Powered By Blogger

ಮಂಗಳವಾರ, ಸೆಪ್ಟೆಂಬರ್ 8, 2020

ವೈನತೇಯವಿಜಯಂ- ಗರುಡನ ಕಥೆ-೫

(ಸೂತಪುರಾಣಿಕರು ಕಥೆಯನ್ನು ಮುಂದುವರೆಸಿ ಹೇಳುವುದು. ಕದ್ರೂವಿನತೆಯರು ಸಮುದ್ರವನ್ನು ಕಾಣುವುದು. ಸಮುದ್ರದ ವರ್ಣನೆ, ಉಚ್ಚೈಶ್ರವಸ್ಸಿನ ದರ್ಶನ)

 ॥ದ್ವಿತೀಯಾಶ್ವಾಸಂ॥

ಕಂ॥ ಕಥನಕುತೂಹಲಚಿತ್ತೋ

ನ್ಮಥಿತರಸಜ್ಞದ್ವಿರೇಫನಿಕುರುಂಬವರ-

ಪ್ರಥಿತಸುಮಾತ್ತಮರಂದಂ

ಕಥಿಸಲ್ ತಗುಳ್ದಂ ನೆಗೞ್ದ ಸೂತಂ ಬೞಿಕಂ॥೧॥

(ಟೀ-ಕಥನಕುತೂಹಲಚಿತ್ತೋನ್ಮಥಿತರಸಜ್ಞದ್ವಿರೇಫನಿಕುರುಂಬವರಪ್ರಥಿತಸುಮಾತ್ತಮರಂದಂ-(ಕಥನ-ಕುತೂಹಲ-ಚಿತ್ತ+ಉನ್ಮಥಿತ-ರಸಜ್ಞ-ದ್ವಿರೇಫ-ನಿಕುರುಂಬ-ವರ-ಪ್ರಥಿತ-ಸುಮ+ಆತ್ತ-ಮರಂದಂ)ಕಥೆಯನ್ನು ಹೇಳುವುದರಿಂದ ಉಂಟಾದ ಕುತೂಹಲವುಳ್ಳ ಮನಸ್ಸನ್ನು ಕಡೆಯುವುದರ ಮೂಲಕ ಹುಟ್ಟಿದ ರಸವನ್ನು ತಿಳಿದ ದುಂಬಿಗಳ ಗುಂಪಿನಲ್ಲಿ ಶ್ರೇಷ್ಠವಾಗಿ ಪ್ರಸಿದ್ಧವಾದ ಹೂವಿನಿಂದ ಹೊಂದಿದ ಮಕರಂದದಂತಿರುವ, ನೆಗೞ್ದ-ಪ್ರಸಿದ್ಧನಾದ, ಸೂತಂ-ಸೂತನು (ಸೂತಪುರಾಣಿಕರು) ಕಥಿಸಲ್-ಕಥೆಯನ್ನು ಹೇಳಲು, ಬೞಿಕಂ-ಆಮೇಲೆ, ತಗುಳ್ದಂ-ತೊಡಗಿದನು, ಕಂದಪದ್ಯ

ಹಳಗನ್ನಡದಲ್ಲಿ ಹಾಗೂ ಸಂಸ್ಕೃತದಲ್ಲಿ ಹಲವು ಕಾವ್ಯಗಳಲ್ಲಿ ಪ್ರತಿಯೊಂದೂ ಆಶ್ವಾಸದ ಆರಂಭದಲ್ಲಿ ಶ್ರೀಕಾರದಿಂದ, ಅಥವಾ ಕಥಾನಾಯಕನ ಸ್ತುತಿಯಿಂದ ಪ್ರಾರಂಭವಾಗುವ ರೂಢಿಯಿದೆ. ಪ್ರಸ್ತುತ ಕಾವ್ಯದಲ್ಲಿ ಅಂತಹ ಯಾವ ಪದ್ಧತಿಯನ್ನೂ ಅನುಸರಿಸಿಲ್ಲ. ಆದರೆ ಕುಮಾರವ್ಯಾಸನು "ಕೇಳು ಜನಮೇಜಯಧರಿತ್ರೀಪಾಲ.." ಎಂದು ವೈಶಂಪಾಯನನು ಕಥೆಯನ್ನು ಹೇಳುವಂತೆ ಆರಂಭಿಸುವುದನ್ನು ಅನುಕರಿಸುವಂತೆಯೇ, ಉಳಿದ ಆಶ್ವಾಸಗಳ ಆರಂಭದಲ್ಲಿ ಕಥೆಯನ್ನು ಹೇಳುತ್ತಿರುವ ಸೂತಪುರಾಣಿಕರು ಮುಂದೆ ಹೇಳುತ್ತಿರುವಂತೆ ಉಲ್ಲೇಖಿಸಿ ಕಥೆಯನ್ನು ಮುಂದುವರೆಸಲಾಗಿದೆ.)


ವ॥ಅಂತು ಕಥಾನಕಮಂ ಮುಂದೆ ಪೇೞುತ್ತುಂ ಕದ್ರುವುಂ ವಿನತೆಯುಂ ಉಚ್ಚೈಶ್ರವಸ್ಸಂ ನೋಡಲ್ಕೆ ಪೋದುದಂ ಬಣ್ಣಿಸುತ್ತೆ-

(ಅಂತು-ಹೀಗೆ, ಕಥಾನಕಮಂ-ಕಥೆಯನ್ನು, ಮುಂದೆ-ಮುಂದಿನ ಭಾಗವನ್ನು, ಪೇೞುತ್ತುಂ-ಹೇಳುತ್ತಾ, ಕದ್ರುವುಂ-ಕದ್ರುವೂ. ವಿನತೆಯುಂ-ವಿನತೆಯೂ, ಉಚ್ಚೈಶ್ರವಸ್ಸಂ-ಉಚ್ಚೈಶ್ರವಸ್ಸನ್ನು, ನೋಡಲ್ಕೆ-ನೋಡಲು/ನೋಡುವುದಕ್ಕೋಸ್ಕರ, ಪೋದುದಂ-ಹೋದದ್ದನ್ನು, ಬಣ್ಣಿಸುತ್ತೆ-ವರ್ಣಿಸುತ್ತಾ-)


ಕಂ॥ ವಿನತೆಯೆ ಪಿಂತಾದೆಲ್ಲಮು

ಮೆನಿತೋ ಸಯ್ಪಿಂದೆ ಸಂದುದೆಂದೆನುತಾಗಳ್

ಮನದೊಳ್ ಚಿಂತಿಸುತಿರ್ದೊಡೆ

ತನಗೇ ಜಯಮೆಂದು ಮತ್ತೆ ನಸುನಗುತಿರ್ದಳ್ ॥೨॥

(ಟೀ- ವಿನತೆಯೆ-ವಿನತೆಯು, ಪಿಂತೆ-ಹಿಂದೆ, ಆದ-ಆದ, ಎಲ್ಲಮುಂ-ಎಲ್ಲವೂ, ಎನಿತೋ-ಹೇಗೋ, ಸಯ್ಪಿಂದೆ-ಪುಣ್ಯದಿಂದ, ಸಂದುದು-ಆಗಿದೆ, ಎಂದೆನುತೆ-ಎಂದುಕೊಳ್ಳುತ್ತ, ಆಗಳ್-ಆಗ, ಮನದೊಳ್-ಮನಸ್ಸಿನಲ್ಲಿ, ಚಿಂತಿಸುತೆ-ಚಿಂತಿಸುತ್ತ, ಇರ್ದೊಡೆ-ಇದ್ದಿರಲು, ತನಗೇ-ತನಗೇ, ಜಯಂ-ಗೆಲುವು, ಎಂದು-ಎಂದುಕೊಳ್ಳುತ್ತ, ಮತ್ತೆ-ಮತ್ತೆ, ನಸುನಗುತಿರ್ದಳ್-ನಸುನಗುತ್ತ ಇದ್ದಳು. ಕಂದಪದ್ಯ)


ವ.ತಿ॥

ಆಪಃಪ್ರಜಾತಘನವೀಚಿಯೆ ಲಕ್ಷ್ಮಿಯೇ ಮೇಣ್

ಸೈಪಿಂದೆ ಚಂದ್ರಮನೆ ವಾರುಣಿಯೇ ವಲಕ್ಷಂ

ಲೋಪಂ ಗಡೆಂತು ಹಯದೊಳ್! ಸಲೆ ಕದ್ರುವೀಗಳ್

ಕೂಪಕ್ಕೆ ರಾತ್ರಿಯೊಳೆ ಕಂಡು ಪಗಲ್ ಜಗುಳ್ದಳ್ ॥೩॥

(ಟೀ-ಆಪಃ-ಪ್ರಜಾತ-ಘನ-ವೀಚಿಯೆ- ನೀರಿನಿಂದ ಉಂಟಾದ ದೊಡ್ಡ ಅಲೆಗಳೇ, ಲಕ್ಷ್ಮಿಯೇ-ಸಂಪತ್ತಿನ ದೇವತೆಯಾದ ಲಕ್ಷ್ಮಿಯೇ, ಮೇಣ್-ಅಥವಾ, ಸೈಪಿಂದೆ-ಪುಣ್ಯದಿಂದ, ಚಂದ್ರಮನೆ-ಚಂದ್ರನೇ, ವಾರುಣಿಯೇ-ವಾರುಣಿಯೆಂಬ ಸುರೆಯೇ(ಮದ್ಯವೇ) ವಲಕ್ಷಂ-ಬಿಳಿಯ ಬಣ್ಣದ್ದು. ಹಯದೊಳ್- ಕುದುರೆಯಲ್ಲಿ, ಲೋಪಂ-ಲೋಪವು/ತ್ರುಟಿಯು   ಎಂತು+ಗಡ-ಹೇಗೆ! ಸಲೆ-ಸಲ್ಲುತ್ತಿರಲು, ಕದ್ರುವು-ಕದ್ರುವು, ಈಗಳ್-ಈಗ, ರಾತ್ರಿಯೊಳೆ-ರಾತ್ರಿಯಲ್ಲಿ ಕಂಡು-ನೋಡಿಕೊಂಡು, ಪಗಲ್-ಹಗಲು, ಕೂಪಕ್ಕೆ-ಬಾವಿಗೆ, ಜಗುಳ್ದಳ್-ಬಿದ್ದಳು. ವಸಂತತಿಲಕಾವೃತ್ತ.

ಸಮುದ್ರದಲ್ಲಿ ಹುಟ್ಟಿರುವ ಅಲೆಯಾಗಲೀ, ವಾರುಣಿಯಾಗಲೀ ಲಕ್ಷ್ಮಿಯಾಗಲೀ ಅಥವಾ ಚಂದ್ರಮನೇ ಆಗಲಿ, ಎಲ್ಲವೂ ಬೆಳ್ಳಗಿರುವಾಗ ಕುದುರೆಯಲ್ಲಿ ಲೋಪವಾಗುವುದಕ್ಕೆ ಹೇಗೆ ಸಾಧ್ಯ! ಕದ್ರುವು ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೊತ್ತು ಬಿದ್ದಳು. ಎಂದು ವಿನತೆಯ ಆಲೋಚನೆಯ ಈ ಪದ್ಯವು ಸಮಸ್ಯಾಪೂರಣದ ರೀತಿಯಲ್ಲಿ ಮಾಡಲ್ಪಟ್ಟಿದೆ. ಈ ಕೊನೆಯ ಪಾದವೂ ಕೂಡ ಹಿಂದೊಮ್ಮೆ ಪದ್ಯಪಾನದ ಆಶುಕವಿತಾಗೋಷ್ಠಿಯಲ್ಲಿ ಕೊಟ್ಟ ಸಮಸ್ಯೆಯ ಪಾದವೇ ಆಗಿದೆ)


ಸ್ವೋಪಜ್ಞದಿಂ ಧವಳವರ್ಣಮನಾಂತ ಕ್ಷೀರಾ-

ಕೂಪಾರಜಾತಮಹಿತಪ್ರಥಿತಂ ಸಿತಾಂಗಂ

ಲೋಪಕ್ಕೆ ಸಲ್ವುದೆನಿತಾ ಹಯಮಿಂತು ನೋಡಲ್

ಕೂಪಕ್ಕೆ ರಾತ್ರಿಯೊಳೆ ಕಂಡು ಪಗಲ್ ಜಗುಳ್ದಳ್ ॥೪॥

(ಟೀ-ಸ್ವೋಪಜ್ಞದಿಂ-ಸ್ವೋಪಜ್ಞವಾಗಿ/ಸ್ವತಃ ತಾನಾಗಿಯೇ,  ಧವಳವರ್ಣಮನಾಂತ- ಬಿಳಿಯಬಣ್ಣವನ್ನು ಹೊಂದಿದ, ಕ್ಷೀರಾಕೂಪಾರಜಾತಮಹಿತಪ್ರಥಿತಂ (ಕ್ಷೀರ+ಅಕೂಪಾರ-ಜಾತ-ಮಹಿತ-ಪ್ರಥಿತಂ) ಕ್ಷೀರಸಾಗರದಿಂದ ಹುಟ್ಟಿದ ಮಹಾತ್ಮೆಯನ್ನುಳ್ಳ ಪ್ರಸಿದ್ಧವಾದ, ಸಿತಾಂಗಂ (ಸಿತ+ಅಂಗಂ)-ಬಿಳಿಯ ಮೈಯುಳ್ಳ,  ಆ ಹಯಂ- ಆ ಕುದುರೆಯು, ಇಂತು-ಹೀಗೆ, ನೋಡಲ್-ನೋಡಿದರೆ, ಲೋಪಕ್ಕೆ-ದೋಷಕ್ಕೆ, ಎನಿತು-ಹೇಗೆ, ಸಲ್ವುದು-ಸಲ್ಲುತ್ತದೆ, ರಾತ್ರಿಯೊಳೆ-ರಾತ್ರಿಯಲ್ಲಿ ಕಂಡು-ನೋಡಿಕೊಂಡು, ಪಗಲ್-ಹಗಲು, ಕೂಪಕ್ಕೆ-ಬಾವಿಗೆ, ಜಗುಳ್ದಳ್-ಬಿದ್ದಳು. ವಸಂತತಿಲಕಾವೃತ್ತ.

ಸ್ವಭಾವತಃ ಬಿಳಿಯದಾದ ಕ್ಷೀರಸಾಗರಲ್ಲಿ ಹುಟ್ಟಿದ ಈ ಕುದುರೆಯೂ ಬೆಳ್ಳಗಿರಲೇಬೇಕು, ಹಾಗಾಗಿ ಕದ್ರುವು ಇರುಳು ಕಂಡ ಬಾವಿಗೆ ಹಗಲು ಬಿದ್ದ ಹಾಗಾಯ್ತು- ಎಂದು ತಾತ್ಪರ್ಯ, ಇದೂ ಕೂಡ ಹಿಂದಿನ ಪದ್ಯದ ಮುಂದುವರೆದ ಕಲ್ಪನೆಯೇ ಆಗಿದೆ)


ವ.ಕ॥ ನಲವಿಂದೆ ನೋಡುವೊಡೆ ವಾಜಿಯ ಮೆಯ್ಯೆ ಬೆಳ್ಪಿಂ

ಸಲಲಂತು ಗೆಲ್ವೆನೆನುತುಂ ಮಿಗೆ ತೋಷದಿಂದಂ

ಲಲಿತಾಂಗಿಯಾ ವಿನತೆ ಸಾಗುತುಮಿರ್ದಳಲ್ತೇ

ಬಲವತ್ತರಂ ವಿಧಿಯದೆಂಬುದನಾರೊ ಬಲ್ಲರ್! ॥೫॥

(ಟೀ-ನಲವಿಂದೆ-ಸಂತೋಷದಿಂದ, ನೋಡುವೊಡೆ-ನೋಡುತ್ತಿರಲು, ವಾಜಿಯ-ಕುದುರೆಯ, ಮೆಯ್ಯೆ-ಶರೀರವೇ, ಬೆಳ್ಪಿಂ-ಬಿಳಿಯ ಬಣ್ಣದಿಂದ, ಸಲಲ್-ಸಲ್ಲುತ್ತಿರಲು, ಅಂತು-ಹಾಗೆ, ಗೆಲ್ವೆಂ-ಗೆಲ್ಲುತ್ತೇನೆ, ಎನುತುಂ-ಎಂದುಕೊಳ್ಳುತ್ತಾ, ಮಿಗೆ-ಅತಿಶಯವಾಗಿ, ತೋಷದಿಂದಂ-ಆನಂದದಿಂದ, ಲಲಿತಾಂಗಿಯು- ಕೋಮಲಾಂಗಿಯಾದ, ಆ ವಿನತೆ-ವಿನತೆಯು, ಸಾಗುತುಂ-ಹೋಗುತ್ತಾ ಇರ್ದಳಲ್ತೇ-ಇದ್ದಳಲ್ಲವೇ, ಅದು ವಿಧಿಯು- ಆ ನಿಯತಿಯು,  ಬಲವತ್ತರಂ-ಶಕ್ತಿಶಾಲಿಯು, ಎಂಬುದಂ- ಎನ್ನುವುದನ್ನು, ಆರೊ-ಯಾರೋ ಬಲ್ಲರ್-ತಿಳಿದವರು!

ವಸಂತಕಲಿಕಾವೃತ್ತ,(ನನಗೆ ತಿಳಿದಂತೆ ಈ ವೃತ್ತವನ್ನು ವಿದ್ವನ್ಮಿತ್ರರಾದ ರಾಮಕೃಷ್ಣಪೆಜತ್ತಾಯರು ಮೊದಲ ಬಾರಿಗೆ ಪದ್ಯಪಾನ ಜಾಲತಾಣದಲ್ಲಿ ಬಳಸಿದ್ದರು. ಅದಕ್ಕೆ ಶತಾವಧಾನಿ ಡಾ.ಆರ್. ಗಣೇಶರು ವಸಂತಕಲಿಕಾವೃತ್ತವೆಂದು ನಾಮಕರಣ ಮಾಡಿದರು. ವಸಂತತಿಲಕದ ಮೊದಲ ಒಂದು ಗುರು ಅಕ್ಷರದ ಬದಲಿಗೆ ಇದರಲ್ಲಿ ಎರಡು ಲಘುಗಳು ಬರುತ್ತವೆ.) ಮುಂದೆ ಆಗುವುದರ ಕಲ್ಪನೆಯಿಲ್ಲದೇ ವಿನತೆಯು ಬಹಳ ಸಂತೋಷದಿಂದ ಹೋಗುತ್ತಿದ್ದಳು. ವಿಧಿಯು ಎಲ್ಲಕ್ಕಿಂತ  ಹೆಚ್ಚು ಶಕ್ತಿಶಾಲಿ ಎಂಬುದನ್ನು ಯಾರು ತಾನೇ ಬಲ್ಲರು- ಎಂಬಲ್ಲಿ ಅರ್ಥಾಂತರನ್ಯಾಸಾಲಂಕಾರದ ಸ್ಪರ್ಶವಿದೆ)


ವ॥ ಅಂತು ಪೋಗುತ್ತುಂ ಮುಂದೆ ಸಾಗಿರೆ ಉಲ್ಲೋಲಕಲ್ಲೋಲವಿಲಾಸವಿಭ್ರಮದಿಂ ಕೂಡಿರ್ಪ ಸಮುದ್ರಮಂ ಕಂಡರ್- ಅದೆಂತಿರ್ದುದೆನೆ

(ಅಂತು-ಹೀಗೆ, ಪೋಗುತ್ತುಂ-ಹೋಗುತ್ತಾ, ಮುಂದೆ-ಮುಂದೆ, ಸಾಗಿರೆ-ಸಾಗಿರಲು, ಉಲ್ಲೋಲಕಲ್ಲೋಲವಿಲಾಸವಿಭ್ರಮದಿಂ-ಉಲ್ಲೋಲಕಲ್ಲೋಲವಾದ ವಿಲಾಸದ ವಿಭ್ರಮದಿಂದ (ಅಲೆಗಳು ಉಕ್ಕೇರುವುದರ ವಿಲಾಸದಿಂದ ಬೆಡಗಿನಿಂದ) ಕೂಡಿರ್ಪ-ಕೂಡಿರುವ, ಸಮುದ್ರಮಂ-ಸಮುದ್ರವನ್ನು, ಕಂಡರ್-ನೋಡಿದರು, ಅದೆಂತು-ಅದು ಹೇಗೆ ಇರ್ದುದೆನೆ-ಇದ್ದಿತ್ತು ಎನ್ನುವುದಾದರೆ-)


#ಸಮುದ್ರವರ್ಣನೆ#


ಮಾಲಿನಿ॥ ಒಳಗೊಳಗೆ ನೆಗೞ್ವಾವರ್ತದಿಂ ಮೇಲೆ ತೋರ್ವಾ

ಅಲೆಗಳೊಳಗೆ ಚಂಚದ್ರೋಚಿಯಿಂದಂತರಂಗಂ

ಸುಲಲಿತಮೆನಿಸಿರ್ದುಂ ಗೂಢಮಾಗಿಂತು ಕಾಣ್ಗುಂ

ಲಲನೆಯ ಮತಿಯಂದಂ ರೌದ್ರಮುದ್ರಂ ಸಮುದ್ರಂ॥೬॥

(ಟೀ- ಒಳಗೊಳಗೆ (ಒಳಗೆ+ಒಳಗೆ)-ಒಳಗೊಳಗೇ/ಅಂತರಂಗದಲ್ಲೇ,  ನೆಗೞ್ವ-ಹುಟ್ಟಿಕೊಳ್ಳುವ/ಮೇಲೇಳುವ, ಆವರ್ತದಿಂ-ಸುಳಿಗಳಿಂದ, ಮೇಲೆ-ಮೇಲುಗಡೆ, ತೋರ್ವಾ-ತೋರುವ/ಕಾಣಿಸಿಕೊಳ್ಳುವ, ಅಲೆಗಳೊಳಗೆ-ಅಲೆಗಳಲ್ಲಿ/ತರಂಗಗಳಲ್ಲಿ, ಚಂಚದ್ರೋಚಿಯಿಂದ(ಚಂಚತ್+ರೋಚಿ)-ಚಂಚಲವಾದ ರುಚಿ/ಕಾಂತಿಯಿಂದ, ಅಂತರಂಗಂ-ಅಂತರಂಗವು/ಒಳಗು/ಮನಸ್ಸು, ಸುಲಲಿತಂ-ಸರಳವಾದದ್ದು/ಲಲಿತವಾದದ್ದು, ಎನಿಸಿರ್ದುಂ-ಎಂದೆನಿಸಿದ್ದರೂ, ಗೂಢಂ+ಆಗಿ-ರಹಸ್ಯವಾಗಿ ಇಂತು-ಹೀಗೆ, ಸಮುದ್ರಂ-ಸಮುದ್ರವು, ಲಲನೆಯ-ಹೆಣ್ಣಿನ, ಮತಿಯಂದಂ-ಮನಸ್ಸಿನಂತೆಯೇ, ರೌದ್ರಮುದ್ರಂ-ರುದ್ರತೆಯನ್ನು/ರೌದ್ರವನ್ನು ಮುದ್ರಿಸಿಕೊಂಡಿರುವುದಾಗಿ/ ಭಯಂಕರೂಪವನ್ನೇ ಅಡಗಿಸಿಕೊಂಡಿರುವುದಾಗಿ,  ಕಾಣ್ಗುಂ-ಕಾಣುತ್ತದೆ. ಮಾಲಿನೀವೃತ್ತ.

ಇಲ್ಲಿ ಹೆಣ್ಣಿನ ಮನಸ್ಸನ್ನು ಸಮುದ್ರಕ್ಕೆ ಹೋಲಿಸಿದೆ. "ರೌದ್ರಮುದ್ರಂ ಸಮುದ್ರಂ" ಎಂಬ ಪದಪುಂಜವು ಕನ್ನಡದ ಚಂಪೂಕವಿಗಳಲ್ಲಿ ಬಹುಪ್ರಸಿದ್ಧವಾದದ್ದೇ ಆಗಿದೆ. ಕಾವ್ಯಾರಂಭದಲ್ಲಿಯೇ ಷಡಕ್ಷರಿಯೇ ಮೊದಲಾದವರು ಸಮುದ್ರವನ್ನು ವರ್ಣಿಸುತ್ತಾ ಸ್ರಗ್ಧರಾಮಹಾಸ್ರಗ್ಧರಾ ವೃತ್ತಗಳಲ್ಲಿ ಈ ಪದಪುಂಜವನ್ನು ಬಳಸುವುದನ್ನು ಕಾಣಬಹುದು. ಇಲ್ಲಿಯೂ ಕೂಡ ಅವರ ಪದ್ಯಗಳಿಗಿಂತ ಕಲ್ಪನೆಯಲ್ಲಿಯೂ ಛಂದಸ್ಸಿನಲ್ಲಿಯೂ ಭಿನ್ನವಾಗಿ ಮಾಲಿನೀವೃತ್ತದಲ್ಲಿ ಅದೇ ಪದಪುಂಜವು ಬಳಸಲ್ಪಟ್ಟಿದೆ)


ಶಾಲಿನಿ॥ ಪಾರಾವಾರಂ  ಪರ್ವದೊಳ್ ಲೋಗರಂ ಪೋ-

ಲ್ತೇರುತ್ತಾಡುತ್ತೇಗಳುಂ ಕಾಮಿಯಂದಂ

ಜಾರುತ್ತಿರ್ಕುಂ ಚಂಚಲಂ ಚೆಲ್ವಿನಿಂದಂ 

ಮಾರಾಂತಿರ್ಕುಂ ಬಾನ್ಗೆ ತಾಂ ಬಿಂಬದಂದಂ ॥೭॥

(ಟೀ- ಪಾರಾವಾರಂ-ಸಮುದ್ರವು, ಏಗಳುಂ-ಯಾವತ್ತೂ, ಪರ್ವದೊಳ್-ಹಬ್ಬದಲ್ಲಿ/ಪರ್ವಕಾಲದಲ್ಲಿ, ಲೋಗರಂ-ಜನರನ್ನು, ಪೋಲ್ತು-ಹೋಲುವಂತೆ, ಏರುತ್ತೆ-ಏರುತ್ತಾ, ಆಡುತ್ತೆ-ಆಡುತ್ತಾ,  ಕಾಮಿಯಂದಂ-ಕಾಮಿಗಳಂತೆ, ಚಂಚಲಂ-ಚಂಚಲವಾಗಿ, ಜಾರುತ್ತಿರ್ಕುಂ-ಜಾರುತ್ತಾ ಇದೆ, ಚೆಲ್ವಿನಿಂದಂ-ಚೆಲುವಿನಿಂದ/ಸೌಂದರರ್ಯದಿಂದ, ಬಾನ್ಗೆ-ಆಕಾಶಕ್ಕೆ, ತಾಂ-ತಾನು, ಬಿಂಬದಂದಂ-ಪ್ರತಿಬಿಂಬದಂತೆ, ಮಾರಾಂತಿರ್ಕುಂ-ಪ್ರತಿಸ್ಪರ್ಧಿಯಾಗಿದೆ/ಎದುರು ನಿಂತಿದೆ. ಶಾಲಿನೀವೃತ್ತ)


ಕಂ॥ ಸುರುಚಿರವಾರುಣಿಯಂ ತಾಂ

ಭರದಿಂದೀಂಟಿರ್ಪರಂತೆ ಪರಿಪರಿಯಿಂದಂ

ಪೊರಳಾಡುತೆ ಪುರುಳಿಲ್ಲದೆ

ನೊರೆಯಂ ಮೇಣುಗುಳಿದತ್ತು ನೋಡೆ ಸಮುದ್ರಂ ॥೮॥

(ಟೀ-ಸಮುದ್ರಂ-ಸಮುದ್ರವು, ನೋಡೆ-ನೋಡಲು,  ಸುರುಚಿರ-ವಾರುಣಿಯಂ-ಚೆನ್ನಾಗಿರುವ ಮದ್ಯವನ್ನು, ತಾಂ-ತಾನು, ಭರದಿಂದೆ-ಬೇಗದಲ್ಲಿ, ಈಂಟಿರ್ಪರಂತೆ-ಕುಡಿದಿರುವವರಂತೆ, ಪರಿಪರಿಯಿಂದಂ-ವಿಧವಿಧವಾಗಿ , ಪುರುಳಿಲ್ಲದೆ-ಅರ್ಥವಿಲ್ಲದೇ, ಪೊರಳಾಡುತೆ-ಹೊರಳಾಡುತ್ತ,  ನೊರೆಯಂ-ನೊರೆಯನ್ನು, ಮೇಣ್-ಮತ್ತೆ, ಉಗುಳಿದತ್ತು-ಉಗುಳುತ್ತಿತ್ತು. ಕಂದಪದ್ಯ)

ಸ್ರ॥ ಎನ್ನಿಂದಂ ಪುಟ್ಟಿತೆಲ್ಲಂ ಜಗದೆ ಮೆರವುದೀ ಬಲ್ಮೆವೆತ್ತಿರ್ಪ ಸಂಪ-

ತ್ತೆನ್ನಿಂದಂ ಚಂದ್ರನುಂ ವಾರುಣಿಯುಮಮೃತಮುಂ ವಾಜಿಯುಂ ಹಸ್ತಿಯುಂ ಮೇ

ಣೆನ್ನುತ್ತೇಗಳ್ ವಿಕತ್ಥಿಪ್ಪನೆ ಕುಣಿದಪನೈ ಕಾರಣಂ ಮಾಜುತಿರ್ಪಂ

ಮುನ್ನಂ ಮಂಥಾನದೊಳ್ ಮಂದರಗಿರಿಚಲಿತಕ್ಷೋಭೆಯಿರ್ಪಂ ಸಮುದ್ರಂ ॥೯॥

(ಟೀ-ಎನ್ನಿಂದಂ-ನನ್ನಿಂದಲೇ, ಜಗದೆ-ಜಗತ್ತಿನಲ್ಲಿ, ಮೆರವುದೀ-ಮೆರೆಯುತ್ತಿರುವ ಈ, ಬಲ್ಮೆವೆತ್ತಿರ್ಪ-ಬಲ್ಮೆಯನ್ನು ಹೊಂದಿರುವ/ಶಕ್ತವಾದ, ಸಂಪತ್ತು-ಲಕ್ಷ್ಮಿಯು/ಧನವು/ಐಶ್ವರ್ಯವು, ಎಲ್ಲಂ-ಎಲ್ಲವೂ, ಪುಟ್ಟಿತು-ಹುಟ್ಟಿತು,  ಎನ್ನಿಂದಂ-ನನ್ನಿಂದಲೇ, ಚಂದ್ರನುಂ-ಚಂದ್ರನೂ, ವಾರುಣಿಯುಂ-ವಾರುಣಿಯೆಂಬ ಮದ್ಯವೂ, ಅಮಮೃತಮುಂ-ಅಮೃತವೂ, ವಾಜಿಯುಂ-ಕುದುರೆಯೂ, ಹಸ್ತಿಯುಂ-ಆನೆಯೂ, ಮೇಣ್-ಮತ್ತೆ, (ಎಲ್ಲಂ ಪುಟ್ಟಿದವು-ಎಲ್ಲವೂ ಹುಟ್ಟಿದವು) ಎನ್ನುತ್ತೆ-ಎನ್ನುತ್ತಾ, ಏಗಳ್-ಯಾವಾವಗಳೂ, ವಿಕತ್ಥಿಪ್ಪನೆ-ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವವನು/ಬಡಾಯಿ ಕೊಚ್ಚಿಕೊಳ್ಳುವವನು,  ಕುಣಿದಪನೈ-ಕುಣಿಯುತ್ತಿದ್ದನು, ಮುನ್ನಂ-ಹಿಂದೆ, ಮಂಥಾನದೊಳ್-ಸಮುದ್ರಮಥನದಲ್ಲಿ/ಸಮುದ್ರವನ್ನು ಕಡೆದಾಗ, ಮಂದರಗಿರಿಚಲಿತಕ್ಷೋಭೆಯಿರ್ಪಂ-(ಕಡಗೋಲಾದ) ಮಂದರಗಿರಿಯು ಚಲಿಸುವಾಗ ಉಂಟಾಗಿರುವ ಕ್ಷೋಭೆ/ಚಂಚಲತೆ ಇರುವಂತಹವನು, ಸಮುದ್ರಂ-ಸಮುದ್ರನು, ಕಾರಣಂ-ನಿಜವಾದ ಕಾರಣವನ್ನು, ಮಾಜುತಿರ್ಪಂ-ಮರೆಮಾಚುತ್ತಿದ್ದಾನೆ. ಸ್ರಗ್ಧರಾ ವೃತ್ತ.

ತನ್ನಿಂದಲೇ ಚಂದ್ರನೂ, ಸಂಪತ್ತೂ, ಅಮೃತವೂ, ಅಶ್ವಹಸ್ತಿಗಳೂ ಎಲ್ಲವೂ ಹುಟ್ಟಿದವು ಎಂದು ಬಡಾಯಿಕೊಚ್ಚಿಕೊಳ್ಳುತ್ತ ಕುಣಿಯುತ್ತಿದ್ದಾನೆ ಈ ಸಮುದ್ರ, ಆದರೆ ನಿಜವಾದ ಕಾರಣ ಮಂದರಪರ್ವತ ಸಮುದ್ರವನ್ನು ಕಡೆಯುವಾಗ ಆದ ಕಲ್ಲೋಲದಿಂದ ಅವನು ಹಾಗೆ ಉಕ್ಕೇರುತ್ತಿರುವುದಷ್ಟೇ, ಅದನ್ನು ಅವನು ಮರೆಮಾಚುತ್ತಿದ್ದಾನೆ ಎಂದು ಪದ್ಯದ ತಾತ್ಪರ್ಯ.)


ರಗಳೆ॥

ತುಂಬಿ ಬರ್ಪ ತೊರೆಗಳಿಂ ನೆಗೞ್ದು ಮೊರೆವ ನೀರ್ಗಳಿಂ

ಪಲವು ಕಾಡ ಪೊಳೆಗಳಿಂ ವಿಶಾಲಮಾದ ನದಿಗಳಿಂ

ತೇಲಿ ಬರ್ಪ ಕಾಯ್ಗಳಿಂ ಮುಳುಂಗಿ ಬರ್ಪ ಮೀನ್ಗಳಿಂ

ತಟದಿನೆಯ್ದ ಮಣ್ಗಳಿಂ ಜಗುಳ್ವ ತೋರ ಕಲ್ಗಳಿಂ

ಪರಿದು ಬೀಳ್ವ ಲತೆಗಳಿಂ ಸಮೂಲಮಾದ ಮರಗಳಿಂ

ಒಡೆಯನಿರದ ಪೆಣಗಳಿಂ ಮಲರ್ದ ಚೆಲ್ವ ಪೂಗಳಿಂ

ಮೆಯ್ಯ ತುಂಬಿಕೊಳ್ಳುತುಂ ಗಭೀರಮಾಗಿ ಬೀಗುತುಂ

ತೆರೆಗಳಿಂದೆ ಮುಚ್ಚುತುಂ ಪ್ರಶಾಂತತೆಯನೆ ಕೊಲ್ಲುತುಂ

ಜಗದ ಜಡಮನೆಲ್ಲಮಂ ಸಮಸ್ತಜೀವನಿಚಯಮಂ

ತಡೆಯೆವರ್ಪ ಬನ್ನಮಂ ಕರಂಗಿಸುತ್ತೆ ಸರ್ವಮಂ

ನುಂಗಿ ನೊಣೆವ ಪಾಂಗಿನಿಂ ಭಯಂಗೊಳಿಪ್ಪ ಕೂಗಿನಿಂ

ಮೆರೆದುದಲ್ಲಿ ಬಲ್ಮೆಯಿಂ ಸಮುದ್ರಮೆಂಬ ಖ್ಯಾತಿಯಿಂ ॥೧೦॥

(ಟೀ-ತುಂಬಿಕೊಂಡು ಬರುವ ಹಳ್ಳಗಳಿಂದ, ಹೆಚ್ಚಾಗಿ ಶಬ್ದಮಾಡುತ್ತಿರುವ ನೀರುಗಳಿಂದ, ಹಲವಾರು ಕಾಡಿನ ಹೊಳೆಗಳಿಂದ, ವಿಶಾಲವಾದ ನದಿಗಳಿಂದ, ತೇಲಿಕೊಂಡು ಬರುವ ಕಾಯಿಗಳಿಂದ(ತೆಂಗು ಮೊದಲಾದ ಕಾಯಿಗಳು ಸಮುದ್ರಕ್ಕೆ ಸೇರಿಕೊಂಡು ತೇಲುತ್ತಿರುವುದು) ಮುಳುಗಿಕೊಂಡು ಬರುವ ಮೀನುಗಳಿಂದ, ದಡದಿಂದ ಕೊಚ್ಚಿಕೊಂಡು ಬರುವ ಮಣ್ಣುಗಳಿಂದ, ಜಾರಿ ಬರುತ್ತಿರುವ ಕಲ್ಲುಗಳಿಂದ, ಹರಿದು ಬೀಳುವ ಬಳ್ಳಿಗಳಿಂದ, ಬೇರಿನಿಂದ ಕೂಡಿಕೊಂಡೇ ಬರುವ ಮರಗಳಿಂದ, ಅನಾಥವಾದ ಶವಗಳಿಂದ, ಅರಳಿಕೊಂಡು ಬರುವ ಚೆಲುವಾದ ಹೂವುಗಳಿಂದ ತನ್ನ ಮೈಯನ್ನು ತುಂಬಿಕೊಳ್ಳುತ್ತಾ, ಆಳವಾಗುತ್ತ ಬೀಗುತ್ತಾ, ಅಲೆಗಳಿಂದ ಅವನ್ನೆಲ್ಲವನ್ನೂ ಮುಚ್ಚುತ್ತಾ, ಶಾಂತತೆಯನ್ನು ಕೊಲ್ಲುತ್ತಾ,ಜಗತ್ತಿನ ಎಲ್ಲ ಜಡವನ್ನೂ(ನೀರನ್ನೂ) ಸಮಸ್ತಜೀವಿಗಳ ಗುಂಪನ್ನೂ, ತಡೆಯಲು ಬರುವ ಕಷ್ಟವನ್ನೂ ಎಲ್ಲವನ್ನೂ ಕರಗಿಸುತ್ತಾ, ನುಂಗಿ ನೊಣೆಯುವ ಹಾಗೆಯೇ, ಭಯವನ್ನುಂಟು ಮಾಡುವ ಕೂಗಿನಿಂದ(ಮೊರೆತದಿಂದ) ಅಲ್ಲಿ ಸಮುದ್ರವೆಂಬ ಖ್ಯಾತಿಯನ್ನು ಹೊಂದಿರುವ ಇದು ಬಲ್ಮೆಯಿಂದ(ಹೆಚ್ಚುಗಾರಿಕೆಯಿಂದ) ಮೆರೆಯುತ್ತಿತ್ತು.

ಉತ್ಸಾಹಗತಿಯ ರಗಳೆ; ಸುಲಭವಾಗಿ ಅನ್ವಯವಾಗುವ ಕಾರಣ ಪದಪದಶಃ ಅರ್ಥವನ್ನು ವಿವರಿಸಿಲ್ಲ. ಈ ರೀತಿಯ ರಗಳೆಯಲ್ಲಿ ಪಂಪ-ನಾಗವರ್ಮ ಮೊದಲಾದ ಕವಿಗಳ ಕಾವ್ಯಗಳಲ್ಲಿ ಕೆಲವು ಕಡೆ ಅಂತ್ಯಪ್ರಾಸವು ಮಾತ್ರ ಕಾಣುತ್ತದೆ. ಅದನ್ನೇ ಇಲ್ಲೂ ಅನುಸರಿಸಿದೆ. ರಗಳೆಯ ಕವಿಯೆಂದೇ ಪ್ರಸಿದ್ಧವಾದ ಹರಿಹರನೇ ಮೊದಲಾದ ಕೆಲವು ಕವಿಗಳಲ್ಲಿ ಆದಿಪ್ರಾಸವೂ ಅಂತ್ಯಪ್ರಾಸವೂ ಇರುವುದನ್ನೂ ಕಾಣಬಹುದು.)


ಬಡಬಾಗ್ನಿಯಡಿಗಿರಲ್ ಮೇಲೆ ವಿಸ್ತಾರದಿಂ

ನೀಲಗೋಲಕಮಾದ ಪಾತ್ರೆಯಂ ಚಂದದಿಂ

ಬೋನಮಂ ಬೇಯಿಸಲ್ಕಿಟ್ಟಂತೆ ತಾನಿಟ್ಟು

ಕುದಿಯಲ್ಕೆ ಮುನ್ನಮೊಳ್ನೀರನೇ ತುಂಬಿಟ್ಟು

ಬಹುವಿಧದ ಜೀವಿಗಳನದರೊಳ್ ಮುಳುಂಗಿಪಂ

ವಿಧಿಯೆಂಬ ಬಾಣಸಿಗನೆಲ್ಲರಂ ಕೊರಗಿಪಂ

ಉರ್ಕೇರೆ ತೆರೆಗಳುಂ ಸೊರ್ಕೇರೆ ಸಾಗರಂ

ಕಡೆಗಾಲಕೆಯ್ದಿರ್ಪ ರವಿಗೆ ತಾನಾಗರಂ

ರತ್ನಾಕರಂ ನಾನೆ ವಸುಧೆ ಮೇಣೆನ್ನಿಂದೆ

ಪಡೆದುದೆಲ್ಲಮನೆಂದು ಬೀಗುತಿರೆ ಮದದಿಂದೆ

ಚಂಡಮಾರುತಮತ್ತಣಿಂ ಬೀಸಿ ಬರುತಿರಲ್

ತೊಂಡಾಗಿ ಕನಲಿ ಪಡಿಯಾಗಿ ಪೋರುತ್ತಿರಲ್

ಬಾನೆತ್ತರಕೆ ಚಿಮ್ಮಿ ಪಾತಾಳದೆಡೆಗಿಳಿದು

ಸೋಲ್ತುದೆಂಬಂದದಿಂ ಪಟಪಟನೆ ಕೈಮುಗಿದು

ಪರಿಚರಿಸುತಿರ್ಪವೊಲ್ ತೆರೆಗಯ್ಯ ಬಿತ್ತರಿಸಿ

ಪೂಗಳಂ ಸುರಿವವೊಲ್ ನೊರೆಗಳಂ ಸಲೆ ಸೃಜಿಸಿ

ಪಿಂತೆೞ್ದುವಂದಲೆಗಳುಂ ತಲೆಯ ಬಾಗಿಸುತೆ

ಎರಗಿ ಮತ್ತೆಲ್ಲಮುಂ ಪಿಂದಕಡಿಗಳನಿಡುತೆ

ಸಾಗಿದಂದದೆ ಸಾಗರಂ ತೋರುತಿರ್ಪನೈ

ಬಲಶಾಲಿಗರಿಯಾಗದೆಯೆ ಬರ್ದುಂಕಿರ್ಪನೈ॥೧೧॥

(ಟೀ-ಸಮುದ್ರದ ಅಡಿಯಲ್ಲಿ ಬಡಬಾಗ್ನಿ ಇರಲು, ಮೇಲೆ ವಿಸ್ತಾರದಿಂದ ನೀಲವಾದ ಗೋಳವಾದ ಪಾತ್ರೆಯನ್ನು ಅನ್ನವನ್ನು ಬೇಯಿಸಲೋ ಎಂಬಂತೆ ಇಟ್ಟು, ಕುದಿಸುವುದಕ್ಕೋಸ್ಕರವಾಗಿ ಮೊದಲು ಒಳ್ಳೆಯ ನೀರನ್ನೇ ತುಂಬಿಸಿಟ್ಟು, ಬಹಳಷ್ಟು ವಿಧವಾದ ಜೀವಿಗಳನ್ನು ಅದರಲ್ಲಿ ಮುಳುಗಿಸಿ, ವಿಧಿ/ಬ್ರಹ್ಮ ಎಂಬಂತಹ ಬಾಣಸಿಗ ಎಲ್ಲರನ್ನೂ ಕೊರಗಿಸುತ್ತಿದ್ದಾನೆ. ತೆರೆಗಳು ಉಕ್ಕೇರುತ್ತಿರಲು, ಸಾಗರವು ಸೊಕ್ಕಿನಿಂದ ಏರುತ್ತಿರಲು, ತನ್ನ ಅಂತ್ಯಕಾಲಕ್ಕೆ ಬಂದಿರುವ(ಸಾಯುತ್ತಿರುವ) ಸೂರ್ಯನಿಗೆ ತಾನು ಆಗರವಾಗಿ, ಎಲ್ಲ ರತ್ನಗಳನ್ನೂ ತನ್ನೊಳಗೇ ಇಟ್ಟುಕೊಂಡಿದ್ದ ರತ್ನಾಕರನು ತಾನು, ಭೂಮಿ (=ವಸುಧೆ-ವಸು/ಸಂಪತ್ತನ್ನು ಧರಸಿದವಳು) ತನ್ನಿಂದಲೇ ಎಲ್ಲವನ್ನೂ ಪಡೆದುಕೊಂಡಿರುವುದು ಎಂದು ಮದದಿಂದ ಬೀಗುತ್ತಾ, ಚಂಡಮಾರುತವು ಒಂದು ಕಡೆಯಿಂದ ಬೀಸಿ ಬರುತ್ತಿರುವಾಗ, ಉಗ್ರವಾಗಿ, ಕೂಗಿಕೊಂಡು, ಅದಕ್ಕೆ ಪ್ರತಿಯಾಗಿ ಹೋರಾಡುತ್ತಿರಲು, ಆಕಾಶದೆತ್ತರಕ್ಕೆ ಚಿಮ್ಮಿ, ಪಾತಾಳದ ಆಳಕ್ಕೆ ಇಳಿದು, ಸೋತಿದ್ದೇನೆ ಎಂದು ಪಟಪಟನೆ ಕೈಮುಗಿಯುತ್ತಾ, ಸುತ್ತ ಓಡಾಡುತ್ತಿರುವಂತೆ, ತೆರೆಗಳೆಂಬ ಕೈಗಳನ್ನು ವಿಸ್ತಾರವಾಗಿ ಮಾಡಿ, ಹೂವುಗಳನ್ನು ಸುರಿಯುತ್ತಿರುವ ಹಾಗೆಯೇ, ನೊರೆಯನ್ನು ಸೃಷ್ಟಿಸಿ, ಹಿಂದೆ ಎದ್ದು ಬಂದ ಅಲೆಗಳೂ ತಲೆಯನ್ನು ಬಾಗಿಸುತ್ತಾ, ನಮಸ್ಕರಿಸುತ್ತಾ, ಮತ್ತೆ ಎಲ್ಲವೂ ಹಿಂದಕ್ಕೆ ಹಿಂದಕ್ಕೆ ಹಜ್ಜೆಯನ್ನು ಇಡುತ್ತಾ ಸಾಗುತ್ತಿರುವಂತೆ ಸಾಗರನು ತೋರುತ್ತಿದ್ದನು. ಬಲಶಾಲಿಗಳಿಗೆ ಶತ್ರುವಾಗದೆಯೇ ಬದುಕಿದ್ದನು.

ಲಲಿತರಗಳೆ ಎಂದು ಪ್ರಸಿದ್ಧವಾದ ಪಂಚಮಾತ್ರಾಗತಿಯ ರಗಳೆ)


ವ॥ಅಂತಿರೆ

(ಹಾಗಿರಲು)


ಕಂ॥ ಕಡಲಿನ ಮೊರೆತಮನಾಲಿಸು

ತಡಿಯಿಡುತುಂ ರಮ್ಯಮಾದ ದೃಶ್ಯಂಗಳನೇ

ಪಡಿಯಾಗಿ ತೋರ್ಪ ಪರಿಯಂ

ತಡಿಯಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೨॥

(ಟೀ- ಕಡಲಿನ-ಸಮುದ್ರದ, ಮೊರೆತಮಂ-ಶಬ್ದವನ್ನು, ಆಲಿಸುತೆ-ಕೇಳುತ್ತಾ, ಅಡಿಯಿಡುತುಂ-ಹಜ್ಜೆಯನ್ನು ಇಡುತ್ತಾ, ರಮ್ಯಮಾದ-ಸುಂದರವಾದ, ದೃಶ್ಯಂಗಳನೇ-ದೃಶ್ಯಗಳನ್ನು, ಪಡಿಯಾಗಿ-ಪ್ರತಿಯಾಗಿ, ತೋರ್ಪ-ತೋರುವ, ಪರಿಯಂ-ಪರಿಯನ್ನು/ವಿಧವನ್ನು, ತಡಿಯಿಂ-ದಡದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ)


ಅಸುರರ್ಗಾಶ್ರಯಮಿತ್ತಿಂ

ದು ಸುರರ್ಗಮರ್ದಿತ್ತನೀ ತಟಸ್ಥನೆನುತ್ತುಂ

ರಸಧಿಯ ತಟಸ್ಥರೆನೆ ಬೆ

ಕ್ಕಸದಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೩॥

(ಟೀ- ಅಸುರರ್ಗೆ-ರಾಕ್ಷಸರಿಗೆ, ಆಶ್ರಯಂ+ಇತ್ತು-ಆಶ್ರಯವನ್ನು ಕೊಟ್ಟು, ಇಂದು-ಇಂದು,  ಸುರರ್ಗೆ-ದೇವತೆಗಳಿಗೆ, ಈ ತಟಸ್ಥಂ-ಈ ತಟಸ್ಥನಾದ ಸಮುದ್ರನು (ಪಕ್ಷಪಾತವಿಲ್ಲದವನು) ಅಮರ್ದು+ಇತ್ತಂ-ಅಮೃತವನ್ನು ಕೊಟ್ಟನು,  ಎನುತ್ತುಂ-ಎನ್ನುತ್ತಾ, ರಸಧಿಯ-ಸಮುದ್ರದ, ತಟಸ್ಥರ್-ದಡದಲ್ಲಿರುವವರು, ಎನೆ-ಎನ್ನಲು, ಬೆಕ್ಕಸದಿಂ-ಆಶ್ಚರ್ಯದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ)


ಅಂದು ವರಾಹದ ಸದ್ರೂ

ಪಿಂದಂ ಹರಿಯಿಳೆಯ ತರ್ಪೊಡಾದುಲ್ಲೋಲಂ

ಸಂದುದು ನಿರುತಮೆನುತ್ತುಂ

ಚಂದದೆ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೪॥

(ಟೀ-ಅಂದು-ಆ ದಿನ, ವರಾಹದ-ವರಾಹಾವತಾರದಲ್ಲಿ, ಸದ್ರೂಪಿಂದಂ-ಒಳ್ಳೆಯ ರೂಪದಿಂದ, ಹರಿಯು-ಶ್ರೀಮನ್ನಾರಾಯಣನು, ಇಳೆಯ-ಭೂಮಿಯನ್ನು, ತರ್ಪೊಡೆ-ತರುವಾಗ, ಆದ- ಆಗಿರುವ, ಉಲ್ಲೋಲಂ-ಅಲೆಗಳು,ನಿರುತಂ-ಸದಾಕಾಲ, ಸಂದುದು-ಸಲ್ಲುತ್ತಿವೆ, ಎನುತ್ತುಂ-ಎನ್ನುತ್ತಾ, ಚಂದದೆ-ಚಂದದಿಂದ,ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ )


ತಳಮಂ ಕಾಂಬೆನೆನೆ ರಸಾ

ತಳಮಂ ಕಂಡಲ್ಲಿ ವಾರ್ಧಿಯಿರ್ಪುದೆನುತ್ತುಂ

ಬಲದಿಂದತ್ರಿಯೆನಲ್ ಪಂ

ಬಲದಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೫॥

(ಟೀ-ತಳಮಂ-(ಸಮುದ್ರದ)ತಳವನ್ನು/ಕೊನೆಯನ್ನು, ಕಾಂಬೆಂ+ಎನೆ-ನೋಡುತ್ತೇನೆ ಎಂದು, ರಸಾತಳಮಂ-ರಸಾತಳವನ್ನು, ಕಂಡು+ಅಲ್ಲಿ-ನೋಡಿ ಅಲ್ಲಿ, ವಾರ್ಧಿಯು-ಸಮುದ್ರವು, ಇರ್ಪುದು-ಇದೆ, ಎನುತ್ತುಂ-ಎನ್ನುತ್ತಾ, ಬಲದಿಂದೆ-ತನ್ನ ಬಲದಿಂದ/ಶಕ್ತಿಯಿಂದ, ಅತ್ರಿಯು-ಅತ್ರಿ ಮಹರ್ಷಿಯು, ಎನಲ್-ಹೇಳಲು, ಪಂಬಲದಿಂ-ಹಂಬಲದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ. "ತಳಮಂ...ರಸಾತಳಮಂ" ಎಂಬಲ್ಲಿ ಹಾಗೂ "ಬಲದಿಂ...ಪಂಬಲದಿಂ" ಎಂಬ ಲ್ಲಿ ಪಾದದ ಆದಿಯಲ್ಲಿ ಯಮಕಾಲಂಕಾರವಿದೆ. ಮುಂದಿನ ಮೂರು ಪದ್ಯಗಳಲ್ಲೂ ಈ ಯಮಕಪ್ರಭೇದವು ಬಳಸಲ್ಪಟ್ಟಿದೆ)


ನಡುಗಡ್ಡೆಗಳೋ ಮೆರೆವವು

ನಡುಗಲ್ಕಾಶ್ರಯಮನಾಂತ ಮೈನಾಕಮೊ ಸೋ

ಲ್ತಡಿಯಿಟ್ಟನೆಂದು ನುಡಿಯುತೆ 

ತಡಿಯಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೬॥

(ಟೀ-ಮೆರೆವವು-ಮೆರೆಯುತ್ತಿರುವವು, ನಡುಗಡ್ಡೆಗಳೋ-ದ್ವೀಪಗಳೋ, (ಅಥವಾ) ನಡುಗಲ್ಕೆ- ನಡುಗುತ್ತಿರಲು/ಕಂಪಿಸುತ್ತಿರಲು, ಆಶ್ರಯಮಂ+ಆಂತ-ಆಶ್ರಯವನ್ನು ಹೊಂದಿದ/ಮೊರೆಹೊಕ್ಕ, ಮೈನಾಕಮೊ-ಮೈನಾಕವೆಂಬ ಪರ್ವತವೋ, ಸೋಲ್ತು-ಸೋತು, ಅಡಿಯಿಟ್ಟಂ- ಕಾಲನ್ನು ಇಟ್ಟನು, ಎಂದು-ಹೀಗೆಂದು, ನುಡಿಯುತೆ-ಹೇಳುತ್ತಾ, ತಡಿಯಿಂ-ದಡದಿಂದ, ನೋಡುತ್ತೆ-ನೋಡುತ್ತ,ಇರ್ವರ್-ಇಬ್ಬರೂ, ಸತಿಯರ್-ಸತಿಯರು,ಬಂದರ್-ಬಂದರು. ಕಂದಪದ್ಯ. ನಡುಗಡ್ಡೆ.... ನಡುಗಲ್, ಸೋಲ್ತಡಿಯಿಟ್ಟ..ತಡಿಯಿಂ ಎಂಬಲ್ಲಿ ಯಮಕಾಲಂಕಾರವಿದೆ)


ನಗಮಂ ಮರೆಮಾಜಲ್ ತ-

ನ್ನಗಮಂ ಗುರುಸೇವೆಯಿಂದೆ ಕಳೆದಪೆನೆನುತಿ-

ಬ್ಬಗೆಯಿಂದಲೆಗೆಯ್ದಪನಂ

ಬಗೆಯಿಂದರಱಿಯುತ್ತೆ ಬಂದರಿರ್ವರ್ ಸತಿಯರ್ ॥೧೭॥

(ಟೀ-ನಗಮಂ-ಪರ್ವತವನ್ನು, ಮರೆಮಾಜಲ್-ಅಡಗಿಸಿಡಲು, ತನ್ನ-(ಸಮುದ್ರದ) ಅಗಮಂ-ಪಾಪವನ್ನು, ಗುರುಸೇವೆಯಿಂದೆ-ಹಿರಿಯರ ಸೇವೆಯಿಂದ, ಕಳೆದಪೆಂ-ಕಳೆದುಕೊಳ್ಳುತ್ತೇನೆ, ಎನುತೆ-ಎಂದುಕೊಳ್ಳುತ್ತಾ, ಇಬ್ಬಗೆಯಿಂದೆ- ಎರಡು ಮನಸ್ಸಿನಿಂದ, ಅಲೆಗೆಯ್ದಪನಂ- ಅಲೆಗಳನ್ನು ಉಂಟು ಮಾಡುತ್ತಿರುವವನನ್ನು, ಬಗೆಯಿಂದೆ-ಮನಸ್ಸಿನಿಂದ, ಅಱಿಯುತ್ತೆ-ತಿಳಿದುಕೊಳ್ಳುತ್ತ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ಬಂದರ್-ಬಂದರು. ಕಂದಪದ್ಯ. ನಗಮಂ.. ತನ್ನಗಮಂ.. ಇಬ್ಬಗೆಯಿಂ.. ಬಗೆಯಿಂ.. ಎಂಬಲ್ಲಿ ಯಮಕಾಲಂಕಾರವಿದೆ)


ಗಣಿಸಲ್ ವಿಚಿತ್ರರತ್ನದ

ಗಣಿ ಸಲ್ವಂ ವಾಹಿನೀಪನೀತನಮೂಲ್ಯಂ

ಮಣಿಯುತಗರ್ಭನೆನುತ್ತುಂ

ಮಣಿಯುತೆ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೮॥

(ಟೀ-ಗಣಿಸಲ್-ಲೆಕ್ಕ ಹಾಕಿದರೆ/ಆಲೋಚಿಸಿದರೆ, ವಿಚಿತ್ರರತ್ನದ-ಆಶ್ಚರ್ಯಜನಕವಾದ ರತ್ನಗಳ, ಗಣಿ-ಆಗರ/ಖನಿ,  ಸಲ್ವಂ-ಸಲ್ಲುತ್ತಿರುವ, ವಾಹಿನೀಪಂ-ನದಿಗಳ ಒಡೆಯನಾದ ಸಮುದ್ರನು, ಈತಂ-ಈತನು, ಅಮೂಲ್ಯಂ-ಅಮೂಲ್ಯನಾದವನು/ಬೆಲೆಕಟ್ಟಲಾಗದವನು/ಬಹಳ ಬೆಲೆಯುಳ್ಳವನು, ಮಣಿಯುತಗರ್ಭಂ-ರತ್ನಮಣಿಗಳಿಂದ ಕೂಡಿದ ಗರ್ಭವನ್ನು ಉಳ್ಳವನು (ಗರ್ಭದಲ್ಲಿ ಮುತ್ತು ರತ್ನಗಳನ್ನು ಹೊಂದಿರುವವನು) ಎನುತ್ತುಂ-ಎನ್ನುತ್ತಾ, ಮಣಿಯುತೆ-ಅವನಿಗೆ ನಮಸ್ಕರಿಸುತ್ತಾ, ನೋಡುತ್ತೆ-ನೋಡುತ್ತಾ ಇರ್ವರ್-ಇಬ್ಬರೂ, ಸತಿಯರ್-ಸತಿಯರು, ಬಂದರ್-ಬಂದರು. ಕಂದಪದ್ಯ. ಗಣಿಸಲ್... ಗಣಿ ಸಲ್ವಂ... ಮಣಿಯುತಗರ್ಭ.. ಮಣಿಯುತೆ.. ಇಲ್ಲಿ ಯಮಕಾಲಂಕಾರವಿದೆ.)


ವ॥ ಅಂತು ಮುಂ ಬರುತಿರೆಯಿರೆ

(ಅಂತು-ಹಾಗೆ, ಮುಂ-ಮುಂದೆ, ಬರುತೆ+ಇರೆ+ಇರೆ-ಬರುತ್ತಿರಲು)


ಚಂ॥ ಕೊರಲನೆ ಕೊಂಕುಗೆಯ್ಯುತೆ ಪದಂಗಳನೆತ್ತಿ ನೆಗೞ್ದು ಚಿಮ್ಮುತುಂ

ಭರದೆ ನಿಮಿರ್ಚುತುಂ ಕಿವಿಗಳಂ ಪಸುರ್ವುಲ್ಗಳನೊಲ್ದು ತಿನ್ನುತುಂ

ಗೊರಸಿನೊಳಲ್ಲಿ ಬೇಗದೆ ಬೆಱಂಟುತೆ ಚಂಚಲಮಾದ ಚರ್ಯೆಯಿಂ

ಪೆಱೆಗೆಣೆಯಾದ ಬಣ್ಣದೊಳಗಿರ್ದುದು ವಾಜಿಯದೋ ಸುರೇಂದ್ರನಾ ॥೧೯॥

(ಟೀ- ಅದೋ-ಅದೋ, ಸುರೇಂದ್ರನಾ-ದೇವೆಂದ್ರನ ಆ, ವಾಜಿಯು-ಕುದುರೆಯು  (ಉಚ್ಚೈಶ್ರವಸ್ಸು), ಕೊರಲನೆ-ಕೊರಳನ್ನು/ಕುತ್ತಿಗೆಯನ್ನು, ಕೊಂಕುಗೆಯ್ಯುತೆ-ವಕ್ರವಾಗಿಸುತ್ತ/ಡೊಂಕಾಗಿಸುತ್ತ, ಪದಂಗಳಂ-ಕಾಲುಗಳನ್ನು, ಎತ್ತಿ ನೆಗೞ್ದು-ಮೇಲೆತ್ತಿ ಚೆನ್ನಾಗಿ, ಚಿಮ್ಮುತುಂ- ಜಿಗಿಯುತ್ತಾ, ಭರದೆ-ಬೇಗದಲ್ಲಿ, ಕಿವಿಗಳಂ-ತನ್ನ ಕಿವಿಗಳನ್ನು, ನಿಮಿರ್ಚುತುಂ-ನಿಗುರಿಸುತ್ತಾ/ನಿಮಿರಿಸಿಕೊಂಡು, ಪಸುರ್ವುಲ್ಗಳಂ-ಹಸುರು ಹುಲ್ಲುಗಳನ್ನು, ಒಲ್ದು-ಒಲಿದು, ತಿನ್ನುತುಂ-ತಿನ್ನುತ್ತಾ, ಗೊರಸಿನೊಳ್-ತನ್ನ ಕಾಲಿನ ಗೊರಸಿನಲ್ಲಿ, ಅಲ್ಲಿ-ಆ ಸ್ಥಳದಲ್ಲಿ, ಬೇಗದೆ-ವೇಗದಲ್ಲಿ, ಬೆಱಂಟುತೆ-ನೆಲವನ್ನು ಕೆದರುತ್ತಾ/ಪೆರಟುತ್ತಾ, ಚಂಚಲಂ+ಆದ-ಚಾಂಚಲ್ಯದಿಂದ ಕೂಡಿದ, ಚರ್ಯೆಯಿಂ-ನಡತೆಯಿಂದ, ಪೆಱೆಗೆ-ಚಂದ್ರನಿಗೆ, ಎಣೆಯಾದ-ಸಮಾನವಾದ, ಬಣ್ಣದೊಳಗೆ- ಬಣ್ಣದಲ್ಲಿ ಇರ್ದುದು-ಇತ್ತು, ಚಂಪಕಮಾಲಾವೃತ್ತ)


ವ॥ಅದನೀಕ್ಷಿಸಲ್ಕೆ ಕದ್ರುವುಂ ವಿನತೆಯುಂ ಸ್ತುತಿಸಿದರ್

(ಅದಂ-ಅದನ್ನು, ಈಕ್ಷಿಸಲ್ಕೆ-ನೋಡುವುದಕ್ಕೆ, ಕದ್ರುವುಂ-ಕದ್ರುವೂ, ವಿನತೆಯುಂ-ವಿನತೆಯೂ, ಸ್ತುತಿಸಿದರ್-ಸ್ತುತಿ ಮಾಡಿದರು-)

ಶ್ಲೋ॥ ವಿಶ್ವವಿಖ್ಯಾತಮಾಗಿರ್ಪೈ ಶಾಶ್ವತರ್ ಮೆಚ್ಚಿ ಕೊಂಡಿರಲ್

ಅಶ್ವ!ದರ್ಶನಮೀಯೈ ನೀಂ ನಶ್ವರರ್ಗೆ ದಯಾಪರಾ॥೨೦॥

(ಟೀ-ಶಾಶ್ವತರ್-ಶಾಶ್ವತರು/ದೇವತೆಗಳು, (ನಿನ್ನನ್ನು) ಮೆಚ್ಚಿಕೊಂಡಿರಲ್-ಮೆಚ್ಚಿಕೊಂಡಿರಲು, ವಿಶ್ವವಿಖ್ಯಾತಂ-ಜಗತ್ಪ್ರಸಿದ್ಧನು, ಆಗಿರ್ಪೈ-ಆಗಿದ್ದೀಯಾ, ಅಶ್ವ!-ಕುದುರೆಯೇ (ಉಚ್ಚೈಶ್ರವಸ್ಸೇ) ದಯಾಪರಾ-ದಯೆಯುಳ್ಳವನೇ, ನಶ್ವರರ್ಗೆ-ನಾಳೆ ಇಲ್ಲದವರಾಗುವವರಿಗೆ/ನಶ್ವರರಾದವರಿಗೆ (ನಮಗೆ) ನೀಂ-ನೀನು, ದರ್ಶನಂ+ಈಯೈ-ದರ್ಶನವನ್ನು ಕೊಡು/ಕಾಣಿಸಿಕೋ. ಅನುಷ್ಟುಪ್/ಶ್ಲೋಕಚ್ಛಂದಸ್ಸು )


ಪುಣ್ಯಶ್ಲೋಕ!ವರಾಕಾರ! ಪಣ್ಯದೂರ! ಖಗಾಮಿಯೇ

ಗಣ್ಯನೇಕಧರಾ ಸ್ಫಾರ!ಗುಣ್ಯಶ್ವಾ! ರಯಗಾಮಿಯೇ ॥೨೧॥

(ಟೀ-ಪುಣ್ಯಶ್ಲೋಕ!-ಪುಣ್ಯವಾದ ಕೀರ್ತಿಯುಳ್ಳವನೇ, ವರಾಕಾರ!-ಒಳ್ಳೆಯ ಶರೀರವನ್ನು/ಆಕಾರವನ್ನು ಹೊಂದಿರುವವನೇ,  ಪಣ್ಯದೂರ!-ದುಡ್ಡಿಗೆ ಸಿಗಲಾರದವನೇ, ಖಗಾಮಿಯೇ-ಆಕಾಶದಲ್ಲಿಯೂ ಸಂಚರಿಸುವ ಶಕ್ತಿಯುಳ್ಳವನೇ, ಗಣ್ಯಂ-ಸ್ತುತ್ಯರ್ಹನಾದವನು, ಏಕಧರಾ-ಒಬ್ಬನನ್ನೇ ಧರಿಸಿರುವವನೇ(?) ಸ್ಫಾರ!-ಕಾಂತಿಯುಳ್ಳವನೇ, ಗುಣ್ಯಶ್ವಾ!-ಗುಣವುಳ್ಳ ಕುದುರೆಯೇ, ರಯಗಾಮಿಯೇ-ವೇಗವಾಗಿ ಹೋಗುವವನೇ!

ಅನುಷ್ಟುಪ್/ಶ್ಲೋಕಚ್ಛಂದಸ್ಸು. ಈ ಪದ್ಯದಲ್ಲಿ ಎಲ್ಲವೂ ಉಚ್ಚೈಶ್ರವಸ್ಸಿಗೆ ವಿಶೇಷಣಗಳಾಗಿ ಕೇವಲ ಸಂಬೋಧನೆಯೇ ಇದೆ. ಗೋಮೂತ್ರಿಕಬಂಧವೂ ಇದೆ.)


ಚಂ॥ ಸಿರಿಯೊಡೆ ಪುಟ್ಟಿ ಮೆಯ್ಸಿರಿಯನಾಂತೆ ಸುಧಾಂಶುವೊಡಂ ನೆಗೞ್ದೊಡಂ

ಸುರುಚಿರರೂಪನಾಂತೆ ಸುಧೆಯೊಂದುತೆ ಸಂದು ಸಮಸ್ತಸೇವ್ಯನಾ

ಸುರಪತಿಯೊಲ್ಮೆಯಾಂತೆ ಸುರೆಗಾದ ಸಹೋದರಭಾವದಿಂದೆ ದಲ್

ಬರಿದೆನೆ ಚಂಚಲತ್ವಕಿದೊ ನೋಂತೆ ಹಯಾ! ಸುರಲೋಕರಾಣ್ನಯಾ ॥೨೨॥

(ಟೀ-ಸಿರಿಯೊಡೆ-ಸಂಪತ್ತಿನ ಜೊತೆಯಲ್ಲಿ/ಲಕ್ಷ್ಮಿಯ ಜೊತೆಯಲ್ಲಿ, ಪುಟ್ಟಿ-ಹುಟ್ಟಿ, ಮೆಯ್ಸಿರಿಯಂ-ಮೈಯಲ್ಲಿ ಸಿರಿಯನ್ನು, ಆಂತೆ-ಹೊಂದಿದೆ, ಸುಧಾಂಶುವೊಡಂ-ಚಂದ್ರನ ಜೊತೆಯಲ್ಲಿಯೂ, ನೆಗೞ್ದೊಡಂ-ಬಂದಿದ್ದರಿಂದಲೂ/ಪ್ರಸಿದ್ಧನಾಗಿರುವುದರಿಂದಲೂ, ಸುರುಚಿರರೂಪಂ+ಆಂತೆ-ಸುಂದರವಾದ ರೂಪವನ್ನು ಹೊಂದಿದೆ. ಸುಧೆಯ+ಒಂದುತೆ-ಅಮೃತವನ್ನು ಹೊಂದಿಕೊಂಡು, ಸಂದು-ಸಲ್ಲುವುದರಿಂದ, ಸಮಸ್ತಸೇವ್ಯನಾ-ಎಲ್ಲರಿಂದಲೂ ಸೇವಿಸಲ್ಪಡುತ್ತಿರುವ ಆ, ಸುರಪತಿಯ-ದೇವೇಂದ್ರನ, ಒಲ್ಮೆ+ಆಂತೆ-ಪ್ರೀತಿಯನ್ನು ಹೊಂದಿದೆ, ಸುರೆಗೆ-ಸುರೆ/ಸಾರಾಯಿಗೆ, ಆದ-ಆಗಿರುವ ಸಹೋದರಭಾವದಿಂದೆ-ಸಹೋದರತ್ವದಿಂದ (ಸಾರಾಯಿಯ ಜೊತೆಯಲ್ಲಿ ಹುಟ್ಟಿದ್ದರಿಂದ)  ಬರಿದೆನೆ-ಬರಿದಾಗಿ/ವ್ಯರ್ಥವಾಗಿ, ಇದೊ-ಇದೋ, ಚಂಚಲತ್ವಕೆ-ಚಾಂಚಲ್ಯಕ್ಕೆ, ನೋಂತೆ-ವ್ರತತೊಟ್ಟೆ, ದಲ್-ಅಲ್ಲವೇ! ಹಯಾ!-ಕುದುರೆಯೇ! ಸುರಲೋಕರಾಣ್ನಯಾ- (ಸುರಲೋಕ-ರಾಟ್+ನಯಾ)ದೇವಲೋಕದ ರಾಜನಾದ ಇಂದ್ರನನ್ನು ಹೊರುವವನೇ! ಚಂಪಕಮಾಲಾವೃತ್ತ)


(ಮುಂದಿನ ಭಾಗದಲ್ಲಿ ಕದ್ರೂವಿನತೆಯರ ಪಂದ್ಯದ ಫಲ, ಗರುಡನ ಜನನ)


ಭಾನುವಾರ, ಆಗಸ್ಟ್ 30, 2020

ವೈನತೇಯವಿಜಯಂ- ಗರುಡನ ಕಥೆ-೪

(ಸಮುದ್ರಮಥನ ಆದಾಗ ಹುಟ್ಟಿದ ಉಚ್ಚೈಶ್ರವಸ್ಸು ಎಂಬ ಕುದುರೆಯ ವಿಷಯದಲ್ಲಿ ಕದ್ರು ಹಾಗೂ ವಿನತೆಯರು  ಪಂದ್ಯ ಕಟ್ಟಿಕೊಂಡ ಕಥೆ. ಕದ್ರು ಮಕ್ಕಳಿಗೆ ಶಾಪ ಕೊಟ್ಟ ಕಥೆ)

 ವ॥ ಅಂತಿರಲತ್ತಲ್ ದೇವದಾನವರ್ಕಳ್ ಕ್ಷೀರಸಾಗರಮಂ ಮಥಿಸೆ ಐರಾವತಮುಂ ಉಚ್ಛೈಶ್ರವಸ್ಸುಂ ಸಕಲಸಂಪತ್ತಿಯುಂ ಲಕ್ಷ್ಮಿಯುಂ ಪೆಱೆಯುಂ ಬಹುವಿಧದ ಜೀವಜಂತುಗಳುಂ ಕಲ್ಪವೃಕ್ಷಮುಂ ಕಾಮಧೇನುವುಂ ದೊರೆತುದುಂ ತನ್ಮಧ್ಯದೊಳ್ ಕಾಲಕೂಟಮೆಂಬ ವಿಷಮುಂ ದೊರೆಕೊಂಡುದುಂ ಶಿವನಾ ಕಾಲಕೂಟಮಂ ಕುಡಿಯಲ್ ತಗುಳ್ದು ಪಾರ್ವತಿಯು ಕೊರಳೊಳೆ ತಡೆದುದುಂ ಸರ್ಪದಿಂ ಪಾರ್ವತಿ ಗರಳಮಂ ಶಿವನ ಕಂಠದೊಳೆ ಬಂಧಿಸೆ ಶಿವಂ ಸರ್ಪಾಭರಣನಾದುದುಂ ನೀಲಕಂಠನಾದುದುಂ ಅಂತ್ಯದೊಳ್ ಅಮೃತಮುಂ ದೊರೆತುದುಂ ಮೋಹಿನಿಯ ರೂಪಿಂ ಮಹಾವಿಷ್ಣುವು ದಾನವರ್ಕಳಂ ಬಂಚಿಸಿ ದೇವರ್ಕಳದಂ ಪಡೆದು ಕುಡಿದು ಬರ್ದಿಲರಾದುದುಂ ದುರದೃಷ್ಟವಶಾತ್ ಅಮರ್ದಂ ರಕ್ಕಸನೊರ್ವಂ ಕುಡಿಯಲ್ ವಿಷ್ಣುವಿನ ಚಕ್ರಾಯುಧದಿಂದವನ ಕೊರಳ್ ಕಳ್ತರಿಸಿ ರಾಹುಕೇತುವೆಂಬೆರಡು ಗರಂಗಳಾಗಿ ಆತಂ ಚಲಿಸುತ್ತುಮಿರ್ಪುದುಂ ಐರಾವತಮೆಂಬಾನೆಯಂ ಉಚ್ಛೈಶ್ರವಸ್ಸೆಂಬ ಕುದುರೆಯಂ ಸಂಪತ್ತಿಯಂ ಕಲ್ಪವೃಕ್ಷಕಾಮಧೇನುಗಳಂ ಸಕಲಮಂ ಇಂದ್ರಂ ಕೊಂಡುದುಂ ಬೞಿಕಂ ಮತ್ತೆ ದೇವದಾನವರ್ಕಳೊಳ್ ಯುದ್ಧಮಾದುದುಂ ದಾನವರ್ಕಳ್ ಸೋಲ್ತುದುಂ ಅಮರ್ದಂ ಸುರೇಂದ್ರಂ ಕಾಪಿಟ್ಟುದುಂ ಸಂದತ್ತು ಅಂತಲ್ಲದೆಯುಂ

(ಅಂತಿರಲ್-ಹೀಗಿರಲು, ಅತ್ತಲ್-ಅತ್ತ, ದೇವದಾನವರ್ಕಳ್-ದೇವತೆಗಳೂ ರಾಕ್ಷಸರೂ, ಕ್ಷೀರಸಾಗರಮಂ-ಕ್ಷೀರಸಾಗರವನ್ನು/ಹಾಲ್ಗಡಲನ್ನು, ಮಥಿಸೆ-ಕಡೆಯಲು, ಐರಾವತಮುಂ-ಐರಾವತವೆಂಬ ಆನೆಯೂ, ಉಚ್ಛೈಶ್ರವಸ್ಸುಂ-ಉಚ್ಛೈಶ್ರವಸ್ಸೆಂಬ ಕುದುರೆಯೂ, ಸಕಲಸಂಪತ್ತಿಯುಂ-ಎಲ್ಲಾ ಸಂಪತ್ತುಗಳೂ, ಲಕ್ಷ್ಮಿಯುಂ-ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೂ, ಪೆಱೆಯುಂ-ಚಂದ್ರನೂ, ಬಹುವಿಧದ- ಹಲವು ಬಗೆಯಾದ, ಜೀವಜಂತುಗಳುಂ-ಜೀವಜಂತುಗಳೂ, ಕಲ್ಪವೃಕ್ಷಮುಂ-ಕೇಳಿದ್ದನ್ನು ಕೊಡುವ ಕಲ್ಪವೃಕ್ಷವೆಂಬ ಮರವೂ, ಕಾಮಧೇನುವುಂ-ಬಯಸಿದ್ದನ್ನು ನೀಡುವ ಕಾಮಧೇನುವೆಂಬ ಹಸುವೂ, ದೊರೆತುದುಂ-ಸಿಕ್ಕಿರುವುದೂ, ತನ್ಮಧ್ಯದೊಳ್-ಅದರ ಮಧ್ಯದಲ್ಲಿ, ಕಾಲಕೂಟಮೆಂಬ-ಕಾಲಕೂಟವೆಂಬ,  ವಿಷಮುಂ-ವಿಷವೂ ದೊರೆಕೊಂಡುದುಂ-ದೊರೆತಿರುವುದೂ, ಶಿವನಾ(ಶಿವಂ+ಆ)-ಮಹಾಶಿವನು ಆ, ಕಾಲಕೂಟಮಂ-ಕಾಲಕೂಟವೆಂಬ ವಿಷವ್ನು, ಕುಡಿಯಲ್-ಕುಡಿಯುವುದಕ್ಕೆ, ತಗುಳ್ದು-ತೊಡಗಿ, ಪಾರ್ವತಿಯು-ಶಿವನ ಪತ್ನಿಯಾದ ಗಿರಿಜೆಯು, ಕೊರಳೊಳೆ-ಶಿವನ ಗಂಟಲಲ್ಲಿಯೇ, ತಡೆದುದುಂ-ವಿಷವನ್ನು ತಡೆಹಿಡಿದುದೂ, ಸರ್ಪದಿಂ-ಹಾವಿನಿಂದ, ಪಾರ್ವತಿ-ಪರಮೇಶ್ವರಿಯು, ಗರಳಮಂ-ವಿಷವನ್ನು, ಶಿವನ-ಶಿವನ, ಕಂಠದೊಳೆ-ಗಂಟಲಿನಲ್ಲಿಯೆ, ಬಂಧಿಸೆ-ಕಟ್ಟಿರಲು, ಶಿವಂ-ಪರಮೇಶ್ವರನು, ಸರ್ಪಾಭರಣನಾದುದುಂ-ಹಾವನ್ನೇ ಆಭರಣವಾಗಿ ಧರಿಸಿದವನಾದದ್ದೂ, ನೀಲಕಂಠನಾದುದುಂ-ಕಪ್ಪಾದ ಗಂಟಲನ್ನು ಹೊಂದಿದವನಾದುದೂ, ಅಂತ್ಯದೊಳ್-ಕೊನೆಯಲ್ಲಿ, ಅಮೃತಮುಂ-ಅಮೃತವೂ, ದೊರೆತುದುಂ-ದೊರೆತದ್ದೂ, ಮೋಹಿನಿಯ ರೂಪಿಂ-ಮೋಹಿನಿಯೆಂಬ ಸ್ತ್ರೀಯ ಅವತಾರದಲ್ಲಿ, ಮಹಾವಿಷ್ಣುವು-ಶ್ರೀಮನ್ನಾರಾಯಣನು, ದಾನವರ್ಕಳಂ-ರಾಕ್ಷಸರಿಗೆ, ಬಂಚಿಸಿ-ವಂಚನೆ ಮಾಡಿ, ದೇವರ್ಕಳ್-ದೇವತೆಗಳು, ಅದಂ-ಅದನ್ನು, ಪಡೆದು-ಹೊಂದಿ, ಕುಡಿದು-ಕುಡಿದು, ಬರ್ದಿಲರ್-ಮುಪ್ಪಿಲ್ಲದವರು, ಆದುದುಂ-ಆದದ್ದೂ, ದುರದೃಷ್ಟವಶಾತ್-ದುರದೃಷ್ಟದಿಂದ, ಅಮರ್ದಂ-ಅಮೃತವನ್ನು, ರಕ್ಕಸನೊರ್ವಂ(ರಕ್ಕಸಂ+ಒರ್ವಂ)-ರಾಕ್ಷಸನೊಬ್ಬನು, ಕುಡಿಯಲ್-ಕುಡಿದುಬಿಡಲು, ವಿಷ್ಣುವಿನ-ಶ್ರೀಹರಿಯ, ಚಕ್ರಾಯುಧದಿಂದ-ಚಕ್ರವೆಂಬ ಆಯುಧದಿಂದ, ಅವನ-ಆ ರಾಕ್ಷಸನ, ಕೊರಳ್-ಕುತ್ತಿಗೆಯು, ಕಳ್ತರಿಸಿ-ಕತ್ತರಿಸಲ್ಪಟ್ಟು, ರಾಹುಕೇತುವೆಂಬೆರಡು-ರಾಹು ಮತ್ತು ಕೇತು ಎಂಬ ಎರಡು, ಗರಂಗಳಾಗಿ-ಗ್ರಹಗಳಾಗಿ, ಆತಂ-ಆ ರಾಕ್ಷಸನು, ಚಲಿಸುತ್ತುಂ-ಚಲಿಸುತ್ತಾ, ಇರ್ಪುದುಂ-ಇರುವುದೂ, ಐರಾವತಮೆಂಬಾನೆಯಂ-ಐರಾವತವೆಂಬ ಆನೆಯನ್ನು, ಉಚ್ಛೈಶ್ರವಸ್ಸೆಂಬ-ಉಚ್ಚೈಶ್ರವಸ್ಸು ಎಂಬ, ಕುದುರೆಯಂ-ಕುದುರೆಯನ್ನು,, ಸಂಪತ್ತಿಯಂ-ಸಂಪತ್ತುಗಳೆಲ್ಲವನ್ನು, ಕಲ್ಪವೃಕ್ಷಕಾಮಧೇನುಗಳಂ-ಕಲ್ಪವೃಕ್ಷಕಾಮಧೇನುಗಳನ್ನು, ಸಕಲಮಂ-ಎಲ್ಲವನ್ನೂ, ಇಂದ್ರಂ-ಇಂದ್ರನು, ಕೊಂಡುದುಂ-ತೆಗೆದುಕೊಂಡದ್ದೂ, ಬೞಿಕಂ-ಆ ಬಳಿಕ, ಮತ್ತೆ-ಇನ್ನೊಮ್ಮೆ, ದೇವದಾನವರ್ಕಳೊಳ್-ದೇವತೆಗಳು ಹಾಗೂ ದಾನವರ ಮಧ್ಯೆ, ಯುದ್ಧಮಾದುದುಂ-ಯುದ್ಧವಾದದ್ದೂ, ದಾನವರ್ಕಳ್-ದಾನವರು, ಸೋಲ್ತುದುಂ-ಸೋತುಹೋದದ್ದೂ, ಅಮರ್ದಂ-ಅಮೃತವನ್ನು, ಸುರೇಂದ್ರಂ-ದೇವೇಂದ್ರನು, ಕಾಪಿಟ್ಟುದುಂ-ಕಾಪಾಡಿಕೊಂಡು ಇಟ್ಟಿರುವುದೂ, ಸಂದತ್ತು-ಆಗಿತ್ತು, ಅಂತಲ್ಲದೆಯುಂ-ಹಾಗಲ್ಲದೇ-)


ಚಂ॥ ವಿನತೆಯೊ ತನ್ನಪುತ್ರರನೆ ಕಾಣುವ ವಾಂಛೆಯೊಳಿರ್ಕೆ ಕದ್ರುವುಂ

ವಿನುತಸಹಸ್ರಪುತ್ರಪರಿಪಾಲನಕರ್ಮದೆ ನೋಂತು ನಿಂತಿರಲ್

ಘನತರಮಾದುವೆಲ್ಲಮಿವು ಗಾಥೆಗಳಾದುವು ಕಾಲಯಂತ್ರದಿಂ

ದೆನೆ ಮನೆವಾೞ್ತೆಯೊಳ್ ತಗುಳಲಾರ್ ಕುತುಕರ್ ಗಡ ಲೋಕವಾರ್ತೆಯೊಳ್ ॥೬೪॥

(ಟೀ-ವಿನತೆಯೊ-ವಿನತೆಯಾದರೋ, ತನ್ನ ಪುತ್ರರನೆ- ತನ್ನ ಮಕ್ಕಳನ್ನು, ಕಾಣುವ-ನೋಡುವ, ವಾಂಛೆಯೊಳ್-ಬಯಕೆಯಲ್ಲಿ, ಇರ್ಕೆ-ಇರಲಿ, ಕದ್ರುವುಂ-ಕದ್ರುವೂ, ವಿನುತ-ಸಹಸ್ರ-ಪುತ್ರ-ಪರಿಪಾಲನ-ಕರ್ಮದೆ-ವಿನುತರಾದ ಸಾವಿರ ಮಕ್ಕಳನ್ನು ಪರಿಪಾಲಿಸುವ ಕೆಲಸದಲ್ಲಿ, ನೋಂತು-ವ್ರತಳಾಗಿ, ನಿಂತಿರಲ್-ನಿಂತಿರಲು, ಘನತರಮಾದುವು-ದೊಡ್ಡದು ಎಂದೆನಿಸಿರುವ, ಎಲ್ಲಂ+ಇವು-ಈ ಘಟನೆಗಳೆಲ್ಲವೂ, ಕಾಲಯಂತ್ರದಿಂದ-ಕಾಲವೆಂಬ ಯಂತ್ರದಿಂದ, ಗಾಥೆಗಳಾದುವು-(ಕೇವಲ)ಕಥೆಗಳಾದವು, ಎನೆ-ಎನ್ನಲು, ಮನೆವಾೞ್ತೆಯೊಳ್-ಮನವಾರ್ತೆಯಲ್ಲಿ/ಮನೆಯ ಕೆಲಸದಲ್ಲಿ, ತಗುಳಲ್ -ತೊಡಗಿಕೊಳ್ಳಲು, ಆರ್ ಗಡ-ಯಾರು ತಾನೇ, ಲೋಕವಾರ್ತೆಯೊಳ್-ಜಗತ್ತಿನಲ್ಲಿ ನಡೆಯುವ ಘಟನೆಗಳ ಕುರಿತು/ಲೋಕವ್ಯಾಪಾರದಲ್ಲಿ, ಕುತುಕರ್-ಕುತೂಹಲವುಳ್ಳವರಾಗುತ್ತಾರೆ?

ಚಂಪಕಮಾಲಾವೃತ್ತ, ಸಮುದ್ರಮಥನ, ದೇವದಾನವರ ಯುದ್ಧ ಇವೆಲ್ಲವೂ ಜಗತ್ತಿನ ದೃಷ್ಟಿಯಲ್ಲಿ ದೊಡ್ಡ ಘಟನೆಗಳಾದರೂ, ವಿನತೆ ಹಾಗೂ ಕದ್ರುವಿಗೆ ತಮ್ಮ ಮಕ್ಕಳನಿರೀಕ್ಷೆ ಹಾಗೂ ಪರಿಪಾಲನೆಯ ಕರ್ಮದಲ್ಲಿ ತೊಡಗಿಕೊಂಡ ಕಾರಣ ಕುತೂಹಲವನ್ನು ಉಂಟು ಮಾಡದೇ ಹೋಯಿತು. ಅವೆಲ್ಲವೂ ಕೇವಲ ಕಥೆಗಳಾಗಿ ಕೇಳಲ್ಪಟ್ಟವು ಅಷ್ಟೇ ಎಂದು ತಾತ್ಪರ್ಯ. "ಮನೆವಾಳ್ತೆಯಲ್ಲಿ ಮುಳುಗಿದವರಿಗೆ ಯಾರಿಗೆ ತಾನೇ ಲೋಕವಾರ್ತೆಯಲ್ಲಿ  ಕುತೂಹಲವಿರುತ್ತದೆ" ಎಂಬಲ್ಲಿ ಅರ್ಥಾಂತರ ನ್ಯಾಸಾಲಂಕಾರವೂ ಇದೆ.)


ವ॥ ಅಂತಾದೊಡಂ ಆಪ್ತರುಂ  ಸಖಿಯರುಂ ಪುನಃಪುನರಪಿ ಪೇೞುತ್ತಿರಲ್ಕೆ ಕುತೂಹಲಂದಾಳ್ದು ಕೇಳುತ್ತುಂ ಸಮುದ್ರಮಥನಕಥಾನಕಮಂ ತಿಳಿದರ್ ಅದೆಂತೆನೆ-

(ಅಂತಾದೊಡಂ-ಹಾಗಿರಲು, ಆಪ್ತರುಂ-ಆಪ್ತರಾದವರೂ,  ಸಖಿಯರುಂ-ಗೆಳತಿಯರೂ, ಪುನಃಪುನರಪಿ-ಮತ್ತೆ ಮತ್ತೆ, ಪೇೞುತ್ತಿರಲ್ಕೆ-ಹೇಳುತ್ತಿರುವಾಗ, ಕುತೂಹಲಂದಾಳ್ದು(ಕುತೂಹಲಂ+ತಾಳ್ದು)-ಕುತೂಹಲವನ್ನು ಹೊಂದಿ,  ಕೇಳುತ್ತುಂ-ಕೇಳುತ್ತಾ, ಸಮುದ್ರಮಥನಕಥಾನಕಮಂ-ಸಮುದ್ರಮಥನದ ಕಥೆಯನ್ನು, ತಿಳಿದರ್-ತಿಳಿದುಕೊಂಡರು, ಅದೆಂತೆನೆ-ಅದು ಹೇಗೆಂದರೆ-)


ಕಂ॥ ಮರನೊಳ್ ಬೇರ್ಗಳ್ ಕುಡಿಯಲ್

ಭರದಿಂದಂ ನೀರನಂತು ಚಿಗುರೆಲೆಗಳ್ ತಾಂ 

ಸೊರಗದೆ ಪಡೆವವೊಲೆಲ್ಲರ್

ನಿರುತಂ ತಮ್ಮಾಪ್ತರಿಂದೆ ತಿಳಿವರ್ ಜಗಮಂ ॥೬೫॥

(ಟೀ-ಮರನೊಳ್-ಮರದಲ್ಲಿ, ಬೇರ್ಗಳ್-ಬೇರುಗಳು, ಭರದಿಂದಂ-ಭರದಲ್ಲಿ/ವೇಗವಾಗಿ, ನೀರಂ-ನೀರನ್ನು, ಕುಡಿಯಲ್-ಕುಡಿಯಲು, ಅಂತು-ಹಾಗೆ, ಚಿಗುರೆಲೆಗಳ್-ಚಿಗುರು ಹಾಗೂ ಎಲೆಗಳು, ತಾಂ-ತಾವು, ಸೊರಗದೆ-ಸೊರಗದೇ, ಪಡೆವವೊಲ್- (ನೀರನ್ನು) ಪಡೆಯುವಂತೆ, ಎಲ್ಲರ್-ಎಲ್ಲರೂ, ನಿರುತಂ-ಸದಾಕಾಲ, ತಮ್ಮ+ಆಪ್ತರಿಂದೆ-ತಮಗೆ ಆಪ್ತರಾದವರಿಂದ/ಪ್ರೀತಿಪಾತ್ರರಿಂದ,ಜಗಮಂ-ಜಗತ್ತನ್ನು, ತಿಳಿವರ್-ತಿಳಿಯುತ್ತಾರೆ. ಕಂದಪದ್ಯ.)


ವ॥ ಅಂತು ಕೇಳ್ದು ತಿಳಿದ ಕಥೆಗಳಂ ಕದ್ರೂವಿನತೆಯರ್ ಗೞಪುತ್ತುಮಿರಲ್ಕೆ ವಿನತೆಯೆಂದಳ್

(ಅಂತು-ಹಾಗೆ, ಕೇಳ್ದು-ಕೇಳಿಕೊಂಡು, ತಿಳಿದ-ತಿಳಿದ, ಕಥೆಗಳಂ-ಕಥೆಗಳನ್ನು, ಕದ್ರುೂವಿನತೆಯರ್-ಕದ್ರು ಹಾಗೂ ವಿನತೆಯರಿಬ್ಬರೂ, ಗೞಪುತ್ತುಂ- ಮಾತನಾಡುತ್ತ,ಇರಲ್ಕೆ- ಇರುವಾಗ, ವಿನತೆಯೆಂದಳ್- ವಿನತೆ ಹೇಳಿದಳು-)


ಪೃ॥ ಸಮುದ್ರಮಥನಕ್ಕೆನಲ್ ಸುರರೆ ದಾನವರ್ಕಳ್ ಗಡಾ

ಸಮಂತು ಬೆರೆತೆಂತುಟೋ ಕಡೆಯೆ ಪುಟ್ಟಿತೆಲ್ಲಂ ಗಡಾ

ದ್ರುಮಂ ಸಕಲವಾಂಛೆಯಂ ಕುಡುವುದುಂ ಬೞಿಕ್ಕಂ ಗಡಾ

ಕ್ರಮೇಣ ಗಜವಾಜಿಗಳ್ ಪೆಱೆಯ ಬಣ್ಣಮೆಂಬರ್ ಗಡಾ ॥೬೬॥

(ಟೀ-ಸಮುದ್ರಮಥನಕ್ಕೆ-ಸಮುದ್ರವನ್ನು ಕಡೆಯುವುದಕ್ಕೆ, ಎನಲ್-ಎನ್ನಲು, ಸುರರೆ-ದಾನವರ್ಕಳ್ ಗಡಾ-ದೇವತೆಗಳು ರಾಕ್ಷಸರೂ ಅಂತೆ,  ಸಮಂತು-ಚೆನ್ನಾಗಿ, ಬೆರೆತು- ಸೇರಿಕೊಂಡು, ಎಂತುಟೋ-ಹೇಗೋ, ಕಡೆಯೆ-ಕಡೆಯಲು, ಎಲ್ಲಂ- ಎಲ್ಲವೂ, ಪುಟ್ಟಿತು ಗಡಾ-ಹುಟ್ಟಿತಂತೆ, ಸಕಲವಾಂಛೆಯಂ-ಬಯಸಿದ್ದು ಎಲ್ಲವನ್ನೂ, ಕುಡುವುದುಂ-ಕೊಡುವುದೂ (ಆದ) ದ್ರುಮಂ-ಮರವು, ಬೞಿಕ್ಕಂ ಗಡಾ-ಆಮೇಲೆ ಅಂತೆ, ಕ್ರಮೇಣ-ಕ್ರಮದಲ್ಲಿ, ಗಜವಾಜಿಗಳ್-ಆನೆ ಕುದುರೆಗಳು, ಪೆಱೆಯ-ಚಂದ್ರನ, ಬಣ್ಣಂ- ವರ್ಣದವು,ಎಂಬರ್ ಗಡಾ-ಎನ್ನುತ್ತಾರಂತೆ. ಪೃಥ್ವಿ ವೃತ್ತ. ತಾತ್ಪರ್ಯದಲ್ಲಿ ವಿನತೆಯು “ದೇವತೆಗಳೂ ದಾನವರೂ ಸೇರಿಕೊಂಡರಂತೆ, ಸಮುದ್ರವನ್ನು ಕಡೆದರಂತೆ, ಕಲ್ಪವೃಕ್ಷವು,ಐರಾವತವು ಎಲ್ಲ ಹುಟ್ಟಿತಂತೆ.."ಎಂದು ಪರೋಕ್ಷದಲ್ಲಿ ನಡೆದ ಘಟನೆಯನ್ನು ಹೇಳುತ್ತಿರುವುದು ಇಲ್ಲಿಯ ವಿಶೇಷ. ಹಳಗನ್ನಡದಲ್ಲಿ ವ್ಯರ್ಥಪದಗಳು/ಪಾದಪೂರಣಗಳು ಎಂದು ಹೇಳುವ ದಲ್, ಗಡಾ, ವಲಂ ಮೊದಲಾದ ಶಬ್ದಗಳನ್ನು ಈ ರೀತಿಯಲ್ಲಿ “ಹಾಗಂತೆ ಹೀಗಂತೆ” ಎಂದು ಹೇಳುವ ನುಡಿಗಟ್ಟಿನಂತೆ ಬಳಸುವುದನ್ನು ಕಾಣಬಹುದು. ಉಾಹರಣೆಗೆ ರನ್ನನ “ಓಜಂ ಗಡ! ಚಿಃ ಭಾರದ್ವಾಜಂ ಗಡ!..” ಎಂಬ ಪದ್ಯವನ್ನು ನೋಡಬಹುದು.)


ಕಂ॥ ಮೊಸರಂ ಕಡೆಯಲ್ ಪುಟ್ಟಿದ

ಪೊಸತೆನಲಾ ಬೆಣ್ಣೆಯಂತೆ ಕಡಲಂ ಕಡೆಯಲ್

ಜಸದಿಂ ಪೂರ್ಣಂ ಬೆಳ್ಪಾಂ-

ತೆಸೆಗುಂ ಗಡಮೆಂಬರಲ್ತೆ ವಾಜಿಗಜಂಗಳ್ ॥೬೭॥

(ಟೀ-ಮೊಸರಂ-ಮೊಸರನ್ನು, ಕಡೆಯಲ್-ಕಡೆಯಲು, ಪೊಸತೆನಲ್-ಹೊಸದು ಎಂಬಂತೆ, ಪುಟ್ಟಿದ-ಹುಟ್ಟಿದ, ಆ ಬೆಣ್ಣೆಯಂತೆ-ಆ ಬೆಣ್ಣೆಯ ಹಾಗೆ, ಕಡಲಂ-ಸಾಗರವನ್ನು, ಕಡೆಯಲ್-ಕಡೆಯುತ್ತಿರಲು, ಜಸದಿಂ-ಯಶಸ್ಸಿನಿಂದ, ವಾಜಿಗಜಂಗಳ್-ಕುದುರೆ ಹಾಗೂ ಆನೆಗಳು/ಉಚ್ಚೈಶ್ರವಸ್ಸು ಹಾಗೂ ಐರಾವತಗಳು, ಪೂರ್ಣಂ-ಸಂಪೂರ್ಣವಾಗಿ, ಬೆಳ್ಪಾಂತು (ಬೆಳ್ಪು+ಆಂತು)-ಬಿಳಿಯ ಬಣ್ಣವನ್ನು ಹೊಂದಿ, ಎಸೆಗುಂ ಗಡಂ-ಶೋಭಿಸುತ್ತದೆಯಂತೆ, ಎಂಬರಲ್ತೆ-ಎನ್ನುತ್ತಾರಲ್ಲವೇ! ಕಂದಪದ್ಯ)


ವ॥ ಅಂತೆನೆ ಕದ್ರುವು ಸಹೋದರಿಯೊಳ್ ಸಾಪತ್ನಮಿರ್ಪುದರಿಂದಂ ಮೇಣ್ ತಾನೇ ಪೆರ್ಚಂ ತಿಳಿದಿರ್ಪೆನೆಂದು ಮಿಗೆ  ತೋರಿಸಲ್ವೇಳ್ಕುಮೆಂದುಂ ಯೋಚಿಸಿ ಪೇೞ್ದಪಳ್

(ಅಂತೆನೆ-ಹಾಗೆನ್ನಲು, ಕದ್ರುವು-ಕದ್ರುವು, ಸಹೋದರಿಯೊಳ್-ಸಹೋದರಿಯಾದ ವಿನತೆಯಲ್ಲಿ, ಸಾಪತ್ನಂ-ದ್ವೇಷ/ಸವತಿಯ ಮತ್ಸರ, ಇರ್ಪುದರಿಂದಂ-ಇರುವುದರಿಂದಲೂ, ಮೇಣ್-ಹಾಗೂ, ತಾನೇ-ತಾನೇ, ಪೆರ್ಚಂ-ಹೆಚ್ಚನ್ನು, ತಿಳಿದಿರ್ಪೆನೆಂದು-ತಿಳಿದಿದ್ದೇನೆಂದು, ಮಿಗೆ-ಅತಿಶಯವಾಗಿ,  ತೋರಿಸಲ್+ವೇಳ್ಕುಂ- ತೋರಿಸಬೇಕು, ಎಂದುಂ-ಎಂದೂ, ಯೋಚಿಸಿ-ಆಲೋಚಿಸಿ, ಪೇೞ್ದಪಳ್-ಹೇಳಿದಳು)


ಕಂ॥ ಅಲ್ತಲ್ತು ವಾಜಿ ಬೆಣ್ಣೆಯ

ವೊಲ್, ತಾಳ್ದುರು ಕಾಂತಿಯೊಳ್ ಕಲಂಕದ ಪಾಂಗಿಂ

ಮೇಲ್ ತಗುಳ್ದು ನೋಡೆ ಪೆಱೆಯಂ

ಪೋಲ್ತಿರ್ಕುಂ ಬಾಲಮೊಂದೆ ಕರ್ಪೆನಿಸಿರ್ಕುಂ ॥೬೮॥

(ಟೀ- ವಾಜಿ-ಕುದುರೆಯು, ಬೆಣ್ಣೆಯವೊಲ್-ಬೆಣ್ಣೆಯಂತೆ, ಅಲ್ತಲ್ತು-ಅಲ್ಲ ಅಲ್ಲ (ಅಲ್ಲವೇ ಅಲ್ಲ), ತಾಳ್ದ-ಹೊಂದಿದ, ಉರುಕಾಂತಿಯೊಳ್-ಅತಿಶಯವಾದ ಕಾಂತಿಯಲ್ಲಿ, ಮೇಲ್-ಮೇಲೆ, ಕಲಂಕದ-ದೋಷದ/ಕಳಂಕದ, ಪಾಂಗಿಂ-ಹಾಗೆ ತಗುಳ್ದು-ಹತ್ತಿಕೊಂಡು, ನೋಡೆ-ನೋಡಲು, ಪೆಱೆಯಂ-ಚಂದ್ರನನ್ನು, ಪೋಲ್ತಿರ್ಕುಂ-ಹೋಲುತ್ತಿರುವುದು, ಬಾಲಮೊಂದೆ-ಬಾಲವೊಂದೇ, ಕರ್ಪೆನಿಸಿರ್ಕುಂ-ಕಪ್ಪು ಎನ್ನಿಸಿದೆ. ಕಂದಪದ್ಯ)


ವ॥ ಅಂತೆನೆ ವಿನತೆಗೆ ಕದ್ರು ಪುಸಿಯನಾಡುತ್ತಿರ್ಪಳೆಂದು ತಿಳಿದು ಸಪತ್ನೀಮತ್ಸರಂಬೆರಸು ಚಿಂತಿಸಿ ಅವಳಂ ಗೆಲಲ್ಕೆ ಅವಕಾಶಂ ದೊರೆತುದೆನುತೆ ಪರಿಣಾಮಮಂ ಚಿಂತಿಸದೆ ಪೇೞ್ದಪಳ್

(ಅಂತೆನೆ-ಹಾಗೆನ್ನಲು, ವಿನತೆಗೆ-ವಿನತೆಗೆ, ಕದ್ರು-ಕದ್ರುವು, ಪುಸಿಯಂ-ಸುಳ್ಳನ್ನು, ಆಡುತ್ತಿರ್ಪಳ್-ಹೇಳುತ್ತಿದ್ದಾಳೆ, ಎಂದು-ಎಂದು, ತಿಳಿದು-ತಿಳಿದು, ಸಪತ್ನೀಮತ್ಸರಂಬೆರಸು-(ಸಪತ್ನೀ+ಮತ್ಸರಂ+ಬೆರೆಸು)-ಸವತಿಯ ಮತ್ಸರವನ್ನು ಬೆರೆಸಿ, ಚಿಂತಿಸಿ-ಯೋಚಿಸಿ, ಅವಳಂ-ಅವಳನ್ನು, ಗೆಲಲ್ಕೆ-ಗೆಲ್ಲುವುದಕ್ಕೆ, ಅವಕಾಶಂ-ಅವಕಾಶವು/ಸಂದರ್ಭವು, ದೊರೆತುದು- ದೊರಕಿದೆ/ಸಿಕ್ಕಿದೆ, ಎನುತೆ-ಎಂದು, ಪರಿಣಾಮಮಂ-ಮುಂದೆ ಆಗುವುದನ್ನು/ ಫಲವನ್ನು, ಚಿಂತಿಸದೆ-ಯೋಚಿಸದೇ, ಪೇೞ್ದಪಳ್-ಹೇಳಿದಳು-)


ಚಂ॥ ಎಲಗೆ ವಿಚಿತ್ರಮಾಯ್ತು ಭವದೀಯವಚೋವಿಭವಂ ತುರಂಗಮಂ

ಸುಲಲಿತಮಾಗಿ ಪಾಂಡುಮಯಮಾದುದೆನುತ್ತಿರಲುಚ್ಚಕೋಟಿಯಂ

ಕಲಿತಕಲಂಕಮೆಂದು ಪುಸಿಯಾಡಿದೆಯೌ ಪುಸಿಯಲ್ಲದಿರ್ದೊಡಂ

ನೆಲಸೆುವೆನೊಪ್ಪಿ ದಾಸಿ ನಿನಗಾಗುತೆ ನೀಂ ನನಗೇನನೀವೆಯೌ ॥೬೯॥

(ಟೀ- ಎಲಗೆ-ಎಲೌ! ಭವದೀಯ-ವಚೋ-ವಿಭವಂ-ನಿನ್ನ ಮಾತುಗಳ ವೈಭವವು, ವಿಚಿತ್ರಂ-ಆಶ್ಚರ್ಯಕರವಾದುದು, ಆಯ್ತು-ಆಗಿದೆ, ತುರಂಗಮಂ-ಉಚ್ಚೈಶ್ರವಸ್ಸೆಂಬ ಕುದುರೆಯು, ಸುಲಲಿತಮಾಗಿ (ಸುಲಲಿತಂ+ಆಗಿ)-ಚೆನ್ನಾಗಿ/ಲಾಲಿತ್ಯದಿಂದ ಕೂಡಿ,  ಪಾಂಡುಮಯಂ-ಬಿಳಿಯ ಬಣ್ಣದಿಂದ ಕೂಡಿದ್ದು, ಆದುದೆನುತ್ತಿರಲ್-ಆಗಿರುವುದು ಎಂದು ಹೇಳುತ್ತಿರಲು, ಉಚ್ಚಕೋಟಿಯಂ-ಶ್ರೇಷ್ಠವಾದುದ್ದನ್ನು, ಕಲಿತ-ಕಲಂಕಂ-ಕಳಂಕದಿಂದ ಕೂಡಿದ್ದು/ದೋಷವುಳ್ಳದ್ದು, ಎಂದು-ಎನ್ನುತ್ತ, ಪುಸಿ+ಆಡಿದೆಯೌ-ಸುಳ್ಳುಹೇಳುತ್ತಿದ್ದೀಯಾ! ಪುಸಿಯು+ಅಲ್ಲದಿರ್ದೊಡಂ-ಅದು ಸುಳ್ಳಲ್ಲದಿದ್ದರೆ/(ನೀನು ಹೇಳಿದ್ದು) ಸತ್ಯವಾಗಿದ್ದರೆ ಒಪ್ಪಿ-ಒಪ್ಪಿಕೊಂಡು, ನಿನಗೆ ದಾಸಿ-ಆಗುತೆ-ನಿನ್ನ ತೊತ್ತಾಗಿ/ನಿನ್ನ ದಾಸಿಯಾಗಿ, ನೆಲಸೆುವೆಂ-ನೆಲೆಸುತ್ತೇನೆ/ಬದುಕುತ್ತೇನೆ,  ನೀಂ-ನೀನು, ನನಗೆ+ಏನಂ+ಈವೆಯೌ-ಏನನ್ನು ಕೊಡುತ್ತೀಯಾ! ಚಂಪಕಮಾಲಾವೃತ್ತ. 

ಮಗ ಅರುಣನು ಕೊಟ್ಟ ಶಾಪವನ್ನು ಮರೆತ ವಿನತೆ, ಕದ್ರುವಿನ ಜೊತೆ ಮತ್ಸರದಿಂದ, ಅವಳು ಹೇಳಿದಂತೆ ಉಚ್ಚೈಶ್ರವಸ್ಸಿನ ಬಾಲವೊಂದೇ ಕಪ್ಪಾಗಿಲ್ಲದಿದ್ದರೆ ನಿನಗೆ ದಾಸಿಯಾಗುತ್ತೇನೆ ಎಂದು ಪಣವನ್ನು ಒಡ್ಡಿದಳು. ಅವಳ ಬಳಿ ಅಕಸ್ಮಾತ್ ಕುದುರೆ ಪುರ್ತಿಯಾಗಿ ಬೆಳ್ಳಗೇ ಇದ್ದರೆ ನೀನು ನನಗೆ ಏನನ್ನು ಕೊಡುತ್ತೀಯಾ ಎಂದೂ ಕೇಳಿದಳು. ಪರಿಣಾಮದ ಅರಿವಿದಲ್ಲದೇ ಸ್ಪರ್ಧೆಗೆ ಒಡ್ಡಿಕೊಂಡಳು)


ವ॥ ಎಂತೆನೆ ಕದ್ರುವಿಂತೆಂದಳ್

(ಎಂತೆನೆ-ಹೀಗೆನ್ನಲು, ಕದ್ರುವು+ಇಂತೆಂದಳ್-ಕದ್ರುವು ಹೀಗೆಂದಳು)


ಉ॥ ದಾಸಿಯ ಪಟ್ಟಮಂ ಪಣಮನಾಗಿಸುತೊಡ್ಡಿದೆ ಬಾೞ್ತೆಯೆಂಬುದೇ

ಪಾಸೆನೆ, ದಾಳಮಾಯ್ತೆ ಕಡಲಿಂದೊಗೆತಂದುದು ವಾಜಿಯೆಂದೆನಲ್

ದೂಸಱದಿಲ್ಲಮೆನ್ನ ನುಡಿ ತಪ್ಪದು ತಪ್ಪಿರೆ ನಿನ್ನ ಕಾಲ್ಗಳೊಳ್

ದಾಸಿಯೆ ಸಲ್ವೆನಾನೆಸಗುತೂಳಿಗಮಂ ನಿಜಜೀವನಂಬರಂ ॥೭೦॥

(ಟೀ-ದಾಸಿಯ-ಸೇವಕಿಯ, ಪಟ್ಟಮಂ-ಸ್ಥಾನವನ್ನು, ಪಣಮಂ-ಪಣವನ್ನು ಆಗಿಸುತೆ-ಮಾಡುತ್ತಾ, ಒಡ್ಡಿದೆ-ಎದುರಿಗೆ ಇಟ್ಟೆ,, ಬಾೞ್ತೆಯೆಂಬುದೇ-ಜೀವನವೆಂಬುದೇ, ಪಾಸು+ಎನೆ-ಹಾಸು ಎಂದಾಗಲು,  ಕಡಲಿಂದೆ-ಸಮುದ್ರದಿಂದ, ಒಗೆತಂದುದು-ಹುಟ್ಟಿಬಂದುದು, ವಾಜಿಯು-ಉಚ್ಚೈಶ್ರವಸ್ಸು, ದಾಳ-ಜೂಜಿನ ದಾಳವು, ಆಯ್ತೆ-ಆಗಿದೆಯೇ, ಎಂದೆನಲ್-ಹೀಗೆಂದು ಹೇಳಲು,ಅದು-ಅದು, ದೂಸಽಱ್-ಅಪವಾದವು,  ಇಲ್ಲಂ-ಇಲ್ಲ, ಎನ್ನ-ನನ್ನ, ನುಡಿ-ಮಾತು, ತಪ್ಪದು-ತಪ್ಪುವುದಿಲ್ಲ, ತಪ್ಪಿರೆ-ಒಂದು ವೇಳೆ ತಪ್ಪಿದರೆ, ನಿನ್ನ-ನಿನ್ನ, ಕಾಲ್ಗಳೊಳ್-ಕಾಲುಗಳಲ್ಲಿ,ನಿಜಜೀವನಂಬರಂ-ನನ್ನ ಜೀವಮಾನದ ಕೊನೆಯ ತನಕ, ಊಳಿಗಮಂ-ಸೇವೆಯನ್ನು,ಎಸಗುತೆ-ಮಾಡುತ್ತಾ  ದಾಸಿಯೆ-ದಾಸಿಯೇ/ಸೇವಕಿಯೇ, ಆಂ-ನಾನು, ಸಲ್ವೆಂ-ಸಲ್ಲುತ್ತೇನೆ ಉತ್ಪಲಮಾಲಾವೃತ್ತ

ಈ ಜೂಜಿನಲ್ಲಿ ಅವರ ಜೀವನವೇ ಪಗಡೆಯ ಹಾಸಾಗಿದೆ, ಉಚ್ಚೈಶ್ರವಸ್ಸೇ ದಾಳವಾಗಿದೆ, ದಾಸಿಯ ಪಟ್ಟವೇ ಪಣವಾಗಿದೆ ಎಂದು ಹೇಳಿ ತನ್ನ ಮಾತು ತಪ್ಪಿದರೆ ತಾನೂ ಜೀವನಪೂರ್ತಿ ವಿನತೆಯ ದಾಸಿಯಾಗಿರುತ್ತೇನೆ ಎಂದು ಕದ್ರುವೂ ಪಂತವನ್ನು ಒಡ್ಡುತ್ತಾಳೆ)


ವ॥ ಇಂತೆಂದು ಕದ್ರುವುಂ ನುಡಿಯಲ್ಕೆ ಮಱುದೆವಸಂ ಇರ್ವರುಂ ಉಚ್ಛೈಶ್ರವಸ್ಸೆಂಬ ಪೆಸರಿನ ಬೆಳ್ಗುದುರೆಯಂ ನೋಡಲ್ಕೆ ಪೋಪುದೆಂದು ನಿಶ್ಚಯಿಸಿದರ್

(ಇಂತೆಂದು-ಹೀಗೆಂದು, ಕದ್ರುವುಂ-ಕದ್ರುವೂ, ನುಡಿಯಲ್ಕೆ-ಹೇಳಲು, ಮಱುದೆವಸಂ-ಮಾರನೆಯ ದಿನ, ಇರ್ವರುಂ-ಇಬ್ಬರೂ, ಉಚ್ಛೈಶ್ರವಸ್ಸೆಂಬ-ಉಚ್ಚೈಶ್ರವಸ್ಸು ಎಂಬ,  ಪೆಸರಿನ-ಹೆಸರಿನ, ಬೆಳ್ಗುದುರೆಯಂ-ಬಿಳಿಯ ಕುದುರೆಯನ್ನು, ನೋಡಲ್ಕೆ-ನೋಡುವುದಕ್ಕೆ, ಪೋಪುದೆಂದು-ಹೋಗುವುದು ಎಂದು, ನಿಶ್ಚಯಿಸಿದರ್-ನಿಶ್ಚಯವನ್ನು ಮಾಡಿದರು)


ಕಂ॥ ಸದ್ರುಮಖಂಡಪರಶುವಿಂ

ಛಿದ್ರಂ ಮೇಣ್ ಕಾನನಂಗಳಾಗುವ ತೆಱದಿಂ

ಕದ್ರುವು ತನ್ನಯ ಮಾತಿಂ 

ವಿದ್ರೋಹಂ ತನಗಿದಾಯ್ತೆನುತ್ತುಂ ಬಗೆದಳ್॥೭೧॥

(ಟೀ- ಸ-ದ್ರುಮ-ಖಂಡ-ಪರಶುವಿಂ-ಮರದ ತುಂಡಿನಿಂದ ಕೂಡಿದ ಕೊಡಲಿಯಿಂದಲೇ,  ಮೇಣ್ ಕಾನನಂಗಳ್-ಮತ್ತೆ ಕಾಡುಗಳೆಲ್ಲ, ಛಿದ್ರಂ-ಆಗುವ-ಛಿದ್ರ/ನಾಶವಾಗುವ, ತೆಱದಿಂ-ಹಾಗೆಯೇ, ಕದ್ರುವು-ಕದ್ರುವು, ತನ್ನಯ ಮಾತಿಂ- ತಾನು ಆಡಿದ ಮಾತಿನಿಂದಲೇ, ತನಗೆ-ವಿದ್ರೋಹಂ- ತನೆಗೇ ಮೋಸವು ಆಯ್ತು- ಆಯಿತು, ಎನುತ್ತುಂ-ಎಂದು, ಬಗೆದಳ್-ಯೋಚಿಸಿದಳು. ಕಂದಪದ್ಯ)


ಹರಿಣೀ॥ ಮನದೆ ತಿಳಿದಳ್ ಕಷ್ಟಂ ನಷ್ಟಂ ಭವಿಷ್ಯದೆ ಬರ್ಪುದಂ

ತನಗೆ ಜಯಮೆಂತಕ್ಕುಂ ಕರ್ಪಿಂದೆ ಬಾಲಮದಿಲ್ಲದೇ 

ವಿನತೆ ಗೆಲಲಾಂ ಬಾೞೆಂ ಸೋಲ್ತುಂ ಬರ್ದುಂಕುವುದೆಂತುಟೆಂ-

ದೆನುತೆ ಕಪಟಂಗೆಯ್ಯಲ್ ನೋಂತಳ್ ಭುಜಂಗಮಮಾತೆ ತಾಂ॥೭೨॥

(ಟೀ-ಭುಜಂಗಮಮಾತೆ-ಸರ್ಪಗಳ ಜನನಿಯಾದ ಕದ್ರುವು, ತಾಂ-ತಾನು, ಮನದೆ-ಮನಸ್ಸಿನಲ್ಲಿಯೇ, ಕಷ್ಟಂ-ಕಷ್ಟವೂ, ನಷ್ಟಂ-ನಷ್ಟವೂ, ಭವಿಷ್ಯದೆ-ಮುಂದಿನ ಕಾಲದಲ್ಲಿ, ಬರ್ಪುದಂ-ಬರುವುದನ್ನು, ತಿಳಿದಳ್-ತಿಳಿದಳು. ತನಗೆ-ತನಗೆ(ಕದ್ರುವಿಗೆ) ಕರ್ಪಿಂದೆ-ಕಪ್ಪುಬಣ್ಣದಿಂದ, ಬಾಲಂ- ಕುದುರೆಯ ಬಾಲವು, ಅದು ಇಲ್ಲದೇ- ಅದು ಇಲ್ಲದಿರಲು, ಜಯಂ-ಗೆಲುವು, ಎಂತಕ್ಕುಂ-ಹೇಗೆ ತಾನೇ ಆಗುತ್ತದೆ! ವಿನತೆ-ಸವತಿಯಾದ ವಿನತೆಯು ಗೆಲಲ್- ಜಯವನ್ನು ಹೊಂದಲು, ಆಂ-ನಾನು, ಬಾೞೆಂ-ಬಾಳುವುದಿಲ್ಲ. ಸೋಲ್ತುಂ-ಸೋತರೂ, ಬರ್ದುಂಕುವುದು-ಬದುಕುವುದು, ಎಂತುಟು-ಹೇಗೆ! ಎಂದೆನುತೆ-ಎಂದೆನ್ನುತ್ತ, ಕಪಟಂಗೆಯ್ಯಲ್-ಕಪಟವನ್ನು ಮಾಡಲು/ಮೋಸವನ್ನು ಮಾಡಲು, ನೋಂತಳ್-ಸಿದ್ಧಳಾದಳು/ನಿಶ್ಚಯಿಸಿದಳು. ಹರಿಣೀವೃತ್ತ)


ಅನವದ್ಯ॥ ಕರೆದು ಮಕ್ಕಳನಾಕೆಯೆ ಕಟ್ಟೇಕಾಂತದೆ ಪೇೞುತೆ ಸಂದುದಂ

ಭರದೆ ಸೂಚಿಸಿದಳ್ ಸುತರೆಲ್ಲರ್ ತಾಯಿಯೊ ದಾಸ್ಯಕೆ ಸಲ್ಲದಂ-

ತರರೆ! ಕಾಯ್ವುದು ನಿಮ್ಮಯ ಕರ್ತವ್ಯಂ ಜವದಿಂ ಹಯಪುಚ್ಛಕಂ

ನೆರೆದೊಡಪ್ಪುದು ಬಾಲಮೆ ಕರ್ಪಿಂದೊಪ್ಪುತೆ ಗೆಲ್ವೆನದಾಗಳಾಂ ॥೭೩॥

(ಟೀ-ಆಕೆಯೆ-ಕದ್ರುವು, ಮಕ್ಕಳಂ-ತನ್ನ ಮಕ್ಕಳಾದ ಸಾವಿರ ಸರ್ಪಗಳನ್ನು/ಕಾದ್ರವೇಯರನ್ನು,  ಕಟ್ಟೇಕಾಂತದೆ-ಬಹಳ ಏಕಾಂತದಲ್ಲಿ, ಕರೆದು-ಕರೆದು, ಸಂದುದಂ-ಆಗಿದ್ದೆಲ್ಲವನ್ನೂ, ಪೇೞುತೆ-ಹೇಳುತ್ತ, ಭರದೆ-ಬೇಗನೇ, ಸೂಚಿಸಿದಳ್- ಸೂಚಿಸಿದಳು, ಅರರೆ!-ಅರರೇ! ಸುತರೆಲ್ಲರ್-ಮಕ್ಕಳೆಲ್ಲರೂ ತಾಯಿಯೊ-ತಾಯಿಯು, ದಾಸ್ಯಕೆ ಸಲ್ಲದಂತೆ-ದಾಸ್ಯವೆಂಬ ಕೆಲಸಕ್ಕೆ ಇನ್ನೊಬ್ಬಬರ ಸೇವಕಿಯಾಗದಂತೆ/ತೊತ್ತಾಗದಂತೆ, ಕಾಯ್ವುದು-ಕಾಪಾಡುವುದು, ನಿಮ್ಮಯ-ನಿಮ್ಮೆಲ್ಲರ, ಕರ್ತವ್ಯಂ-ಕರ್ತವ್ಯ/ಮಾಡಲೇಬೇಕಾದ ಕೆಲಸ. ಜವದಿಂ-ಬೇಗದಲ್ಲಿ, ಹಯಪುಚ್ಛಕಂ-ಉಚ್ಚೈಶ್ರವಸ್ಸೆಂಬ ಆ ಕುದುರೆಯ ಬಾಲಕ್ಕೆ, ನೆರೆದೊಡೆ-ಸೇರಿಕೊಳ್ಳಲು/ನೆರೆಯಲು, ಬಾಲಮೆ-ಬಾಲವೇ, ಕರ್ಪಿಂದೆ-ಕಪ್ಪುಬಣ್ಣದಿಂದ, ಅಪ್ಪುದು-ಆಗುವುದು, ಅದಾಗಳ್-ಅದು ಆದಾಗ, ಒಪ್ಪುತೆ-ಒಪ್ಪುತ್ತ/ಶೋಭಿಸುತ್ತ, ಆಂ-ನಾನು, ಗೆಲ್ವೆಂ-ಗೆಲ್ಲುತ್ತೇನೆ. ಇದು ಕನ್ನಡದಲ್ಲಿ ವಿರಳವಾಗಿ ಕಾಣುವ ಅನವದ್ಯ ಎಂಬ ವೃತ್ತ.)


ಚಂ॥ ಚಿರದಿನೆ ಮಕ್ಕಳಂ ಕುದುರೆಬಾಲದೊಳಂಟಿಕೊಳಲ್ಕೆ ಪೇ-

ೞ್ದರಸುತೆ ಸುಳ್ಳುದಾರಿಯೊಳೆ ಮೋಸದ ಮಂಟಪಕೆಂದು ಸಾರ್ದು ಮೇಣ್

ಪಿರಿದಭಿಸಾರಮಂ ನಡೆಸಿದಳ್ ಗಡ ದುರ್ಯಶದಾ ಬೊಜಂಗನೊಳ್

ತರಮೆನೆ ನಾಮದಿಂ ಭುಜಗಮಾತೆಯೆ ಸಂದಪಳಲ್ತೆ ಕದ್ರುವೇ ॥೭೪॥

(ಟೀ-ಚಿರದಿನೆ-ಶೀಘ್ರದಲ್ಲಿ, ಮಕ್ಕಳಂ-ಮಕ್ಕಳನ್ನು, ಕುದುರೆಬಾಲದೊಳ್-ಕುದುರೆಯ ಬಾಲದಲ್ಲಿ, ಅಂಟಿಕೊಳಲ್ಕೆ-ಅಂಟಿಕೊಳ್ಳಲು, ಪೇೞ್ದು-ಹೇಳಿ, ಅರಸುತೆ-ಹುಡುಕುತ್ತಾ, ಸುಳ್ಳುದಾರಿಯೊಳೆ-ಸುಳ್ಳಿನ ದಾರಿಯಲ್ಲಿ, ಮೋಸದ ಮಂಟಪಕೆಂದು-ಮೋಸದ ಮಂಟಪಕ್ಕೆ ಎಂದು, ಸಾರ್ದು-ಹೋಗಿ, ಮೇಣ್-ಮತ್ತೆ, ಪಿರಿದು-ದೊಡ್ಡ, ಅಭಿಸಾರಮಂ-ಅಭಿಸಾರವನ್ನು, ದುರ್ಯಶದಾ-ದುರ್ಯಶ/ಕೆಟ್ಟ ಯಶಸ್ಸು ಎಂಬ, ಬೊಜಂಗನೊಳ್-ಬೊಜಂಗನಲ್ಲಿ/ಭುಜಂಗನಲ್ಲಿ/ಜಾರನಲ್ಲಿ, ನಡೆಸಿದಳ್ ಗಡ- ನಡೆಸಿದಳಲ್ಲವೇ! ತರಮೆನೆ(ತರಂ+ಎನೆ)-ಮೇಲಾಗಿ, ಕದ್ರುವೇ-ಕದ್ರುವು, ನಾಮದಿಂ-ಹೆಸರಿನಿಂದ, ಭುಜಗಮಾತೆಯೆ-ಭುಜಗಮಾತೆ/ಹಾವುಗಳ ತಾಯಿಯೇ, ಸಂದಪಳ್+ಅಲ್ತೆ-ಅಲ್ಲವೇ!  ಚಂಪಕಮಾಲಾವೃತ್ತ.

ಅಭಿಸಾರಿಕೆ ಎಂದರೆ ಗುಟ್ಟಿನಲ್ಲಿ ಪ್ರಿಯತಮನನ್ನು ಸೇರುವುದಕ್ಕೆ ಹೋಗುವವಳು. ಅಭಿಸಾರವೆಂದರೆ ಗುಟ್ಟಾಗಿ ಪ್ರಿಯರನ್ನು ಸೇರುವುದು. ಈ ಪದ್ಯದಲ್ಲಿ- ಕದ್ರು ಸುಳ್ಳಿನ ದಾರಿಯಲ್ಲಿ ಮೋಸದ ಮಂಟಪದಲ್ಲಿ ದುರ್ಯಶವೆನ್ನುವ ಜಾರನನ್ನು ಸೇರಿದಳು ಎಂದು ಮೊದಲ ಮೂರು ಸಾಲಿನಲ್ಲಿ ತಾತ್ಪರ್ಯ. ಹಳಗನ್ನಡದಲ್ಲಿ ಬೊಜಂಗ ಎಂದರೆ ಜಾರ-ವಿಟ ಎನ್ನುವಂತಹ ಅರ್ಥವಿದೆ.ಅದು ಸಂಸ್ಕೃತದ ಜಾರ-ವಿಟ ಎಂಬರ್ಥದ ಭುಜಂಗ ಎಂಬ ಶಬ್ದದ ತದ್ಭವ. ಭುಜಂಗ ಎಂದರೆ ಭುಜದಲ್ಲಿ ಸಾಗುವ ಸರ್ಪಗಳು ಎಂಬ ಅರ್ಥವೂ ಇದೆ. ಹಾಗಾಗಿ ಕದ್ರು ದುರ್ಯಶವೆನ್ನುವ ಭುಜಂಗನಲ್ಲಿ ಸೇರಿದಳು, ಎಷ್ಟಂದರೂ ಹೆಸರಿನಿಂದಲೇ ಅವಳು ಭುಜಂಗಮಾತೆಯೇ ಅಲ್ಲವೇ- ಎಂದು ಹೇಳುವಲ್ಲಿ ಶ್ಲೇಷವಿದೆ.)


ವ॥ ಅವಳಿಂತೆನೆ ಸಹಸ್ರಪುತ್ರರ್ಕಳೊಳ್ ಪಂಚಶತಪುತ್ರರ್ ತಾಯ ಮಾತಿಂಗೆ  ಬೆಸನಂಬಟ್ಟು ಪುಸಿಯಿಂ ಕಿತವದಿಂ ಗೆಲ್ವುದುಚಿತಮಲ್ಲಮೆಂದು ಚಿಂತಿಸಿ

(ಅವಳ್-ಅವಳು, ಇಂತೆನೆ-ಹೀಗೆನ್ನಲು, ಸಹಸ್ರಪುತ್ರರ್ಕಳೊಳ್-ಸಾವಿರ ಜನ ಮಕ್ಕಳಲ್ಲಿ, ಪಂಚಶತಪುತ್ರರ್-ಐದು ನೂರು ಜನ ಮಕ್ಕಳು, ತಾಯ-ತಾಯಿಯಾದ ಕದ್ರುವಿನ, ಮಾತಿಂಗೆ-ಮಾತಿಗೆ,  ಬೆಸನಂಬಟ್ಟು-ವ್ಯಸನವನ್ನು ಹೊಂದಿ, ಪುಸಿಯಿಂ-ಸುಳ್ಳಿನಿಂದ, ಕಿತವದಿಂ-ಮೋಸದಿಂದ, ಗೆಲ್ವುದು-ಗೆಲ್ಲುವುದು, ಉಚಿತಂ-ಯೋಗ್ಯವಾದದ್ದು, ಅಲ್ಲಂ-ಅಲ್ಲ, ಎಂದು-ಎಂದು, ಚಿಂತಿಸಿ-ಯೋಚಿಸಿ)


ಮ॥ ಜನನೀ ನಿನ್ನಯ ವಾಕ್ಯಮಾಯ್ತನುಚಿತಂ ಪಾಪಂಗಳಂ ನೀೞ್ವುದುಂ

ತನುಜರ್ಗಂಬೆಯೊ ನೋಡೆ ಸತ್ಯದೆಡೆಗಂ ಕೊಂಡೊಯ್ಯವೇಳ್ಕುಂ ಸ್ವಯಂ

ಮನುಜರ್ ಕಷ್ಟದೆ ದುಷ್ಟರಪ್ಪರೆನುವಂತಾದತ್ತು ನಿನ್ನಾಜ್ಞೆಯುಂ

ಜನಕಂ ನೆಟ್ಟ ಮರಕ್ಕೆ ನೇಣ ಬಿಗಿವರ್ ಮೂಢರ್ಕಳೇ ಸಲ್ವರೌ॥೭೫॥

(ಟೀ-ಜನನೀ-ತಾಯಿಯೇ! ನಿನ್ನಯ-ನೀನು ಹೇಳಿದ, ವಾಕ್ಯಂ-ಮಾತುಗಳು,ಅನುಚಿತಂ-ಅಯೋಗ್ಯವಾದದ್ದು/ಉಚಿತವಲ್ಲದವು, ಆಯ್ತು- ಆದವು, ಪಾಪಂಗಳಂ-ಪಾಪಗಳನ್ನೂ, ನೀೞ್ವುದುಂ-ಕೊಡುತ್ತದೆ, ನೋಡೆ-ನೋಡಿದರೆ, ತನುಜರ್ಗೆ-ಮಕ್ಕಳಿಗೆ, ಅಂಬೆಯೊ-ತಾಯಿಯೋ,  ಸತ್ಯದೆಡೆಗಂ-ಸತ್ಯದ ಕಡೆಗೆ, ಕೊಂಡೊಯ್ಯವೇಳ್ಕುಂ-ಕರೆದುಕೊಂಡು ಹೋಗಬೇಕು. ಸ್ವಯಂ-ಸ್ವತಃ, ಮನುಜರ್-ಮನುಷ್ಯರು, ಕಷ್ಟದೆ-ಕಷ್ಟದಲ್ಲಿ, ದುಷ್ಟರ್- ದುಷ್ಟರು,ಅಪ್ಪರ್-ಆಗುತ್ತಾರೆ, ಎನುವಂತೆ-ಎನ್ನುವಂತೆ, ನಿನ್ನ+ಆಜ್ಞೆಯುಂ-ನೀನು ಆಜ್ಞೆ ಮಾಡಿರುವುದೂ, ಆದತ್ತು-ಆಗಿದೆ, ಜನಕಂ-ತಂದೆಯಾದವನು, ನೆಟ್ಟ-ನೆಟ್ಟಿರುವ, ಮರಕ್ಕೆ-ಮರಕ್ಕೆ, ನೇಣ-ನೇಣುಹಗ್ಗವನ್ನು, ಬಿಗಿವರ್-ಕಟ್ಟುವವರು, ಮೂಢರ್ಕಳೇ-ಮೂರ್ಖರೇ, ಸಲ್ವರೌ-ಆಗುತ್ತಾರೆ. ಮತ್ತೇಭವಿಕ್ರೀಡಿತವೃತ್ತ.

ನಿನ್ನ ಮಾತುಗಳು ಅನುಸರಿಸಲು ತಕ್ಕದಲ್ಲ. ಪಾಪವೂ ಬರುವಂತಹ ಕೆಲಸ, ತಾಯಿಯಾದವಳು ಮಕ್ಕಳನ್ನು ಸತ್ಯದ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು,ಮನುಷ್ಯರು ಕಷ್ಟದಲ್ಲಿ ದುಷ್ಟರಾಗುತ್ತಾರೆ ಎಂಬಂತೆ ನಿನ್ನ ಆಜ್ಞೆಯೂ ಆಯ್ತು, ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದು ಮೂರ್ಖತನ ಎಂದು ಹೇಳುವ ಲೋಕೋಕ್ತಿಯಂತೆ ತಾಯಿಯಾದರೂ ಅವಳು ಹೇಳಿದ್ದು ಕೆಟ್ಟದ್ದಾದ ಕಾರಣ ಅದನ್ನು ಆಚರಿಸುವುದು ಸರಿಯಲ್ಲ ಎಂದು ಕದ್ರುವಿನ ಐನೂರು ಮಕ್ಕಳು ಆಲೋಚಿಸಿ ಹಾಗೆಯೇ ಅವಳಿಗೆ ಹೇಳಿದರು. )


ವ॥ ಎಂದು ತಾಯಂ ಮೂದಲಿಸೆ ಕೋಪದಿಂದಾಕೆ

(ಎಂದು-ಹೀಗೆಂದು, ತಾಯಂ-ತಾಯಿಯನ್ನು, ಮೂದಲಿಸೆ-ಮೂದಲಿಸಲು/ಬಯ್ಯಲು, ಕೋಪದಿಂದ-ಸಿಟ್ಟಿನಿಂದ, ಆಕೆ-ಅವಳು/ಕದ್ರುವು)


ಮ॥ ಸುತರೇ! ನೀವುಗಳೆನ್ನ ಬಾೞ್ತೆಸೆಱಗೊಳ್ ಸ್ಫಾರಸ್ಫುಲಿಂಗಂಗಳೇ

ಹಿತರೇ! ಕೊಳ್ಳಿಗಳಾದಿರೇ! ಬರ್ದುಕಿರಲ್ ತಾಯ್ಗಿಂತು ಕಿರ್ಚೀವರೇ 

ಮೃತಿಯಕ್ಕುಂ ನಿಮಗೆನ್ನ ಮಾತನದಟಿಂ ಮೀರಿರ್ಪುದರ್ಕಿಂತುಟೇ

ಹುತಭುಗ್ಜ್ವಾಲೆಗಳೊಳ್ ಕಱುಂಕೆಗಳವೊಳ್ ನೀಂ ಸಲ್ವುದುಂ ನಿಶ್ಚಿತಂ ॥೭೬॥

(ಟೀ-ಸುತರೇ!-ಮಕ್ಕಳೇ! ನೀವುಗಳ್-ನೀವೆಲ್ಲರೂ, ಎನ್ನ-ನನ್ನ, ಬಾೞ್ತೆಸೆಱಗೊಳ್-ಬದುಕೆಂಬ ಸೆರಗಿನಲ್ಲಿ, ಸ್ಫಾರಸ್ಫುಲಿಂಗಂಗಳೇ-(ಕಟ್ಟಿಕೊಂಡಿರುವ)ಉಣ್ಮುತ್ತಿರುವ ಬೆಂಕಿಯ ಕಿಡಿಗಳು, ಹಿತರೇ!-ಹಿತಕಾರಿಗಳೇ!/ಒಳ್ಳೆಯದನ್ನು ಮಾಡುವವರೇ! ಕೊಳ್ಳಿಗಳಾದಿರೇ-ಕೊಳ್ಳಿಗಳೇ ಆದಿರೇ-ಬೆಂಕಿಯ ಸೂಡಿಗಳೇ ಆದಿರೇ! ಬರ್ದುಕಿರಲ್-ಬದುಕಿರುವಾಗಳೇ, ತಾಯ್ಗೆ-ತಾಯಿಗೆ/ಹೆತ್ತವಳಿಗೆ, ಕಿರ್ಚೀವರೇ-ಬೆಂಕಿಯನ್ನು ಕೊಡುವವರೇ/ಬೆಂಕಿ ಹಾಕುವವರೇ! ಎನ್ನ-ನನ್ನ, ಮಾತಂ-ಮಾತನ್ನು, ಅದಟಿಂ-ಸೊಕ್ಕಿನಿಂದ/ಪರಾಕ್ರಮದಿಂದ, ಮೀರಿರ್ಪುದರ್ಕೆ-ಮೀರಿರುವುದಕ್ಕೆ, ಇಂತುಟೇ-ಹೀಗೆಯೇ, ನಿಮಗೆ-ನಿಮಗೆ ಮೃತಿಯಕ್ಕುಂ-ಸಾವು ಉಂಟಾಗುತ್ತದೆ,  ಹುತಭುಗ್ಜ್ವಾಲೆಗಳೊಳ್-ಬೆಂಕಿಯ ಜ್ವಾಲೆಗಳಲ್ಲಿ, ಕಱುಂಕೆಗಳವೊಳ್-ಗರಿಕೆ ಹುಲ್ಲಿನ ಹಾಗೆ, ನೀಂ-ನೀವುಗಳು, ಸಲ್ವುದುಂ-ಸಲ್ಲುವುದು, ನಿಶ್ಚಿತಂ-ನಿಶ್ಚಿತವಾದದ್ದು. ಮತ್ತೇಭವಿಕ್ರೀಡಿತವೃತ್ತ)


ವ॥ ಇಂತೆಂದು ಕದ್ರು ಕೋಪದಿಂ ಶಪಿಸಲ್ ಪುತ್ರರ್ಕಳ್ ಖಿನ್ನಮಾನಸರಾಗಿ ಪೊರಮಟ್ಟರ್

(ಇಂತೆಂದು-ಹೀಗೆಂದು, ಕದ್ರು-ಕದ್ರುವು, ಕೋಪದಿಂ-ಸಿಟ್ಟಿನಿಂದ, ಶಪಿಸಲ್-ಶಾಪವನ್ನು ಕೊಡಲು, ಪುತ್ರರ್ಕಳ್-ಮಕ್ಕಳು, ಖಿನ್ನಮಾನಸರಾಗಿ-ದುಃಖವನ್ನು ಹೊಂದಿದ ಮನಸ್ಸಿನಿಂದ, ಪೊರಮಟ್ಟರ್-ಹೊರಟರು.)


ಕಂ॥ ನವೆಯುತೆ ಮನದೊಳ್ ಚಿಂತಿಸು-

ತವಿಲಂಬದೆ ದಾಸ್ಯಮಪ್ಪುದೆನುತುಂ ಖತಿಯೊಳ್

ತವೆ ಕದ್ರು ದುಃಖಿಸಿರ್ದಳ್

ಭವಿತವ್ಯದ ಚಿಂತೆ ಸಾಜಮೈ ಸರ್ವರ್ಗಂ ॥೭೭॥

(ಟೀ-ನವೆಯುತೆ-ನವೆಯುತ್ತಾ/ಕಷ್ಟಪಡುತ್ತಾ, ಮನದೊಳ್-ಮನಸ್ಸಿನಲ್ಲಿಯೇ, ಚಿಂತಿಸುತೆ- ಆಲೋಚಿಸುತ್ತಾ, ಅವಿಲಂಬದೆ-ವಿಳಂಬವಿಲ್ಲದೇ, ದಾಸ್ಯಂ-ದಾಸ್ಯವು/ವಿನತೆಗೆ ದಾಸಿಯಾಗುವ ಸಂದರ್ಭವು, ಅಪ್ಪುದು-ಆಗುತ್ತದೆ, ಎನುತುಂ- ಎಂದು, ಖತಿಯೊಳ್-ಕೋಪದಲ್ಲಿ, ತವೆ-ಅತಿಶಯವಾಗಿ, ಕದ್ರು-ಕದ್ರುವು, ದುಃಖಿಸಿರ್ದಳ್-ದುಃಖಿಸಿದಳು. ಭವಿತವ್ಯದ-ಭವಿಷ್ಯದ/ಮುಂದೆ ಆಗುವುದರ, ಚಿಂತೆ-ಚಿಂತೆಯು, ಸರ್ವರ್ಗಂ-ಎಲ್ಲರಿಗೂ, ಸಾಜಮೈ-ಸಹಜವಾದದ್ದೇ ಆಗಿದೆ. ಕಂದಪದ್ಯ, ಭವಿಷ್ಯದ ಚಿಂತೆ ಎಲ್ಲರಿಗೂ ಇರುವುದೇ ಆಗುತ್ತದೆ ಎಂದು ಹೇಳುವಲ್ಲಿ ಲೋಕಸಾಮಾನ್ಯವ್ಯವಹಾರಕ್ಕೆ ಸಮೀಕರಿಸಿದ ಕಾರಣ ಅರ್ಥಾಂತರನ್ಯಾಸಾಲಂಕಾರವೂ ಆಗುತ್ತದೆ)


ವ॥ ಅಂತಲ್ಲದೆಯುಂ 

(ಹಾಗಲ್ಲದೆಯೂ)


ಕಂ॥ ಭರದಿಂ ಕೋಪಂಗೊಳುತುಂ

ವರಪುತ್ರರನಿಂತು ಶಪಿಸಿದೆಂ ಲೋಕದೊಳಂ

ಸುರಸಾಸೂನುಗಳಂದದೊ-

ಳುರಗಿಯು ಮಕ್ಕಳನೆ ತಿಂಬಳೆಂಬಂತಾಯ್ತೇ ॥೭೮॥

(ಟೀ-ಭರದಿಂ-ಬೇಗದಲ್ಲಿ, ಕೋಪಂಗೊಳುತುಂ(ಕೋಪಂ+ಕೊಳುತುಂ)-ಕೋಪವನ್ನು ಹೊಂದುತ್ತಾ, ವರಪುತ್ರರಂ-ಒಳ್ಳೆಯ ಮಕ್ಕಳನ್ನು, ಇಂತು-ಹೀಗೆ, ಶಪಿಸಿದೆಂ-ಶಪಿಸಿದೆ/ಶಾಪವನ್ನು ಕೊಟ್ಟೆ, ಲೋಕದೊಳಂ-ಜಗತ್ತಿನಲ್ಲಿ, ಸುರಸಾಸೂನುಗಳಂದದೊಳ್-ಸುರಸೆಯ ಮಕ್ಕಳ ಹಾಗೆ, ಉರಗಿಯು-ಹಾವುಗಳ ತಾಯಿ/ಹೆಣ್ಣು ಹಾವು, ಮಕ್ಕಳನೆ-ತನ್ನ ಮಕ್ಕಳನ್ನೇ, ತಿಂಬಳ್-ತಿನ್ನುತ್ತಾಳೆ, ಎಂಬಂತಾಯ್ತೇ-ಎನ್ನುವ ಹಾಗೆ ಆಯಿತೇ! 

ಕಂದಪದ್ಯ, ಸುರಸೆ ಎಂಬುವವಳೂ ಕಶ್ಯಪನ ಹೆಂಡತಿಯರಲ್ಲಿ ಇನ್ನೊಬ್ಬಳು. ಅವಳೂ ಕೂಡ ಸರ್ಪಗಳ ತಾಯಿ ಎಂದು ಪುರಾಣಪ್ರಸಿದ್ಧ. ಹಾವುಗಳು ತಮ್ಮ ಮೊಟ್ಟೆಗಳಲ್ಲೇ ಕೆಲವನ್ನು ತಿಂದುಬಿಡುತ್ತವೆ ಎಂಬುದೂ ಲೋಕದಲ್ಲಿ ಕಂಡುಬರುವುದೇ ಆಗಿದೆ. ಹಾಗಾಗಿ ಹಾವುಗಳ ತಾಯಿ ಹಾವನ್ನು ತಿನ್ನುತ್ತಾಳೆ ಎಂಬಂತೆ ತನ್ನ ಮಕ್ಕಳಿಗೆ ತಾನೇ ಸಾಯುವಂತೆ ಶಾಪಕೊಟ್ಟೆ ಎಂದು ಪರಿತಪಿಸಿದಳು ಎಂದು ಪದ್ಯದ ತಾತ್ಪರ್ಯ.)


ಕಂ।। ಕೋಪದಿನಾಂತರ್ಯದೊಳೀ

ತಾಪಂ ತಾಪದಿನೆ ಶಾಪಮಿತ್ತುದುಮಂತೇ

ಶಾಪದಿನನ್ವಯನಾಶಂ

ಕೋಪಂ ತಾಂ ಸರ್ವನಾಶಕಂ ಸಂದುದಲಾ ॥೭೯॥

(ಟೀ-ಕೋಪದಿಂ-ಕೋಪದಿಂದ/ಸಿಟ್ಟಿನಿಂದ, ಆಂತರ್ಯದೊಳೀ-ಮನಸ್ಸಿನಲ್ಲಿ, ತಾಪಂ-ಬಿಸಿ/ತಾಪವು, ತಾಪದಿನೆ-ತಾಪದಿಂದಲೇ/ಆ ಬಿಸಿಯಿಂದಲೇ, ಶಾಪಮಿತ್ತುದುಂ(ಶಾಪಂ+ಇತ್ತುದು)-ಶಾಪವಿತ್ತುದೂ, ಅಂತೇ-ಹಾಗೆಯೇ, ಶಾಪದಿಂ-ಶಾಪವನ್ನು ಕೊಟ್ಟಿದ್ದರಿಂದ, ಅನ್ವಯನಾಶಂ-ವಂಶದ ನಾಶವು(ಆಗುತ್ತದೆ) ಕೋಪಂ-ಸಿಟ್ಟು ಎಂಬುದು, ತಾಂ-ತಾನು, ಸರ್ವನಾಶಕಂ-ಎಲ್ಲವನ್ನೂ ನಾಶವನ್ನು ಮಾಡುವುದು, ಸಂದುದಲಾ-ಆಯಿತಲ್ಲವೇ! ಕಂದಪದ್ಯ,ಕಾರಣಮಾಲಾ ಎಂಬ ಅಲಂಕಾರ)


ಕಂ।। ವೇದನೆಯಾದೊಡೆ ಪಡೆವೊಡೆ

ಮೋದದೆ ತಳೆದಿರ್ದ ಮಕ್ಕಳಂ ಶಪಿಸಿರ್ಪೆಂ

ಛೇದಿಸಿಕೊಂಡೆಂ ಮೂಗಂ

ಖೇದಂಬಡೆ ಮತ್ತೆ ಮೊಳೆವುದೇ ಎಂದೞಲ್ದಳ್॥೮೦॥

(ಟೀ-ಪಡೆವೊಡೆ-ಪಡೆಯುವಾಗ/ಹಡೆಯುವಾಗ, ವೇದನೆಯಾದೊಡೆ-ನೋವಾದರೂ, ಮೋದದೆ-ಸಂತೋಷದಿಂದ, ತಳೆದಿರ್ದ-ಹೊಂದಿದ್ದ, ಮಕ್ಕಳಂ-ಮಕ್ಕಳನ್ನು, ಶಪಿಸಿರ್ಪೆಂ-ಶಪಿಸಿದೆ, ಮೂಗಂ-ಮೂಗನ್ನು, ಛೇದಿಸಿಕೊಂಡೆಂ-ಕತ್ತರಿಸಿಕೊಂಡೆ,ಖೇದಂಬಡೆ-ದುಃಖವನ್ನು ಪಟ್ಟರೆ, ಮತ್ತೆ-ಇನ್ನೊಮ್ಮೆ, ಮೊಳೆವುದೇ-ಮೊಳಕೆಯೊಡೆಯುತ್ತದೆಯೇ/ಹುಟ್ಟುತ್ತದೆಯೇ/ಚಿಗುರುತ್ತದೆಯೇ, ಎಂದೞಲ್ದಳ್-ಎಂದು ದುಃಖಿಸಿದಳು.)


ವ॥ ಎಂದು ಪಲವುಂ ತೆಱದಿಂದೆ ಅೞಲುತ್ತುಮಿರಲಿತ್ತಲ್

(ಎಂದು-ಹೀಗೆಂದು, ಪಲವುಂ-ಹಲವು, ತೆಱದಿಂದೆ-ವಿಧದಿಂದ, ಅೞಲುತ್ತುಂ-ದುಃಖಿಸುತ್ತ, ಇರಲ್-ಇರಲು, ಇತ್ತಲ್-ಇತ್ತ ಕಡೆಯಲ್ಲಿ)


ತೋಟಕ॥ ಘಟಿತಂ ಘಟಿತಂ ಭವಿತವ್ಯದೊಳಾಂ

ಸ್ಫುಟದಿಂ ಚಟುಲಾಗ್ನಿಗೆ ಬಿಳ್ದಪೆವೈ

ತ್ರುಟಿಯಾಗದವೊಲ್ ಬರ್ದುಕಲ್ಕೆನೆ ನಿ

ಚ್ಚಟದಿಂ ಘನಮಾರ್ಗಮೆ ದಲ್ ದೊರೆಗುಂ॥೮೧॥

(ಟೀ-ಘಟಿತಂ-ಆಗಿರುವುದು, ಘಟಿತಂ-ಆಯ್ತು, ಭವಿತವ್ಯದೊಳ್- ಭವಿಷ್ಯದಲ್ಲಿ/ಮುಂದಿನ ಕಾಲದಲ್ಲಿ, ಆಂ-ನಾವು, ಸ್ಫುಟದಿಂ-ಸ್ಪಷ್ಟವಾಗಿ, ಚಟುಲಾಗ್ನಿಗೆ-ತೀಕ್ಷ್ಣವಾದ ಅಗ್ನಿಯಲ್ಲಿ/ಬೆಂಕಿಯಲ್ಲಿ, ಬಿಳ್ದಪೆವೈ-ಬೀಳುತ್ತೇವೆ, ತ್ರುಟಿಯಾಗದವೊಲ್-ತ್ರುಟಿ-ತೊಂದರೆಯಾಗದಂತೆ, ಬರ್ದುಕಲ್ಕೆ+ಎನೆ-ಬದುಕುವುದಕ್ಕೆನ್ನಲು, ನಿಚ್ಚಟದಿಂ-ನಿಶ್ಚಯದಿಂದ, ಘನಮಾರ್ಗಮೆ-ಗಟ್ಟಿಯಾದ/ದೊಡ್ಡದಾದ ದಾರಿಯು, ದಲ್ ದೊರೆಗುಂ-ದೊರೆಯುವುದಲ್ಲವೇ! ತೋಟಕವೃತ್ತ.)


ದ್ರು॥ ಜನನಿ ಕಷ್ಟಮನಾಂತೊಡೆ ಖೇದಮೆಂ-

ದೆನುತೆ ಮಕ್ಕಳೆ ಚಿಂತಿಸಿ ಸರ್ವರುಂ

ಘನವಟಕ್ಕೆ ಬಿಳಲ್ಗಳವೋಲೆ ಶ-

ಕ್ರನ ಸದಶ್ವದ ಬಾಲಕೆ ಜೋಲ್ದುವೈ ॥೮೨॥

(ಟೀ-ಜನನಿ-ತಾಯಿಯು, ಕಷ್ಟಮಂ-ಕಷ್ಟವನ್ನು,ಆಂತೊಡೆ-ತಳೆದರೆ/ಹೊಂದಿದರೆ, ಖೇದಂ-ದುಃಖವು, ಎಂದೆನುತೆ-ಎಂದೆನ್ನುತ್ತಾ, ಮಕ್ಕಳೆ-ಸರ್ಪಗಳೆಲ್ಲವೂ, ಚಿಂತಿಸಿ-ಯೋಚನೆ ಮಾಡಿ, ಸರ್ವರುಂ-ಎಲ್ಲರೂ, ಘನವಟಕ್ಕೆ-ದೊಡ್ಡ ಆಲದ ಮರಕ್ಕೆ, ಬಿಳಲ್ಗಳವೋಲೆ-ಬಿಳಲುಗಳು ಇರುವಂತೆ, ಶಕ್ರನ-ಇಂದ್ರನ, ಸದಶ್ವದ-ಒಳ್ಳೆಯ ಕುದುರೆಯ, ಬಾಲಕೆ-ಬಾಲಕ್ಕೆ, ಜೋಲ್ದುವೈ-ಜೋತವು/ನೇತಾಡಿದವು. ದ್ರುತವಿಲಂಬಿತವೃತ್ತ)


ವ॥ ಅಂತು ಕಾದ್ರವೇಯರ್ ತಾಯ್ಗೆ ಸಲ್ವ ಕಷ್ಟಮಂ ಕಳೆಯಲೆಂದು ನೋಂತು ಉಚ್ಛೈಶ್ರವಸ್ಸಿನ ಬಾಲಕ್ಕೆ ಅಂಟಿಕೊಂಡುಂ ತಾಯ ಶಾಪದಿಂ ಮೋಕ್ಷಮಂ ಪಡೆಯಲಾಱದಾದುವು. ಅಂತೆನೆ ತಾಯ ಶಾಪದ ಕಾರಣದಿಂ ಜನಮೇಜಯಂ ಗೆಯ್ದ ಸರ್ಪಸತ್ರದೊಳ್ ಸರ್ಪಂಗಳ್ ಕ್ರಮದಿಂ ಅಗ್ನಿಗಾಹುತಿಯಾದುದುಂ ಸಂದತ್ತು ಎಂದು ಸೂತಪುರಾಣಿಕರ್ ಕಥಾನಕಮಂ ಮುಗಿಸಲ್ ತಗುಳೆ ಶೌನಕಾದಿ ಮುನಿಗಳ್ ಕೇಳ್ದಪರ್

(ಅಂತು-ಹೀಗೆ, ಕಾದ್ರವೇಯರ್-ಕದ್ರುವಿನ ಮಕ್ಕಳು, ತಾಯ್ಗೆ-ತಾಯಿಗೆ/ಕದ್ರುವಿಗೆ, ಸಲ್ವ-ಸಲ್ಲುವ, ಕಷ್ಟಮಂ-ಕಷ್ಟವನ್ನು, ಕಳೆಯಲೆಂದು-ಕಳೆಯಬೇಕೆಂದುಕೊಂಡು, ನೋಂತು-ನಿರ್ಧರಿಸಿ, ಉಚ್ಛೈಶ್ರವಸ್ಸಿನ-ಸಮುದ್ರಮಥನದಲ್ಲಿ ಬಂದ ಉಚ್ಚೈಶ್ರವಸ್ಸೆಂಬ ಬಿಳಿಯ ಕುದುರೆಯ, ಬಾಲಕ್ಕೆ-ಬಾಲಕ್ಕೆ/ಪುಚ್ಛಕ್ಕೆ, ಅಂಟಿಕೊಂಡುಂ-ಅಂಟಿಕೊಂಡರೂ, ತಾಯ-ಜನನಿಯ, ಶಾಪದಿಂ-ಶಾಪದಿಂದ, ಮೋಕ್ಷಮಂ-ಬಿಡುಗಡೆಯನ್ನು, ಪಡೆಯಲಾಱದಾದುವು-ಪಡೆಯಲಾರದವು ಆದವು. ಅಂತೆನೆ-ಹಾಗೆನ್ನಲು, ತಾಯ-ತಾಯಿಯ, ಶಾಪದ-ಶಾಪದ, ಕಾರಣದಿಂ-ಕಾರಣದಿಂದ, ಜನಮೇಜಯಂ-ಜನಮೇಜಯನು, ಗೆಯ್ದ-ಮಾಡಿದ, ಸರ್ಪಸತ್ರದೊಳ್-ಸರ್ಪಯಾಗದಲ್ಲಿ, ಸರ್ಪಂಗಳ್-ಈ ಸರ್ಪಗಳು/ಹಾವುಗಳು, ಕ್ರಮದಿಂ-ಕ್ರಮವಾಗಿ, ಅಗ್ನಿಗೆ-ಯಜ್ಞದ ಅಗ್ನಿಯಲ್ಲಿ, ಆಹುತಿಯಾದುದುಂ-ಆಹುತಿಯಾದದ್ದೂ/ಸತ್ತು ಹೋದದ್ದೂ, ಸಂದತ್ತು-ಆಯಿತು, ಎಂದು-ಎಂದು, ಸೂತಪುರಾಣಿಕರ್-ಸೂತಪುರಾಣಿಕರು, ಕಥಾನಕಮಂ-ತಾವು ಹೇಳುತ್ತಿರುವ ಕಥೆಯನ್ನು, ಮುಗಿಸಲ್-ಮುಗಿಸಲು/ಕೊನೆಗೊಳಿಸಲು, ತಗುಳೆ-ಹತ್ತಲು/ನಿಶ್ಚಯಿಸಲು, ಶೌನಕಾದಿ ಮುನಿಗಳ್-ಶೌನಕರೇ ಮೊದಲಾದ ಮುನಿಗಳು, ಕೇಳ್ದಪರ್-ಕೇಳಿದರು)


ಚಂ॥ ಅರರೆ! ಪುರಾಣವಿನ್ಮುನಿಪರೇ ಕಥನಕ್ರಮಮದ್ಭುತಂ ಮಗುಳ್

ಸುರುಚಿರಕೌತುಕಾನ್ವಿತವಿಶೇಷವಿಶಾಲವಿನೋದಘಟ್ಟದೊಳ್

ಭರದೆ ಸಮಾಪ್ತಿಗೆಯ್ದೊಡಿದು ಸಲ್ಲದು ಸಲ್ಲದು ಪೇೞಿಮಿನ್ನುಮಿಂ-

ತುರಗಕುಲಕ್ಕೆ ಮೇಣ್ ವಿನತೆಗಾದುದನೆಲ್ಲಮನೆಂದು ಪೇೞ್ದಪರ್ ॥೮೩॥

(ಟೀ-ಅರರೆ!-ಅರರೇ, ಪುರಾಣವಿನ್ಮುನಿಪರೇ(ಪುರಾಣವಿತ್+ಮುನಿಪರೇ)-ಪುರಾಣವನ್ನು ತಿಳಿದುಕೊಂಡ ಮುನೀಂದ್ರರೇ, ಕಥನಕ್ರಮಂ-ಕಥೆಯನ್ನು ಹೇಳುವ ಕ್ರಮವು, ಅದ್ಭುತಂ-ಅದ್ಭುತವಾದದ್ದು,  ಮಗುಳ್-ಮತ್ತೆ, ಸುರುಚಿರ-ಕೌತುಕಾನ್ವಿತ-ವಿಶೇಷ-ವಿಶಾಲ-ವಿನೋದ-ಘಟ್ಟದೊಳ್-ಸುಂದರವಾದ ಕುತೂಹಲವುಳ್ಳ ವಿಶೇಷವಾದ ವಿಶಾಲವಾದ ವಿನೋದದ ಘಟ್ಟದಲ್ಲಿ, ಭರದೆ-ಬೇಗನೇ, ಸಮಾಪ್ತಿಗೆಯ್ದೊಡೆ-ಮುಗಿಸಿಬಿಟ್ಟರೆ, ಇದು-ಈ ಕ್ರಮವು, ಸಲ್ಲದು ಸಲ್ಲದು-ಸಲ್ಲುವುದಿಲ್ಲ ಸಲ್ಲುವುದಿಲ್ಲ. ಇನ್ನುಂ-ಇನ್ನೂ, ಇಂತು-ಹೀಗೆ, ಉರಗಕುಲಕ್ಕೆ-ಸರ್ಪಕುಲಕ್ಕೆ, ಮೇಣ್-ಮತ್ತೆ, ವಿನತೆಗೆ-ವಿನತೆಗೆ, ಆದುದಂ- ಆದದ್ದನ್ನು ಎಲ್ಲಮಂ-ಎಲ್ಲವನ್ನೂ ಪೇೞಿಂ-ಹೇಳಿರಿ, ಎಂದು-ಎಂದು ಪೇೞ್ದಪರ್-ಹೇಳಿದರು ಚಂಪಕಮಾಲಾವೃತ್ತ.)


ವ॥ಅಂತಲ್ಲದೆಯುಂ 

(ಹಾಗಲ್ಲದೆಯೂ)


ಕಂ॥ ಮುಗಿಯದೆ  ಕುತುಕಂ ಕಥೆಯೊಳ್

ತಗದಿಂತುಟು ನಿಲ್ಲಿಸಲ್ಕೆ ಮುನಿಪರೆ ಮುನಿವರ್ 

ಸೊಗದೆ ರಸಘಟ್ಟಿ ಬಾರದೆ

ಜಗುೞಲ್ ಮೇಣ್ ಸಲ್ಲದಲ್ತೆ ಕತೆಯೊಳ್ ರತದೊಳ್ ॥೮೪॥

(ಟೀ-ಕಥೆಯೊಳ್-ಕಥೆಯಲ್ಲಿ, ಕುತುಕಂ-ಕುತೂಹಲವು,  ಮುಗಿಯದೆ-ಮುಗಿಯದೇ ಇದ್ದಾಗ, ಇಂತುಟು-ಹೀಗೆ, ನಿಲ್ಲಿಸಲ್ಕೆ-ನಿಲ್ಲಿಸುವುದಕ್ಕೆ ತಗದು-ಯೋಗ್ಯವಾಗುವುದಿಲ್ಲ. ಮುನಿಪರೆ-ಋಷಿಗಳೇ, ಮುನಿವರ್-ಸಿಟ್ಟಾಗುತ್ತಾರೆ. ಸೊಗದೆ-ಚೆನ್ನಾಗಿ, ರಸಘಟ್ಟಿ-ರಸಘಟ್ಟಿ/ರಸಸ್ಥಾನವು, ಬಾರದೆ-ಬರದಿರುವಾಗ, ಜಗುೞಲ್-ದೂರ ಹೋಗಲು, ಮೇಣ್-ಮತ್ತೆ, ಕತೆಯೊಳ್-ಕಥೆಯಲ್ಲಿಯೂ, ರತದೊಳ್-ರತಿಕ್ರೀಡೆಯಲ್ಲಿಯೂ, ಸಲ್ಲದಲ್ತೆ-ಸಲ್ಲುವುದಿಲ್ಲ ಅಲ್ಲವೇ! ಕಂದಪದ್ಯ)


ಕಂ।। ಮುಂದಿನ ದಿನದೊಳ್ ಪಂದ್ಯದೆ

ಸಂದುದದೇಂ ಕದ್ರುವಾ ವಿನತೆಯುಮದೆಂತಾ

ನಂದದೆ ಪೋದರ್ ನೋಡಲ್

ಬೃಂದಾರಕಕುಲಪವಾಜಿಯೆಂತೆಸೆದಿರ್ಕುಂ ॥೮೫॥

(ಟೀ-ಮುಂದಿನ-ಮಾರನೆಯ, ದಿನದೊಳ್-ದಿನದಲ್ಲಿ, ಪಂದ್ಯದೆ-ಸ್ಪರ್ಧೆಯಲ್ಲಿ, ಅದೇಂ-ಅದೇನು, ಸಂದುದು- ಆಯಿತು.  ಕದ್ರುವು-ಕದ್ರುವು, ಆ ವಿನತೆಯುಂ-ಆ ವಿನತೆಯೂ, ಅದೆಂತು-ಅದ ಹೇಗೆ, ಆನಂದದೆ-ಸಂತೋಷದಿಂದ, ನೋಡಲ್-ನೋಡಲು, ಪೋದರ್-ಹೋದರು, ಬೃಂದಾರಕ-ಕುಲಪ-ವಾಜಿಯು- ದೇವತೆಗಳ ಕುಲದ ಒಡೆಯನಾದ ಇಂದ್ರನ ಕುದುರೆಯು, ಎಂತು-ಹೇಗೆ, ಎಸೆದಿರ್ಕುಂ-ಶೋಭಿಸಿತ್ತು. ಕಂದಪದ್ಯ)


ಕಂ।। ದೊರೆತೊಡೆ ಶಾಪಂ ಬರ್ದುಕುವು

ದರಿದೆನುತೇಂ ಬಾೞ್ವ ಬಯಕೆಯಂ ಬಿಟ್ಟವೆ ಮೇಣ್

ಮರಣಂ ಸಾರ್ದೊಡೆ ಜಗದೊಳ

ಗಿಱುಂಪೆಯುಂ ಪೋರ್ವುದೈ ಜಿಜೀವಿಷೆಯಿಂದಂ॥೮೬॥

(ಟೀ-(ಕದ್ರುವಿನ ಮಕ್ಕಳು)ಶಾಪಂ-ಶಾಪವು, ದೊರೆತೊಡೆ-ಬಂದಾಗ,  ಬರ್ದುಕುವುದು-ಬದುಕುವುದು, ಅರಿದು+ಎನುತೆ-ಕಷ್ಟವೆನ್ನುತ್ತ, ಬಾೞ್ವ-ಬದುಕುವ, ಬಯಕೆಯಂ-ಆಸೆಯನ್ನೇ ಬಿಟ್ಟವೆ ಏಂ-ಬಿಟ್ಟವೇನು? ಮೇಣ್-ಮತ್ತೆ, ಮರಣಂ-ಮೃತ್ಯುವು, ಸಾರ್ದೊಡೆ-ಸನಿಹಕ್ಕೆ ಬಂದಾಗ, ಜಗದೊಳಗೆ-ಜಗತ್ತಿನಲ್ಲಿ, ಇಱುಂಪೆಯುಂ-ಇರುವೆಯೂ ಕೂಡ, ಜಿಜೀವಿಷೆಯಿಂದಂ-ಬದುಕುವ ಇಚ್ಛೆಯಿಂದ, ಪೋರ್ವುದೈ-ಹೋರಾಡುವುದು! ಕಂದಪದ್ಯ)


ಕಂ।। ವಿನತೆಗೆ ಪುಟ್ಟಿದ ಮಕ್ಕಳೊ

ಳೆನಿತೋ ವೀರತ್ವಮಿರ್ಪನಿನ್ನೊರ್ವ ಸುತಂ

ಮುನಿದಣ್ಣನಿತ್ತ ಶಾಪಮ

ನೆನಿತೇಂ ಪರಿಹರಿಸಿ ಕಾಯ್ದನೋ ಪೇೞಿಮಲಾ! ॥೮೭॥

(ಟೀ- ವಿನತೆಗೆ-ವಿನತೆಗೆ, ಪುಟ್ಟಿದ-ಹುಟ್ಟಿದ, ಮಕ್ಕಳೊಳ್-ಮಕ್ಕಳಲ್ಲಿ, ಎನಿತೋ-ಎಷ್ಟೋ, ವೀರತ್ವಂ-ವೀರತ್ವ/ಪರಾಕ್ರಮವು, ಇರ್ಪಂ-ಇರುವವನು, ಇನ್ನೊರ್ವ-ಇನ್ನೊಬ್ಬ, ಸುತಂ-ಮಗನು,ಮುನಿದು-ಸಿಟ್ಟಾಗಿ, ಅಣ್ಣಂ-ಅಣ್ಣನಾದ ಅರುಣನು, ಇತ್ತ-ಕೊಟ್ಟ, ಶಾಪಮಂ-ಶಾಪವನ್ನು, ಎನಿತೇಂ-ಹೇಗೆ ಏನು, ಪರಿಹರಿಸಿ-ಪರಿಹಾರ ಮಾಡಿ/ನಿವಾರಿಸಿ, ಕಾಯ್ದನೋ-ಕಾಪಾಡಿದನೋ, ಪೇೞಿಮಲಾ!-ಹೇಳಿರಿ. ಕಂದಪದ್ಯ)


ಕಂ।। ಅವನಾರ್ ಬೀರದೆ ಗೆಲ್ದಂ

ಸವತಿಯದೆಂತೊಪ್ಪಿದಳ್ ಬಿಡಲ್ ದಾಸ್ಯಮನೇ

ಜವದಿಂ ಕುತುಕಮನೞುಪಲ್

ಕವನಿಸಿ ನೀಮಿಂತು ಪೇೞಿಮುಳಿದುದನೀಗಳ್ ॥೮೮॥

(ಟೀ-ಅವನಾರ್-ಅವನು ಯಾರು, ಬೀರದೆ-ಪರಾಕ್ರಮದಿಂದ, ಗೆಲ್ದಂ-ಗೆದ್ದವನು? ಸವತಿಯು- ಸವತಿಯಾದ ಕದ್ರುವು, ಅದೆಂತು-ಅದು ಹೇಗೆ, ದಾಸ್ಯಮನೇ-(ವಿನತೆಯ)ದಾಸ್ಯವನ್ನೇ, ಬಿಡಲ್-ಬಿಡುವುದಕ್ಕೆ,  ಒಪ್ಪಿದಳ್-ಒಪ್ಪಿದಳು? ಜವದಿಂ-ಬೇಗದಿಂದ, ಕುತುಕಮಂ-ಕುತೂಹಲವನ್ನು, ಅೞುಪಲ್-ಅಳಿಸಲು/ಕಳೆಯಲು, ಈಗಳ್-ಈಗ, ಕವನಿಸಿ-ಕವಿತೆಗಳನ್ನು ರಚಿಸಿ, ನೀಂ ಇಂತು-ನೀವು ಹೀಗೆ, ಉಳಿದುದಂ-ಉಳಿದಿರುವುದನ್ನು, ಪೇೞಿಂ-ಹೇಳಿರಿ. ಕಂದಪದ್ಯ)


ವ॥ ಎಂದು ಸಮಸ್ತಮುನಿಕುಲಂ ಕೇಳ್ದೊಡಂ ಸೂತಪುರಾಣಿಕರ್ ಸಂತಸಂದಾಳ್ದು 

(ಎಂದು-ಹೀಗೆಂದು, ಸಮಸ್ತ-ಮುನಿಕುಲಂ-ಸಂಪೂರ್ಣವಾದ ಮುನಿಗಳ ಗುಂಪು, ಕೇಳ್ದೊಡಂ-ಕೇಳಿದೊಡನೆ, ಸೂತಪುರಾಣಿಕರ್-ಸೂತಪುರಾಣಿಕರು, ಸಂತಸಂದಾಳ್ದು-(ಸಂತಸಂ+ತಾಳ್ದು)-ಸಂತೋಷವನ್ನು ಹೊಂದುತ್ತಾ- )


ಕಂ॥ ಉತ್ತರಿಪೆಂ ಸಕಲಮನಾಂ

ಬಿತ್ತರಿಪೆಂ ಕಥೆಯನಿಂತು ತ್ವತ್ಕೌತುಕದಿಂ

ಚಿತ್ತಂ ಪಕ್ವಮೆ ಎನುತುಂ

ಸತ್ತಮರೆ ಪರೀಕ್ಷಿಸಲ್ಕೆ ನಿಲಿಸಿದೆನೆಂದರ್॥೮೯॥

(ಟೀ-ಸತ್ತಮರೆ-ಸತ್ತ್ವಶಾಲಿಗಳೇ!/ಸಜ್ಜನರೇ! ಸಕಲಮಂ-ಎಲ್ಲವನ್ನೂ, ಆಂ-ನಾನು, ಉತ್ತರಿಪೆಂ-ಉತ್ತರಿಸುತ್ತೇನೆ. ಕಥೆಯಂ-ಕಥೆಯನ್ನು, ಇಂತು-ಹೀಗೆ, ಬಿತ್ತರಿಪೆಂ-ವಿಸ್ತರಿಸುತ್ತೇನೆ/ವಿಸ್ತಾರವಾಗಿ ಹೇಳುತ್ತೇನೆ. ತ್ವತ್ಕೌತುಕದಿಂ(ತ್ವತ್+ಕೌತುಕದಿಂ)-ನಿಮ್ಮ ಕುತೂಹಲದಿಂದ, ಚಿತ್ತಂ-ಮನಸ್ಸು, ಪಕ್ವಮೆ-ಪಕ್ವವಾಗಿದೆಯಾ, ಎನುತುಂ- ಎನ್ನುತ್ತ, ಪರೀಕ್ಷಿಸಲ್ಕೆ-ಪರೀಕ್ಷಿಸುವುದಕ್ಕೆ,  ನಿಲಿಸಿದೆಂ-ನಿಲ್ಲಿಸಿದೆ, ಎಂದರ್-ಎಂದರು. ಕಂದಪದ್ಯ)


ವ॥ ಬೞಿಕಂ ವೈನತೇಯನ ಕಥೆಯಂ ಮುಂದುವರೆಸಲ್ ಗರುತ್ಮಂತನಂ ಸ್ತುತಿಸಿದರ್ ಅದೆಂತೆನೆ-

(ಬೞಿಕಂ-ಆಮೇಲೆ, ವೈನತೇಯನ-ಗರುಡನ, ಕಥೆಯಂ-ಕಥೆಯನ್ನು, ಮುಂದುವರೆಸಲ್-ಮುಂದುವರೆಸಲು, ಗರುತ್ಮಂತನಂ-ಗರುತ್ಮಂತನನ್ನು/ಗರುಡನನ್ನು, ಸ್ತುತಿಸಿದರ್-ಸ್ತುತಿ ಮಾಡಿದರು, ಅದೆಂತೆನೆ-ಅದು ಹೇಗೆಂದರೆ-)


ಖಚರಪ್ಲುತ॥

ಪಕ್ಷಚಾಲನವೇಗದೆ ಜಂಝಾವಾತಮೆ ಬಂದುದೊ ನೋಡೆ ಸ

ಲ್ಲಕ್ಷಣಾನ್ವಿತರೂಪದೆ ನೇಸರ್ ಮೇಣಿಳೆಗೆಯ್ದವೊಲೆಯ್ದಿರ

ಲ್ಕೀ ಕ್ಷಮಾತಳಭಾರಮೆ ಬಲ್ಪಿಂದಂ ಪರಮಾಣುವೆನಿಪ್ಪೊಡಂ

ದಕ್ಷಖೇಚರರಾಜನೆ ನಿನ್ನೀ ಮೈಮೆಯನೇವೊಗಳ್ವೆಂ ವಲಂ ॥೯೦॥

(ಟೀ- ಪಕ್ಷ-ಚಾಲನ-ವೇಗದೆ-ರೆಕ್ಕೆಯನ್ನು ಬೀಸುವ ವೇಗದಲ್ಲಿ, ಜಂಝಾವಾತಮೆ-ಚಂಡಮಾರುತವೇ/ಬಿರುಗಾಳಿಯೇ, ಬಂದುದೊ-ಬಂದಿದೆಯೋ, ನೋಡೆ-ನೋಡಲು, ಸಲ್ಲಕ್ಷಣಾನ್ವಿತರೂಪದೆ-(ಸತ್+ಲಕ್ಷಣಾನ್ವಿತ-ರೂಪದೆ)-ಒಳ್ಳೆಯ ಲಕ್ಷಣದಿಂದ ಕೂಡಿದ ರೂಪದಿಂದ, ನೇಸರ್-ಸೂರ್ಯನೇ, ಮೇಣ್-ಮತ್ತೆ, ಇಳೆಗೆ-ಭೂಮಿಗೆ, ಎಯ್ದವೊಲ್-ಬಂದ ಹಾಗೆಯೇ, ಎಯ್ದಿರಲ್ಕೆ ಈ- ಬಂದಿರಲು ಈ,  ಕ್ಷಮಾತಳ-ಭಾರಮೆ-ಭೂತಳದ ಭಾರವೇ, ಬಲ್ಪಿಂದಂ-ಬಲ್ಮೆಯಿಂದ, ಪರಮಾಣು-ಪರಮಾಣು/ಅತಿಸೂಕ್ಷ್ಮವಾದ ವಸ್ತು, ಎನಿಪ್ಪೊಡಂ-ಎಂದೆನ್ನಿಸುತ್ತಿರಲು, ದಕ್ಷ-ಖೇಚರ-ರಾಜನೆ-ಸಮರ್ಥನಾದ ಪಕ್ಷಿಸಂಕುಲದ ರಾಜನೇ, ನಿನ್ನೀ-ನಿನ್ನ ಈ, ಮೈಮೆಯಂ-ಮಹಿಮೆಯನ್ನು, ಏವೊಗಳ್ವೆಂ ವಲಂ-ಏನು ತಾನೇ ಹೊಗಳಬಲ್ಲೆ!

ಇದು ಖಚರಪ್ಲುತ ಎಂಬ ವಿರಳವಾಗಿ ಬಳಕೆಯಲ್ಲಿರುವ ವೃತ್ತ. ಖಚರ-ಪಕ್ಷಿಯ/ಗರುಡನ, ಪ್ಲುತ-ನೆಗೆತ ಎಂಬ ಅರ್ಥವೂ ಬರುವುದರಿಂದ ಗರುಡನ ಸ್ತುತಿಗೆ ತಕ್ಕದ್ದಾಗಿದೆ.)


ಇಂತು ಸಮಸ್ತಬುಧಜನರೋಮಹರ್ಷಣತತ್ಪರವೈಚಿತ್ರವಿಲಾಸೋಚಿತವಕ್ರೋಕ್ತಿಧ್ವನಿಮಯಮರಂದಮಾಧುರ್ಯಪರಿವೇಷ್ಟಿತರಸನಿರ್ಭರೌಜಃಪೂರ್ಣಪ್ರಸನ್ನಕವಿತಾವನಿತಾವಿಭ್ರಮವಿಷಯಲೋಲುಪವಾವದೂಕ ಚತುರ್ವಿಧಕವಿತ್ವಸತ್ರಚತುರ್ಮುಖ ಕರ್ಣಾಟಾವಧಾನೀ ಕೇಶದ್ವಯಮಾತ್ರಾವರಕೇಶವರಾಜೇತ್ಯಾದಿ ಬಿರುದಾಲಂಕೃತ ಕೊಪ್ಪಲತೋಟ ಗಣೇಶಭಟ್ಟವಿರಚಿತ ವೈನತೇಯವಿಜಯಮೆಂಬ ಲಘುಪ್ರಬಂಧಕಾವ್ಯದೊಳ್ ಪೀಠಿಕಾಪ್ರಕರಣಮೆಂಬ 

ಪ್ರಥಮಾಶ್ವಾಸಂ ॥

(ಹೀಗೆ ಎಲ್ಲ ವಿದ್ವಾಂಸರಾದವರ ರೋಮಾಂಚನವನ್ನುಂಟು ಮಾಡುವುದರಲ್ಲಿ ತತ್ಪರವಾದ ವೈಚಿತ್ರ್ಯವುಳ್ಳ, ವಿಲಾಸದ ಔಚಿತ್ಯವಕ್ರೋಕ್ತಿಧ್ವನಿಗಳೆಲ್ಲ ಕೂಡಿಕೊಂಡಿರುವ, ಮಕರಂದದ ಮಾಧುರ್ಯದಿಂದ ಸುತ್ತುವರೆಯಲ್ಪಟ್ಟ, ರಸನಿರ್ಭರವಾದ, ಓಜಸ್ಸಿನಿಂದ ಕೂಡಿದ, ಪ್ರಸನ್ನವಾದ ಕವಿತೆಯೆಂಬ ವನಿತೆಯ ವಿಭ್ರಮದ ವಿಷಯದಲ್ಲಿ ಲೋಲುಪನಾದ, ವಾಚಾಳಿಯಾದ, ಚತುರ್ವಿಧಕವಿತ್ವವೆಂಬ ಯಜ್ಞಕ್ಕೆ ಚತುರ್ಮುಖನಾದ, ಕನ್ನಡದ ಅವಧಾನಿಯಾದ, ಕೇಶದ್ವಯಮಾತ್ರಾವರಕೇಶವರಾಜ (ಕೇಶಿರಾಜನಿಗೆ ಎರಡು ಕೂದಲಷ್ಟು ಕಡಿಮೆ) ಎಂಬುದೇ ಮೊದಲಾದ ಬಿರುದುಗಳಿಂದ ಅಲಂಕರಿಸಲ್ಪಟ್ಟ, ಕೊಪ್ಪಲತೋಟದ ಗಣೇಶಭಟ್ಟನು ಬರೆದ "ವೈನತೇಯವಿಜಯವು" ಎಂಬ ಲಘುಪ್ರಬಂಧಕಾವ್ಯದಲ್ಲಿ ಪೀಠಿಕಾಪ್ರಕರಣವೆಂಬ ಮೊದಲ ಆಶ್ವಾಸವು)