Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೩ ದ್ರೌಪದಿಯ ಸ್ವಯಂವರ



ದ್ರೌಪದಿಯ ಸೌಂದರ್ಯವನ್ನು ಕಂಡು ಎಲ್ಲರೂ ಮಂತ್ರಮುಗ್ಧರಾಗಿ ಕುಳಿತಿದ್ದಾಗ ದ್ರುಪದರಾಜ ಒಂದು ಬಿಲ್ಲನ್ನೂ ಮತ್ಸ್ಯಯಂತ್ರವನ್ನೂ ತಂದಿರಿಸಿ ಆ ಬಿಲ್ಲಿನಲ್ಲಿ ಬಾಣವನ್ನು ಹೂಡಿ ತಮ್ಮ ಬಾಹುವಿಕ್ರಮದಿಂದ ಯಂತ್ರವನ್ನು ಭೇದಿಸಿದರೆ ಆತ ದ್ರೌಪದಿಯನ್ನು ಗೆದ್ದಂತೆ ಎಂದು ಸೂಚಿಸಿದ. ಆ ಬಿಲ್ಲೇ ಕಬ್ಬಿನ ಬಿಲ್ಲು. ಅಲ್ಲಿರುವ ಬಾಣಗಳೇ ಹೂವಿನ ಬಾಣಗಳು. ಯಂತ್ರವೇ ದ್ರೌಪದಿಯ ಹೃದಯ. ಅದನ್ನು ಗೆಲ್ಲುವವನೇ ದ್ರೌಪದಿಗೆ ಮನ್ಮಥನಾಗುತ್ತಾನೆ ಎಂದು ಸಾರಿ ಹೇಳಿ ಆ ಧನುಸ್ಸನ್ನೂ ಅದರ ಬಾಣಗಳನ್ನೂ ಯಂತ್ರವನ್ನೂ ಅಲ್ಲಿ ಇಟ್ಟು ಅದಕ್ಕೆ ಗಂಧಾಕ್ಷತೆಗಳಿಂದ ಪೂಜಿಸಿದರು. ಆಗ ಮಂಗಳವಾದ್ಯಗಳೆಲ್ಲ ಮೊಳಗಿದವು. ಆ ಬಳಿಕ ನಾನಾದಿಗಂತದ ಧರಣೀಶ್ವರರೆಲ್ಲ ತಮ್ಮ ಹಮ್ಮು ಬಿಮ್ಮುಗಳಿಂದ ಬಹುಸುಲಭವಾಗಿ ಗೆದ್ದುಬಿಡುತ್ತೇವೆಂಬ ಉತ್ಸಾಹದಲ್ಲಿ ಬಂದು ಬಿಲ್ಲನ್ನು ಎತ್ತಲು ಪ್ರಯತ್ನಿಸಿದ್ದಾಯಿತು. ಆದರೆ ಆ ಬಿಲ್ಲು ನೆಲವನ್ನು ಬಿಡಲೇ ಇಲ್ಲ. ಅವರಿಗೆಲ್ಲ ಕೈಲಾಸಪರ್ವತವನ್ನು ಎತ್ತಲು ಹೋದ ರಾವಣನ ಪರಿಸ್ಥಿತಿಯಾಯಿತು. ಕೆಲವರ ಹಾರ ಹರಿದು ಹೋಯಿತು. ಕೆಲವರ ಕಿವಿಗಳ ಆಭರಣದ ಮಣಿಗಳು ಕಳಚಿ ಬಿದ್ದವು. ಕೆಲವರ ಕಾಲಿನ ನೇವುರ ತುಂಡಾಯಿತು. ಅವರ ನೆನಪುಗಳೆಲ್ಲ ಕುಗ್ಗಿದವು. ಅತ್ತ ಅಂತಃಪುರದ ನಾರಿಯರು ಚಪ್ಪಾಳೆ ತಟ್ಟಿಕೊಂಡು ನಗುತ್ತಿರುವುದನ್ನು ಕಂಡು ನಾಚಿ ಮುಖಕ್ಕೆ ಮುಸುಕುಹಾಕಿಕೊಂಡು ತಮ್ಮ ತಮ್ಮ ಸಿಂಹಾಸನಕ್ಕೆ ಬಂದು ಕುಳಿತರು.
ಇಲ್ಲೆಲ್ಲ ಕುಮಾರವ್ಯಾಸ ಬಹುಸೂಕ್ಷ್ಮವಾಗಿ ಚಿತ್ರಿಸಿ ರಾಜರ ಪರಿಸ್ಥಿತಿ ಏನಾಯಿತು ಎಂಬುದನ್ನು ಅವರ ಆಭರಣಗಳು ಹರಿದುಹೋದದ್ದರಿಂದ ಬಣ್ಣಿಸುತ್ತಾನೆ. ಆತನ ಕಣ್ಣು ಪ್ರತಿಯೊಂದು ಸನ್ನಿವೇಶದಲ್ಲೂ ಇಷ್ಟೇ ಸೂಕ್ಷ್ಮವಾಗಿ ಅವಲೋಕಿಸುತ್ತ ಹೋಗುವ ಚಾತುರ್ಯವನ್ನು ಹೊಂದಿದೆ. ಆತನ ಮಾತು ಅದನ್ನೆಲ್ಲ ಬಣ್ಣಿಸುವ ಶಕ್ತಿಯನ್ನು ಹೊಂದಿದೆ. ಹಾಗೇ ಮುಂದಿನ ಕಥೆಯನ್ನು ಅವಲೋಕಿಸಿದರೆ ಅಲ್ಲಿ ಸೋತ ರಾಜರು ಮಾತನಾಡಿಕೊಳ್ಳುವುದನ್ನು ಹೀಗೆ ಹೇಳುತ್ತಾನೆ-
ಮಿಡುಕದೀ ಧನು ನಮ್ಮ ಝಾಡಿಸಿ ಕೆಡಹಿತಿದನಿನ್ನಾರು ಕೊರಳಲಿ
ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ ಕಾಂಬೆವೈಸಲೆ ನುಡಿದು ಮಾಡುವುದೇನೆನುತ ಸಿರಿ-
ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ"
ಈ ಬಿಲ್ಲು ನಮ್ಮನ್ನು ಝಾಡಿಸಿ ಕೆಡವಿತು. ಇದನ್ನು ಇನ್ನು ಯಾರು ಬಾಗಿಸಿ ಹೆದೆಯನ್ನು ಕಟ್ಟಿ ಬಾಣವನ್ನು ಬಿಡುತ್ತಾರೋ ಆ ಕಡುಹಿನ ಅಣ್ಣನನ್ನು ನೋಡೋಣ! ನುಡಿದು ಮಾಡುವುದೇನು" ಎಂದು ತಮ್ಮ ಸಿರಿಮುಡಿಯ ಮುಸುಕಿನಲ್ಲಿ ರಾಜರೆಲ್ಲ ಬಿಂಕ ತೋರಿಸಿಕೊಂಡು ಕುಳಿತಿದ್ದರು.
ಆಗ ಮಗಧದ ಜರಾಸಂಧ ಬಂದ; ಅವನು ಬಿಲ್ಲನ್ನು ಎತ್ತಿದರೆ ಬಿಲ್ಲು ಅವನ ಮೈಗೇ ಒರಗಿತು. ಅವನು ಒತ್ತಿಹಿಡಿದ. ಬಿಲ್ಲಿಗೆ ಇವನು ಯಾರು ಎಂದು ಗೊತ್ತಿಲ್ಲ. ಇವನು ಹಲ್ಲು ಕಚ್ಚಿಕೊಂಡು ಹಿಡಿದುಕೊಂಡು ಬಳಲಿದ. ಅಷ್ಟಕ್ಕೇ ಅವನ ಅಳ್ಳೆಗಳೆಲ್ಲ ಅಲ್ಲಾಡಿದವು ನೋಯತೊಡಗಿದವು. ಬೆವರನ್ನು ಆರಿಸಿಕೊಂಡು ಶ್ರಮವನ್ನು ಕಳೆದು ಮೊಣಕಾಲನ್ನು ಇಟ್ಟು ಎದೆಯನ್ನು ಒತ್ತಿ ಒಂದು ದಂಡೆಯಲ್ಲಿ ಸರಿಯಾಗಿ ಹಿಡಿದುಕೊಂಡು ಎತ್ತಲು ಪ್ರಯತ್ನಿಸಿದರೆ ಒಂದು ಜವೆಯಷ್ಟು ನೆಲವನ್ನು ಬಿಟ್ಟಿತು! ಅವನ ಪರಾಕ್ರಮಗರ್ವವಿಭ್ರಮವನ್ನೆಲ್ಲ ಸದೆದು ಹಾಕಿತು! ಹೆಂಗಳೆಯರೆಲ್ಲ ಘೊಳ್ಳನೆ ನಗುವಾಗ ಮುಸುಕು ಹಾಕಿಕೊಂಡು ಬಂದು ಕುಳಿತುಕೊಂಡ. ಆಗ ಚೇದಿಯ ರಾಜ ಶಿಶುಪಾಲ ಹೋಗಿ ನಗುವ ಹೆಂಗಸರ ತುರುಬನ್ನು ಕೊಯ್ಯಿಸುವೆ ಎಂದು ಗರ್ವದ ನುಡಿಗಳನ್ನಾಡುತ್ತಾ ಬಿಲ್ಲನ್ನು ಎತ್ತಲು ಪ್ರಯತ್ನಿಸಿ ವಿಫಲನಾಗಿ ಅವಮಾನಿತನಾಗಿ ಬಂದ. ಮಗಧರಾಜನೂ ಚೇದಿರಾಜನೂ "ಇದೆಲ್ಲ ನಮಗೇಕೆ! ಭಂಡರಾದ ಪಾಂಚಾಲ ರಾಜರೂ ಉಳಿದವರೂ ಹೆಂಗಸರ ನಗೆಯನ್ನೇ ತಲೆಯ ಮೇಲೆ ಹೊತ್ತುಕೊಳ್ಳಲಿ "ಎಂದು ತಮ್ಮ ಪಟ್ಟಣಕ್ಕೆ ಹೋದರು.
ಶಲ್ಯರಾಜ ಬಂದು ವಿಫಲನಾಗಿ ಹೋದ. ಕರ್ಣನೂ ಬಂದು ಬಿಲ್ಲನ್ನೆತ್ತಲಾರದೇ ಹೋದದ್ದು ಕಂಡು ಉಳಿದ ರಾಜರು " ಶ್ರೀಗಂಧದ ಮರಕ್ಕೆ ಹಾವು ಸುತ್ತಿಕೊಂಡಿರುತ್ತದೆ ಎನ್ನುತ್ತಾರೆ. ಇದು ದ್ರೌಪದಿ ಎಂಬ ಶ್ರೀಗಂಧವನ್ನು ಸುತ್ತಿಕೊಂಡ ಹಾವು" ಎಂದು ದುಗುಡದಲ್ಲಿದ್ದರು. ಆಗ ಬಲರಾಮ ತಾನೂ ಒಮ್ಮೆ ನೋಡಿಯೇಬಿಡುವೆ ಎಂದು ಯೋಚಿಸಿ ಎದ್ದದ್ದನ್ನು ಕಂಡು ಕೃಷ್ಣ- “ದ್ರೌಪದಿ ನಮಗೆ ಎಷ್ಟೆಂದರೂ ತಂಗಿಗೆ ಸಮಾನ. ಆಕೆ ಪಾಂಡವರಿಗೇ ಪತ್ನಿಯಾಗುತ್ತಾಳೆ" ಎಂದು ಹೇಳಿ ಅವನನ್ನು ಕುಳ್ಳಿರಿಸಿದ. ಆಗ ಬಲರಾಮ- “ಪಾಂಡವರು ಅಂದೇ ಬೆಂಕಿಯಲ್ಲಿ ಸುಟ್ಟುಹೋದರೆಂದು ಲೋಕವೆಲ್ಲಾ ತಿಳಿದಿದೆ. ಆದರೂ ಶಠಾಗಮಿಕ! ನಿನಗೆ ಅಂಜುತ್ತೇನೆ (ನೀನೇನೋ ಮೋಸವನ್ನು ಮಾಡುತ್ತೀಯಾ!)" ಎಂದು ಸುಮ್ಮನೆ ಕುಳಿತ.
ಕ್ಷತ್ರಿಯರೆಲ್ಲಾ ಈಕೆಯನ್ನು ಗೆಲ್ಲಲಾರದೇ ಸೋತಿದ್ದಾರೆ, ಬ್ರಾಹ್ಮಣರು ಯಾರಾದರೂ ಇದ್ದಾರೋ ಕೇಳಿ ಎಂದು ಡಂಗುರವನ್ನು ಹೊಡೆಸಿದರು. "ಶಾಸ್ತ್ರದಂತೆ ಕ್ಷತ್ರಿಯಕನ್ಯೆಯನ್ನು ಬ್ರಾಹ್ಮಣರಿಗೆ ಕೊಡಬಹುದು" ಎಂದು ಶಾಸ್ತ್ರವನ್ನೂ ಹೇಳಿ ಡಂಗುರ ಸಾರಿದ್ದನ್ನು ಕೇಳಿ "ನಮಗೇಕೆ ಈ ಸುಂದರಿಯ ತೊಡಕು! ಬಿಡು! ನಾವೆಲ್ಲಿ ಬಿಲ್ಲೆಲ್ಲಿ! ನಮಗೆ ಇದೆಲ್ಲಾ ಆಗುವುದಲ್ಲ!” ಎಂದು ಹೇಳಿದರು.
ಬಂದ ದಕ್ಷಿಣೆ ಮೃಷ್ಟಭೋಜನದಿಂದ ತುಷ್ಟರು ನಾವು ನಮಗಿದ-
ರಿಂದ ಬಹುದುಷ್ಕೀರ್ತಿ ಬರಲೆಂದುದು ಬುಧವ್ರಾತ"
"ನಾವು ಬಂದ ದಕ್ಷಿಣೆ ಹಾಗೂ ಭೋಜನದಿಂದಲೇ ತೃಪ್ತರಾಗಿದ್ದೇವೆ. ನಮಗೆ ಯಾಕೆ ಈ ದುಷ್ಕೀರ್ತಿ" ಎಂದು ಕೆಲವರು ಹೇಳಿದರು.
ವಚನಶೂರರು ನಾವು ಪಾರ್ಥಿವ ನಿಚಯವೇ ಭುಜಶೂರರನಿಬರ-
ನಚಲಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ!
ಉಚಿತವಲ್ಲಿದು ನಮ್ಮ ಸಾಹಸರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ"
ನಾವು ಮಾತಿನಲ್ಲಷ್ಟೇ ಶೂರರು, ಕ್ಷತ್ರಿಯರು ಭುಜಲದಲ್ಲಿ ಶೂರರು. ಈ ಧನು ಅವರನ್ನೇ ಭಂಗಿಸಿತು. ನಮಗೆ ಈ ವಿದ್ಯೆ ಏನು ವೈದಿಕವೇ! ಇದು ಯೋಗ್ಯವಾದದ್ದಲ್ಲ! ನಮ್ಮ ಸಾಹಸವನ್ನು ನೋಡಬೇಕೆಂದರೆ ಪಂಡಿತರ ಗುಂಪು ಎದುರಿಗೆ ನಿಲ್ಲಲಿ. ಆಗ ವಿಸ್ಮಯವನ್ನು ತೋರಿಸುತ್ತೇವೆ" ವೇದವೇದಾಂಗಗಳಲ್ಲಿ ಪದಕ್ರಮದಲ್ಲಿ ಸರ್ವಾಂಗವಿಷಯದಲ್ಲಿ ಸಕಲಪುರಾಣಗಳಲ್ಲಿ ಮೀಮಾಂಸೆಯಲ್ಲಿ ಸ್ಮೃತಿ ತರ್ಕಶಾಸ್ತ್ರಗಳಲ್ಲಿ ಕಾಮಶಾಸ್ತ್ರವೇ ಮೊದಲಾದ ಉಪಾಂಗವಿದ್ಯೆಗಳಲ್ಲಿ ನಮ್ಮನ್ನು ಪರೀಕ್ಷಿಸಲಿ ಬೇಕಾದರೆ ಎಂದು ಬುಧರು ಹೇಳತೊಡಗಿದರು. ಇನ್ನು ಕೆಲವು ಬ್ರಾಹ್ಮಣರು- “ಭರತನ ನಾಟ್ಯಶಾಸ್ತ್ರದಲ್ಲಿ, ವೈದ್ಯದಲ್ಲಿ, ಕಾವ್ಯದಲ್ಲಿ, ಅಲಂಕಾರಶಾಸ್ತ್ರದಲ್ಲಿ ಗಜಲಕ್ಷಣ, ಅಶ್ವಲಕ್ಷಣಗಳಲ್ಲಿ, ಅಥವಾ ಮಂತ್ರತಂತ್ರಗಳಲ್ಲಿ ಅಥವಾ ಸರಸವಾದ ಕವಿತಾರಚನೆಯಲ್ಲಿ ವಿಸ್ತಾರವಾದ ಉಪನ್ಯಾಸದಲ್ಲಿ ಭೂಪತಿ ನಮ್ಮನ್ನು ಕರೆಸಿ ನೋಡಲಿ" ಎಂದು ಮಾತನಾಡಿಕೊಳ್ಳತೊಡಗಿದರು.
ಆಗ ಕೆಲವು ಪುಂಡು ಹುಡುಗರು-
ಅಲ್ಲದಿರ್ದರೆ ಶೋಧಿಸಿದ ತನಿಬೆಲ್ಲವಿಕ್ಕಿದ ಹೂರಿಗೆಯ ಮೆದೆ-
ಯಲ್ಲಿ ಪರಡಿಯ ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ ತತ್ಸವಿಯ ಮಂಡಿಗೆಯಲ್ಲಿ ನವಘೃತಸೂಪದಂಶಕ-
ದಲ್ಲಿ ನೋಡಲಿ ನಮ್ಮನೆಂದುದು ಧೂರ್ತವಟುನಿಕರ"
"ಚೆನ್ನಾಗಿ ಶೋಧಿಸಿದ ತನಿಬೆಲ್ಲವನ್ನು ಹಾಕಿದ ಹೂರಿಗೆಯಲ್ಲಿ, ಪರಡಿಯ ಶಾವಿಗೆಯ ಪರಿಪರಿಯ ಪಾಯಸದಲ್ಲಿ, ಮಂಡಿಗೆಯಲ್ಲಿ ತುಪ್ಪ ಹಾಕಿದ ಸೂಪದಂಶಕಗಳಲ್ಲಿ ನಮ್ಮ ಪರಾಕ್ರಮವನ್ನು ನೋಡಲಿ" ಎಂದು ಹೇಳಿದರು.
ಕುಮಾರವ್ಯಾಸನ ಸೂಕ್ಷ್ಮಾವಲೋಕನಪ್ರಜ್ಞೆಯನ್ನು ಇಲ್ಲಿ ಗಮನಿಸಬಹುದು. ಸಾವಿರಾರು ಜನ ಬಂದು ಸೇರಿದ ಮದುವೆಯ ಮನೆ, ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿರುತ್ತಾರೆ. ಇಲ್ಲಿ ವರಿಸಬೇಕಾದ ಗಂಡು ಪಂಥದಲ್ಲಿ ಗೆದ್ದು ರಾಜಕುಮಾರಿಯನ್ನು ಪಡೆಯಬೇಕು. ಆಗ ಯಾರುಯಾರು ಹೇಗೆ ಮಾತನಾಡಬಹುದು ಎಂಬುದನ್ನು ಹೀಗೆ ವಿಸ್ತರಿಸಿ ಬಣ್ಣಿಸುತ್ತಾನೆ. ಹಿರಿಯ ಪಂಡಿತರೆಲ್ಲಾ ಗಂಭೀರವಾಗಿ ತಮಗೆ ಗೊತ್ತಿರುವ ಶಾಸ್ತ್ರಗಳಲ್ಲಿ ಪಾಂಡಿತ್ಯದಲ್ಲಿ ಪರೀಕ್ಷಿಸಲಿ ಎಂದರೆ ಪುಂಡು ಹುಡುಗರು ಊಟದಲ್ಲಿ ನಮ್ಮನ್ನು ಗೆಲ್ಲುವವರು ಯಾರೂ ಇಲ್ಲ ಎಂದು ಅದರ ಪರೀಕ್ಷೆಯೊಡ್ಡಲಿ ಎಂದು ಮಾತನಾಡಿಕೊಳ್ಳುತ್ತಾರೆ! ಆಮೇಲೆ ಬ್ರಾಹ್ಮಣರ ವೇಷದಲ್ಲಿದ್ದ ಅರ್ಜುನ ಎದ್ದು ಅಣ್ಣನ ಅನುಮತಿಯನ್ನು ಪಡೆದು ಹೊರಡುತ್ತಾನೆ. ಆಗ ಇವರ ಮಾತುಗಳನ್ನು ಕೇಳಿ-
ಏನು ಸಿದ್ಧಿಯುಪಾಧ್ಯರೆದ್ದಿರಿದೇನು ಧನುವಿಂಗಲ್ಲಲೇ ತಾ-
ನೇನು ಮನದಂಘವಣೆ! ಬಯಸಿದಿರೇ ನಿತಂಬಿನಿಯ!
ವೈನತೇಯನ ವಿಗಡಿಸಿದ ವಿಷವೇನು ಸದರವೊ ಹಾವಡಿಗರಿಗಿ-
ದೇನು ನಿಮ್ಮುತ್ಸಾಹವೆಂದುದು ಧೂರ್ತವಟುನಿಕರ"
ಓಹೋ! ಏನು ಉಪಾಧ್ಯರು ಎದ್ದುಬಿಟ್ಟಿರಿ! ಇದೇನು! ಬಿಲ್ಲಿಗೋ! ಅಥವಾ ಮನಸ್ಸಿನಲ್ಲೇನಿದೆ! ಚಂದದ ಹುಡುಗಿಯನ್ನು ಬಯಸಿಬಿಟ್ಟಿರೋ! ಗರುಡನನ್ನೇ ಗಲಿಬಿಲಿಗೊಳಿಸುವ ಹಾವಿನ ವಿಷದಲ್ಲಿ ಹಾವಾಡಿಗರಿಗೆ ಏನು ಸದರವೋ! ಇದೇನು ನಿಮ್ಮ ಉತ್ಸಾಹ!” ಎಂದೆಲ್ಲ ಹೇಳಿದರು ಆ ಧೂರ್ತವಟುಗಳು!
ನೀವು ಮದುವೆಯಾಗುವುದಿದ್ದರೆ ಬ್ರಾಹ್ಮಣರಲ್ಲಿ ಕನ್ಯೆಯರಿರಲಿಲ್ಲವೇ! ಈ ಕ್ಷತ್ರಿಯ ಕನ್ಯೆಯನ್ನು ವರಿಸುವುದು ಭಗೀರಥಯತ್ನವಾಗುತ್ತದೆಯಷ್ಟೆ! ಎಂದು ಕೆಲವರು ಹೇಳಿದರು. ಕೆಲವರು ಹೋಗದಿರು ಎಂದು ಜರೆದರು, ಕೆಲವರು ನಮಗೆ ಗೊತ್ತಿಲ್ಲವೇ ಎಂದರು, ಕೆಲವರು ಇದು ವಿಪ್ರಸಭೆಗೇ ಅಪಹಾಸ್ಯವಾಗುತ್ತದೆ ಎಂದರು. ಕೆಲವರು ಇದರಲ್ಲಿ ತಪ್ಪೇನಿದೆ ಎಂದರು, ಕೆಲವರು ಭಾಗ್ಯಮುಖನಾದ ಇವನಿಗೆ ಖಂಡಿತವಾಗಿಯೂ ಬಿಲ್ಲು ಸೋಲುತ್ತದೆ ಎಂದರು. ಅವನು ತೊಟ್ಟ ಹೊಸ ಯಜ್ಞೋಪವೀತದಿಂದ ಹಣೆಯಲ್ಲಿ ಮಟ್ಟಿಯ ಗಂಧದಿಂದ ದರ್ಭೆಯಿಂದ ಕರಡಿಗೆಯಿಂದ, ಕೈಯಲ್ಲಿ ಸಿಕ್ಕಿಸಿಕೊಂಡ ದರ್ಭೆಗಳಿಂದ, ಉಟ್ಟುಕೊಂಡ ಬಳಲುಗಚ್ಚೆಯಿಂದ ಅರ್ಜುನ ಬರುತ್ತಿರುವುದನ್ನು ಕಂಡು ಅಲ್ಲಿದ ರಾಜರುಗಳೆಲ್ಲ ಗಹಗಹಿಸಿ ನಗತೊಡಗಿದರು.
ಬಿಲ್ಲನ್ನು ಎತ್ತುವುದಕ್ಕೆ ಅದೇನು ಕೃಷ್ಣಾಜಿನವೋ! ಅಥವಾ ಸಾಲಗ್ರಾಮದೇವರೋ!ಅಥವಾ ತುಳಸಿ ನೀರಿನ ಕಲಶವೋ! ಅಥವಾ ಧರ್ಭೆ ಸಮಿಧಗಳ ಹೊರೆಯೋ! ನೆನೆಸಿಟ್ಟ ಎಳ್ಳೋ! ಅಥವಾ ಉಪಾಸನೆಯ ಕೊಳವಿಯೋ! ಆಹಾ! ದ್ರೌಪದಿಯ ಸೌಭಾಗ್ಯವೇ "ಎಂದು ಅವರೆಲ್ಲ ನಗತೊಡಗಿದ್ದರೆ, ಇತ್ತ ದ್ರೌಪದಿಯ ಸಖಿಯರು
ಎಲವೊ ಮಟ್ಟಿಯ ಮದನ! ದರ್ಭೆಯ ತಿಲದ ಮನ್ಮಥ! ವಿಮಲ ಧೋತ್ರದ
ತಳಿರುಗಾಸೆಯ ಕಾಮ! ಕೃಷ್ಣಾಜಿನದ ಕಂದರ್ಪ!
ನಳಿನಮುಖಿಯನು ವರಿಸು ಬಾ ನಿನಗಳವಡುವನೆಲೆಯಕ್ಕ ಕೇಳೌ
ತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು"
ನಳಿನಮುಖಿಯನ್ನು ವರಿಸು ಬಾ!ಅಕ್ಕ! ಇಔನು ನಿನಗೆ ಅಳವಡುತ್ತಾನೆ! ನಾವು ತಲೆಯನ್ನು ಹಿಡಿದುಕೊಳ್ಳುತ್ತೇವೆ ಎಂದು ನಗತೊಡಗಿದರು!
ಆ ಬಳಿಕ ಅರ್ಜುನ ಲೀಲಾಜಾಲವಾಗಿ ಧನುಸ್ಸಿನ ಹೆದೆಯನ್ನು ಏರಿಸಿ ಬಾಣವನ್ನು ಬಿಟ್ಟು ಗೆದ್ದುಬಿಡುತ್ತಾನೆ. ಅದನ್ನು ಕಂಡು ಅಷ್ಟು ಹೊತ್ತು ಏನೇನೋ ಮಾತನಾಡುತ್ತ ಅವನಿಗೆ ಬಯ್ಯುತ್ತಿದ್ದ ಬ್ರಾಹ್ಮಣರೆಲ್ಲ ಒಮ್ಮೆಗೇ "ಹೋ" ಎಂದು ಕೂಗುತ್ತಾ ಹಾರುವನಿಗೇ ಸಿಕ್ಕಿದಳು ಎಂದು ಉತ್ಸಾಹದಲ್ಲಿ ಎದ್ದು ಕುಣಿಯತೊಡಗಿದರು. ಉಳಿದ ರಾಜರೆಲ್ಲ ಇದೇನಾಯ್ತು ಹೀಗೆ ಎಂದು ಆಶ್ಚರ್ಯದಲ್ಲಿ ಮೂಗಿನ ಮೇಲೆ ಬೆರಳನ್ನು ಹೊತ್ತು ಕುಳಿತಿದ್ದರು! ಹಲವು ರಾಜರು ತಮ್ಮನ್ನೆಲ್ಲ ಕರೆಸಿ ದ್ರುಪದ ಅವಮಾನ ಮಾಡಿದ ಎಂದು ಸಿಟ್ಟಿಗೆದ್ದು ಅವನ ವಿರುದ್ಧ ಶಸ್ತ್ರ ಹಿಡಿದು ನಿಂತರು. ಆಗ ಪಾಂಡವರೂ ದ್ರುಪದನ ಕಡೆಯವರೂ ಸೇರಿ ಅವರನ್ನೆಲ್ಲ ಹಿಮ್ಮೆಟ್ಟಿಸುತ್ತಾರೆ. ಆ ಬಳಿಕ ಸಂಜೆಯಾಗುತ್ತದೆ. ಕುಂತಿಯ ಬಳಿ ಅರ್ಜುನ "ಅಮ್ಮಾ! ಇಂದು ಎಲ್ಲಾ ಧರಣೀಶ್ವರರನ್ನು ಗೆದ್ದು ತಂದ ಮುತ್ತನ್ನು ನೋಡು!” ಎಂದು ಹೇಳಿದಾಗ ಕುಂತಿ "ಲೇಸಾಯ್ತು! ಐವರೂ ಕೂಡಿ ಭೋಗಿಸಿ" ಎಂದು ಹೇಳಿದಳು. ಅದರಂತೆ ಐವರೂ ಮದುವೆಯಾಗುವುದೆಂದು ನಿಶ್ಚಯಿಸಿದರು. ಆ ಸಂದರ್ಭದಲ್ಲಿ ಸಂಜೆಯಾಗುತ್ತ ಬಂತು. ಧೃಷ್ಟದ್ಯುಮ್ನ ಇವರು ಯಾರೆಂದು ತಿಳಿಯಲು ಮಾರುವೇಷದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ.
ಸಿಲುಕಿದುದು ಜನದೃಷ್ಟಿ ಬಲುಗತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ
ನಳಿನ ಮಿತ್ರನ ಬೇಹುಕಾರರ ಸುಳಿವೊ ತಿಮಿರದ ಪಾಳೆಯದೊಳೆನೆ
ನಿಳಯದೊಳಗಡೆ ಸೊಡರು ತಳಿತುದು ಕೂಡೆ ನಗರಿಯಲಿ"
ಆಗ ಜನರ ದೃಷ್ಟಿಯೆಲ್ಲ ಕತ್ತಲೆಯೆಂಬ ಅಂಧಕಾರದ ಸಮುದ್ರದಲ್ಲಿ ಮುಳುಗಿತು. ಅದೇನು ಅದ್ಭುತವೆನ್ನುವುದು! ಸೂರ್ಯನ ಬೇಹುಕಾರರು ಎಲ್ಲಾ ಕತ್ತಲೆಯ ಪಾಳೆಯದ ಒಳಗೆ ಬಂದು ಸೇರಿಕೊಂಡಿದ್ದಾರೇನೋ ಎಂಬಂತೆ ಎಲ್ಲರ ಮನೆಯಲ್ಲೂ ದೀಪಗಳು ಬೆಳಗಿದ್ದವು.
ಹೀಗೆ ಬಂದ ಅವನು ಈ ಐವರೂ ಕುದುರೆಯನ್ನು ನಡೆಸುವುದು, ಗಜಶಾಸ್ತ್ರ, ರಥವನ್ನು ನಡೆಸುವುದು ಇತ್ಯಾದಿ ವಿಷಯಗಳನ್ನೇ ಚರ್ಚಿಸುವುದನ್ನು ಕೇಳಿದ. ಬ್ರಾಹ್ಮಣರಾದರೆ ಸರಸವಾದ ಭೋಜನದ ಕುರಿತೋ ವೇದಾಂಗ ವೇದ ತರ್ಕಗಳ ಮಾತುಗಳಲ್ಲಿಯೋ ರಾತ್ರಿಯನ್ನು ಕಳೆಯುತ್ತಾರೆ, ಕ್ಷತ್ರಿಯರಾದ ಕಾರಣ ಗಜಶಾಸ್ತ್ರವೇ ಮೊದಲಾದ ವಿಷಯಗಳನ್ನು ಚರ್ಚಿಸುತ್ತಿದ್ದರು ಎಂದು ಸಂತೋಷಪಟ್ಟು ಹೊರಡುತ್ತಾನೆ. ಮುಂದೆ ವೇದವ್ಯಾಸರು ಬಂದು ಅವರ ಕಥೆಯನ್ನೆಲ್ಲ ವಿಸ್ತರಿಸಿದ ಮೇಲೆ ದ್ರುಪದರಾಜನೂ ನಿಶ್ಚಿಂತನಾಗಿ ದ್ರೌಪದಿಯನ್ನು ಐವರಿಗೂ ಮದುವೆ ಮಾಡಿಕೊಡುತ್ತಾನೆ.
ಇಲ್ಲಿ ಸಣ್ಣ ದೀಪಗಳು ಬೆಳಗಿದ್ದನ್ನು ಅಸ್ತವಾದ ಸೂರ್ಯನ ಬೇಹುಕಾರರಿಗೆ ಕಲ್ಪಿಸುವ ಕವಿಯ ಚಾತುರ್ಯವನ್ನು ಗಮನಿಸಬಹಬುದು. ಅದೇ ಸಂದರ್ಭದಲ್ಲಿ ದ್ರೌಪದಿಯನ್ನು ಮದುವೆಯಾದವರು ಯಾರೆಂದು ತಿಳಿದುಕೊಳ್ಳಲು ಅವಳ ಸಹೋದರನೂ ಬೇಹುಕಾರನಾಗಿ ಬಂದಿರುವುದು ಈ ಕಲ್ಪನೆಗೆ ಇನ್ನಷ್ಟು ಮೆರುಗನ್ನು ಕೊಡುತ್ತದೆ. ಅಲ್ಲದೇ ಕುಮಾರವ್ಯಾಸ ಆ ಸಂಭಾಷಣೆಗಳಲ್ಲಿ ಸಹಜವಾದ ಸೂಕ್ಷ್ಮತೆಯನ್ನು ತಂದಿರುವುದೂ ಕೂಡ ಆಸ್ವಾದನೀಯ. ಪ್ರತಿಭಾನ್ವಿತನಾದ ಕವಿಯ ಚಿತ್ರಣವೆಂದರೇ ಹಾಗೆ! ಸಾವಿರಾರು ಪದ್ಯಗಳನ್ನು ಬರೆದರೂ ಅಲ್ಲಿ ಆ ಕುಸುರಿಯ ಕೆಲಸವನ್ನು ಮಾಡಬೇಕು. ಸಂದರ್ಭಕ್ಕೆ ತಕ್ಕ ಇಂತಹ ಸಹಜವಾದ ಸಂಭಾಷಣೆಗಳು ಆ ಕಾಲಕ್ಕೇ ಕೊಂಡೊಯ್ಯುವುದಲ್ಲವೇ! ಅದಕ್ಕೇ ಕುವೆಂಪು ಅವರು ಹೇಳಿದ್ದು- “ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿವುದು ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು"

ಕಾವ್ಯಾವಲೋಕನ-೨ ಕುಮಾರವ್ಯಾಸನ ಕ್ಯಾಮರಾದಲ್ಲಿ ದ್ರೌಪದಿಯ ಮದುವೆಯ ಪೂರ್ವರಂಗ



ಕನ್ನಡದಲ್ಲಿ ಕುಮಾರವ್ಯಾಸನ ಪದ್ಯಗಳನ್ನು ಕೇಳದ ಜನರು ಇರಲು ಸಾಧ್ಯವೇ ಇಲ್ಲ. ಕೇಳಿದವರು ಮೆಚ್ಚದಿರಲು ಸಾಧ್ಯವಿಲ್ಲ! ಅಷ್ಟು ಜನಜನಿತವಾಗಿರುವ ಕುಮಾರವ್ಯಾಸನ ಕಾವ್ಯದಲ್ಲಿ ಎದ್ದು ತೋರುವುದು ಅವನ ದೈತ್ಯ ಪ್ರತಿಭೆ . ಅದೆಷ್ಟು ಬಗೆಯ ಸೂಕ್ಷ್ಮತೆಗಳನ್ನು ಹುಡುಕಿ ಹುಡುಕಿ ತೆಗೆತೆಗೆದಿಡುತ್ತಾನೋ ಊಹಿಸಲೂ ಸಾಧ್ಯವಿಲ್ಲ. ನುರಿತ ಛಾಯಾಚಿತ್ರಗ್ರಾಹಕನೊಬ್ಬ ಹೇಗೆ ಯಾವುದೋ ಒಂದು ಕೋನದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕಾಣುವ ರಸವತ್ತಾದ ದೃಶ್ಯವನ್ನು ಸೆರೆಹಿಡಿದಿಡಬಲ್ಲನೋ ಹಾಗೇ ಕುಮಾರವ್ಯಾಸ ಕೂಡ ಮುಖ್ಯಕಥಾನಕಕ್ಕೆ ಪೂರಕವಾಗುವಂತೆಯೇ ಯಾವುದೋ ದೃಶ್ಯಗಳನ್ನೆಲ್ಲ ಸೆರೆಹಿಡಿದು ಕೊಡುತ್ತಾನೆ. ಆತ ತೋರಿಸುವ ದ್ರೌಪದಿಯ ಸ್ವಯಂವರದ ಚಿತ್ರಣವನ್ನು ಸ್ಥೂಲವಾಗಿ ಅವಲೋಕಿಸೋಣ.
ಪಾಂಡವರು ಐವರೂ ಪಾಂಚಾಲನಗರಿಗೆ ಬಂದು ಕುಂಬಾರನೊಬ್ಬನ ಮನೆಯಲ್ಲಿ ಉಳಿದಿರುತ್ತಾರೆ. ಆ ನಗರಕ್ಕೆ ಹಲವು ರಾಜರು ಚತುರಂಗ ಬಲಸಹಿತರಾಗಿ ಬರುತ್ತಿರುವಾಗ ಅವರ ಸೈನ್ಯದ ನಡಿಗೆಯಿಂದ ಧೂಳೆದ್ದು ಜಗತ್ತೆಲ್ಲವೂ ಧೂಳಿನಿಂದ ತುಂಬಿ ಕೆಂಪು ಬಣ್ಣವಾಗಿರುವುದು ದ್ರೌಪದಿಯನ್ನು ನೆನೆದು ಸಕಲ ಚರಾಚರ ವಸ್ತುಗಳಲ್ಲೂ ಅನುರಾಗ ಹುಟ್ಟಿದಂತೆ ಕಾಣುತ್ತಿತ್ತು. ಆ ರಾಜರ ಪಲ್ಲಕ್ಕಿ ಛತ್ರಚಾಮರಗಳ ನಡುವೆ ಸೂರ್ಯನಿಗೆ ನೋಡಲಾಗುತ್ತಿರಲಿಲ್ಲವಂತೆ. ಗಾಳಿಗೂ ಜಾಗವನ್ನು ಕೊಡುತ್ತಿರಲಿಲ್ಲವಂತೆ. ಬಂಗಾರದ ಕೆಲಸದಲ್ಲಿ ಹೊಸ ಹೊಸ ಚಿತ್ರಗಳನ್ನು ರಚಿಸಿ ದ್ರುಪದನ ನಗರದ ಗೋಡೆಗಳನ್ನು ಅಲಂಕರಿಸುತ್ತಿದ್ದರಂತೆ. ಹೂವಿನ ಹಾಗೂ ರತ್ನಗಳ ಮಾಲೆಗಳು ರಾರಾಜಿಸುತ್ತಿದ್ದವು. ಅಗರು ಧೂಪಗಳಿಂದ ಮೋಡಗಳು ಕೂಡ ಘಮಘಮಿಸುತ್ತಿದ್ದವು. ಅಲ್ಲಿ ಬಳಸುತ್ತಿದ್ದ ಕುಂಕುಮದಿಂದ ಕರ್ಪೂರದ ದೂಳಿನಿಂದ ಪನ್ನೀರಿನಿಂದ, ಕಸ್ತೂರಿಯಿಂದ ಪರಿಮಳವು ತುಂಬಿಕೊಂಡು ಗಾಳಿಯೂ ಕೂಡ ಭಾರವಾಗಿ ಕುಸಿಯುತ್ತಿತ್ತು.
ಹೊಳೆಯುತ್ತಿರುವ ಸಾಲಭಂಜಿಕೆಗಳಲ್ಲಿ ಮುತ್ತು ವಜ್ರಮಣಿಗಳಿಂದ ಕೂಡಿದ ರಚನೆಯಲ್ಲಿ ಸೂರ್ಯನ ರಥವೋ ಅಥವಾ ಪುಷ್ಪಕವಿಮಾನವೋ ಅಥವಾ ಶ್ರೀಮನ್ನಾರಾಯಣನ ಶಯ್ಯಾಗೃಹವೋ ಎಂದು ಅನುಮಾನವುಂಟಾಗುತ್ತಿತ್ತು. ಒಂದು ಕಡೆ ಸುಂದರಿಯರ ಯಂತ್ರಮಯ ವಿಗ್ರಹಗಳನ್ನು ಮಾಡಿಟ್ಟಿದ್ದರು. ಆ ವಿಗ್ರಹಗಳೇ ಕೇಳಿದವರಿಗೆ ಬೇಕಾದದ್ದನ್ನು ಕೊಡುತ್ತಿದ್ದವು. ಒಂದೆಡೆ ವಿವಿಧವೀಣಾವಾದ್ಯದ ಮೃದಂಗದ ಮೊದಲಾದ ಸಂಗೀತದ ಹಾಗೂ ವೈತಾಳಿಕರ ಮೇಳ ಚಪ್ಪರದಲ್ಲಿ ಇತ್ತು. ಹೊರ ವಲಯದಲ್ಲಿ ನಾನಾವಿಧಧ ನಾಟಕಗಳ ಪ್ರದರ್ಶನ ಗಾಯನಗಳೆಲ್ಲ ನಡೆಯುತ್ತಿದ್ದವು. ಮಲ್ಲರು ಚಿತ್ರವನ್ನು ರಚಿಸುವವರು ಮೊದಲಾದವರೆಲ್ಲ ಒಂದೆಡೆ ನೆರೆದಿದ್ದರು. ಹಲವು ದಿಕ್ಕುಗಳಿಂದ ಬಂದ ಮೂಕರು ಅಂಧರು ಕಿವುಡರು, ಕುಳ್ಳರು ಮೊದಲಾದವರೆಲ್ಲ ಅಲ್ಲಿ ಸೇರಿದ್ದರು.
ಅತ್ತ ಬಂದ ರಾಜರನ್ನೆಲ್ಲ ದ್ರುಪದ ಸ್ವಾಗತಿಸುತ್ತಾ ಉಪಚರಿಸುತ್ತಿದ್ದ. ಆಗ “ಪ್ರಚುರ ಮಣಿಯಿದೆ ಪದ್ಮರಾಗದ ರುಚಿರ ರತ್ನವು ಜಾತರೂಪದಿ ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ" (ದ್ರೌಪದಿ ಎಂಬ ಪದ್ಮರಾಗದ ಮಣಿಯಿದೆ, ಅದಕ್ಕೆ ತಕ್ಕ ರಾಜಕುಮಾರ ಎಂಬ ಚಿನ್ನ ಸಿಕ್ಕಿದರೆ ಪುಣ್ಯ ಎಂದು ಯೋಚಿಸಿದ)
ಮಾರನೆಯ ದಿನ ಕಮಲಮುಖಿ ದ್ರೌಪದಿ ಸ್ವಯಂವರಕ್ಕೆ ನಡೆತಂದಳು. ದ್ರುಪದ ಬಿಲ್ಲನ್ನೂ ಮತ್ಸ್ಯಯಂತ್ರವನ್ನೂ ತರಿಸಿಟ್ಟ. ಹತ್ತಿರದಲ್ಲೇ ಲಗ್ನವಿದೆ, ರಾಜರಿಗೆಲ್ಲ ಇದನ್ನು ತೋರಿಸು. ಗೆದ್ದವರು ದ್ರೌಪದಿಯನ್ನು ಮದುವೆಯಾಗಬಹುದು ಎಂದು ಸ್ವಯಂವರದ ನಿಯಮವನ್ನೂ ಸೂಚಿಸಿದ. ಆಗ ಬಂದ ದ್ರೌಪದಿ ಹೇಗಿದ್ದಳೆಂದರೆ-
ಹೊರೆಯ ಸಖಿಯರ ನೋಟ ಮೈಯಲಿ ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ ಪರಿಮಳದ ಪೂರದಲಿ ಗಂಧಾಂ-
ತರಕೆ ನೆರೆಯದು ರೂಪನೇನೆಂಬೆನು ನಿತಂಬಿನಿಯ||”
(ಈಕೆಯ ಸಖಿಯರನ್ನೂ ಇವಳನ್ನೂ ಎಷ್ಟು ನೋಡಿದರೂ- ಅವರ ಮೈಯಲ್ಲಿ ಹರಿಯುವ ನೋಟದಿಂದ ಕಣ್ಣಿಗೆ ಬಳಲಿಕೆ ಆಗುತ್ತಿರಲಿಲ್ಲ. ಇವಳನ್ನು ಧರಿಸಿ ಮನಸ್ಸಿಗೆ ಭಾರವಾಗಿ ಕುಸಿಯುತ್ತಿರಲಿಲ್ಲ. ಇವಳ ಮೆಲ್ನುಡಿಯನ್ನು ಸವಿಸವಿದು ಕಿವಿಗಳಿಗೆ ಅರುಚಿಯಾಗುತ್ತಿರಲಿಲ್ಲ. ಇವಳ ಮೈಯ ಪರಿಮಳವನ್ನು ಆಘ್ರಾಣಿಸಿದ ಬಳಿಕ ಬೇರೆ ಪರಿಮಳವನ್ನು ಆಸ್ವಾದಿಸಲು ನಾಸಿಕವು ಒಪ್ಪುತ್ತಿರಲಿಲ್ಲ. ಇಂತಹ ಸುಂದರಿಯ ರೂಪವನ್ನು ಏನೆಂದು ವರ್ಣಿಸಲಿ)
"ಪರಿಮಳದ ಪರಮಾಣುಗಳ ಸಂವರಿಸಿ ಮುಕ್ತಾಫಲದ ಕೆಂದಾ-
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ
ಸರಸವೀಣಾಧ್ವನಿಯ ಹಂಸೆಯ ಗರುವ ಗತಿಗಳನಾಯ್ದು ಮನ್ಮಥ-
ವರವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ||”
(ಪರಿಮಳದ ಪರಮಾಣುಗಳನ್ನು ಆರಿಸಿ ಆರಿಸಿ ಸಂಗ್ರಹಿಸಿ, ಮುತ್ತಿನ, ಕಮಲದ ಹೂವಿನ, ಮರಿದುಂಬಿಗಳ ಬೇರೆ ಬೇರೆ ಬಣ್ಣಗಳನ್ನು ಅಳವಡಿಸಿ ಸರಸವಾದ ವೀಣೆಯ ಧ್ವನಿಯನ್ನು ಹಾಗೂ ಹಂಸದ ನಡಿಗೆಯನ್ನೂ ಆಯ್ದು ಇವಳನ್ನು ಸೃಷ್ಟಿಸಿದ್ದಾನೆ. ಆ ವೇದಾಭಬ್ಯಾಸಜಡನಾದ ಬ್ರಹ್ಮ ಅಲ್ಲ. ಈಕೆಯನ್ನು ಸೃಷ್ಟಿಸಿದವನು ಮನ್ಮಥ ಎಂಬ ಬ್ರಹ್ಮ)
ಈಕೆ ಮನಸಿಜನ ಮದದಾನೆ. ಮನ್ಮಥನ ರತ್ನಾಗಾರ. ಅಂಗಜನ ಮಂತ್ರಸೂತ್ರಗಳ ಟಿಪ್ಪಣಿ. ಮಾನಿನಿಯರ ಅಧಿದೇವತೆ. ಮೂರು ಲೋಕವನ್ನೂ ಮೋಹನಗೊಳಿಸುವ ಚಿತ್ರ.
ಸುವಾಸಿನಿಯರು ಆಕೆಗೆ ಆರತಿಯನ್ನು ಎತ್ತಿದರು. ಬಳಿಕ ದೃಷ್ಟಿಯನ್ನು ತೆಗೆಯಲು ಉಪ್ಪಾರತಿಯನ್ನು ಮಾಡಿದರು. ಶೇಷಾಕ್ಷತೆ ಹಾಕಿ ಹರಸಿದರು. ಆಮೇಲೆ ಅವಳು ಕನ್ನಡಿಯನ್ನು ನೋಡಿಕೊಂಡಳು. ಮಂತ್ರಗಳನ್ನು ಹೇಳುತ್ತಿರುವಾಗ ಲಿಂಬೆಯ ಹಣ್ಣನ್ನು ತೆಗೆದುಕೊಂಡಳು. ದುಂದುಭಿಗಳು ಮೊಳಗುತ್ತಿರುವಾಗ ಕಮಲಕ್ಕೆ ಲಕ್ಷ್ಮಿ ಬರುವ ಹಾಗೆ ದ್ರೌಪದಿ ದಂಡಿಗೆಗೆ ಬಂದಳು. ಕೀಲ ಕಡಗ, ವಜ್ರಲಹರಿಯ ಜೋಲೆಯದ ಕಂಕಣದ ರವೆಯದ ತೋಳಬಂದಿಯ, ಕತ್ತಿನಲ್ಲಿ ತ್ರಿಸರದ, ಬೆರಳಿನ ಉಂಗುರಗಳ, ನೀಲರತ್ನದ ಪದಕದ, ಮಾಣಿಕ್ಯದ ಓಲೆಗಳ, ಮುತ್ತಿನ ಮೂಗುತಿಯ, ಹಾಗೆಯೇ ಏಕಾವಳಿಯ, ಮುತ್ತಿನ ತಿಲಕದ, ತಾರಕಾವಳಿಯ, ಕಾಂಚಿಯ, ಕಿಂಕಿಣಿಗಳಿರುವ ಗೆಜ್ಜೆಯ ವೀರಮುದ್ರಾವಳಿ ಇರುವ ಕಾಲಿನ ಆಭರಣದಲ್ಲಿ ಆಕೆ ಶೃಂಗಾರವನ್ನು ಮಾಡಿಕೊಂಡಿದ್ದಳು.
ಯತಿಗಳಿಗೆ ತಮ್ಮ ಕಣ್ಣೋಟದ ಹರಿತ ಮೊನೆಯನ್ನು ತೋರಿ, ವ್ರತಿಗಳನ್ನು ತಣಿಸದೆಯೇ ,ಸಮಾಧಿಸ್ಥಿತರಾದ ಯೋಗಿಗಳ ಮೂಗಿನ ಮೇಲೆ ಆಯುಧದ ಧಾರೆಯನ್ನು ಎಳೆದು, ವೇದವಿಹಿತ ಕರ್ಮಗಳ ದೀಕ್ಷಿತರ ಮನಸ್ಸಿನಲ್ಲಿ ಮುದ್ರೆಯನ್ನು ಒತ್ತುತ್ತ ಈ ಯುವತಿಯರು ನಡೆತಂದರು. "ಈಕೆಯ ಎದುರು ಯಾರು ನಿಲ್ಲಬಲ್ಲರು! ಮದನಾರಿಯೆನಿಸಿದ ಶಿವನೇ ಅರ್ಧದೇಹದಲ್ಲಿ ನಾರಿಯಿದ್ದಾಳೆ, ವಿಷ್ಣುವೇ ಸ್ವತಃ ಹೆಂಗಸಾದ, ಬ್ರಹ್ಮ ಮಗಳನ್ನು ಸೇರಿದ, ಇಂದ್ರನ ಕಥೆಯಂತೂ ಘೋರ, (ಅಹಲ್ಯಾಪ್ರಸಂಗದಲ್ಲಿ ಗೌತಮನ ಶಾಪದಿಂದ) ಮೈಯಾರೆ ಮದನನ ಮುದ್ರೆಗಳನ್ನು ಹೊತ್ತ!”ಎಂದು ಸಾರುತ್ತಿರುವಂತೆ ಕಹಳೆಗಳ ಧ್ವನಿ ಕೇಳುತ್ತಿತ್ತು.
ತಂಗಾಳಿ ಪಸರಿಸುತ್ತಿತ್ತು. ಬಿಸಿಲಿನ ಬಿಂಕ ಬೀತುಹೋಯಿತು, ಕಮಲಗಳು ಬಾಡಿಹೋದವು, ತಾರೆಗಳು ಮೆರೆದವು, ಶಶಿಕಾಂತ ಶಿಲೆಗಳು ನೀರನ್ನು ಒಸರಿಸಿದವು, ನೈದಿಲೆಯ ಹೂ ಅರಳತೊಡಗಿತು, ಚಕ್ರವಾಕ ಪಕ್ಷಿಗಳಿಗೆ ವಿರಹವುಂಟಾಯಿತು, ಇವೆಲ್ಲ ಆಗುತ್ತಿದ್ದುದು ಸಂಜೆಯಾಯಿತೆಂದಲ್ಲ! ಈ ಚಂದ್ಮುಖಿಯರ ಆಗಮನದಿಂದ ಹೀಗಾಯಿತು! ಈಕೆಯ ಹೊಳೆಯುವ ಕಣ್ಣುಗಳ ಬೆಳಕಿನಲ್ಲಿ ಕಾಮುಕರ ಮುಖ ಕತ್ತಲಿಸಿದವು. ಅವಳ ದೇಹದ ಕಾಂತಿಗಳಲ್ಲಿ ಇವರ ಬುದ್ಧಿ ಬಾಡಿಹೋಯಿತು. ಅವಳ ಲಾಲಿತ್ಯದ ವಿಭ್ರಮದಿಂದ ಇವರ ಅಹಂಕಾರವೆಂಬ ಶಿಲೆಗಳು ಒಡೆದುಹೋದವು.ಮಹಾಮಹೀಶ್ವರರ ಮನಸ್ಸು ಇವಳ ಮೋಹನಾಕೃತಿಯಲ್ಲಿ ಹೊಳೆದು ಅಡಗಿದವು. ಇವಳನ್ನು ಕಂಡು ಒಳಗೊಳಗೇ ಧಗೆ ಹೆಚ್ಚುತ್ತಿದ್ದರೂ ಹೊರಗೆ ಬಿಮ್ಮನೆ ನಗುತ್ತಿದ್ದ ರಾಜರನ್ನು ಏನೆಂದು ವರ್ಣಿಸೋಣ!
ಈಕೆಯಂದುದಿಸಿರೆ ಮದನಂಗೇಕೆ ದೇಹತ್ಯಾಗವಹುದು ಪಿ
-ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ!
ಸಾಕು ಗೌತಮ ಮುನಿಯ ಮುಳಿಸಿನ ಕಾಕು ನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ!”
"ಇವಳು ಅಂದೇ ಹುಟ್ಟಿದ್ದರೆ ಶಿವನ ತಪೋಭಂಗಕ್ಕೆ ಹೊರಟ ಮನ್ಮಥನಿಗೇಕೆ ದೇಹತ್ಯಾಗವಾಗುತ್ತಿತ್ತು. ಪಿನಾಕಿಯಾದ ಶಿವ ವೈರಾಗ್ಯವನ್ನು ಹೊಂದುತ್ತಲೇ ಇರಲಿಲ್ಲ. ಸಾಕು! ಗೌತಮಮುನಿಯ ಶಾಪದ ನುಡಿ ಹೇಗೆ ಫಲಿಸುತ್ತಿತ್ತು! (ಅಹಲ್ಯೆಯನ್ನು ತಾನು ಕಾಮಿಸುವ ಪ್ರಸಂಗವೇ ಬರುತ್ತಿರಲಿಲ್ಲವೇನೋ!)”ಎಂದು ಸ್ವರ್ಗದಲ್ಲಿ ಇಂದ್ರ ರಂಭೆಯರೇ ಮೊದಲಾದ ಸತಿಯರನ್ನು ನೋಡಿ ನಗುತ್ತ ಹೇಳಿದ.
ಆಮೇಲೆ ಬಂಗಾರದ ಪಲ್ಲಕ್ಕಿಯಲ್ಲಿ ಆಕೆಯನ್ನು ರಾಜರುಗಳೆಲ್ಲ ಕುಳಿತ ಸಿಂಹಾಸನಗಳ ಸಾಲಿಗೆ ಕರೆತರುತ್ತಾರೆ. ಧೃಷ್ಟದ್ಯುಮ್ನನು ಆಗ ಅವಳ ಸನಿಹಕ್ಕೆ ಬಂದು ಯಾರು ಯಾರು ಯಾವ ರಾಜ್ಯದ ರಾಜರೆಂದು ಪರಿಚಯವನ್ನು ಹೇಳತೊಡಗಿದ. ಮೊದಲು ದುರ್ಯೋಧನ ದುಶ್ಶಾಸನಾದಿ ಧೃತರಾಷ್ಟ್ರನ ಮಕ್ಕಳನ್ನು ತೋರಿಸಿದ. ಅವರನ್ನು ದ್ರೌಪದಿ ನೋಡಲೂ ಇಲ್ಲ! ಆ ಬಳಿಕ ವಿರಾಟನನ್ನು ಕೀಚಕನನ್ನು ಶ್ರುತಾಯುಧ ಮೊದಲಾದ ಪೂರ್ವದ ರಾಜರನ್ನು ರವಿಧ್ವಜ ರೋಚಮಾನಕರನ್ನು ನೀಲಚಿತ್ರಾಯುಧರನ್ನು, ದಕ್ಷಿಣದ ಚೋಳರನ್ನು, ಕೇರಳದ ರಾಜರನ್ನು ಪಾಂಡ್ಯರನ್ನು, ಚಂದ್ರಸೇನ ಸಮುದ್ರಸೇನರನ್ನು, ಕಳಿಂಗದ ರಾಜನನ್ನು ಚೇಕಿತಾನ ಭಾನುದತ್ತರನ್ನು ತೋರಿಸಿದ. ಆಮೇಲೆ ಪೌಂಡ್ರಕ ಭಗದತ್ತರನ್ನು ಕಾಂಭೋಜನನ್ನು, ಹರದತ್ತ, ವರಹಂಸ ಡಿಂಬಕ ಮದ್ರರಾಜ, ಜರಾಸಂಧ, ಮಣಿಮಂತ, ಬೃಹದ್ರಥ, ದಂಡಧಾರಕ ಮೊದಲಾದವರನ್ನು, ಭೂರಿಶ್ರವ, ವೀರಬಾಹ್ಲಿಕ, ಜಯದ್ರಥ ಶಿಬಿ, ಶ್ರುತಾಯುಧ, ವೃದ್ಧಕ್ಷತ್ರ, ಸೃಂಜಯ, ಸೋಮದತ್ತ, ಶಿಶುಪಾಲ ರುಕ್ಮಾಂಗದಅಶ್ವತ್ಥಾಮ ಸೌಬಲ ಮೊದಲಾದವರನ್ನು ತೋರಿಸಿದ. ಹೀಗೆ ಇವರೆಲ್ಲರ ಪರಿಚಯ ಮಾಡಿಕೊಡುತ್ತಾ ಬಂದಾಗ ಕರ್ಣನನ್ನು ಅವನ ಮಕ್ಕಳಾದ ವೃಷಸೇನ ಚಿತ್ರಸೇನರನ್ನು ತೋರಿಸಿದ. “ಇವರು ಆಗುವರೇ" ಎಂದು ಕೇಳಲು ದ್ರೌಪದಿ ಒಮ್ಮೆ ನೋಡಿ ಮುಖವನ್ನು ತಿರುಗಿಸಿಕೊಂಡು ಬಂದಳು.
ಆಮೇಲೆ ಕೃಷ್ಞನನ್ನು ಪರಿಚಯಿಸಿದಾಗ ಭಕ್ತಿಭಾವದಿಂದ ರೋಮಾಂಚಿತಳಾಗಿ ದ್ರೌಪದಿ ಮನಸ್ಸಿನಲ್ಲಿಯೇ ವಂದಿಸಿ "ಇವನಲ್ಲಿ ನನಗೆ ಗುರುಭಾವನೆಯು ಬರುತ್ತಿದೆ. ಏನೆಂದು ತಿಳಿಯುತ್ತಿಲ್ಲ!" ಎಂದು ನಸುನಕ್ಕು ಹೇಳಿದಳು. ಆ ಬಳಿಕ ಉಳಿದ ಯಾದವರನ್ನೂ ಬಲರಾಮನನ್ನೂ ತೋರಿಸಿದನು.
ಕೆಲರು ಮಧುರಾಪಾಂಗದಲಿ ಕಂಗಳ ಮರೀಚಿಯ ಬೆಳಗಿನಲಿ ಕೆಲ-
ರೆಳನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನಲೊಲಿವ ಸಖಿಯರಿಗೆಂದಳೆಂದೊಳ-
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ||”
ಕೆಲವರು ದ್ರೌಪದಿಯು ಮಧುರವಾದ ಓರೆನೋಟವನ್ನು ಬೀರಿದಳೆಂದು, ಇನ್ನು ಕೆಲವರು ಕಣ್ಣ ಕಾಂತಿಯನ್ನು ಕಂಡೆವೆಂದು ಕೆಲವರು ತಮ್ಮ ಕಡೆ ಎಳನಗೆಯ ಮಿಂಚನ್ನು ಬೀರಿದಳೆಂದು, ಸಖಿಯರ ಜೊತೆ ಮಾತನಾಡುತ್ತ ತಮ್ಮನ್ನು ನೋಡಿದಳೆಂದು ಕೆಲವರು, ಕೆಲವರು ತಮ್ಮ ಕುರಿತು ಸಖಿಯರ ಬಳಿ ಏನೋ ಹೇಳಿದಳೆಂದು ಸಂತೋಷವನ್ನು ಪಡುತ್ತಾ ಮಧುಪಾನವನ್ನು ಮಾಡುತ್ತಿದ್ದರು.
ಮಡಿಸಿದೆಲೆ ಬೆರಳೊಳಗೆ ಬಾಯೊಳಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪಶರವವಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ"
ಎಲೆಯಡಿಕೆಯನ್ನು ಹಾಕಿಕೊಳ್ಳಬೇಕೆಂದು ಮಡಿಸಿಕೊಂಡ ಎಲೆ ಬೆರಳಲ್ಲಿಯೇ ಉಳಿದಿತ್ತು. ಬಾಯಿಗೆ ಹಾಕಿಕೊಂಡ ಎಲೆ ಬಾಯಲ್ಲಿಯೇ ಉಳಿದಿತ್ತು! ಮಂತ್ರಿಗಳು ಹೇಳುವ ಮಾತನ್ನು ಕೇಳುತ್ತಿರಲಿಲ್ಲ! ಕಣ್ಣ ಮುಂದೆ ಯಾರಾದರೂ ನಡೆದರೂ ಗೊತ್ತಾಗುತ್ತಿರಲಿಲ್ಲ! ಬಹಳ ಸಿಟ್ಟಾದ ಮನ್ಮಥನ ಬಾಣವೇ(ಹೂಗಳೇ) ಅವಘಡಿಸಿದ್ದ ಕೈಗಳನ್ನು ನೋಡಿ (ಮಾಲೆಯನ್ನು ಹಿಡಿದ ದ್ರೌಪದಿಯ ಕೈಗಳನ್ನು ನೋಡಿ) ನಮ್ಮನ್ನು ಈಕೆ ವರಿಸುತ್ತಾಳೋ ಇಲ್ಲವೋ ಎಂಬ ದುಗುಡದಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕಣ್ಣೆವೆಯನ್ನೂ ಮಿಡುಕದೇ ರಾಜರೆಲ್ಲ ಕುಳಿತಿದ್ದರು.
"ಯಾರೊಬ್ಬರನ್ನೂ ಈಕೆಯು ಮೆಚ್ಚಲಿಲ್ಲವಲ್ಲಾ! ಅರ್ಜುನನ್ನು ಮದುವೆಯಾಗುತ್ತಾಳೆ ಎಂದು ಹೇಳಿದವರ ಮಾತು ಸುಳ್ಳಾಗುವುದೇ! ಅವನನ್ನು ಯಾರೂ ತೋರಿಸುತ್ತಿಲ್ಲವಲ್ಲಾ!”ಎಂದು ದ್ರುಪದ ಚಿಂತಿತನಾಗಿದ್ದ.
ಹೀಗೆ ಆದ ಬಳಿಕ ಮತ್ಸ್ಯಯಂತ್ರವನ್ನು ತಂದಿಟ್ಟು ಅದನ್ನು ಭೇದಿಸಿದವರು ದ್ರೌಪದಿಯನ್ನು ಗೆದ್ದಂತೆ ಎಂಬ ಪಂದ್ಯವನ್ನು ಇಡುತ್ತಾನೆ. ಆಗ ಆ ಮಹಾಧನುಸ್ಸು ಎಲ್ಲ ರಾಜರನ್ನೂ ಸೋಲಿಸಿಬಿಡುತ್ತದೆ. ಹಾಗೂ ಅರ್ಜುನ ಅದನ್ನು ಗೆಲ್ಲುತ್ತಾನೆ. ಆ ಕಥಾನಕವನ್ನು ಮುಂದೆ ನೋಡೋಣ.

ಕಾವ್ಯಾವಲೋಕನ ೧- ಕಾವ್ಯಗಳನ್ನು ಏಕೆ ಓದಬೇಕು!

ಬಹುಶಃ ಬರವಣಿಗೆಗೆ ಮೊದಲು ಮಾಡುವವರೆಲ್ಲ
ಒಂದಿಷ್ಟು ಕವಿತೆಗಳನ್ನಂತೂ ಬರೆದಿರುತ್ತಾರೆ ಎಂಬುದು
ಹಲವರಲ್ಲಿ ಕಂಡು-ಕೇಳಿ ತಿಳಿದ ಸತ್ಯ. ಆ ಬಳಿಕ ಅವರ
ಮನೋಧರ್ಮಕ್ಕೆ ತಕ್ಕಂತೆ ಪದ್ಯವೋ
ಲಲಿತಪ್ರಬಂಧವೋ ಕಥೆಯೋ ಕಾದಂಬರಿಯೋ
ಅಥವಾ ಇನ್ನಾವುದೋ ಮಾರ್ಗವನ್ನು ಕಂಡುಕೊಂಡಿರುತ್ತಾರೆ.
ಈ ಎಲ್ಲವೂ ಸಾಹಿತ್ಯ ಎಂಬ ವರ್ಗಕ್ಕೆ ಸೇರುತ್ತದೆಯಷ್ಟೆ.
ಸಹಿತತೆಯೇ ಸಾಹಿತ್ಯ. ಇವೆಲ್ಲವನ್ನೂ ಆಲಂಕಾರಿಕರು
ಕಾವ್ಯ ಎಂಬ ಒಂದೇ ಪದದಿಂದ ಗುರುತಿಸುತ್ತಾರೆ.
ವರ್ಣನೆಯಲ್ಲಿ ನಿಪುಣನಾದವನು ಕವಿ.
ಕವಿಯ ರಚನೆ ಕಾವ್ಯ, ಶಬ್ದಾರ್ಥಗಳಿಂದ ಕೂಡಿರುವುದು ಕಾವ್ಯ,
ರಸಾತ್ಮಕವಾದ ವಾಕ್ಯವೇ ಕಾವ್ಯ,ರಮಣೀಯಾರ್ಥಪ್ರತಿಪಾದಕವಾದ
ಶಬ್ದವೇ ಕಾವ್ಯ- ಹೀಗೆ ಹಲವು ವಿಧದಲ್ಲಿ ಕಾವ್ಯ ಎಂಬ ಶಬ್ದಕ್ಕೆ
ಅರ್ಥವನ್ನು ವಿವರಿಸುತ್ತಾರೆ. ಅದೆಂತೇ ಇರಲಿ.
ಕಾವ್ಯವೆಂದರೇನು ಎಂಬುದರ ಸ್ಥೂಲ ಕಲ್ಪನೆಯಂತೂ
ನಮಗೆಲ್ಲ ಇದ್ದೇ ಇದೆ.
    ಇನ್ನು ಕಾವ್ಯಪ್ರಯೋಜನವೇನು ಎಂಬುದನ್ನು
ಸ್ವಲ್ಪ ಅವಲೋಕಿಸಿದರೆ ಯಶಸ್ಸನ್ನು ಪಡೆಯಲು,
ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಕೆಟ್ಟದ್ದನ್ನು
ಕಳೆದುಕೊಳ್ಳುವುದಕ್ಕಾಗಿ, ತತ್ಕ್ಷಣದ ನಿರ್ವೃತಿಗೆ
(ಪರಮಾನಂದವನ್ನು ಅನುಭವಿಸುವುದಕ್ಕೆ) ಕಾಂತೆಯಂತೆ
ಉಪದೇಶಿಸುವುದಕ್ಕೆ ಎಂದೆಲ್ಲ ಮಮ್ಮಟ
ತನ್ನ ಕಾವ್ಯಪ್ರಕಾಶದಲ್ಲಿ ಸಂಗ್ರಹಿಸಿ ಹೇಳುತ್ತಾನೆ..
ಹಾಗಿದ್ದರೂ ಕಾವ್ಯದ ಮೂಲ ಪ್ರಯೋಜನ ಎಂದರೆ
ಆನಂದವನ್ನು ಹೊಂದುವುದಷ್ಟೇ ಆಗಿದೆ. ಯಾರಾದರೂ
ಯಾವುದಾದರೂ ಕೆಲಸವನ್ನು ತಾವಾಗಿಯೇ
ಮಾಡುತ್ತ ಇದ್ದಾರೆ ಎಂದರೆ ಅದು ಅವರಿಗೆ ಇಷ್ಟವಾಗಿದೆ,
ಸಂತೋಷವನ್ನು ಕೊಡುತ್ತದೆ ಎಂಬುದೇ ಕಾರಣವಲ್ಲವೇ!
ಕವಿಯಾದರೂ ಯಾರ ಒತ್ತಾಯಕ್ಕೆ ಬರೆಯುವುದಿಲ್ಲ.
ತಾನಾಗಿಯೇ ತನ್ನಿಷ್ಟದಂತೆ ಬರೆಯುತ್ತಾನೆ.
ಹಾಗಾಗಿ ಅಲ್ಲಿ ಆನಂದದ ಅನುಭವವೇ ಮುಖ್ಯ
ಎಂಬುದು ಸ್ಪಷ್ಟ. ಇನ್ನು ಓದುಗರಿಗಾದರೂ ಅಷ್ಟೇ!
ಓದುತ್ತ ರಸಾಸ್ವಾದನೆಯನ್ನು ಮಾಡುವುದು
ಹಾಗೂ ಸಂತೋಷ ಪಡುವುದು ಇದೇ ಕಾವ್ಯವನ್ನು
ಓದುವಾಗ ಇರುವ ಪರಮಾರ್ಥ. ಅದಿಲ್ಲದಿದ್ದರೆ
ಯಾರು ತಾನೇ ಕಾವ್ಯಗಳನ್ನು ಓದುತ್ತಾರೆ.
ಈ ಆನಂದಾನುಭೂತಿ ಉನ್ನತ ಮಟ್ಟದಲ್ಲಿ
ದೊರೆತಾಗ ಅದನ್ನು ಉತ್ತಮಕಾವ್ಯವೆಂದು
ಪುರಸ್ಕರಿಸುತ್ತಾರೆ,ಅಂತಹ ಅನುಭವ ಆಗದಿದ್ದಾಗ
ಅದನ್ನು ಕೆಟ್ಟ ಕಾವ್ಯ ಎಂದು ತಿರಸ್ಕರಿಸುತ್ತಾರೆ.
    ಹೀಗೆ ಕವಿಗಳು ಆತ್ಮಾನಂದಕ್ಕಾಗಿ ರಚಿಸಿದ
ಕಾವ್ಯವೆಂಬ ಹೂವಿನಿಂದ ರಸವೆಂಬ
ಮಕರಂದವನ್ನುದುಂಬಿಯಂತೆ ನಾವೂ ಆಸ್ವಾದಿಸೋಣ.
ಕಾವ್ಯಗಳ ಅವಲೋಕನವೇ ಕಾವ್ಯಾವಲೋಕನ.
ಇದೇ ಹೆಸರಿನಲ್ಲಿ ನಾಗವರ್ಮನು ಒಂದು ಗ್ರಂಥವನ್ನು
ರಚಿಸಿದ್ದಾನೆ ಕೂಡ. ಅದರಲ್ಲಿ ಕೂಡ ಕಾವ್ಯದ
ಲಕ್ಷಣಗಳನ್ನು ಲಕ್ಷ್ಯಗಳನ್ನು ವಿವಿಧ
ಸಂಸ್ಕೃತಾಲಂಕಾರಗ್ರಂಥಗಳ ಆಧಾರದ ಮೂಲಕ
ವಿಸ್ತರಿಸಿದ್ದಾನೆ.
ನಾವೂ ಇಲ್ಲಿ ಬೇರೆ ಬೇರೆ ಕಾವ್ಯಗಳ ಸ್ವಾರಸ್ಯವನ್ನು
ಹುಡುಕಾಡುತ್ತಾ ಹೋಗುವ ಕಾರಣದಿಂದ
ಇದೂ ಕಾವ್ಯಾವಲೋಕನವೇ ಆಗಿದೆ. ಈ
ಲೇಖನಮಾಲಿಕೆಯಲ್ಲಿ ಕಾವ್ಯವೆಂದರೆ
ಮಾರ್ಗಕಾವ್ಯವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವುದು.
ರಸಮಯವಾದ ಪದ್ಯಗಳನ್ನು ಅಥವಾ
ಕಥಾನಕಗಳನ್ನು ಹಾಗೂ ಅವುಗಳ ಸೂಕ್ಷ್ಮತೆಯನ್ನು
ಅವಲೋಕಿಸಲು ಇದು ಸಹಾಯಕವಾಗಬಲ್ಲದು
ಎಂದು ನಂಬಿರುವೆ.
    ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಲು ಮುಖ್ಯವಾಗಿ
ಬೇಕಾಗಿರುವುದು ಆ ಭಾಷೆಯಲ್ಲಿ ಹಿಡಿತ.
ಗ್ರೀಕಿನ ನಾಟಕವೊಂದನ್ನು ಕವಿಗಳೊಬ್ಬರು
ಹಳಗನ್ನಡಕ್ಕೆ ಅನುವಾದ ಮಾಡಿದಾಗ ಇನ್ನೊಬ್ಬ
ಕವಿಗಳು ಹೇಳಿದ್ದರಂತೆ- ನೀವು ಒಂದು ಗ್ರೀಕಿನಿಂದ
ಇನ್ನೊಂದು ಗ್ರೀಕಿಗೆ ಅನುವಾದ ಮಾಡಿದ್ದೀರಾ ಅಂತ!
ಹಳಗನ್ನಡ ಈಗಿನವರಿಗೆ ಏಕೆ ಕಬ್ಬಿಣದ ಕಡಲೆಯಾಗಿದೆ
ಎಂದರೆ ಅದರಲ್ಲಿ ಹಿಡಿತವಿಲ್ಲದ ಕಾರಣಕ್ಕೆ.
ಹಳಗನ್ನಡವೇ ಇಂದಿನ ಕನ್ನಡಕ್ಕೆ ಮೂಲವೆಂಬುದರ
ಅರಿವಿದ್ದರೂ ಆ ಸೂಕ್ಷ್ಮರೂಪಾಂತರಗಳನ್ನು
ಅಧ್ಯಯನ ಮಾಡದಿದ್ದರೆ ಅರಿತುಕೊಳ್ಳುವುದು
ಕಷ್ಟವೇ ಸರಿ! ಹಾಗಾಗಿಯೇ ಭಾಷೆಯನ್ನೇ ಅಧ್ಯಯನ
ಮಾಡುವವರಿಗೂ ಎಷ್ಟೋ ಕಾವ್ಯಗಳನ್ನು ಕೋಶಗಳು
ಹಾಗೂ ಟೀಕೆಗಳಿಲ್ಲದೇ ಅರ್ಥ ಮಾಡಿಕೊಳ್ಳಲಾಗದ
ಪರಿಸ್ಥಿತಿ ಉಂಟಾಗಿದೆ. ಆದರೆ ಒಂದು ಉಪಾಯವುಂಟು!
ಹೇಗೆ ಅನ್ಯಭಾಷೆಯ ಚಲನಚಿತ್ರವನ್ನು ನೋಡಿ
ನೋಡಿ ನಮಗೆ ಆ ಭಾಷೆಯ ಸ್ಥೂಲ
ಪರಿಚಯವಾಗುತ್ತದೆಯೋ ಹಾಗೇ ಹಳಗನ್ನಡದ
ಕಾವ್ಯಗಳನ್ನು ಓದಿ ಓದಿ ಅದರ ಸ್ಥೂಲಪರಿಚಯವಾಗಬಲ್ಲದು.
ಆಮೇಲೆ ಉಳಿದ ರಸಾಸ್ವಾದಕ್ಕೇನೂ ತೊಂದರೆ ಇರುವುದಿಲ್ಲ.
ಹಾಗಾಗಿ ನಮಗೆ ಅರ್ಥವಾಗದಿದ್ದರೂ ಅರ್ಥ/ಅನುವಾದವನ್ನು
ಓದಿಕೊಂಡು ಆಮೇಲೆ ಎರಡು ಬಾರಿ ಮೂಲವನ್ನು ಓದಿದಾಗ
ಆಸ್ವಾದನೆ ಸಾಧ್ಯವಾಗುತ್ತದೆ. ಕಾಲಕ್ರಮದಲ್ಲಿ ಪದ್ಯದ
ಆಶಯವಂತೂ ಸ್ಪಷ್ಟವಾಗುವ ಮಟ್ಟಕ್ಕೆ ಓದಿ ಅರ್ಥೈಸಿಕೊಳ್ಳಲು
ಸಾಧ್ಯವಾಗುತ್ತದೆ. ಇದಕ್ಕೆ ಸ್ವಾನುಭವವೇ ಪ್ರಮಾಣ!
    ಹಿರಿಯರೊಬ್ಬರು ಪದ್ಯ ಹೇಗೆ ಸಹಜವಾದ ಅಭಿವ್ಯಕ್ತಿ
ಎಂಬುದಕ್ಕೆ ಒಂದು ಸುಂದರವಾದ ದೃಷ್ಟಾಂತವನ್ನು ಹೇಳುತ್ತಾರೆ.
ರಸ್ತೆಯಲ್ಲಿ ಹೋಗುವ ವ್ಯಕ್ತಿಯೊಬ್ಬ ಸುಮ್ಮನೆ ಗದ್ಯದಲ್ಲಿ
ಏನಾದರೂ ಹೇಳುತ್ತಾ ಹೋದರೆ "ಪಾಪ! ಹುಚ್ಚು ಹಿಡಿದಿರಬೇಕು"
ಎಂದು ಹೇಳುತ್ತೇವೆ. ಅದೇ ಆತ ಪದ್ಯವನ್ನು ಹಾಡಿಕೊಂಡು
ಹೋಗುತ್ತಿದ್ದರೆ "ಏನೋ ತುಂಬಾ ಸಂತೋಷದಲ್ಲಿರಬೇಕು!"
ಎಂದು ಮೆಚ್ಚಿಕೊಳ್ಳುತ್ತೇವೆ. ಅದೇ ರೀತಿ ಮುಷ್ಕರಗಳಲ್ಲಿ
"ಬೇಕೇ ಬೇಕು ನ್ಯಾಯ ಬೇಕು" ಎಂದೋ ಅಥವಾ ಇನ್ನಾವುದೋ
ಘೋಷಣೆಯನ್ನು ಕೂಗುವಾಗ, ಗಾದೆಗಳಲ್ಲಿ ಮೊದಲಾಗಿ
ಹಲವು ಕಡೆಗಳಲ್ಲಿ ಆ ಪದ್ಯದ ಛಾಯೆಯನ್ನು ಕಾಣುತ್ತೇವೆ.
ಅಲ್ಲಿರುವುದೇ ಛಂದಸ್ಸು. ಇದು ಕವಿತೆಗೆ ಒಂದು
ಗೇಯತ್ವವನ್ನು ಕೊಡುತ್ತದೆ. ಆಹ್ಲಾದವನ್ನು ಉಂಟು ಮಾಡುತ್ತದೆ.
ಛಂದಸ್ಸಿನ ಆವಶ್ಯಕತೆಯ ಬಗ್ಗೆ ಚರ್ಚಿಸುವವರು
ಈ ಅಂಶವೊಂದನ್ನು ಗಮನಿಸಿದರೆ ಸಾಕು.
ತೀನಂಶ್ರೀ ಅವರು ಕೂಡ "ಭಾರತೀಯಕಾವ್ಯಮೀಮಾಂಸೆ"ಯಲ್ಲಿ
ಭಾವಾಭಿವ್ಯಕ್ತಿಗೆ ಪದ್ಯಗಳೇ ಸೂಕ್ತ ಎಂಬುದನ್ನು ಹೇಳಿದ್ದಾರೆ.
ಚಂಪೂಕಾವ್ಯಗಳಲ್ಲಿ ಗದ್ಯಪದ್ಯಗಳು ಮಿಶ್ರ ವಾಗಿರುತ್ತವೆ
ಆದರೂ ಉತ್ಕಟವಾದ ಭಾವವನ್ನು ವ್ಯಕ್ತ ಪಡಿಸುವಾಗ
ಕವಿ ಗದ್ಯಕ್ಕಿಂತ ಪದ್ಯವನ್ನೇ ಆಶ್ರಯಿಸುತ್ತಾನೆ ಎಂಬುದೂ
ಕಾಣುತ್ತದೆ. ಈ ಎಲ್ಲವನ್ನು ಅವಲೋಕಿಸಿದರೆ
ಛಂದೋಮಯಪದ್ಯದ ವಿಶಾಲತೆ ಮತ್ತು ಸಹಜತೆಯ ಅರಿವಾಗುತ್ತದೆ
    ಇನ್ನು ಕೆಲವು ಕವಿಸಮಯವನ್ನು ಇಲ್ಲಿ ವಿವೇಚಿಸೋಣ.
ಈ ವಿಷಯದಲ್ಲಿ ನೇರವಾಗಿ ನಾಗವರ್ಮನ
ಕಾವ್ಯಾವಲೋಕನದಿಂದಲೇ ಆಯ್ದ ಪದ್ಯಗಳನ್ನೂ ಸರಳವಾದ
ಗದ್ಯಾನುವಾದಗಳನ್ನು ಪ್ರಸ್ತುತಪಡಿಸುವೆ.
ಕವಿಸಮಯ ಎಂದರೇನು-
ಆವುದಶೇಷಲೋಕವಿಷಯಸ್ಥಿತಿಯಲ್ತಖಿಳಾಗಮಾರ್ಥಮುಂ
ಭಾವಿಪೊಡಲ್ತು ಸತ್ಕವಿಪರಂಪರೆಯಿಂ ಪರಿಗೀತಮಾಗಿ ನಿ-
ಷ್ಕೇವಳಮಾದ ರೂಢಿವಶದಿಂ ಸಲೆ ಸಲ್ವುದಿದಲ್ತೆ ಶಿಷ್ಟಸಂ-
ಭಾವಿತಮಪ್ಪ ಕಾವ್ಯಸಮಯಂ ಭುವನತ್ರಯವಸ್ತುಗೋಚರಂ ||೮೪೪||
(ಆವುದು-ಯಾವುದು, ಅಶೇಷ-ಸಂಪೂರ್ಣವಾದ, ಲೋಕವಿಷಯಸ್ಥಿತಿ- 
ಲೋಕದ ವಾಸ್ತವಿಕಸ್ಥಿತಿ, ಅಲ್ತು- ಅಲ್ಲವೋ, ಅಖಿಳಾಗಮಮಾರ್ಥಮುಂ-
ಎಲ್ಲ ಆಗಮಗಳ ಅರ್ಥವೂ, ಭಾವಿಪೊಡೆ-ಭಾವಿಸಿದರೆ, 
ಅಲ್ತು-ಅಲ್ಲವೋ, ಸತ್ಕವಿಪರಂಪರೆಯಿಂ-ಸತ್ಕವಿಗಳ ಪರಂಪರೆಯಿಂದ, 
ಪರಿಗೀತಮಾಗಿ-ಹೇಳಲ್ಪಟ್ಟು, ನಿಷ್ಕೇವಳಮಾದ ರೂಢಿವಶದಿಂ-
ಕೇವಲವಲ್ಲದ ರೂಢಿಯಿಂದ, ಸಲೆ ಸಲ್ವುದು-ಎಲ್ಲರಿಂದಲೂ 
ಒಪ್ಪಿಕೊಳ್ಳಲ್ಪಟ್ಟಿದೆಯೋ, ಭುವನತ್ರಯವಸ್ತುಗೋಚರಂ-ಮೂರು 
ಲೋಕಗಳಲ್ಲಿಯ ವಸ್ತುಗಳಲ್ಲೂ ಗೋಚರವಾಗುವುದು, 
ಶಿಷ್ಟಸಂಭಾವಿತಂ ಅಪ್ಪ-ಶಿಷ್ಟರಿಂದ ಒಪ್ಪಿಗೆ ಆಗುವ, ಕಾವ್ಯಸಮಯಂ-
 ಕವಿಸಮಯ/ಕಾವ್ಯಸಮಯ, ಇದಲ್ತೆ- ಇದಲ್ಲವೇ!)
ಅಂದರೆ ವಾಸ್ತವದಲ್ಲಿ ಸಾಧ್ಯವಲ್ಲದ ಆದರೆ ಕವಿಗಳ
ಪರಂಪರೆಯಿಂದಲೂ ಶಿಷ್ಟರಿಂದಲೂ ಸಹೃದಯದರಿಂದಲೂ
ಒಪ್ಪಿಕೊಳ್ಳಲ್ಪಟ್ಟಕೆಲವು ರೂಢಿವಶದಿಂದ ಬಂದ ವಿಶೇಷವಾದ
ವಿಷಯಗಳೇ ಕವಿಸಮಯಗಳು. ಇದಕ್ಕೆ ಉದಾಹರಣೆಗಳನ್ನು
ನೋಡಿದರೆ ಗೊತ್ತಾಗುತ್ತದೆ.
ಕೀರ್ತಿ ಬಿಳಿ ಬಣ್ಣ, ಪಾಪ ಕಪ್ಪು ಬಣ್ಣ. ಇತ್ಯಾದಿಗಳು.
“ಅವನ ಕೀರ್ತಿ ಹಾಲಿನಂತೆ ಬೆಳ್ಳಗೆ" “ಆದರೆ ಇದೊಂದು ಕೆಲಸ
ಅವನ ಕೀರ್ತಿಗೆ ಕಳಂಕ ತಂದುಬಿಟ್ಟಿತು" ಇಲ್ಲಿ ಕಳಂಕ ಎಂದಾಗ
ಕಪ್ಪು ಎಂಬುದು ವೇದ್ಯವಾಗುತ್ತದೆ. ಇನ್ನೂ ಹಲವು
ಉದಾಹರಣೆಗಳನ್ನು ಹೇಳುವುದಿದ್ದರೆ-
ಸೂರ್ಯ ಬಂದಾಗ ಕಮಲಗಳು ಅರಳುತ್ತವೆ. ನೈದಿಲೆಗಳು
ಬಾಡುತ್ತವೆ. ಚಂದ್ರ ಬಂದಾಗ ಕಮಲಗಳು ಬಾಡುತ್ತವೆ.
ನೈದಿಲೆಗಳು ಅರಳುತ್ತವೆ.ಮೋಡಗಳನ್ನು ಕಂಡು ನವಿಲು
ನರ್ತಿಸುತ್ತದೆ. ಚಾತಕಪಕ್ಷಿ ಮಳೆಯ ನೀರನ್ನು ಮಾತ್ರ
ಕುಡಿದು ಬದುಕಿರುತ್ತದೆ. “ಅವನ ಬರುವಿಕೆಗೆ ಅವಳು
ಚಾತಕಪಕ್ಷಿಯಂತೆ ಕಾಯುತ್ತಿದ್ದಳು" ಎಂದೆಲ್ಲ ಹೇಳುತ್ತೇವೆ.
ಹಾಗೆಯೇ ಚಕೋರ ಬೆಳದಿಂಗಳನ್ನು ಕುಡಿದು ಜೀವಿಸಿರುತ್ತದೆ.
ಕೋಗಿಲೆ ವಸಂತಋತುವಿನಲ್ಲಿ ಮಾವಿನ ಚಿಗುರನ್ನು
ತಿಂದು ಪಂಚಮಸ್ವರದಲ್ಲಿ ಹಾಡುತ್ತದೆ. ಆನೆಯ ಕುಂಭಸ್ಥಲದಲ್ಲಿ
ಮುತ್ತು ಇರುತ್ತದೆ. ಬಿದಿರನಲ್ಲಿ ಮುತ್ತು ಇರುತ್ತದೆ.
ರೋಹಣಗಿರಿಯಲ್ಲಿ ರತ್ನ ಸಿಗುತ್ತದೆ. ಚಕ್ರವಾಕ ಪಕ್ಷಿಗಳಿಗೆ ರಾತ್ರಿ 
ಹೊತ್ತು ವಿರಹ!ಪಕ್ಕದಲ್ಲೇ ಇದ್ದರೂ ತನ್ನ ಜೋಡಿಹಕ್ಕಿಯನ್ನು 
ಕಾಣಲಾರದೇ ರಾತ್ರಿಯಿಡೀ ಗೋಳಾಡುತ್ತದೆ.
ಇವೆಲ್ಲ ಕವಿಸಮಯಗಳು. ಕೆಲವು ಹೂವಿನ ಗಿಡಗಳು ಹೂಬಿಡಲು
 ಸುಂದರಿಯರಾದ ಸ್ತ್ರೀಯರು ದೋಹದವನ್ನು ಮಾಡಬೇಕು. 
ಉದಾಹರಣೆಗೆ- ಅಶೋಕವೃಕ್ಷ ಹೂಬಿಡಲು
ಸುಂದರಸ್ತ್ರೀ ಅದನ್ನು ಒದೆಯಬೇಕು. ತಿಲಕವೆಂಬ ಹೂವಿನ 
ಗಿಡವನ್ನು ಸುಂದರಿ ನೋಡಿದರೇ ಅದು ಹೂ ಬಿಡುತ್ತದೆ. 
ಕುರವಕವನ್ನು ಆಲಿಂಗಿಸಿಕೊಂಡರೆ ಹೂ ಬಿಡುತ್ತದೆ. 
ಕರ್ಣಿಕಾರದ ಎದುರು ನರ್ತನ ಮಾಡಿದರೆ ಅದು ಹೂ ಬಿಡುತ್ತದೆ.
ಹೀಗೇ ಇನ್ನೂ ಹಲವು ಕವಿಸಮಯಗಳು. ಇವನ್ನೆಲ್ಲ ಯಥೋಚಿತವಾಗಿ 
ಕವಿಗಳು ಬಳಸಿದಾಗ ಪದ್ಯಗಳ ಸೊಗಸು ಇನ್ನೂ ಹೆಚ್ಚುತ್ತದೆ.
ಅವುಗಳೆಲ್ಲವುಗಳಿಗೆ ಉದಾಹರಣೆಗಳನ್ನು ಆಯಾ ಸಂದರ್ಭದಲ್ಲೇ ನೋಡೋಣ.
    ಇಂತಹ ಈ ಕಾವ್ಯವೆಂಬ ವಿಸ್ತಾರವಾದ ಪ್ರಪಂಚಕ್ಕೆ ಕವಿಯೇ ಬ್ರಹ್ಮ. 
ಅವನಿಗೆ ಹೇಗೆ ರುಚಿಸುತ್ತದೆಯೋ ಹಾಗೇ ಈ ಜಗತ್ತೂ 
ಪರಿವರ್ತನೆಯಾಗುತ್ತದೆ ಎಂಬುದೊಂದು ಸಂಸ್ಕೃತದ ಶ್ಲೋಕವಿದೆ. 
ಮುಂದುವರೆದು ಹೇಳಿದರೆ ಈ ಜಗತ್ತಿಗೆ ಯಾರಿಗೆ ಬೇಕಾದರೂ 
ಮುಕ್ತವಾದ ಪ್ರವೇಶವಿದೆ. ವೀಸಾ ಪಾಸ್ಪೋರ್ಟ್ ಏನೂ ಬೇಡ! 
ಇಲ್ಲಿ ಯಾವಾಗ ಬೇಕಾದರೂ ಬರಬಹುದು. ಯಾರ ಅಡೆತಡೆಗಳಿಲ್ಲದೇ 
ವಿಹಾರ ಮಾಡಬಹುದು. ಹೋಗುವ ಮನಸ್ಸಾದರೆ ಯಾವಾಗ ಬೇಕಾದರೂ 
ನಿರ್ಗಮಿಸಬಹುದು. ಇದಕ್ಕೆ ಯಾವ ತೆರಿಗೆ ಸುಂಕ ಇಲ್ಲ!
ಕಾಲದ ನಿಯಮ ಇಲ್ಲಿ ನಡೆಯುವುದಿಲ್ಲ! ಇಲ್ಲಿರುವ ಕವಿಗಳೆಲ್ಲ 
ಚಿರಂಜೀವಿಗಳು! ಬಂದ ರಸಿಕರಿಗೆ ರೋಗವಾಗಲೀ 
ಮುಪ್ಪಾಗಲೀ ಬಾಧಿಸುವುದಿಲ್ಲ! ಎಷ್ಟು ಜನರು ಬಂದರೂ
ಸಾಕಷ್ಟು ಅವಕಾಶವುಳ್ಳ ಈ ಜಗತ್ತಿನಲ್ಲಿ ಇಂತಹ ಅನ್ಯಾದೃಶವಾದ 
ಆನಂದವನ್ನು ಅನುಭವಿಸುವುದಕ್ಕೋಸ್ಕರವಾಗಿಯೇ ಇಷ್ಟೊಂದು
 ಜನರು ಇಷ್ಟೊಂದು ಕಾಲದಿಂದ ಇಲ್ಲಿ ವಿಹರಿಸುತ್ತಿದ್ದಾರೇನೋ! 
ಹೀಗೆ ವಿಹರಿಸಿಕೊಂಡು ಬರಲು ಈ ಕಾವ್ಯಾವಲೋಕನದ 
ಯಾನವಂತೂ ಸಿದ್ಧವಾಗಿದೆ

ಭಾನುವಾರ, ನವೆಂಬರ್ 10, 2019

ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ


ಎಂದೋ ಕಳೆದುದು ನಿನ್ನಯ
ಸುಂದರಮಾಗಿರ್ಪ ಸದನಮದನಾರಚಿಸಲ್
ಸಂದುದು ನಿರ್ಣಯಮೀಗಳ್
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೧||

ಸಂದೆಗಮೇಂ ನೀಂ ಧರೆಗೈ-
ತಂದಿರ್ದಪ ತಾಣಮದುವೆ ಸಾಕೇತಪುರಂ
ಚಂದದೊಳಯೋಧ್ಯೆಯೆನಿಪುದು
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೨||

ಬಂದಪರಾ ಯವನರ್ಕಳ್
ಕುಂದಾದುದು ನಿನ್ನ ಮನೆಯನುಂ ಕೆಡಪಿದರೇ!
ಸಂದಿರಲೀಗಳ್ ನ್ಯಾಯಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೩||

ಅಂದು ಮಸೀದಿಯನೇ ಬಲ
ದಿಂದಂ ಕಟ್ಟುತ್ತೆ ಮೆಟ್ಟಿದರ್ ನಿನ್ನೆಡೆಯಂ
ಬಂದುದು ಕಾಲಮಿದೀಗಳ್
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೪||

ತಂದಪರಿಟ್ಟಿಗೆಗಳನೇ
ತಂದೆಯೆ!  ನಿನ್ನೊಂದು ಮನೆಯನೇ ಕಟ್ಟಲ್ ಮೇಣ್
ಸಂದುದು ಶ್ರಮಕಿದೊ ಫಲಮೆನೆ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೫||

ಅಂದಬ್ಧಿಸೇತುವಿಗೆ ಕಪಿ-
ವೃಂದಂ ಜತೆಯಾಗಲಾಯ್ತು, ಮನೆಯಂ ರಚಿಸಲ್
ಬಂದಿರೆ ಭಾರತಮೆಲ್ಲಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೬||

ಮಂದಿಗಳಿರೆ ಸಾಹಸಿಗಳ್
ಕುಂದಿನ ಕಟ್ಟಡಮನಲ್ಲಿ ಕೆಡಪಿದರಾಗಳ್
ಬೃಂದಾರಕರುಂ ಮೆಚ್ಚಿರೆ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೭||

ನೊಂದರ್ ನಿನ್ನ ಸ್ಥಿತಿಗಂ
ಮುಂದೇನೆಂದರಿಯದಾದವರ್ಗಂ ದೊರೆಯ-
ಲ್ಕಿಂದೀ ನ್ಯಾಯದ ಬಲಮುಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೮||

ಒಂದೆರಡಲ್ಲಂ ಜೀವಂ
ಸಂದುದು ಮೃತಿಗಂದು ನಿನ್ನ ಸೇವೆಗೆನುತ್ತುಂ
ನಿಂದವರ ಪುಣ್ಯಕೃತಿಯಿಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೯||

ಅಂದದೆ ತ್ವನ್ನಾಮಸುಧಾ-
ಸ್ಪಂದನದಿಂ ಬಲಮನೊಂದಿ  ಕಜ್ಜಂಗೆಯ್ವರ್
ಸುಂದರಮದ್ಭುತಭವ್ಯಂ
ಮಂದಿರಮಿನ್ನಪ್ಪುದಲ್ಲಿಯೇ ಶ್ರೀರಾಮಾ ||೧೦||