ಕನ್ನಡದ ಹಲವು ಕವಿಗಳು ಎಡವಿರುವುದು ಇಂತಹ ಔಚಿತ್ಯಪ್ರಜ್ಞೆಯ ಕೊರತೆಯಿಂದಲೇ, ಅವರಲ್ಲಿ ಪಂಪ ರನ್ನರೂ ಹೊರತಾಗಿಲ್ಲ ಎಂದಮೇಲೆ ಬಡಪಾಯಿ ಆಂಡಯ್ಯನಾಗಚಂದ್ರ ಮೊದಲಾದವರು ಬದುಕಿಯಾರೇ! ಕುಮಾರವ್ಯಾಸನೊಬ್ಬ ಇಂತಹ ಹಲವರ ಸಾಲಿನಿಂದ ತುಂಬಾ ಮೇಲೇ ಉಳಿಯುತ್ತಾನೆ.(ರಾಘವಾಂಕ ಮೊದಲಾದವರ ಬಗ್ಗೆ ಗೊತ್ತಿಲ್ಲ) ಅಲ್ಲದೇ ಅವನಲ್ಲಿ ಅನೌಚಿತ್ಯ ತುಂಬಾ ಕಡಿಮೆ-ಇಲ್ಲವೆಂದೇ ಹೇಳಬಹುದು. ಏಕೆಂದರೆ ಅವನು ಯಾವುದೇ ಪೂರ್ವಾಗ್ರಹ ಇಲ್ಲದೇ ಬರೆದವನು ಎಂಬುದಂತೂ ಮುಖ್ಯ ಕಾರಣವಾಗುತ್ತದೆ. ಪಂಪರನ್ನಾದಿಗಳಿಗೆ ಆಶ್ರಯದಾತರನ್ನು ಮೆಚ್ಚಿಸುವ ಬಯಕೆಯೇ ಮುಖ್ಯವಾಗುತ್ತದೆ,ಆಂಡಯ್ಯನಂತಹವರಿಗೆ ವೈದಿಕದೇವರಾದ ಶಿವನನ್ನು ಮನ್ಮಥನಿಂದ ಸೋಲಿಸುವುದೇ ಮುಖ್ಯವಾಗುತ್ತದೆ. ನಾಗಚಂದ್ರನಂತಹವರಿಗೆ ರಾವಣನನ್ನು ಒಳ್ಳೆಯವನನ್ನಾಗಿಸುವ ಉದ್ದೇಶವೇ ಕಾಣುತ್ತದೆ. ಕುಮಾರವ್ಯಾಸ 'ಕೃಷ್ಣ ಮೆಚ್ಚಲಿಕೆ'ಬರೆದದ್ದಲ್ಲವೇ!
ಕುವೆಂಪು ಅವರ ಕಾವ್ಯ ವರ್ಣನೆಯ ವಿಷಯದಲ್ಲಿ ಹಿಂದೆ ಬೀಳುವುದೇ ಇಲ್ಲ. ಅವರ ವರ್ಣನೆಗೆ ಅವರೇ ಸಾಟಿ. ಹೀಗಿದ್ದರೂ ಹಲವುಕಡೆ ಕಾವ್ಯದೋಷಗಳನ್ನು ಮೀರಿಲ್ಲವೆಂಬುದು ಸ್ವಲ್ಪ ಬೇಸರದ ಸಂಗತಿ. (ಮೊದಲ ಸಾಲಿನಲ್ಲೇ) ವಿಸಂಧಿದೋಷ, ಅರಿಸಮಾಸಗಳು,ವ್ಯಾಕರಣವಿರುದ್ಧಪದಗಳು ಇತ್ಯಾದಿ ಕೆಲವು ಅಲ್ಲಿಲ್ಲಿ ಹಾಗೆ ಹೀಗೆ ಸುಳಿದಾಡಿದರೂ ಕವಿತ್ವದ ಬಿರುಗಾಳಿಯಲ್ಲಿ ಕೊಚ್ಚಿಹೋಗುತ್ತವೆ!
ಅವರ ಮಾತನ್ನೇ ಹೇಳುವುದಾದರೆ- ಕವಿಗೆ ಕರ್ಣಂ ಪ್ರಮಾಣಂ- ವ್ಯಾಕರಣಮಲ್ತು! ವ್ಯಾಕರಣಮೇಕೆಂದೊಡೆ ಮರೆವುದಕೆ ಕಲ್ತು!!"
ಹಾಗಿದ್ದರೂ ದೋಷಗಳನ್ನು ಮೀರಲು ವ್ಯಾಕರಣಾದಿಗಳು ಬೇಕೇ ಬೇಕು ಎಂಬುದಂತೂ ಸತ್ಯ.
ಕನಕಮೇರುವನೇರಿಬಹ ತೇರನೆಳೆಯುತಿಹ
ತಪನಹಯಖುರಪುಟದಿನೆದ್ದ ಹೊಂದೂಳಿಯೋ
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ
ಸೋನೆ ತುಂತುರ್ ಮಳೆಯೊ ಪೇಳೆನಲ್ ಮರುದಿನಂ
ಬೆಳಗಾದುದಿಂದ್ರದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯಲಿ ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ.
(ಪೂರ್ವದಿಕ್ಕೆನ್ನುವ ಸುಂದರಿ ಕಣ್ಣನ್ನು ತೆರೆದಾಗ ಕಂಡ ಕಾಂತಿಯೋ, ಕನಕಗಿರಿ ಮೇರುವನ್ನು ಹತ್ತಿಬರುತ್ತಿರುವ ಸೂರ್ಯನ ತೇರನ್ನು ಎಳೆಯುತ್ತಿದ್ದ ಕುದುರೆಗಳ ಖುರಪುಟ(ಗೊರಸು)ಗಳಿಂದೆದ್ದ ಬಂಗಾರದ ಬಣ್ಣದ ಧೂಳಿಯೋ, ಕತ್ತಲೆಯನ್ನು ಅಟ್ಟಿ ಬರುತ್ತಿರುವ ಸೂರ್ಯನ ಬಾಣಕ್ಕೆ ತುತ್ತಾಗಿ ಗಾಯಗೊಂಡ ರಾತ್ರಿ ಕಾರುತ್ತಿರುವ ರಕ್ತವೋ ಎಂಬಂತೆ ಇಂದ್ರನ ದಿಕ್ಕಾದ ಪೂರ್ವದಲ್ಲಿ ಮಾರನೆಯ ದಿನ ಬೆಳಗಾದುದು. ಆಗ ವನದಲ್ಲೆಲ್ಲ ಲಕ್ಷಾಂತರ ಪಕ್ಷಿಗಳು ತುಂಬಿಕೊಂಡವು, ಸರಯೂ ನದಿಯ ವಕ್ಷಸ್ಥಳದಲ್ಲಿ ಓಕುಳಿಯ ಬಣ್ಣ ತುಂಬಿಕೊಂಡು ರಾಜಿಸುತ್ತಿತ್ತು)
ಇಂತಹ ಅದ್ಭುತವಾದ ವರ್ಣನೆ ಆ ಸೂರ್ಯೋದಯದೃಶ್ಯದ ಆಸ್ವಾದ ಮಾಡುವಾಗ ಗರಿಗೆದರುವ ಕಲ್ಪನೆ ಇವನ್ನೆಲ್ಲ ಕೇಳಿ-ಓದಿದಾಗ ನಮಗನ್ನಿಸುವುದೂ -ಕವಿವಿಭೂತಿಗೆ ನಮೋ ಕೃತಿವಿಭೂತಿಗೆ ನಮೋ!!