Powered By Blogger

ಸೋಮವಾರ, ಮಾರ್ಚ್ 9, 2015

ಸಹೃದಯಕಾಲ-೧೫-ಮೇಘಸಂದೇಶ

ಸಂಸ್ಕೃತ ಸಾಹಿತ್ಯದ ಪರಿಚಯ ಇರುವವರಿಗಂತೂ ಕಾಲಿದಾಸನ ಸ್ಥಾನ ಏನೆಂಬುದು ತಿಳಿದೇ ಇದೆ. ಉಳಿದ ಭಾರತೀಯರೂ, ಸಂಸ್ಕೃತವನ್ನರಿಯದಿದ್ದವರೂ ಆ ಮಹಾಕವಿಯ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಅಂತಹ ಮಹಾಕವಿಯ ಕಾವ್ಯಗಳ ಸ್ವಾರಸ್ಯವನ್ನು ಎಷ್ಟು ಸವಿದರೂ ಇನ್ನೊಮ್ಮೆ ಸವಿಯಬೇಕೆನಿಸುತ್ತದೆ.ಅವನ  ಏಳುಕಾವ್ಯಗಳನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿದವರೆಷ್ಟೋ ವಿದ್ವಾಂಸರಿದ್ದಾರೆ, ಸಹೃದಯರಿದ್ದಾರೆ. ನಾನು ಮೂಲವನ್ನು ಓದಿಕೊಂಡವನಲ್ಲ. ಅವರಿವರು ಹೇಳಿದ್ದನ್ನು ಕೇಳಿಕೊಂಡವನಷ್ಟೆ. ಅವರಷ್ಟು ಚೆನ್ನಾಗಿ ವ್ಯಾಖ್ಯಾನಿಸಬಲ್ಲೆನೆಂದಾಗಲೀ ಅಥವಾ ಮೂಲಕ್ಕೆ ಒಪ್ಪುವಂತೆ ಅರ್ಥ ಹೇಳುತ್ತೇನೆ ಎಂಬ ಭಾವವಾಗಲೀ ಇಲ್ಲ. ಆದರೂ ಸಹೃದಯರಿಗೆ ಸವಿಯಿರುವುದೆಂದು ತೋರಿಸಿಕೊಡಬಲ್ಲೆ . ಇರುವೆಗೆ ಸಕ್ಕರೆಯ ಮೂಟೆಯನ್ನು ತೋರಿಸುವ ಕೆಲಸ ಎಂದುಕೊಳ್ಳಿ ಬೇಕಾದರೆ :-) ಅಲ್ಲದೇ ಇಲ್ಲಿ ಕನ್ನಡಕಾವ್ಯಸ್ವಾರಸ್ಯವಿಸ್ತರಣೆ ಮಾಡುವ ಬಯಕೆ ಇರುವ ಕಾರಣ ಮೂಲಕ್ಕಿಂತ ಅನುವಾದಕ್ಕೆ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಅನೌಚಿತ್ಯವೇನೂ ಆಗಲಾರದು ಎಂದುಕೊಳ್ಳುತ್ತೇನೆ.
ಸಂದರ್ಭ- ಮೇಘದೂತದಲ್ಲಿ ಯಕ್ಷ ತನ್ನ ಪ್ರಿಯೆಗೆ ಮೇಘದ ಮೂಲಕ ಸಂದೇಶ ಕಳಿಸುತ್ತಾ ಮೇಘಕ್ಕೆ ಮಾರ್ಗವನ್ನು ಸೂಚಿಸುತ್ತಾ ಬೇರೆ ಬೇರೆ ಪ್ರದೇಶಗಳನ್ನು ಅಲ್ಲಿಯ ಜನಜೀವನವನ್ನು ವರ್ಣನೆ ಮಾಡುತ್ತಾ ಸಾಗುತ್ತಾನೆ. ಹೀಗೆ
ಮೇಘಸಂದೇಶದಲ್ಲಿ ಬರುವ ಒಂದು ಪದ್ಯ -

ಕರ್ತುಂ ಯಚ್ಚ ಪ್ರಭವತಿ ಮಹೀಮುಚ್ಛಿಲೀನ್ಧ್ರಾಮವನ್ಧ್ಯಾಂ
ತಚ್ಛ್ರುತ್ವಾ ತೇ ಶ್ರವಣಸುಭಗಂ ಗರ್ಜಿತಂ ಮಾನಸೋತ್ಕಾಃ|
ಆಕೈಲಾಸಾದ್ ಬಿಸಕಿಸಲಯಚ್ಛೇದಪಾಥೇಯವನ್ತಃ
ಸಂಪತ್ಸ್ಯನ್ತೇ ನಭಸಿ ಭವತೋ ರಾಜಹಂಸಾಃ ಸಹಾಯಾಃ||

ಇದನ್ನು ಕನ್ನಡದಲ್ಲಿ ಪ್ರಸಿದ್ಧವಾದ "ಅಂಬಿಕಾತನಯದತ್ತರ ಮೇಘದೂತ"ದಲ್ಲಿ ಹೀಗೆ ಅನುವಾದ ಮಾಡಿದ್ದಾರೆ.

ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿ ಅಣಬೆ ತಾಳಿ
ಕಿವಿಗೆ ಸವಿಯೆನಿಪ ಮೊಳಗ ಕೇಳಿ ಮಾನಸಕೆ ಬಂತು ದಾಳಿ
ತುಂಡು ತಾವರೆಯ ಬುತ್ತಿಕಟ್ಟಿ ಕೈಲಾಸಕಾಗಿ ಸಾಗಿ
ಬಾನಬಯಲಿನಲಿ ಕೊನೆಗು ಬರುವವರಸಂಚೆ ಜೋಡಿಯಾಗಿ||
(ಮೊದಲ ಬಾರಿ ಮೊಳಗಿದಾಗಳೇ ಭೂಮಿ ಬಂಜೆತನವನ್ನು ತೊರೆಯಿತು. ಅಣಬೆಗಳು ಬೆಳೆದುವು. ಕಿವಿಗೆ ಸವಿಯೆನಿಸುವ ಗುಡುಗಿನ ದನಿಯನ್ನು ಕೇಳಿ ಮಾನಸಸರೋವರಕ್ಕೆ ದಾಳಿ ಬಂತು; ಅವು ತಾವರೆಯ ಎಸಳುಗಳನ್ನೇ ಬುತ್ತಿಯಂತೆ ಕಟ್ಟಿಕೊಂಡು ಬರುವ ರಾಜಹಂಸಗಳು, ಕೈಲಾಸಕ್ಕಾಗಿ ಸಾಗಿ ಕೊನೆಯವರೆಗೂ ಬಾನಿನ ದಾರಿಯಲ್ಲಿ ಜೊತೆಯಾಗಿ ಬರುತ್ತವೆ)

ಇದನ್ನೇ ಇನ್ನೊಬ್ಬ ಕವಿಗಳಾದ ಶ್ರೀ. ಗಣಪತಿ ಮೊಳೆಯಾರರು ಮೂಲದ ಮಂದಾಕ್ರಾಂತಾಚ್ಛಂದಸ್ಸಿನಲ್ಲಿಯೇ ಹೀಗೆ ಅನುವಾದ ಮಾಡಿದ್ದಾರೆ.

ನಿನ್ನಾರಾವಕ್ಕಣಬೆ ವೆಳೆಗುಂ ಭೂಮಿಸಂಪನ್ನಮಕ್ಕುಂ
ಕೇಳ್ದಾ ಕರ್ಣಕ್ಕನಿದು ದನಿಯಂ ರಾಜಹಂಸಂಗಳೆಲ್ಲಂ
ಪಾರುತ್ತುಂ ಮಾನಸಕೆ ನಭದೊಳ್ ಕೂಡುತೊತ್ತಾಸೆಗೆಂದಾ
ಕೈಲಾಸಂ ಸೇರ್ವನಕ ಬಿಸಪಾಥೇಯಮಂ ತಾಳ್ದಿವರ್ಕುಂ||
(ನಿನ್ನ ಧ್ವನಿಗೆ ಅಣಬೆ ಬೆಳೆಯುವುದು, ಭೂಮಿ ಸಂಪನ್ನವಾಗುತ್ತದೆ. ಕಿವಿಗೆ ಇಂಪಾಗಿರುವ ಆ ದನಿಯನ್ನು ಕೇಳಿ ರಾಜಹಂಸಗಳೆಲ್ಲ ಹಾರುತ್ತಾ ಮಾನಸದೆಡೆಗೆ ಹೊರಟು ಬರುತ್ತವೆ. ಕಮಲದ ಮೊಗ್ಗುಗಳ ಬುತ್ತಿಯನ್ನು ತಮ್ಮೊಡನೆ ಇಟ್ಟುಕೊಂಡ ರಾಜಹಂಸಗಳು ಆಕಾಶದಲ್ಲಿ ಕೈಲಾಸವನ್ನು ಸೇರುವತನಕವೂ ಒತ್ತಾಸೆಯಾಗಿರುತ್ತವೆ. )


ಈ ಎರಡು ಅನುವಾದಗಳನ್ನೂ ಅವಲೋಕಿಸಿದಾಗ ಬೇಂದ್ರೆಯವರ ಅನುವಾದ ಹೊಸಗನ್ನಡದ ತಳಹದಿಯಲ್ಲಿ  ಸುಲಭವೇದ್ಯವಾಗುವಂತಿದೆ ಅಲ್ಲದೇ ಬುತ್ತಿ,ದಾಳಿ,ತುಂಡುತಾವರೆ ಇತ್ಯಾದಿಶಬ್ದಗಳಿಂದ ನಮ್ಮದೇ ಜಾಡಿನದೆಂದು  ಆತ್ಮೀಯವಾಗೆನಿಸುತ್ತದೆ ಎಂಬುದಂತೂ ನಿಜ.
ಮೊಳೆಯಾರರ ಅನುವಾದ ಹಳಗನ್ನಡದಿಂದ ಸಂಪನ್ನವಾಗಿರುವುದಲ್ಲದೇ  ಸಂಸ್ಕೃತಕ್ಕೆ ತುಂಬಾ ಸಮೀಪವಾಗಿದೆ., ಸಂಸ್ಕೃತಶಬ್ದಗಳನ್ನು ಗಂಭೀರವಾದ ವೃತ್ತದಲ್ಲಿ ಹೊಂದಿಸಿಕೊಂಡು ಕಾಲಿದಾಸೀಯವಾಗಿಯೇ ಭಾಸವಾಗುತ್ತದೆ. ಅಲ್ಲದೇ ಮೂಲದ ಛಂದಸ್ಸಿನಲ್ಲಿ ಅನುವಾದ ಮಾಡುವುದು ದುಷ್ಕರವಷ್ಟೇ ಅಲ್ಲದೇ ಭಾವವನ್ನು ತರುವುದೆಷ್ಟು ಕಷ್ಟ ಎಂಬುದು ಅನುಭವವೇದ್ಯವಷ್ಟೆ. ಹಾಗೆಯೇ ಛಂದಸ್ಸಿನ    ಔಚಿತ್ಯದ ವಿಚಾರ ಬಂದಾಗ ಬೇಂದ್ರೆಯವರ ಪದ್ಯ ಸಂತುಲಿತಮಧ್ಯಾವರ್ತಗತಿ ಪ್ರಕೃತ ಸಂದರ್ಭಕ್ಕೆ ಸೂಕ್ತವಾದುದಲ್ಲ ಎಂದು ಛಂದೋವಿದರ ಅಭಿಮತ. ನಮಗೆ ಎರಡೂ ಪದ್ಯಗಳ ಆಸ್ವಾದನೆಯೂ ಸೊಗಸನ್ನು ನೀಡುತ್ತದೆಯೆಂಬುದಂತೂ ನಿಜ! 

2 ಕಾಮೆಂಟ್‌ಗಳು: