Powered By Blogger

ಭಾನುವಾರ, ಜುಲೈ 29, 2018

ಮಧುವನಮರ್ದನಂ -೨

ಮೊದಲ ಭಾಗ-  ಮಧುವನಮರ್ದನಂ-೧
ಈ ಭಾಗವನ್ನು ಇಲ್ಲಿ ಕೇಳುತ್ತ ಓದಬಹುದು.

~ಮಧುವನಮರ್ದನಂ-೨ ~
ಅಂಗದಾದಿಗಳಿತ್ತಲುತ್ತರದ ತೀರದೊಳ್
ಕಾತರಿಸಿ ನಿಂದಿರ್ದಪರ್ ಮಾರುತಿಯ ಬರವ-
ನೀಕ್ಷಿಸುತೆ. ಮ್ಲಾನತೆಯೆ ಮೂರ್ತಿವೆತ್ತಂದದಿಂ-
ದಾ ಮಹೇಂದ್ರಾದ್ರಿಯಿದಿರೊಳ್ ದಿಗಂತಮನೆಂತೊ
ಬಯಕೆ ಬತ್ತಿರ್ಪ ಕಂಗಳೊಳೆ ವೀಕ್ಷಿಸಿ ಕಳೆದ
ಬಲ್ಮೆಯೌತ್ಸುಕ್ಯದಿಂ ತಿನದೆ ತಿನಿಸಿನಿತುಮಂ
ಕುಡಿಯಲಾರದೆ ನೀರನೆಂತುಟೋ ಮೌನದಿಂ
ದನಿಮೇಷರಾಗಿ ಮೇಣ್ ವ್ಯಾಕುಲಾಂತರ್ಯದಿಂ
ವೆಟ್ಟಿನೊಳ್ ಪೊಸತಾಗಿ ನಟ್ಟ ಶಿಲೆಗಳ ತೆರದಿ      ೧೧೦
“ಹನುಮನೇಂ ಬಂದನೋ!” ಎನುತೆ ಪಕ್ಕಿಯದೊಂದು
ಗೋಚರಿಸೆ ಸಂಭ್ರಮದಿ ಸಂಭ್ರಾಂತರಾಗುತುಂ
ಕುಳಿತಿರ್ಪರ್
                 ಅತ್ತಣಿಂ ದೂರದಿಂದಾಗಮಿಪ
ಮಾರುತಿಯ ದೂತನಂತೆಯ್ದಿತೈ ಗರ್ಜನೆಯ
ಮೇಘಸ್ವನಂ ವಲಂ ಗಂಭೀರಗಹನಮುಂ
“ದೃಷ್ಟಾ ಧರಾಸುತಾ- ದೃಷ್ಟಾ ಧರಾಸುತಾ”
ಎನ್ನುತುಂ ಪೇಳ್ದಪುದು.
        ಮೊದಲ ಗುಡುಗಂ ಕೇಳ್ದು
ಗರಿಬಿಚ್ಚಿ ನರ್ತಿಸಿರ್ದಪ ನವಿಲ್ಗಳವೊಲೇ
ಪವನಸುತವಚನದಿಂ ಸಕಲರುಂ ಬಹುವಾದ
ಜಯಜಯೋದ್ಘೋಷದಿಂ ಕುಣಿದಾಡತೊಡಗಿದರ್   ೧೨೦
ದೂರದೊಳ್ ಪೊಳೆದಿರ್ಪ ನಕ್ಷತ್ರದಂದದಿಂ
ತೋರ್ದಪಂ, ಬಳೆಯುತ್ತೆ ಗುರುವಂತೆ ಮತ್ತೆ ತಾಂ
ಚಂದ್ರನಂದದೆ ಮುಗಿಲಿನೋಳಿಯೊಳ್. ದಿನಪನಂ-
ತಮಿತಪ್ರಕಾಶದಿಂ ಸಾರ್ದಪಂ. ವಾನರರ್
ಪುಷ್ಪಗುಚ್ಛಂಬಿಡಿದು ಕೈವೀಸಿ ಕುಣಿದಿರಲ್
ಧರೆಗೆ ಪದಯುಗಮನಿಟ್ಟಂ ನೋಡಲದನಿಂತು
ಗಿರಿಯ ಶಿಖರದೆ ಮತ್ತೆ ಗಿರಿಯೆ ಅವತರಿಪಂತೆ
ಅಂತಾದೊಡಂ ಗಾಳಿಯೊಳ್ ಪಾರ್ದ ಪತ್ತಿಯೇ
ಇಳೆಗಿಳಿದ ತೆರದೆ ಕಂಡಿರ್ದುದಾಕ್ಷಣಕೆ
ಇನಿತೊಂದು ಸದ್ದಿಲ್ಲಮರೆಯೊಂದು ಸರಿದಿಲ್ಲಮ್  ೧೩೦
“ಅರರೆ! ಮಾರುತಿಯೆಮ್ಮನೆಲ್ಲರಂ ದಿಟದಿಂದೆ
ಕೃತಕೃತ್ಯರಂಗೆಯ್ದ”ನೆಂದುಲಿದನಂಗದಂ. 
ಜಾಂಬವಂಬೆರೆಸಂಗದಂ ಹನುಮನೊಡನಲ್ಲಿ
ನಡುವೆ ಕುಳಿತಿರೆ ಸುತ್ತಲೆಲ್ಲರುಂ ಕುಳ್ಳಿರ
ಲ್ಕಾ ರುಂದ್ರ ಸಾಗರೋಲ್ಲಂಘನಕಥಾನಕ
ಶ್ರವಣಕುತುಕಾನ್ವಿತಕಪೀಶಚಿತ್ತಾನಂದ
ಸಂಪ್ರದಾಯಕವಚೋನಿಪುಣ ಮಾರುತಿಯಂತು
ಬಣ್ಣಿಸಿದನೊಲ್ಮೆಯಿಂದೆಲ್ಲಮಂ ಕಿರಿದಾಗಿ.
ರಾಮನಿದಿರೊಳ್ ಪೇಳ್ವುದುತ್ಸುಕತೆಯುಂ ಸಂದು
ತ್ವರೆಯಿಂದೆ ಪೇಳ್ದಪಂಹನುಮನೀ ವೃತ್ತಮಂ ೧೪೦
ಬಳಿಕಮೇಂ ಗೆಯ್ವುದೆಂದೆಲ್ಲರುಂ ಚಿಂತಿಸಲ್
ನಾಮೆಲ್ಲರುಂ ಪೋಗಿ ಸೀತೆಯಂ ಕರೆದುಯ್ವ-
ಮೆಂದಾಂಜನೇಯನೇ ನುಡಿದಿರಲ್ಕಂಗದಂ
“ದಿಟಮಲ್ತೆ! ಸೀತೆಯಂ ಕಂಡುಮೇಂ ರಕ್ಷಿಸದೆ
ಪಿಂದಿರುಗಿ ಪೋಪುದನುಚಿತಮಲ್ತೆ  ವಿಖ್ಯಾತ
ವೀರರಾಗಿರ್ಪೆಮ್ಮ ಕಪಿಕುಲಕೆ?” ಎಂದೆನಲ್
ಸಕಲರುಂ ಸಮ್ಮತಿಸಿ ಸುಸ್ವರದೆ ಘೇ ಎನಲ್
ವೃದ್ಧಜಾಂಬವನೊರ್ಮೆ ಚಿಂತಿಸುತೆ  ಪೇಳ್ದಪಂ
“ಕೆಳೆಯರಿರ! ರಘುವೀರನಾಜ್ಞೆಯಿರ್ಪುದು ನಮಗೆ
ಬರಿದೆ ಸೀತಾನ್ವೇಷಣಂ. ದಶಾನನಹತಿಯು ೧೫೦
ಸೀತೆಯಂ ರಕ್ಷಿಪುದುಮವನ ಪ್ರತಿಜ್ಞೆಯೈ!
ಪುಸಿಗೆಯ್ವುದೊಳ್ಳಿತಲ್ಲಂ ಮಹಾತ್ಮರ ನುಡಿಯ-
ನೀಗಳಾಂ ಮರಳ್ದು ಪೋಪುದೆ ಕಜ್ಜಮೆಂದಿರಲ್
ದಿಟಮೆನುತ್ತೆಲ್ಲರುಂ ನಡೆದಪರ್ ಪಾರ್ದಪರ್
ಗಗನದೆಡೆಗಾ ಮಹೇಂದ್ರಾದ್ರಿಯಿಂ ಸಿಡಿಲಂತೆ
ನಿಟ್ಟುಸಿರ್ ಬಿಟ್ಟಿತೇಂ ವೆಟ್ಟೆಂಬ ಪಾಂಗಿನಿಂ
ದಟ್ಟಮಾಗುತೆ ಗಾಳಿ ಸುಳಿದತ್ತು ಪರ್ವತದೆ
ಸೀತೆಯಂ ಕಂಡಿರ್ಪ ಮುದದಿಂದೆ ಪಾರುತ್ತೆ
ರಾಮಕಾರ್ಯಂ ಸಫಲಮಾಯ್ತೆಂದು ಪೇಳುತ್ತೆ
ಯುದ್ಧಮಂ ಗೆಯ್ವಮೆಂಬುತ್ಸಾಹದೊಳ್ ಮತ್ತೆ ೧೬೦
ಮೂದೆಸೆಗೆ ಪೋಗಿರ್ಪ ಕಪಿವೀರರಂ ಮೀರಿ-
ಪಂದದಿಂದಾಂ ಕಂಡು ಬಂದಿರ್ಪ ಗರ್ವದಿಂ 
ಮೆಯ್ಮರೆತು ಪಾರ್ದಪರ್
                         ಮಾರ್ಗದೊಳ್ ಕಂಡುದೊಂ-
ದದ್ಭುತಂ ನಂದನವನಾಭಮೇಂ ತೋಂಟಮಿದು
ಮೇಣಲ್ತು ಸಗ್ಗಮಂ ಸೃಷ್ಟಿಪೊಡೆ ಕೌಶಿಕಂ
ನಂದನಕೆ ಪ್ರತಿಯಾಗಿರಲ್ ತ್ರಿಶಂಕುವಿಗೆಂದು
ನಿರ್ಮಿಸಿರ್ದಪ ವನಮೊ! ಬೊಮ್ಮನೇನಾದಿಯೊಳ್
ಸಕಲವನಮಂ ರಚಿಪ ಮೂಲಮಾತೃಕೆಯೇನೊ!
ಎಂದೆನಿಪ ಚೆಲುವಿನಿಂದೆಸೆದತ್ತು ಮಧುವನಂ!
ಪಾನಸಕ್ತೋನ್ಮಾದಕಾರಕಂ ನಿಧುವನಂ! ೧೭೦
“ಅರರೆ! ಈಂಟಲ್ ಪೋಪಮೆಲ್ಲರುಂ ಮಧುವನೀ
ರಾಮಕಾರ್ಯಂಗೆಯ್ದ ಸಾಧನೆಗೆ ಸೊಗಮೀಯ-
ಲಾನಂದಪರಿವರ್ಧಕೋನ್ಮಾದಸಂಜನಕ
ಮಧುಪಾನಮೊಂದಲ್ತೆ! ಮಾರ್ಗದೊಳೆ ಸಂದುದೇಂ!”
ಎನುತುಮುಲಿಯಲ್ ಪಲವು ಕಪಿಗಳಾಲಿಸಿಯದಂ
ನುಡಿದನಂಗದನೊಲ್ದು ನೀಡುತಪ್ಪಣೆಯನೇ
“ಕಪಿವೀರರೇ! ಕೇಳಿಮಿದುವನಂ ಮಧುವನಂ
ರಾಜಸುಗ್ರೀವನಾ ಮಾವನಿಂ ಪಾಲಿತಂ
ದಧಿಮುಖಂ ರಕ್ಷಕಂ ತಾನಿಲ್ಲಿ. ನೀವಿಂತು
ಮಧುವನೀಂಟಿಂ ಮತ್ತೆ ನಿಗ್ರಹದೊಳಿರ್ಪುದೈ ೧೮೦
ಜಾಂಬವಂತಂ ಹನೂಮಂತನುಂ ಸಮ್ಮತಿಸೆ
ನಮಗೆಲ್ಲರೊಪ್ಪಿಗೆಯೆ ದೊರೆತಂತೆ ಅಕ್ಕುಂ”
ಅನುಮತಿಸೆ ಹನುಮನುಂ ಮೇಣೊಪ್ಪೆ ಜಾಂಬವಂ
ಪರಿದುದೇಂ ಧುಮ್ಮಿಕ್ಕಿ ನದಿಯಿಂತು ಕಣಿವೆಯೊಳ-
ಗೆಂಬಂತೆ ರಭಸದಿಂ ನುರ್ಗಿದರ್ ವಾನರರ್.
ಕದಳಿವನದೊಳಗಾನೆಗುಂಪೊಂದು ನುರ್ಗಿದಂ-
ತರರೆ! ಕಪಿಸಹಜಚಪಲತೆಯೊಳೇಂ ಗೆಯ್ದರೋ!
ಮಧುಭಾಂಡಮಂ ಸೆಳೆದು ಗಟಗಟನೆ ಪೀರುತುಂ
ಸರಸರನೆ ಮರನೇರಿ ದರದರನೆ ಸೆಳೆಯುತ್ತೆ
ಸುರುಸುರ್ರೆನುತೆ ಪೀರ್ದು ಡರಡರ್ರೆನುತೆ ತೇಗು- ೧೯೦
ತಮಲೊಳಗೆ ಮೆಯ್ಮರೆತರೊಂದೆಡೆಗೆ.
ಮಧುವನಂಫ ಲಪುಷ್ಪನಿಚಯದಿಂ ತರುಲತೆಯ ನಿಕರದಿಂ
ಸುರುಚಿರಸುಮೋದ್ಯಾನಮೆಂಬ ತೆರನಿರ್ದಪುದು
ತಣ್ನೆಳಲ್ ತುಂಬಿರ್ಪ ಶಾದ್ವಲಪರೀತಮುಂ
ಬಹುವಿಧದ ವೃಕ್ಷಂಗಳಿಂದೆ ತಾಂ ಮೆರೆದಪುದು
ಸುಗ್ರೀವಭೀತಿಯಿಂದಾರ್ಗಮುಂ ಪುಗಲಿದಕೆ
ಸಾಧ್ಯಮಿಲ್ಲಂ ನೋಡಿಮೆಂಬಂತೆ ಪೆಸರ್ವಡೆದ
ನಿಬಿಡತರುಗುಲ್ಮಂಗಳಿಂದೊಪ್ಪುತೆಸೆದಪುದು
ಜಗದ ಚಿತ್ರಂಬಿಡಿಪ ಕವಿ ಚಿತ್ರಕಾರನೇ
ವರ್ಣಸಂಮಿಶ್ರಣಕೆ ಪಿಡಿದಿರ್ಪ ಫಲಕಮಿದು ೨೦೦
ತಾನೆಂಬ ಪಾಂಗಿನಿಂ ಪೂಗಳಿಂ ತುಂಬಿರ್ಪು-
ದಾ ಸುಮದ ಮಕರಂದಪಾನದಿಂದುನ್ಮತ್ತ-
ಸಂಭ್ರಮದ್ ಭ್ರಮರಕುಲವಿಭ್ರಮಭರಂ ವಲಂ
ವನದೇವತಾಲಾಸ್ಯನೃತ್ತೋಪಹಾರಕೃತ
ಭೂಮಿದೇವಿಯ ಚೆಲ್ವದಾಣಮಾಗಿರ್ದಪುದು
ದೂರದಿಂ ವೆಟ್ಟೆಲ್ಲ ಕಣ್ಗೆ ನುಣ್ಣಗೆಯೆಂಬ
ನಾಣ್ಣುಡಿಯನಿದು ಪುಸಿಯ ಗೈದಿರ್ಪುದೆಂಬವೊಲ್
ನವುರಾದ ನೆಲದಿಂದೆ ನೆಲಸಿರ್ಪ ನಲವಿಂದೆ
ಮೆರೆದಿರ್ದಪುದು

ಮುಂದುವರೆಯುತ್ತದೆ.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ