Powered By Blogger

ಮಂಗಳವಾರ, ಜೂನ್ 2, 2015

ಸಹೃದಯಕಾಲ-೧೯ ಅಗಸ್ತ್ಯ ಚರಿತೆ

ರಸ-ಧ್ವನಿ-ಔಚಿತ್ಯ ಇವುಗಳಿಗೆ ಪೂರಕವಾಗಿ ಕಾವ್ಯವೊಂದು ಬರೆಯಲ್ಪಟ್ಟರೆ ಸತ್ಕಾವ್ಯವೆನಿಸಿಕೊಳ್ಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಬರೆಯುವ ಓಘದಲ್ಲಿ ಹೇಗೆ ಹೇಗೋ ಸಾಗುವ ಕಾವ್ಯದಲ್ಲಿ ಇದು ಸಾಧ್ಯವಾಗುವುದು ಸಿದ್ಧರಿಗೆ ಮಾತ್ರ. ಯಾಕೆಂದರೆ ಅವರು ಸಾಧನೆ ಮಾಡಿರುತ್ತಾರೆ.
ಹೀಗೆ ಬರೆಯುವಾಗ ಅಲ್ಲಲ್ಲಿ ಪೂರ್ವಕವಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಧಾವಿಸುವ ಬಯಕೆ ಹುಟ್ಟದೇ ಹೋಗುವುದಿಲ್ಲ. ಅದರಲ್ಲಿ ಸಫಲರಾಗದಿದ್ದರೂ ಪದ್ಯದಲ್ಲಿ ಪೂರ್ವಕವಿಯ ಛಾಯೆ ಗೊತ್ತಾಗುವುದು ಸಹಜ.
ಹಾಗೆ ಇತ್ತೀಚೆಗೆ ಬರೆದು ಮುಗಿಸಿದ "ಅಗಸ್ತ್ಯಚರಿತೆ"ಕಾವ್ಯದಲ್ಲಿ ಎಷ್ಟೋ ನೀರಸ-ಧ್ವನಿರಹಿತ-ಅನುಚಿತ ಪದ್ಯಗಳು ಸೇರಿಕೊಂಡಿವೆ. ಚಿತ್ರಚಮತ್ಕಾರಗಳನ್ನು ಶ್ಲೇಷವನ್ನು ಮಾಡುವಲ್ಲಿ ಕ್ಲೇಶವೊದಗಿ ಅಲಂಕಾರ "ಅಲಂ"ಕಾರ(ಸಾಕಪ್ಪಾ ಸಾಕು ಎನಿಸುವಂತೆ) ಕೂಡ ಆಗಿದೆ. ಕವಿಗಳಿಗೂ ಸಹೃದಯರಿಗೂ ಇವೆಲ್ಲ ವೇದ್ಯವಾದ ಕಾರಣ ಹೆಚ್ಚು ವಿಸ್ತರಿಸುವ ಆವಶ್ಯಕತೆ ಇಲ್ಲ.

ಇಲ್ಲಿ ರಸಮಯ ಎಂದೆನಿಸಿದ ಕೆಲವು ಪದ್ಯಗಳನ್ನು ಹಂಚಿಕೊಳ್ಳುವ ಬಯಕೆಯಿಂದ ಹಾಕುತ್ತಿದ್ದೇನೆ. ಬಾಣನಂತೆ ಪರಿಸಂಖ್ಯಾಲಂಕಾರದ ಮೋಹ ಕವಿದಿದೆ.
ಅಗಸ್ತ್ಯ ಸಮುದ್ರಪಾನವನ್ನು ಮಾಡಲು ಬರುವಾಗಿದ್ದ ಸಮುದ್ರವರ್ಣನೆಯ ಪದ್ಯ.

ಮತ್ತೇಭವಿಕ್ರೀಡಿತ||

ಘನದಂದಂ ಜಲಗರ್ಭನಂಬರನದೀಧಾಮಂ ಹರಂಬೋಲ್ತು ಜೀ-

ವನಲಾವಣ್ಯಕರಂ ವಿರಿಂಚಿಕೃತಲೇಖಂಬೊಲ್ ಸಮುದ್ರಂ ಸ್ವಯಂ
ಧನಮಂಜೂಷೆಯವೊಲ್ ಸದಾನವಪಥಂ ಕಾಡೆಂಬವೋಲೇ ಸುರೇಂ-
ದ್ರನವೊಲ್ ವಾರ್ಧಿಯದಾಯ್ತಧಃಕೃತಮಹಾದಿಙ್ನಾಗದಿಂದಾವಗಂ||
ತಾತ್ಪರ್ಯ- ಸಮುದ್ರವು ಮೋಡದಂತೆ ಜಲಗರ್ಭ(ನೀರನ್ನು ಗರ್ಭದಲ್ಲಿ ಉಳ್ಳದ್ದು) ,
ಶಿವನಂತೆ ಅಂಬರನದೀಧಾಮ (ಗಂಗಾನದಿ ಸೇರುವ ಸ್ಥಳ), ಬ್ರಹ್ಮ ಬರೆದ ಹಣೆಯ ಬರೆಹದಂತೆ ಜೀವನಲಾವಣ್ಯಕರ(ಬ್ರಹ್ಮಲೇಖ- ಜೀವನದಲ್ಲಿ ಲಾವಣ್ಯವನ್ನು ಉಂಟುಮಾಡುತ್ತದೆ. ಸಮುದ್ರ- ಜೀವನ ಅಂದರೆ ನೀರನ್ನು ಲಾವಣ್ಯ ಅಂದರೆ ಲವಣದ ಭಾವ-ಉಪ್ಪು ರುಚಿ ಆಗುವಂತೆ ಮಾಡುತ್ತದೆ)
ಸ್ವಯಂ ಧನಮಂಜೂಷೆ-ದುಡ್ಡಿನ ಪೆಟ್ಟಿಗೆಯಂತೆ ಸಮುದ್ರ (ಸಮುದ್ರ ಎಂದರೆ ಮುದ್ರೆ/ಬೀಗದಿಂದ ಕೂಡಿದ್ದು ಎಂಬ ಅರ್ಥವೂ ಇದೆ) ಕಾಡಿನಂತೆ ಸದಾನವಪಥ (ಸ+ದಾನವಪಥ-ರಾಕ್ಷಸರ ಹಾದಿಯಿಂದ ಕೂಡಿದ್ದು, ಸದಾ+ನವಪಥ- ಯಾವಾಗಲೂ ಹೊಸ ಹಾದಿಯನ್ನೇ ಉಳ್ಳದ್ದು) ಸುರೇಂದ್ರನಂತೆ ಅಧಃಕೃತಮಹಾದಿಙ್ನಾಗದಿಂದ (ಇಂದ್ರ-ಯಾವತ್ತೂ ಮಹಾದಿಗ್ಗಜ ಐರಾವತವನ್ನು ಏರುತ್ತಾನೆ, ಸಮುದ್ರಕೂಡ ಅಷ್ಟದಿಗ್ಗಜಗಳನ್ನೂ ಕೆಳಕ್ಕೆ ಹಾಕಿರುತ್ತದೆ)
ಇಲ್ಲಿ ಬಳಸಿದ ಶಬ್ದಗಳ ಸಮಸ್ತಪದದ ಬದಲು ಅದೇ ಅರ್ಥ ಕೊಡುವ ಬೇರೆ ಶಬ್ದಗಳನ್ನು ಹಾಕಿದರೆ ಹೊಂದಾಣಿಕೆ ಇರುವುದಿಲ್ಲ. ಸಮಸ್ತಪದದ ಶ್ಲೇಷ ಉಪಮಾನ ಉಪಮೇಯ ಇವೆರಡಕ್ಕೂ ಅನ್ವಯವಾಗುವಂತಿರುತ್ತದೆ ಎಂಬುದೇ ಸ್ವಾರಸ್ಯ. ಬಾಣಭಟ್ಟನನ್ನು ಓದಿದವರಿಗೆ- ಸಾವಿರ ರೂಪಾಯಿ ನೋಟನ್ನು ಹಿಡಿದುಕೊಂಡವನಿಗೆ -ನಾಕಾಣೆ ಬಿಲ್ಲೆಯನ್ನು ತೋರಿಸಿದಂತೆ ಆಗುತ್ತದೆ ಅಷ್ಟೆ :-)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ