Powered By Blogger

ಭಾನುವಾರ, ಸೆಪ್ಟೆಂಬರ್ 30, 2018

ಭಾಷಾಶುದ್ಧಿಯ ಆಂದೋಲನಗಳು ಹಾಗೂ ತೊಡಕುಗಳು

ಪ್ರಸ್ತುತ ಸಾಮಾಜಿಕಮಾಧ್ಯಮಗಳಲ್ಲಿ ಭಾಷೆಯ ಕುರಿತು ಎರಡು ಬಗೆಯಲ್ಲಿ ಚರ್ಚೆಗಳಾಗುತ್ತಿವೆ. ಕನ್ನಡದಲ್ಲಿ ಮಹಾಪ್ರಾಣಗಳನ್ನು ಬಳಸಬಾರದು, ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಬೇಕು ಎಂಬ "ಎಲ್ಲರ ಕನ್ನಡ" ಎಂಬುದು ಒಂದು ವಾದ. ಇನ್ನೊಂದು- ಕನ್ನಡದಲ್ಲಿ ಬಳಸುವ ಎಷ್ಟೋ ಶಬ್ದಗಳು ತಪ್ಪಾಗಿ ಬಳಸಲ್ಪಡುತ್ತಿವೆ, ಅವುಗಳ ಸರಿಯಾದ ರೂಪ ಹೇಗೆ ಎಂಬುದನ್ನು ವಿವರಿಸುವ ಚರ್ಚೆ. ಇದರಲ್ಲಿ ಮೊದಲನೆಯ ಎಲ್ಲರ ಕನ್ನಡ ಎಂಬ ವಾದ- ಅಥವಾ ಎಲ್ಲರ ಕನ್ನಡ ಎಂದು ಕನ್ನಡವನ್ನು ಸಂಕೋಚಿಸುತ್ತಿರುವ ಅವರ ಆಂದೋಲನ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಹಾನಿಕಾರಕ ಎಂಬುದಂತೂ ಸುವಿದಿತ. ಯಾವ ದುರುದ್ದೇಶದಿಂದ ಅದನ್ನು ಅವರು ಸ್ವೀಕರಿಸಿದ್ದಾರೋ ಗೊತ್ತಿಲ್ಲ. ಕನ್ನಡವನ್ನು ಕಲಿಯಲಾಗದ ಅಜ್ಞಾನವೋ ಅಥವಾ ಸಂಸ್ಕೃತದ್ವೇಷಿಮನಃಸ್ಥಿತಿಯೋ ಈ ಎಲ್ಲರ ಕನ್ನಡವೆಂಬ ಮೂರ್ಖರ ಗುಂಪಿಗೆ ಬೆನ್ನೆಲುಬಾಗಿರಬಹುದು. (ಮೂರ್ಖ ಎಂದು ಏಕೆ ಹೇಳಿದೆನೆಂದರೆ- ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬ ವಾದವನ್ನು ಮಾಡುವವರಿಗೆ, ಕಣ್ಣುಗಳನ್ನು ಮುಚ್ಚಿಕೊಂಡು ಸೂರ್ಯನೇ ಇಲ್ಲ ಎಂದು ಹಗಲಿಡೀ ಪರಿತಪಿಸುವವರಿಗೆ ಇನ್ನೇನು ಹೇಳಬೇಕೋ ಗೊತ್ತಿಲ್ಲ. ಇವರನ್ನು ಬದಲಾಯಿಸಲು ಸಾಧ್ಯವಿಲ್ಲ. ಭರ್ತೃಹರಿ ಕೂಡ ಹೇಳಿದ್ದಾನಲ್ಲ- ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ ಎಂದು. ಹಾಗಾಗಿ ಇದೇ ಸೂಕ್ತ ಪದವೆನಿಸಿತು. ಅಥವಾ ಧೂರ್ತರು ಎಂದು ಬೇಕಾದರೂ ಇಟ್ಟುಕೊಳ್ಳಿ.) ಎಲ್ಲರ ಕನ್ನಡದ ದೋಷಗಳನ್ನೇ ಮತ್ತೆ ಚರ್ಚಿಸುವುದಾಗಲೀ  ವಿರೋಧಿಸುವುದಾಗಲೀ ನನ್ನ ಮೂರ್ಖತೆಯಾದೀತು. ಅಲ್ಲದೇ ಈ ವಿಷಯದಲ್ಲಿ ಸರಿ ಮತ್ತು ತಪ್ಪುಗಳ ನಡುವೆ ತುಂಬಾ ಅಂತರ ಇರುವುದರಿಂದ ಎಲ್ಲ ಜನರಿಗೂ ವಿವೇಚಿಸುವುದು ಕಷ್ಟವಿಲ್ಲ -ಎಂದು ಅದರ ಕಡೆ ಹೋಗದೇ ಇನ್ನೊಂದು ವಿಷಯದ ಕಡೆ ಬರುತ್ತಿದ್ದೇನೆ. ಹುಲಿಯ ಚರ್ಮ ಹೊದೆದುಕೊಂಡ ಇಲಿಯನ್ನು ಇಲಿ ಎಂದು ಗುರುತಿಸಬಹುದು. ಆದರೆ ಬೇರೆ ಪ್ರಾಣಿಯೊಂದು ಹುಲಿಯ ಚರ್ಮ ಧರಿಸಿಕೊಂಡ ಕಥೆ ನಮಗೆಲ್ಲ ಗೊತ್ತೇ ಇದೆ. 

ಈ ಇನ್ನೊಂದು ಸಂಗತಿಗೆ ಪ್ರವೇಶಿಸುವ ಮುನ್ನ- ಅಪಶಬ್ದ‌ಪ್ರಯೋಗದಿಂದ ಏನಾಗುತ್ತದೆ ಎಂಬುದನ್ನು ನೋಡೋಣ. ಅಪಶಬ್ದ ಎಂದರೆ ತಪ್ಪಾದ ಶಬ್ದ. ಅಪಶಬ್ದದ ಪ್ರಯೋಗದಿಂದ  ಯಾವ ಅರ್ಥವನ್ನು ಪ್ರಕಟಿಸುವುದಕ್ಕೆ ನಾವು ಆ ಶಬ್ದವನ್ನು ಪ್ರಯೋಗಿಸುತ್ತೇವೆಯೋ ಆ ಅರ್ಥವು ಅದರಿಂದ ಸ್ಫುರಿಸದೇ ಹೋಗಬಹುದು. ಉದಾಹರಣೆಗೆ ಹೇಳಬೇಕೆಂದರೆ ಒಂದು ಕಡೆ ರಸ್ತೆಯಲ್ಲಿ ಇರುವ ಸೂಚನಾ ಫಲಕದಲ್ಲಿ ಹೀಗೆ ಇತ್ತು- "ರಸ್ತೆಯಲ್ಲಿ ಹುಬ್ಬು ಇದೆ".  ವಸ್ತುತಃ ರಸ್ತೆಯಲ್ಲಿ ಹುಬ್ಬು ಹೇಗೆ ಇರಲು ಸಾಧ್ಯ. ಮನುಷ್ಯರ ಕಣ್ಣಿನ ಮೇಲೆ ಇರುವ ರೋಮಾವಳಿಗೆ ಹುಬ್ಬು ಎನ್ನುತ್ತಾರಲ್ಲವೇ! ಆ ಸೂಚನಾಫಲಕದಲ್ಲಿ ಹುಬ್ಬು ಎಂಬ ಶಬ್ದದ ಬದಲಿಗೆ " ಉಬ್ಬು" ಎಂಬ ಶಬ್ದ ಇರಬೇಕಾಗಿತ್ತು. ಈ ಅ-ಕಾರ ಮತ್ತು ಹ-ಕಾರಗಳ ನಡುವೆ ಬಹಳಷ್ಟು ಜನರಿಗೆ ಗೊಂದಲವುಂಟಾಗುತ್ತಿದೆ. "ಅಕುಹವಿಸರ್ಜನೀಯಾನಾಂ ಕಂಠಃ" ಅ-ಹ-ಕವರ್ಗ- ವಿಸರ್ಗಗಳನ್ನು ಉಚ್ಚರಿಸುವುದು ಕಂಠದಿಂದ. ಹಾಗಾಗಿಯೇ ಈ ಅಕ್ಷರಗಳಲ್ಲಿ ಉಚ್ಚಾರಣೆಯಲ್ಲಿ ಸಾಮ್ಯವಿದೆ. ತಮಿಳಿನಲ್ಲಿ ಮಹೇಶ- ಮಗೇಶ ಆಗುವುದೂ ಇದೇ ಕಾರಣಕ್ಕೆ. ಹೀಗಾಗಿ ಅ ಮತ್ತು ಹ ಅಕ್ಷರಗಳನ್ನು ಎಲ್ಲಿ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದಿರುವ ಅನೇಕ ಬರೆಹಗಾರರ ಲೇಖನದಲ್ಲಿ, ಪುಸ್ತಕಗಳಲ್ಲಿ ಅಯಾಚಿತವಾಗಿ ಈ ತಪ್ಪು ನುಸುಳುತ್ತದೆ. ಹೊಸತಲೆಮಾರಿನ ಬರೆಹಗಾರರ ಬಗ್ಗೆ ಹಿಂದೊಮ್ಮೆ ಲೇಖನವನ್ನು ಬರೆದಾಗ- ಇಂತಹ ತಪ್ಪುಗಳನ್ನು ಮಾಡಿದ ಹಲವು ಲೇಖಕರು- ಹಳ್ಳಿಯ ಜನರು ಆಡುಮಾತಿನಲ್ಲಿ ಇಷ್ಟೆಲ್ಲ ಶಾಸ್ತ್ರಶುದ್ಧವಾಗಿ ಮಾತನಾಡುವುದಿಲ್ಲ. ಅವರೆಲ್ಲ ಹೇಳುವುದು ರಸ್ಯವಾಗಿರುವುದಿಲ್ಲವೇ? ಕೇವಲ ಹಳಗನ್ನಡದ ಪಂಡಿತರು ಮಾತ್ರ ಬರೆಯಬೇಕೆ? ಎಂದೆಲ್ಲ ಪ್ರಶ್ನಿಸಿದ್ದರು. ದಿಟವೇ! ಕೆಲವು ವಿಷಯಗಳಲ್ಲಿ ನಮ್ಮ ಅಜ್ಞಾನವನ್ನು ಒಪ್ಪಿಕೊಳ್ಳಲೂ ಪ್ರಾಮಾಣಿಕತೆ ಬೇಕಾಗುತ್ತದೆ‌. ಹಳಗನ್ನಡ ಪಂಡಿತರು ಮಾತ್ರ ಬರೆಯಬೇಕು ಅಂತೇನೂ ಅಲ್ಲ. ಆದರೆ ಅವರು ಹೇಳಿದ್ದನ್ನು ಒಪ್ಪಿಕೊಂಡರೆ ಇವರಿಗೇನು ನಷ್ಟ? "ನಡೆವರೆಡಹದೆ ಕುಳಿತರೆಡಹುವರೆ" ಎಂದಂತೆ ನಡೆಯುವರು ಎಡಹುವುದು ಸಹಜ. ಆದರೆ ಎಡಹಿದಾಗ ತಿದ್ದಿ ಹೇಳಿದವರ ಮಾತು ಕೇಳದೇ ನಾನು ಎಡವಿಕೊಂಡೇ ನಡೆಯುತ್ತೇನೆ/ ಬೀಳುತ್ತೇನೆ ಎಂದರೆ ಏನು ಹೇಳುವುದು!  

ಅಂತಲ್ಲದೇ ಭಾಷೆಗೆ ಎರಡು ರೂಪಗಳಿವೆ. ಒಂದು ಮೌಖಿಕ ಇನ್ನೊಂದು ಗ್ರಾಂಥಿಕ. ಮೌಖಿಕರೂಪವನ್ನು ಗ್ರಾಂಥಿಕವಾಗಿ ಬಳಸಬಾರದು ಎಂದೇನೂ ಇಲ್ಲ. ಆದರೆ ನಿರೂಪಣೆಯಲ್ಲಿ ಔಚಿತ್ಯವನ್ನು ಗಮನಿಸಬೇಕು. ಕಥೆಯೊಂದರಲ್ಲಿ ಒಬ್ಬ ಅನಕ್ಷರಸ್ಥ ಹಳ್ಳಿಯ ಮನುಷ್ಯ- ಗ್ರಾಂಥಿಕವಾದ ರೂಪಗಳಲ್ಲಿ ದಪ್ಪ ದಪ್ಪ ಸಂಸ್ಕೃತ ಶಬ್ದಗಳನ್ನು ಬಳಸಿ ಸಮಾಸಭೂಯಿಷ್ಠವಾಗಿ ಮಾತನಾಡಿದರೆ ಎಷ್ಟು ಅನೌಚಿತ್ಯ ಎನಿಸುತ್ತದೆಯೋ ಅಷ್ಟೇ ಅನೌಚಿತ್ಯವು ಕವಿಪ್ರೌಢೋಕ್ತಿಯಲ್ಲಿ ಅಪಶಬ್ದಪ್ರಯೋಗವಾದಾಗ/ಅಗ್ರಾಂಥಿಕರೂಪಗಳು ಬಂದಾಗ ಅನಿಸುತ್ತದೆ. ಅಂದರೆ ಕವಿಯು ಅಥವಾ ಕತೆಗಾರನು ಕತೆಯನ್ನು ನಿರೂಪಿಸುವ ಮಾತಿನಲ್ಲಿ ಸಂಪೂರ್ಣವಾಗಿ ಆಡುಮಾತಿನ ಶೈಲಿಯಲ್ಲಿರದೇ ಎಲ್ಲೋ ಕೆಲವೊಂದಿಷ್ಟು ಶಬ್ದಗಳು ಆಡುಮಾತಿನವೂ ಅಪಶಬ್ದಗಳೂ ಬಂದರೆ ಅನೌಚಿತ್ಯವಾಗುತ್ತದೆಯಲ್ಲದೇ ಬರೆಹಗಾರನ ಅಜ್ಞಾನ ಎದ್ದು ತೋರುತ್ತದೆ.

ಒಬ್ಬ ಸಾಮಾನ್ಯ ಓದುಗನಿಗೆ ಇದೆಲ್ಲ ಅಷ್ಟು ಗಂಭೀರವೇ ಎಂದೆನಿಸಬಹುದು.  ಖಂಡಿತವಾಗಿಯೂ ಅಲ್ಲ. ಭಾಷೆ ಎನ್ನುವುದೇ ಒಂದು ಪ್ರದೇಶದ ಜನರೆಲ್ಲರೂ ಒಟ್ಟಾಗಿ ಒಪ್ಪಿಕೊಂಡಿರುವ ಮಾಧ್ಯಮ. ಅಲ್ಲದೇ ಕನ್ನಡದಂತಹ ಭಾಷೆಗಳೆಲ್ಲ ಪ್ರತಿದಿನವೂ ಬೆಳೆಯುತ್ತಿವೆ. ಆದರೆ ಅದರ ಗ್ರಾಂಥಿಕರೂಪಕ್ಕೆ ಒಂದಿಷ್ಟು ನಿರ್ದಿಷ್ಟವಾದ ನಿಯಮಗಳಿರಬೇಕು. ಹಾಗೂ ಅದನ್ನು ಎಲ್ಲರೂ ಒಪ್ಪಿರಬೇಕು. ಅಂದರೆ ಎರಡು ಸಾವಿರ ವರ್ಷದ ಇತಿಹಾಸ ಇರುವ ಭಾಷೆಯಲ್ಲಿ ನಾವು ಈಗ ಹೊಸ ನಿಯಮ ಮಾಡಿ ರೂಢಿಸಲು ಸಾಧ್ಯವಿಲ್ಲ. ಹಿಂದಿನಿಂದ ಒಪ್ಪಿಕೊಂಡು ಬಂದ ನಿಯಮಗಳನ್ನು ನಾವೂ ಒಪ್ಪಿ ಅದರಂತೆಯೇ ಬಳಸಬೇಕಷ್ಟೇ! ನಾವು ಹಾಗೆ ಬಳಸದೇ ನಮ್ಮದೇ ಬೇರೆ ರೀತಿ ಬಳಸುವುದರಿಂದ ಯಾರಿಗೂ ಅರ್ಥವಾಗುವುದಿಲ್ಲ- ಎಂಬುದು ಒಂದಾದರೆ, ಎರಡನೆಯದು ನಮಗೆ ಶುದ್ಧವಾದ ಭಾಷೆ ಬರುವುದಿಲ್ಲ ಎಂದೂ ಅರ್ಥ ಆಗುತ್ತದೆ. ಎಲ್ಲರ ಕನ್ನಡ ಎಂದು ಹೇಳುತ್ತಿರುವವರದ್ದು ಇದೇ ಪಾಡಾಗಿದೆ. ಕುವೆಂಪು ಅವರು "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾಷೆ ಎಂಬುದು ಶಿಲೆಯಿದ್ದಂತೆ. ಅದನ್ನು ನಾವು ಯುಕ್ತವಾದ ರೀತಿಯಲ್ಲಿ ಬಳಸಿ ಗದ್ಯಪದ್ಯಗಳೆಂಬ ಸುಂದರ ಶಿಲ್ಪಗಳನ್ನು ರಚಿಸಬಹುದೇ ಹೊರತು ನಾವೇ ಭಾಷೆಯನ್ನು ಸೃಷ್ಟಿಸುತ್ತೇವೆ, ಅದನ್ನು ತಿದ್ದುತ್ತೇವೆ ಎಂಬುದು ಕಲ್ಲನ್ನು ಸೃಷ್ಟಿಸುತ್ತೇವೆ ಎನ್ನುವಷ್ಟೇ ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ  ಬರವಣಿಗೆ ಮಾಡುವವರಿಗೆ ಆ ಭಾಷೆಯ ಶುದ್ಧಪದಗಳ ಅರಿವಿರಬೇಕಾದದ್ದು ಹಾಗೂ ಸರಿಯಾದ ಪದವನ್ನು ಬಳಸಬೇಕಾದದ್ದು ಕರ್ತವ್ಯವಾಗುತ್ತದೆ. ಎಲ್ಲರೂ ಸರ್ವಜ್ಞರೇನೂ ಅಲ್ಲವಲ್ಲ! ತಪ್ಪು ಮಾಡುವುದು ಸಹಜ. ಆದರೆ ತಿದ್ದಿಕೊಳ್ಳುವ ಪ್ರಾಮಾಣಿಕತೆ ಇರಬೇಕಾದದ್ದು ಮುಖ್ಯ. ಹಿಂದೆಲ್ಲ ಮಹಾಕವಿಗಳೇ ತಮ್ಮ ಕಾವ್ಯಗಳನ್ನು ಬಲ್ಲವರೊಬ್ಬರ ಬಳಿ ತಿದ್ದಿಸಿಕೊಳ್ಳುತ್ತಿದ್ದರು ಎಂಬುದನ್ನು ನಮಗೆ ಕವಿಚಕ್ರವರ್ತಿ ರನ್ನ ದುರ್ಗಸಿಂಹ ಮೊದಲಾದವರ ಕಾವ್ಯಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ.

ಭಾಷೆಗೆ ವೈಜ್ಞಾನಿಕವಾಗಿ ಚರ್ಚೆ ಮಾಡುವಾಗ ಶುದ್ಧ ರೂಪವಿರಬೇಕಾಗುತ್ತದೆ. ಗಣಿತದಂತೆ ಭಾಷೆಗೂ ಒಂದು ಮಟ್ಟದ ನಿಖರತೆ ಇರಬೇಕು ಎನ್ನುತ್ತಾರೆ. ಗಣಿತದಷ್ಟು ಕರ್ಕಶವಲ್ಲದಿದ್ದರೂ, ಕಠೋರವಾದ ತರ್ಕದಿಂದ ಕೂಡಿರದಿದ್ದರೂ ಭಾಷೆ ಬೆಳೆಯಲು ಈ ಆಯಾಮ ಅವಶ್ಯಕ. ಇಂಗ್ಲಿಷಿನಂತಹ ವಿಶ್ವವ್ಯಾಪಿ ಭಾಷೆಗೂ ಕೂಡ ತುಂಬಾ ವ್ಯವಸ್ಥಿತವಾದ ಚೌಕಟ್ಟಿದೆ. ಗಣ್ಯರಾದ ಪ್ರಕಾಶಕರ ಮೂಲಕ ಒಂದು ಪುಸ್ತಕ ಪ್ರಕಟವಾಗಬೇಕೆಂದರೆ ಪುಸ್ತಕದ ಭಾಷೆಯನ್ನು ಹಾಗೂ ಬಳಕೆಯನ್ನು ಸಂಪಾದಕರು ಹಲವು ಹಂತಗಳಲ್ಲಿ ತಿದ್ದುತ್ತಾರಂತೆ. ಹಲವು ಖಂಡಗಳಲ್ಲಿ ದೇಶಗಳಲ್ಲಿ ಹಲವು ರೂಪಗಳಲ್ಲಿ ಪಸರಿಸಿರುವ ಭಾಷೆಯಲ್ಲಿಯೇ- ಪುಸ್ತಕದ ಪ್ರಕಟಣೆಯಲ್ಲಿ ಭಾಷೆಯ ದೃಷ್ಟಿಯಿಂದ ಲೋಪದೋಷಗಳನ್ನು ಪರೀಕ್ಷಿಸುವುದಕ್ಕೆಂದೇ ಇರುತ್ತಾರಂತೆ. ಸಾಮಾಜಿಕವಾಗಿ ಶ್ರೇಣೀಕೃತವಾಗಿ ದೇಶಕಾಲಗಳಲ್ಲಿ ವೈವಿಧ್ಯವನ್ನು ತಳೆದ  ಈ ಭಾಷೆಯನ್ನು ಅಭಿವೃದ್ಧಿ ಪಡಿಸಲು ಹೀಗೆ ಅವರು ಸಾಕಷ್ಟು ಬಾರಿ ನಿಘಂಟುಗಳನ್ನು ಪರಿಷ್ಕರಿಸುತ್ತಾರೆ, ಹೊಸ ಶಬ್ದಗಳನ್ನು ಸೇರಿಸುತ್ತಾರೆ. ಇಷ್ಟೆಲ್ಲ ಹೆಣಗಾಟಗಳನ್ನು ಮಾಡುತ್ತಾರೆ.  ಇದೆಲ್ಲವೂ ಭಾಷೆಯಲ್ಲಿ ಒಂದು ಅಧಿಕಾರ ಸ್ಥಾಪಿಸಿಕೊಳ್ಳಬೇಕಾದವರು,  ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ವ್ಯಾವಹಾರಿಕವಾಗಿ ಬೆಳೆಯಬೇಕು ಎಂದು ಮಾಡಿಕೊಂಡಿರುವುದು. ಬಲಿಷ್ಠವಾದ ಅಥವಾ ಶಕ್ತವಾದ ಭಾಷೆ ಎನ್ನುವುದು ಸಮರ್ಥವಾದ ಬೊಕ್ಕಸವಿದ್ದಂತೆ. ಮಸೆದಿಟ್ಟ ಆಯುಧವಿದ್ದಂತೆ. ಬಳಕೆಯನ್ನು ಬಲ್ಲ ಅವರು ಹೀಗೆ ಅವರ ಭಾಷೆಯನ್ನು ಉಳಿಸಿಕೊಳ್ಳುತ್ತಿದ್ದಾರೆ.  ಕನ್ನಡಕ್ಕೂ ಈ ಪ್ರಮೇಯದ ಅವಶ್ಯಕತೆ ಇದ್ದೇ ಇದೆ. ಕನ್ನಡಕ್ಕೆ (ಎಲ್ಲರ ಕನ್ನಡದಂತಹ) ಕೃತಕ ಭಾಷೆಯ ಸೃಷ್ಟಿ ಎಷ್ಟು ಅನರ್ಥಕಾರಿಯೋ ಅಷ್ಟೇ ಅನರ್ಥ‌- ಔಚಿತ್ಯವಿಲ್ಲದೇ ಯಾವ ಯಾವ ಸಂದರ್ಭದಲ್ಲಿ ಹೇಗೆ ಪದಗಳನ್ನು ಬಳಸಬೇಕು ಎಂದು ತಿಳಿದುಕೊಳ್ಳದೇ ಬಳಕೆ ಮಾಡುವುದೂ ಆಗುತ್ತದೆ. ಹಾಗಾಗಿ ಸಾವಿರಾರು ವರ್ಷಗಳ ಪರಂಪರೆಯನ್ನು ಅವಲೋಕಿಸದೇ ಇರುವುದೂ ಕೂಡ ಸಾಧುವಲ್ಲ.
ಹೀಗಿರುವಾಗ ಭಾಷಾಶುದ್ಧಿಯನ್ನು ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹವಾಗಿದೆ. ಇಂತಹ ಸ್ವಚ್ಛಭಾಷೆಯ ಅಭಿಯಾನದಲ್ಲಿ ಒಬ್ಬರು ಲೇಖಕರು ಇಂತಿಂತಹ ಶಬ್ದಗಳು ತಪ್ಪು ಬಳಕೆ ಆಗುತ್ತಿವೆ. ಇಂತಿಂತಹ ಶಬ್ದಗಳ ಶುದ್ಧರೂಪ ಹೀಗಾಗಬೇಕು ಎಂದು ವಿವರವಾಗಿ ಹೇಳುತ್ತಿದ್ದಾರೆ. ಸಾಮಾನ್ಯ ಓದುಗನಿಗೆ ಅವರು ಹೇಳಿದ್ದು ಸತ್ಯ ಎಂಬಂತೆ ಅನಿಸುತ್ತದೆ. ಆದರೆ ಅಲ್ಲಿ ಕೆಲವೊಂದು ಸಣ್ಣ ದೋಷಗಳೂ ಇದ್ದವು. ಸಾಕಷ್ಟು ಪ್ರಮಾಣದಲ್ಲಿ ಕನ್ನಡ-ಸಂಸ್ಕೃತಗಳೆರಡರಲ್ಲೂ ಸಂಶೋಧನೆಯನ್ನು ಮಾಡಿದ, ಗದ್ಯಪದ್ಯಗಳನ್ನು ಬರೆದ ಒಬ್ಬ ವಿದ್ವಾಂಸರು ಈ ಸ್ವಚ್ಛಭಾಷೆಯ ಲೇಖಕರಿಗೆ ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಈ ದೋಷಗಳಿವೆ ಎಂದು ಹೇಳಿದಾಗ ಅವರಿಗೆ ಇವರು ಸೌಜನ್ಯಪೂರಕವಾಗಿ ಉತ್ತರಿಸಿ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕಲ್ಲವೇ!  ಉದಾಹರಣೆಗೆ- ಮೂಷಕ ಎಂಬ ಶಬ್ದವೇ ಸರಿ. ಮೂಷಿಕ ಎಂಬ ಶಬ್ದ ತಪ್ಪು- ಎಂಬುದು ಲೇಖಕರ ವಾದ. ಅದಕ್ಕೆ ಪ್ರತಿಕ್ರಿಯೆಯಲ್ಲಿ ಬಂದ ಉತ್ತರ- 
ಮೂಷಕ ಮತ್ತು ಮೂಷಿಕ ಎರಡೂ ಶಬ್ದಗಳು ಸರಿಯಾಗೇ ಇವೆ. ಸ್ತೇಯ ಎಂಬ ಅರ್ಥದ ಮುಷ್ ಧಾತುವಿಗೆ ಮುಷೇರ್ದೀರ್ಘಶ್ಚ ಎಂಬ ಸೂತ್ರದ ಪ್ರಕಾರ "ಕಿಕನ್" ಪ್ರತ್ಯಯ ಬಂದಾಗ "ಮೂಷಿಕ" ಶಬ್ದವಾಗುತ್ತದೆ. 
ಅದೇ "ಮೂಷ್" ಧಾತುವಿಗೆ "ಣ್ವುಲ್ ತೃಚೌ" ಎಂಬ ಸೂತ್ರದಿಂದ ಣ್ವುಲ್ ಪ್ರತ್ಯಯ ಬಂದಾಗ "ಮೂಷಕ" ಎಂಬ ಶಬ್ದವಾಗುತ್ತದೆ. 
ಈ ಉತ್ತರ ಗಮನಿಸಿದ ಮೇಲೆ ಲೇಖಕರು ಮೂಲದಲ್ಲೇ ತಿದ್ದಿದ್ದರೆ ಉಳಿದ ಓದುಗರಿಗೆ ಅನುಕೂಲವಾಗಿರುತ್ತಿತ್ತು. ಅಥವಾ ಮೂಲಲೇಖನದ ಕೊನೆಗೇ ಇನ್ನೊಂದು ಟಿಪ್ಪಣಿ ಸೇರಿಸಿದ್ದರೂ ಸಾಧುವಾಗುತ್ತಿತ್ತು. ಅವರೇ ಹೇಳಿದಂತೆ ಇದು ಅವರ‌ ಲೇಖನಕ್ಕೆ ಪೂರಕ ಮಾಹಿತಿಯಂತೆ. ಹಾಗಿದ್ದರೆ ಲೇಖನದಲ್ಲೇ ಸೇರಿಸಬಹುದಿತ್ತು. ಲೇಖನದ ದೋಷವನ್ನು ತೋರಿಸಿದ್ದಕ್ಕೆ ಅದು ಅವರ ಅಭಿಪ್ರಾಯವನ್ನು ವಿರೋಧಿಸಿದಂತೆ ಎಂದಾದ ಕಾರಣ ಅದನ್ನು ಸೇರಿಸಿಕೊಳ್ಳಲಿಲ್ಲವೇ! 
ಇನ್ನೊಂದು ಲೇಖನದಲ್ಲಿ "ದಂಪತಿಗಳು" ಎಂಬ ಶಬ್ದವನ್ನು ಒಂದಕ್ಕಿಂತ ಹೆಚ್ಚು ಜೋಡಿಗಳಿರುವಾಗ ಬಳಸಬೇಕು. ಒಂದೇ ಜೋಡಿ ಇದ್ದರೆ "ದಂಪತಿ" ಎಂದಷ್ಟೇ ಏಕವಚನದಲ್ಲಿ ಬಳಸಬೇಕು ಎಂಬುದು ಲೇಖಕರ ವಾದ. ಆದರೆ ವಸ್ತುತಃ ದಂಪತಿ ಎನ್ನುವುದನ್ನು ಏಕವಚನದಲ್ಲಿ ಬಳಸುವುದು ಹೇಗೆ ಸಾಧ್ಯ ಎಂದು ಒಬ್ಬರು ಓದುಗರು - " ದಂಪತಿ ಬರುತ್ತಿದ್ದಾನೆ/ಬರುತ್ತಿದ್ದಾಳೆ/ಬರುತ್ತಿದೆ" ಹೇಗೆ ಹೇಳಬಹುದು?" ಎಂದು ಪ್ರಶ್ನಿಸಿದರು. ಅದಕ್ಕೆ "ಬರುತ್ತಿದ್ದಾರೆ" ಎಂದು ಹೇಳಬಹುದು ಎಂದು ಉತ್ತರಿಸಿದರು. ಓದುಗರು- "ದಂಪತಿ ಏಕವಚನವಾಗಿರುವಾಗ ಕ್ರಿಯಾಪದ ಬಹುವಚನವಾಗುತ್ತದೆಯೇ" ಎಂದರೆ, ಅದಕ್ಕೆ ಲೇಖಕರು- "ನೀವು ನಿಮಗೆ ಬೇಕಾದ ಹಾಗೆ ಬರೆಯಿರಿ" ಅಂತ ಉತ್ತರಿಸಿದರು. ಇದರ ಅರ್ಥವೇನು?
ದಂಪತಿ ಶಬ್ದದ ಬಗ್ಗೆ ಸಂಸ್ಕೃತದಲ್ಲಿ ನೀಲಕಂಠದೀಕ್ಷಿತನ ಒಂದು ಪ್ರಸಿದ್ಧ ಪದ್ಯವೇ ಇದೆ. ಅರ್ಧನಾರೀಶ್ವರಸ್ತುತಿಯಾಗಿ. "ವಂದೇ ವಾಂಛಿತಲಾಭಾಯ ಕರ್ಮ ಕಿಂ ತನ್ನ ಕಥ್ಯತೇ|
ಕಿಂ ದಂಪತಿಮಿತಿ ಬ್ರೂಯಾಮುತಾಹೋ ದಂಪತೀ ಇತಿ||"
(ತಾತ್ಪರ್ಯತಃ ಹೇಳುವುದಾದರೆ- ಇಷ್ಟಾರ್ಥ ಸಿದ್ಧಿಗಾಗಿ ನಮಸ್ಕರಿಸುತ್ತೇನೆ. ಯಾರಿಗೆ ಎಂದು ಹೇಳುವುದಿಲ್ಲ. ಯಾಕೆಂದರೆ ಒಂದೇ ದೇಹವಿರುವ ಅರ್ಧನಾರೀಶ್ವರನಿಗೆ "ದಂಪತಿ" ಎಂದು ಏಕವಚನದಲ್ಲಿ ಹೇಳಬೇಕೋ ಅಥವಾ ನಿತ್ಯದ್ವಿವಚನದಲ್ಲಿ "ದಂಪತಿಗಳು" ಎಂದು ಹೇಳಬೇಕೋ ಗೊತ್ತಿಲ್ಲ) ಇಂತಹ ಪ್ರಸಿದ್ಧ ಶ್ಲೋಕಗಳ ಬಗ್ಗೆ ಪ್ರಸ್ತುತ ಲೇಖಕರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅದೇ ಪೋಸ್ಟಿಗೆ ಇನ್ನೊಂದು ಉತ್ತರದಲ್ಲಿ ವಿದ್ವಾಂಸರೊಬ್ಬರು - "ದಂಪತಿ ಎನ್ನುವುದು ಸಂಸ್ಕೃತದಲ್ಲಿ ನಿತ್ಯದ್ವಿವಚನ. ಕನ್ನಡದಲ್ಲಿ ದ್ವಿವಚನ‌ವಿಲ್ಲದ ಕಾರಣ ಬಹುವಚನ ಬಳಸುವುದು ರೂಢಿ. ಹಾಗಾಗಿ ದಂಪತಿಗಳು ಎನ್ನುವುದೇ ಸೂಕ್ತ." ಎಂದು ಉತ್ತರಿಸಿದ್ದರು. ಅಷ್ಟೇ ಅಲ್ಲದೇ ಹಳಗನ್ನಡದ ಕವಿಗಳಾದ ಲಕ್ಷ್ಮೀಶನ ಜೈಮಿನಿಭಾರತದಿಂದ, ರುದ್ರಭಟ್ಟನ ಜಗನ್ನಾಥವಿಜಯದಿಂದ "ದಂಪತಿಗಳು" ಎಂಬ ಬಹುವಚನದ ಶಬ್ದಗಳಿರುವ ಪದ್ಯಗಳನ್ನೂ ಉದಾಹರಣೆಯಾಗಿ ಕೊಟ್ಟಿದ್ದರು. ಮೂಲ ಪೋಸ್ಟ್ ಅಲ್ಲಿ ಬದಲಾಯಿಸಿದರೆ ಮಾತ್ರ ಅದನ್ನು ಓದುವವರಿಗೆ ಅನುಕೂಲ ಎಂದೂ ಹೇಳಿದ್ದರು. ಅದಕ್ಕೆ ಲೇಖಕರು ಉತ್ತರಿಸಿದ್ದು- " ನಿಮ್ಮ ಪ್ರತಿಕ್ರಿಯೆಗೆ like click ಮಾಡಿದ್ದು ನಾನು ನಿಮ್ಮ ಅಭಿಪ್ರಾಯ ಓದಿದ್ದೇನೆ ಎಂದು ನಿಮಗೆ ತಿಳಿಸಲಿಕ್ಕೆ.  ಅದಕ್ಕಿಂತ ಹೆಚ್ಚಿನದು ನಿಮಗೆ ತಿಳಿಸುವ ವಿಚಾರ ನನ್ನದೇನಿಲ್ಲ. ನಿಮಗೆ ಧನ್ಯವಾದಗಳು" ಎಂದು. ಅಂದರೆ ಈ ಲೇಖಕರಿಗೆ ವಿದ್ವಾಂಸರ ಮಾತುಗಳು ಸಹ್ಯವಾಗುವುದಿಲ್ಲವೇ? ಕನ್ನಡದ ಪೂರ್ವಕವಿಗಳ ಪ್ರಯೋಗ ಕೂಡ ಗ್ರಾಹ್ಯವಾಗುವುದಿಲ್ಲವೇ? ಲೇಖಕರು ತಾರ್ಕಿಕವಾಗಿ ಉತ್ತರಿಸಲು ಸಮರ್ಥರಲ್ಲದೇ ಹೋದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಹಿಂದಿನ ಮಹಾಕವಿಗಳ ಪ್ರಯೋಗವನ್ನು ತೋರಿಸಿದ ಬಳಿಕವೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವವರಲ್ಲ ಎಂದಾದರೆ ಇವರು ಆ ಮಹಾಕವಿಗಳಿಗಿಂತ ಹಿರಿಯರೇ! ಪ್ರಸ್ತುತ ಲೇಖಕರು ಭಾಷೆಯ ವಿಷಯದಲ್ಲಿ ಏನು ಸಂಶೋಧನೆ ಮಾಡಿದ್ದಾರೆ? ವಿದೇಶದಲ್ಲಿದ್ದುಕೊಂಡೂ ಕನ್ನಡದಲ್ಲಿ ಒಂದಿಷ್ಟು ಕೃಷಿ ಮಾಡುತ್ತಿದ್ದಾರೆ ಎಂಬುದನ್ನು ಬಿಟ್ಟರೆ ಎಷ್ಟು ಹಳಗನ್ನಡ/ಸಂಸ್ಕೃತಕಾವ್ಯಗಳನ್ನು ಆಮೂಲಾಗ್ರವಾಗಿ ಓದಿದ್ದಾರೆ? ಅಥವಾ ಅವರು 'ಇದು ಶುದ್ಧ- ಇದು ಅಶುದ್ಧರೂಪ' ಎಂದು ಹೇಳಲು ಯಾವ ವ್ಯಾಕರಣದ ನಿಯಮಗಳ ಆಧಾರವನ್ನು ಕೊಡಬಲ್ಲರು? ಇದು ಕೇವಲ ಮೇಲೆ ಉಲ್ಲೇಖಿಸಿದ ಎರಡು ಶಬ್ದಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ಸುಮಾರು ಇಪ್ಪತ್ತು ಕಂತುಗಳಲ್ಲಿ ವಿಸ್ತೃತವಾದ ಅಭಿಯಾನದಲ್ಲಿ ಹಲವಾರು ದೋಷಗಳಿವೆ. ಹಾಗೂ ಆ ದೋಷಗಳನ್ನೆಲ್ಲ ಸಂಗ್ರಹಿಸಿ ಬೇರೆಯವರೂ ಲೇಖನ ಬರೆಯುತ್ತಿದ್ದಾರೆ.
ಅವರ ಲೇಖನದ ಓದುಗರೊಬ್ಬರು "ಸಂಸ್ಕೃತ ವಿದ್ವಾಂಸರಿಗೆ ಹಳೆಯ ಗ್ರಂಥಗಳಲ್ಲೂ ಕಾಗುಣಿತ ವ್ಯಾಕರಣ ದೋಷಗಳು ನುಸುಳಿರಬಹುದು ಎಂಬ ಜ್ಞಾನವಿರಬೇಕಾದದ್ದು ಬಹುಮುಖ್ಯ" ಎಂದು ಹಾಕಿದ್ದಾರೆ. ಅಂದರೆ ಅವರಿಗೆ 'ವ್ಯಾಕರಣನಿಯಮಗಳಿಂದ ಹೇಳಿದ ಶುದ್ಧತೆಗಿಂತ ತಮ್ಮ ಲೇಖಕರೇ ಹೆಚ್ಚು ಮಾನ್ಯ' ಎಂದೇ ಅರ್ಥವಾಯಿತಲ್ಲ. ಇಂತಹ ಓದುಗರು ಇವರ ಲೇಖನದಿಂದ ಏನು ಸ್ವಚ್ಛಭಾಷೆಯನ್ನು ಕಲಿಯುತ್ತಾರೆ. ಇವರಂತೆಯೇ ಬೇರೆಯವರ ಮಾತನ್ನು ಕೇಳದಿರುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ ಅಷ್ಟೆ.
 ಅದೆಲ್ಲ ಬದಿಗಿರಲಿ. ಪ್ರಸ್ತುತಲೇಖಕರ ಅಂಕಣದ ಹೆಸರಿನಲ್ಲಿರುವ ಶಬ್ದಕ್ಕೆ ಯಾವ ರೀತಿ ಅವರು ಅರ್ಥವನ್ನು ಕೊಡಬಲ್ಲರು? ಆ ಶಬ್ದವನ್ನು ಇವರೂ ಇವರ ಪತ್ರಿಕೆಯ ಸಂಪಾದಕರೂ ಒಂದಿಷ್ಟು ಅಭಿಮಾನಿಗಳೂ ಮೆಚ್ಚಿಕೊಳ್ಳಬಲ್ಲರಷ್ಟೇ! ವಾಸ್ತವವಾಗಿ ಈ ಕುರಿತು ಅಂಕಣ ಪ್ರಾರಂಭವಾಗುವಾಗ, ಇವರು ಹೆಸರನ್ನು ಹೀಗಿದೆ ಎಂದು ಹೇಳಿದಾಗಳೇ ಸಾಕಷ್ಟು ಚರ್ಚೆ ಆಯಿತು. ತಮ್ಮ ಅಂಕಣದ ಹೆಸರಿನಲ್ಲೇ ದೋಷ ಇರುವವರು ಭಾಷಾಶುದ್ಧಿ ಮಾಡುತ್ತಾರೆ ಎಂದರೆ ಹಾಸ್ಯಾಸ್ಪದವೇ ಅಲ್ಲವೇ! ಬೇರೆಯವರ ತಟ್ಟೆಯಲ್ಲಿದ್ದ ನೊಣವನ್ನು ತೋರಿಸುವ ಮೊದಲು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದ ಪ್ರಾಣಿಯನ್ನು ನೋಡಿಕೊಳ್ಳುವುದು ಉತ್ತಮ ಅಲ್ಲವೇ!
 ಹಿಂದೊಮ್ಮೆ  "ದಿನಪತ್ರಿಕೆಯಲ್ಲಿ ಒಂದಿಷ್ಟು ಅಂಕಣ ಬರೆದ ಬಹಳಷ್ಟು ಲೇಖಕರು ಬರುತ್ತಾ ಬರುತ್ತಾ  ತಮ್ಮನ್ನು ತಾವೇ ಉಳಿದವರಿಗೆ ಉಪದೇಶ ಮಾಡುವ ಸ್ಥಾನದಲ್ಲಿ ನಿಲ್ಲಿಸಿಕೊಂಡುಬಿಡುತ್ತಾರೆ. ಆ ಬಳಿಕ ಅವರ ಲೇಖನದಲ್ಲಿ ಇಂತಹ ಉಪದೇಶಗಳೇ ತುಂಬಿಕೊಂಡು ಏನೂ ಸ್ವಾರಸ್ಯ ಇರುವುದಿಲ್ಲ. ಆದರೆ ಈ ಲೇಖಕರ ಅಂಕಣಗಳು ಹಾಗಲ್ಲ." ಎಂದು ಇವರದ್ದೇ ಒಂದು ಪುಸ್ತಕಬಿಡುಗಡೆಗೆ ಬಂದ ಮುಖ್ಯ- ಅತಿಥಿಗಳು ಹೇಳಿದಂತೆ ನೆನಪು. (ಬಹುಶಃ ೨೦೧೦ರ ಸುಮಾರಿನಲ್ಲಿ ಎಂದೆನಿಸುತ್ತದೆ) ಅಲ್ಲಿ ಹೇಳಿದ್ದರೋ ಇಲ್ಲವೋ- ಒಟ್ಟಾರೆ ಆ ವಾಕ್ಯ ಒಂದು ರೀತಿಯಲ್ಲಿ ಎಚ್ಚರಿಕೆಯ ಮಾತೆಂಬುದಂತೂ ನಿಜ. ಲೇಖಕರೇ ಹೇಳಿದಂತೆ ಹಲವಾರು ಜನ ಓದುಗರು, ಸೆಲೆಬ್ರಿಟಿಗಳೂ ಇವರ ಲೇಖನವನ್ನು ಓದುತ್ತಿರುತ್ತಾರೆ. ಅವರಲ್ಲಿ ಎಷ್ಟೋ ಜನರಿಗೆ ಉಳಿದ ಕಮೆಂಟುಗಳಲ್ಲಿ ಆದ ಚರ್ಚೆಯನ್ನು ಗಮನಿಸುವ ವ್ಯವಧಾನವಿರುವುದಿಲ್ಲ. ಹಾಗಿರುವ ಪರಿಸ್ಥಿತಿಯಲ್ಲಿ ಸ್ವಚ್ಛಭಾಷೆಯನ್ನು ಕಲಿಯಬೇಕಾದವರಿಗೆ ಇವರು ಹೇಗೆ ಅನುಕೂಲವನ್ನು ಮಾಡುತ್ತಿದ್ದಾರೆ?  ಯಾವಾಗ ಲೇಖಕನಿಗೆ ಲೇಖನಕ್ಕಿಂತ ಸ್ವಪ್ರತಿಷ್ಠೆಯ ಕಡೆ ಹೆಚ್ಚು ಒಲವು ಬರುತ್ತದೆಯೋ, ಅಥವಾ ಲೇಖಕರು "ಸೆಲೆಬ್ರಿಟಿ" ಆಗಿ ತನ್ನನ್ನು ಅನುಸರಿಸುವ ಅಭಿಮಾನಿಗಳ ಬಳಗದ ಎದುರು ತಾನು ತಪ್ಪೊಪ್ಪಿಕೊಂಡಾಗ ಸಣ್ಣವನಾಗಿಬಿಡುತ್ತೇನೆ ಎಂಬ ಭಾವನೆ ಬರುತ್ತದೆಯೋ, ಅಥವಾ ತಾನು ಹೇಳಿದ್ದನ್ನು ಉಳಿದವರು ಒಪ್ಪಿಕೊಳ್ಳಲೇಬೇಕು ಎಂಬ ಅಹಂಕಾರತೃಪ್ತಿಯ ಆಸೆ ಹೆಚ್ಚಾಗುತ್ತದೆಯೋ ಆಗ ಇವೆಲ್ಲ ಅನರ್ಥಗಳು ಸಂಭವಿಸುತ್ತವೆ. ಡಿವಿಜಿ ಅವರ ಕಗ್ಗದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು- "ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣುಗಂಡೊಲವು| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದದಾತ್ಮವನೆ ಮಂಕುತಿಮ್ಮ||" ಹೇಳಿ ಕಲಿಸುವ ಕಾಲ ಹಳೆಯದಾಯ್ತು. ಈಗೇನಿದ್ದರೂ ಕಲಿತುಕೊಳ್ಳುವ ಕಾಲ. ನಾವು ನಮ್ಮ ಯೋಗ್ಯತೆಯನ್ನೂ ಶಕ್ತಿಯನ್ನೂ ತಿಳಿದುಕೊಳ್ಳದೇ ಹೋದರೆ, ಆಳ ಗೊತ್ತಿಲ್ಲದ ನದಿಯಲ್ಲಿ ಈಜು ಕಲಿಯಲು ಹೋದಂತಾಗುವುದು ನಿಸ್ಸಂಶಯ. ನಮಗಿಂತ ಆ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ಇರುವವರು ಹೇಳಿದಾಗ ಒಪ್ಪಿಕೊಳ್ಳುವುದು ಜಾಣತನ. ಅಷ್ಟಲ್ಲದೇ ಹಿರಿಯರು ಸುಮ್ಮನೇ ಹೇಳಿದ್ದಾರೆಯೇ "ವಿದ್ಯೆಗೆ ವಿನಯವೇ ಭೂಷಣ" ಎಂದು. ಹುಲಿಯ ಚರ್ಮವನ್ನು ಹೊದೆದ ಕಾರಣ ಈ ಪ್ರಾಣಿಯನ್ನೂ ನಾವು ಹುಲಿಯೆಂದೇ ಭಾವಿಸುತ್ತಿರುವಂತೆ ಪರಿಸ್ಥಿತಿ ಉಂಟಾಗಿದೆ. ಮಿತ್ರರೊಬ್ಬರು ಹೇಳಿದಂತೆ ಬಾಯಿ ಬಿಟ್ಟರೆ ಬಣ್ಣಗೇಡಾಗುವ ಮೊದಲು  ತನ್ನ ಹುಲಿಯ ರೂಪವನ್ನು ತ್ಯಜಿಸುವುದು ಒಳ್ಳೆಯದು ಎಂದು ನನ್ನ ಭಾವನೆ.

~~~~~~~~
-ಗಣೇಶ ಭಟ್ಟ ಕೊಪ್ಪಲತೋಟ

ಶನಿವಾರ, ಸೆಪ್ಟೆಂಬರ್ 29, 2018

ಹೊಸತಲೆಮಾರಿನ ಬರಹಗಳು

(೨೦೧೭ರಲ್ಲಿ ಹಾಕಿದ ಫೇಸ್ಬುಕ್ ಪೋಸ್ಟ)
ಅಭಿವ್ಯಕ್ತಿಮಾಧ್ಯಮವಾಗಿ ಸಾಹಿತ್ಯ ಬಹುಬೇಗ ಎಲ್ಲರಿಗೂ ಒಗ್ಗಿಬರುತ್ತದೆ ಎಂಬ ಕಾರಣಕ್ಕೇ ಇರಬಹುದೇನೋ ಇತ್ತೀಚೆಗೆ ಬಹಳಷ್ಟು ಜನ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಇಂದಿನ ಸುಲಭಸಾಧ್ಯಸಂವಹನಮಾಧ್ಯಮಗಳಿಂದ ಲೇಖಕರು ಬಹಳಷ್ಟು ಜನರನ್ನು ಬೇಗ ತಲುಪಲು ಸಾಧ್ಯವಾಗುತ್ತದೆ ಎಂಬ ಸಂತಸದ ಜೊತೆಗೆ, ಪ್ರಬುದ್ಧತೆಯನ್ನು ಕಾಣುವ ಮೊದಲೇ ಅಪಕ್ವಕೃತಿಗಳು ಲೋಕಾರ್ಪಣೆಗೊಳ್ಳುತ್ತಲಿವೆ ಎಂಬುದು ಖೇದಕರ.
ಗದ್ಯಪದ್ಯಗಳಲ್ಲಿ ಮೊದಲು ಗದ್ಯವನ್ನು ಅವಲೋಕಿಸಿದರೆ-
ಗದ್ಯಕ್ಕೆ ಪದ್ಯಕ್ಕೆ ಬೇಕಾದ ಕಲಾತ್ಮಕತೆಯ ಆವಶ್ಯಕತೆ ಇಲ್ಲದಿದ್ದರೂ ಒಂದು ಹದ ಬೇಕು. ವಾಕ್ಯಗಳು ಸುಲಭವಾಗಿ ಅರ್ಥವಾಗುವಂತಿರಬೇಕು. ವ್ಯರ್ಥವಾದ ಅಸ್ಪಷ್ಟವಾದ ನಿರೂಪಣೆಗೆ ಪೂರಕವಲ್ಲದ ಪದಪುಂಜಗಳನ್ನು ತೆಗೆದು ಹಾಕಬೇಕು. ಇದೆಲ್ಲವನ್ನೂ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವುದೇ ಹೌದು. ಆದರೆ ಹಲವು ದೋಷಗಳು ಲೇಖಕರ ಕಣ್ಣಿಗೆ ಬೀಳದೇ ಉಳಿದುಬಿಡುತ್ತದೆ. ಆ ಕಾರಣಕ್ಕಾಗಿಯೇ ಬಲ್ಲವರ ಬಳಿ ಮೊದಲು ಓದಿ ತಿದ್ದಿಸಿಕೊಳ್ಳಬೇಕು ಎಂದು ಹಿಂದಿನವರು ಹೇಳಿದ್ದಾರೆ. ಎಲ್ಲರಿಗೂ ಎಲ್ಲದೂ ತಿಳಿದಿರುವುದಿಲ್ಲ ಎಂಬ ಕಾರಣಕ್ಕೇ ತಿಳಿಸಿ ಹೇಳುವವರ ಮಾತಿಗೆ ಬೆಲೆ ಕೊಡಬೇಕಲ್ಲವೇ! ಕವಿಚಕ್ರವರ್ತಿ ರನ್ನನೂ ತನ್ನ ಕಾವ್ಯವನ್ನು ತಿದ್ದಿಸಿಕೊಂಡಿದ್ದನ್ನು ಉಲ್ಲೇಖಿಸುತ್ತಾನೆ. ಎಂದರೆ ಅದರಲ್ಲಿ ಮುಜುಗರ- ನಾಚಿಕೆಗಳನ್ನು ಹೊಂದುವಂತಹ ಅವಶ್ಯಕತೆ ಇಲ್ಲವೆಂದೇ ಅರ್ಥ.
*ಅಳವಿನ ಅರಿವು- ಎಲ್ಲಕ್ಕಿಂತ ಮುಖ್ಯವಾಗಿ ಲೇಖಕನಿಗೆ ತನ್ನ ಪರಿಮಿತಿಯ ಅರಿವಿರಬೇಕು. ಆದರೆ ಅರಿವಿಲ್ಲದುದನ್ನು ಬರೆಯುವಾಗ ಸೂಕ್ಷ್ಮವಾಗಿ ಅವಲೋಕಿಸಿ ತಿಳಿದುಕೊಳ್ಳುವ ಸ್ವಭಾವ ಇರಬೇಕು. ಆದರೆ ತಿಳಿದುಕೊಂಡದ್ದೇ ಪರಿಪೂರ್ಣ ಎಂಬ ಮನಸ್ಸ್ಥಿತಿ ಇರಬಾರದು. ಗದ್ಯವೊಂದರಲ್ಲಿ ತಾನೆಲ್ಲೋ ಕೇಳಿದ ಸಂಸ್ಕೃತದ ಯಾವುದೋ ಶ್ಲೋಕವನ್ನು ಉದ್ಧರಿಸಬೇಕು ಎಂತಾದರೆ ಸಂಸ್ಕೃತವನ್ನು ಕಲಿಯದ ಲೇಖಕ ಅದನ್ನು ಬಳಸಿದ್ದರೂ ಅದರ ಬಗ್ಗೆ ತಿಳಿದವರಿಂದ ಖಚಿತ ಪಡಿಸಿಕೊಳ್ಳಬೇಕು. ಇಲ್ಲವೆಂದರೆ ಅರ್ಥಕ್ಕೆ ಚ್ಯುತಿಯೋ ಅಪಾರ್ಥವೋ ಆಗುವ ಸಾಧ್ಯತೆ ಇರುತ್ತದೆ. ಉದಾ- "ಮನಃಕಂಪನ" ಎನ್ನುವುದಕ್ಕೂ "ಮನೋಕಂಪನ" ಎನ್ನುವುದಕ್ಕೂ ತದ್ವಿರುದ್ಧವಾದ ಅರ್ಥಗಳೇ ಇವೆ.
* ಪುನರುಕ್ತಿಯ ದೋಷ- ಒಂದೇ ಶಬ್ದವನ್ನು ಎರಡೆರಡು ಬಾರಿ ಬಳಸುವುದು. ಉದಾ- ಅಜ್ಜಿಮುದುಕಿ, ದೊಣ್ಣೆಕೋಲು, ವನಕಾನನ, ನೀರವಮೌನ ಇತ್ಯಾದಿ. ಇಲ್ಲಿ ಅಜ್ಜಿಯೂ ಮುದುಕಿಯೂ ಒಬ್ಬಳೇ, ದೊಣ್ಣೆಯೂ ಕೋಲೂ ಒಂದೇ ಅರ್ಥ, ವನವೂ ಕಾನನವೂ ಒಂದೇ ಅರ್ಥ, ನೀರವವೂ ಮೌನವೂ ಒಂದೇ ಅರ್ಥ. ಹೀಗಾದಾಗ ಪುನರುಕ್ತಿಯೆಂಬ ದೋಷವಾಗುತ್ತದೆ. ಇದು ಕೇವಲ ಶಬ್ದಗಳಿಗಷ್ಟೇ ಅಲ್ಲ. ಘಟನೆಗಳಿಗೂ ಅನ್ವಯಿಸುತ್ತದೆ. ಮತ್ತೆ ಮತ್ತೆ ಓದುಗರನ್ನು ಎಚ್ಚರಿಸಲೋ ಎಂಬಂತೆ ಬಂದ ಘಟನೆಗಳನ್ನೇ ಪುನರಪಿ ಹೇಳುವುದು ತರವಲ್ಲ. ಅಥವಾ ಪ್ರಜ್ಞಾಪ್ರವಾಹವೊಂದರ ಮಧ್ಯೆ ಮಧ್ಯೆ ವ್ಯಕ್ತಿಯ ಆಂಗಿಕವಿನ್ಯಾಸವನ್ನೋ ಅಥವಾ ಲೌಕಿಕಕಾರ್ಯವನ್ನೋ ಒಂದೆರಡು ಬಾರಿಗಿಂತ ಹೆಚ್ಚು ಹೇಳಿದರೆ ಅಷ್ಟಾಗಿ ರುಚಿಸದು. ಒಂದು ಆಳಕ್ಕೆ ಹೋಗುತ್ತಿರುವವರನ್ನು ಉಸಿರು ಕಟ್ಟಿಸಿ ಮೇಲೆಳೆದು ತಂದಂತೆ ಭಾಸವಾಗುತ್ತದೆ.
*ಕಥೆಗೆ ಪೂರಕವಲ್ಲದ ಚಿತ್ರಣ- ಮುಖ್ಯ ಕಥಾಸೂತ್ರಕ್ಕೆ ಪೂರಕವಾಗಿರದಂತೆ ಬೇರೆಯದೇನೋ ಅಸಂಬದ್ಧವನ್ನು ತಂದು ತುರುಕುವುದು ಓದುಗನಿಗೆ ರಸಾಭಾಸವನ್ನು ಉಂಟುಮಾಡುತ್ತದೆ. ಕಥೆಗೆ ಪೂರಕವಿದ್ದರೂ ನೀರಸವಾಗಿ ವಿಸ್ತರಿಸುವುದೂ ಕೂಡ ರಸಕ್ಕೆ ಮಾರಕ.
*ಶಾಸ್ತ್ರಪಾಂಡಿತ್ಯಪ್ರದರ್ಶನ- ಲೇಖಕನಿಗೆ ಯಾವುದೋ ಶಾಸ್ತ್ರದಲ್ಲಿ ಪಾಂಡಿತ್ಯವಿದೆ ಎಂದು ತನ್ನ ಕಥೆಯಲ್ಲಿಯೋ ಕಾವ್ಯದಲ್ಲಿಯೋ ಕಾದಂಬರಿಯಲ್ಲಿಯೋ ಆ ಶಾಸ್ತ್ರವನ್ನೇ ಚರ್ಚಿಸಿದರೆ ಅದು ಓದುಗರಿಗೆ ಕಬ್ಬಿಣದ ಕಡಲೆಯಾಗುತ್ತದೆ. ಸರಳವಾಗಿ ಜನರಿಗೂ ತಲುಪುವಂತೆ ಶಾಸ್ತ್ರವನ್ನು ವಿಸ್ತರಿಸಬಹುದಾದರೂ ಅದೂ ಅಷ್ಟು ಸೊಗಸೆನಿಸದು. ಕಥಾನಾಯಕ ವ್ಯಾಕರಣಪಂಡಿತನೆಂದು ಇನ್ನೊರ್ವನ ಜೊತೆ ಚರ್ಚೆ ನಡೆಸುವುದನ್ನೇ ಅರ್ಧ ಕಥೆ ತುಂಬಿಸಿಬಿಟ್ಟರೆ ಓದುಗರಿಗೆ ಕಥೆ ಎಂಬ ಇಲಿ ಹಿಡಿಯಲು ಶಾಸ್ತ್ರದ ಗುಡ್ಡವನ್ನು ಅಗೆಯೇಕಾಗುತ್ತದೆ.
*ಅಶ್ಲೀಲವರ್ಣನೆ- ಕಥೆಯಲ್ಲಿ ಶೃಂಗಾರಾದಿರಸಗಳೂ ಅದಕ್ಕೆ ಪೂರಕವಾದ ವಿಭಾವಾನುಭಾವಗಳೂ ಬರುಬೇಕು. ದಿಟವೇ. ಆದರೆ ಶೃಂಗಾರದಲ್ಲಿ ಅದರಲ್ಲೂ ಸಂಭೋಗಶೃಂಗಾರದ ವರ್ಣನೆಯಲ್ಲಿ ಅಶ್ಲೀಲತೆ ಬರುವ ಸಂಭವ ಹೆಚ್ಚು. ಆ ಒಂದು ಮರ್ಯಾದೆಯ ಸೂಕ್ಷ್ಮಸೀಮಾರೇಖೆಯನ್ನು ಅರಿಯದಿದ್ದರೆ ರಸ ಶೃಂಗಾರದಿಂದ ಬೀಭತ್ಸದ ಕಡೆಗೆ ಹೊರಳುತ್ತದೆಯಷ್ಟೆ!
*ಪ್ರದರ್ಶನತೃಷೆ- ಲೇಖಕ ತನ್ನ ಜ್ಞಾನವನ್ನು ಹಾಗೇ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೆ ಕಾವ್ಯ-ಕಥೆ-ಕಾದಂಬರಿಗಳು ಸೂಕ್ತವಲ್ಲ. ಅದಕ್ಕೆ ಸಂಶೋಧನಾಲೇಖನವನ್ನೋ ಇನ್ನಾವುದೋ ಪ್ರಬಂಧವನ್ನೋ ಮಂಡಿಸಬಹುದು. ರಸೈಕದೃಷ್ಟಿಯಿಂದ ಯಾವುದು ಸೂಕ್ತವಲ್ಲವೋ ಅದೆಲ್ಲವೂ ಹಾನಿಕಾರಕವೇ ಹೌದು. ಪ್ರದರ್ಶನತೃಷೆ- ತನಗೆ ಗೊತ್ತು ಎಂದು ತೋರಿಸಿಕೊಳ್ಳುವುದು. ಎಷ್ಟೋ ವಿಷಯಗಳಲ್ಲಿ ಜ್ಞಾನವಿಲ್ಲದಿದ್ದರೂ ತನಗೆ ಗೊತ್ತು ಎಂಬಂತೆ ತೋರಿಸಿಕೊಳ್ಳುವ ತೃಷೆ ಹಲವರಲ್ಲಿ ಕಾಣುತ್ತದೆ. ಆದರೆ ಕಥೆಯಲ್ಲಿ ಅದರ ಜೊಳ್ಳು ಗೊತ್ತಾದಾಗ ಓದುಗನಿಗೆ ಲೇಖಕನ ಬಗ್ಗೆ ಹಗುರವಾದ ಭಾವನೆ ಬರುತ್ತದೆಯಷ್ಟೇ!
*ಪ್ರಬಂಧಧ್ವನಿ- ಒಟ್ಟಾರೆಯಾಗಿ ಕೃತಿಯೊಂದು ಓದುಗನ ಮನಸ್ಸಿನ ಮೇಲೆ ಬೀರುವ ಪರಿಣಾಮ ಏನು! ಓದಿ ಎಷ್ಟು ಕಾಲ‌ದ ವರೆಗೆ ಓದುಗ ಅದನ್ನು ಆಲೋಡನೆ ಮಾಡುತ್ತಾನೆ! ಅದರಿಂದಲೇ ಕೃತಿಯ ಗುರುತ್ವ ತಿಳಿಯುತ್ತದೆ. ಪುನಃ ಪುನಃ ಓದಬೇಕೆಂದೆನಿಸುವುದು, ಓದಿದ ಬಳಿಕ ಅವ್ಯಕ್ತವಾದ ಆನಂದವನ್ನು ಕೊಡುವುದು ಸತ್ಕೃತಿಗಳ ಲಕ್ಷಣ ಎನ್ನಬಹುದು.

ಇನ್ನು ಪದ್ಯವನ್ನು ಅವಲೋಕಿಸಿದರೆ-
ಪದ್ಯಕ್ಕೆ ಬೇಕಾದ ಪ್ರಾಸಾದಿಕಗುಣಗಳು ಕಾಣೆಯಾಗುತ್ತಿವೆ. ಕಲಾತ್ಮಕತೆ ಇಲ್ಲವಾಗುತ್ತಿದೆ. ಛಂದಸ್ಸು ಅಲಂಕಾರಗಳೆಂಬುದನ್ನು ಎಂದಿಗೋ ಬಿಟ್ಟರೂ ಕನಿಷ್ಠ- ಅವಶ್ಯಕತೆಗಳಾದ ಔಚಿತ್ಯವೂ ಭಾವವೂ ಇಲ್ಲದೆ ಶುಷ್ಕವಾಗಿ ಕಾಣುತ್ತವೆ. ಇವುಗಳಲ್ಲಿಯೇ ಹಲವು ಪ್ರಭೇದಗಳನ್ನು ಹೇಳುತ್ತಾರಾದರೂ ಎಲ್ಲವನ್ನೂ ಸ್ಥೂಲವಾಗಿ ಅವಲೋಕಿಸಿದಾಗ ಎಲ್ಲವುಗಳಲ್ಲೂ ಇದೇ ಕೊರತೆ ಎದ್ದು ಕಾಣುತ್ತದೆ. ಹಳೆಯ ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸದಾದ ಪಂಥವನ್ನು ಕಂಡುಕೊಂಡ ಈ ನವ್ಯ-ಬಂಡಾಯ- ಇತ್ಯಾದಿ ಕವಿತೆಗಳು ಎಷ್ಟು ಕಾಲ ನಮಗೆ‌ ಸಂತಸವನ್ನು ಕೊಡಬಲ್ಲವು? ಎಷ್ಟು ಕಾಲ ಒಂದು ಕವಿತೆಯನ್ನು ಓದಿದಾಗ ಉಂಟಾದ ಭಾವ ಸ್ಥಿರವಾಗಿ ಇರುತ್ತದೆ? ಹಾಗಾದರೆ ಈ ಭಾವವನ್ನು ಹಿಡಿದಿಡಲು ಇಂತಹ ಕವಿತೆಗಳು ಏಕೆ ಅಸಮರ್ಥವಾಗುತ್ತಿವೆ? ಇಲ್ಲಿ ಕಾಣುವುದು ಕವಿಯ ಅಸಾಮರ್ಥ್ಯವೇ? ಇದನ್ನು ದಾಟಲು ಹೇಗೆ ಸಾಧ್ಯ ಎಂದರೆ- ಹೇಳಬೇಕಾದದ್ದನ್ನು ಸ್ಪಷ್ಟವಾಗಿ ಒಂದು ವಾಕ್ಯವನ್ನಾಗಿಸಿ ಅದನ್ನು ಸರಿಯಾದ ಹದದಲ್ಲಿ ಪದಗಳಲ್ಲಿ ಓದುವಾಗ ಕರ್ಕಶವಾಗದಂತೆ ಗತಿಸುಭಗವಾಗಿ ಇಡುವುದು. ಮಾರ್ಗಕಾವ್ಯದಲ್ಲಿ ಛಂದಸ್ಸು ಈ ಪದಗಳನ್ನು ಹದವಾಗಿ ಹಿಡಿದಿಡುವ ಕೆಲಸ ಮಾಡುತ್ತಿತ್ತು. ಆ ಭಾಷೆಗೆ ಆ ಛಂದಸ್ಸು ಎಂಬಂತೆ ಹೊಸಗನ್ನಡಕ್ಕೆ ತಕ್ಕ ಛಂದಸ್ಸೂ ರೂಪುಗೊಂಡಿತ್ತು. ಉದಾಹರಣೆಗಳನ್ನು ನಾವು ಕುವೆಂಪು, ಡಿವಿಜಿ, ಗೋವಿಂದ ಪೈ, ಸೇಡಿಯಾಪು, ಮಾಸ್ತಿ, ಬೇಂದ್ರೆ, ಬಿ.ಎಂ.ಶ್ರೀ, ಕೆ.ಎಸ್.ನ ಮೊದಲಾದವರ ಕವಿತೆಗಳಲ್ಲಿ ಕಾಣಬಹುದು. ಆ ಕಾರಣಕ್ಕೇ ಇವರೆಲ್ಲರ ಕವಿತೆಗಳು ಚಿರಯೌವನದಲ್ಲಿವೆ. ಇಂದಿನ ಕವಿತೆಗಳೆಂದರೆ ಅರ್ಥಹೀನವಾದ ವ್ಯರ್ಥವಾದ ಪದಗಳ ಗುಂಪಿನ ಅನಿಯಂತ್ರಿತವಿನ್ಯಾಸವಾಗಿದೆ. ಹಿಂದಿನ ಕವಿಗಳ ಅಧ್ಯಯನದಿಂದ ಮಾತ್ರ ಆ ಹದವನ್ನು ಕಂಡುಕೊಳ್ಳಲಾಗುತ್ತದೆ. ಹಿಂದಿನ ಯೋಗ್ಯಕವಿಗಳ ಸಾವಿರ ಪದ್ಯಗಳನ್ನು ಓದಿ ಕನಿಷ್ಠ ಐವತ್ತು ಪದ್ಯಗಳನ್ನು ಕಂಠಪಾಠ ಮಾಡಿದ್ದರೆ ಹೊಸದಾಗಿ ಪದ್ಯ ಬರೆಯುವಾಗ ಅದರಲ್ಲಿ ಕಿಂಚಿತ್ ಸೌಂದರ್ಯವನ್ನು ಕಾಣಬಹುದು. ಏವಂ ಚ ಪ್ರತಿಭೆ ಕಲ್ಪನೆ ಕವಿತ್ವಶಕ್ತಿಗಳನ್ನು ಕಲಿಸಲು ಸಾಧ್ಯವಿಲ್ಲ. ಒಂದು ಲಯದಲ್ಲಿ ಹಾಡಿಕೊಳ್ಳಬಹುದಾದ ಪದ್ಯಗಳು ಕೊಡುವ ಭಾವವನ್ನು ಈ ತರಹದ ನವ್ಯಾದಿಕವಿತೆಗಳು ಕೊಡಲು ಅಸಮರ್ಥವಾಗುವುದೇ ಅದಕ್ಕೆ. ಆ ಕಾರಣಕ್ಕೇ ಸಿನಿಮಾ ಹಾಡುಗಳು ಕೂಡ ಈ ಕವಿತೆಗಳಿಗಿಂತ ಜನರ ಮನಸ್ಸಿಗೆ ಹೆಚ್ಚು ಹತ್ತಿರವಾಗುತ್ತವೆ. ನಾವು ಆಡಿದ ಮಾತು ಇನ್ನೊಬ್ಬರಿಗೆ ಅರ್ಥವಾಗದಿದ್ದಲ್ಲಿ ನಾವು ಮಾತನಾಡುವುದೇ ವ್ಯರ್ಥವಲ್ಲವೇ! ಈ ಕವಿತೆಯ ಉದ್ದೇಶವಾದರೂ ಸಂತಸವನ್ನು ಕೊಡುವುದೇ ಅಲ್ಲವೇ? ಅಲ್ಲದೇ ಹೇಳುವುದನ್ನು ನೇರವಾಗಿ ಹೇಳದೇ ಪರ್ಯಾಯವಾಗಿ ಹೇಳಿದಾಗ ಆಗುವ ಪರಿಣಾಮ ಹೆಚ್ಚು ಆಸ್ವಾದ್ಯ. ಇದೆಲ್ಲವನ್ನೂ ನಮ್ಮ ಆಲಂಕಾರಿಕರು ಅದೆಷ್ಟೋ ಹಿಂದಿನಿಂದಲೇ ಹೇಳಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಅವರನ್ನು ಗೌರವಿಸುವ ಸ್ವಭಾವವೇ ಇಲ್ಲವಾಗುತ್ತಿರುವ ಕಾರಣ ಅವರ ಬರಹಗಳನ್ನು ಓದುತ್ತಾರೆ ಎಂದು ನಿರೀಕ್ಷಿಸುವುದೂ ಹಾಸ್ಯಾಸ್ಪದವಾಗುತ್ತದೆ.

ಗುರುವಾರ, ಆಗಸ್ಟ್ 2, 2018

ಮಧುವನಮರ್ದನಂ -೪


ಈ ಭಾಗವನ್ನು ಇಲ್ಲಿ ಕೇಳುತ್ತ ಓದಬಹುದು
ಹಿಂದಿನ ಭಾಗಗಳು
ಮೊದಲ ಭಾಗ- ಮಧುವನಮರ್ದನಂ-೧
ಎರಡನೆ ಭಾಗ- ಮಧುವನಮರ್ದನಂ-೨
ಮೂರನೆ ಭಾಗ- ಮಧುವನಮರ್ದನಂ-೩

~ಮಧುವನಮರ್ದನಂ -೪~
ಇತ್ತಲೀ ವನದೊಳಿರ್ದಪ ಮತ್ತಕಪಿಗಳೋ
ನಾನಾವಿಧಂಗಳಿಂ ಸರ್ವನಾಶಂಗೈದು
ಹನುಮಂತನಂದು ಪಾಳ್ಗೆಡವಿರ್ಪ ಲಂಕೆಯಾ
ರುಚಿರಮಾದಸುಗೆಬನದಂದದಿಂ ಗೈದಿರಲ್ ೩೨೦
ಮಧುವನಂ ಮಧುಹೀನಮಾದತ್ತು ಜತೆಯೊಳೇ
ವನಮುಮಿಲ್ಲದ ಪಾಂಗಿನಿಂ ಬರಿದೆ ಬಯಲಾಯ್ತು
ಚಂಡಮಾರುತಮೊಂದು ಬೀಸಿ ಪಾಳ್ಗೆಡವಿತೋ
ಚಂಡಪ್ರವಾಹಮೇನೆಲ್ಲಮಂ ನುಂಗಿತೋ
ಮದಿಸಿರ್ಪಗಜಘಟಂ ನಿಜಕೇಲಿಯಿಂದಿದೇಂ
ನುಚ್ಚುನೂರ್ ಗೆಯ್ದಿತೋ ಬನಮನೆಂಬಂದದಿಂ-
ದಿನಿತಾನುಮವಶೇಷಮಿಲ್ಲದಂದದೆ ಶತ-
ಚ್ಛಿದ್ರಮಂ ಗೆಯ್ದು ಮೇಣ್ ಮತ್ತರಾಗಿರೆ ಬಿಳ್ದು
ವಿಶ್ರಾಂತಿಯಂ ಪೊಂದಲೆಂಬಂತೆ ಮಲಗಿದರ್
ವಿವಿಧಭಂಗಿಗಳೊಳಗೆ ಹನುಮನಿಂ ರಕ್ಷಿತರ್ ೩೩೦
ಕಪಿಗಳುದ್ದಂಡವಿಕ್ರಮರಲ್ಲಿ ಮಧುವನದೆ.

ನೆಲದೆ ಕುಳಿಗಳ ಸಾಲ್ಗಳೇ ತುಂಬಿ ಕಂಡುವೈ    
ಮರನಿಲ್ಲದಂತಾಯ್ತು ಮರುಭೂಮಿಯಂದದಿಂ
“ಅಕಟ! ವನಸೃಷ್ಟಿಗಂ ಶ್ರಮಮೆಂತು ಸಂದಿರ್ಪು-
ದೆಂತುಟಾದುದು ಕುಮತಿ ಕಪಿಗಳ್ಗೆ! ಹಾ! ಹಂತ!
ಕಪಿಗಳೀ ಪ್ರಕೃತಿಯೇ ಮತ್ಸೃಷ್ಟಿ!” ಎಂದೆನುತೆ
ಬೊಮ್ಮನೇ ಕಣ್ಣೀರ್ಗಳಂ ಸುರಿಸಿದಂತಾಯ್ತು
ಅಳಿದುಳಿದ ಮಧುಪಾತ್ರದಿಂ ಸುರೆಯೆ ಚೆಲ್ಲಿರಲ್.
ಬೆಳ್ನೊರೆಯ ಪುಳಿವೆಂಡಮೆಲ್ಲೆಡೆಗೆ ಪಸರಿಸಿರೆ
ಡಿಂಡೀರಮಾಂತುದೇಂ ಕೌಮುದಿಯೆ ಎಂಬವೊಲ್ ೩೪೦
ಭ್ರಾಂತಿಯಾದುದು! ವನದ ಶಾದ್ವಲಂ ತೊಯ್ದಿರಲ್
ಮರಕತಕೆ ಪೊಗರೀಯಲುಜ್ಜುಗಿಸುತುಜ್ಜಿಟ್ಟ   
ತೆರನಾಯ್ತು! ಕೆಡೆದಿರ್ಪ ಮರಗಳಂ ನಿರುಕಿಸಲ್
ದೈತ್ಯರಾ ಬಾಣಸಿಗನೊಟ್ಟಿರ್ಪ ಸೌದೆವೊಲ್
ತೋರ್ದತ್ತು. ಮಧುವನದೆ ಮೊದಲಿರ್ದ ಸೊಗಮೆಲ್ಲ-
ಮಳಿದತ್ತು. ಲಯಕಾಲದಭ್ಯಾಸಕೆಂದೇನೊ
ರುದ್ರನೇ ಹನುಮರೂಪದೆ ಬಂದು ಗೆಯ್ಸಿದಂ-
ತೆಸೆದತ್ತು.
    ಪರಚಿರ್ಪ ಕರ್ಚಿರ್ಪ ಪೊಡೆದಿರ್ಪ
ಗಾಯಂಗಳಿಂದತ್ತ ಮೆಯ್ದುಂಬಿಕೊಂಡಿರ್ಪ
ದಧಿಮುಖಂ ಸುಗ್ರೀವನಿದಿರೊಳಗೆ ತಾಂ ನಿಂದು ೩೫೦
ಬಣ್ಣಿಸುತೆ ತನ್ನೀ ಅವಸ್ಥೆಗಳನಾಗಳೇ
ಕಪಿಗಳೆಲ್ಲರ್ ಸೇರ್ದು ಹನುಮನಾಣತಿಯಂತೆ    
ಜಾಂಬವಾಂಗದಯುಕ್ತರಾಗಿಂತು ಗೈದರೆನೆ
ಹರ್ಷದಿಂ ಸುಗ್ರೀವನೆಂದಂ ವಿಚಿಂತಿಸುತೆ-
“ಅಹಹ! ಸೀತೆಯ ಕಂಡು ಬಂದಿರ್ಪುದೇ ದಿಟಂ!
ಕಾಣದಿರ್ದೊಡೆ ಚಿತ್ತದೊಳ್ ಖೇದಮಿರ್ದೊಡಂ
ಮಧುವನಕೆ ಪುಗುವೊಂದು ಬಲ್ಮೆಯೇನವರ್ಗುಂಟೆ!
ಶ್ರೀರಾಮನೊಳ್ ಸ್ವಯಂ ಪೇಳ್ದಪೆಂ. ಶೀಘ್ರದಿಂ
ಬರವೇಳ್ ಸಮಸ್ತರಂ ವಾನರಾಗ್ರಣಿಗಳಂ.
ಬೇಗದಿಂ ಪೋ ಪೋ!” ಎನಲ್ ಚಿಮ್ಮಿ ನೆಗೆದಪಂ ೩೬೦
ದಧಿಮುಖಂ ಮಧುವನಕೆ ಭೀತಿ ಕಿಂಚಿತ್ತಿರಲ್.
ಮೇಹನದೆ ಮಗ್ನಮಾಗಿರೆ ವಾನರರ ದಂಡು,
ಮಧುಮಹೋತ್ಸವಕೆಂತೊ ಸಜ್ಜಾಗುತಿರ್ಪಂಥ  
ಮಧುವನಂ ನಿಶ್ಶೇಷಮಾಗಿರ್ಪುದಂ ಕಂಡು
ಮನದ ದುಗುಡಂ ಪೆರ್ಚಿಯುಂ ರಾಜನಾಜ್ಞೆಯಂ
ತಿಳುಪಲಾಗಮಿಸಿದಂ ಹನುಮವೆಸರಂ ಕೂಗಿ
ಪೊರಗಿರ್ಪ ವೇಲೆಯಿಂ ನುಡಿದಪಂ ಸುಗ್ರೀವ-
ನುಲಿದುದಂ. ಕೋಪಗೊಳ್ಳದೆ ಹರ್ಷಮಾಂತುದಂ!
ವಿತತವೃಕ್ಷಚ್ಛಾಯೆಯಳಿದು ತಿಂಗಳ್ ವೆಳಕೆ
ತಿಳಿಯಾಗಿ ನಳನಳಿಪ ಸಂಧ್ಯೆಯಾಗಮಿಸಿರಲ್ ೩೭೦
ತ್ರೈಲೋಕ್ಯವಂದ್ಯೆಯಂ ನಮಿಸುತ್ತೆ ನಿಂದಿರ್ಪ
ಮಾರುತಿಗೆ ದಧಿಮುಖಂ ಕರೆದಿರಲ್ ಕಣ್ಬಿಡಲ್
ನೆರೆದತ್ತು ಮುಂದೆಂತೊ ಚಂದ್ರಮಂಡಲಮಂದು
ಷೋಡಶಕಲಾಪೂರ್ಣಮದ್ಭುತಂ. ಸೀತೆಯಂ
ಕಂಡಿರ್ಪ ವಾರ್ತೆಯಂ ಕೇಳ್ದು ರಾಮನ ಮೊಗಮೆ
ಜೃಂಭಿಸಿರ್ಪಂದದಿಂದಿಂದುಮಂಡಲಮಿಂದು
ಬಂದುದೇಂ ಸುಂದರಂ ಬಂಧುರಂ ಚಂದದಿಂ-
ದೆಂದು ಬಗೆಯುತೆ ನೋಡೆ ಹನುಮಂತನತ್ತಣಿಂ-
ದೆಸೆದತ್ತು ಪೀಯೂಷಕಿರಣಪಾನೋನ್ಮತ್ತ
ವರಚಕೋರಂಗಳುಲಿವೊಲವಿಂದಮಾಲಿಸಲ್ ೩೮೦
ರಾಮಚಂದ್ರನ ವಚೋರಚನೆಗಿದು ಸಾಟಿಯೆನೆ
ಬಗೆಯೊಳಗೆ ತುಂಬಿರ್ಪುದಂ ಪ್ರಕೃತಿ ತೋರ್ಪುದೈ
ದಿಟದೆ ರಾಮನೆ ಮನದಿ ತುಂಬಿರ್ಪನೆಂದರಿತು      
ಮತ್ತೊರ್ಮೆ ಮೌನದಿಂ ಧ್ಯಾನಿಸುತೆ ಕಂಡನೈ
ಹೃದಯಮಂದಿರದೊಳಗೆ ರಾಮನಾ ಮೂರ್ತಿಯಂ
“ಜಯಜಯ ಶ್ರೀರಾಮ” ಘೋಷಮುಂ ತೀವಿರಲ್
ಮನದೊಳಗೆ ಪೂಜಿಸಿದನೊಲವಿಂದೆ ರಾಮನಂ.
ರಾಜನಾಣತಿಯಂತೆ ಸರ್ವರುಂ ಪೊರಮಟ್ಟು
ರಾಮನೊಳಗೊಲವಿಂದೆ ಸೀತೆ ದೊರಕಿರ್ಪುದಂ
ಪೇಳಲುತ್ಸುಕರಾಗಿ ಮಿಂಚಂತೆ ಪಾರ್ದಪರ್ ೩೯೦
ಬಂಡುಂಡ ಬಂಡುಣಿಗಳಾವಿಂಡು ನೆಲೆಗೆಯ್ದ
ಪಾಂಗಿಂದೆ ವಾನರರ ತಾಣಕ್ಕೆ ಸಾರ್ದಪರ್.
ಅನವರತಸೀತಾವಿಯೋಗಾಗ್ನಿಸಂತಪ್ತ
ಘನತರಶ್ರೀರಾಮಚಂದ್ರಕಾರ್ಶ್ಯೇಕ್ಷಿತರ
ಚಿತ್ತಕಂ ನೆಮ್ಮದಿಯನೀಯಲ್ಕೆ ಮಗುಳಂತೆ
ರಾಮಹೃದಯಾರಾಮವಾಸಂತದೂತಿ ತಳೆ-
ದಿರ್ಪ ಸುಮನಸ್ಸೆಂಬ ಪಾಂಗಿಂದೆ ಹನುಮಂತ-
ನವತರಿಸಿದಂ ನೆಲಕೆ “ಸೀತೆ ದೊರಕಿದಳ್” ಎಂಬ
ಸೊದೆವಾತನೇ ಸುರಿಸುತುಂ ರಾಮ ಪದಯುಗಕೆ
ನಮಿಸಿ ಚೂಡಾಮಣಿಯನಿತ್ತನಾತನ ಕರದೆ. ೪೦೦
ರಾಮನಾಲಂಗಿಸುತುಮಾನಂದಬಾಷ್ಪದಿಂ-
ದಭಿಷೇಚಿಸಿದನಾಂಜನೇಯನಾಕೃತಿಯನೇ!
ಆಗಳದನೀಕ್ಷಿಸಿದರೆಲ್ಲರುಂ ಸಂತಸದೆ
ಗದ್ಗದಿತರಾಗಿರಲ್ ರಾಮಚಂದ್ರಂ ಮತ್ತೆ
ಮಾರುತಿಯ ನುಡಿಗಳಂ ಕೇಳಲಾಸಕ್ತನಿರೆ
ಸರ್ವರುಂ ಸಮ್ಮಿಳಿತರಾಗಿರಲ್ ಹನುಮಂತ-
ನಂದು ಸೀತೆಯ ಕಂಡ ಕಥೆಯನೊರೆದಪನಲ್ಲಿ
ಆನಂದಮೊಂದೆ ಕಂಡುದು ಸರ್ವಹೃದಯದಲಿ.
~~~~~~~~~~~~~~~~~~~~~~~~~~~~~~~
~ಗಣೇಶ ಭಟ್ಟ ಕೊಪ್ಪಲತೋಟ
ಆರಂಭ:        ೦೭-೦೧-೨೦೧೮
ಮುಗಿತಾಯ:    ೧೨-೦೧-೨೦೧೮
ತಿದ್ದುಪಡಿ: ‌೨೨-೦೭-೨೦೧೮

ಬುಧವಾರ, ಆಗಸ್ಟ್ 1, 2018

ಮಧುವನಮರ್ದನಂ- ೩

ಮೊದಲ ಭಾಗ- ಮಧುವನಮರ್ದನಂ-೧
ಎರಡನೆ ಭಾಗ- ಮಧುವನಮರ್ದನಂ- ೨

ಲಿಂಕಿನಲ್ಲಿ ಈ ಭಾಗವನ್ನು ಕೇಳುತ್ತಾ ಓದಬಹುದು

~ಮಧುವನಮರ್ದನಂ -೩ ~

ಮತ್ತೆ ನಾರಿಕೇಳಾದಿ ತರು-
ಬೃಂದಂಗಳೊಳ್ ತಾಲವೃಕ್ಷಂಗಳೊಳ್ ಮಗುಳ್ ೨೧೦
ಕಿರಿದಾನುಮೆಸೆದಿರ್ಪುದೀಚಲ ಮರಂಗಳೊಳ್
ನಿಡಿದಾಗಿ ಕೊರೆಯಿಲ್ಲದಂತಿರ್ದಪುದು ನೋಡೆ   
ಮಧುಮಯಂ ಹೃದಯಮಂ ಸೊದೆಯೆ ಮೇಣ್
ತಣಿಪಂತೆ
ಫಲದಂತೆ ತೂಗಿರ್ಪ ಕುಂಭಂಗಳುಂ ಮತ್ತೆ
ಕಿರಿದಾದ ಭಾಂಡಂಗಳುಂ ನಿರುಕಿಸಲ್ಕದೇಂ
ದನುಜರಿಂ ಸುರೆಯನೇಂ ಕಳ್ದುಯ್ಯಲೆನುತೆ ತಾಂ
ಸುರಪತಿಯೆ ಕಳುಪಿರ್ಪ ಸೈನಿಕರ್ ರಕ್ಕಸರ
ಜಾದುವಿಂ ಮರವಟ್ಟು ನಿಂತಿರ್ಪರಿಂತುಟೇಂ!
ಅಲ್ತಲ್ತು! ಖಗಕುಲಕೆ ವೃಕ್ಷಸಂಕುಲಮೊಲ್ದು
ಪಾಥೇಯಮಂ ನೀಡಲೆಂದು ಕೆಯ್ ನೆಗಪಿದುವೆ! ೨೨೦
ತಂಗಾಳಿ ತೀಡಿರಲ್ ಸಂಸ್ಪರ್ಶಮಪ್ಪುದೈ
ಮಧುರಗಂಧಂ ತೀವಿ ನಾಸಿಕಕೆ ಸೊಗಸೆನಿಸೆ    
ಇಂಪೆನಿಪ ಕಲರವಂ ಕರ್ಣಕಾನಂದನಂ
ಕಂಗಳ್ಗೆ ಸುಂದರಂ ಬನದ ಸದ್ದೃಶ್ಯಮುಂ
ಸೊಗಸೆನಿಸೆ ನಾಲಗೆಗೆ ಸಂದಿರ್ಪುದೇನೆನಲ್
ರುಚಿಯಿರ್ಪ ವಾರುಣಿಯ ಕುಂಭಂಗಳಿಕೊ! ಕೊಳ್!
ಎಂದು ಪೇಳ್ವಂದದಿಂ ವೃಕ್ಷಂಗಳೊಳ್ ಸಂದ
ಸವಿಯಾದ ರಸಮಿರ್ಪ ಮಧುಪಾತ್ರದಿಂ ಕೂಡಿ
ಮಧುವನಂ ಭವ್ಯಮಾಗಿರ್ದಪುದು
ಕಪಿಕುಲಂ  ೨೩೦
ತಾಂ ಪ್ರವೇಶಂ ಗೈದುದೆನೆ ಭಾಂಡಮೆಲ್ಲಮುಂ
ಚಂಡಕಿರಣಂಗಿದಿರ್ ಸಿಲ್ಕಿರ್ಪ ಹಿಮದಂತೆ    
ಬಡಬಾಗ್ನಿಗೆದುರಾದ ನೀರಿನೊರ್ಪನಿಯಂತೆ
ಹವ್ಯವಾಹನಮುಖಕೆ ಘೃತಮಿಕ್ಕಿದಂದದಿಂ
ಶೂನ್ಯಮಾದುದು.
    ಹನುಮನಾಶ್ವಾಸನೆಯನೀಯೆ
“ಅವ್ಯಗ್ರಮನದಿಂದೆ ಮಧುವನೀಂಟಿಂ ಸಖರೆ!
ನಿಮಗಡ್ಡಿ ಗೈವರಂ ಪರಿಹರಿಪೆನಾಂ ದಿಟದೆ!”
ಎಂತೆನಲ್ ವಾಲಿಸುತನೊಲ್ದುತ್ತರಮನಿತ್ತ-
ನಿಂತು ಮಿತ್ರರೆ ಕಾರ್ಯಸಾಧಕಂ ಹನುಮನೇ
ವಚನಮಿತ್ತೊಡನವನ ಕೃತ್ಯಸಂತೋಷಕಂ  ೨೪೦
ಗೆಯ್ವುದುಚಿತಮನೆಲ್ಲರುಂ ನಾವೆ ಮಾರುತಿಯ
ನುಡಿಯನನುಸರಿಪುದೇ ಯುಕ್ತಮೀ ವೇಳೆಯೊಳ್
ಪೇಳ್ದೊಡಮಕಾರ್ಯಮಂ ಗೆಯ್ವುದೇ ಕರ್ತವ್ಯ-
ಮಿದು ವಾಯುಪುತ್ರನಾಣತಿಯೆಂದು ಬಗೆಯಿರೈ”
ಎನೆ ಮತ್ತಕಪಿಕುಲಂ ಮತ್ತೆ ದಾಳಿಯಗೈದು
ವಾರುಣಿಯ ವಾರಿಧಿಗಗಸ್ತ್ಯೋಪಮಾನರೆನೆ
ಮೇಣ್ ಪೆರ್ಚಿದುತ್ಸಾಹದಿಂದೀಂಟತೊಡಗಿದರ್
ಮಧುವನಾ ಬನದೊಳಗೆ ಸಿಲ್ಕಿರ್ಪ ಪಣ್ಗಳಂ
ಕಿಳ್ತು ತಿಂದರ್ ಪೂಗಳಂ ಪರಿದು ಬಿಸುಟರೇಂ
ಗೆಯ್ಯುತಿರ್ಪೆವೊ ಎಂದು ತಿಳಿಯದೆಯೆ ಗೆಯ್ದಿರಲ್ ೨೫೦
ನಿರ್ವಿಕಾರದಿನೆಲ್ಲಮಂ ನೋಡುತಿರ್ದಪಂ
ಶಾಂತಚಿತ್ತಂ ಹನೂಮಂತನಾ ಚಿತ್ರಮಂ    
ಜಗದಸೃಷ್ಟಿಯ ಬಳಿಕದೊಳ್ ನಡೆವ ಘಟನೆಗಳ-
ನೀಕ್ಷಿಸುತೆ ನಿರ್ಲಿಪ್ತನಾಗಿರ್ಪ ಪರಮಾತ್ಮ
ಸದೃಶನೀತಂ. ನೋಡಿ ವಾನರವಿನೋದಮಂ
ಕೊನೆಗೊಂದು ಕಿರುನಗೆಯನತ್ತ ಬೀರ್ದಪನೊಲ್ದು
ಮತ್ತರಾ ಕೇಳಿಯಂ ಕಂಡು ಪ್ಲವಂಗರೀ
ವಿಪ್ಲವಮನಿದನಂತು ಮಧುವನದ ಮರ್ದನದೆ.
ನಿಂದನೊರ್ವಂ ರಾಜಗಾಂಭಿರ್ಯದಿಂದೆ ಮೇಣ್
ಉನ್ಮತ್ತಕಪಿವೀರನವನೆಡೆಗೆ ನಡೆದಪರ್  ೨೬೦
ಮತ್ತಿರ್ವರುಂ ಮತ್ತವಾನರವರೇಣ್ಯರೇ
ಸೇವಕರ ಪಾಂಗಿನಿಂದಿನ್ನೊಂದು ಕಡೆ ನೋಡೆ     
ಕುಣಿದಪರ್ ಕೆಲರೊಲ್ದು ಮತ್ತೆ ಕೆಲವರ್ ಪಾಡೆ
ನಗುತಿರ್ಪರೊಂದೆಡೆಗೆ ದುಃಖಿಪರ್ ಮತ್ತೆ ಕೆಲ-
ರಭಿನಯಿಪ ನಟನಟಿಯರಂತಿರ್ಪರಿರ್ವರೇ-
ನೊಂದೊಂದು ಕಡೆಗೊಂದು ಚಿತ್ರಚಿತ್ರಣಮಿರಲ್
ಮರನನೇರುವನೊರ್ವನಿಳಿದು ಬೀಳುವನೊರ್ವ-
ನಳಲಿಂದೆ ಕಾಲ್ಗಳಂ ಪಿಡಿಯುವವನಿನ್ನೊರ್ವ-
ನಿಂತು ಕಂಡವರೆಡೆಗೆ ಕೈಮುಗಿದನೊರ್ವನೆನೆ
ಕೇಕೆ ಹಾಕುವನೊರ್ವನವನ ತಳ್ಳುವನೊರ್ವ-  ೨೭೦
ನಿವರೊಳಾರ್ ಮತ್ತರಲ್ಲದೆ ಬೇರೆಯಿರದಿರಲ್
ಪಣ್ಗಳಂ ತಿನುತೆ ಮೇಣ್ ಲತೆಗಳಂ ಪರಿಯುತ್ತೆ    
ವಿಧ್ವಂಸಮಂ ಗೆಯ್ಯುತಿರ್ಪರ್ ಕೆಲರ್ ಮತ್ತೆ
ಕಪಿಸಹಜಕೃತ್ಯಮಂ ತೋರ್ದಪರ್.
            ದಧಿಮುಖಂ
ತಡೆಯವೇಳ್ಕುಂ ಬನದ ನಾಶನಮನೆನ್ನುತುಂ
ಪಟುಭಟರ ಸಂಘಟನೆಯೊಡನೈದಿ ಬಂದಿರಲ್
ಶಸ್ತ್ರಸಹಿತರ್ ಭಟರ್ಗಾಣತಿಯನಿತ್ತನೈ
“ಪೊಡೆಯಿರೈ ಜಡಿಯಿರೈ ತೊಡೆಯಿರೈ ನಡೆಯಿರೈ
ಸಕಲಕಪಿಗಳನಿಕ್ಕಿ ಮೆಟ್ಟಿರೈ ಕುಟ್ಟಿರೈ
ಬಂಧಿಸಿರಿ ಮಧುವನವಿನಾಶಮಂ ತಡೆಯಿರೈ  ೨೮೦
ರಾಜಸುಗ್ರೀವನಿದಿರೊಳಗೆ ಮಾನ್ಯತೆ ನಿಮಗೆ
ದಕ್ಕುಗುಂ. ಮಧುವನಂ ರಕ್ಷಿತಮೆನಿಪ್ಪೊಡಂ   
ತ್ವರೆಯಿಂದೆ ಪೋಗಿ”ಮೆಂತೆಂದೊಡಂ ಸಾರ್ದಪರ್
ಅದಟನೇನಳೆಯಲ್ಕೆ ಶಕ್ಯಮೇ ಕಪಿಗಳಾ!
ಸೈನಿಕರನೀಕ್ಷಿಸುತೆ ಮತ್ತೆ ಕೊರ್ವುತೆ ಸಿಡಿದು
ಜಡಿದರೈ ಬಡಿದರೈ ಪೊಡೆದರೈ ಕೆಡೆದರೈ
ನಡೆದರೈ ಮೆಟ್ಟುತ್ತೆ ತೊಡೆದರೈ ಕುಟ್ಟುತ್ತೆ
ಕಾವಲಿನ ಭಟರನೇ ಕಾಲಬುಡದೊಳಗಿಕ್ಕಿ
ಪೀಡಿಸಲ್ ತೀಡಿಸಲ್ ಕಾಡಿಸಲ್ ಬೇಡಿದರ್
“ಬಿಡಿಮೆಮ್ಮನೆಲ್ಲರಂ ಕಾಪಿಡಿಂ ನೀವೆನಲ್” ೨೯೦
ಕಪಿಗಳಾ ಭಟರ್ಗಳಂ ಮೊಣಕಾಲ್ಗಳೊಳ್ ಪಿಡಿದು
ಸೆಳೆದು ಮೆಟ್ಟುತೆ ದೇವಮಾರ್ಗಮನೆ ತೋರಿರ-     
ಲ್ಕೆಂತೆಂತೊ ಅವರ್ಗಳಿಂ ತಪ್ಪಿಸಿಕೊಳುತ್ತೆ ತಾಂ
ದಧಿಮುಖನ ಬಳಿಗೋಡಿ ದೂರನಿತ್ತರ್ ಖತಿಯೊ-
“ಳಿವರ್ಗಳಂ ಪಿಡಿವೆನಾಂ ದರ್ಪಮಂ ದಹಿಸುವೆಂ
ಬನ್ನಿ”ಮೆನಲಾತನೆಲ್ಲರ್ ಮತ್ತೆ ಬಂದಪರ್
ಧೈರ್ಯದಿಂ
    ವನಪಾಲಕರ್ ವೃಕ್ಷಮಂ ಕಿಳ್ತು
ಪೊಡೆದಪರ್ ಪೀಡಿಸಿರ್ದಪ ಕಪಿಗಳಂ ವಲಂ.
ದಧಿಮುಖಂ ವೃಕ್ಷಾಯುಧಂ ಸ್ವಯಂ ಸಾರ್ದೊಡಂ
ನೋಡುತ್ತುಮಂಗದಂ ಕೋಪದಿಂದೈದಿದಂ  ೩೦೦
ದಧಿಮುಖಮುಖಚಪೇಟಮಂ ನೀಡಿ ಪೊಯ್ದಪಂ
ಮೊಸರ್ಮೊಗನೆ ಕೆಸರ್ಮೊಗಂ ಸಂದೆ ನೀನೆನ್ನುತುಂ   
ಪೂಜ್ಯತ್ವಮಂ ಮರೆತು ಮಲೆತು ನೆಲಕಿಕ್ಕಿದಂ
ಕುಕ್ಕಿದಂ ಸೊರ್ಕಿಂದಮುರ್ಕಿರ್ಪ ಕೋಪದಿಂ
ನೆಲಕೆ ದಧಿಮುಖನ ಮುಖಮಂ ತೀಡಿದಂ ಗಡಾ!
ಭೀತಿಯಿಂದವಮಾನದಿಂ ಮತ್ತೆ ಬೇಗದಿಂ-
ದೋಡಿದಂ ದಧಿಮುಖಂ ಕಪಿಮುಷ್ಟಿ ತಪ್ಪಿರಲ್
“ಬರ್ದುಕಿದೆಯ ಬಡಬಾಳೆ” ಎಂದುಸುರಿಕೊಳ್ಳುತುಂ
ವನಪಾಲಕರ್ಗಳುಳಿದವರವನ ಪಿಂ ಪೋಗೆ
“ಸುಗ್ರೀವನಿದಿರರೊಳಾನಿವರ್ಗಳಂ ನೋಡುವೆಂ. ೩೧೦
ವೃತ್ತಾಂತಮಂ ತಿಳುಪಿ ದಂಡನೆಯನಿತ್ತಪೆಂ”
ಇಂತೆಂದು ಪೊರಮಟ್ಟು ಶ್ರೀರಾಮಲಕ್ಷ್ಮಣರಿ-     
ನಾಪ್ತರಿಂ ಕೂಡಿರ್ಪ ಸುಗ್ರೀವನಿರ್ಪೆಡೆಗೆ
ಕಿಷ್ಕಿಂಧೆಗಂ ಪಾರುತುಂ ಪೋದಪಂ ಸ್ವಯಂ
ಮಧುವನಸುರಕ್ಷಾವ್ರತೈಕನಿಷ್ಠಾತ್ಮಕಂ
ದಧಿಮುಖಂ ಕಪಿವೀರಪೀಡಿತನಧೋಮುಖಂ.

ಮುಂದುವರೆಯುತ್ತದೆ....

ಭಾನುವಾರ, ಜುಲೈ 29, 2018

ಮಧುವನಮರ್ದನಂ -೨

ಮೊದಲ ಭಾಗ-  ಮಧುವನಮರ್ದನಂ-೧
ಈ ಭಾಗವನ್ನು ಇಲ್ಲಿ ಕೇಳುತ್ತ ಓದಬಹುದು.

~ಮಧುವನಮರ್ದನಂ-೨ ~
ಅಂಗದಾದಿಗಳಿತ್ತಲುತ್ತರದ ತೀರದೊಳ್
ಕಾತರಿಸಿ ನಿಂದಿರ್ದಪರ್ ಮಾರುತಿಯ ಬರವ-
ನೀಕ್ಷಿಸುತೆ. ಮ್ಲಾನತೆಯೆ ಮೂರ್ತಿವೆತ್ತಂದದಿಂ-
ದಾ ಮಹೇಂದ್ರಾದ್ರಿಯಿದಿರೊಳ್ ದಿಗಂತಮನೆಂತೊ
ಬಯಕೆ ಬತ್ತಿರ್ಪ ಕಂಗಳೊಳೆ ವೀಕ್ಷಿಸಿ ಕಳೆದ
ಬಲ್ಮೆಯೌತ್ಸುಕ್ಯದಿಂ ತಿನದೆ ತಿನಿಸಿನಿತುಮಂ
ಕುಡಿಯಲಾರದೆ ನೀರನೆಂತುಟೋ ಮೌನದಿಂ
ದನಿಮೇಷರಾಗಿ ಮೇಣ್ ವ್ಯಾಕುಲಾಂತರ್ಯದಿಂ
ವೆಟ್ಟಿನೊಳ್ ಪೊಸತಾಗಿ ನಟ್ಟ ಶಿಲೆಗಳ ತೆರದಿ      ೧೧೦
“ಹನುಮನೇಂ ಬಂದನೋ!” ಎನುತೆ ಪಕ್ಕಿಯದೊಂದು
ಗೋಚರಿಸೆ ಸಂಭ್ರಮದಿ ಸಂಭ್ರಾಂತರಾಗುತುಂ
ಕುಳಿತಿರ್ಪರ್
                 ಅತ್ತಣಿಂ ದೂರದಿಂದಾಗಮಿಪ
ಮಾರುತಿಯ ದೂತನಂತೆಯ್ದಿತೈ ಗರ್ಜನೆಯ
ಮೇಘಸ್ವನಂ ವಲಂ ಗಂಭೀರಗಹನಮುಂ
“ದೃಷ್ಟಾ ಧರಾಸುತಾ- ದೃಷ್ಟಾ ಧರಾಸುತಾ”
ಎನ್ನುತುಂ ಪೇಳ್ದಪುದು.
        ಮೊದಲ ಗುಡುಗಂ ಕೇಳ್ದು
ಗರಿಬಿಚ್ಚಿ ನರ್ತಿಸಿರ್ದಪ ನವಿಲ್ಗಳವೊಲೇ
ಪವನಸುತವಚನದಿಂ ಸಕಲರುಂ ಬಹುವಾದ
ಜಯಜಯೋದ್ಘೋಷದಿಂ ಕುಣಿದಾಡತೊಡಗಿದರ್   ೧೨೦
ದೂರದೊಳ್ ಪೊಳೆದಿರ್ಪ ನಕ್ಷತ್ರದಂದದಿಂ
ತೋರ್ದಪಂ, ಬಳೆಯುತ್ತೆ ಗುರುವಂತೆ ಮತ್ತೆ ತಾಂ
ಚಂದ್ರನಂದದೆ ಮುಗಿಲಿನೋಳಿಯೊಳ್. ದಿನಪನಂ-
ತಮಿತಪ್ರಕಾಶದಿಂ ಸಾರ್ದಪಂ. ವಾನರರ್
ಪುಷ್ಪಗುಚ್ಛಂಬಿಡಿದು ಕೈವೀಸಿ ಕುಣಿದಿರಲ್
ಧರೆಗೆ ಪದಯುಗಮನಿಟ್ಟಂ ನೋಡಲದನಿಂತು
ಗಿರಿಯ ಶಿಖರದೆ ಮತ್ತೆ ಗಿರಿಯೆ ಅವತರಿಪಂತೆ
ಅಂತಾದೊಡಂ ಗಾಳಿಯೊಳ್ ಪಾರ್ದ ಪತ್ತಿಯೇ
ಇಳೆಗಿಳಿದ ತೆರದೆ ಕಂಡಿರ್ದುದಾಕ್ಷಣಕೆ
ಇನಿತೊಂದು ಸದ್ದಿಲ್ಲಮರೆಯೊಂದು ಸರಿದಿಲ್ಲಮ್  ೧೩೦
“ಅರರೆ! ಮಾರುತಿಯೆಮ್ಮನೆಲ್ಲರಂ ದಿಟದಿಂದೆ
ಕೃತಕೃತ್ಯರಂಗೆಯ್ದ”ನೆಂದುಲಿದನಂಗದಂ. 
ಜಾಂಬವಂಬೆರೆಸಂಗದಂ ಹನುಮನೊಡನಲ್ಲಿ
ನಡುವೆ ಕುಳಿತಿರೆ ಸುತ್ತಲೆಲ್ಲರುಂ ಕುಳ್ಳಿರ
ಲ್ಕಾ ರುಂದ್ರ ಸಾಗರೋಲ್ಲಂಘನಕಥಾನಕ
ಶ್ರವಣಕುತುಕಾನ್ವಿತಕಪೀಶಚಿತ್ತಾನಂದ
ಸಂಪ್ರದಾಯಕವಚೋನಿಪುಣ ಮಾರುತಿಯಂತು
ಬಣ್ಣಿಸಿದನೊಲ್ಮೆಯಿಂದೆಲ್ಲಮಂ ಕಿರಿದಾಗಿ.
ರಾಮನಿದಿರೊಳ್ ಪೇಳ್ವುದುತ್ಸುಕತೆಯುಂ ಸಂದು
ತ್ವರೆಯಿಂದೆ ಪೇಳ್ದಪಂಹನುಮನೀ ವೃತ್ತಮಂ ೧೪೦
ಬಳಿಕಮೇಂ ಗೆಯ್ವುದೆಂದೆಲ್ಲರುಂ ಚಿಂತಿಸಲ್
ನಾಮೆಲ್ಲರುಂ ಪೋಗಿ ಸೀತೆಯಂ ಕರೆದುಯ್ವ-
ಮೆಂದಾಂಜನೇಯನೇ ನುಡಿದಿರಲ್ಕಂಗದಂ
“ದಿಟಮಲ್ತೆ! ಸೀತೆಯಂ ಕಂಡುಮೇಂ ರಕ್ಷಿಸದೆ
ಪಿಂದಿರುಗಿ ಪೋಪುದನುಚಿತಮಲ್ತೆ  ವಿಖ್ಯಾತ
ವೀರರಾಗಿರ್ಪೆಮ್ಮ ಕಪಿಕುಲಕೆ?” ಎಂದೆನಲ್
ಸಕಲರುಂ ಸಮ್ಮತಿಸಿ ಸುಸ್ವರದೆ ಘೇ ಎನಲ್
ವೃದ್ಧಜಾಂಬವನೊರ್ಮೆ ಚಿಂತಿಸುತೆ  ಪೇಳ್ದಪಂ
“ಕೆಳೆಯರಿರ! ರಘುವೀರನಾಜ್ಞೆಯಿರ್ಪುದು ನಮಗೆ
ಬರಿದೆ ಸೀತಾನ್ವೇಷಣಂ. ದಶಾನನಹತಿಯು ೧೫೦
ಸೀತೆಯಂ ರಕ್ಷಿಪುದುಮವನ ಪ್ರತಿಜ್ಞೆಯೈ!
ಪುಸಿಗೆಯ್ವುದೊಳ್ಳಿತಲ್ಲಂ ಮಹಾತ್ಮರ ನುಡಿಯ-
ನೀಗಳಾಂ ಮರಳ್ದು ಪೋಪುದೆ ಕಜ್ಜಮೆಂದಿರಲ್
ದಿಟಮೆನುತ್ತೆಲ್ಲರುಂ ನಡೆದಪರ್ ಪಾರ್ದಪರ್
ಗಗನದೆಡೆಗಾ ಮಹೇಂದ್ರಾದ್ರಿಯಿಂ ಸಿಡಿಲಂತೆ
ನಿಟ್ಟುಸಿರ್ ಬಿಟ್ಟಿತೇಂ ವೆಟ್ಟೆಂಬ ಪಾಂಗಿನಿಂ
ದಟ್ಟಮಾಗುತೆ ಗಾಳಿ ಸುಳಿದತ್ತು ಪರ್ವತದೆ
ಸೀತೆಯಂ ಕಂಡಿರ್ಪ ಮುದದಿಂದೆ ಪಾರುತ್ತೆ
ರಾಮಕಾರ್ಯಂ ಸಫಲಮಾಯ್ತೆಂದು ಪೇಳುತ್ತೆ
ಯುದ್ಧಮಂ ಗೆಯ್ವಮೆಂಬುತ್ಸಾಹದೊಳ್ ಮತ್ತೆ ೧೬೦
ಮೂದೆಸೆಗೆ ಪೋಗಿರ್ಪ ಕಪಿವೀರರಂ ಮೀರಿ-
ಪಂದದಿಂದಾಂ ಕಂಡು ಬಂದಿರ್ಪ ಗರ್ವದಿಂ 
ಮೆಯ್ಮರೆತು ಪಾರ್ದಪರ್
                         ಮಾರ್ಗದೊಳ್ ಕಂಡುದೊಂ-
ದದ್ಭುತಂ ನಂದನವನಾಭಮೇಂ ತೋಂಟಮಿದು
ಮೇಣಲ್ತು ಸಗ್ಗಮಂ ಸೃಷ್ಟಿಪೊಡೆ ಕೌಶಿಕಂ
ನಂದನಕೆ ಪ್ರತಿಯಾಗಿರಲ್ ತ್ರಿಶಂಕುವಿಗೆಂದು
ನಿರ್ಮಿಸಿರ್ದಪ ವನಮೊ! ಬೊಮ್ಮನೇನಾದಿಯೊಳ್
ಸಕಲವನಮಂ ರಚಿಪ ಮೂಲಮಾತೃಕೆಯೇನೊ!
ಎಂದೆನಿಪ ಚೆಲುವಿನಿಂದೆಸೆದತ್ತು ಮಧುವನಂ!
ಪಾನಸಕ್ತೋನ್ಮಾದಕಾರಕಂ ನಿಧುವನಂ! ೧೭೦
“ಅರರೆ! ಈಂಟಲ್ ಪೋಪಮೆಲ್ಲರುಂ ಮಧುವನೀ
ರಾಮಕಾರ್ಯಂಗೆಯ್ದ ಸಾಧನೆಗೆ ಸೊಗಮೀಯ-
ಲಾನಂದಪರಿವರ್ಧಕೋನ್ಮಾದಸಂಜನಕ
ಮಧುಪಾನಮೊಂದಲ್ತೆ! ಮಾರ್ಗದೊಳೆ ಸಂದುದೇಂ!”
ಎನುತುಮುಲಿಯಲ್ ಪಲವು ಕಪಿಗಳಾಲಿಸಿಯದಂ
ನುಡಿದನಂಗದನೊಲ್ದು ನೀಡುತಪ್ಪಣೆಯನೇ
“ಕಪಿವೀರರೇ! ಕೇಳಿಮಿದುವನಂ ಮಧುವನಂ
ರಾಜಸುಗ್ರೀವನಾ ಮಾವನಿಂ ಪಾಲಿತಂ
ದಧಿಮುಖಂ ರಕ್ಷಕಂ ತಾನಿಲ್ಲಿ. ನೀವಿಂತು
ಮಧುವನೀಂಟಿಂ ಮತ್ತೆ ನಿಗ್ರಹದೊಳಿರ್ಪುದೈ ೧೮೦
ಜಾಂಬವಂತಂ ಹನೂಮಂತನುಂ ಸಮ್ಮತಿಸೆ
ನಮಗೆಲ್ಲರೊಪ್ಪಿಗೆಯೆ ದೊರೆತಂತೆ ಅಕ್ಕುಂ”
ಅನುಮತಿಸೆ ಹನುಮನುಂ ಮೇಣೊಪ್ಪೆ ಜಾಂಬವಂ
ಪರಿದುದೇಂ ಧುಮ್ಮಿಕ್ಕಿ ನದಿಯಿಂತು ಕಣಿವೆಯೊಳ-
ಗೆಂಬಂತೆ ರಭಸದಿಂ ನುರ್ಗಿದರ್ ವಾನರರ್.
ಕದಳಿವನದೊಳಗಾನೆಗುಂಪೊಂದು ನುರ್ಗಿದಂ-
ತರರೆ! ಕಪಿಸಹಜಚಪಲತೆಯೊಳೇಂ ಗೆಯ್ದರೋ!
ಮಧುಭಾಂಡಮಂ ಸೆಳೆದು ಗಟಗಟನೆ ಪೀರುತುಂ
ಸರಸರನೆ ಮರನೇರಿ ದರದರನೆ ಸೆಳೆಯುತ್ತೆ
ಸುರುಸುರ್ರೆನುತೆ ಪೀರ್ದು ಡರಡರ್ರೆನುತೆ ತೇಗು- ೧೯೦
ತಮಲೊಳಗೆ ಮೆಯ್ಮರೆತರೊಂದೆಡೆಗೆ.
ಮಧುವನಂಫ ಲಪುಷ್ಪನಿಚಯದಿಂ ತರುಲತೆಯ ನಿಕರದಿಂ
ಸುರುಚಿರಸುಮೋದ್ಯಾನಮೆಂಬ ತೆರನಿರ್ದಪುದು
ತಣ್ನೆಳಲ್ ತುಂಬಿರ್ಪ ಶಾದ್ವಲಪರೀತಮುಂ
ಬಹುವಿಧದ ವೃಕ್ಷಂಗಳಿಂದೆ ತಾಂ ಮೆರೆದಪುದು
ಸುಗ್ರೀವಭೀತಿಯಿಂದಾರ್ಗಮುಂ ಪುಗಲಿದಕೆ
ಸಾಧ್ಯಮಿಲ್ಲಂ ನೋಡಿಮೆಂಬಂತೆ ಪೆಸರ್ವಡೆದ
ನಿಬಿಡತರುಗುಲ್ಮಂಗಳಿಂದೊಪ್ಪುತೆಸೆದಪುದು
ಜಗದ ಚಿತ್ರಂಬಿಡಿಪ ಕವಿ ಚಿತ್ರಕಾರನೇ
ವರ್ಣಸಂಮಿಶ್ರಣಕೆ ಪಿಡಿದಿರ್ಪ ಫಲಕಮಿದು ೨೦೦
ತಾನೆಂಬ ಪಾಂಗಿನಿಂ ಪೂಗಳಿಂ ತುಂಬಿರ್ಪು-
ದಾ ಸುಮದ ಮಕರಂದಪಾನದಿಂದುನ್ಮತ್ತ-
ಸಂಭ್ರಮದ್ ಭ್ರಮರಕುಲವಿಭ್ರಮಭರಂ ವಲಂ
ವನದೇವತಾಲಾಸ್ಯನೃತ್ತೋಪಹಾರಕೃತ
ಭೂಮಿದೇವಿಯ ಚೆಲ್ವದಾಣಮಾಗಿರ್ದಪುದು
ದೂರದಿಂ ವೆಟ್ಟೆಲ್ಲ ಕಣ್ಗೆ ನುಣ್ಣಗೆಯೆಂಬ
ನಾಣ್ಣುಡಿಯನಿದು ಪುಸಿಯ ಗೈದಿರ್ಪುದೆಂಬವೊಲ್
ನವುರಾದ ನೆಲದಿಂದೆ ನೆಲಸಿರ್ಪ ನಲವಿಂದೆ
ಮೆರೆದಿರ್ದಪುದು

ಮುಂದುವರೆಯುತ್ತದೆ.....