ಅಭಿನಯದಲ್ಲಿ ವಾಚಿಕ ಆಂಗಿಕ ಎರಡನ್ನು ಗುರುತಿಸಬಹುದು.ಹಾಸ್ಯದಲ್ಲೂ ಸಹ. ಅಷ್ಟೇ ಅಲ್ಲದೆ ಹಾಸ್ಯದಲ್ಲಿ ಸುಶೀಲ ಮತ್ತು ಅಶ್ಲೀಲ ಇವೆರಡು ವಿಭಾಗಗಳು.ಅಶ್ಲೀಲ ಬರವಣಿಗೆಗೆ ಹೊರತಾಗಿದ್ದು ಮತ್ತು ಅನುಸಾಂಧರ್ಭಿಕವಾದದ್ದು. ಸುಶೀಲ ಬರವಣಿಗೆಗೆ ಪೂರಕ ಹಾಗು ಸದಾ ಯುಕ್ತವಾದದ್ದು.
ಇಂಗ್ಲಿಷ್ ಮಾಧ್ಯಮಗಳಲ್ಲಿ ಈಗೀಗ ಜನ ಖುಷಿ ಪಡುತ್ತಿರುವುದು Mr.Bean ಅಥವಾ Tom and Jerry ನೋಡುವುದರ ಮೂಲಕ.ಸ್ವಲ್ಪ ಹಿಂದೆ ಸರಿದರೆ ಚಾರ್ಲಿ ಚಾಪ್ಲಿನ್ ನ ಕಾಲದಲ್ಲಿ ಅವನ ಸಿನಿಮಾಗಳು ಈ ಸ್ಥಾನವನ್ನ ಆಕ್ರಮಿಸಿದ್ದವು.ಈ ಮೂರರಲ್ಲಿ ಟಾಮ್ ಅಂಡ್ ಜೆರ್ರಿ ಇದು ಕಾರ್ಟೂನ್-ಅನಿಮೇಷನ್. ಆದರು ಸಹ ಆಬಾಲವೃದ್ಧರೆಲ್ಲರೂ ನೋಡಿ ಖುಷಿ ಪಡಬಹುದು. ಬೆಕ್ಕು ಇಲಿಗಳ ನಡುವಿನ ಹೋರಾಟ, ಇಲಿಯ ಜಾಣತನ ಹೀಗೆ ಪ್ರತಿ ಸಂಚಿಕೆಯಲ್ಲೂ ವಿಭಿನ್ನ ರೀತಿಯ ಕಲ್ಪನೆ ಇದರ ಕರ್ತೃವಿನದ್ದಾಗಿದೆ. ಬೆಕ್ಕು ಹಾಗು ಇಲಿಗಳೆರಡೂ ಶತ್ರುಗಳಾದರೂ ಒಂದಕ್ಕೆ ಇನ್ನೊಂದನ್ನು ಬಿಟ್ಟಿರಲಾಗದು. ಅನೇಕ ಬಾರಿ ತನ್ನನ್ನು ತಿನ್ನಲು ಬರುವ ಬೆಕ್ಕನ್ನು ಇಲಿ ಹೊಡೆದು ಹೆದರಿಸಿ ಕಾಡುತ್ತದೆ.ಅಕಸ್ಮಾತ್ ಅದು ಪ್ರಾಣಾಪಾಯಕ್ಕೆ ಸಿಕ್ಕಿಕೊಂಡರೆ ಕಾಪಾಡುತ್ತದೆ. ಒಮ್ಮೊಮ್ಮೆ ಬೇರೆ ಬೆಕ್ಕು ಅಥವಾ ಇಲಿಯೊಡನೆ ಇವುಗಳ ಪ್ರೇಮ ಪ್ರಸಂಗ ನಡೆಯುತ್ತದೆ.ಇಲಿಯ ಕಡೆಯಿಂದ ನಾಯಿಯೊಂದು ಬಂದು ಬೆಕ್ಕನ್ನು ಹೆದೆರಿಸುತ್ತದೆ.
ಇವುಗಳು ಯಾವ ಪಾತ್ರೆ ಅಥವಾ ಪೆಟ್ಟಿಗೆ ಇತ್ಯಾದಿಗಳಲ್ಲಿ ಬೀಳುತ್ತವೆಯೋ ಅದೇ ಆಕಾರ ಪಡೆದುಕೊಳ್ಳುತ್ತವೆ. ಅಕಸ್ಮಾತ್ ಏನಾದರು ನುಂಗಿ ಬಿಟ್ಟರೆ ಅದರದ್ದೇ ಆಕಾರ ಇವುಗಳ ದೇಹದ್ದಾಗುತ್ತದೆ. ಆಕಾಶದಲ್ಲಿ ಎಷ್ಟೋ ದೂರ ಹೋದ ನಂತರ ಕೆಳಗೆ ನೋಡಿಕೊಂಡಾಗ ತಾನು ನೆಲದ ಮೇಲಿಲ್ಲ ಎಂಬ ಅರಿವಾಗಿ ಬೀಳುತ್ತವೆ.ಬಾಗಿಲಿಗೆ ಬಡಿದರೆ ಚಪ್ಪಟೆಯಾಗುತ್ತವೆ ಏನಾದರು ಏಟು ಬಿದ್ದು ತಲೆಯ ಮೇಲೆ ಉಬ್ಬು ಬಂದು,ಅದನ್ನು ಒಳ ತಳ್ಳುತ್ತವೆ, ಆದರೆ ಅದು ಮತ್ತೊಂದು ಕಡೆ ಹೊರ ಬರುತ್ತದೆ. ಏನೇ ಆದರೂ ದೇಹದ ಯಾವ ಭಾಗವೂ ಊನವಾಗುವುದಿಲ್ಲ,ಹೀಗೆ ನಿಜವಾಗಿಯೂ ಸಾಧ್ಯವಲ್ಲದ ಊಹೆಗಳೇ ನಮಗೆ ಮನೋರಂಜನೆ ನೀಡುತ್ತವೆ.ಅದರ ಜೊತೆಗೆ ಅವುಗಳ ಮುಖ ಭಾವ ಹಾಗು ಪರಸ್ಪರ ವಿರುದ್ಧವಾಗಿ ಮಾಡುವ ಉಪಾಯಗಳು ಶಕ್ತಿಯ ಅಪರಿಮಿತಿ ಇವಷ್ಟೇ ಅಲ್ಲದೆ ಓಡುವುದು ಜಿಗಿಯುವುದು,ಹೀಗೆ ಎಲ್ಲವು ಹಾಸ್ಯವನ್ನು ಸೃಷ್ಟಿಸಿ ನೋಡುಗನನ್ನು ನಗಿಸುತ್ತದೆ.
ಇನ್ನು Mr.Bean ಬಗ್ಗೆ ಹೇಳಹೊರಟರೆ ಅವನೊಬ್ಬ ಸಾಮಾನ್ಯ ಮನುಷ್ಯ ಆದರೆ ವಿಭಿನ್ನ ಸಂಧರ್ಭಗಳಲ್ಲಿ ಅವನ ಪ್ರತಿಕ್ರಿಯೆ ಅನೂಹ್ಯವಾಗಿರುತ್ತದೆ.ಪಕ್ಕದವನೊಡನೆ ಇರುವುದು ತನಗಿಲ್ಲ ಎಂದು ಅಸೂಯೆಯಿಂದ ಅವನು ಅದಕ್ಕೆ ಸಮನಾಗಿ ಮಾಡುವ ಕೆಲಸಗಳು ಸಿಟ್ಟು ಬಂದಾಗ ಕುಣಿಯುವುದು ಕಷ್ಟಕರ ಪರಿಸ್ಥಿತಿಯಲ್ಲಿ ಕಂಗಾಲಾಗುವುದು,ಮುಖದ ವಿವಿಧ ಭಂಗಿಗಳು,ಕಾರು ನಡೆಸುವುದು ಟೆಡ್ಡಿಯೊಂದಿಗೆ ವರ್ತಿಸುವುದು ಇವೆಲ್ಲವೂ ನೋಡುಗರನ್ನು ಮನದಣಿಯೆ ನಗಿಸುತ್ತವೆ. ಏನೋ ಒಂದು ಕೆಲಸ ಮಾಡಲು ಹೋಗಿ ಇನ್ನೇನೋ ಮಾಡುವುದು ಅದನ್ನು ಸರಿಪಡಿಸಲು ಹೋಗಿ ಮತ್ತೇನೋ ಮಾಡುವುದು, ಘಂಟೆಗಟ್ಟಲೆ ಏನೋ ಒಂದನ್ನು ಸಾಧಿಸಿ ಆಮೇಲೆ ಅಂತ್ಯದ ವೇಳೆಯಲ್ಲಿ ಸಂಪೂರ್ಣ ಹಾನಿ ಮಾಡಿಕೊಳ್ಳುವುದು, ಹೀಗೆ ಇನ್ನು ಏನೇನೋ ರೀತಿಯಲ್ಲಿ ನೋಡುಗನನ್ನು ನಗಿಸುವುದರಲ್ಲಿ ಯಶಸ್ವಿಯಾಗುತ್ತಾನೆ ಈತ. ಕೆಲವೊಮ್ಮೆ ಸಮಯೋಚಿತ ನಿರ್ಧಾರ ತೆಗೆದುಕೊಂಡು ಕೊನೆಯಲ್ಲಿ ಎಲ್ಲರ ಮನ್ನಣೆಗೆ ಪಾತ್ರನಾಗುವಂತಹ ಸನ್ನಿವೇಶಗಳು, ಆಗ ಅವ್ನು ಸಂತಸ ಪಡುವುದು ಊಟಮಾಡುವಾಗ ತನಗೆ ತಿನ್ನಲಾಗದ್ದನ್ನು ಹೇಗಾದರೂ ಮಾಡಿ ಖಾಲಿ ಮಾಡಬೇಕೆಂದು ಅದನ್ನು ಅವಿಸಿಡುವುದು ಇತ್ಯಾದಿ ಇತ್ಯಾದಿ, Rowan Atkinson ಇನ್ನು ಹಲವು ಗಂಭೀರ ಚಲನ ಚಿತ್ರಗಳಲ್ಲೂ ಅಭಿನಯಿಸಿದ್ದಾನೆ,ಆದರೆ ಅಲ್ಲಿ ಈ ತರಹದ ಆಂಗಿಕ ಅಭಿನಯಗಳಿಲ್ಲಡಿದ್ದರು ಮಾತುಗಳಲ್ಲಿ ಸರಳವಾದ ಹಾಸ್ಯ ತುಂಬಿದೆ.
ಇನ್ನು ಚಾರ್ಲಿ ಚಾಪ್ಲಿನ್ ಬಗ್ಗೆ ಹೇಳುವುದಾದರೆ ಅವನೊಬ್ಬ ವಿಶಿಷ್ಟ ಕಲಾವಿದ. ಹಾಡು ನೃತ್ಯ ಅಭಿನಯ ಸಂಗೀತ ಹೀಗೆ ಹಲವಾರು ಕಲೆಗಳನ್ನು ಸಮರ್ಥವಾಗಿ ನಿರ್ವಹಿಸುವ ನಟ. ಕಪ್ಪು ಕೋಟು,ವಾಕಿಂಗ್ ಸ್ಟಿಕ್,ದೊಗಲೆ ಪ್ಯಾಂಟು ಬಂಡಿ ಟೊಪ್ಪಿ ಇವುಗಳು ಅವನ ಯಾವತ್ತು ವಸ್ತ್ರ. ಕಣ್ಣು ಹುಬ್ಬು ಹಾರಿಸುವುದು,ಸಣ್ಣ ಹಿಟ್ಲರ್ ಮೀಸೆ,ನಡೆಯುವ ಶೈಲಿ, ಕೈ ಕಾಲುಗಳನ್ನು ಬೀಸುವುದು,ಮಖಭಾವದಲ್ಲಿ ಮನಸ್ಸಿನಲ್ಲಿದ್ದುದನ್ನು ವ್ಯಕ್ತಪಡಿಸುವುದು, ಇವೆಲ್ಲವೂ ಅವನು ಜನರನ್ನು ನಗಿಸುವ ಮಾಧ್ಯಮ.
ಹಿಟ್ಲರ್ ನ ಸರ್ವಾಧಿಕಾರಿ ನೀತಿಯನ್ನು ನೋಡಿ ಅವನನ್ನು ಅನುಕರಿಸಿ The Great Dictator ಎಂಬ ಚಿತ್ರ ನಿರ್ಮಿಸಿದ.ಇದರಲ್ಲಿ ಗಂಭೀರ ಚಿಂತನೆಗಳಿದ್ದರೂ ಅವನ ಹಾಸ್ಯ ಪೂರಿತ ನಟನೆಯಿಂದ ಅದು ಕೇವಲ ಗಂಭೀರ ಚಿತ್ರವಾಗದೇ ನೋಡುಗನಿಗೆ ಪೂರ್ತಿ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಒಬ್ಬ ಸಾಧಾರಣ ಕ್ಷೌರಿಕ Dictator ನಂತೆ ಕಂಡು ಕೊನೆಯಲ್ಲಿ ಅವನು ಮಾಡುವ ಭಾಷಣ ಹಾಗು ಬೇಧ ಭಾವ ತೊರೆಯಬೇಕೆಂಬ ಸಂದೇಶ ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕಾದದ್ದು. ಚಾಪ್ಲಿನ್ ಸಮಕಾಲೀನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ತಯಾರಿಸುತ್ತಿದ್ದ. The modern times ಎಂಬ ಇನ್ನೊಂದು ಚಿತ್ರ ಬಹುತೇಕ 'ಮೂಕಿ'ಯಾದರು ನಿರುದ್ಯೋಗ ಸಮಸ್ಯೆ ಹಾಗು ಆಹಾರಕ್ಕಾಗಿ ಪರದಾಡುವುದು,ಅವನಿಗೊಬ್ಬಳು ಗೆಳತಿ ಸಿಕ್ಕಿ ಅವಳೊಡನೆ ಮನೆ ಮಾಡುವ ಯೋಚನೆ ಮಾಡುವುದು,ಕೆಲವು ಬಾರಿ ಜೈಲಿಗೆ ಹೋಗಿ ಬರುವುದು,ತನ್ನ ಒಳ್ಳೆ ತನದಿಂದ ಎಲ್ಲರಲ್ಲಿಯೂ ಒಳ್ಳೆ ಹೆಸರು ಪಡೆದರು ಮಾಡುವ ಕೆಲಸದಲ್ಲಿ ಅರಿವಿಲ್ಲದೆ ವ್ಯತ್ಯಾಸವಾಗಿ ಬೇರೊಬ್ಬರಿಗೆ ತೊಂದರೆಯಾಗುವುದು ಕೊನೆಯಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ಹಾಡುವುದು ನೃತ್ಯ ಮಾಡುವುದು ಇವನ್ನೆಲ್ಲ ಮಾತಿಲ್ಲದೇಯೂ ಸಮರ್ಥವಾಗಿ ನಿರ್ವಹಿಸುವುದು ಚಾಪ್ಲಿನ್ ನ ನಟನಾ ಕೌಶಲವನ್ನು ತೋರಿಸುತ್ತದೆ. ಅವನು ಕೊನೆಯಲ್ಲಿ ಹೇಳುವ ಹಾಡು ಹಾಗು ಅವನ ನೃತ್ಯ ವಿಶಿಷ್ಟವಾಗಿದ್ದು ಅವನ ಅವನ ಸಂಪೂರ್ಣ ಕೌಶಲ ಅದರಲ್ಲಿ ತಿಳಿಯುತ್ತದೆ.
Mr Bean ಪಾತ್ರಧಾರಿ ಚಾಪ್ಲಿನ್ ನಿಂದ ಪ್ರಚೋದನೆ ಪಡೆದ ಮತ್ತು ಟಾಮ್ ಅಂಡ್ ಜೆರ್ರಿ ಯಲ್ಲಿ ಚಾಪ್ಲಿನ್ ನ ನಡೆ ಮತ್ತು ಓಡುವಿಕೆಯ ಸ್ವಲ್ಪ ಅನುಕರಣೆ ಕಾಣುತ್ತದೆಯಾದರೂ ಮೂರು ವಿಭಿನ್ನ ರೀತಿಯಲ್ಲಿ ಮನರಂಜನೆಗೆ ಮಾಧ್ಯಮವಾಗಿದೆ. ಇವು ಮೂರು ಆಂಗಿಕ ನಟನೆಯಿಂದ ಸುಶೀಲ ಹಾಸ್ಯಗಳನ್ನು ಪ್ರತಿಬಿಂಬಿಸುತ್ತವೆ. ಈ ಮೂರು ಅಲ್ಲದೇ ಇನ್ನೂ ಹಲವು ಪ್ರಸಿದ್ಧವಿದ್ದರೂ ಇವುಗಳಷ್ಟು ಖ್ಯಾತಿ ಪೂರ್ಣತೆ ಅಥವಾ ಅನುಭವ ಅವಕ್ಕಿಲ್ಲ. ಹಿಂದಿನಿಂದಲೂ ನಾಟಕಗಳಲ್ಲಿ ವಿದೂಷಕರಿದ್ದು ಹಾಸ್ಯ ಮಾಡುತ್ತಿದ್ದರಾದರೂ ಅವರೇ ನಾಯಕರಾಗುತ್ತಿರಲಿಲ್ಲ. ನಾಯಕ,ಪ್ರತಿನಾಯಕ,ನಾಯಿಕೆಯರೆಲ್ಲರೂ ಬೇರೆ ಬೇರೆಯಾಗಿದ್ದು ಅವನೊಬ್ಬ ಪೋಷಕ ನಟ ಮಾತ್ರ ಆಗಿರುತ್ತಿದ್ದನಷ್ಟೇ! (ನಾನು ಕೇಳಿದಂತೆ 'ಭಾಸ'ನ ಚಾರುದತ್ತ ಇದಕ್ಕೆ ಹೊರತಾದದ್ದು.) ಆದರೆ ಇದರಲ್ಲಿ ವಿದೂಷಕರೇ ನಾಯಕರು ಅಥವಾ ಹಾಸ್ಯಗಾರ ನಾಯಕರು. ರಂಗದಲ್ಲಿ ವಿಭಿನ್ನ ಪ್ರಯೋಗ ಮಾಡಿ ಅವುಗಳ ಮುಖ್ಯ ಉದ್ದೇಶ ಈಡೇರಿಸಿದ್ದಾರೆ.
ಹಿರಿಯರು ಮಕ್ಕಳ ಜೊತೆ ಕೂತು ನೋಡಬಹುದಾದ ಕಾರ್ಯಕ್ರಮಗಳು ಇಂದು ಬರುತ್ತಲೇ ಇಲ್ಲ, ಇಂತಹ ಸರಳ ಹಾಸ್ಯಗಾರರು ಕನ್ನಡದಲ್ಲಿಯೂ ಇದ್ದರೂ ಅವರು ಅಷ್ಟು ಪ್ರಸಿದ್ಧಿಗೆ ಬರಲಿಲ್ಲ.'ನಾ ನಾ ರೀತಿಯ ಕೊಲೆ ಧರೋಡೆಗಳನ್ನೇ ಪ್ರಧಾನವಾಗಿರಿಸಿಕೊಂಡು ಬರುತ್ತಿರುವ ಚಲನ ಚಿತ್ರಗಳನ್ನು ನೋಡಿ ನೋಡಿಯೇ ಒಬ್ಬ ವ್ಯಕ್ತಿ ಕೊಲೆಗಾರ ಅಥವಾ ರೌಡಿಯಾದ!' ಎಂದರೆ ಅದರಲ್ಲಿ ಆಶ್ಚರ್ಯಪಡುವಂತಹದ್ದೇನೂ ಇಲ್ಲ. ಅರೆಬೆತ್ತಲೆ ನೃತ್ಯ ,ಪ್ರೀತಿ ಪ್ರೇಮಗಳಿಗಾಗಿ ನಡೆವ ಜಗಳ ಹೊಡೆದಾಟ ಕೊಲೆ ಇವೆಲ್ಲವೂ ಮನರಂಜನೆ ನೀಡುತ್ತವೆ ಎಂದು ತಿಳಿದ ನಟ ನಿರ್ದೇಶಕ ಕಥೆಗಾರರು ತಮಗರಿವಿಲ್ಲದೆ ಸಮಾಜವನ್ನು ಕೆಡಿಸುತ್ತಿದ್ದಾರೆಂದರೆ ತಪ್ಪಲ್ಲ!
ಭರತಮುನಿ 'ನಾಟ್ಯಶಾಸ್ತ್ರ'ದಲ್ಲಿ " ಸಾಯುವ ಸನ್ನಿವೇಶ,ಅಗ್ನಿ,ಮೈಥುನ ಕದನ ಇತ್ಯಾದಿಗಳನ್ನೆಲ್ಲ ರಂಗದ ಮೇಲೆ ತೋರಿಸಬಾರದು" ಎಂದಿದ್ದಾನೆ, ಅವುಗಳ ಮೂಲ ಉದ್ದೇಶ ಅರಿಯುವುದು ಅಗತ್ಯ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಎಂದರೂ ಮೇಲೆ ಹೇಳಿದ ಮೂರು ಹಾಸ್ಯಗಳ ಮೂಲ ಕರ್ತೃಗಳು ಪಾಶ್ಚಾತ್ಯರೇ ಆಗಿದ್ದಾರೆ. ದಿನ ರಾತ್ರಿ ಕ್ರೈಂ ಸುದ್ದಿಗಳೊಂದಿಗೆ ಮಲಗುವ ಜನರ ಮನಸ್ಸಿನಲ್ಲಿ ಶಾಂತಿ ಸಂತೋಷ ಮೂಡಲು ಹಾಸ್ಯ ಕಾರ್ಯಕ್ರಮಗಳನ್ನು ನೋಡಬೇಕು, ಅದು ಶುದ್ಧ ಸುಶೀಲವಾಗಿದ್ದರೆ ಉತ್ತಮ. ಭಾಷೆಯೊಂದೇ ಭಾವಾಭಿವ್ಯಕ್ತಿಗೆ ಮಾಧ್ಯಮವಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸ್ವಭಾಷಾಭಿಮಾನ ಇರಲಿ ಅನ್ಯ ಭಾಷಾ ದ್ವೇಷ ಬೇಡ. " ನೂರು ಮತದ ಹೊಟ್ಟ ತೂರಿ ಎಲ್ಲ ತತ್ತ್ವದೆಲ್ಲೆ ಮೀರಿ" ಎಂಬ ಕವಿ ವಾಣಿ ಸಾರಿದ ಸತ್ಯವನ್ನು ಅಳವಡಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳೋಣ,ಸಂತಸವನ್ನು ಹೊಂದೋಣ.
ಭದ್ರಂ ಕರ್ಣೇಭಿ: ಶೃಣುಯಾಮ ದೇವಾ: ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:
ಸ್ಥಿರೈರಂಗೈ: ಸ್ತುಷ್ಟುವಾಂ ಸಸ್ತನೂಭಿ: ವ್ಯಶೇಮ ದೇವ ಹಿತಂ ಯದಾಯು:
ಸ್ವಸ್ತಿ ನ ಇಂದ್ರೋ ವೃದ್ಧ ಶ್ರವಾ: ಸ್ವಸ್ತಿ ನಃ ಪೂಷಾ ವಿಶ್ವ ದೇವಾ:
ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿ: ಸ್ವಸ್ತಿ ನೋ ಬೃಹಸ್ಪತಿರ್ದಧಾತು
ಓಂ ಶಾಂತಿ:ಶಾಂತಿ:ಶಾಂತಿ:
ur blog is soo fine....
ಪ್ರತ್ಯುತ್ತರಅಳಿಸಿUttama aarambha,
ಪ್ರತ್ಯುತ್ತರಅಳಿಸಿInnashtu haridu barali...
good man,started with a drop...I wish it spreads like a ocean....give some thinkable writtings.....
ಪ್ರತ್ಯುತ್ತರಅಳಿಸಿಸ್ವೋಪಜ್ಙ ಬರಹ. ಕಾಲದ ದೃಷ್ಟಿಯಿಂದ ದೂರವಿರುವ ಈ ಮೂರರ ಸಾಮ್ಯವನ್ನು ಮನಮುಟ್ಟುವಂತೆ ಬರೆದಿದ್ದೀರಿ. ಆಂಗಿಕವೇ ಹೆಚ್ಚಿರುವ ಇಂಥ ಪ್ರಯೋಗಗಳು ತಮ್ಮ ಸಾತ್ವಿಕಾಂಶಗಳಿಂದ ನಮ್ಮ ಮನಸೂರೆಗೊಳ್ಳುವಲ್ಲಿ ಸಫಲವಾಗಿವೆ.
ಪ್ರತ್ಯುತ್ತರಅಳಿಸಿಮಾನ್ಯರೆ ಧನ್ಯವಾದಗಳು. ತುಂಬಾ ಹಿಂದೆ ಬರೆದ ಲೇಖನ.
ಅಳಿಸಿಇಲ್ಲಿ ಕೆಲವು ಮಾಹಿತಿಗಳು ದೋಷಪೂರ್ಣವಾಗಿರುವುದಕ್ಕೆ ಕ್ಷಮಿಸಬೇಕು