Powered By Blogger

ಸೋಮವಾರ, ಮಾರ್ಚ್ 16, 2015

ಸಹೃದಯಕಾಲ-೧೬-ಸೂರ್ಯೋದಯ

ಮಹಾಕಾವ್ಯದಲ್ಲಿ ಯಥೋಚಿತವಾಗಿ ಅಷ್ಟಾದಶವರ್ಣನೆಗಳು ಇರಬೇಕೆಂಬುದು ಹಿಂದಿನಿಂದಿರುವ ನಿಯಮವಷ್ಟೇ ಅಲ್ಲದೆ ಅದು ಕಾವ್ಯಕ್ಕೆ ನಿಜವಾದ ಅಲಂಕಾರವೂ ಅಹುದು. ಈ ಅಷ್ಟಾದಶ ವರ್ಣನೆಗಳಲ್ಲಿ ನಗರ,ಅರ್ಣವ,ಋತು,ಶೈಲ ಇತ್ಯಾದಿಯಾಗಿ ಆಲಂಕಾರಿಕರು ಪಟ್ಟಿ ಮಾಡಿದ್ದಾರಷ್ಟೆ. ಈ ಎಲ್ಲವೂ ಕಥಾವಿಸ್ತಾರಕ್ಕೆ ಅನುಕೂಲವಾಗುವಂತೆ ಅಲ್ಲದೇ ಸಂದರ್ಭಕ್ಕೆ ಯೋಗ್ಯವಾಗಿ ಕಾವ್ಯದಲ್ಲಿ ಬಂದಲ್ಲಿ ಅದಕ್ಕೆ ಸೊಗಸು ಹೆಚ್ಚು. ಉದಾಹರಣೆಗೆ - ಜಲಕ್ರೀಡೆಯ ವರ್ಣನೆ- ಕಾವ್ಯದಲ್ಲಿ ಜಲಕ್ರೀಡಾ ವರ್ಣನೆ ಇರಬೇಕೆಂದು ಯಾರೋ ಜಲಕೇಳಿಯಾಡಿದರೆಂದಲ್ಲಿ ಸ್ವಾರಸ್ಯವಿಲ್ಲ. ಇತ್ತೀಚೆಗೆ ಮಿತ್ರರೊಬ್ಬರ ಜೊತೆ ಮಾತನಾಡುವಾಗ ಇದೇ ಪ್ರಸ್ತಾಪ ಬಂತು- ಅಲ್ಲಿ ಅವರು ಹೇಳಿದ್ದು-ಅಭಿನಂದನ ರಾಮಚರಿತದಲ್ಲಿ-ಜಲಕೇಳಿಯ ವರ್ಣನೆ  ಮಾಡಬೇಕೆಂದು ವೃದ್ಧನಾದ ದಶರಥಮಹಾರಾಜ(ಅದಾಗಲೇ ಅದೆಷ್ಟೋ ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಎಂದೂ ಹೇಳಿ) ತನ್ನ ರಾಣಿಯರ ಜೊತೆ ಜಲಕೇಳಿಯಾಡಿದ್ದನ್ನು ವರ್ಣಿಸಿದರೆ ಅದನ್ನು ಮೆಚ್ಚಲಾಗುತ್ತದೆಯೇ! ಅಥವಾ ಊಹಿಸಲಾದರೂ ಸಾಧ್ಯವೇ? ಆದರೆ ಕಾಲಿದಾಸನ ರಘುವಂಶಮಹಾಕಾವ್ಯದಲ್ಲಿ ಕೈಸನ್ನೆ ಜಲಕ್ರೀಡೆಯ ವರ್ಣನೆ ಬರುತ್ತದೆ. ಆ ಸಂದರ್ಭದಲ್ಲೇ ಅವನು ಉಂಗುರವನ್ನು ಕಳೆದುಕೊಂಡು ಅದು ಮುಂದಿನ ಕಥಾವಿಸ್ತರಣ ತಂತ್ರವಾಗಿ ಬೆಳೆಯುತ್ತದೆ. ಇದು ಔಚಿತ್ಯಪೂರ್ವಕವಾದ ವರ್ಣನೆ ಎಂದು.
ಕನ್ನಡದ ಹಲವು ಕವಿಗಳು ಎಡವಿರುವುದು ಇಂತಹ ಔಚಿತ್ಯಪ್ರಜ್ಞೆಯ ಕೊರತೆಯಿಂದಲೇ, ಅವರಲ್ಲಿ ಪಂಪ ರನ್ನರೂ ಹೊರತಾಗಿಲ್ಲ ಎಂದಮೇಲೆ ಬಡಪಾಯಿ ಆಂಡಯ್ಯನಾಗಚಂದ್ರ ಮೊದಲಾದವರು ಬದುಕಿಯಾರೇ! ಕುಮಾರವ್ಯಾಸನೊಬ್ಬ ಇಂತಹ ಹಲವರ ಸಾಲಿನಿಂದ ತುಂಬಾ ಮೇಲೇ ಉಳಿಯುತ್ತಾನೆ.(ರಾಘವಾಂಕ ಮೊದಲಾದವರ ಬಗ್ಗೆ ಗೊತ್ತಿಲ್ಲ) ಅಲ್ಲದೇ ಅವನಲ್ಲಿ ಅನೌಚಿತ್ಯ ತುಂಬಾ ಕಡಿಮೆ-ಇಲ್ಲವೆಂದೇ ಹೇಳಬಹುದು. ಏಕೆಂದರೆ ಅವನು ಯಾವುದೇ ಪೂರ್ವಾಗ್ರಹ ಇಲ್ಲದೇ ಬರೆದವನು ಎಂಬುದಂತೂ ಮುಖ್ಯ ಕಾರಣವಾಗುತ್ತದೆ. ಪಂಪರನ್ನಾದಿಗಳಿಗೆ ಆಶ್ರಯದಾತರನ್ನು ಮೆಚ್ಚಿಸುವ ಬಯಕೆಯೇ ಮುಖ್ಯವಾಗುತ್ತದೆ,ಆಂಡಯ್ಯನಂತಹವರಿಗೆ ವೈದಿಕದೇವರಾದ ಶಿವನನ್ನು ಮನ್ಮಥನಿಂದ ಸೋಲಿಸುವುದೇ ಮುಖ್ಯವಾಗುತ್ತದೆ. ನಾಗಚಂದ್ರನಂತಹವರಿಗೆ ರಾವಣನನ್ನು ಒಳ್ಳೆಯವನನ್ನಾಗಿಸುವ ಉದ್ದೇಶವೇ ಕಾಣುತ್ತದೆ. ಕುಮಾರವ್ಯಾಸ 'ಕೃಷ್ಣ ಮೆಚ್ಚಲಿಕೆ'ಬರೆದದ್ದಲ್ಲವೇ!
ಇನ್ನು ಆಧುನಿಕ ಕವಿಗಳ ಕೃತಿಗಳನ್ನು ನೋಡಿದರೆ ನನ್ನ ಅರಿವಿನ ಮಿತಿಯಲ್ಲಿ ಕುವೆಂಪುರವರ ಶ್ರೀರಾಮಾಯಣದರ್ಶನಂ ಒಂದು ಮಹಾಕಾವ್ಯವಾಗಿ ಇದೆ.  ಪ್ರಶಸ್ತಿಗಳು ಬಂದವೆಲ್ಲ ಮಹಾಕಾವ್ಯ ಎಂದು ಹೇಳುವುದನ್ನು ನಾನಂತೂ ಸುತರಾಂ ಒಪ್ಪಲಾರೆ. ಯಾವ ಕೃತಿಯಲ್ಲಿ ಕಾವ್ಯತ್ವ ಸ್ವಲ್ಪವೂ ಇಲ್ಲವೋ ಅದನ್ನು ಕಾವ್ಯ ಎನ್ನುವುದೇ ಕಷ್ಟ, ಇನ್ನು ಮಹಾಕಾವ್ಯ ಎಂದು ಹೇಗೆ ಒಪ್ಪಲಿ!! ಕವೃ-ವರ್ಣನೇ ಎಂಬ ಧಾತುವಿನಿಂದ ಕವಿ-ಕಾವ್ಯ ಎಂಬ ಶಬ್ದಗಳು ಹುಟ್ಟಿದವಂತೆ. ಅಂದರೆ ಒಂದನ್ನು(ವಸ್ತುವನ್ನು) ವರ್ಣಿಸುವುದು ಕವಿತ್ವ ಎಂತಾದರೆ ವರ್ಣನಾಂಶಗಳೇ ಇಲ್ಲದಿದ್ದಲ್ಲಿ ಅದು ಹೇಗೆ ಕಾವ್ಯವಾಗುತ್ತದೆ!
ಕುವೆಂಪು ಅವರ ಕಾವ್ಯ ವರ್ಣನೆಯ ವಿಷಯದಲ್ಲಿ ಹಿಂದೆ ಬೀಳುವುದೇ ಇಲ್ಲ. ಅವರ ವರ್ಣನೆಗೆ ಅವರೇ ಸಾಟಿ. ಹೀಗಿದ್ದರೂ ಹಲವುಕಡೆ ಕಾವ್ಯದೋಷಗಳನ್ನು ಮೀರಿಲ್ಲವೆಂಬುದು ಸ್ವಲ್ಪ ಬೇಸರದ ಸಂಗತಿ. (ಮೊದಲ ಸಾಲಿನಲ್ಲೇ) ವಿಸಂಧಿದೋಷ, ಅರಿಸಮಾಸಗಳು,ವ್ಯಾಕರಣವಿರುದ್ಧಪದಗಳು ಇತ್ಯಾದಿ ಕೆಲವು ಅಲ್ಲಿಲ್ಲಿ ಹಾಗೆ ಹೀಗೆ ಸುಳಿದಾಡಿದರೂ ಕವಿತ್ವದ ಬಿರುಗಾಳಿಯಲ್ಲಿ ಕೊಚ್ಚಿಹೋಗುತ್ತವೆ!
ಅವರ ಮಾತನ್ನೇ ಹೇಳುವುದಾದರೆ- ಕವಿಗೆ ಕರ್ಣಂ ಪ್ರಮಾಣಂ- ವ್ಯಾಕರಣಮಲ್ತು! ವ್ಯಾಕರಣಮೇಕೆಂದೊಡೆ ಮರೆವುದಕೆ ಕಲ್ತು!!"
ಹಾಗಿದ್ದರೂ ದೋಷಗಳನ್ನು ಮೀರಲು ವ್ಯಾಕರಣಾದಿಗಳು ಬೇಕೇ ಬೇಕು ಎಂಬುದಂತೂ ಸತ್ಯ.
ಈವೊತ್ತಿನ ಪದ್ಯ ಕುವೆಂಪು ಅವರದೇ- ಅವರೇ ಹೇಳಿದಂತೆ ಸೂರ್ಯೋದಯಚಂದ್ರೋದಯ ದೇವರ ದಯೆಯೇ ಅಲ್ಲವೇ! ಹಾಗೆ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಶಿಲಾತಪಸ್ವಿನಿ ಸಂಚಿಕೆಯಲ್ಲಿ ಬರುವ ಸೂರ್ಯೋದಯದ ವರ್ಣನೆಯ ಸಂದರ್ಭ- ಅಯೋಧ್ಯೆಯಿಂದ ವಿಶ್ವಾಮಿತ್ರರ ಜೊತೆ ರಾಮಲಕ್ಷ್ಮಣರು ಅವರ ಯಜ್ಞಕ್ಕೆ ಕಾವಲಾಗಲು ಹೊರಟಿರುತ್ತಾರೆ. ಆ ಸಂದರ್ಭದಲ್ಲಿ ಸರಯೂ ನದಿಯ ತೀರದಲ್ಲಿ ರಾತ್ರಿ ಕಳೆದ ಬಳಿಕ ಕಂಡ ದೃಶ್ಯ:-
ಪ್ರಾಚೀದಿಗಂಗನೆಯ ಕಣ್ದೆರಹಿನೊಳಬೆಳಗೊ
ಕನಕಮೇರುವನೇರಿಬಹ ತೇರನೆಳೆಯುತಿಹ
ತಪನಹಯಖುರಪುಟದಿನೆದ್ದ ಹೊಂದೂಳಿಯೋ
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ
ಸೋನೆ ತುಂತುರ್ ಮಳೆಯೊ ಪೇಳೆನಲ್ ಮರುದಿನಂ
ಬೆಳಗಾದುದಿಂದ್ರದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯಲಿ ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ.
(ಪೂರ್ವದಿಕ್ಕೆನ್ನುವ ಸುಂದರಿ ಕಣ್ಣನ್ನು ತೆರೆದಾಗ ಕಂಡ ಕಾಂತಿಯೋ,  ಕನಕಗಿರಿ ಮೇರುವನ್ನು ಹತ್ತಿಬರುತ್ತಿರುವ ಸೂರ್ಯನ ತೇರನ್ನು ಎಳೆಯುತ್ತಿದ್ದ ಕುದುರೆಗಳ ಖುರಪುಟ(ಗೊರಸು)ಗಳಿಂದೆದ್ದ ಬಂಗಾರದ ಬಣ್ಣದ ಧೂಳಿಯೋ, ಕತ್ತಲೆಯನ್ನು ಅಟ್ಟಿ ಬರುತ್ತಿರುವ ಸೂರ್ಯನ ಬಾಣಕ್ಕೆ ತುತ್ತಾಗಿ ಗಾಯಗೊಂಡ ರಾತ್ರಿ ಕಾರುತ್ತಿರುವ ರಕ್ತವೋ ಎಂಬಂತೆ ಇಂದ್ರನ ದಿಕ್ಕಾದ ಪೂರ್ವದಲ್ಲಿ ಮಾರನೆಯ ದಿನ ಬೆಳಗಾದುದು. ಆಗ ವನದಲ್ಲೆಲ್ಲ ಲಕ್ಷಾಂತರ ಪಕ್ಷಿಗಳು ತುಂಬಿಕೊಂಡವು, ಸರಯೂ ನದಿಯ ವಕ್ಷಸ್ಥಳದಲ್ಲಿ ಓಕುಳಿಯ ಬಣ್ಣ ತುಂಬಿಕೊಂಡು ರಾಜಿಸುತ್ತಿತ್ತು)
ಇಂತಹ ಅದ್ಭುತವಾದ ವರ್ಣನೆ ಆ ಸೂರ್ಯೋದಯದೃಶ್ಯದ ಆಸ್ವಾದ ಮಾಡುವಾಗ ಗರಿಗೆದರುವ ಕಲ್ಪನೆ ಇವನ್ನೆಲ್ಲ ಕೇಳಿ-ಓದಿದಾಗ ನಮಗನ್ನಿಸುವುದೂ -ಕವಿವಿಭೂತಿಗೆ ನಮೋ ಕೃತಿವಿಭೂತಿಗೆ ನಮೋ!!

8 ಕಾಮೆಂಟ್‌ಗಳು:

  1. ಸೊಗಸಾದ ಬರೆಹ. ಆಂಡಯ್ಯನಾಗಚಂದ್ರರು ಯಾರೆಂದು ದಯವಿಟ್ಟು ತಿಳಿಸಿ. ಮತ್ತೊಂದು ಪ್ರಶ್ನೆ - ಇದು ಕವಿಯ ವರ್ಣನೆಯೋ ಅಥವಾ ರಾಮನು ಅಲ್ಲಿ ಕಂಡ ದೃಷ್ಯವೋ ಎಂದು.

    ಪ್ರತ್ಯುತ್ತರಅಳಿಸಿ
  2. ರಾಮನ ಉದ್ಗಾರವೋ ಎಂದಾಗಬೇಕಿತ್ತು .

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮಾನ್ಯರೆ, ಧನ್ಯವಾದಗಳು, ಇದು ಕವಿಯ ಮಾತು- (ಕವಿಪ್ರೌಢೋಕ್ತಿ) ಆಂಡಯ್ಯ ನಾಗಚಂದ್ರ ಇವರಿಬ್ಬರೂ ಕನ್ನಡ ಕವಿಗಳೇ, ಆಂಡಯ್ಯ ಕಬ್ಬಿಗರ ಕಾವ ಅಥವಾ ಕಾವನಗೆಲ್ಲಂ ಎಂಬ ಕೃತಿ ರಚಿಸಿದ್ದಾನೆ. ಇದು ಅಚ್ಚಗನ್ನಡದಲ್ಲಿದೆ. ನಾಗಚಂದ್ರ ರಾಮಾಯಣವನ್ನು ಬರೆದಿದ್ದಾನೆ. ( ಪಂಪರಾಮಾಯಣ) ಅಭಿನವಪಂಪ ಎಂದು ಹೆಸರು ಪಡೆದಿದ್ದ ಎಂದೆನಿಸುತ್ತದೆ.

      ಅಳಿಸಿ
    2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

      ಅಳಿಸಿ
  3. ಬಹಳ ಸೂಗಸಾಗಿದೆ. ಕುವೆಂಪು ಅಲ್ಲಲ್ಲಿ ಇಂತಹ ವರ್ಣನೆಗಳನ್ನು ಮಾಡಿ ತಮ್ಮ ಪ್ರತಿಭಾಶಕ್ತಿಯನ್ನು ಮೆರೆದಿದ್ದಾರೆ. ಧನ್ಯವಾದ

    ಪ್ರತ್ಯುತ್ತರಅಳಿಸಿ