ಶ್ರಾವsಣಾ| ಶ್ರಾವಣಾ|
ಮೈದಂಡಿಗಿ ಮಾಡೀ| ಹಾಡಿದೀ ಕವನಾ|
ಕೈಲಾಸದ ಬುಡಕs ಸಿಕ್ಕವನಾ| ಹತ್ತು ತಲೆಯವನಾ
ಬಿಡಿಸೋ | ಹಿಡಿಸೋ | ಆತ್ಮಾ ರಾಮನ ಭವನಾ| ಶಿವನಾ
ಹರ-ಹರಿ ಒಂದಾದವನಾ | ದವನಾ| ನೀಡಿದೆ| ಅಡಿಗೇ
ಚೈತ್ರದವನಾ | ಬೇರೆಲ್ಲೀ ಹವನಾ| ಪಂಪೀಯವನಾ
ಕೊಂಪೀಯವನನ್ನ ಬ್ಯಾಡಾ | ತುಂಗೀಗೆ | ಭದ್ರೀಗೆ|
ಸರಿ-ಸರಗೂಡಿಸಿ| ಹಾಡೋ ಕವನಾ| ಹಾಡಿದವನಾ
೨
ಹರಹರ ಶ್ರಾವಣಕ ಬಂದಿs ಶ್ರುತಿ ತಂದಿss
ಹರಿಹರಿ ಶ್ರಾವಣಕ ಬಂದಿs| ಕೃತಿ ತಂದಿss
ನೀವು ತಂದೀ-ತಾಯಿ ನಮಗs
ಕಂದನು ನಾ ನಿಮಗs
ಸ್ಕಂದನ ಶಾಖೇ ನಮಗ | ನಾರದನ ಶಿಖೆ ನಮಗs
ಉದ್ದ ನಾಮಾ | ಮತ್ತs ಅಡ್ಡs ನಾಮಾ
ಯಾವಿವನs ಕಾಮಾ ಬಂದಾ | ಶಿವ ಶಕ್ತಿ ನಡುವs
ಅಡುವs ಇಡರವನs
ವಸುದೇವs ದೇವಕಿ ಗರ್ಭಾ| ತುಂಬಿದ ತುಂಬಿ
ಸೆರೆ ಬಿಡಿಸಿ ಬಂದಿ | ವಿಶ್ವದ ತಂದಿ
ಸುರ-ಅಸುರರ ಕಸರs ಕಳೆದೂ
ಮೈತಳೆದೂ ಬಾರಯ್ಯಾ
ಶ್ರಾವsಣಾ ಶ್ರವಣಕೆ ಭವಣೀಯೆ ಬೇಕೇ?
ಭ್ರಮರಾ | ಭ್ರಮರಾಂಬಾ | ನಮ್ಮ ನಿಮ್ಮ ತವರಾ
ಗೊತ್ತಿಲ್ಲೇನೋ ಜವರಾ.
೩
ನವಿರಾ ನವಿರಾ, ಮಾಡುವಿ ಯಾಕೀ ಕವರಾ
'ಕವಿಯಲ್ಲದವರಾs ಕವರ್ದವರುಂ ಒಳರೇ'
ಎಂದಾ ನೃಪತುಂಗಾ
ಶ್ರೀ ವಿಜಯನ ಲಿಂಗಾ ಸಂಗಾ
ಶ್ರುತಿ ಇಪ್ಪತ್ತೆರಡೂ | ಕೃತಿ ಸಾವಿರದಾ ಹರಡು
ಕಳೆ ಬರಡು , ಮೊರಡಿಗೆ ಮೊರಡಿಗೆ ನವಿಲು
ವಿದ್ಯುದ್ರೇಖಾs | ಮೇಘಾಡಂಬರ ನೌಕಾ
ಎಲ್ಲಾ ಗಂಧರ್ವರನಗರಾ | ನಗಲಾ ನಗಲಾ
ನಗನಗ ನವಿಲಾ| ಹಾಡೇ ಹಗಲಾ
ಶ್ರಾವಣದಲಿ ಅಭಿಜಿದ್ಯೋಗ
ಕಾವ್ಯೋದ್ಯೋಗ.
*************************************
-ಅಂಬಿಕಾತನಯದತ್ತ
(ನಾಕುತಂತಿ)
ಡಾ||ದ.ರಾ ಬೇಂದ್ರೆಯವರ ನಾಕುತಂತಿ ಕವನ ಸಂಕಲನದ ಮತ್ತೆ ಶ್ರಾವಣ ಕವಿತೆ ಇಲ್ಲಿದೆ. ಇದರಲ್ಲಿರುವ ಅಪಾರವಾದ ಅರ್ಥ ವಿಚಾರಗಳ ಕುರಿತು ನನ್ನ ಬುದ್ಧಿಗೆ ನಿಲುಕಿದಷ್ಟನ್ನು ಮುಂದೊಮ್ಮೆ ಹಾಕುತ್ತೇನೆ. ನೀವೊಮ್ಮೆ ಓದಿ ಮಂಥನ ಮಾಡಿ..
ಡಾ||ದ.ರಾ ಬೇಂದ್ರೆಯವರ ನಾಕುತಂತಿ ಕವನ ಸಂಕಲನದ ಮತ್ತೆ ಶ್ರಾವಣ ಕವಿತೆ ಇಲ್ಲಿದೆ. ಇದರಲ್ಲಿರುವ ಅಪಾರವಾದ ಅರ್ಥ ವಿಚಾರಗಳ ಕುರಿತು ನನ್ನ ಬುದ್ಧಿಗೆ ನಿಲುಕಿದಷ್ಟನ್ನು ಮುಂದೊಮ್ಮೆ ಹಾಕುತ್ತೇನೆ. ನೀವೊಮ್ಮೆ ಓದಿ ಮಂಥನ ಮಾಡಿ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ