Powered By Blogger

ಬುಧವಾರ, ಜುಲೈ 25, 2018

ಮಧುವನಮರ್ದನಂ - ೧

ಲಿಂಕ್ ಅಲ್ಲಿ ಇದನ್ನು ಕೇಳುತ್ತಾ ಓದಬಹುದು.


ಕನ್ನಡದಲ್ಲಿ ಸರಳರಗಳೆ- blank verse ಎಂದು ಪ್ರಸಿದ್ಧವಾದ ಛಂದಸ್ಸನ್ನು ಹಲವಾರು ಕವಿಗಳು ಈ ತನಕ ಬಳಸಿದ್ದಾರೆ. ಐದು ಮಾತ್ರೆಗಳ ನಾಲ್ಕು ಗಣಗಳು ಪ್ರತಿಯೊಂದು ಸಾಲಿಗೂ ಬರುತ್ತವೆ. ಇದರಲ್ಲಿ ಆದ್ಯಂತಪ್ರಾಸಯುಕ್ತವಾದದ್ದನ್ನು ಲಲಿತರಗಳೆ ಎಂದು ಕರೆದಿದ್ದಾರೆ. ನಮ್ಮ‌ಚಂಪೂಕವಿಗಳಾದ ಪಂಪ ರನ್ನ ನಾಗವರ್ಮ ರುದ್ರಭಟ್ಟ ಮೊದಲಾದವರ ಕಾವ್ಯಗಳಲ್ಲಿ ಕೂಡ ಈ ರಗಳೆಯೆಂಬ ಛಂದಸ್ಸು ಕಂಡುಬರುತ್ತವೆ. ಆದರೆ ಪ್ರಾಸವನ್ನು ಬಿಟ್ಟು ಕೇವಲ ಮಾತ್ರಾಗಣಘಟಿತವಾಗಿ ಕಂಡುಬರುವುದು ಬಹುಶಃ ಮೊದಲು ಗೋವಿಂದ ಪೈಗಳ ಖಂಡಕಾವ್ಯಗಳಲ್ಲಿಯೇ ಇರಬಹುದು. ಪ್ರಾಸತ್ಯಾಗವನ್ನು ಮಾಡಿದ ಮೊದಲಿಗರು ಗೋವಿಂದಪೈಗಳು. ಅವರು ಈ ಛಂದಸ್ಸನ್ನು "ಝಂಪೆ" ಎಂದು ಕರೆದಿದ್ದಾರೆ. ಅದೇ ಮಾದರಿಯಲ್ಲಿ ಮುಂದೆ ಹಲವಾರು ಕವಿಗಳು ಇದೇ ಮಾತೃಕೆಯ ರಗಳೆಯನ್ನು ಬಳಸಿದ್ದಾರೆ. ಕುವೆಂಪು ಅವರ ಚಿತ್ರಾಂಗದಾ ಮತ್ತು ರಾಮಾಯಣದರ್ಶನಂ ಕಾವ್ಯಗಳಲ್ಲಿ ಇದನ್ನೇ ಮಹಾಛಂದಸ್ಸು ಎಂದು ಕರೆದಿದ್ದಾರೆ. 
ಈ ಬಗೆಯ ರಗಳೆಗಳಲ್ಲಿ ಪಾದಗಳ ಮಿತಿಯಿಲ್ಲದ ಕಾರಣ ಕಲ್ಪನೆಯ ಚಿಗುರು ಮಹಾವೃಕ್ಷವೂ ಆಗಬಹುದು.ಹೀಗೆ ಬಹಳಷ್ಟು ಕವಿಗಳಿಗೆ ಪ್ರಿಯವಾದ ಈ ಛಂದಸ್ಸಿನಲ್ಲಿ "ಮಧುವನಮರ್ದನಂ" ಕಾವ್ಯವೂ ರಚನೆಯಾಗಿದೆ. ಕಥಾನಕವು ಪ್ರಸಿದ್ಧವಾದ ರಾಮಾಯಣದ ಸುಂದರಕಾಂಡದಲ್ಲಿ ಹನುಮಂತನು ಸೀತೆಯನ್ನು ಕಂಡು ಹಿಂತಿರುಗಿ ಬಂದ ಪ್ರಸಂಗವೇ ಆಗಿದೆ. ಕುವೆಂಪು ಅವರ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಈ ಭಾಗವನ್ನು ಅಷ್ಟು ವಿಸ್ತರಿಸಲಿಲ್ಲವಾದ ಕಾರಣ ನನ್ನ ಕಲ್ಪನೆಯನ್ನು ಒಂದಿಷ್ಟು ಬೆಳೆಸಿ ಈ ರೀತಿ ವಿಸ್ತರಿಸಿದ್ದೇನೆ. ಸೊಗಸಾದ ಕಥೆಯ ಹೂಬನದಲ್ಲಿ ನನ್ನ ಕಲ್ಪನೆಯ ಕಪಿಗಳು ನುಗ್ಗಿ ಹಾಳುಗೆಡವಿದವೋ ಏನೋ ಗೊತ್ತಿಲ್ಲ. ಇಲ್ಲಿನ ಕೆಲವೊಂದು ಉಪಮೆಗಳೆಲ್ಲ ಮೂಲದ ವಾಲ್ಮೀಕಿರಾಮಾಯಣದ ಉಪಮೆಗಳೇ ಆಗಿವೆ. ಆದರೂ ಯಥೋಚಿತವಾಗಿ ನನ್ನ ಮಾತುಗಳನ್ನೂ ಅಲ್ಲಲ್ಲಿ ಸೇರಿಸಿದ್ದೇನೆ. ಅಲ್ಲಿ ನಾಲ್ಕೈದು ಸರ್ಗಗಳಲ್ಲಿ ವಿಸ್ತಾರವಾಗಿರುವುದನ್ನು ಸಂಕ್ಷಿಪ್ತಗೊಳಿಸಿಕೊಂಡು ಬರೆದ ಈ ಕಾವ್ಯಖಂಡದಲ್ಲಿರುವ ಗುಣದೋಷಗಳನ್ನು ರಸಜ್ಞರು ಕಂಡು‌ ತಿಳಿಸುವುದು. 

~~~~~~~~~

~:ಮಧುವನಮರ್ದನಂ:~
“ಜಯಜಯ ಶ್ರೀರಾಮ” ಎನುತುಮುದ್ಘೋಷಿಸುತೆ
ಸಾಗರೋಲ್ಲಂಘನದ ಕಾರ್ಯಸಾಫಲ್ಯದಿಂ
ಕೃತಕೃತ್ಯನಾಗಿರ್ಪ ಮಾರುತಿಯನೇಕಧಾ-
ಲಂಕಾಪುರೋತ್ಪಾತಕೃತ್ಯಂಗಳಂ ಗೆಯ್ದು
ಪರಿಪರಿಯೊಳಲ್ಲಿರ್ಪ ರಕ್ಕಸರನುರೆ ಬಡಿದು
ಜಡಿದು ಕೆಡಪುತೆ ಮತ್ತೆ ಕೀಲ್ಗಳಂ ಸಡಿಲ್ಚುತ್ತೆ
ಪೀಡಾಪ್ರದೋನ್ಮಾದಕಾನಂದಸಂಪ್ರಾಪ್ತ
ಶ್ರೀರಾಮದೂತಂ ಪುನಃಸಾಗರದ ತರಣ-
ಚಿತ್ತಂ, ದಶಾನನಮನೋರಥಕ್ಕಿಕ್ಕಿರ್ಪ
ಕಿರ್ಚಂತೆ ಪುಚ್ಛಕಾಲಿಪ್ತಸಪ್ತಾರ್ಚಿಯಿಂ         ೧೦
ರಾವಣಾಸುರಪುರಮನಿರ್ದಿಲಾಗಿಸಿ, ಸೀತೆ
ಸೌಖ್ಯದಿಂದಿರ್ಪುದಂ ಮತ್ತೊರ್ಮೆಗಂ ತಿಳಿದು
ಶರಧಿಯಂ ಲಂಘಿಸಲ್ಕನ್ಯವೇಲೆಯೊಳಿರ್ಪ
ಸಖರನೀಕ್ಷಿಸಿ ದೌತ್ಯಸಾಫಲ್ಯನೈವೇದ್ಯ-
ಕಾತುರಂ ತಾನಾಗರಿಷ್ಟಪರ್ವತಶಿಖರ-
ಮಂ ಸಾರ್ದು ನಿಂದು ಮೇಣ್ ಮನದೆ ಮುಂ ಗೈವುದಂ
ನಿಶ್ಚಯಿಸಿದಂ ಪರ್ವತಾಗ್ರದೊಳ್ ಸಂದಿರ್ಪ
ಹನುಮಂತನಂ ವೀಕ್ಷಿಪೊಡನೆಂತುಟದ್ಭುತಂ!
ಮಂಗಲಾಂಕುರಮೊಂದು ಮಾರ್ಮಲೆವರೆಡೆಯೊಳಗೆ
ಮೊಳೆತು ಭವ್ಯಾಕೃತಿಯೊಳನ್ಯಾಯಮಂ ಕಳೆಯ-   ೨೦   
ಲಿಳೆಯಿಂದೆ ಪೊರಮಟ್ಟ ತೆರದಿಂದೆ ತೋರ್ದಪಂ!
ಬಳೆದಪಂ ಭೀಕರಾಕೃತಿಯಾಗಿ. “ವೃತ್ರನೇಂ
ಮತ್ತೆ ಜನಿಸಿದನೆಂತುಟುಸಿರ್ಗೊಂಡು ಶೀಘ್ರದಿಂ-
ದಿಂತುಟಾದನೆ” ಎಂದು ನಿರ್ಜರೇಶ್ವರನೊರ್ಮೆ
ಬೆಮರ್ದಪಂ ಬೆದರ್ದಪಂ. ತಾನೋಡಿ ಪೋಗಲ್ಕೆ
ಮುಗಿಲ ರಥಮಂ ದೂರಕಂ ಸರಿಸಿದನೆ ಎಂಬ
ಪಾಂಗಿನಿಂದಾಗಸಂ ತಿಳಿಯಾಯ್ತು. ಹನುಮನಂ
ಕಂಡಳ್ಕದವರುಂಟೆ? ರೌದ್ರಮೂರ್ತಿಯೆ ದಿಟಂ!
ನಗಮಿರ್ಪುದುನ್ನತಂ ಭೂರ್ಜವೃಕ್ಷಂಗಳಿಂ
ಪರಿಧಾನಪರಿವೇಷ್ಟಿತಮಿದೆಂಬ ಪಾಂಗಿನಿಂ.      ೩೦
ಮೇಘದೋಘಂ ತೂಗಿರಲ್ ಸಾನುದೇಶದೊಳ್
ಸಂದಿರ್ದಪುದು ಮತ್ತಮುತ್ತರೀಯದ ತೆರದೆ.
ಸೂರ್ಯನೆಳ್ಚರಿಸಲ್ ಕರಂಗಳಿಂ, ಪರ್ವತಂ
ಧಾತುಮಣಿಶಿಲೆಗಳಿಂ ಪೊಳೆಯುತ್ತೆ ನಿರ್ನೆರಂ
ಕಣ್ಗಳಂ ತೆರೆದಂತೆ ಭಾಸಿಪುದು. ತೋಯೌಘ-
ನಿಸ್ವನಂ ವೇದಘೋಷಸ್ವನಂ. ಸಂಗೀತ-
ಮಂಜುಲನಿನಾದದಂತೆಸೆದತ್ತು ನಿರ್ಝರಿಣಿ
ಪರಿವತುಲ ಮಂದ್ರಗಹನಸ್ವನಂ ಸುಸ್ವನಂ.
ರಾಮಸಂದರ್ಶನೋತ್ಸುಕನದಂ ಪತ್ತಿರಲ್
ಪದಘಾತದಿಂದುಪಲಚಯಮೆಲ್ಲ ಘೂರ್ಣಿತಂ     ೪೦
ಪುಡಿಪುಡಿಯದಾದತ್ತು. ಶಿಖರದೊಳ್ ನಿಂತಿರಲ್
ಹನುಮನಿವುಗಳುಮೆಲ್ಲಮವನ ಪದತಲದಲ್ಲಿ
ನಿಷ್ಪೀಡಿತಂಗಳಾದಪುವೆನಲ್ ಮಾರುತಿಯ
ರೂಪಮೇಂ! ಕಾಂಚನಾಭಂ ಕೇಸರಂಗಳಿಂ
ಮೇರುವಿನ ಖಂಡಮೇಂ ಜಗುಳಿತೋ ಪರಮೇಶ-
ದಿಙ್ಮಹಾತ್ಮೆಗೆ ನೆಲದ ಬಸಿರಿಂದಮೆಂದಿನಂ
ಪ್ರತಿಫಲಿಪ ನಿಜಕಿರಣನಿಕರಮಂ ಕಂಡು ಮೇಣ್
ಸಂಭ್ರಾಂತನಾದಪಂ. ವ್ಯೋಮಗೋಲಕಮಾತ-
ನುತ್ತಮಾಂಗದ ಮಕುಟದಿಂ ರಂಧ್ರಮಂ ತಳೆದು
ನಕ್ಷತ್ರಸಂಕುಲಂ ನೆರೆ ಬಿಳ್ದುದೋ ಎನಲ್             ೫೦
ದೇವಲೋಕದ ಪುಷ್ಪವೃಷ್ಟಿಯಾದುದು ನೋಡೆ
ಜಯಜಯೋದ್ಘೋಷದೊಡನೊಡನೆ ಆಗಳ್!
  
ಪರ್ವತನಿವಾಸಿಗಳ್ ಯಕ್ಷಕಿನ್ನರರಂತೆ
ಭುಜಗಗಂಧರ್ವಾದ್ಯರೀ ರೂಪಮಂ ಕಾಣ-
ಲೆನುತೆ ಪೊರಮಟ್ಟರೋ, ಮೇಣಾದಿ ದೇವನೆ-
ಳ್ತರವನಳೆಯಲ್ಕಜಂ ಪಲವಾರು ಮೆಯ್ದಳೆದು
ಚಿಮ್ಮಿರ್ಪನೋ ಎಂಬ ಪಾಂಗಿನಿಂ ಪಾರ್ದಪರ್!
ನೋಡುತ್ತುಮಿದನಿಂತು ಸ್ತಬ್ಧಂ ಜಗಚ್ಚಕ್ಷು
ಬೆಳ್ಪಾದಪಂ ಚಂದ್ರಮಂ ಭಯಂದೀವುತುಂ
“ಅಕಟ! ಸಾಲ್ಗುಂ ನಿನ್ನ ಬೆಳವಣಿಗೆ! ನಾಮಿರ್ಪ      ೬೦
ಲೋಕಮಂ ವಿಚ್ಛಿದ್ರಮಂ ಗೆಯ್ದಪುದು ಎಂದು
ಸ್ತುತಿಸಿದರ್ ವಾಯುಪುತ್ರನನೂರ್ಧ್ವಲೌಕಿಕರ್.
ಪಾತಾಳಲೋಕದಿಂ ಬಲಿಚಕ್ರವರ್ತಿಯೇಂ
ತಲೆಯ ಪೊರಮಡಿಸಿದನೊ! ಕಂಡದಂ ಹರಿ ಮತ್ತೆ
ತಳೆದಿರ್ದಪನೊ ತನ್ನ ದಿವ್ಯತ್ರಿವಿಕ್ರಮಾ-
ಕೃತಿಯಂ ಗಡೆಂದುದೊಂದೆಡೆಗಿಳೆಯ ಜನಮೆಲ್ಲ-
ಮೇನಿಂತುಟದ್ಭುತಮೊ! ಅಕ್ಕಜಮೊ! ಅಮಮ! ಜಗ-
ದೊಳಗಿದಂ ಕಂಡವರ್ ತಾಮೆಂತು ಧನ್ಯರೋ!

ಪದಯುಗಮನಿಳೆಗೊತ್ತಿ, ಮೊಳಕಾಲ್ಗಳಂ ಬಾಗಿ-
ಸೆಳೆಯುತ್ತೆ ಶ್ವಾಸಮಂ ಬಿಗಿಯುತೆರ್ದೆಯೊಳಗಂತು       ೭೦
ಜೀಂಕಿದಂ ಗಗನಕ್ಕೆ ಪೆರ್ವೆರಲ್ ತುದಿಯಿಂದೆ,
ಕಂಪಿಸಲ್ಕಿಳೆಯೊರ್ಮೆಗರೆಗುಣ್ಪು ಪುಡಿಯಾಯ್ತು
ಸುಳಿಗಾಳಿಯೆಳ್ದು ಮೇಣ್ ತಿರುಗಿದುದು, ಬಲಿಯಂತೆ
ಭೂಧರಂ ರಸೆಯನೇ ಪೊಕ್ಕಿರ್ಪುದಾಕ್ಷಣಂ.
ಶಿವಕಾರ್ಮುಕದಿನಂದು ನಾರಾಯಣಾಖ್ಯಶರ-
ಮೆಂತು ಪೊಣ್ಮಿತೊ ಅದಂ ಪಡಿಮಿಸಲ್ ನೋಂತನೇಂ!
ಸುರರ ಸೊದೆಗೊಬ್ಬಂ ಕರಗಿಪೆನೆನೆ ರಾವಣಂ
ಪೂಡಿರ್ಪುದಸ್ತ್ರಮೇಂ ನಮ್ಮೆಡೆಗೆ ಬರ್ಪುದೈ
ಎನುತೆ ಭೀತಿಯನಾಂತಿರಲ್ ಸುರೇಂದ್ರಂ ವಲಂ
ಬಳಿಕದೊಳ್ ಮಾರುತಿಯೆ ಪೊಣ್ಮುತುಣ್ಮಿರ್ಪುದಂ
ಕಂಡು -”ಶೈಶವದೊಳಗೆ ಸೂರ್ಯಮಂಡಲಮನೇ
ಪಣ್ಣೆಂದು ತಿಳಿದು ತಾಂ ತಿನಲೆಂದು ಪಾರಿರ್ಪ-
ನಿಂದೇನಜಾಂಡಮಂ ನುಂಗಲ್ಕೆ ಬಂದನೋ!
ಹರಿ ಹರೀ! ರಕ್ಷಿಸೈ” ಎನುತೆ ಕೂಗಿರ್ದಪಂ!

ಮೇಘಶೈವಲಯುಕ್ತಮುಂ ಚಂದ್ರಕುಮುದಾನ್ವಿ
ತಮುಮರ್ಕಕಾರಂಡವಂಗೂಡಿಕೊಂಡಿರ್ಪ
ಗ್ರಹತಾರಕಾಳಿಯೇ ತಿಮಿತಿಮಿಂಗಿಲಕುಲಂ
ನೀಹಾರಿಕಾನಕ್ರನಿಕರಯುತಮುಂ ಸಂದ
ಐರಾವತಾದಿ ದಿಗ್ಗಜಮೆಲ್ಲ ದ್ವೀಪಂಗ
ಳೆನಿಸಿರ್ಪ ಚಂಡಮಾರುತತರಂಗಾನ್ವಿತಂ    ೯೦
ಚಂದ್ರಿಕಾಸಲಿಲಿಸಂಚಯಮಿರ್ಪಪಾರಮಂ
ಗಗನಾರ್ಣವಮನಿಂತು ಹನುಮಂತನೇ ಬೃಹನ್
ನೌಕೆಯಾಗುತೆ ತೇಲುತುಂ ಸಾಗಿ ದಾಂಟಿದಂ!
ಸೀತೆ ಸಿಲ್ಕಿದಳೆಂಬ ಸೊದೆವಾತನುಯ್ದಿರ್ಪ-
ನೀತಂ ಸುಪರ್ಣನೇಂ! ರಾಮನಾ ವಿರಹಮಂ
ತಣಿಸಲ್ಕೆ ಭೇಷಜಮನರಿತಿರ್ಪ ಬೆಜ್ಜನೇಂ!
ಮೇಘಮಾಲಿಕೆಯೀತನಂ ಪುರಸ್ಕರಿಸಿರ್ಪ
ಪುಷ್ಪಮಾಲಿಕೆಯಾಯ್ತೆ!
ಅಕಟ! ಮತ್ತಿನ್ನಾರೊ
ಸಾಗರದ ಮಥನಕ್ಕೆ ಮಂದರಮನುರಗದಿಂ
ಬಿಗಿದು ತರುತಿರ್ಪರೇಂ! ವಿಷಮೆ ಪುಟ್ಟುಗುಮೆಂದು   ೧೦೦
ಬೆದರಿದಪಳುಮೆ ಕಪಿಯ ಬಾಲಮಂ ಕಂಡು!

~~~~~~~~
ಮುಂದುವರೆಯುತ್ತದೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ