಲಿ ಬಾಣವನ್ನು ಹೂಡಿ ತಮ್ಮ ಬಾಹುವಿಕ್ರಮದಿಂದ ಯಂತ್ರವನ್ನು ಭೇದಿಸಿದರೆ ಆತ ದ್ರೌಪದಿಯನ್ನು ಗೆದ್ದಂತೆ ಎಂದು ಸೂಚಿಸಿದ. ಆ ಬಿಲ್ಲೇ ಕಬ್ಬಿನ ಬಿಲ್ಲು. ಅಲ್ಲಿರುವ ಬಾಣಗಳೇ ಹೂವಿನ ಬಾಣಗಳು. ಯಂತ್ರವೇ ದ್ರೌಪದಿಯ ಹೃದಯ. ಅದನ್ನು ಗೆಲ್ಲುವವನೇ ದ್ರೌಪದಿಗೆ ಮನ್ಮಥನಾಗುತ್ತಾನೆ ಎಂದು ಸಾರಿ ಹೇಳಿ ಆ ಧನುಸ್ಸನ್ನೂ ಅದರ ಬಾಣಗಳನ್ನೂ ಯಂತ್ರವನ್ನೂ ಅಲ್ಲಿ ಇಟ್ಟು ಅದಕ್ಕೆ ಗಂಧಾಕ್ಷತೆಗಳಿಂದ ಪೂಜಿಸಿದರು. ಆಗ ಮಂಗಳವಾದ್ಯಗಳೆಲ್ಲ ಮೊಳಗಿದವು. ಆ ಬಳಿಕ ನಾನಾದಿಗಂತದ ಧರಣೀಶ್ವರರೆಲ್ಲ ತಮ್ಮ ಹಮ್ಮು ಬಿಮ್ಮುಗಳಿಂದ ಬಹುಸುಲಭವಾಗಿ ಗೆದ್ದುಬಿಡುತ್ತೇವೆಂಬ ಉತ್ಸಾಹದಲ್ಲಿ ಬಂದು ಬಿಲ್ಲನ್ನು ಎತ್ತಲು ಪ್ರಯತ್ನಿಸಿದ್ದಾಯಿತು. ಆದರೆ ಆ ಬಿಲ್ಲು ನೆಲವನ್ನು ಬಿಡಲೇ ಇಲ್ಲ. ಅವರಿಗೆಲ್ಲ ಕೈಲಾಸಪರ್ವತವನ್ನು ಎತ್ತಲು ಹೋದ ರಾವಣನ ಪರಿಸ್ಥಿತಿಯಾಯಿತು. ಕೆಲವರ ಹಾರ ಹರಿದು ಹೋಯಿತು. ಕೆಲವರ ಕಿವಿಗಳ ಆಭರಣದ ಮಣಿಗಳು ಕಳಚಿ ಬಿದ್ದವು. ಕೆಲವರ ಕಾಲಿನ ನೇವುರ ತುಂಡಾಯಿತು. ಅವರ ನೆನಪುಗಳೆಲ್ಲ ಕುಗ್ಗಿದವು. ಅತ್ತ ಅಂತಃಪುರದ ನಾರಿಯರು ಚಪ್ಪಾಳೆ ತಟ್ಟಿಕೊಂಡು ನಗುತ್ತಿರುವುದನ್ನು ಕಂಡು ನಾಚಿ ಮುಖಕ್ಕೆ ಮುಸುಕುಹಾಕಿಕೊಂಡು ತಮ್ಮ ತಮ್ಮ ಸಿಂಹಾಸನಕ್ಕೆ ಬಂದು ಕುಳಿತರು.
ಇಲ್ಲೆಲ್ಲ ಕುಮಾರವ್ಯಾಸ ಬಹುಸೂಕ್ಷ್ಮವಾಗಿ ಚಿತ್ರಿಸಿ ರಾಜರ ಪರಿಸ್ಥಿತಿ ಏನಾಯಿತು ಎಂಬುದನ್ನು ಅವರ ಆಭರಣಗಳು ಹರಿದುಹೋದದ್ದರಿಂದ ಬಣ್ಣಿಸುತ್ತಾನೆ. ಆತನ ಕಣ್ಣು ಪ್ರತಿಯೊಂದು ಸನ್ನಿವೇಶದಲ್ಲೂ ಇಷ್ಟೇ ಸೂಕ್ಷ್ಮವಾಗಿ ಅವಲೋಕಿಸುತ್ತ ಹೋಗುವ ಚಾತುರ್ಯವನ್ನು ಹೊಂದಿದೆ. ಆತನ ಮಾತು ಅದನ್ನೆಲ್ಲ ಬಣ್ಣಿಸುವ ಶಕ್ತಿಯನ್ನು ಹೊಂದಿದೆ. ಹಾಗೇ ಮುಂದಿನ ಕಥೆಯನ್ನು ಅವಲೋಕಿಸಿದರೆ ಅಲ್ಲಿ ಸೋತ ರಾಜರು ಮಾತನಾಡಿಕೊಳ್ಳುವುದನ್ನು ಹೀಗೆ ಹೇಳುತ್ತಾನೆ-
ಮಿಡುಕದೀ ಧನು ನಮ್ಮ ಝಾಡಿಸಿ ಕೆಡಹಿತಿದನಿನ್ನಾರು ಕೊರಳಲಿ
ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ ಕಾಂಬೆವೈಸಲೆ ನುಡಿದು ಮಾಡುವುದೇನೆನುತ ಸಿರಿ-
ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ"
ಈ ಬಿಲ್ಲು ನಮ್ಮನ್ನು ಝಾಡಿಸಿ ಕೆಡವಿತು. ಇದನ್ನು ಇನ್ನು ಯಾರು ಬಾಗಿಸಿ ಹೆದೆಯನ್ನು ಕಟ್ಟಿ ಬಾಣವನ್ನು ಬಿಡುತ್ತಾರೋ ಆ ಕಡುಹಿನ ಅಣ್ಣನನ್ನು ನೋಡೋಣ! ನುಡಿದು ಮಾಡುವುದೇನು" ಎಂದು ತಮ್ಮ ಸಿರಿಮುಡಿಯ ಮುಸುಕಿನಲ್ಲಿ ರಾಜರೆಲ್ಲ ಬಿಂಕ ತೋರಿಸಿಕೊಂಡು ಕುಳಿತಿದ್ದರು.
ಆಗ ಮಗಧದ ಜರಾಸಂಧ ಬಂದ; ಅವನು ಬಿಲ್ಲನ್ನು ಎತ್ತಿದರೆ ಬಿಲ್ಲು ಅವನ ಮೈಗೇ ಒರಗಿತು. ಅವನು ಒತ್ತಿಹಿಡಿದ. ಬಿಲ್ಲಿಗೆ ಇವನು ಯಾರು ಎಂದು ಗೊತ್ತಿಲ್ಲ. ಇವನು ಹಲ್ಲು ಕಚ್ಚಿಕೊಂಡು ಹಿಡಿದುಕೊಂಡು ಬಳಲಿದ. ಅಷ್ಟಕ್ಕೇ ಅವನ ಅಳ್ಳೆಗಳೆಲ್ಲ ಅಲ್ಲಾಡಿದವು ನೋಯತೊಡಗಿದವು. ಬೆವರನ್ನು ಆರಿಸಿಕೊಂಡು ಶ್ರಮವನ್ನು ಕಳೆದು ಮೊಣಕಾಲನ್ನು ಇಟ್ಟು ಎದೆಯನ್ನು ಒತ್ತಿ ಒಂದು ದಂಡೆಯಲ್ಲಿ ಸರಿಯಾಗಿ ಹಿಡಿದುಕೊಂಡು ಎತ್ತಲು ಪ್ರಯತ್ನಿಸಿದರೆ ಒಂದು ಜವೆಯಷ್ಟು ನೆಲವನ್ನು ಬಿಟ್ಟಿತು! ಅವನ ಪರಾಕ್ರಮಗರ್ವವಿಭ್ರಮವನ್ನೆಲ್ಲ ಸದೆದು ಹಾಕಿತು! ಹೆಂಗಳೆಯರೆಲ್ಲ ಘೊಳ್ಳನೆ ನಗುವಾಗ ಮುಸುಕು ಹಾಕಿಕೊಂಡು ಬಂದು ಕುಳಿತುಕೊಂಡ. ಆಗ ಚೇದಿಯ ರಾಜ ಶಿಶುಪಾಲ ಹೋಗಿ ನಗುವ ಹೆಂಗಸರ ತುರುಬನ್ನು ಕೊಯ್ಯಿಸುವೆ ಎಂದು ಗರ್ವದ ನುಡಿಗಳನ್ನಾಡುತ್ತಾ ಬಿಲ್ಲನ್ನು ಎತ್ತಲು ಪ್ರಯತ್ನಿಸಿ ವಿಫಲನಾಗಿ ಅವಮಾನಿತನಾಗಿ ಬಂದ. ಮಗಧರಾಜನೂ ಚೇದಿರಾಜನೂ "ಇದೆಲ್ಲ ನಮಗೇಕೆ! ಭಂಡರಾದ ಪಾಂಚಾಲ ರಾಜರೂ ಉಳಿದವರೂ ಹೆಂಗಸರ ನಗೆಯನ್ನೇ ತಲೆಯ ಮೇಲೆ ಹೊತ್ತುಕೊಳ್ಳಲಿ "ಎಂದು ತಮ್ಮ ಪಟ್ಟಣಕ್ಕೆ ಹೋದರು.
ಶಲ್ಯರಾಜ ಬಂದು ವಿಫಲನಾಗಿ ಹೋದ. ಕರ್ಣನೂ ಬಂದು ಬಿಲ್ಲನ್ನೆತ್ತಲಾರದೇ ಹೋದದ್ದು ಕಂಡು ಉಳಿದ ರಾಜರು " ಶ್ರೀಗಂಧದ ಮರಕ್ಕೆ ಹಾವು ಸುತ್ತಿಕೊಂಡಿರುತ್ತದೆ ಎನ್ನುತ್ತಾರೆ. ಇದು ದ್ರೌಪದಿ ಎಂಬ ಶ್ರೀಗಂಧವನ್ನು ಸುತ್ತಿಕೊಂಡ ಹಾವು" ಎಂದು ದುಗುಡದಲ್ಲಿದ್ದರು. ಆಗ ಬಲರಾಮ ತಾನೂ ಒಮ್ಮೆ ನೋಡಿಯೇಬಿಡುವೆ ಎಂದು ಯೋಚಿಸಿ ಎದ್ದದ್ದನ್ನು ಕಂಡು ಕೃಷ್ಣ- “ದ್ರೌಪದಿ ನಮಗೆ ಎಷ್ಟೆಂದರೂ ತಂಗಿಗೆ ಸಮಾನ. ಆಕೆ ಪಾಂಡವರಿಗೇ ಪತ್ನಿಯಾಗುತ್ತಾಳೆ" ಎಂದು ಹೇಳಿ ಅವನನ್ನು ಕುಳ್ಳಿರಿಸಿದ. ಆಗ ಬಲರಾಮ- “ಪಾಂಡವರು ಅಂದೇ ಬೆಂಕಿಯಲ್ಲಿ ಸುಟ್ಟುಹೋದರೆಂದು ಲೋಕವೆಲ್ಲಾ ತಿಳಿದಿದೆ. ಆದರೂ ಶಠಾಗಮಿಕ! ನಿನಗೆ ಅಂಜುತ್ತೇನೆ (ನೀನೇನೋ ಮೋಸವನ್ನು ಮಾಡುತ್ತೀಯಾ!)" ಎಂದು ಸುಮ್ಮನೆ ಕುಳಿತ.
ಕ್ಷತ್ರಿಯರೆಲ್ಲಾ ಈಕೆಯನ್ನು ಗೆಲ್ಲಲಾರದೇ ಸೋತಿದ್ದಾರೆ, ಬ್ರಾಹ್ಮಣರು ಯಾರಾದರೂ ಇದ್ದಾರೋ ಕೇಳಿ ಎಂದು ಡಂಗುರವನ್ನು ಹೊಡೆಸಿದರು. "ಶಾಸ್ತ್ರದಂತೆ ಕ್ಷತ್ರಿಯಕನ್ಯೆಯನ್ನು ಬ್ರಾಹ್ಮಣರಿಗೆ ಕೊಡಬಹುದು" ಎಂದು ಶಾಸ್ತ್ರವನ್ನೂ ಹೇಳಿ ಡಂಗುರ ಸಾರಿದ್ದನ್ನು ಕೇಳಿ "ನಮಗೇಕೆ ಈ ಸುಂದರಿಯ ತೊಡಕು! ಬಿಡು! ನಾವೆಲ್ಲಿ ಬಿಲ್ಲೆಲ್ಲಿ! ನಮಗೆ ಇದೆಲ್ಲಾ ಆಗುವುದಲ್ಲ!” ಎಂದು ಹೇಳಿದರು.
ಬಂದ ದಕ್ಷಿಣೆ ಮೃಷ್ಟಭೋಜನದಿಂದ ತುಷ್ಟರು ನಾವು ನಮಗಿದ-
ರಿಂದ ಬಹುದುಷ್ಕೀರ್ತಿ ಬರಲೆಂದುದು ಬುಧವ್ರಾತ"
"ನಾವು ಬಂದ ದಕ್ಷಿಣೆ ಹಾಗೂ ಭೋಜನದಿಂದಲೇ ತೃಪ್ತರಾಗಿದ್ದೇವೆ. ನಮಗೆ ಯಾಕೆ ಈ ದುಷ್ಕೀರ್ತಿ" ಎಂದು ಕೆಲವರು ಹೇಳಿದರು.
ವಚನಶೂರರು ನಾವು ಪಾರ್ಥಿವ ನಿಚಯವೇ ಭುಜಶೂರರನಿಬರ-
ನಚಲಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ!
ಉಚಿತವಲ್ಲಿದು ನಮ್ಮ ಸಾಹಸರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ"
ನಾವು ಮಾತಿನಲ್ಲಷ್ಟೇ ಶೂರರು, ಕ್ಷತ್ರಿಯರು ಭುಜಲದಲ್ಲಿ ಶೂರರು. ಈ ಧನು ಅವರನ್ನೇ ಭಂಗಿಸಿತು. ನಮಗೆ ಈ ವಿದ್ಯೆ ಏನು ವೈದಿಕವೇ! ಇದು ಯೋಗ್ಯವಾದದ್ದಲ್ಲ! ನಮ್ಮ ಸಾಹಸವನ್ನು ನೋಡಬೇಕೆಂದರೆ ಪಂಡಿತರ ಗುಂಪು ಎದುರಿಗೆ ನಿಲ್ಲಲಿ. ಆಗ ವಿಸ್ಮಯವನ್ನು ತೋರಿಸುತ್ತೇವೆ" ವೇದವೇದಾಂಗಗಳಲ್ಲಿ ಪದಕ್ರಮದಲ್ಲಿ ಸರ್ವಾಂಗವಿಷಯದಲ್ಲಿ ಸಕಲಪುರಾಣಗಳಲ್ಲಿ ಮೀಮಾಂಸೆಯಲ್ಲಿ ಸ್ಮೃತಿ ತರ್ಕಶಾಸ್ತ್ರಗಳಲ್ಲಿ ಕಾಮಶಾಸ್ತ್ರವೇ ಮೊದಲಾದ ಉಪಾಂಗವಿದ್ಯೆಗಳಲ್ಲಿ ನಮ್ಮನ್ನು ಪರೀಕ್ಷಿಸಲಿ ಬೇಕಾದರೆ ಎಂದು ಬುಧರು ಹೇಳತೊಡಗಿದರು. ಇನ್ನು ಕೆಲವು ಬ್ರಾಹ್ಮಣರು- “ಭರತನ ನಾಟ್ಯಶಾಸ್ತ್ರದಲ್ಲಿ, ವೈದ್ಯದಲ್ಲಿ, ಕಾವ್ಯದಲ್ಲಿ, ಅಲಂಕಾರಶಾಸ್ತ್ರದಲ್ಲಿ ಗಜಲಕ್ಷಣ, ಅಶ್ವಲಕ್ಷಣಗಳಲ್ಲಿ, ಅಥವಾ ಮಂತ್ರತಂತ್ರಗಳಲ್ಲಿ ಅಥವಾ ಸರಸವಾದ ಕವಿತಾರಚನೆಯಲ್ಲಿ ವಿಸ್ತಾರವಾದ ಉಪನ್ಯಾಸದಲ್ಲಿ ಭೂಪತಿ ನಮ್ಮನ್ನು ಕರೆಸಿ ನೋಡಲಿ" ಎಂದು ಮಾತನಾಡಿಕೊಳ್ಳತೊಡಗಿದರು.
ಆಗ ಕೆಲವು ಪುಂಡು ಹುಡುಗರು-
ಅಲ್ಲದಿರ್ದರೆ ಶೋಧಿಸಿದ ತನಿಬೆಲ್ಲವಿಕ್ಕಿದ ಹೂರಿಗೆಯ ಮೆದೆ-
ಯಲ್ಲಿ ಪರಡಿಯ ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ ತತ್ಸವಿಯ ಮಂಡಿಗೆಯಲ್ಲಿ ನವಘೃತಸೂಪದಂಶಕ-
ದಲ್ಲಿ ನೋಡಲಿ ನಮ್ಮನೆಂದುದು ಧೂರ್ತವಟುನಿಕರ"
"ಚೆನ್ನಾಗಿ ಶೋಧಿಸಿದ ತನಿಬೆಲ್ಲವನ್ನು ಹಾಕಿದ ಹೂರಿಗೆಯಲ್ಲಿ, ಪರಡಿಯ ಶಾವಿಗೆಯ ಪರಿಪರಿಯ ಪಾಯಸದಲ್ಲಿ, ಮಂಡಿಗೆಯಲ್ಲಿ ತುಪ್ಪ ಹಾಕಿದ ಸೂಪದಂಶಕಗಳಲ್ಲಿ ನಮ್ಮ ಪರಾಕ್ರಮವನ್ನು ನೋಡಲಿ" ಎಂದು ಹೇಳಿದರು.
ಕುಮಾರವ್ಯಾಸನ ಸೂಕ್ಷ್ಮಾವಲೋಕನಪ್ರಜ್ಞೆಯನ್ನು ಇಲ್ಲಿ ಗಮನಿಸಬಹುದು. ಸಾವಿರಾರು ಜನ ಬಂದು ಸೇರಿದ ಮದುವೆಯ ಮನೆ, ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿರುತ್ತಾರೆ. ಇಲ್ಲಿ ವರಿಸಬೇಕಾದ ಗಂಡು ಪಂಥದಲ್ಲಿ ಗೆದ್ದು ರಾಜಕುಮಾರಿಯನ್ನು ಪಡೆಯಬೇಕು. ಆಗ ಯಾರುಯಾರು ಹೇಗೆ ಮಾತನಾಡಬಹುದು ಎಂಬುದನ್ನು ಹೀಗೆ ವಿಸ್ತರಿಸಿ ಬಣ್ಣಿಸುತ್ತಾನೆ. ಹಿರಿಯ ಪಂಡಿತರೆಲ್ಲಾ ಗಂಭೀರವಾಗಿ ತಮಗೆ ಗೊತ್ತಿರುವ ಶಾಸ್ತ್ರಗಳಲ್ಲಿ ಪಾಂಡಿತ್ಯದಲ್ಲಿ ಪರೀಕ್ಷಿಸಲಿ ಎಂದರೆ ಪುಂಡು ಹುಡುಗರು ಊಟದಲ್ಲಿ ನಮ್ಮನ್ನು ಗೆಲ್ಲುವವರು ಯಾರೂ ಇಲ್ಲ ಎಂದು ಅದರ ಪರೀಕ್ಷೆಯೊಡ್ಡಲಿ ಎಂದು ಮಾತನಾಡಿಕೊಳ್ಳುತ್ತಾರೆ! ಆಮೇಲೆ ಬ್ರಾಹ್ಮಣರ ವೇಷದಲ್ಲಿದ್ದ ಅರ್ಜುನ ಎದ್ದು ಅಣ್ಣನ ಅನುಮತಿಯನ್ನು ಪಡೆದು ಹೊರಡುತ್ತಾನೆ. ಆಗ ಇವರ ಮಾತುಗಳನ್ನು ಕೇಳಿ-
ಏನು ಸಿದ್ಧಿಯುಪಾಧ್ಯರೆದ್ದಿರಿದೇನು ಧನುವಿಂಗಲ್ಲಲೇ ತಾ-
ನೇನು ಮನದಂಘವಣೆ! ಬಯಸಿದಿರೇ ನಿತಂಬಿನಿಯ!
ವೈನತೇಯನ ವಿಗಡಿಸಿದ ವಿಷವೇನು ಸದರವೊ ಹಾವಡಿಗರಿಗಿ-
ದೇನು ನಿಮ್ಮುತ್ಸಾಹವೆಂದುದು ಧೂರ್ತವಟುನಿಕರ"
ಓಹೋ! ಏನು ಉಪಾಧ್ಯರು ಎದ್ದುಬಿಟ್ಟಿರಿ! ಇದೇನು! ಬಿಲ್ಲಿಗೋ! ಅಥವಾ ಮನಸ್ಸಿನಲ್ಲೇನಿದೆ! ಚಂದದ ಹುಡುಗಿಯನ್ನು ಬಯಸಿಬಿಟ್ಟಿರೋ! ಗರುಡನನ್ನೇ ಗಲಿಬಿಲಿಗೊಳಿಸುವ ಹಾವಿನ ವಿಷದಲ್ಲಿ ಹಾವಾಡಿಗರಿಗೆ ಏನು ಸದರವೋ! ಇದೇನು ನಿಮ್ಮ ಉತ್ಸಾಹ!” ಎಂದೆಲ್ಲ ಹೇಳಿದರು ಆ ಧೂರ್ತವಟುಗಳು!
ನೀವು ಮದುವೆಯಾಗುವುದಿದ್ದರೆ ಬ್ರಾಹ್ಮಣರಲ್ಲಿ ಕನ್ಯೆಯರಿರಲಿಲ್ಲವೇ! ಈ ಕ್ಷತ್ರಿಯ ಕನ್ಯೆಯನ್ನು ವರಿಸುವುದು ಭಗೀರಥಯತ್ನವಾಗುತ್ತದೆಯಷ್ಟೆ! ಎಂದು ಕೆಲವರು ಹೇಳಿದರು. ಕೆಲವರು ಹೋಗದಿರು ಎಂದು ಜರೆದರು, ಕೆಲವರು ನಮಗೆ ಗೊತ್ತಿಲ್ಲವೇ ಎಂದರು, ಕೆಲವರು ಇದು ವಿಪ್ರಸಭೆಗೇ ಅಪಹಾಸ್ಯವಾಗುತ್ತದೆ ಎಂದರು. ಕೆಲವರು ಇದರಲ್ಲಿ ತಪ್ಪೇನಿದೆ ಎಂದರು, ಕೆಲವರು ಭಾಗ್ಯಮುಖನಾದ ಇವನಿಗೆ ಖಂಡಿತವಾಗಿಯೂ ಬಿಲ್ಲು ಸೋಲುತ್ತದೆ ಎಂದರು. ಅವನು ತೊಟ್ಟ ಹೊಸ ಯಜ್ಞೋಪವೀತದಿಂದ ಹಣೆಯಲ್ಲಿ ಮಟ್ಟಿಯ ಗಂಧದಿಂದ ದರ್ಭೆಯಿಂದ ಕರಡಿಗೆಯಿಂದ, ಕೈಯಲ್ಲಿ ಸಿಕ್ಕಿಸಿಕೊಂಡ ದರ್ಭೆಗಳಿಂದ, ಉಟ್ಟುಕೊಂಡ ಬಳಲುಗಚ್ಚೆಯಿಂದ ಅರ್ಜುನ ಬರುತ್ತಿರುವುದನ್ನು ಕಂಡು ಅಲ್ಲಿದ ರಾಜರುಗಳೆಲ್ಲ ಗಹಗಹಿಸಿ ನಗತೊಡಗಿದರು.
ಬಿಲ್ಲನ್ನು ಎತ್ತುವುದಕ್ಕೆ ಅದೇನು ಕೃಷ್ಣಾಜಿನವೋ! ಅಥವಾ ಸಾಲಗ್ರಾಮದೇವರೋ!ಅಥವಾ ತುಳಸಿ ನೀರಿನ ಕಲಶವೋ! ಅಥವಾ ಧರ್ಭೆ ಸಮಿಧಗಳ ಹೊರೆಯೋ! ನೆನೆಸಿಟ್ಟ ಎಳ್ಳೋ! ಅಥವಾ ಉಪಾಸನೆಯ ಕೊಳವಿಯೋ! ಆಹಾ! ದ್ರೌಪದಿಯ ಸೌಭಾಗ್ಯವೇ "ಎಂದು ಅವರೆಲ್ಲ ನಗತೊಡಗಿದ್ದರೆ, ಇತ್ತ ದ್ರೌಪದಿಯ ಸಖಿಯರು
ಎಲವೊ ಮಟ್ಟಿಯ ಮದನ! ದರ್ಭೆಯ ತಿಲದ ಮನ್ಮಥ! ವಿಮಲ ಧೋತ್ರದ
ತಳಿರುಗಾಸೆಯ ಕಾಮ! ಕೃಷ್ಣಾಜಿನದ ಕಂದರ್ಪ!
ನಳಿನಮುಖಿಯನು ವರಿಸು ಬಾ ನಿನಗಳವಡುವನೆಲೆಯಕ್ಕ ಕೇಳೌ
ತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು"
ನಳಿನಮುಖಿಯನ್ನು ವರಿಸು ಬಾ!ಅಕ್ಕ! ಇಔನು ನಿನಗೆ ಅಳವಡುತ್ತಾನೆ! ನಾವು ತಲೆಯನ್ನು ಹಿಡಿದುಕೊಳ್ಳುತ್ತೇವೆ ಎಂದು ನಗತೊಡಗಿದರು!
ಆ ಬಳಿಕ ಅರ್ಜುನ ಲೀಲಾಜಾಲವಾಗಿ ಧನುಸ್ಸಿನ ಹೆದೆಯನ್ನು ಏರಿಸಿ ಬಾಣವನ್ನು ಬಿಟ್ಟು ಗೆದ್ದುಬಿಡುತ್ತಾನೆ. ಅದನ್ನು ಕಂಡು ಅಷ್ಟು ಹೊತ್ತು ಏನೇನೋ ಮಾತನಾಡುತ್ತ ಅವನಿಗೆ ಬಯ್ಯುತ್ತಿದ್ದ ಬ್ರಾಹ್ಮಣರೆಲ್ಲ ಒಮ್ಮೆಗೇ "ಹೋ" ಎಂದು ಕೂಗುತ್ತಾ ಹಾರುವನಿಗೇ ಸಿಕ್ಕಿದಳು ಎಂದು ಉತ್ಸಾಹದಲ್ಲಿ ಎದ್ದು ಕುಣಿಯತೊಡಗಿದರು. ಉಳಿದ ರಾಜರೆಲ್ಲ ಇದೇನಾಯ್ತು ಹೀಗೆ ಎಂದು ಆಶ್ಚರ್ಯದಲ್ಲಿ ಮೂಗಿನ ಮೇಲೆ ಬೆರಳನ್ನು ಹೊತ್ತು ಕುಳಿತಿದ್ದರು! ಹಲವು ರಾಜರು ತಮ್ಮನ್ನೆಲ್ಲ ಕರೆಸಿ ದ್ರುಪದ ಅವಮಾನ ಮಾಡಿದ ಎಂದು ಸಿಟ್ಟಿಗೆದ್ದು ಅವನ ವಿರುದ್ಧ ಶಸ್ತ್ರ ಹಿಡಿದು ನಿಂತರು. ಆಗ ಪಾಂಡವರೂ ದ್ರುಪದನ ಕಡೆಯವರೂ ಸೇರಿ ಅವರನ್ನೆಲ್ಲ ಹಿಮ್ಮೆಟ್ಟಿಸುತ್ತಾರೆ. ಆ ಬಳಿಕ ಸಂಜೆಯಾಗುತ್ತದೆ. ಕುಂತಿಯ ಬಳಿ ಅರ್ಜುನ "ಅಮ್ಮಾ! ಇಂದು ಎಲ್ಲಾ ಧರಣೀಶ್ವರರನ್ನು ಗೆದ್ದು ತಂದ ಮುತ್ತನ್ನು ನೋಡು!” ಎಂದು ಹೇಳಿದಾಗ ಕುಂತಿ "ಲೇಸಾಯ್ತು! ಐವರೂ ಕೂಡಿ ಭೋಗಿಸಿ" ಎಂದು ಹೇಳಿದಳು. ಅದರಂತೆ ಐವರೂ ಮದುವೆಯಾಗುವುದೆಂದು ನಿಶ್ಚಯಿಸಿದರು. ಆ ಸಂದರ್ಭದಲ್ಲಿ ಸಂಜೆಯಾಗುತ್ತ ಬಂತು. ಧೃಷ್ಟದ್ಯುಮ್ನ ಇವರು ಯಾರೆಂದು ತಿಳಿಯಲು ಮಾರುವೇಷದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ.
ಸಿಲುಕಿದುದು ಜನದೃಷ್ಟಿ ಬಲುಗತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನ ಮಿತ್ರನ ಬೇಹುಕಾರರ ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯದೊಳಗಡೆ ಸೊಡರು ತಳಿತುದು ಕೂಡೆ ನಗರಿಯಲಿ"
ಆಗ ಜನರ ದೃಷ್ಟಿಯೆಲ್ಲ ಕತ್ತಲೆಯೆಂಬ ಅಂಧಕಾರದ ಸಮುದ್ರದಲ್ಲಿ ಮುಳುಗಿತು. ಅದೇನು ಅದ್ಭುತವೆನ್ನುವುದು! ಸೂರ್ಯನ ಬೇಹುಕಾರರು ಎಲ್ಲಾ ಕತ್ತಲೆಯ ಪಾಳೆಯದ ಒಳಗೆ ಬಂದು ಸೇರಿಕೊಂಡಿದ್ದಾರೇನೋ ಎಂಬಂತೆ ಎಲ್ಲರ ಮನೆಯಲ್ಲೂ ದೀಪಗಳು ಬೆಳಗಿದ್ದವು.
ಹೀಗೆ ಬಂದ ಅವನು ಈ ಐವರೂ ಕುದುರೆಯನ್ನು ನಡೆಸುವುದು, ಗಜಶಾಸ್ತ್ರ, ರಥವನ್ನು ನಡೆಸುವುದು ಇತ್ಯಾದಿ ವಿಷಯಗಳನ್ನೇ ಚರ್ಚಿಸುವುದನ್ನು ಕೇಳಿದ. ಬ್ರಾಹ್ಮಣರಾದರೆ ಸರಸವಾದ ಭೋಜನದ ಕುರಿತೋ ವೇದಾಂಗ ವೇದ ತರ್ಕಗಳ ಮಾತುಗಳಲ್ಲಿಯೋ ರಾತ್ರಿಯನ್ನು ಕಳೆಯುತ್ತಾರೆ, ಕ್ಷತ್ರಿಯರಾದ ಕಾರಣ ಗಜಶಾಸ್ತ್ರವೇ ಮೊದಲಾದ ವಿಷಯಗಳನ್ನು ಚರ್ಚಿಸುತ್ತಿದ್ದರು ಎಂದು ಸಂತೋಷಪಟ್ಟು ಹೊರಡುತ್ತಾನೆ. ಮುಂದೆ ವೇದವ್ಯಾಸರು ಬಂದು ಅವರ ಕಥೆಯನ್ನೆಲ್ಲ ವಿಸ್ತರಿಸಿದ ಮೇಲೆ ದ್ರುಪದರಾಜನೂ ನಿಶ್ಚಿಂತನಾಗಿ ದ್ರೌಪದಿಯನ್ನು ಐವರಿಗೂ ಮದುವೆ ಮಾಡಿಕೊಡುತ್ತಾನೆ.
ಇಲ್ಲಿ ಸಣ್ಣ ದೀಪಗಳು ಬೆಳಗಿದ್ದನ್ನು ಅಸ್ತವಾದ ಸೂರ್ಯನ ಬೇಹುಕಾರರಿಗೆ ಕಲ್ಪಿಸುವ ಕವಿಯ ಚಾತುರ್ಯವನ್ನು ಗಮನಿಸಬಹಬುದು. ಅದೇ ಸಂದರ್ಭದಲ್ಲಿ ದ್ರೌಪದಿಯನ್ನು ಮದುವೆಯಾದವರು ಯಾರೆಂದು ತಿಳಿದುಕೊಳ್ಳಲು ಅವಳ ಸಹೋದರನೂ ಬೇಹುಕಾರನಾಗಿ ಬಂದಿರುವುದು ಈ ಕಲ್ಪನೆಗೆ ಇನ್ನಷ್ಟು ಮೆರುಗನ್ನು ಕೊಡುತ್ತದೆ. ಅಲ್ಲದೇ ಕುಮಾರವ್ಯಾಸ ಆ ಸಂಭಾಷಣೆಗಳಲ್ಲಿ ಸಹಜವಾದ ಸೂಕ್ಷ್ಮತೆಯನ್ನು ತಂದಿರುವುದೂ ಕೂಡ ಆಸ್ವಾದನೀಯ. ಪ್ರತಿಭಾನ್ವಿತನಾದ ಕವಿಯ ಚಿತ್ರಣವೆಂದರೇ ಹಾಗೆ! ಸಾವಿರಾರು ಪದ್ಯಗಳನ್ನು ಬರೆದರೂ ಅಲ್ಲಿ ಆ ಕುಸುರಿಯ ಕೆಲಸವನ್ನು ಮಾಡಬೇಕು. ಸಂದರ್ಭಕ್ಕೆ ತಕ್ಕ ಇಂತಹ ಸಹಜವಾದ ಸಂಭಾಷಣೆಗಳು ಆ ಕಾಲಕ್ಕೇ ಕೊಂಡೊಯ್ಯುವುದಲ್ಲವೇ! ಅದಕ್ಕೇ ಕುವೆಂಪು ಅವರು ಹೇಳಿದ್ದು- “ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿವುದು ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು"

ಕಾವ್ಯಾವಲೋಕನ-೨ ಕುಮಾರವ್ಯಾಸನ ಕ್ಯಾಮರಾದಲ್ಲಿ ದ್ರೌಪದಿಯ ಮದುವೆಯ ಪೂರ್ವರಂಗ



ಕನ್ನಡದಲ್ಲಿ ಕುಮಾರವ್ಯಾಸನ ಪದ್ಯಗಳನ್ನು ಕೇಳದ ಜನರು ಇರಲು ಸಾಧ್ಯವೇ ಇಲ್ಲ. ಕೇಳಿದವರು ಮೆಚ್ಚದಿರಲು ಸಾಧ್ಯವಿಲ್ಲ! ಅಷ್ಟು ಜನಜನಿತವಾಗಿರುವ ಕುಮಾರವ್ಯಾಸನ ಕಾವ್ಯದಲ್ಲಿ ಎದ್ದು ತೋರುವುದು ಅವನ ದೈತ್ಯ ಪ್ರತಿಭೆ . ಅದೆಷ್ಟು ಬಗೆಯ ಸೂಕ್ಷ್ಮತೆಗಳನ್ನು ಹುಡುಕಿ ಹುಡುಕಿ ತೆಗೆತೆಗೆದಿಡುತ್ತಾನೋ ಊಹಿಸಲೂ ಸಾಧ್ಯವಿಲ್ಲ. ನುರಿತ ಛಾಯಾಚಿತ್ರಗ್ರಾಹಕನೊಬ್ಬ ಹೇಗೆ ಯಾವುದೋ ಒಂದು ಕೋನದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕಾಣುವ ರಸವತ್ತಾದ ದೃಶ್ಯವನ್ನು ಸೆರೆಹಿಡಿದಿಡಬಲ್ಲನೋ ಹಾಗೇ ಕುಮಾರವ್ಯಾಸ ಕೂಡ ಮುಖ್ಯಕಥಾನಕಕ್ಕೆ ಪೂರಕವಾಗುವಂತೆಯೇ ಯಾವುದೋ ದೃಶ್ಯಗಳನ್ನೆಲ್ಲ ಸೆರೆಹಿಡಿದು ಕೊಡುತ್ತಾನೆ. ಆತ ತೋರಿಸುವ ದ್ರೌಪದಿಯ ಸ್ವಯಂವರದ ಚಿತ್ರಣವನ್ನು ಸ್ಥೂಲವಾಗಿ ಅವಲೋಕಿಸೋಣ.
ಪಾಂಡವರು ಐವರೂ ಪಾಂಚಾಲನಗರಿಗೆ ಬಂದು ಕುಂಬಾರನೊಬ್ಬನ ಮನೆಯಲ್ಲಿ ಉಳಿದಿರುತ್ತಾರೆ. ಆ ನಗರಕ್ಕೆ ಹಲವು ರಾಜರು ಚತುರಂಗ ಬಲಸಹಿತರಾಗಿ ಬರುತ್ತಿರುವಾಗ ಅವರ ಸೈನ್ಯದ ನಡಿಗೆಯಿಂದ ಧೂಳೆದ್ದು ಜಗತ್ತೆಲ್ಲವೂ ಧೂಳಿನಿಂದ ತುಂಬಿ ಕೆಂಪು ಬಣ್ಣವಾಗಿರುವುದು ದ್ರೌಪದಿಯನ್ನು ನೆನೆದು ಸಕಲ ಚರಾಚರ ವಸ್ತುಗಳಲ್ಲೂ ಅನುರಾಗ ಹುಟ್ಟಿದಂತೆ ಕಾಣುತ್ತಿತ್ತು. ಆ ರಾಜರ ಪಲ್ಲಕ್ಕಿ ಛತ್ರಚಾಮರಗಳ ನಡುವೆ ಸೂರ್ಯನಿಗೆ ನೋಡಲಾಗುತ್ತಿರಲಿಲ್ಲವಂತೆ. ಗಾಳಿಗೂ ಜಾಗವನ್ನು ಕೊಡುತ್ತಿರಲಿಲ್ಲವಂತೆ. ಬಂಗಾರದ ಕೆಲಸದಲ್ಲಿ ಹೊಸ ಹೊಸ ಚಿತ್ರಗಳನ್ನು ರಚಿಸಿ ದ್ರುಪದನ ನಗರದ ಗೋಡೆಗಳನ್ನು ಅಲಂಕರಿಸುತ್ತಿದ್ದರಂತೆ. ಹೂವಿನ ಹಾಗೂ ರತ್ನಗಳ ಮಾಲೆಗಳು ರಾರಾಜಿಸುತ್ತಿದ್ದವು. ಅಗರು ಧೂಪಗಳಿಂದ ಮೋಡಗಳು ಕೂಡ ಘಮಘಮಿಸುತ್ತಿದ್ದವು. ಅಲ್ಲಿ ಬಳಸುತ್ತಿದ್ದ ಕುಂಕುಮದಿಂದ ಕರ್ಪೂರದ ದೂಳಿನಿಂದ ಪನ್ನೀರಿನಿಂದ, ಕಸ್ತೂರಿಯಿಂದ ಪರಿಮಳವು ತುಂಬಿಕೊಂಡು ಗಾಳಿಯೂ ಕೂಡ ಭಾರವಾಗಿ ಕುಸಿಯುತ್ತಿತ್ತು.
ಹೊಳೆಯುತ್ತಿರುವ ಸಾಲಭಂಜಿಕೆಗಳಲ್ಲಿ ಮುತ್ತು ವಜ್ರಮಣಿಗಳಿಂದ ಕೂಡಿದ ರಚನೆಯಲ್ಲಿ ಸೂರ್ಯನ ರಥವೋ ಅಥವಾ ಪುಷ್ಪಕವಿಮಾನವೋ ಅಥವಾ ಶ್ರೀಮನ್ನಾರಾಯಣನ ಶಯ್ಯಾಗೃಹವೋ ಎಂದು ಅನುಮಾನವುಂಟಾಗುತ್ತಿತ್ತು. ಒಂದು ಕಡೆ ಸುಂದರಿಯರ ಯಂತ್ರಮಯ ವಿಗ್ರಹಗಳನ್ನು ಮಾಡಿಟ್ಟಿದ್ದರು. ಆ ವಿಗ್ರಹಗಳೇ ಕೇಳಿದವರಿಗೆ ಬೇಕಾದದ್ದನ್ನು ಕೊಡುತ್ತಿದ್ದವು. ಒಂದೆಡೆ ವಿವಿಧವೀಣಾವಾದ್ಯದ ಮೃದಂಗದ ಮೊದಲಾದ ಸಂಗೀತದ ಹಾಗೂ ವೈತಾಳಿಕರ ಮೇಳ ಚಪ್ಪರದಲ್ಲಿ ಇತ್ತು. ಹೊರ ವಲಯದಲ್ಲಿ ನಾನಾವಿಧಧ ನಾಟಕಗಳ ಪ್ರದರ್ಶನ ಗಾಯನಗಳೆಲ್ಲ ನಡೆಯುತ್ತಿದ್ದವು. ಮಲ್ಲರು ಚಿತ್ರವನ್ನು ರಚಿಸುವವರು ಮೊದಲಾದವರೆಲ್ಲ ಒಂದೆಡೆ ನೆರೆದಿದ್ದರು. ಹಲವು ದಿಕ್ಕುಗಳಿಂದ ಬಂದ ಮೂಕರು ಅಂಧರು ಕಿವುಡರು, ಕುಳ್ಳರು ಮೊದಲಾದವರೆಲ್ಲ ಅಲ್ಲಿ ಸೇರಿದ್ದರು.
ಅತ್ತ ಬಂದ ರಾಜರನ್ನೆಲ್ಲ ದ್ರುಪದ ಸ್ವಾಗತಿಸುತ್ತಾ ಉಪಚರಿಸುತ್ತಿದ್ದ. ಆಗ “ಪ್ರಚುರ ಮಣಿಯಿದೆ ಪದ್ಮರಾಗದ ರುಚಿರ ರತ್ನವು ಜಾತರೂಪದಿ ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ" (ದ್ರೌಪದಿ ಎಂಬ ಪದ್ಮರಾಗದ ಮಣಿಯಿದೆ, ಅದಕ್ಕೆ ತಕ್ಕ ರಾಜಕುಮಾರ ಎಂಬ ಚಿನ್ನ ಸಿಕ್ಕಿದರೆ ಪುಣ್ಯ ಎಂದು ಯೋಚಿಸಿದ)
ಮಾರನೆಯ ದಿನ ಕಮಲಮುಖಿ ದ್ರೌಪದಿ ಸ್ವಯಂವರಕ್ಕೆ ನಡೆತಂದಳು. ದ್ರುಪದ ಬಿಲ್ಲನ್ನೂ ಮತ್ಸ್ಯಯಂತ್ರವನ್ನೂ ತರಿಸಿಟ್ಟ. ಹತ್ತಿರದಲ್ಲೇ ಲಗ್ನವಿದೆ, ರಾಜರಿಗೆಲ್ಲ ಇದನ್ನು ತೋರಿಸು. ಗೆದ್ದವರು ದ್ರೌಪದಿಯನ್ನು ಮದುವೆಯಾಗಬಹುದು ಎಂದು ಸ್ವಯಂವರದ ನಿಯಮವನ್ನೂ ಸೂಚಿಸಿದ. ಆಗ ಬಂದ ದ್ರೌಪದಿ ಹೇಗಿದ್ದಳೆಂದರೆ-
ಹೊರೆಯ ಸಖಿಯರ ನೋಟ ಮೈಯಲಿ ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ ಪರಿಮಳದ ಪೂರದಲಿ ಗಂಧಾಂ-
ತರಕೆ ನೆರೆಯದು ರೂಪನೇನೆಂಬೆನು ನಿತಂಬಿನಿಯ||”
(ಈಕೆಯ ಸಖಿಯರನ್ನೂ ಇವಳನ್ನೂ ಎಷ್ಟು ನೋಡಿದರೂ- ಅವರ ಮೈಯಲ್ಲಿ ಹರಿಯುವ ನೋಟದಿಂದ ಕಣ್ಣಿಗೆ ಬಳಲಿಕೆ ಆಗುತ್ತಿರಲಿಲ್ಲ. ಇವಳನ್ನು ಧರಿಸಿ ಮನಸ್ಸಿಗೆ ಭಾರವಾಗಿ ಕುಸಿಯುತ್ತಿರಲಿಲ್ಲ. ಇವಳ ಮೆಲ್ನುಡಿಯನ್ನು ಸವಿಸವಿದು ಕಿವಿಗಳಿಗೆ ಅರುಚಿಯಾಗುತ್ತಿರಲಿಲ್ಲ. ಇವಳ ಮೈಯ ಪರಿಮಳವನ್ನು ಆಘ್ರಾಣಿಸಿದ ಬಳಿಕ ಬೇರೆ ಪರಿಮಳವನ್ನು ಆಸ್ವಾದಿಸಲು ನಾಸಿಕವು ಒಪ್ಪುತ್ತಿರಲಿಲ್ಲ. ಇಂತಹ ಸುಂದರಿಯ ರೂಪವನ್ನು ಏನೆಂದು ವರ್ಣಿಸಲಿ)
"ಪರಿಮಳದ ಪರಮಾಣುಗಳ ಸಂವರಿಸಿ ಮುಕ್ತಾಫಲದ ಕೆಂದಾ-
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ
ಸರಸವೀಣಾಧ್ವನಿಯ ಹಂಸೆಯ ಗರುವ ಗತಿಗಳನಾಯ್ದು ಮನ್ಮಥ-
ವರವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ||”
(ಪರಿಮಳದ ಪರಮಾಣುಗಳನ್ನು ಆರಿಸಿ ಆರಿಸಿ ಸಂಗ್ರಹಿಸಿ, ಮುತ್ತಿನ, ಕಮಲದ ಹೂವಿನ, ಮರಿದುಂಬಿಗಳ ಬೇರೆ ಬೇರೆ ಬಣ್ಣಗಳನ್ನು ಅಳವಡಿಸಿ ಸರಸವಾದ ವೀಣೆಯ ಧ್ವನಿಯನ್ನು ಹಾಗೂ ಹಂಸದ ನಡಿಗೆಯನ್ನೂ ಆಯ್ದು ಇವಳನ್ನು ಸೃಷ್ಟಿಸಿದ್ದಾನೆ. ಆ ವೇದಾಭಬ್ಯಾಸಜಡನಾದ ಬ್ರಹ್ಮ ಅಲ್ಲ. ಈಕೆಯನ್ನು ಸೃಷ್ಟಿಸಿದವನು ಮನ್ಮಥ ಎಂಬ ಬ್ರಹ್ಮ)
ಈಕೆ ಮನಸಿಜನ ಮದದಾನೆ. ಮನ್ಮಥನ ರತ್ನಾಗಾರ. ಅಂಗಜನ ಮಂತ್ರಸೂತ್ರಗಳ ಟಿಪ್ಪಣಿ. ಮಾನಿನಿಯರ ಅಧಿದೇವತೆ. ಮೂರು ಲೋಕವನ್ನೂ ಮೋಹನಗೊಳಿಸುವ ಚಿತ್ರ.
ಸುವಾಸಿನಿಯರು ಆಕೆಗೆ ಆರತಿಯನ್ನು ಎತ್ತಿದರು. ಬಳಿಕ ದೃಷ್ಟಿಯನ್ನು ತೆಗೆಯಲು ಉಪ್ಪಾರತಿಯನ್ನು ಮಾಡಿದರು. ಶೇಷಾಕ್ಷತೆ ಹಾಕಿ ಹರಸಿದರು. ಆಮೇಲೆ ಅವಳು ಕನ್ನಡಿಯನ್ನು ನೋಡಿಕೊಂಡಳು. ಮಂತ್ರಗಳನ್ನು ಹೇಳುತ್ತಿರುವಾಗ ಲಿಂಬೆಯ ಹಣ್ಣನ್ನು ತೆಗೆದುಕೊಂಡಳು. ದುಂದುಭಿಗಳು ಮೊಳಗುತ್ತಿರುವಾಗ ಕಮಲಕ್ಕೆ ಲಕ್ಷ್ಮಿ ಬರುವ ಹಾಗೆ ದ್ರೌಪದಿ ದಂಡಿಗೆಗೆ ಬಂದಳು. ಕೀಲ ಕಡಗ, ವಜ್ರಲಹರಿಯ ಜೋಲೆಯದ ಕಂಕಣದ ರವೆಯದ ತೋಳಬಂದಿಯ, ಕತ್ತಿನಲ್ಲಿ ತ್ರಿಸರದ, ಬೆರಳಿನ ಉಂಗುರಗಳ, ನೀಲರತ್ನದ ಪದಕದ, ಮಾಣಿಕ್ಯದ ಓಲೆಗಳ, ಮುತ್ತಿನ ಮೂಗುತಿಯ, ಹಾಗೆಯೇ ಏಕಾವಳಿಯ, ಮುತ್ತಿನ ತಿಲಕದ, ತಾರಕಾವಳಿಯ, ಕಾಂಚಿಯ, ಕಿಂಕಿಣಿಗಳಿರುವ ಗೆಜ್ಜೆಯ ವೀರಮುದ್ರಾವಳಿ ಇರುವ ಕಾಲಿನ ಆಭರಣದಲ್ಲಿ ಆಕೆ ಶೃಂಗಾರವನ್ನು ಮಾಡಿಕೊಂಡಿದ್ದಳು.
ಯತಿಗಳಿಗೆ ತಮ್ಮ ಕಣ್ಣೋಟದ ಹರಿತ ಮೊನೆಯನ್ನು ತೋರಿ, ವ್ರತಿಗಳನ್ನು ತಣಿಸದೆಯೇ ,ಸಮಾಧಿಸ್ಥಿತರಾದ ಯೋಗಿಗಳ ಮೂಗಿನ ಮೇಲೆ ಆಯುಧದ ಧಾರೆಯನ್ನು ಎಳೆದು, ವೇದವಿಹಿತ ಕರ್ಮಗಳ ದೀಕ್ಷಿತರ ಮನಸ್ಸಿನಲ್ಲಿ ಮುದ್ರೆಯನ್ನು ಒತ್ತುತ್ತ ಈ ಯುವತಿಯರು ನಡೆತಂದರು. "ಈಕೆಯ ಎದುರು ಯಾರು ನಿಲ್ಲಬಲ್ಲರು! ಮದನಾರಿಯೆನಿಸಿದ ಶಿವನೇ ಅರ್ಧದೇಹದಲ್ಲಿ ನಾರಿಯಿದ್ದಾಳೆ, ವಿಷ್ಣುವೇ ಸ್ವತಃ ಹೆಂಗಸಾದ, ಬ್ರಹ್ಮ ಮಗಳನ್ನು ಸೇರಿದ, ಇಂದ್ರನ ಕಥೆಯಂತೂ ಘೋರ, (ಅಹಲ್ಯಾಪ್ರಸಂಗದಲ್ಲಿ ಗೌತಮನ ಶಾಪದಿಂದ) ಮೈಯಾರೆ ಮದನನ ಮುದ್ರೆಗಳನ್ನು ಹೊತ್ತ!”ಎಂದು ಸಾರುತ್ತಿರುವಂತೆ ಕಹಳೆಗಳ ಧ್ವನಿ ಕೇಳುತ್ತಿತ್ತು.
ತಂಗಾಳಿ ಪಸರಿಸುತ್ತಿತ್ತು. ಬಿಸಿಲಿನ ಬಿಂಕ ಬೀತುಹೋಯಿತು, ಕಮಲಗಳು ಬಾಡಿಹೋದವು, ತಾರೆಗಳು ಮೆರೆದವು, ಶಶಿಕಾಂತ ಶಿಲೆಗಳು ನೀರನ್ನು ಒಸರಿಸಿದವು, ನೈದಿಲೆಯ ಹೂ ಅರಳತೊಡಗಿತು, ಚಕ್ರವಾಕ ಪಕ್ಷಿಗಳಿಗೆ ವಿರಹವುಂಟಾಯಿತು, ಇವೆಲ್ಲ ಆಗುತ್ತಿದ್ದುದು ಸಂಜೆಯಾಯಿತೆಂದಲ್ಲ! ಈ ಚಂದ್ಮುಖಿಯರ ಆಗಮನದಿಂದ ಹೀಗಾಯಿತು! ಈಕೆಯ ಹೊಳೆಯುವ ಕಣ್ಣುಗಳ ಬೆಳಕಿನಲ್ಲಿ ಕಾಮುಕರ ಮುಖ ಕತ್ತಲಿಸಿದವು. ಅವಳ ದೇಹದ ಕಾಂತಿಗಳಲ್ಲಿ ಇವರ ಬುದ್ಧಿ ಬಾಡಿಹೋಯಿತು. ಅವಳ ಲಾಲಿತ್ಯದ ವಿಭ್ರಮದಿಂದ ಇವರ ಅಹಂಕಾರವೆಂಬ ಶಿಲೆಗಳು ಒಡೆದುಹೋದವು.ಮಹಾಮಹೀಶ್ವರರ ಮನಸ್ಸು ಇವಳ ಮೋಹನಾಕೃತಿಯಲ್ಲಿ ಹೊಳೆದು ಅಡಗಿದವು. ಇವಳನ್ನು ಕಂಡು ಒಳಗೊಳಗೇ ಧಗೆ ಹೆಚ್ಚುತ್ತಿದ್ದರೂ ಹೊರಗೆ ಬಿಮ್ಮನೆ ನಗುತ್ತಿದ್ದ ರಾಜರನ್ನು ಏನೆಂದು ವರ್ಣಿಸೋಣ!
ಈಕೆಯಂದುದಿಸಿರೆ ಮದನಂಗೇಕೆ ದೇಹತ್ಯಾಗವಹುದು ಪಿ
-ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ!
ಸಾಕು ಗೌತಮ ಮುನಿಯ ಮುಳಿಸಿನ ಕಾಕು ನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ!”
"ಇವಳು ಅಂದೇ ಹುಟ್ಟಿದ್ದರೆ ಶಿವನ ತಪೋಭಂಗಕ್ಕೆ ಹೊರಟ ಮನ್ಮಥನಿಗೇಕೆ ದೇಹತ್ಯಾಗವಾಗುತ್ತಿತ್ತು. ಪಿನಾಕಿಯಾದ ಶಿವ ವೈರಾಗ್ಯವನ್ನು ಹೊಂದುತ್ತಲೇ ಇರಲಿಲ್ಲ. ಸಾಕು! ಗೌತಮಮುನಿಯ ಶಾಪದ ನುಡಿ ಹೇಗೆ ಫಲಿಸುತ್ತಿತ್ತು! (ಅಹಲ್ಯೆಯನ್ನು ತಾನು ಕಾಮಿಸುವ ಪ್ರಸಂಗವೇ ಬರುತ್ತಿರಲಿಲ್ಲವೇನೋ!)”ಎಂದು ಸ್ವರ್ಗದಲ್ಲಿ ಇಂದ್ರ ರಂಭೆಯರೇ ಮೊದಲಾದ ಸತಿಯರನ್ನು ನೋಡಿ ನಗುತ್ತ ಹೇಳಿದ.
ಆಮೇಲೆ ಬಂಗಾರದ ಪಲ್ಲಕ್ಕಿಯಲ್ಲಿ ಆಕೆಯನ್ನು ರಾಜರುಗಳೆಲ್ಲ ಕುಳಿತ ಸಿಂಹಾಸನಗಳ ಸಾಲಿಗೆ ಕರೆತರುತ್ತಾರೆ. ಧೃಷ್ಟದ್ಯುಮ್ನನು ಆಗ ಅವಳ ಸನಿಹಕ್ಕೆ ಬಂದು ಯಾರು ಯಾರು ಯಾವ ರಾಜ್ಯದ ರಾಜರೆಂದು ಪರಿಚಯವನ್ನು ಹೇಳತೊಡಗಿದ. ಮೊದಲು ದುರ್ಯೋಧನ ದುಶ್ಶಾಸನಾದಿ ಧೃತರಾಷ್ಟ್ರನ ಮಕ್ಕಳನ್ನು ತೋರಿಸಿದ. ಅವರನ್ನು ದ್ರೌಪದಿ ನೋಡಲೂ ಇಲ್ಲ! ಆ ಬಳಿಕ ವಿರಾಟನನ್ನು ಕೀಚಕನನ್ನು ಶ್ರುತಾಯುಧ ಮೊದಲಾದ ಪೂರ್ವದ ರಾಜರನ್ನು ರವಿಧ್ವಜ ರೋಚಮಾನಕರನ್ನು ನೀಲಚಿತ್ರಾಯುಧರನ್ನು, ದಕ್ಷಿಣದ ಚೋಳರನ್ನು, ಕೇರಳದ ರಾಜರನ್ನು ಪಾಂಡ್ಯರನ್ನು, ಚಂದ್ರಸೇನ ಸಮುದ್ರಸೇನರನ್ನು, ಕಳಿಂಗದ ರಾಜನನ್ನು ಚೇಕಿತಾನ ಭಾನುದತ್ತರನ್ನು ತೋರಿಸಿದ. ಆಮೇಲೆ ಪೌಂಡ್ರಕ ಭಗದತ್ತರನ್ನು ಕಾಂಭೋಜನನ್ನು, ಹರದತ್ತ, ವರಹಂಸ ಡಿಂಬಕ ಮದ್ರರಾಜ, ಜರಾಸಂಧ, ಮಣಿಮಂತ, ಬೃಹದ್ರಥ, ದಂಡಧಾರಕ ಮೊದಲಾದವರನ್ನು, ಭೂರಿಶ್ರವ, ವೀರಬಾಹ್ಲಿಕ, ಜಯದ್ರಥ ಶಿಬಿ, ಶ್ರುತಾಯುಧ, ವೃದ್ಧಕ್ಷತ್ರ, ಸೃಂಜಯ, ಸೋಮದತ್ತ, ಶಿಶುಪಾಲ ರುಕ್ಮಾಂಗದಅಶ್ವತ್ಥಾಮ ಸೌಬಲ ಮೊದಲಾದವರನ್ನು ತೋರಿಸಿದ. ಹೀಗೆ ಇವರೆಲ್ಲರ ಪರಿಚಯ ಮಾಡಿಕೊಡುತ್ತಾ ಬಂದಾಗ ಕರ್ಣನನ್ನು ಅವನ ಮಕ್ಕಳಾದ ವೃಷಸೇನ ಚಿತ್ರಸೇನರನ್ನು ತೋರಿಸಿದ. “ಇವರು ಆಗುವರೇ" ಎಂದು ಕೇಳಲು ದ್ರೌಪದಿ ಒಮ್ಮೆ ನೋಡಿ ಮುಖವನ್ನು ತಿರುಗಿಸಿಕೊಂಡು ಬಂದಳು.
ಆಮೇಲೆ ಕೃಷ್ಞನನ್ನು ಪರಿಚಯಿಸಿದಾಗ ಭಕ್ತಿಭಾವದಿಂದ ರೋಮಾಂಚಿತಳಾಗಿ ದ್ರೌಪದಿ ಮನಸ್ಸಿನಲ್ಲಿಯೇ ವಂದಿಸಿ "ಇವನಲ್ಲಿ ನನಗೆ ಗುರುಭಾವನೆಯು ಬರುತ್ತಿದೆ. ಏನೆಂದು ತಿಳಿಯುತ್ತಿಲ್ಲ!" ಎಂದು ನಸುನಕ್ಕು ಹೇಳಿದಳು. ಆ ಬಳಿಕ ಉಳಿದ ಯಾದವರನ್ನೂ ಬಲರಾಮನನ್ನೂ ತೋರಿಸಿದನು.
ಕೆಲರು ಮಧುರಾಪಾಂಗದಲಿ ಕಂಗಳ ಮರೀಚಿಯ ಬೆಳಗಿನಲಿ ಕೆಲ-
ರೆಳನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನಲೊಲಿವ ಸಖಿಯರಿಗೆಂದಳೆಂದೊಳ-
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ||”
ಕೆಲವರು ದ್ರೌಪದಿಯು ಮಧುರವಾದ ಓರೆನೋಟವನ್ನು ಬೀರಿದಳೆಂದು, ಇನ್ನು ಕೆಲವರು ಕಣ್ಣ ಕಾಂತಿಯನ್ನು ಕಂಡೆವೆಂದು ಕೆಲವರು ತಮ್ಮ ಕಡೆ ಎಳನಗೆಯ ಮಿಂಚನ್ನು ಬೀರಿದಳೆಂದು, ಸಖಿಯರ ಜೊತೆ ಮಾತನಾಡುತ್ತ ತಮ್ಮನ್ನು ನೋಡಿದಳೆಂದು ಕೆಲವರು, ಕೆಲವರು ತಮ್ಮ ಕುರಿತು ಸಖಿಯರ ಬಳಿ ಏನೋ ಹೇಳಿದಳೆಂದು ಸಂತೋಷವನ್ನು ಪಡುತ್ತಾ ಮಧುಪಾನವನ್ನು ಮಾಡುತ್ತಿದ್ದರು.
ಮಡಿಸಿದೆಲೆ ಬೆರಳೊಳಗೆ ಬಾಯೊಳಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪಶರವವಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ"
ಎಲೆಯಡಿಕೆಯನ್ನು ಹಾಕಿಕೊಳ್ಳಬೇಕೆಂದು ಮಡಿಸಿಕೊಂಡ ಎಲೆ ಬೆರಳಲ್ಲಿಯೇ ಉಳಿದಿತ್ತು. ಬಾಯಿಗೆ ಹಾಕಿಕೊಂಡ ಎಲೆ ಬಾಯಲ್ಲಿಯೇ ಉಳಿದಿತ್ತು! ಮಂತ್ರಿಗಳು ಹೇಳುವ ಮಾತನ್ನು ಕೇಳುತ್ತಿರಲಿಲ್ಲ! ಕಣ್ಣ ಮುಂದೆ ಯಾರಾದರೂ ನಡೆದರೂ ಗೊತ್ತಾಗುತ್ತಿರಲಿಲ್ಲ! ಬಹಳ ಸಿಟ್ಟಾದ ಮನ್ಮಥನ ಬಾಣವೇ(ಹೂಗಳೇ) ಅವಘಡಿಸಿದ್ದ ಕೈಗಳನ್ನು ನೋಡಿ (ಮಾಲೆಯನ್ನು ಹಿಡಿದ ದ್ರೌಪದಿಯ ಕೈಗಳನ್ನು ನೋಡಿ) ನಮ್ಮನ್ನು ಈಕೆ ವರಿಸುತ್ತಾಳೋ ಇಲ್ಲವೋ ಎಂಬ ದುಗುಡದಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕಣ್ಣೆವೆಯನ್ನೂ ಮಿಡುಕದೇ ರಾಜರೆಲ್ಲ ಕುಳಿತಿದ್ದರು.
"ಯಾರೊಬ್ಬರನ್ನೂ ಈಕೆಯು ಮೆಚ್ಚಲಿಲ್ಲವಲ್ಲಾ! ಅರ್ಜುನನ್ನು ಮದುವೆಯಾಗುತ್ತಾಳೆ ಎಂದು ಹೇಳಿದವರ ಮಾತು ಸುಳ್ಳಾಗುವುದೇ! ಅವನನ್ನು ಯಾರೂ ತೋರಿಸುತ್ತಿಲ್ಲವಲ್ಲಾ!”ಎಂದು ದ್ರುಪದ ಚಿಂತಿತನಾಗಿದ್ದ.
ಹೀಗೆ ಆದ ಬಳಿಕ ಮತ್ಸ್ಯಯಂತ್ರವನ್ನು ತಂದಿಟ್ಟು ಅದನ್ನು ಭೇದಿಸಿದವರು ದ್ರೌಪದಿಯನ್ನು ಗೆದ್ದಂತೆ ಎಂಬ ಪಂದ್ಯವನ್ನು ಇಡುತ್ತಾನೆ. ಆಗ ಆ ಮಹಾಧನುಸ್ಸು ಎಲ್ಲ ರಾಜರನ್ನೂ ಸೋಲಿಸಿಬಿಡುತ್ತದೆ. ಹಾಗೂ ಅರ್ಜುನ ಅದನ್ನು ಗೆಲ್ಲುತ್ತಾನೆ. ಆ ಕಥಾನಕವನ್ನು ಮುಂದೆ ನೋಡೋಣ.