Powered By Blogger

ಶನಿವಾರ, ಮೇ 11, 2019

ಮೋಜಿನ ಮಂಜಗುಣಿ ತೇರು

Places to visit near sisri ಎಂದು ಗೂಗಲ್ ನಲ್ಲಿ ಹಿಂದೆಂದೋ ಟೈಪಿಸಿದಾಗ ಶಿರಸಿಯಲ್ಲಿರುವ ಅನ್ಯ ಪ್ರೇಕ್ಷಣೀಯ ಸ್ಥಳಗಳೊಟ್ಟಿಗೆ ಕಣ್ಣಿಗೆ ಬಿದ್ದದ್ದು ಮಂಜಗುಣಿ ದೇವಸ್ಥಾನ. ಅದಕ್ಕೂ ಮೊದಲು ಗೊತ್ತಿರಲಿಲ್ಲವೆಂದಲ್ಲ, ಕೇಳಿ ಬಲ್ಲವಳಾಗಿದ್ದೆ. ಹೇಳಿ ಕೇಳಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆ ಮಗಳು. ಇಂಥ ದೇವಸ್ಥಾನಗಳ ಬಗ್ಗೆ ಅಲ್ಲ್ಪ ಸಲ್ಪ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಹೇಗೆ. ಆದರೂ ನನ್ನ ಇಪ್ಪತ್ತೇಳು ವರ್ಷಗಳ ಸುದೀರ್ಘ ಜೀವನದಲ್ಲಿ ಅಲ್ಲಿಗೆ ಹೋಗುವ ಅವಕಾಶ ಒದಗಿರಲಿಲ್ಲ. ಶಿರಸಿಗೆ ಸೊಸೆಯಾಗಿ ಬಂದು ಇನ್ನೇನು ಒಂದು ವರ್ಷ ತುಂಬಿ ಬಿಡುತ್ತದೆ ಎಂದಾಗಲೂ ಆ ಜಾಗಕ್ಕೆ ಹೋಗಲು ಮುಹೂರ್ತ ಒದಗಿರಲಿಲ್ಲ (ಗಂಡನ ಆಸ್ಥೆಯ ಮೇಲೆ ಅಂತಹ ಮುಹೂರ್ತಗಳು ಕೂಡಿ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರದ ಸತ್ಯ).ಆ ದೇವಸ್ಥಾನದ ಸ್ಥಳ ಪುರಾಣ, ದೇವರ ಮಹಿಮೆಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲದಿದ್ದರೂ ನಮ್ಮ ಮನೆಯಿಂದ ಏಳೆಂಟು ಕಿಲೋಮಿಟರ್ ದೂರವಷ್ಟೇ ಅಗಿರುವುದರಿಂದ ಹೋಗಿ ನೋಡಬಹುದಲ್ಲ ಎಂಬ ಆಸೆಯಂತೂ ಇತ್ತು. ಈ ಸಲ ಮನೆಗೆ ಹೋದದ್ದರ ಉದ್ದೇಶ ಮತದಾನ ಮಾಡುವುದಕ್ಕಾಗಿಯಾದರೂ ಸಹ ಮಂಜಗುಣಿಗೆ ಹೋಗುವ ಅವಕಾಶ ಅಚಾನಕ್ಕಾಗಿ ದೊರೆಯಿತು.

ಬೆಂಗಳೂರು ಪುರವಾಸಿನಿಯಾಗಿ ನಾಲ್ಕೈದು ವರ್ಷಗಳಾದರೂ ಮತದಾರರ ಗುರುತಿನ ಚೀಟಿಯ ವಿಳಾಸವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡಿರದಿದ್ದುದು ಒಳ್ಳೆಯದೇ ಆಯಿತು. ಚುನಾವಣೆಯ ಹೆಸರಿನಲ್ಲಿ ಒಂದೆರಡು ದಿನ ಹೆಚ್ಚಿಗೆ ರಜಾ ಹಾಕುವ ಅವಕಾಶವೂ ಸಿಕ್ಕಿತು. ಎಪ್ರಿಲ್ ೧೭ರಿಂದ ಸತತವಾಗಿ ಐದು ದಿವಸಗಳ ರಜೆ ಅಪರೂಪಕ್ಕೆ ದೊರತದ್ದರಿಂದಲೂ, ಕೆನರಾ ಲೋಕಸಭಾ ಕ್ಷೇತ್ರದಲ್ಲಿ ೨೩ಕ್ಕೆ ಮತದಾನವಾದ್ದರಿಂದ, ನನ್ ಬಾಸ್ ಬಳಿ ನಾನು ವೋಟು ಹಾಕಲೇಬೇಕೆಂದು ಹೇಳಿದ್ದರಿಂದಲೂ  ನನಗೆ ಇಷ್ಟೊಂದು ಸುದೀರ್ಘ ರಜೆಯು ಪೂರ್ವ ಜನ್ಮದ ಪುಣ್ಯದಿಂದಲೋ ಎಂಬಂತೆ ದೊರೆಯಿತು. ಕಾರಣ ಯಾವುದಾದರೇನು, ಮತದಾನವೇ ಇರಲಿ ಮದುವೆಯೇ ಇರಲಿ, ಯಾವ ಕಾರ್ಯವೂ ಇಲ್ಲದಿರಲಿ. ಊರಿಗೆ ಹೋಗುವುದೆಂದರೆ ಹೆಣ್ಣುಮಕ್ಕಳಿಗೆ ಪ್ರಿಯವೇ ಅಲ್ಲವೇ? ಅದೂ ಹೊಸದಾಗಿ ಮದುವೆಯಾದ ಗಂಡನೊಟ್ಟಿಗೆ!

ಹೀಗೆ ನಾನು ಅತೀವ ಸಂತೋಷದಿಂದ ನನ್ನ ಗಂಡನೊಟ್ಟಿಗೆ ನಮ್ಮ ಮನೆ ತಲುಪಿದ್ದೆ. ಮಾರನೇ ದಿನ ಮಂಜಗುಣಿಯಲ್ಲಿ ತೇರು ಇದೆಯೆಂದು ನನಗೆ ಮೊದಲು ಹೇಳಿದ್ದು ನನ್ನ ಅತ್ತೆ. ನನ್ನ ಉತ್ಸಾಹಕ್ಕೆ ರೆಕ್ಕೆಪುಕ್ಕಗಳು ಬಂದಂತಾಗಿ, ಮದುವೆಯಾಗಿ ಇಷ್ಟು ದಿನವಾದರೂ ಮಂಜಗುಣಿಗೆ ಕರೆದುಕೊಂಡು ಹೋಗದ- ಮನೆಗೆ ಬಂದಾಗ ಬೆಂಗಳೂರಿನಲ್ಲಿ ಇರುವಾಗಿನಗಿಂತ ಹೆಚ್ಚು ಆಲಸ್ಯತನದಿಂದಿರುವ ನನ್ನ ಗಂಡನನ್ನು ಹೊರಡಿಸಲು ಇದೊಂದು ಸುವರ್ಣಾವಕಾಶವೆಂದು ಮನಸ್ಸಿನಲ್ಲಿಯೇ ಅಂದುಕೊಂಡು, ತೇರಿಗೆ ಹೋಗೋಣವೆಂದು ಅತ್ತೆಗೆ ಹೇಳಿದ್ದೆ. ಅತ್ತೆಯೇ ಹೇಳಿದ ಮೇಲೆ ಇನ್ನು ಮಂಜಗುಣಿಗೆ ಹೋಗುವುದನ್ನು ತಪ್ಪಿಸಲು ಯಾವ ದೇವರಿಗೇನು, ಸಾಕ್ಷಾತ್ ನನ್ನ ಗಂಡನಿಗೂ ಸಾಧ್ಯವಿರಲಿಲ್ಲ.  ಮನೆಗೆ ಹೋದಾಗೆಲ್ಲ ಸದಾಕಾಲ ಹೆಬ್ಬಾಗಿಲಲ್ಲಿ ಯಾರೇ ಮಾತಿಗೆ ಸಿಕ್ಕರೂ ಕತೆ ಹೇಳುತ್ತ ಕೂರುವ ನನ್ನ ಗಂಡನಿಗೆ ಈ ವಿಷಯದ ಬಗ್ಗೆ ಸುಳಿವಿರಲಿಲ್ಲ.

ನನ್ನ ಯಜಮಾನರು ಈ ಸಲದ ಸುದೀರ್ಘ ರಜೆಯಲ್ಲಿ ಮಾವನ ಮನೆಗೂ ಸಹ ಹೋಗದೇ ಬೇರೆ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದವರು. ಹಾಗಾಗಿ ಬೇರೆ ಯಾವುದೇ ಯೋಜನೆಗಳಿಗೆ ಅಷ್ಟಾಗಿ ಉತ್ಸಾಹ ತೋರುವುದಿಲ್ಲವೆಂದು ನಾನು ಅಂದುಕೊಂಡಿದ್ದೆ. ಏತನ್ಮಧ್ಯೆ ನನ್ನ ಚಿಕ್ಕ ಅತ್ತಿಗೆಯೂ ಮಂಜಗುಣಿಯ ತೇರಿಗೆ ಹೋಗುವ ಬಗ್ಗೆ ಉತ್ಸಾಹ ತೋರಿದಾಗ ಗಂಡ ಬರಲು ಒಂದಾನುವೇಳೆ ಒಪ್ಪದಿದ್ದರೂ ತೇರಿಗೆ ಹೋಗುವುದಕ್ಕೆ ಜನವಿದ್ದಾರಲ್ಲ ಎಂದು ಖುಷಿಪಟ್ಟೆ. ಇದೇ ವಿಶ್ವಾಸದಲ್ಲಿ ನನ್ನ ಗಂಡನಿಗೆ ಹೇಳಿದ್ದೆ, ‘ತೇರಿಗೆ ನೀವು ಬಾರದಿದ್ದರೂ ನಾವಂತೂ ಹೋಗುವವರೇ’ ಎಂದು. ಇದೇ ಹೊತ್ತಿಗೆ ನನ್ನ ಮೂರನೇ ಮಾವ ಅತ್ತೆ ಹಾಗೂ ಅವರ ಮಕ್ಕಳೂ ಕೂಡ ತೇರಿಗೆ ಹೊರಡಲು ತುದಿಗಾಲಲ್ಲಿ ನಿಂತದ್ದಾರೆಂದು ನನ್ನ ಅತ್ತೆ ಹೇಳಿದ್ದರು.

ತೇರು ಇದ್ದಲ್ಲಿ ಜಾತ್ರೆ, ಜಾತ್ರೆಯೆಂದರೆ ಜನ. ಈ ವರ್ಷ ಶಿರಸಿ ಜಾತ್ರೆ ಇಲ್ಲವಾದ್ದರಿಂದ ಈ ಸಲದ ಮಂಜಗುಣಿ ತೇರಿಗೆ ಜನ ಜಾಸ್ತಿಯೆಂದು ನನ್ನ ಚಿಕ್ಕತ್ತೆಯು ತನ್ನ ಅನೇಕ ವರ್ಷಗಳ ಅನುಭವದಿಂದ ಹೇಳಿದ್ದಳು. ನಮ್ಮ ಮನೆಯಿಂದಲೇ ಒಂದು ಓಮಿನಿ ತುಂಬುವಷ್ಟು ಜನ ಹೊರಡುವುದಕ್ಕೆ ತರಾತುರಿಯಲ್ಲಿದ್ದರು. ಹೀಗಿರುವಾಗ ತೇರಿಗೆ ಜನ ಜಾಸ್ತಿಯಾಗದೇ ಇರುತ್ತಾರೆಯೇ?

ಕಲ್ಲಂಗಡಿ ಹಣ್ಣಿನ ಪರಮಪ್ರಿಯನಾದ ನನ್ನ ಮೂರನೇ ಮಾವನಿಗೆ ತೇರು ನೋಡುವುದಕ್ಕಿಂತ ಹೆಚ್ಚಾಗಿ ಕಲ್ಲಂಗಡಿ ಹಣ್ಣು ತಿನ್ನುವ ಅವಕಾಶ ಸಿಗಲಿದೆಯೆಂದೇ ಹೊರಟಿದ್ದುದನ್ನು ಅವನೇ ಬಾಯಿ ಬಿಟ್ಟು ಹೇಳಿದ್ದ.ತನ್ನ ಪತ್ನಿ ಹಾಗೂ ಪುತ್ರಿಯರೊಟ್ಟಿಗೆ ಮೂರನೇ ಮಾವ ತೇರಿಗೆ ಹೊರಡಲು ಓಮಿನಿಗೆ ಬರಲು ಹೇಳಿದ್ದಾನೆಂದೂ ಸಂಜೆ ಐದೂವರೆಯ ಹೊತ್ತಿಗೆ ಓಮಿನಿಯು ಬರಲಿದೆಯೆಂದೂ, ಅದರಲ್ಲಿಯೇ ಎಲ್ಲರೂ ಹೋಗುವುದೆಂದು  ಸುದ್ದಿ ಗೊತ್ತಾದ ಹಾಗೆ ನಾನೂ ನನ್ನ ಅತ್ತಿಗೆಯರೂ ಸರಿಯಾಗಿ ಐದೂವರೆಗೆ ಇನ್ನೂ ಒಂದು ನಿಮಿಷ ಬಾಕಿ ಇದೆ ಎನ್ನುವಾಗಲೇ ಸಾಲಂಕೃತರಾಗಿ ತೇರಿಗೆ ಹೊರಡಲು ಸನ್ನದ್ಧರಾಗಿದ್ದೆವು. ನನ್ನ ಗಂಡನೂ ಕೂಡ ಲುಂಗಿ ಉಟ್ಟವರು ಅದ್ಯಾವುದೋ ಮಾಯೆ ಎನ್ನುವಂತೆ ಕ್ಷಣಾರ್ಧದಲ್ಲಿ ಪ್ಯಾಂಟು ತೊಟ್ಟು ಬಂದೇ ಬಿಟ್ಟರು.

ಈ ಮಧ್ಯೆ ನಾನು ಅಡುಗೆ ಮನೆಯೊಳಗೆ ಹೋದಾಗ ನನ್ನ ಮಾವನವರು ನನಗಾಗಿಯೇ ಕಾಯುತ್ತಿರುವವರಂತೆ, ನನ್ನ ಕಂಡವರೇ ಐದುನೂರು ರುಪಾಯಿಯನ್ನು ಕೊಟ್ಟು ಅದರ  ಜೊತೆಗೆ ಚಿಲ್ಲರೆಗೆ ತೊಂದರೆಯಾಗದಿರಲೆಂದು ಹತ್ತು, ಇಪ್ಪತ್ತು, ಐವತ್ತು, ನೂರರ ಚಿಲ್ಲರೆಯನ್ನು ಬೇಡವೆಂದರೂ ಕೈಯಲ್ಲಿ ಹಿಡಿಸಿದ್ದರು. ಇದೆಲ್ಲ ಬೇಡ, ನನ್ನ ಬಳಿಯಿದೆಯೆಂದರೂ ಕೇಳಲಿಲ್ಲ. ಕಡೆಗೆ ನನ್ನ ಅತ್ತೆಯೇ, ‘ತೇರಿಗೆ ಹೋಗುವವರಿಗೆ ಹಿರಿಯರಾದವರು ಖರ್ಚಿಗೆ ಕೊಡುವ ಪದ್ಧತಿಯಂತೆ ಕೊಟ್ಟಿದ್ದಾರೆ, ಇಟ್ಟುಕೋ’ ಎಂದದ್ದಕ್ಕೆ ಆಗಬಹುದು ಎಂದು ಇಟ್ಟುಕೊಂಡೆ. ಇಲ್ಲಿ ಹೇಳಲೇಬೇಕಾದ ವಿಷಯವೆಂದರೆ ಇದಕ್ಕೂ ಮೊದಲು ಐದುನೂರು ರೂಪಾಯಿಗಳ ಎರಡು ನೋಟು ನನ್ನ ಪರ್ಸನ್ನು ಸೇರಿತ್ತು. ಹೇಗೆ ಅಂತಲೋ?  ಅದರ ಹಿಂದಿನ ದಿನವಷ್ಟೇ ಅಹೋ ರಾತ್ರಿ ಒಂದು ಗಂಟೆಯವರೆಗೆ ನಮ್ಮೂರಿನ ದೇವಸ್ಥಾನದಲ್ಲಿ ಅಷ್ಟಾವಧಾನ ಮಾಡಿದ ನನ್ನ ಗಂಡನಿಗೆ ಆಯೋಜಕರು ಕರುಣಿಸಿದ ಸಂಭಾವನೆಯಿಂದ ಅದನ್ನು ಹಾರಿಸಿದ್ದು ಅಷ್ಟೇ. ಈ ವಿಷಯ ಗೊತ್ತಾದ ಬಳಿಕ ನನ್ನ ಗಂಡನೇನೂ ನನ್ನನ್ನು ಈ ಬಗ್ಗೆ ಕೇಳಿರಲಿಲ್ಲ. ಕೇವಲ ಎರಡೇ ನೋಟುಗಳನ್ನು ತೆಗೆದುಕೊಂಡು ಉಳಿದದ್ದನ್ನು ಹಾಗೆಯೇ ಇರಿಸಿದ್ದ ಅವರ ಹೆಂಡತಿಯ ಉದಾರತೆಯ ಬಗ್ಗೆ ಅವರಿಗೇ ಆನಂದವಾಗಿರಬಹುದು.

ಎಲ್ಲರೂ ತಯಾರಾಗಿ ಹೆಬ್ಬಾಗಿಲಲ್ಲಿ ಕುಳಿತು ಹರಟುವಷ್ಟು ಹರಟಿದ ಮೇಲೆ ಐದೂವರೆಗೇ ಬರಬೇಕಿದ್ದ ನಮ್ಮ ಗಾಡಿ ಆರು ಗಂಟೆಯಾದರೂ ಬರಲಿಲ್ಲವೆಂದು ನಮಗೆ ಜ್ಞಾನೋದಯ ವಾಯಿತು. ಈ ನಡುವೆ ದೊಡ್ಡ ಮಾವನಿಂದ ತಿಳಿದು ಬಂದ ವಿಷಯವೇನೆಂದರೆ, ಬೆಂಗಳೂರಿನಲ್ಲಿರುವ ಅತ್ತೆಗೂ ಮತ್ತು ಮಂಜಗುಣಿ ತೇರಿಗೂ ಒಂದು ಮರೆಯಲಾರದ ಕಹಿ ನೆನಪೊಂದಿದೆ ಎಂಬುದು. ಮದುವೆಯಾದಾಗಿನಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಆ ಅತ್ತೆಯು ಒಂದೊಮ್ಮೆ ಮಂಜಗುಣಿ ತೇರಿಗೆ ಬಂದಿದ್ದಾಗ ಅವಳ ಹೊಚ್ಚ ಹೊಸ ಬಾಟಾ ಚಪ್ಪಲಿಯನ್ನು ಕಳೆದುಕೊಂಡಿದ್ದಳಂತೆ. ಅದು ಕಪ್ಪು‌ ಮತ್ತು ಕೆಂಪು ಬಾರಿಂದ ಮಾಡಲ್ಪಟ್ಟಿತ್ತು, ಆಗಿನ ಕಾಲದಲ್ಲಿ ಸುಮಾರು ದುಬಾರಿಯ ಚಪ್ಪಲಿಯೇ ಆಗಿತ್ತು ಎಂಬುದು ದೊಡ್ಡ ಮಾವನ ವಿವರಣೆ. ಆ ಘಟನೆಯ ನಂತರ ತೀವ್ರವಾಗಿ ಮನ ನೊಂದ ಅತ್ತೆಯು, ಇನ್ನು ಎಲ್ಲಿ ಕರೆದರೂ ಬರುತ್ತೇನೆ, ಆದರೆ ಮಂಜುಗುಣಿ ತೆರಿಗೆ ಮಾತ್ರ ಬರಲಾರೆ ಎಂದು ಶಪಥ ತೊಟ್ಟಿದ್ದಳಂತೆ. ಆ ದಿನದ ತೆರಿಗೆ ಬಂದ ಸುಮಾರು ಮೂವತ್ತರಿಂದ ಐವತ್ತು ಸಾವಿರ ಜನರೆಲ್ಲರೂ ಕೂಡ ಬೆಂಗಳೂರು ಅತ್ತೆಯ ಬೈಗುಳಕ್ಕೆ ಸಿಕ್ಕಿ ನಲುಗಿದ್ದರೆಂಬುದು ನನಗೆ ಹೊಸ ವಿಷಯವಾಗಿತ್ತು. ಅವಳ ಚಪ್ಪಲಿಯನ್ನು ಇನ್ಯಾರೋ ಹಾಕಿಕೊಂಡು ಹೋಗುತ್ತಿದ್ದುದನ್ನು ನನ್ನ ಎರಡನೇ ಅತ್ತಿಗೆ ನೊಡುತ್ತ ಸುಮ್ಮನೇ ನಿಂತಿದ್ದಳು ಎಂಬುದು ನನ್ನ ಗಂಡನ ಆಪಾದನೆ. ನನ್ನ ಗಂಡನಾದವನೂ ಆಗ ಅದನ್ನೇ ಮಾಡುತ್ತಿದ್ದನೆಂದು ಬೇರೆ ಹೇಳಬೇಕಿಲ್ಲ.

ನಾವೆಲ್ಲ ಓಮಿನಿಗೆ ಕಾಯುತ್ತಿದ್ದರೆ ನನ್ನ ಗಂಡನೂ ಮತ್ತು  ಚಿಕ್ಕ ಮೈದುನನೂ ಹೆಬ್ಬಾಗಿಲಿಗೆ ಹಾಕಿದ್ದ ಜೀರೋ ವೋಲ್ಟೇಜ್ ನ ಬಲ್ಬಿಗೆ ಯಾರು ಮೊದಲು ಬಾಲನ್ನು ತಾಗಿಸುತ್ತಾರೆ ಮತ್ತು ಯಾರು ಹೆಚ್ಚು ಬಾರಿ ತಾಗಿಸುತ್ತಾರೆ ಎಂಬ ಒಂದು ವಿನಾಶಕಾರಿ ಆಟವನ್ನು ಆಡಲು ಮೊದಲು ಮಾಡಿದ್ದರು. ನನ್ನ ಅತ್ತಿಗೆಯರ ಕೈಯಲ್ಲಿ (ಅಲ್ಲ, ಬಾಯಲ್ಲಿ ) ಇಬ್ಬರೂ ಸೇರಿ ಬೈಸಿಕೊಂಡರೂ ಸಹ ಇವರ ಆಟದ ಉತ್ಸಾಹಕ್ಕೇನು ಕುಂದು ಬರಲಿಲ್ಲ. ಅದೇ ಹೊತ್ತಿಗೆ ನಾವು ಬರಲು ಹೇಳಿದ್ದ ಗಾಡಿಯ ಡ್ರೈವರನಿಗೆ ಯಾರೋ ಫೋನ್ ಮಾಡಿ ಕೇಳಿದಾಗ ಅವನು ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಬಂದು ತಲುಪುವನೆಂಬುದಾಗಿ ತಿಳಿಸಿರುವುದು ತಿಳಿದು ಬಂತು. ಅಲ್ಲೇ ಅಂಗಳದಲ್ಲಿ ಚಾಲಿ ಅಡಿಕೆ ಆರಿಸುತ್ತಿದ್ದ ಚಿಕ್ಕ ಮಾವ ಇದನ್ನು ಕೇಳಿದವನು, ಮಂಜಗುಣಿ ತೇರಿನ ಕಾರಣದಿಂದ ಊರಲ್ಲಿ ಆ ದಿನ ನಮ್ಮ ಡ್ರೈವರನಿಗಿರುವ ಬೇಡಿಕೆಯನ್ನು ಅಂದಾಜಿಸಿ, ಇನ್ನೂ ಎಷ್ಟು ತಡವಾಗಬಹುದೆಂದು ಊಹಿಸಿದ. ಊರಲ್ಲಿ ಒಮಿನಿ ಇಟ್ಟುಕೊಂಡು ಬಾಡಿಗೆ ಓಡಿಸುವವರಿಗೆ ದಿನಾಲೂ  ಗಿರಾಕಿಗಳಿರುವುದಿಲ್ಲ. ಹೀಗೆ ಸಂತೆಯೋ, ಜಾತ್ರೆಯೋ, ಹಬ್ಬವೋ ಇದ್ದಾಗ ಮಾತ್ರ ಅವರಿಗೆ ಬೇಡಿಕೆ. ಇಂಥಹ ಅವಕಾಶಗಳಿದ್ದಾಗ ಎಷ್ಟೇ ಒತ್ತಡವಿದ್ದರೂ ಸಹ ಅವರು ಬರಲು ಒಪ್ಪಿಕೊಳ್ಳುತ್ತಾರೆ. ಅವರ ಜೀವನೋಪಾಯವೂ ಅದ ಹಾಗೆ, ಊರಿನ ಜನರಿಗೂ ಸಹಾಯವಾದ ಹಾಗೆ. ಸಂಜೆ ಹೊರಟ ಜನವೆಲ್ಲ ವಾಪಸ್ಸು ಬರುವುದು ರಾತ್ರಿ ಹನ್ನೊಂದು ಹನ್ನೆರಡು ಗಂಟೆಯ ನಂತರವೇ. ಆದಿನ ನಾವು ಹೇಳಿದ ಗಾಡಿಯ ಡ್ರೈವರ್ ಎಷ್ಟು ಟ್ರಿಪ್ಪು ಹೊಡೆಯಲು ಒಪ್ಪಿಕೊಂಡಿದ್ದನೋ ಗೊತ್ತಿಲ್ಲ.

ನಾವು ಹೆಣ್ಣು ಮಕ್ಕಳಾಗಿಯೂ, ಹೇಳಿದ ಸಮಯಕ್ಕೆ ಸರಿಯಾಗಿ ತಯಾರಾಗಿದ್ದು ಮೂಗಿನ ಮೇಲೆ ಬೆರಳಿಡುವ ಸಂಗತಿಯಾದರೆ, ಗಾಡಿ ಬರಲಿಲ್ಲವೆಂದು ಯಾರೊಬ್ಬರೂ ಬೈದುಕೊಳ್ಳದೇ ಕುಳಿತದ್ದು ನಮ್ಮೆಲ್ಲರ ಒಳ್ಳೆಯತನ. ತಡವಾದರೆ ನಮ್ಮ ಅಲಂಕಾರ ಆರಿ ಹೋಗುದೆಂಬ ಆತಂಕವೊಂದೇ ನಮ್ಮಲ್ಲಿತ್ತು. ಗಾಡಿ ಒಂದು ತಾಸಿಗಿಂತ ಹೆಚ್ಚೇನೂ ತಡವಾಗಿ ಬಂದಿರಲಿಲ್ಲ. ಹೊರಡಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಬೆಂಗಳೂರು ಅತ್ತೆಗಾದ ಕಹಿ ಘಟನೆಯ ನೆನಪಾಗಿ ಎಲ್ಲರೂ ಅಪ್ಪಂದಿರ ಅಮ್ಮಂದಿರ ಹಳೆ ಚಪ್ಪಲಿಯನ್ನು ಹುಡುಕಿ, ಅದಕ್ಕಿರುವ ಧೂಳನ್ನು ಒರೆಸುವುದಕ್ಕೆ ಮುಂದಾದರು.

ಅಂತೂ ಗಾಡಿ ಹತ್ತಿ ಕುಳಿತು ಮನೆಯಿಂದ ಸಲ್ಪ ದೂರ ದಾಟಿದ ಮೇಲೆ ಗಾಡಿಯೊಳಗಿದ್ದ ಯುವ ಜನತೆ ತಮ್ಮ ತಮ್ಮ ಮೊಬೈಲ್ ತೆಗೆದು ಸಿಗ್ನಲ್ ಗಾಗಿ ಕಾಯತೊಡಗಿತು. ನನ್ನ ಎರಡನೇ ಅತ್ತಿಗೆಯಂತೂ ತನ್ನ ಮೊಬೈಲ್ ಒಂದೇ ಅಲ್ಲದೇ ತನ್ನ ಆಫೀಸಿನ ಮೊಬೈಲನ್ನೂ ಕೂಡ ಕೈಯಲ್ಲಿಟ್ಟುಕೊಂಡು, ಸಿಗ್ನಲ್ ಬಂದಾಗ ಹಾಟ್ಸ್ಪಾಟ್ ಆನ್ ಮಾಡಿಕೊಡುತ್ತಿದ್ದಳು. ಇಂಟರ್ನೆಟ್ ದಾನ ಮಾಡುವುದೂ ಪುಣ್ಯದ ಕೆಲಸವೇ ಅಲ್ಲವೇ. ಆದರೇನು ಮಾಡೋಣ, ಅವಳ ಪಾಸ್ವರ್ಡ್ ಟೈಪಿಸಿ ನಾವು ಕನೆಕ್ಟ್ ಮಾಡಿಕೊಳ್ಳುವಷ್ಟರಲ್ಲಿ ನಮ್ಮ ಗಾಡಿ ವ್ಯಾಪ್ತಿ ಪ್ರದೇಶದಿಂದ ದೂರ ಹೋಗಿರುತ್ತಿತ್ತು. ಹೀಗಾಗಿ ಅವಳಿಗೆ ಪುಣ್ಯ ಪ್ರಾಪ್ತಿಯಾಗಲಿಲ್ಲ. ಬೆಂಗಳೂರಿನಲ್ಲಿ ೪ಜಿ ಪ್ಯಾಕಿನಲ್ಲೂ ಸರಿಯಾಗಿ ಬರದೇ ಉಪದ್ರವ ಕೊಡುವ ಬಿಎಸ್ಎನ್ಎಲ್ ನೆಟ್ವರ್ಕ್ ಆ ಕಾಡಿನ ದಾರಿಯಲ್ಲಿ ತುಂಬಿ ತುಳುಕಾಡಿಕೊಂಡು ಬರುತ್ತಿತ್ತು. ಆದರೆ ನಮ್ಮ ಬಳಿ ಅದರ ನೆಟ್ ಪ್ಯಾಕ್ ಇಲ್ಲದಿದ್ದ ಕಾರಣ ಹಲ್ಲಿದ್ದಾಗ ಕಡಲೆಯಿಲ್ಲ ಕಡಲೆ ಇದ್ದಾಗ ಹಲ್ಲಿಲ್ಲ ಎಂಬ ಪರಿಸ್ಥಿತಿ ಉಂಟಾಯಿತು. ನೆಟ್ವರ್ಕ್ ಇಲ್ಲದೇ ದಿನಗಟ್ಟಲೆ ಕಳೆಯುವ ರೂಢಿಯಿರುವ ಹುಟ್ಟು ಮಲೆನಾಡಿನವರಾದ ನಮಗೆ ಈ ಕೊರತೆಯೇನೂ ಹೆಚ್ಚು ಬಾಧಿಸಲಿಲ್ಲ. ಈ ಮಧ್ಯೆ ನನ್ನ ಅತ್ತಿಗೆಯರು,ಅದೆಷ್ಟು ಜನ ಪರಿಚಯದವರು ತೇರಿನಲ್ಲಿ ಸಿಗುತ್ತಾರೋ, ಅವರಿಗೆಲ್ಲ ಹಲ್ಲು ಗಿಂಜಿ ಕೈ ಮಾಡಬೇಕಲ್ಲ ಎಂದು  
ಚಿಂತಿಸುತ್ತಿದ್ದರು. ಜಾತ್ರೆ ಪೇಟೆ ಹತ್ತಿರವಾದಂತೆ ನನ್ನ ಗಂಡನ ಹೈಸ್ಕೂಲ್ ಸಹಪಾಠಿ ಹುಡುಗಿಯೊಬ್ಬಳು ಅವರ ಕಣ್ಣಿಗೆ ಬಿದ್ದು, ಪಕ್ಕದಲ್ಲಿ ಹೆಂಡತಿಯನ್ನು ಇಟ್ಟುಕೊಂಡು ಅವಳನ್ನು ಹೇಗೆ ಮಾತನಾಡಿಸುವುದು ಎಂಬ ಗಲಿಬಿಲಿಯಲ್ಲಿದ್ದರು. ಆದರೆ ಹೈಸ್ಕೂಲಿನಲ್ಲಿ ಮೂರು ವರ್ಷ ಜೊತೆಗೇ ಓದುತ್ತಿದ್ದರೂ ಅವಳನ್ನು ಮಾತನಾಡಿಸಲಿಲ್ಲವಲ್ಲ, ಈಗ ಮದುವೆಯಾದ ಮೇಲೆ, ಅದೂ ಹೆಂಡತಿಯು ಪಕ್ಕದಲ್ಲಿರುವಾಗ ಮಾತನಾಡಿಸಿದರೆ  ಏನು ಪ್ರಯೋಜನವೆಂದು ಸುಮ್ಮನಾಗಿರಬೇಕು.

ನಾವು ಒಟ್ಟೂ ಒಂಭತ್ತು ಜನ ಓಮಿನಿ ಇಳಿದವರೇ ಅಲ್ಲೇ ಇದ್ದ ಕೆರೆಗೆ ಹೋಗಿ ಕಾಲು ಒದ್ದೆ ಮಾಡಿ, ಕಣ್ಣಿಗೆ ನೀರು ಒತ್ತಿ, ತಲೆಗೆ ನೀರು ಪ್ರೋಕ್ಷಣೆ ಮಾಡಿ, ಒಂದೆರಡು ಸೆಲ್ಫಿಯನ್ನೂ ತೆಗೆದು ಪಕ್ಕದಲ್ಲೇ ಇದ್ದ ಹನುಮಂತನಿಗೆ ಮುಖ ತೋರಿಸಿ ತೇರು ಇರುವ ಜಾಗಕ್ಕೆ ತಲುಪಿದೆವು. ತೇರ ಬಳಿ ತಲುಪುವಾಗ ಜನವೋ ಜನ. ತೇರು ಹತ್ತಲು ಎಷ್ಟೋ ಜನ ಉದ್ದುದ್ದ ಸರತಿಯಲ್ಲಿ ನಿಂತಿದ್ದರು. ಪಕ್ಕದಲ್ಲೇ ಬಳೆ ಪೇಟೆ. ಬಳೆ ಪೇಟೆಯೆಂದರೆ ಕೇವಲ ಬಳೆಯಷ್ಟೇ ಅಲ್ಲ. ಹೆಂಗಸರ ಆಭರಣ, ಅಲಂಕಾರಕ್ಕೆ ಸಂಬಂಧಿಸಿದ ಎಲ್ಲವೂ ಮಾರಾಟಕ್ಕಿಟ್ಟಿರುವ ಜಾಗ. ಆಟದ ಸಾಮಾನುಗಳ ಅಂಗಡಿ ಅದರ ಪಕ್ಕದಲ್ಲಿಯೇ. ಇನ್ನೊಂದು ಕಡೆ ಸಾಲಾಗಿ ಚಾಟ್ಸ್ ಅಂಗಡಿಗಳು, ಕಬ್ಬಿನ ಹಾಲು, ಜ್ಯೂಸ್ ಅಂಗಡಿಗಳು, ಕಲ್ಲಂಗಡಿ ಹಣ್ಣಿನ ಅಂಗಡಿಗಳು ಕೂಡ ಇದ್ದವು. ನಾವೆಲ್ಲಿ ಈ ಜನಜಂಗುಳಿಯಲ್ಲಿ ಕಳೆದು ಹೋಗಿಬಿಟ್ಟರೆ ಎಂಬ ಹೆದರಿಕೆಯಲ್ಲಿ ಒಬ್ಬರನ್ನೊಬ್ಬರು ಕೈ ಹಿಡಿದು ಹೋಗಬೇಕೆಂದು ನಮಗೆ ನಾವೇ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದೆವು. ಆದರೆ ತೇರು ಹತ್ತಿರವಾದಂತೆ ಫಳ ಫಳನೆ ಹೊಳೆಯುವ, ಹೂವಿನಿಂದ ಲೈಟಿನಿಂದ ಅಲಂಕೃತವಾದ ತೇರು ಕಂಡಾಗ ಫೋಟೋ ತೆಗಯದೇ ಇರಲು ಹೇಗಾದರೂ ಮನಸ್ಸು ಒಪ್ಪುತ್ತದೆ?. ನಮ್ಮ ಯುವ ಜನತೆ ಒಂದೆರಡು ಫೋಟೋ ತೆಗೆಯುವಷ್ಟರಲ್ಲಿಯೇ ಇತ್ತ ಮೂರನೇ ಮಾವ ತನ್ನ ಧರ್ಮಪತ್ನಿ ಯನ್ನೂ ಸೇರಿದಂತೆ ಚಿಕ್ಕ ಮೈದುನನೊಡನೆ ಕಳೆದುಹೋಗಿಬಿಟ್ಟಿದ್ದ. ಅವರು ಕಾಣೆಯಾಗುವುದಕ್ಕೆ ಅವರ ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲದಿರುವುದೇ ಕಾರಣ ಎಂದು ನನಗೆ ಅನ್ನಿಸುತ್ತಿತ್ತು.‌ ಹೌದಲ್ಲವೇ, ಅವರ ಕೈಯಲ್ಲೂ ಸ್ಮಾರ್ಟ್ ಫೋನುಗಳಿದ್ದರೆ ಅವರೂ ನಮ್ಮಂತೆಯೇ ಮೊಬೈಲ್ ನೋಡುತ್ತಲೋ, ಫೋಟೋ ತೆಗೆಯುತ್ತಲೋ ನಮ್ಮೊಟ್ಟಿಗೇ ಇರುತ್ತಿದ್ದರಲ್ಲ,. ಹೀಗೆ ಇದ್ದಕ್ಕಿಂದ್ದಂತೆ ಜಾತ್ರೆಯಲ್ಲಿ ಕಳೆದು ಹೋಗುವ ಸಾಧ್ಯತೆಗಳು ಕಡಿಮೆ ಇರುತ್ತಿತ್ತು.  

ನಾವು ಎಷ್ಟು ದೂರ ಕಣ್ಣು ಹಾಯಿಸಿದರೂ ಕಳೆದು ಹೋದವರ ಪತ್ತೆಯಿಲ್ಲ. ದೇವಸ್ಥಾನದ ಒಳಗಿರಬಹುದು, ಅಥವಾ ಕಾಯಿ ಒಡೆಸುವ ಜಾಗದಲ್ಲಿರಬಹುದು ಎಂದೆಲ್ಲ ಊಹಿಸಿ  ಕುತ್ತಿಗೆಯನ್ನು ಉದ್ದ ಮಾಡಿ ನೋಡಿಯಾಯ್ತು. ಎಲ್ಲಿಯೂ ಕಾಣದೇ ನನ್ನ ಗಂಡನಂತೂ ಅರ್ಧ ಚಂದ್ರಾಕೃತಿಯ ರೀತಿಯಲ್ಲಿ ತಲೆಯ ಹಿಂದಿನ ಭಾಗ ಅರ್ಧ ಬೋಳಾದವರನ್ನು ಹುಡುಕಲು ಶುರು ಮಾಡಿದ್ದರು. ಆ ಜನರ ಸಂಖ್ಯೆಯೆನು ಕಡಿಮೆಯೇ? ಮೂರನೇ ಮಾವನ ಅರ್ಧಚಂದ್ರಾಕೃತಿಯ ಬೋಳುತಲೆ ಅಂತಹ ಅದೆಷ್ಟೋ ಸಹಸ್ರ ಬೋಳುತಲೆಯ ಮಧ್ಯೆ ಸೇರಿ ಹೋಗಿತ್ತು. ಯಾರ ಫೋನಿಗೂ ನೆಟ್ವರ್ಕ್ ಇಲ್ಲದೇ ಹೋದ್ದರಿಂದ ಕರೆ ಮಾಡುವುದಕ್ಕೂ ಸಾಧ್ಯವಿಲ್ಲದಂತ ಅಸಹಾಯಕ ಪರಿಸ್ಥಿತಿ ನಮ್ಮದು.  ಕಡೆಗೆ ಎಲ್ಲೂ ಕಾಣದಾದಾಗ ನಮಗೆ ನಾವೇ ಸಮಾಧಾನ ಮಾಡಿಕೊಂಡೆವು. ಮೂರನೇ ಮಾವನ ಕಲ್ಲಂಗಡಿ ಹಣ್ಣಿನ ಪ್ರೀತಿಯ ಬಗ್ಗೆ ತಿಳಿದೂ ಕೂಡ ಹೀಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ, ಎಲ್ಲೂ ಸಿಗದಿದ್ದರೆ ಅವನನ್ನು ಕಲ್ಲಂಗಡಿ ಹಣ್ಣಿನ ಅಂಗಡಿಯಿದ್ದಲ್ಲೆಲ್ಲ ಹುಡುಕಿದರಾಯ್ತು, ಎಲ್ಲೂ ಸಿಗದವನು ಅಲ್ಲಿ ಖಂಡಿತವಾಗಿಯೂ ಸಿಗಬಲ್ಲ. ಈ ಮಾವನ ಕಲ್ಲಂಗಡಿ ಪ್ರೀತಿಗೆ ನಾವೆಲ್ಲ ಇಟ್ಟ ನಂಬುಗೆಯೇ ನಮ್ಮ ಚಿಂತೆಯನ್ನು ಶಮನ ಮಾಡಿತ್ತು.

ಮೂರನೇ ಮಾವ, ಅತ್ತೆ ಮತ್ತು ಚಿಕ್ಕ ಮೈದುನನನ್ನು ಕಳೆದುಕೊಂಡ ನಾವುಗಳು ಬಲು ಎಚ್ಚರದಿಂದ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಹೆಜ್ಜೆ ಹೆಜ್ಜೆಗೂ ಹಾಜರಿ ಹಾಕಿಕೊಳ್ಳುತ್ತಿದ್ದೆವು. ನಾವಷ್ಟೇ ಅಲ್ಲ, ನಮ್ಮ ಚಪ್ಪಲಿಗಳೂ ಕೂಡ ಕಳೆದುಹೋಗಬಾರದೆಂದು ಮತ್ತು ಬೆಂಗಳೂರು ಅತ್ತೆಗಾದ ಕಹಿ ಘಟನೆ ನಮ್ಮ ಬಾಳಿನಲ್ಲಿ ನಡೆಯಕೂಡದೆಂದು ನಾವು ನಮ್ಮ ಚಪ್ಪಲಿಗಳಿಗೆ ವಿಶೇಷ ಸುರಕ್ಷತೆಯನ್ನು ಕಲ್ಪಿಸಿದ್ದೆವು. ಒಬ್ಬರ ಚಪ್ಪಲಿಯ ಮೇಲೆ ಇನ್ನೊಬ್ಬರ ಚಪ್ಪಲಿಯನ್ನು ಮಗುಚಿ ಹಾಕಿ, ಜೋಡಿ ಚಪ್ಪಲಲ್ಲಿ ಒಂದನ್ನು ಮಾರ ದೂರಕ್ಕೆ ವಿಕಾರವಾಗಿ ಎಸೆದ ಹಾಗೆ ಕಾಣುವಂತೆ, ಅಶಿಸ್ತಿಗೆ ಉದಾಹರಣೆ ಇದುವೇ ಎಂಬಂತೆ ಇಟ್ಟಿದ್ದೆವು. ಯಾವುದೇ ಕಾರಣಕ್ಕೂ ಚಪ್ಪಲಿ ಕಳ್ಳರಿಗೆ ಚಪ್ಪಲಿ ಕದಿಯಲು ಪ್ರಚೋದನೆಯಾಗಬಾರದೆಂದು ಇಷ್ಟೆಲ್ಲ ಉಪಾಯ.

ಮಂಜಗುಣಿಯ ದೇವರಾದ ವೆಂಕಟರಮಣನನ್ನು ಕಾಣಲು ದೇವಸ್ಥಾನದ ಒಳಹೊಕ್ಕು ದೇವರಲ್ಲಿ ಮೂರನೇ ಮಾವ ಮತ್ತು ಜೊತೆಯಲ್ಲಿ ಕಳೆದು ಹೋದವರ ಸುರಕ್ಷಿತ ವಾಪಸಾತಿಗೆ ಅರ್ಜಿ ಹಾಕಿದ್ದಾಯತ್ತು.‌ ಇಲ್ಲಿಯ ವೆಂಕಟರಮಣನಿಗೆ ಚಿಕ್ಕ ತಿರುಪತಿ ಎಂದು ಕರೆಯುತ್ತಾರಂತೆ. ಚಿಕ್ಕವನಾದರೇನು, ನಮ್ಮ ಬೇಡಿಕೆಯೂ ಚಿಕ್ಕದೇ ಅಲ್ಲವೇ? ಹಾಗಾಗಿ ಅರ್ಜಿ ಸ್ವೀಕಾರವಾಗಿರಬಹುದು. ರಾತ್ರಿಯಾಗಿದ್ದರಿಂದ ಮತ್ತು ತುಂಬಾ ಜನರಿದ್ದ ಕಾರಣಕ್ಕಾಗಿ ಅಲ್ಲಿಯ ಶಿಲ್ಪ ಕಲೆಗಳನ್ನು ನೋಡುವ ಹಾಗೂ ಅ ದೇವಸ್ಥಾನದ ಆಯಕಟ್ಟುಗಳ ಬಗ್ಗೆ ಅಂದಾಜಿಸುವ ಅವಕಾಶವಾಗಲಿಲ್ಲ. ಕಳೆದು ಹೋಗುವ ಭಯ, ಕಳೆದವರಿಗಾಗಿ ಹುಡುಕಾಟ, ನಮಗಿಂತ ಹೆಚ್ಚಾಗಿ ನಮ್ಮ ಮೊಬೈಲು ಪರ್ಸುಗಳ ಕಾಳಜಿಯಲ್ಲಿ ದೇವಸ್ಥಾನದಲ್ಲಿದ್ದೇವೆಂಬ ಭಾವವೂ ಉಂಟಾಗಲಿಲ್ಲ.

ಹೊರಗಡೆಯ ಪ್ರಾಂಗಣದಲ್ಲಿ ದೇವರ ಪ್ರಸಾದವೆಂದು ಅತ್ರಾಸ, ಪಂಚಕಜ್ಜಾಯ, ಕಲ್ಲುಸಕ್ಕರೆ, ಭಸ್ಮ, ಕುಂಕುಮ, ತೀರ್ಥ, ಒಣದ್ರಾಕ್ಷಿ, ಖರ್ಜೂರ ಎಲ್ಲವನ್ನು ಒಳಗೊಂಡ ಸರ್ವ ಪ್ರಸಾದವನ್ನು ಮಾರಾಟಕ್ಕಿಟ್ಟಿರುತ್ತಾರೆ. ಎಂಥ ನಾಸ್ತಿಕರಾದರೂ ಸಹ ಈ ತರದ ಪ್ರಸಾದಕ್ಕಾಗಿಯಾದರೂ ದೇವಸ್ಥಾನಕ್ಕೆ ಬರಬೇಕು. ನಾವು ಸರತಿಯಲ್ಲಿ ಕೈಯೊಡ್ಡಿ ನಿಂತಾಗ, ಮಂಜುಗುಣಿ ವೆಂಕಟರಮಣನ ಪ್ರಸಾದವೋ ಎಂಬಂತೆ ಕಳೆದು ಹೋದ ಮೂವರೂ ಕೂಡ ಪ್ರಸಾದ ಕೊಡುವ ಕೌಂಟರಿನಲ್ಲಿ ಕಣ್ಣಿಗೆ ಬಿದ್ದು ನಮ್ಮ ಕಣ್ಣುಗಳಿಗೆ ಆನಂದವನ್ನುಂಟು ಮಾಡಿದರು. ಅಂತೂ ಚಿಕ್ಕ ತಿರುಪತಿಯು ನಮ್ಮನ್ನು ದೊಡ್ಡ ಗಂಡಾಂತರದಿಂದ ಪಾರುಮಾಡಿದನೆಂದು ಆನಂದಾಶ್ರುಗಳನ್ನು ಕಣ್ಗಳಲ್ಲಿ ತುಂಬಿಸಿಕೊಂಡೆವು.

ಎಲ್ಲರೂ ಒಟ್ಟಾಗಿ ಹೊರಗೆ ಬಂದ ಮೇಲೆ ತೇರು ಹತ್ತುವುದೋ ಬೇಡವೋ ಎಂಬ ಚರ್ಚೆ ಸುಮಾರು ಹೊತ್ತು ನಡೆಯಿತು. ನನ್ನನ್ನು ಹೊರತಾಗಿ ಎಲ್ಲರೂ ಈ ಮೊದಲು ತೇರು ಹತ್ತಿದವರೇ. ಬೇಗ ತೇರು ಹತ್ತಿ ದೇವರನ್ನು ನೋಡುವುದಾದರೆ ತಲೆಗೆ ಐವತ್ತು ರೂಪಾಯಿಯಂತೆ ಟಿಕೆಟ್ ಪಡೆದೇ ಹೋಗಬೇಕಿತ್ತು. ಇಲ್ಲವಾದರೆ ಉದ್ದ ಸರತಿ ಸಾಲಲ್ಲಿ ನಿಲ್ಲಬೇಕು. ಕಡೆಗೂ ತೇರು ಹತ್ತುವುದೆಂದು ತೀರ್ಮಾನವಾಗಿ ತನ್ನ ಹೆಂಡತಿಗೂ ಸೇರಿದಂತೆ ಉಳಿದೆಲ್ಲರಿಗೂ ತೇರು ಹತ್ತಿಸಿಯೇ ಬಿಡುವೆನೆಂದು ನನ್ನ ಗಂಡ ಟಿಕೆಟ್ ಪಡೆದೇ ಬಿಟ್ಟರು. ದೇವರಿಗೆ ಲಂಚ ಕೊಟ್ಟು ದರ್ಶನ ಪಡೆಯುವವರ ಸಂಖ್ಯೆಯೂ ಕಡಿಮೆಯೇನಲ್ಲ. ಹಾಗಾಗಿ ಅಲ್ಲಿಯೂ ಒಂದು ಸಣ್ಣ ಸಾಲಿನಲ್ಲಿ ನಿಲ್ಲಬೇಕಾಯಿತು. ಅಷ್ಟು ಹತ್ತಿರದಿಂದ ಅಷ್ಟು ಭವ್ಯವಾದ ತೇರನ್ನು ಇದೇ ಮೊದಲ ಬಾರಿಗೆ ನಾನು ನೋಡಿದ್ದು. ಬಣ್ಣದ ಕಾಗದಗಳಿಂದ,ಮಿರಿ ಮಿರಿ ಮಿಂಚುವ ಲೈಟುಗಳಿಂದ ಅಲಂಕೃತವಾದ ತೇರು. ನಾನಾ ಬಗೆಯ ಹೂವಿನ ಮಾಲೆಗಳನ್ನು ಹೊತ್ತು ಕಂಗೊಳಿಸುತಿದ್ದ ತೇರನ್ನು ನೋಡುವುದೇ ಸೊಗಸು. ಸುಮಾರು ಮೆಟ್ಟಿಲುಗಳನ್ನು ಹತ್ತಿ ತೇರೊಳಗೆ ಹೋದರೆ ಒಳಗಿರುವ ಚಿಕ್ಕ ಜಾಗದಲ್ಲಿ ಜನ ಜಂಗುಳಿ. ದೇವರಿಗೆ ರಕ್ಷಣೆ ಕೊಡಲೆಂಬಂತೆ ಅಲ್ಲಿಯೂ ಎರಡು ಪೋಲೀಸರು ಕಾವಲು ನಿಂತಿದ್ದರು. ಅಷ್ಟು ದೂರದಿಂದ ಬಂದು, ಸರತಿಯಲ್ಲಿ ನಿಂತಿದ್ದರೂ ದೇವರ ಮುರ್ತಿಯನ್ನು ಒಂದು ನಿಮಿಷವೂ ನೋಡಲಿಕ್ಕಾಗಲಿಲ್ಲವೆಂದ ಮೇಲೆ ಇನ್ನು ದೇವರ ಬಳಿ ಕಷ್ಟ ಸುಖ ಹೇಳಿಕೊಳ್ಳುವುದೆಲ್ಲಿಂದ ಬಂತು?ಎಲ್ಲಾ ಪ್ರಸಿದ್ಧ ದೇವಸ್ಥಾನಗಳಲ್ಲಿಯೂ ಇಷ್ಟೇ ಕತೆಯೇ ಅಲ್ಲವೇ? ಅದರಲ್ಲೂ ಇಂತಹ ವಿಶೇಷ ದಿನಗಳಲ್ಲಿ ಹೋದರೆ ಮನಸ್ಸಿಗೆ ದೊರಕುವ ಶಾಂತಿಗಿಂತ ನೂಕುನುಗ್ಗಲಿನಿಂದಾಗುವ ತೊಂದರೆಯೇ ಹೆಚ್ಚು.  ಈ ಗೌಜಿಯಲ್ಲಿ ಹೇಗೋ ದಾಟಿಕೊಂಡು ತೇರಿನಲ್ಲಿ ಕುಳ್ಳಿರಿಸಿದ ದೇವರನ್ನು ದರ್ಶನ ಮಾಡುವ ಅವಕಾಶಮಾಡಿಕೊಂಡೆವು.
ತೇರಿಳಿದು ಕೆಳಗೆ ಬಂದರೆ ಹೆಂಡತಿಯನ್ನು ತೇರು ಹತ್ತಿಸಿದೆನೆಂಬ ಖುಷಿ ನನ್ನ ಗಂಡನ ಮುಖದಲ್ಲಿ ಕಾಣುತ್ತಿತ್ತು.

ಕೆಳಗಿನಿಂದ ದೇವರಿಗೆ ಕಡಲೆ ಬೀಜವನ್ನು ಎಸೆದು, ದೇವರಿಗೆ ಸಂಬಂಧಿಸಿದ ಕಾರ್ಯಕ್ರಮಗಳೆಲ್ಲ ಮುಗಿಯಿತೆಂದಾದ ಮೇಲೆ  ನಮಗೆ ನಿಜವಾದ ಜಾತ್ರೆ ಶುರು. ತುಂಬಾ ಸುರಕ್ಷಿತವಾಗಿರಿಸಿದ್ದ ನಮ್ಮ ಚಪ್ಪಲಿಗಳನ್ನು ನಾವೇ ಹಾಕಿಕೊಂಡು ಜಾತ್ರೆ ಪೇಟೆಗೆ ಹೊರಟೆವು. ನಮ್ಮ ಮನೆಯಿಂದ ಹೋದವರಲ್ಲಿ ಹೆಣ್ಣುಮಕ್ಕಳೇ  ಬಹುಸಂಖ್ಯಾತರಾದ್ದರಿಂದ ಬಳೆ ಪೇಟೆಗೇ ಮೊದಲು ಹೋಗಬೇಕಾಯ್ತು. ನನ್ನ ಮೂರನೇ ಅತ್ತೆಯು ಮಕ್ಕಳ ಮದುವೆಗೂ ಸೇರಿಸಿ ಬಳೆ ತೆಗೆದುಕೊಂಡಳೆಂದು ತೋರುತ್ತದೆ. ಬಳೆ ಪೇಟೆಯಲ್ಲಿನ ಧೂಳನ್ನು ತಡೆಯಲು ಆಗಲೇ ನೆಗಡಿಯಾಗಿದ್ದ ಮೂರನೇ ಅತ್ತಿಗೆಯು ಕರ್ಚೀಫಿನಲ್ಲಿ ಮೂಗು ಮುಚ್ಚಿಕೊಂಡೇ ಬರುತ್ತಿದ್ದಳು. ಈ ನಡುವೆ ರೊಚ್ಚಿಗೆದ್ದ ಗಂಡಸರು ತಾವೇನೂ ಕಡಿಮೆಯಿಲ್ಲ ಎಂದು ಲೇಸರ್ ಲೈಟ್, ಪಿಂಗ್ ಪಾಂಗ್ ಬಾಲ್, ಮತ್ತು ಗುಳ್ಳೆ ಮಾಡುವ ನೊರೆಯನ್ನು ಖರೀದಿಸಿದರು. ಮತ್ತು ಅದನ್ನು ಹೆಣ್ಣುಮಕ್ಕಳಿಗೆ ಆಡಲು ಕೊಡುವುದಿಲ್ಲ ಎಂದು ನನ್ನ ಗಂಡನು ಕಂಡಿಷನ್ ಹಾಕಿಯೂ ಆಯ್ತು. ನಾವು ಯುವತಿಯರು ಕಿವಿಗೆ ಹಾಕುವ ಓಲೆ, ಕತ್ತಿಗೆ ಹಾಕಲು ಸರ, ಕೈಗೆ ಹಾಕಲು ಬಳೆ ಹೀಗೆ ಸುಮಾರು ವೀಕ್ಷಣೆ ಮತ್ತು ಖರೀದಿ ನಡೆಸಿ ಗಂಡಸರ ಕೆಂಗಣ್ಣಿಗೆ ಗುರಿಯಾಗುವುದರಲ್ಲಿದ್ದೆವು. ಆದರೂ ನಮಗೆ ಅಷ್ಟೇನು ಶಾಪಿಂಗ್ ಮಾಡುವ ಉಮೇದು ಉಂಟಾಗಲಿಲ್ಲ. ಮಂಜುಗುಣಿ ತೇರಿನ ಬಳೆ ಪೇಟೆ ಚಿಕ್ಕದಾಗಿ ಕಂಡಿತ್ತು. ಎಷ್ಟೆಂದರೂ  ನಾವು ಶಿರಸಿ, ಯಲ್ಲಾಪುರ ಜಾತ್ರೆಯಂತ ದೊಡ್ಡ ದೊಡ್ಡ ಜಾತ್ರೆ ಗಳನ್ನು ನೋಡಿದವರಲ್ಲವೇ?

ಇಷ್ಟರಲ್ಲಿಯೇ ನಮಗೆಲ್ಲರಿಗೂ ಹಸಿವಾಗಿ ಚಾಟ್ಸ್ ತಿನ್ನಲೇಬೇಕೆಂದು ಸರ್ವಾನುಮತದಿಂದ ಎಲ್ಲರೂ ನಿರ್ಧರಿಸಿ ಅಲ್ಲಿಯೇ ಇದ್ದ sweet corn ಭಕ್ಷಿಸಿದೆವು. ಅಷ್ಟಕ್ಕೇ ಎಲ್ಲಿ ಸಾಲುತ್ತದೆ? ಸಾಲುಸಾಲಾಗಿ ನಿಂತ ಐಸ್ಕ್ರೀಮಿನ ಅಂಗಡಿಗಳು ಕಣ್ಣಿಗೆ ಬೀಳದೇ ಇರುತ್ತವೆಯೇ. ಯಾವ ಅಂಗಡಿಯಲ್ಲಿ ಯಾವ ಐಸ್ ಕ್ರೀಮ್ ತಿನ್ನಬೇಕೆಂಬ ಅಯ್ಕೆಯನ್ನು ಗಂಡಸರಿಗೇ ಬಿಟ್ಟುಕೊಟ್ಟೆವು. ಅವರೇನೂ ಆಯ್ಕೆ ಮಾಡುವಲ್ಲಿ ಹೆಂಗಸರಿಗಿಂತ ಕಮ್ಮಿಯಿರಲಿಲ್ಲ. ಒಬ್ಬರು ಕರಾವಳಿ ಎಂದರೆ ಇನ್ನೊಬ್ಬರು ಹಿಮಾಲಯ ಎಂದು. ಹಿಮಾಲಯ ಚೆನ್ನಾಗಿರುವುದಿಲ್ಲವೆಂದು ಇನ್ನೊಬ್ಬರು ಹೇಳಿದ್ದಕ್ಕೆ ಅದುವೂ ಬೇಡವೆಂದಾಯ್ತು. ಕಡೆಗೆ ನನ್ನ ಮೈದುನನ ಆಯ್ಕೆಯಂತೆ ಪಂಚಮಿ ಐಸ್ ಕ್ರೀಮ್ ಅಂಗಡಿಗೆ ಹೋಗಿ ಗಡಿ ಬಿಡಿ ಮಾಡಿಕೊಳ್ಳದೇ  ಗಡ್ ಬಡ್ ತಿಂದೆವು. ತಿಂದ ಪ್ರೂಫಿಗಾಗಿ ಸೆಲ್ಫಿಯನ್ನೂ ತೆಗೆದುಕೊಂಡೆವು. ಅಷ್ಟಕ್ಕೇ ಮುಗಿಯಲಿಲ್ಲ. ತಿನ್ನುವುದಕ್ಕೆಂದೇ ತೇರಿಗೆ ಬಂದವರ ಹಾಗಾಗಿತ್ತು ನಮ್ಮ ಕತೆ. ಒಂದಷ್ಟು ಜನ ಮಸಾಲೆಪುರಿಯನ್ನೂ ಒಂದಷ್ಟು ಜನ ಪಾನಿ ಪುರಿಯನ್ನೂ, ತಿಂದೆವು. ಇಷ್ಟಾದ ಮೇಲೆ ಮೂರನೇ ಮಾವನ ಬಯಕೆಯನ್ನು ಪೂರೈಸದಿದ್ದ ಮೇಲೆ ಅದೆಂತ ನ್ಯಾಯ? ಕಲ್ಲಂಗಡಿ ಹಣ್ಣಿನ ಅಂಗಡಿಗಳು ಮೂರನೇ ಮಾವನನ್ನು ಕೈಬೀಸಿ ಕರೆಯುತ್ತಿದ್ದವು. ಅದಕ್ಕಾಗಿ ಒಂದು ಅಂಗಡಿಗೆ ಹೋದರೆ ಅಲ್ಲಿ ಹಣ್ಣು ಕೊಡುವ ಹುಡುಗ ನೋಡಲು ಚೆನ್ನಾಗಿರಲಿಲ್ಲ ಎಂದು ಈ ಮಾವನ ಆರೋಪ. ನೋಡಲು ಚೆನ್ನಾಗಿರುವ ಕಲ್ಲಂಗಡಿ ಹಣ್ಣನ್ನು ಮಾರುವ ಹುಡುಗನ್ನು ಹುಡುಕಿಕೊಂಡು ಹೋಗಿ ಅಲ್ಲಿ ಕಲ್ಲಂಗಡಿ ತಿಂದರೆ, ಆ ಹಣ್ಣು ಸಿಹಿಯೇ ಇರಲಿಲ್ಲ. ಹಣ್ಣಿನ ಸಿಹಿ ಮಾರುವವನ ಮುಖದಲ್ಲಿರುತ್ತದೆಯೇ? ಜಾತ್ರೆ ಪೇಟೆಯಲ್ಲಿ ಈ ಜ್ಞಾನೋದಯವೂ ಮಾವನಿಗೆ ಆಗಿರಬೇಕು.. ನೆಗಡಿಯೆಂದು ಬಳೆಪೇಟೆಯಲ್ಲಿ ಮೂಗು ಮುಚ್ಚಿಕೊಂಡು ಬರುತ್ತಿದ್ದ ನನ್ನ ಮೂರನೇ ಅತ್ತಿಗೆ ನೆಗಡಿ ಮತ್ತು ಕರ್ಚೀಫನ್ನು ಮರೆತು ಎಲ್ಲವನ್ನು ಸ್ವಾಹಾ ಮಾಡಿದ್ದಳು. ಹೊಟ್ಟೆಯಲ್ಲಿ ಸರಿಯಾಗಿ ಅಕ್ಕಚ್ಚು ಆಗಿದೆ ಎಂದೆನ್ನಿಸಿದರೂ ಕೊನೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವುದನ್ನು ಮರೆಯಲಿಲ್ಲ. ಜಾತ್ರೆಯ ಧೂಳೂ, ಜನಜಂಗುಳಿಯೂ ಸಾಕೆಂದೆನಿಸಿ ಹೊರಡೋಣ ಎಂದು ನಿರ್ಧರಿಸಿದೆವು. ಹೊಟ್ಟೆ ಹಾಳಾಗುವಷ್ಟು ತಿಂದಿದ್ದೆವು.  ರಾತ್ರಿ ಹನ್ನೊಂದು ಗಂಟೆಯೂ ದಾಟಿತ್ತು.

ನಮ್ಮ ಡ್ರೈವರನನು ಆ ಉದ್ದನೆಯ ಟ್ರಾಫಿಕ್ ಜಾಮನ್ನು ಭೇದಿಸಿ ನಾವಿರುವ ಪಾರ್ಕಿಂಗ್ ಜಾಗಕ್ಕೆ ಬಂದು ಮತ್ತೆ ನಮ್ಮನ್ನು ಮನೆಗೆ ಬಿಡಲು ಹೊರಟ. ಓಮಿನಿ ಹತ್ತಿ ಗಾಡಿ ಹೊರಟು ಕೆಲವೇ ನಿಮಿಷಗಳಾಗಿರಬೇಕು. ಮೂರನೇ ಮಾವ ಡ್ರೈವರನ ಪಕ್ಕದ ಸೀಟಿನ ಕಿಟಕಿಯ ಬಳಿ ಕುಳಿತಿದ್ದ. ನೆನೆದವರ ಮನದಲ್ಲಿ ಎಂಬಂತೆ ಕಲ್ಲಂಗಡಿ ಮಾರುವವನೊಬ್ಬ ಇವನನ್ನು ಕರೆದು ಕಲ್ಲಂಗಡಿ ಬೇಕೆ ಎಂದು ಕೇಳಬೇಕೇ? ಎಷ್ಟಂದರೂ ಹೋಗುತ್ತಿದ್ದ ಗಾಡಿಯದು. ಅವನಿಗೂ ವ್ಯಾಪಾರವಾಗಬೇಕಿತ್ತು. ಇವನಿಗೂ ಕಲ್ಲಂಗಡಿ ಬೇಕಿತ್ತು. ಕ್ಷಣಾರ್ಧದಲ್ಲಿ ಐವತ್ತು ರೂಪಾಯಿಗೆ ಕಲ್ಲಂಗಡಿಯನ್ನು ಚೌಕಾಸಿ ಮಾಡಿ ಕೊಂಡುಕೊಂಡೇ ಬಿಟ್ಟ. ಎಲ್ಲರೂ ಮೂರನೇ ಮಾವನ ಈ ಅದೃಷ್ಟಕ್ಕೆ ಆಶ್ಚರ್ಯ ಪಟ್ಟೆವು. ನಮ್ಮ ಬಯಕೆಗಳು ಹೀಗೆ ಅನಿರೀಕ್ಷಿತವಾಗಿ ಕೈಗೆ ಸಿಕ್ಕರೆ ಎಷ್ಟು ಖುಷಿಯಲ್ಲವೇ? ಜೀವನದಲ್ಲಿ ಅತೀ ಮಹತ್ತರವಾದದ್ದೇನೋ ಬಯಸಿ ಪಡೆಯುವುದಕ್ಕಿಂತ ಸಣ್ಣ ಪುಟ್ಟದ್ದನ್ನು ಬಯಸಿ ಅವಗಳನ್ನೇ ಮನಸಾರೆ ಆನಂದಿಸುವ ಮನೋಧರ್ಮವೇ ದೊಡ್ಡದೆಂದೆನಿಸಿತು.

ಇಷ್ಟೆಲ್ಲ ಅದ ಮೇಲೆ ಗಾಡಿಯಲ್ಲಿ ನಮ್ಮ ಅಂತ್ಯಾಕ್ಷರಿ ಶುರು. ಅಂತ್ಯಾಕ್ಷರಿಯ ನಿಯಮದಂತೆ ನಾಲ್ಕಾರು ಹಾಡು ಹಾಡಿದ್ದೇವೇನೋ. ಅನಂತರ ನನ್ನ ಅತ್ತಿಗೆಯರೂ, ನನ್ನ ಗಂಡನೂ   ಸ್ವರಚಿತವಾದ, ಅನರ್ಥಕವಾದ, ಆಶುಕವಿತೆಗಳ ಜುಗಲ್ ಬಂದಿ ನಡೆಸಲು ಶುರು ಮಾಡಿದ್ದರು. ರೇವಣಕಟ್ಟೆಗೆ ಬರುವವರೆಗೂ ಇದು ಮುಂದುವರೆಯಿತು. ನಾನಂತೂ ನಕ್ಕು ನಕ್ಕು ಸುಸ್ತಾಗಿದ್ದೆ. ಮುಂದೆ ಕುಳಿತ ಚಿಕ್ಕ ಮೈದುನ ಹಾಗೂ ಮೂರನೇ ಮಾವ ಮನೆಗೆ ಬರುವವರೆಗೂ ತಾವೇನೂ ಕೇಳಿಸಿಕೊಳ್ಳಲಿಲ್ಲ ಎಂಬಂತೆ ಇದ್ದರು. ಮನೆಗೆ ಬಂದು ಲೈಟಿನ ಬೆಳಕಿಗೆ ನೋಡಿದರೆ ನನ್ನ ನೀಲಿ ಪ್ಯಾಂಟು ಕೆಂಪು ಬಣ್ಣವಾಗಿತ್ತು. ನನ್ನ ಕಪ್ಪು ಬಣ್ಣದ ಬ್ಯಾಗು ಧೂಳಿನಲ್ಲಿ ಮುಳುಗೇಳಿಸಿದಂತಿತ್ತು. ತಲೆಗೆ ಮೆಹಂದಿ ಹಚ್ಚಿದಂತಾಗಿತ್ತಿರಬಹುದು. ಇವೆಲ್ಲ ಜಾತ್ರೆ ಪೇಟೆಗೆ ಹೋಗಿ ಬಂದಿದ್ದರ ಕುರುಹುಗಳು.

ಮಾರನೇ ದಿನ ಕತೆ ಹೇಳಲು ನನ್ನ ಗಂಡನಿಗೆ ತೇರಿನದೇ ಸುದ್ದಿ. ಮೂರನೇ ಮಾವ ಪಿಂಗ್ ಪಾಂಗ್ ಬಾಲ್ ಆಡಲು ಬಾರದೇ ಕೈಚೆಲ್ಲಿದ. ನಾನು ನನ್ನ ಅತ್ತಿಗೆಯರು ನನ್ನ ಗಂಡನು ತಂದ ನೊರೆ ಗುಳ್ಳೆಯನ್ನು ಕಸಿದುಕೊಳ್ಳಲು ಪಡಬಾರದ ಕಷ್ಟ ಪಟ್ಟೆವು. ತೇರಿನ ಫೋಟೋ ವಾಟ್ಸಪ್ಗೆ ಹಾಕಲು ನೆಟ್ವರ್ಕ್ ಗಾಗಿ ಬೆಟ್ಟ ಹತ್ತಿದ್ದಾಯ್ತು. ಗುಳ್ಳೆ ಒಡೆಯುವ ವೀಡಿಯೋ ವನ್ನು ವಾಟ್ಸಪ್ ಸ್ಟೇಟಸ್ ಗೆ ಹಾಕಲು ನನ್ನ ಚಿಕ್ಕ ಅತ್ತಿಗೆ ಪಟ್ಟ ಕಷ್ಟ ಅಂತಿಂತದ್ದಲ್ಲ. ಆದರೂ ಪಕ್ಕದ ಮನೆಗೆ ರಾತ್ರಿಯಲ್ಲಿ ಲೇಸರ್ ಲೈಟ್ ಬಿಡುವ ಕೆಲಸವೊಂದು ಉಳಿದೇ ಹೋಯಿತು. ಮಂಜಗುಣಿಯ ಪ್ರಸಾದ ನಮ್ಮ ಮನೆಗಷ್ಟೇ ಅಲ್ಲದೇ ನನ್ನ ತವರಿನ ಮನೆಯವರೆಗೂ ತಲುಪಿತು. ಅಲ್ಲಿಂದ ಇನ್ನೆಲ್ಲೆಲ್ಲಿ ಸಾಗಣೆಯಾಗಿದೆಯೋ ಗೊತ್ತಿಲ್ಲ.

ತೇರಿಗೆ ಹೋಗಿ ಬಂದವರ ನೆನಪುಗಳು, ತೇರಿಗೆ ಹೋಗುವವರ ಉಮೇದು, ಹೋದಾಗಿನ ಸಂಭ್ರಮ, ಹೋಗಿ ಬಂದವರ ಅನುಭವ ಎಲ್ಲವೂ ವಿಶೇಷ. ಒಬ್ಬರೇ ಇಬ್ಬರೇ ಹೋದರೆ ಅದರಲ್ಲೇನು ಛಂದ? ಜೊತೆಗೆ ಮನೆಯವರೆಲ್ಲ ಇರಬೇಕು, ಬಂದರೆ ನೆಂಟರೂ ಬೇಕು, ಹತ್ತಿರ ಎನಿಸುವಂತೆ ಖುಷಿ ಪಡಿಸುವ ಖುಷಿ ಪಡುವ ಜನವಿರಬೇಕು. ಒಬ್ಬರಿಗೊಬ್ಬರು ಗೇಲಿ ಮಾಡಿಕೊಂಡು ಆನಂದಿಸಬೇಕು. ಆಗ ತಾನೇ ಜಾತ್ರೆಯ ಗೌಜಿ, ಅಲ್ಲಿನ ಧೂಳು ಎಲ್ಲವೂ ಇಷ್ಟವಾಗುವುದು, ರುಚಿಯಿಲ್ಲದಿದ್ದರೂ ಕಂಡಿದ್ದೆಲ್ಲ ತಿನ್ನುವುದು?  ನಾವಂತೂ ಮಂಜಗುಣಿ ತೇರನ್ನು ಮನಸಾ ಆನಂದಿಸಿದ್ದೇವೆ. ಮುಂದಿನ ಬಾರಿ ನೀವೆಲ್ಲರೂ ಬನ್ನಿ. ಖುಷಿ ಪಡೋಣ‌.

~ಸುಮನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ