ಪ್ರಸ್ತುತ ಸಾಮಾಜಿಕಮಾಧ್ಯಮಗಳಲ್ಲಿ ಭಾಷೆಯ ಕುರಿತು ಎರಡು ಬಗೆಯಲ್ಲಿ ಚರ್ಚೆಗಳಾಗುತ್ತಿವೆ. ಕನ್ನಡದಲ್ಲಿ ಮಹಾಪ್ರಾಣಗಳನ್ನು ಬಳಸಬಾರದು, ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಬೇಕು ಎಂಬ "ಎಲ್ಲರ ಕನ್ನಡ" ಎಂಬುದು ಒಂದು ವಾದ. ಇನ್ನೊಂದು- ಕನ್ನಡದಲ್ಲಿ ಬಳಸುವ ಎಷ್ಟೋ ಶಬ್ದಗಳು ತಪ್ಪಾಗಿ ಬಳಸಲ್ಪಡುತ್ತಿವೆ, ಅವುಗಳ ಸರಿಯಾದ ರೂಪ ಹೇಗೆ ಎಂಬುದನ್ನು ವಿವರಿಸುವ ಚರ್ಚೆ. ಇದರಲ್ಲಿ ಮೊದಲನೆಯ ಎಲ್ಲರ ಕನ್ನಡ ಎಂಬ ವಾದ- ಅಥವಾ ಎಲ್ಲರ ಕನ್ನಡ ಎಂದು ಕನ್ನಡವನ್ನು ಸಂಕೋಚಿಸುತ್ತಿರುವ ಅವರ ಆಂದೋಲನ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಹಾನಿಕಾರಕ ಎಂಬುದಂತೂ ಸುವಿದಿತ. ಯಾವ ದುರುದ್ದೇಶದಿಂದ ಅದನ್ನು ಅವರು ಸ್ವೀಕರಿಸಿದ್ದಾರೋ ಗೊತ್ತಿಲ್ಲ. ಕನ್ನಡವನ್ನು ಕಲಿಯಲಾಗದ ಅಜ್ಞಾನವೋ ಅಥವಾ ಸಂಸ್ಕೃತದ್ವೇಷಿಮನಃಸ್ಥಿತಿಯೋ ಈ ಎಲ್ಲರ ಕನ್ನಡವೆಂಬ ಮೂರ್ಖರ ಗುಂಪಿಗೆ ಬೆನ್ನೆಲುಬಾಗಿರಬಹುದು. (ಮೂರ್ಖ ಎಂದು ಏಕೆ ಹೇಳಿದೆನೆಂದರೆ- ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬ ವಾದವನ್ನು ಮಾಡುವವರಿಗೆ, ಕಣ್ಣುಗಳನ್ನು ಮುಚ್ಚಿಕೊಂಡು ಸೂರ್ಯನೇ ಇಲ್ಲ ಎಂದು ಹಗಲಿಡೀ ಪರಿತಪಿಸುವವರಿಗೆ ಇನ್ನೇನು ಹೇಳಬೇಕೋ ಗೊತ್ತಿಲ್ಲ. ಇವರನ್ನು ಬದಲಾಯಿಸಲು ಸಾಧ್ಯವಿಲ್ಲ. ಭರ್ತೃಹರಿ ಕೂಡ ಹೇಳಿದ್ದಾನಲ್ಲ- ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ ಎಂದು. ಹಾಗಾಗಿ ಇದೇ ಸೂಕ್ತ ಪದವೆನಿಸಿತು. ಅಥವಾ ಧೂರ್ತರು ಎಂದು ಬೇಕಾದರೂ ಇಟ್ಟುಕೊಳ್ಳಿ.) ಎಲ್ಲರ ಕನ್ನಡದ ದೋಷಗಳನ್ನೇ ಮತ್ತೆ ಚರ್ಚಿಸುವುದಾಗಲೀ ವಿರೋಧಿಸುವುದಾಗಲೀ ನನ್ನ ಮೂರ್ಖತೆಯಾದೀತು. ಅಲ್ಲದೇ ಈ ವಿಷಯದಲ್ಲಿ ಸರಿ ಮತ್ತು ತಪ್ಪುಗಳ ನಡುವೆ ತುಂಬಾ ಅಂತರ ಇರುವುದರಿಂದ ಎಲ್ಲ ಜನರಿಗೂ ವಿವೇಚಿಸುವುದು ಕಷ್ಟವಿಲ್ಲ -ಎಂದು ಅದರ ಕಡೆ ಹೋಗದೇ ಇನ್ನೊಂದು ವಿಷಯದ ಕಡೆ ಬರುತ್ತಿದ್ದೇನೆ. ಹುಲಿಯ ಚರ್ಮ ಹೊದೆದುಕೊಂಡ ಇಲಿಯನ್ನು ಇಲಿ ಎಂದು ಗುರುತಿಸಬಹುದು. ಆದರೆ ಬೇರೆ ಪ್ರಾಣಿಯೊಂದು ಹುಲಿಯ ಚರ್ಮ ಧರಿಸಿಕೊಂಡ ಕಥೆ ನಮಗೆಲ್ಲ ಗೊತ್ತೇ ಇದೆ.
ಈ ಇನ್ನೊಂದು ಸಂಗತಿಗೆ ಪ್ರವೇಶಿಸುವ ಮುನ್ನ- ಅಪಶಬ್ದಪ್ರಯೋಗದಿಂದ ಏನಾಗುತ್ತದೆ ಎಂಬುದನ್ನು ನೋಡೋಣ. ಅಪಶಬ್ದ ಎಂದರೆ ತಪ್ಪಾದ ಶಬ್ದ. ಅಪಶಬ್ದದ ಪ್ರಯೋಗದಿಂದ ಯಾವ ಅರ್ಥವನ್ನು ಪ್ರಕಟಿಸುವುದಕ್ಕೆ ನಾವು ಆ ಶಬ್ದವನ್ನು ಪ್ರಯೋಗಿಸುತ್ತೇವೆಯೋ ಆ ಅರ್ಥವು ಅದರಿಂದ ಸ್ಫುರಿಸದೇ ಹೋಗಬಹುದು. ಉದಾಹರಣೆಗೆ ಹೇಳಬೇಕೆಂದರೆ ಒಂದು ಕಡೆ ರಸ್ತೆಯಲ್ಲಿ ಇರುವ ಸೂಚನಾ ಫಲಕದಲ್ಲಿ ಹೀಗೆ ಇತ್ತು- "ರಸ್ತೆಯಲ್ಲಿ ಹುಬ್ಬು ಇದೆ". ವಸ್ತುತಃ ರಸ್ತೆಯಲ್ಲಿ ಹುಬ್ಬು ಹೇಗೆ ಇರಲು ಸಾಧ್ಯ. ಮನುಷ್ಯರ ಕಣ್ಣಿನ ಮೇಲೆ ಇರುವ ರೋಮಾವಳಿಗೆ ಹುಬ್ಬು ಎನ್ನುತ್ತಾರಲ್ಲವೇ! ಆ ಸೂಚನಾಫಲಕದಲ್ಲಿ ಹುಬ್ಬು ಎಂಬ ಶಬ್ದದ ಬದಲಿಗೆ " ಉಬ್ಬು" ಎಂಬ ಶಬ್ದ ಇರಬೇಕಾಗಿತ್ತು. ಈ ಅ-ಕಾರ ಮತ್ತು ಹ-ಕಾರಗಳ ನಡುವೆ ಬಹಳಷ್ಟು ಜನರಿಗೆ ಗೊಂದಲವುಂಟಾಗುತ್ತಿದೆ. "ಅಕುಹವಿಸರ್ಜನೀಯಾನಾಂ ಕಂಠಃ" ಅ-ಹ-ಕವರ್ಗ- ವಿಸರ್ಗಗಳನ್ನು ಉಚ್ಚರಿಸುವುದು ಕಂಠದಿಂದ. ಹಾಗಾಗಿಯೇ ಈ ಅಕ್ಷರಗಳಲ್ಲಿ ಉಚ್ಚಾರಣೆಯಲ್ಲಿ ಸಾಮ್ಯವಿದೆ. ತಮಿಳಿನಲ್ಲಿ ಮಹೇಶ- ಮಗೇಶ ಆಗುವುದೂ ಇದೇ ಕಾರಣಕ್ಕೆ. ಹೀಗಾಗಿ ಅ ಮತ್ತು ಹ ಅಕ್ಷರಗಳನ್ನು ಎಲ್ಲಿ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದಿರುವ ಅನೇಕ ಬರೆಹಗಾರರ ಲೇಖನದಲ್ಲಿ, ಪುಸ್ತಕಗಳಲ್ಲಿ ಅಯಾಚಿತವಾಗಿ ಈ ತಪ್ಪು ನುಸುಳುತ್ತದೆ. ಹೊಸತಲೆಮಾರಿನ ಬರೆಹಗಾರರ ಬಗ್ಗೆ ಹಿಂದೊಮ್ಮೆ ಲೇಖನವನ್ನು ಬರೆದಾಗ- ಇಂತಹ ತಪ್ಪುಗಳನ್ನು ಮಾಡಿದ ಹಲವು ಲೇಖಕರು- ಹಳ್ಳಿಯ ಜನರು ಆಡುಮಾತಿನಲ್ಲಿ ಇಷ್ಟೆಲ್ಲ ಶಾಸ್ತ್ರಶುದ್ಧವಾಗಿ ಮಾತನಾಡುವುದಿಲ್ಲ. ಅವರೆಲ್ಲ ಹೇಳುವುದು ರಸ್ಯವಾಗಿರುವುದಿಲ್ಲವೇ? ಕೇವಲ ಹಳಗನ್ನಡದ ಪಂಡಿತರು ಮಾತ್ರ ಬರೆಯಬೇಕೆ? ಎಂದೆಲ್ಲ ಪ್ರಶ್ನಿಸಿದ್ದರು. ದಿಟವೇ! ಕೆಲವು ವಿಷಯಗಳಲ್ಲಿ ನಮ್ಮ ಅಜ್ಞಾನವನ್ನು ಒಪ್ಪಿಕೊಳ್ಳಲೂ ಪ್ರಾಮಾಣಿಕತೆ ಬೇಕಾಗುತ್ತದೆ. ಹಳಗನ್ನಡ ಪಂಡಿತರು ಮಾತ್ರ ಬರೆಯಬೇಕು ಅಂತೇನೂ ಅಲ್ಲ. ಆದರೆ ಅವರು ಹೇಳಿದ್ದನ್ನು ಒಪ್ಪಿಕೊಂಡರೆ ಇವರಿಗೇನು ನಷ್ಟ? "ನಡೆವರೆಡಹದೆ ಕುಳಿತರೆಡಹುವರೆ" ಎಂದಂತೆ ನಡೆಯುವರು ಎಡಹುವುದು ಸಹಜ. ಆದರೆ ಎಡಹಿದಾಗ ತಿದ್ದಿ ಹೇಳಿದವರ ಮಾತು ಕೇಳದೇ ನಾನು ಎಡವಿಕೊಂಡೇ ನಡೆಯುತ್ತೇನೆ/ ಬೀಳುತ್ತೇನೆ ಎಂದರೆ ಏನು ಹೇಳುವುದು!
ಅಂತಲ್ಲದೇ ಭಾಷೆಗೆ ಎರಡು ರೂಪಗಳಿವೆ. ಒಂದು ಮೌಖಿಕ ಇನ್ನೊಂದು ಗ್ರಾಂಥಿಕ. ಮೌಖಿಕರೂಪವನ್ನು ಗ್ರಾಂಥಿಕವಾಗಿ ಬಳಸಬಾರದು ಎಂದೇನೂ ಇಲ್ಲ. ಆದರೆ ನಿರೂಪಣೆಯಲ್ಲಿ ಔಚಿತ್ಯವನ್ನು ಗಮನಿಸಬೇಕು. ಕಥೆಯೊಂದರಲ್ಲಿ ಒಬ್ಬ ಅನಕ್ಷರಸ್ಥ ಹಳ್ಳಿಯ ಮನುಷ್ಯ- ಗ್ರಾಂಥಿಕವಾದ ರೂಪಗಳಲ್ಲಿ ದಪ್ಪ ದಪ್ಪ ಸಂಸ್ಕೃತ ಶಬ್ದಗಳನ್ನು ಬಳಸಿ ಸಮಾಸಭೂಯಿಷ್ಠವಾಗಿ ಮಾತನಾಡಿದರೆ ಎಷ್ಟು ಅನೌಚಿತ್ಯ ಎನಿಸುತ್ತದೆಯೋ ಅಷ್ಟೇ ಅನೌಚಿತ್ಯವು ಕವಿಪ್ರೌಢೋಕ್ತಿಯಲ್ಲಿ ಅಪಶಬ್ದಪ್ರಯೋಗವಾದಾಗ/ಅಗ್ರಾಂಥಿಕರೂಪಗಳು ಬಂದಾಗ ಅನಿಸುತ್ತದೆ. ಅಂದರೆ ಕವಿಯು ಅಥವಾ ಕತೆಗಾರನು ಕತೆಯನ್ನು ನಿರೂಪಿಸುವ ಮಾತಿನಲ್ಲಿ ಸಂಪೂರ್ಣವಾಗಿ ಆಡುಮಾತಿನ ಶೈಲಿಯಲ್ಲಿರದೇ ಎಲ್ಲೋ ಕೆಲವೊಂದಿಷ್ಟು ಶಬ್ದಗಳು ಆಡುಮಾತಿನವೂ ಅಪಶಬ್ದಗಳೂ ಬಂದರೆ ಅನೌಚಿತ್ಯವಾಗುತ್ತದೆಯಲ್ಲದೇ ಬರೆಹಗಾರನ ಅಜ್ಞಾನ ಎದ್ದು ತೋರುತ್ತದೆ.
ಒಬ್ಬ ಸಾಮಾನ್ಯ ಓದುಗನಿಗೆ ಇದೆಲ್ಲ ಅಷ್ಟು ಗಂಭೀರವೇ ಎಂದೆನಿಸಬಹುದು. ಖಂಡಿತವಾಗಿಯೂ ಅಲ್ಲ. ಭಾಷೆ ಎನ್ನುವುದೇ ಒಂದು ಪ್ರದೇಶದ ಜನರೆಲ್ಲರೂ ಒಟ್ಟಾಗಿ ಒಪ್ಪಿಕೊಂಡಿರುವ ಮಾಧ್ಯಮ. ಅಲ್ಲದೇ ಕನ್ನಡದಂತಹ ಭಾಷೆಗಳೆಲ್ಲ ಪ್ರತಿದಿನವೂ ಬೆಳೆಯುತ್ತಿವೆ. ಆದರೆ ಅದರ ಗ್ರಾಂಥಿಕರೂಪಕ್ಕೆ ಒಂದಿಷ್ಟು ನಿರ್ದಿಷ್ಟವಾದ ನಿಯಮಗಳಿರಬೇಕು. ಹಾಗೂ ಅದನ್ನು ಎಲ್ಲರೂ ಒಪ್ಪಿರಬೇಕು. ಅಂದರೆ ಎರಡು ಸಾವಿರ ವರ್ಷದ ಇತಿಹಾಸ ಇರುವ ಭಾಷೆಯಲ್ಲಿ ನಾವು ಈಗ ಹೊಸ ನಿಯಮ ಮಾಡಿ ರೂಢಿಸಲು ಸಾಧ್ಯವಿಲ್ಲ. ಹಿಂದಿನಿಂದ ಒಪ್ಪಿಕೊಂಡು ಬಂದ ನಿಯಮಗಳನ್ನು ನಾವೂ ಒಪ್ಪಿ ಅದರಂತೆಯೇ ಬಳಸಬೇಕಷ್ಟೇ! ನಾವು ಹಾಗೆ ಬಳಸದೇ ನಮ್ಮದೇ ಬೇರೆ ರೀತಿ ಬಳಸುವುದರಿಂದ ಯಾರಿಗೂ ಅರ್ಥವಾಗುವುದಿಲ್ಲ- ಎಂಬುದು ಒಂದಾದರೆ, ಎರಡನೆಯದು ನಮಗೆ ಶುದ್ಧವಾದ ಭಾಷೆ ಬರುವುದಿಲ್ಲ ಎಂದೂ ಅರ್ಥ ಆಗುತ್ತದೆ. ಎಲ್ಲರ ಕನ್ನಡ ಎಂದು ಹೇಳುತ್ತಿರುವವರದ್ದು ಇದೇ ಪಾಡಾಗಿದೆ. ಕುವೆಂಪು ಅವರು "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾಷೆ ಎಂಬುದು ಶಿಲೆಯಿದ್ದಂತೆ. ಅದನ್ನು ನಾವು ಯುಕ್ತವಾದ ರೀತಿಯಲ್ಲಿ ಬಳಸಿ ಗದ್ಯಪದ್ಯಗಳೆಂಬ ಸುಂದರ ಶಿಲ್ಪಗಳನ್ನು ರಚಿಸಬಹುದೇ ಹೊರತು ನಾವೇ ಭಾಷೆಯನ್ನು ಸೃಷ್ಟಿಸುತ್ತೇವೆ, ಅದನ್ನು ತಿದ್ದುತ್ತೇವೆ ಎಂಬುದು ಕಲ್ಲನ್ನು ಸೃಷ್ಟಿಸುತ್ತೇವೆ ಎನ್ನುವಷ್ಟೇ ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ ಬರವಣಿಗೆ ಮಾಡುವವರಿಗೆ ಆ ಭಾಷೆಯ ಶುದ್ಧಪದಗಳ ಅರಿವಿರಬೇಕಾದದ್ದು ಹಾಗೂ ಸರಿಯಾದ ಪದವನ್ನು ಬಳಸಬೇಕಾದದ್ದು ಕರ್ತವ್ಯವಾಗುತ್ತದೆ. ಎಲ್ಲರೂ ಸರ್ವಜ್ಞರೇನೂ ಅಲ್ಲವಲ್ಲ! ತಪ್ಪು ಮಾಡುವುದು ಸಹಜ. ಆದರೆ ತಿದ್ದಿಕೊಳ್ಳುವ ಪ್ರಾಮಾಣಿಕತೆ ಇರಬೇಕಾದದ್ದು ಮುಖ್ಯ. ಹಿಂದೆಲ್ಲ ಮಹಾಕವಿಗಳೇ ತಮ್ಮ ಕಾವ್ಯಗಳನ್ನು ಬಲ್ಲವರೊಬ್ಬರ ಬಳಿ ತಿದ್ದಿಸಿಕೊಳ್ಳುತ್ತಿದ್ದರು ಎಂಬುದನ್ನು ನಮಗೆ ಕವಿಚಕ್ರವರ್ತಿ ರನ್ನ ದುರ್ಗಸಿಂಹ ಮೊದಲಾದವರ ಕಾವ್ಯಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ.
ಭಾಷೆಗೆ ವೈಜ್ಞಾನಿಕವಾಗಿ ಚರ್ಚೆ ಮಾಡುವಾಗ ಶುದ್ಧ ರೂಪವಿರಬೇಕಾಗುತ್ತದೆ. ಗಣಿತದಂತೆ ಭಾಷೆಗೂ ಒಂದು ಮಟ್ಟದ ನಿಖರತೆ ಇರಬೇಕು ಎನ್ನುತ್ತಾರೆ. ಗಣಿತದಷ್ಟು ಕರ್ಕಶವಲ್ಲದಿದ್ದರೂ, ಕಠೋರವಾದ ತರ್ಕದಿಂದ ಕೂಡಿರದಿದ್ದರೂ ಭಾಷೆ ಬೆಳೆಯಲು ಈ ಆಯಾಮ ಅವಶ್ಯಕ. ಇಂಗ್ಲಿಷಿನಂತಹ ವಿಶ್ವವ್ಯಾಪಿ ಭಾಷೆಗೂ ಕೂಡ ತುಂಬಾ ವ್ಯವಸ್ಥಿತವಾದ ಚೌಕಟ್ಟಿದೆ. ಗಣ್ಯರಾದ ಪ್ರಕಾಶಕರ ಮೂಲಕ ಒಂದು ಪುಸ್ತಕ ಪ್ರಕಟವಾಗಬೇಕೆಂದರೆ ಪುಸ್ತಕದ ಭಾಷೆಯನ್ನು ಹಾಗೂ ಬಳಕೆಯನ್ನು ಸಂಪಾದಕರು ಹಲವು ಹಂತಗಳಲ್ಲಿ ತಿದ್ದುತ್ತಾರಂತೆ. ಹಲವು ಖಂಡಗಳಲ್ಲಿ ದೇಶಗಳಲ್ಲಿ ಹಲವು ರೂಪಗಳಲ್ಲಿ ಪಸರಿಸಿರುವ ಭಾಷೆಯಲ್ಲಿಯೇ- ಪುಸ್ತಕದ ಪ್ರಕಟಣೆಯಲ್ಲಿ ಭಾಷೆಯ ದೃಷ್ಟಿಯಿಂದ ಲೋಪದೋಷಗಳನ್ನು ಪರೀಕ್ಷಿಸುವುದಕ್ಕೆಂದೇ ಇರುತ್ತಾರಂತೆ. ಸಾಮಾಜಿಕವಾಗಿ ಶ್ರೇಣೀಕೃತವಾಗಿ ದೇಶಕಾಲಗಳಲ್ಲಿ ವೈವಿಧ್ಯವನ್ನು ತಳೆದ ಈ ಭಾಷೆಯನ್ನು ಅಭಿವೃದ್ಧಿ ಪಡಿಸಲು ಹೀಗೆ ಅವರು ಸಾಕಷ್ಟು ಬಾರಿ ನಿಘಂಟುಗಳನ್ನು ಪರಿಷ್ಕರಿಸುತ್ತಾರೆ, ಹೊಸ ಶಬ್ದಗಳನ್ನು ಸೇರಿಸುತ್ತಾರೆ. ಇಷ್ಟೆಲ್ಲ ಹೆಣಗಾಟಗಳನ್ನು ಮಾಡುತ್ತಾರೆ. ಇದೆಲ್ಲವೂ ಭಾಷೆಯಲ್ಲಿ ಒಂದು ಅಧಿಕಾರ ಸ್ಥಾಪಿಸಿಕೊಳ್ಳಬೇಕಾದವರು, ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ವ್ಯಾವಹಾರಿಕವಾಗಿ ಬೆಳೆಯಬೇಕು ಎಂದು ಮಾಡಿಕೊಂಡಿರುವುದು. ಬಲಿಷ್ಠವಾದ ಅಥವಾ ಶಕ್ತವಾದ ಭಾಷೆ ಎನ್ನುವುದು ಸಮರ್ಥವಾದ ಬೊಕ್ಕಸವಿದ್ದಂತೆ. ಮಸೆದಿಟ್ಟ ಆಯುಧವಿದ್ದಂತೆ. ಬಳಕೆಯನ್ನು ಬಲ್ಲ ಅವರು ಹೀಗೆ ಅವರ ಭಾಷೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಕನ್ನಡಕ್ಕೂ ಈ ಪ್ರಮೇಯದ ಅವಶ್ಯಕತೆ ಇದ್ದೇ ಇದೆ. ಕನ್ನಡಕ್ಕೆ (ಎಲ್ಲರ ಕನ್ನಡದಂತಹ) ಕೃತಕ ಭಾಷೆಯ ಸೃಷ್ಟಿ ಎಷ್ಟು ಅನರ್ಥಕಾರಿಯೋ ಅಷ್ಟೇ ಅನರ್ಥ- ಔಚಿತ್ಯವಿಲ್ಲದೇ ಯಾವ ಯಾವ ಸಂದರ್ಭದಲ್ಲಿ ಹೇಗೆ ಪದಗಳನ್ನು ಬಳಸಬೇಕು ಎಂದು ತಿಳಿದುಕೊಳ್ಳದೇ ಬಳಕೆ ಮಾಡುವುದೂ ಆಗುತ್ತದೆ. ಹಾಗಾಗಿ ಸಾವಿರಾರು ವರ್ಷಗಳ ಪರಂಪರೆಯನ್ನು ಅವಲೋಕಿಸದೇ ಇರುವುದೂ ಕೂಡ ಸಾಧುವಲ್ಲ.

ಹೀಗಿರುವಾಗ ಭಾಷಾಶುದ್ಧಿಯನ್ನು ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹವಾಗಿದೆ. ಇಂತಹ ಸ್ವಚ್ಛಭಾಷೆಯ ಅಭಿಯಾನದಲ್ಲಿ ಒಬ್ಬರು ಲೇಖಕರು ಇಂತಿಂತಹ ಶಬ್ದಗಳು ತಪ್ಪು ಬಳಕೆ ಆಗುತ್ತಿವೆ. ಇಂತಿಂತಹ ಶಬ್ದಗಳ ಶುದ್ಧರೂಪ ಹೀಗಾಗಬೇಕು ಎಂದು ವಿವರವಾಗಿ ಹೇಳುತ್ತಿದ್ದಾರೆ. ಸಾಮಾನ್ಯ ಓದುಗನಿಗೆ ಅವರು ಹೇಳಿದ್ದು ಸತ್ಯ ಎಂಬಂತೆ ಅನಿಸುತ್ತದೆ. ಆದರೆ ಅಲ್ಲಿ ಕೆಲವೊಂದು ಸಣ್ಣ ದೋಷಗಳೂ ಇದ್ದವು. ಸಾಕಷ್ಟು ಪ್ರಮಾಣದಲ್ಲಿ ಕನ್ನಡ-ಸಂಸ್ಕೃತಗಳೆರಡರಲ್ಲೂ ಸಂಶೋಧನೆಯನ್ನು ಮಾಡಿದ, ಗದ್ಯಪದ್ಯಗಳನ್ನು ಬರೆದ ಒಬ್ಬ ವಿದ್ವಾಂಸರು ಈ ಸ್ವಚ್ಛಭಾಷೆಯ ಲೇಖಕರಿಗೆ ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಈ ದೋಷಗಳಿವೆ ಎಂದು ಹೇಳಿದಾಗ ಅವರಿಗೆ ಇವರು ಸೌಜನ್ಯಪೂರಕವಾಗಿ ಉತ್ತರಿಸಿ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕಲ್ಲವೇ! ಉದಾಹರಣೆಗೆ- ಮೂಷಕ ಎಂಬ ಶಬ್ದವೇ ಸರಿ. ಮೂಷಿಕ ಎಂಬ ಶಬ್ದ ತಪ್ಪು- ಎಂಬುದು ಲೇಖಕರ ವಾದ. ಅದಕ್ಕೆ ಪ್ರತಿಕ್ರಿಯೆಯಲ್ಲಿ ಬಂದ ಉತ್ತರ-
ಮೂಷಕ ಮತ್ತು ಮೂಷಿಕ ಎರಡೂ ಶಬ್ದಗಳು ಸರಿಯಾಗೇ ಇವೆ. ಸ್ತೇಯ ಎಂಬ ಅರ್ಥದ ಮುಷ್ ಧಾತುವಿಗೆ ಮುಷೇರ್ದೀರ್ಘಶ್ಚ ಎಂಬ ಸೂತ್ರದ ಪ್ರಕಾರ "ಕಿಕನ್" ಪ್ರತ್ಯಯ ಬಂದಾಗ "ಮೂಷಿಕ" ಶಬ್ದವಾಗುತ್ತದೆ.
ಅದೇ "ಮೂಷ್" ಧಾತುವಿಗೆ "ಣ್ವುಲ್ ತೃಚೌ" ಎಂಬ ಸೂತ್ರದಿಂದ ಣ್ವುಲ್ ಪ್ರತ್ಯಯ ಬಂದಾಗ "ಮೂಷಕ" ಎಂಬ ಶಬ್ದವಾಗುತ್ತದೆ.
ಈ ಉತ್ತರ ಗಮನಿಸಿದ ಮೇಲೆ ಲೇಖಕರು ಮೂಲದಲ್ಲೇ ತಿದ್ದಿದ್ದರೆ ಉಳಿದ ಓದುಗರಿಗೆ ಅನುಕೂಲವಾಗಿರುತ್ತಿತ್ತು. ಅಥವಾ ಮೂಲಲೇಖನದ ಕೊನೆಗೇ ಇನ್ನೊಂದು ಟಿಪ್ಪಣಿ ಸೇರಿಸಿದ್ದರೂ ಸಾಧುವಾಗುತ್ತಿತ್ತು. ಅವರೇ ಹೇಳಿದಂತೆ ಇದು ಅವರ ಲೇಖನಕ್ಕೆ ಪೂರಕ ಮಾಹಿತಿಯಂತೆ. ಹಾಗಿದ್ದರೆ ಲೇಖನದಲ್ಲೇ ಸೇರಿಸಬಹುದಿತ್ತು. ಲೇಖನದ ದೋಷವನ್ನು ತೋರಿಸಿದ್ದಕ್ಕೆ ಅದು ಅವರ ಅಭಿಪ್ರಾಯವನ್ನು ವಿರೋಧಿಸಿದಂತೆ ಎಂದಾದ ಕಾರಣ ಅದನ್ನು ಸೇರಿಸಿಕೊಳ್ಳಲಿಲ್ಲವೇ!
ಇನ್ನೊಂದು ಲೇಖನದಲ್ಲಿ "ದಂಪತಿಗಳು" ಎಂಬ ಶಬ್ದವನ್ನು ಒಂದಕ್ಕಿಂತ ಹೆಚ್ಚು ಜೋಡಿಗಳಿರುವಾಗ ಬಳಸಬೇಕು. ಒಂದೇ ಜೋಡಿ ಇದ್ದರೆ "ದಂಪತಿ" ಎಂದಷ್ಟೇ ಏಕವಚನದಲ್ಲಿ ಬಳಸಬೇಕು ಎಂಬುದು ಲೇಖಕರ ವಾದ. ಆದರೆ ವಸ್ತುತಃ ದಂಪತಿ ಎನ್ನುವುದನ್ನು ಏಕವಚನದಲ್ಲಿ ಬಳಸುವುದು ಹೇಗೆ ಸಾಧ್ಯ ಎಂದು ಒಬ್ಬರು ಓದುಗರು - " ದಂಪತಿ ಬರುತ್ತಿದ್ದಾನೆ/ಬರುತ್ತಿದ್ದಾಳೆ/ಬರುತ್ತಿದೆ" ಹೇಗೆ ಹೇಳಬಹುದು?" ಎಂದು ಪ್ರಶ್ನಿಸಿದರು. ಅದಕ್ಕೆ "ಬರುತ್ತಿದ್ದಾರೆ" ಎಂದು ಹೇಳಬಹುದು ಎಂದು ಉತ್ತರಿಸಿದರು. ಓದುಗರು- "ದಂಪತಿ ಏಕವಚನವಾಗಿರುವಾಗ ಕ್ರಿಯಾಪದ ಬಹುವಚನವಾಗುತ್ತದೆಯೇ" ಎಂದರೆ, ಅದಕ್ಕೆ ಲೇಖಕರು- "ನೀವು ನಿಮಗೆ ಬೇಕಾದ ಹಾಗೆ ಬರೆಯಿರಿ" ಅಂತ ಉತ್ತರಿಸಿದರು. ಇದರ ಅರ್ಥವೇನು?
ದಂಪತಿ ಶಬ್ದದ ಬಗ್ಗೆ ಸಂಸ್ಕೃತದಲ್ಲಿ ನೀಲಕಂಠದೀಕ್ಷಿತನ ಒಂದು ಪ್ರಸಿದ್ಧ ಪದ್ಯವೇ ಇದೆ. ಅರ್ಧನಾರೀಶ್ವರಸ್ತುತಿಯಾಗಿ. "ವಂದೇ ವಾಂಛಿತಲಾಭಾಯ ಕರ್ಮ ಕಿಂ ತನ್ನ ಕಥ್ಯತೇ|
ಕಿಂ ದಂಪತಿಮಿತಿ ಬ್ರೂಯಾಮುತಾಹೋ ದಂಪತೀ ಇತಿ||"
(ತಾತ್ಪರ್ಯತಃ ಹೇಳುವುದಾದರೆ- ಇಷ್ಟಾರ್ಥ ಸಿದ್ಧಿಗಾಗಿ ನಮಸ್ಕರಿಸುತ್ತೇನೆ. ಯಾರಿಗೆ ಎಂದು ಹೇಳುವುದಿಲ್ಲ. ಯಾಕೆಂದರೆ ಒಂದೇ ದೇಹವಿರುವ ಅರ್ಧನಾರೀಶ್ವರನಿಗೆ "ದಂಪತಿ" ಎಂದು ಏಕವಚನದಲ್ಲಿ ಹೇಳಬೇಕೋ ಅಥವಾ ನಿತ್ಯದ್ವಿವಚನದಲ್ಲಿ "ದಂಪತಿಗಳು" ಎಂದು ಹೇಳಬೇಕೋ ಗೊತ್ತಿಲ್ಲ) ಇಂತಹ ಪ್ರಸಿದ್ಧ ಶ್ಲೋಕಗಳ ಬಗ್ಗೆ ಪ್ರಸ್ತುತ ಲೇಖಕರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅದೇ ಪೋಸ್ಟಿಗೆ ಇನ್ನೊಂದು ಉತ್ತರದಲ್ಲಿ ವಿದ್ವಾಂಸರೊಬ್ಬರು - "ದಂಪತಿ ಎನ್ನುವುದು ಸಂಸ್ಕೃತದಲ್ಲಿ ನಿತ್ಯದ್ವಿವಚನ. ಕನ್ನಡದಲ್ಲಿ ದ್ವಿವಚನವಿಲ್ಲದ ಕಾರಣ ಬಹುವಚನ ಬಳಸುವುದು ರೂಢಿ. ಹಾಗಾಗಿ ದಂಪತಿಗಳು ಎನ್ನುವುದೇ ಸೂಕ್ತ." ಎಂದು ಉತ್ತರಿಸಿದ್ದರು. ಅಷ್ಟೇ ಅಲ್ಲದೇ ಹಳಗನ್ನಡದ ಕವಿಗಳಾದ ಲಕ್ಷ್ಮೀಶನ ಜೈಮಿನಿಭಾರತದಿಂದ, ರುದ್ರಭಟ್ಟನ ಜಗನ್ನಾಥವಿಜಯದಿಂದ "ದಂಪತಿಗಳು" ಎಂಬ ಬಹುವಚನದ ಶಬ್ದಗಳಿರುವ ಪದ್ಯಗಳನ್ನೂ ಉದಾಹರಣೆಯಾಗಿ ಕೊಟ್ಟಿದ್ದರು. ಮೂಲ ಪೋಸ್ಟ್ ಅಲ್ಲಿ ಬದಲಾಯಿಸಿದರೆ ಮಾತ್ರ ಅದನ್ನು ಓದುವವರಿಗೆ ಅನುಕೂಲ ಎಂದೂ ಹೇಳಿದ್ದರು. ಅದಕ್ಕೆ ಲೇಖಕರು ಉತ್ತರಿಸಿದ್ದು- " ನಿಮ್ಮ ಪ್ರತಿಕ್ರಿಯೆಗೆ like click ಮಾಡಿದ್ದು ನಾನು ನಿಮ್ಮ ಅಭಿಪ್ರಾಯ ಓದಿದ್ದೇನೆ ಎಂದು ನಿಮಗೆ ತಿಳಿಸಲಿಕ್ಕೆ. ಅದಕ್ಕಿಂತ ಹೆಚ್ಚಿನದು ನಿಮಗೆ ತಿಳಿಸುವ ವಿಚಾರ ನನ್ನದೇನಿಲ್ಲ. ನಿಮಗೆ ಧನ್ಯವಾದಗಳು" ಎಂದು. ಅಂದರೆ ಈ ಲೇಖಕರಿಗೆ ವಿದ್ವಾಂಸರ ಮಾತುಗಳು ಸಹ್ಯವಾಗುವುದಿಲ್ಲವೇ? ಕನ್ನಡದ ಪೂರ್ವಕವಿಗಳ ಪ್ರಯೋಗ ಕೂಡ ಗ್ರಾಹ್ಯವಾಗುವುದಿಲ್ಲವೇ? ಲೇಖಕರು ತಾರ್ಕಿಕವಾಗಿ ಉತ್ತರಿಸಲು ಸಮರ್ಥರಲ್ಲದೇ ಹೋದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಹಿಂದಿನ ಮಹಾಕವಿಗಳ ಪ್ರಯೋಗವನ್ನು ತೋರಿಸಿದ ಬಳಿಕವೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವವರಲ್ಲ ಎಂದಾದರೆ ಇವರು ಆ ಮಹಾಕವಿಗಳಿಗಿಂತ ಹಿರಿಯರೇ! ಪ್ರಸ್ತುತ ಲೇಖಕರು ಭಾಷೆಯ ವಿಷಯದಲ್ಲಿ ಏನು ಸಂಶೋಧನೆ ಮಾಡಿದ್ದಾರೆ? ವಿದೇಶದಲ್ಲಿದ್ದುಕೊಂಡೂ ಕನ್ನಡದಲ್ಲಿ ಒಂದಿಷ್ಟು ಕೃಷಿ ಮಾಡುತ್ತಿದ್ದಾರೆ ಎಂಬುದನ್ನು ಬಿಟ್ಟರೆ ಎಷ್ಟು ಹಳಗನ್ನಡ/ಸಂಸ್ಕೃತಕಾವ್ಯಗಳನ್ನು ಆಮೂಲಾಗ್ರವಾಗಿ ಓದಿದ್ದಾರೆ? ಅಥವಾ ಅವರು 'ಇದು ಶುದ್ಧ- ಇದು ಅಶುದ್ಧರೂಪ' ಎಂದು ಹೇಳಲು ಯಾವ ವ್ಯಾಕರಣದ ನಿಯಮಗಳ ಆಧಾರವನ್ನು ಕೊಡಬಲ್ಲರು? ಇದು ಕೇವಲ ಮೇಲೆ ಉಲ್ಲೇಖಿಸಿದ ಎರಡು ಶಬ್ದಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ಸುಮಾರು ಇಪ್ಪತ್ತು ಕಂತುಗಳಲ್ಲಿ ವಿಸ್ತೃತವಾದ ಅಭಿಯಾನದಲ್ಲಿ ಹಲವಾರು ದೋಷಗಳಿವೆ. ಹಾಗೂ ಆ ದೋಷಗಳನ್ನೆಲ್ಲ ಸಂಗ್ರಹಿಸಿ ಬೇರೆಯವರೂ ಲೇಖನ ಬರೆಯುತ್ತಿದ್ದಾರೆ.
ಅವರ ಲೇಖನದ ಓದುಗರೊಬ್ಬರು "ಸಂಸ್ಕೃತ ವಿದ್ವಾಂಸರಿಗೆ ಹಳೆಯ ಗ್ರಂಥಗಳಲ್ಲೂ ಕಾಗುಣಿತ ವ್ಯಾಕರಣ ದೋಷಗಳು ನುಸುಳಿರಬಹುದು ಎಂಬ ಜ್ಞಾನವಿರಬೇಕಾದದ್ದು ಬಹುಮುಖ್ಯ" ಎಂದು ಹಾಕಿದ್ದಾರೆ. ಅಂದರೆ ಅವರಿಗೆ 'ವ್ಯಾಕರಣನಿಯಮಗಳಿಂದ ಹೇಳಿದ ಶುದ್ಧತೆಗಿಂತ ತಮ್ಮ ಲೇಖಕರೇ ಹೆಚ್ಚು ಮಾನ್ಯ' ಎಂದೇ ಅರ್ಥವಾಯಿತಲ್ಲ. ಇಂತಹ ಓದುಗರು ಇವರ ಲೇಖನದಿಂದ ಏನು ಸ್ವಚ್ಛಭಾಷೆಯನ್ನು ಕಲಿಯುತ್ತಾರೆ. ಇವರಂತೆಯೇ ಬೇರೆಯವರ ಮಾತನ್ನು ಕೇಳದಿರುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ ಅಷ್ಟೆ.
ಅದೆಲ್ಲ ಬದಿಗಿರಲಿ. ಪ್ರಸ್ತುತಲೇಖಕರ ಅಂಕಣದ ಹೆಸರಿನಲ್ಲಿರುವ ಶಬ್ದಕ್ಕೆ ಯಾವ ರೀತಿ ಅವರು ಅರ್ಥವನ್ನು ಕೊಡಬಲ್ಲರು? ಆ ಶಬ್ದವನ್ನು ಇವರೂ ಇವರ ಪತ್ರಿಕೆಯ ಸಂಪಾದಕರೂ ಒಂದಿಷ್ಟು ಅಭಿಮಾನಿಗಳೂ ಮೆಚ್ಚಿಕೊಳ್ಳಬಲ್ಲರಷ್ಟೇ! ವಾಸ್ತವವಾಗಿ ಈ ಕುರಿತು ಅಂಕಣ ಪ್ರಾರಂಭವಾಗುವಾಗ, ಇವರು ಹೆಸರನ್ನು ಹೀಗಿದೆ ಎಂದು ಹೇಳಿದಾಗಳೇ ಸಾಕಷ್ಟು ಚರ್ಚೆ ಆಯಿತು. ತಮ್ಮ ಅಂಕಣದ ಹೆಸರಿನಲ್ಲೇ ದೋಷ ಇರುವವರು ಭಾಷಾಶುದ್ಧಿ ಮಾಡುತ್ತಾರೆ ಎಂದರೆ ಹಾಸ್ಯಾಸ್ಪದವೇ ಅಲ್ಲವೇ! ಬೇರೆಯವರ ತಟ್ಟೆಯಲ್ಲಿದ್ದ ನೊಣವನ್ನು ತೋರಿಸುವ ಮೊದಲು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದ ಪ್ರಾಣಿಯನ್ನು ನೋಡಿಕೊಳ್ಳುವುದು ಉತ್ತಮ ಅಲ್ಲವೇ!
ಹಿಂದೊಮ್ಮೆ "ದಿನಪತ್ರಿಕೆಯಲ್ಲಿ ಒಂದಿಷ್ಟು ಅಂಕಣ ಬರೆದ ಬಹಳಷ್ಟು ಲೇಖಕರು ಬರುತ್ತಾ ಬರುತ್ತಾ ತಮ್ಮನ್ನು ತಾವೇ ಉಳಿದವರಿಗೆ ಉಪದೇಶ ಮಾಡುವ ಸ್ಥಾನದಲ್ಲಿ ನಿಲ್ಲಿಸಿಕೊಂಡುಬಿಡುತ್ತಾರೆ. ಆ ಬಳಿಕ ಅವರ ಲೇಖನದಲ್ಲಿ ಇಂತಹ ಉಪದೇಶಗಳೇ ತುಂಬಿಕೊಂಡು ಏನೂ ಸ್ವಾರಸ್ಯ ಇರುವುದಿಲ್ಲ. ಆದರೆ ಈ ಲೇಖಕರ ಅಂಕಣಗಳು ಹಾಗಲ್ಲ." ಎಂದು ಇವರದ್ದೇ ಒಂದು ಪುಸ್ತಕಬಿಡುಗಡೆಗೆ ಬಂದ ಮುಖ್ಯ- ಅತಿಥಿಗಳು ಹೇಳಿದಂತೆ ನೆನಪು. (ಬಹುಶಃ ೨೦೧೦ರ ಸುಮಾರಿನಲ್ಲಿ ಎಂದೆನಿಸುತ್ತದೆ) ಅಲ್ಲಿ ಹೇಳಿದ್ದರೋ ಇಲ್ಲವೋ- ಒಟ್ಟಾರೆ ಆ ವಾಕ್ಯ ಒಂದು ರೀತಿಯಲ್ಲಿ ಎಚ್ಚರಿಕೆಯ ಮಾತೆಂಬುದಂತೂ ನಿಜ. ಲೇಖಕರೇ ಹೇಳಿದಂತೆ ಹಲವಾರು ಜನ ಓದುಗರು, ಸೆಲೆಬ್ರಿಟಿಗಳೂ ಇವರ ಲೇಖನವನ್ನು ಓದುತ್ತಿರುತ್ತಾರೆ. ಅವರಲ್ಲಿ ಎಷ್ಟೋ ಜನರಿಗೆ ಉಳಿದ ಕಮೆಂಟುಗಳಲ್ಲಿ ಆದ ಚರ್ಚೆಯನ್ನು ಗಮನಿಸುವ ವ್ಯವಧಾನವಿರುವುದಿಲ್ಲ. ಹಾಗಿರುವ ಪರಿಸ್ಥಿತಿಯಲ್ಲಿ ಸ್ವಚ್ಛಭಾಷೆಯನ್ನು ಕಲಿಯಬೇಕಾದವರಿಗೆ ಇವರು ಹೇಗೆ ಅನುಕೂಲವನ್ನು ಮಾಡುತ್ತಿದ್ದಾರೆ? ಯಾವಾಗ ಲೇಖಕನಿಗೆ ಲೇಖನಕ್ಕಿಂತ ಸ್ವಪ್ರತಿಷ್ಠೆಯ ಕಡೆ ಹೆಚ್ಚು ಒಲವು ಬರುತ್ತದೆಯೋ, ಅಥವಾ ಲೇಖಕರು "ಸೆಲೆಬ್ರಿಟಿ" ಆಗಿ ತನ್ನನ್ನು ಅನುಸರಿಸುವ ಅಭಿಮಾನಿಗಳ ಬಳಗದ ಎದುರು ತಾನು ತಪ್ಪೊಪ್ಪಿಕೊಂಡಾಗ ಸಣ್ಣವನಾಗಿಬಿಡುತ್ತೇನೆ ಎಂಬ ಭಾವನೆ ಬರುತ್ತದೆಯೋ, ಅಥವಾ ತಾನು ಹೇಳಿದ್ದನ್ನು ಉಳಿದವರು ಒಪ್ಪಿಕೊಳ್ಳಲೇಬೇಕು ಎಂಬ ಅಹಂಕಾರತೃಪ್ತಿಯ ಆಸೆ ಹೆಚ್ಚಾಗುತ್ತದೆಯೋ ಆಗ ಇವೆಲ್ಲ ಅನರ್ಥಗಳು ಸಂಭವಿಸುತ್ತವೆ. ಡಿವಿಜಿ ಅವರ ಕಗ್ಗದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು- "ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣುಗಂಡೊಲವು| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದದಾತ್ಮವನೆ ಮಂಕುತಿಮ್ಮ||" ಹೇಳಿ ಕಲಿಸುವ ಕಾಲ ಹಳೆಯದಾಯ್ತು. ಈಗೇನಿದ್ದರೂ ಕಲಿತುಕೊಳ್ಳುವ ಕಾಲ. ನಾವು ನಮ್ಮ ಯೋಗ್ಯತೆಯನ್ನೂ ಶಕ್ತಿಯನ್ನೂ ತಿಳಿದುಕೊಳ್ಳದೇ ಹೋದರೆ, ಆಳ ಗೊತ್ತಿಲ್ಲದ ನದಿಯಲ್ಲಿ ಈಜು ಕಲಿಯಲು ಹೋದಂತಾಗುವುದು ನಿಸ್ಸಂಶಯ. ನಮಗಿಂತ ಆ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ಇರುವವರು ಹೇಳಿದಾಗ ಒಪ್ಪಿಕೊಳ್ಳುವುದು ಜಾಣತನ. ಅಷ್ಟಲ್ಲದೇ ಹಿರಿಯರು ಸುಮ್ಮನೇ ಹೇಳಿದ್ದಾರೆಯೇ "ವಿದ್ಯೆಗೆ ವಿನಯವೇ ಭೂಷಣ" ಎಂದು. ಹುಲಿಯ ಚರ್ಮವನ್ನು ಹೊದೆದ ಕಾರಣ ಈ ಪ್ರಾಣಿಯನ್ನೂ ನಾವು ಹುಲಿಯೆಂದೇ ಭಾವಿಸುತ್ತಿರುವಂತೆ ಪರಿಸ್ಥಿತಿ ಉಂಟಾಗಿದೆ. ಮಿತ್ರರೊಬ್ಬರು ಹೇಳಿದಂತೆ ಬಾಯಿ ಬಿಟ್ಟರೆ ಬಣ್ಣಗೇಡಾಗುವ ಮೊದಲು ತನ್ನ ಹುಲಿಯ ರೂಪವನ್ನು ತ್ಯಜಿಸುವುದು ಒಳ್ಳೆಯದು ಎಂದು ನನ್ನ ಭಾವನೆ.
~~~~~~~~
-ಗಣೇಶ ಭಟ್ಟ ಕೊಪ್ಪಲತೋಟ