Powered By Blogger

ಬುಧವಾರ, ಅಕ್ಟೋಬರ್ 6, 2010

ಭಕ್ತಿಯಲ್ಲೆಂತು ಈ ಪರಿ ನಾರಯಣ!!!!!

ಉಳಿದೆಲ್ಲ ಯೋಗಕ್ಕಿಂತ ಭಕ್ತಿ ಯೋಗವೇ ಶ್ರೇಷ್ಠ ಎಂದು ಹಲವಾರು ಸಂತ ಮಹಂತರು ಹೇಳಿದ್ದಾರೆ.
         ತುಲ್ಯ ನಿಂದಾ ಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್
         ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ
                                                      (ಭಗವದ್ಗೀತಾ-ಅ.೧೨ ಭಕ್ತಿಯೋಗ)
ಎಂದು ಶ್ರೀ ಕೃಷ್ಣ ಭಕ್ತರ ಕುರಿತಾಗಿ ಹೇಳಿದ್ದಾನೆ. ಅಂದರೆ-"ನಿಂದೆ ಮತ್ತು ಸ್ತುತಿಗಳೆರಡರಲ್ಲು ಸಮಾನ ಮನಸ್ಕನಾದ ಮೌನಿಯಾದ ಸಿಕ್ಕಿದ್ದಷ್ಟಕ್ಕೆ ಸಂತುಷ್ಟನು ಸ್ಥಿರವಾದ ಮನೆಯಿಲ್ಲದವನು ಸ್ಥಿರವಾದ ಮನಸ್ಸಿನವನು ಭಕ್ತನು ಆದ ನರನೇ  ನನಗೆ ಪ್ರೀತಿಪಾತ್ರ" ಎಂದು.ಹೀಗೆ ನಿರಂತರವಾಗಿ ದೇವರಲ್ಲಿ ಭಕ್ತಿಯನ್ನಿಡುವ ಅನೇಕ ಭಕ್ತರ ಕಥೆ ಕೇಳಿದ್ದೇವೆ.
          'ಕಥಾಕಾಲ'ಕ್ಕೆ ಬಂದಾಗ ಬೇಡರ ಕಣ್ಣಪ್ಪನ ಭಕ್ತಿಯ ಕುರಿತೂ, ಭಸ್ಮಾಸುರನಂತಹವರ ಭಕ್ತಿಯ ಕುರಿತೂ, ರಾವಣನ ಕಥೆಯನ್ನೂ ಧ್ರುವ ಕುಮಾರನ ಪ್ರಹ್ಲಾದನ ಚರಿತ್ರೆಯ ಕಥೆಗಳನ್ನೂ ಕೇಳಿದ್ದೇವೆ. ಇವರೆಲ್ಲರದ್ದೂ ಭಿನ್ನ ಭಿನ್ನವಾದ ಭಕ್ತಿಯ ರೂಪಗಳು. ತಾಮಸಿಕ ರಾಜಸಿಕ ಸಾತ್ವಿಕ ಹೀಗೆ,
         ನಾವೆಲ್ಲಾ ತಿಳಿದಂತೆ ಡಾ.ರಾಜಕುಮಾರ್ ಅವರು ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದರು. ಆ ನಂತರ ಭಕ್ತ ಪ್ರಹ್ಲಾದ ದಂತಹ ಭಕ್ತಿ ಪ್ರಧಾನ ಚಲನಚಿತ್ರಗಳು ಹೊರಬಂದವು.(ಇತ್ತೀಚಿನ ಚಲನಚಿತ್ರಗಳಲ್ಲಿ ಕೇವಲ ಪ್ರೇಮ ಕಥೆಗಳೇ ಇರುತ್ತವೆ.) ಅಂತಹದೇ  ಚಿತ್ರ 'ಕೈವಾರ ತಾತಯ್ಯ'. ಭಕ್ತಿಯ ಪರಾಕಾಷ್ಟತೆಯಲ್ಲಿ ,ಬಾಯಲ್ಲಿಟ್ಟುಕೊಂಡ ಕಲ್ಲಿನ ಪ್ರಭಾವದಿಂದಾಗಿ ಕೈವಾರದ ಮುನಿಗಳು 'ಓಂ ನಮೋ ನಾರಾಯಣಾಯ' ಎನ್ನಲು ಸಾಧ್ಯವಾಗದೆ "ಓಂ ನಮೋ ನಾರೇಯಣಾಯ " ಎಂದು ಉಚ್ಚರಿಸಿ ನಾರೇಯಣ ಮುನಿಗಳು ಎಂದೇ ಹೆಸರಾದರು. ಕಾಲಜ್ಞಾನ ಗ್ರಂಥವನ್ನೆಲ್ಲ ರಚಿಸಿದರು.ಬಾಯಲ್ಲಿಟ್ಟುಕೊಂಡ ಕಲ್ಲು ಕಲ್ಲುಸಕ್ಕರೆಯಾಗಿ ಬದಲಾದಾಗ ನಿನಗೆ ಸಿದ್ಧಿಸುವುದು ಎಂದು ಅವರ ಗುರುಗಳು ಹೇಳಿದ್ದರು ಎಂಬ ಕಥೆ ಇದೆ.
       ಅದಂತಿರಲಿ ಭಕ್ತಿಯಿಂದ ದೇವರನ್ನು ಏನೆಂದು ಕರೆದರೂ ಅವನಿಗೆ ಪ್ರೀತಿಯೇ ಎಂದು ಇದರಿಂದ ತಿಳಿಯುತ್ತದೆ.
       ಆದರೆ ವಾಙ್ಮಯ ಕ್ಷೇತ್ರದಲ್ಲಿ ಉತ್ಕೃಷ್ಟ ಕೃತಿಯಾದ ಕುಮಾರವ್ಯಾಸಗದುಗಿನ ಭಾರತ ಅಥವಾ ಕರ್ಣಾಟ ಭಾರತ ಕಥಾ ಮಂಜರಿಯ ವಿಚಾರಕ್ಕೆ ಬರುತ್ತಾ  ಹೇಳುವುದಾದರೆ ಭಾಮಿನೀಷಟ್ಪದಿ ಯ ಈ ಮಹಾಕಾವ್ಯದಲ್ಲಿ ಮಾತ್ರೆಗಳ ಲೆಕ್ಕಾಚಾರ ಸರಿಹೊಂದಲು ಕವಿ "ಗದುಗಿನ ವೀರ ನಾರಾಯಣ"ನನ್ನು  "ವೀರ ನಾರಯಣ"ನನ್ನಾಗಿ ಮಾಡಿದ್ದಾನೆ.ಅದೂ ಪೀಠಿಕಾ ಸಂಧಿಯ ಮೊದಲ ಪದ್ಯದಿಂದಲೇ ಆರಂಭ. ನಂತರ   ೭ನೆ ಪದ್ಯದಲ್ಲಿ "ವೀರ ನಾರಾಯಣನೆ ಕವಿ ಲಿಪಿಕಾರ ಕುವರ ವ್ಯಾಸ ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು"ಎಂದು ನಾರಾಯಣನಲ್ಲಿನ ತನ್ನ ಭಕ್ತಿಯನ್ನು ನಿವೇದಿಸಿದ್ದಾನೆ. ಕಾವ್ಯದಲ್ಲಿ ನೋಡಬೇಕಾದದ್ದು "ಪದುಮನಾಭನ ಮಹಿಮೆ" ಎಂದು ಹೇಳಿದ್ದಾನೆ.ನಂತರ ತನ್ನೆಲ್ಲ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ "ವೀರ ನಾರಾಯಣನ ಕಿಂಕರಗೆ" ಅಂದು ಧನ್ಯತಾ ಭಾವ ತೋರಿಸುತ್ತಾನೆ. "ಬಣಗು  ಕವಿಗಳ ಲೆಕ್ಕಿಪನೆ ಸಾಕೆಣಿಸದಿರು ಶುಕ ರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ" ಎಂದು ಮತ್ತೆ ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತಾನೆ. (ರಾಮಕೃಷ್ಣ ಪರಮಹಂಸರು 'ಸಾತ್ವಿಕ ಅಹಂಕಾರ ಇರಬೇಕು ಇಲ್ಲದಿದ್ದರೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ' ಎನ್ನುತ್ತಾರೆ.)
      ಇನ್ನು ೨೩ ನೇ ಪದ್ಯದ ಕುರಿತೂ ಹೇಳ ಹೊರಟರೆ ಕಾವ್ಯವನ್ನು ಕೇಳುವವರಿಗೂ ಓದುವವರಿಗೂ "ನಾರಯಣ" ಎನ್ನುತ್ತಲೇ ಒಗಟಿನಂತೆ ಈ ಸವಾಲನ್ನು ಕವಿ ಮುಂದಿಡುತ್ತಾನೆ.
                          ವೇದಪುರುಷನ ಸುತನ ಸುತನ ಸ-
                         -ಹೋದರನ ಹೆಮ್ಮಗನ ಮಗನ ತ-
                         -ಳೋದರಿಯ ಮಾತುಳನ ರೂಪನನತುಳ ಭುಜಬಲದಿ
                          ಕಾದಿಗೆಲಿದವನಣ್ಣನವ್ವೆಯ
                          ನಾದಿನಿಯ ಜಠರದಲಿ ಜನಿಸಿದ-
                         -ನಾದಿ ಮೂರುತಿ ಸಲಹೊ ಗದುಗಿನ ವೀರ ನಾರಯಣ.
ಕೊನೆಗೆ ನಾರಾಯಣನ ಹೆಸರು ಬರಬೇಕು. ಮೊದಲು ವೇದಪುರುಷನಿಂದ ಪ್ರಾರಂಭವಾಗಬೇಕು. ವೇದಪುರುಷನೆಂದರೆ ಯಾರು? ಅವನೂ ನಾರಾಯಣನೇ! ಅವನಿಂದ ಪ್ರಾರಂಭವಾಗಿ ಅವನಲ್ಲೇ ಅಂತ್ಯವಾಗುವ ಪದ್ಯದ ಮೂಲಕ ಕವಿ ಸೃಷ್ಟಿ ಸ್ಥಿತಿ ಲಯಗಳನ್ನು ಸೂಚಿಸುತ್ತಿರಬಹುದು. ಹಾಗೆ ಮಹಾಭಾರತದ ಕಥೆಯಲ್ಲಿ ಬರುವ ಅನೇಕ ಪಾತ್ರಗಳನ್ನೂ ಇದರಲ್ಲಿ ಎಳೆದು ತಂದು ಸಂಕ್ಷಿಪ್ತವಾಗಿ ಮಹಾಭಾರತವನ್ನೇ ಹೇಳುತ್ತಿರಲೂ ಬಹುದು.ಹೀಗೆ ಪದ್ಯವೊಂದಕ್ಕೆ ಅಪಾರ ಅರ್ಥ ಕಲ್ಪಿಸಬಹುದು. 'ದಶಾರ್ಥೇ ಮಹಾಭಾರತಃ' ಎನ್ನುತ್ತಾರಲ್ಲ ಹಾಗೆ!...
       ಈ ಪದ್ಯದಲ್ಲಿ ಕವಿ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾನೋ ಅಥವಾ ಓದುಗ/ಕೇಳುಗನನ್ನು ಗೊಂದಲಕ್ಕೀಡುಮಾಡುತ್ತಿದ್ದಾನೋ 'ನಾರಯಣ'ನಿಗೇ ಗೊತ್ತು. ಭಕ್ತಿಯಿಂದ ಈ ಪದ್ಯ ಹಾಡುತ್ತ ಸಂಬಂಧಗಳ ಬಗ್ಗೆ ಯೋಚಿಸಿ. ಒಮ್ಮೆ ಹುಡುಕಿ ನೋಡಿ. ಪುರಾಣ ಕಥೆಗಳನ್ನೆಲ್ಲ ಈಗಿನ ತಲೆಮಾರಿನವರು ಕೇಳುತ್ತಿಲ್ಲ,ನಿರ್ಲಕ್ಷಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ, ಹೀಗಾಗಿ ಈ ಒಗಟಿಗೆ ಉತ್ತರ ಹುಡುಕಿ ನೋಡೋಣ. ಉತ್ತರ ಸಿಕ್ಕಿದವರು 'ಕಮೆಂಟಿ'ಸಿ. ಇಲ್ಲದಿದ್ದರೆ ಮುಂದಿನ ವಾರದವರೆಗೆ ಕಾಯಿರಿ.

2 ಕಾಮೆಂಟ್‌ಗಳು: