ಮಹಾಕಾವ್ಯದ ಬಗ್ಗೆ ಅದರಲ್ಲಿ ಬರುವ ಅಷ್ಟಾದಶ ವರ್ಣನೆಗಳು ಬಗ್ಗೆ ಎಲ್ಲ ಈ ಹಿಂದೆ ಬರೆದ ಲೇಖನಗಳಲ್ಲಿ ವಿವರಿಸಿದ್ದೆ. ಹಾಗೆ ಪೂರ್ವಕವಿಗಳ ಕಾವ್ಯವನ್ನು ಅವಲೋಕಿಸಿದಾಗ ಸಿಗುವ ಅನೇಕ ಪದ್ಯಗಳಲ್ಲಿ ಪ್ರಕೃತಿಯ ವರ್ಣನೆ ಅಸಂಖ್ಯವಾಗಿ ಸಿಗುತ್ತವೆ. ಅವುಗಳನ್ನೇ ಒಂದು ಸಂಗ್ರಹವಾಗಿ ಬರೆದ ಕೃತಿಗಳೂ ಅನೇಕ. ಕಾವ್ಯಾವಲೋಕನದಲ್ಲಿ ಅಲಂಕಾರಗಳನ್ನು ವಿವರಿಸುವಾಗ ಲಕ್ಷ್ಯಕ್ಕೆ ಬೇರೆ ಬೇರೆ ಕವಿಗಳ ಪದ್ಯಗಳನ್ನು ಉದ್ಧರಿಸಿದರೆ ಸೂಕ್ತಿಸುಧಾರ್ಣವದಂತಹ ಕೃತಿಗಳಲ್ಲಿ ಅಷ್ಟಾದಶವರ್ಣನೆಗಳನ್ನೇ ಆಶ್ವಾಸಗಳಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ.
ಹೀಗೆ ಮಲ್ಲಿಕಾರ್ಜುನ ಕವಿಯ "ಸೂಕ್ತಿಸುಧಾರ್ಣವ"ವನ್ನು ಅವಲೋಕಿಸುತ್ತಿರುವಾಗ ಸಿಕ್ಕ ಪದ್ಯ- ಲೀಲಾವತಿಯಿಂದ ಉದ್ಧೃತವೆಂದು ಅಲ್ಲಿಯೇ ಕೊಟ್ಟಿದ್ದ. ಸೂರ್ಯೋದಯವನ್ನು ವರ್ಣಿಸುವ ಪದ್ಯ ಹೀಗಿದೆ.
ವಾರುಣಿ ಕಳ್ಳನೀಂಟಿ ಮಱೆದಿಕ್ಕಿದ ಬಟ್ಟಲೊ ಭೀತಿಯಿಂ ನಿಶಾ-
ಸ್ವೈರಿಣಿ ಪೋಗೆ ಬಿರ್ದ ಕಿವಿಯೋಲೆಯ ಮೌಕ್ತಿಯ ಪತ್ರಮೋ ನಭೋ -
ವಾರಣಮೊಲ್ಲದೊಕ್ಕ ದಧಿಪಾಂಡುರಪಿಂಡಮೊ ಪೇೞೆನಲ್ಕೆ ನೀ-
ಹಾರಮಯೂಖಮಂಡಲಮದೇನೆಸೆದಿರ್ದುದೊ ಪಶ್ಚಿಮಾದ್ರಿಯೊಳ್||
(ಲೀಲಾವತಿ ೩-೩)
ವಾರುಣಿ (ಪಶ್ಚಿಮ ದಿಕ್ಕು/ ಮದ್ಯದ ಒಂದು ವಿಧ) ಕಳ್ಳನ್ನು ಕುಡಿದು ಮರೆತು ಇಟ್ಟ ಬಟ್ಟಲೋ, ಭೀತಿಯಿಂದ ರಾತ್ರಿ ಎನ್ನುವ ಸ್ವೈರಿಣಿ ಹೋಗುವಾಗ ಅವಳ ಕಿವಿಯಿಂದ ಬಿದ್ದ ಓಲೆಯ ಚಿಪ್ಪೋ, ಅಥವಾ ಆಕಾಶ ಎನ್ನುವ ಆನೆ ತಿನ್ನಲು ಒಲ್ಲದೆ ದೂರವಿಟ್ಟ ಮೊಸರನ್ನದ ಉಂಡೆಯೋ ಎಂಬ ರೀತಿಯಲ್ಲಿ ಹಿಮದ ಕಿರಣಮಂಡಲ(ಚಂದ್ರ) ಪಶ್ಚಿಮದ ಬೆಟ್ಟದಲ್ಲಿ ಕಾಣುತ್ತಿತ್ತು
ಇಲ್ಲಿ ಕೊಡುವ ನಾಲ್ಕು ಚಿತ್ರಣಗಳನ್ನು ನೋಡಿದರೆ ಕವಿಯ ಕಲ್ಪನೆ ಎಷ್ಟು ಸುಂದರ ಎನಿಸುತ್ತದೆ. ಕುವೆಂಪು ಅವರು "ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ" ಎಂದು ಹೇಳಿದ್ದು ಎಷ್ಟು ಸತ್ಯ ಎನಿಸುತ್ತದೆ. ಸಾಮಾನ್ಯರಿಗೆ ಪ್ರಕೃತಿಯ ಶಕ್ತಿಯ ಮೂಲವಾಗಿ ಅಲ್ಲದೆ ಹಲವು ರೀತಿಯಿಂದ ವರವೆನಿಸಿದರೆ, ಕವಿಗಳ ಪಾಲಿಗೆ ಹೊಸ ಕಲ್ಪನೆಯನ್ನು ಹುಟ್ಟಿಸುವುದರಿಂದ, ಸಹೃದಯರ ಪಾಲಿಗೆ ಕವಿಕಲ್ಪನೆಯನ್ನು ಆಸ್ವಾದಿಸಲು ಉಪಯುಕ್ತವಾಗಿರುವುದರಿಂದ ವರವೆನಿಸಿದೆ ಎಂಬುದು ನಿಸ್ಸಂಶಯ.