ಶುಕ್ರವಾರ, ಮಾರ್ಚ್ 21, 2014

ಸಹೃದಯಕಾಲ-೧

'ಸಹೃದಯಕಾಲ'
ಕವಿಯ ಕಾವ್ಯದ ಸ್ವಾರಸ್ಯವನ್ನು ಅರಿಯಬಲ್ಲವನೇ ಸಹೃದಯ. ಹಲಕೆಲವು ಹಳೆಗನ್ನಡ ಕಾವ್ಯಗಳ ಸ್ವಾರಸ್ಯಕರ ಪದ್ಯಗಳನ್ನು 'ಸಹೃದಯಕಾಲ'ದಲ್ಲಿ ಚುಟುಕಾಗಿ ನೋಡೋಣ.
ಹಳಗನ್ನಡ ಕಾವ್ಯದಲ್ಲಿ ನನಗೆ ಚೆನ್ನಾಗಿ ಕಂಡ ಪದ್ಯಗಳಿಗೆ ಹಾಗೆಯೇ ಬೇರೆಯವರು 'ಈ ಪದ್ಯ ಚೆನ್ನಾಗಿದೆ' ಎಂದು ಹೇಳಿದ ಪದ್ಯಗಳಿಗೆ ನನ್ನದೇ ಆದ ಅಡಿಟಿಪ್ಪಣಿಯೊಂದಿಗೆ ಯಥಾಮತಿ ವಿಮರ್ಶಿಸಿ ಇಲ್ಲಿ ಹಾಕುತ್ತೇನೆ. ಒಟ್ಟಾರೆ ಸಹೃದಯರಿಗೆ ಸಂತೋಷವಾದರೆ ನಾನಷ್ಟು ಕೃತಾರ್ಥನಾದಂತೆ.

ಸಾಂದರ್ಭಿಕ ಚಿತ್ರ-ಅಂತರ್ಜಾಲಕೃಪೆ
ಆದಿಕವಿ ಪಂಪನ ಎರಡು ಕೃತಿಗಳೆಂದರೆ 'ವಿಕ್ರಮಾರ್ಜುನವಿಜಯ' ಹಾಗೂ 'ಆದಿಪುರಾಣ'. ವಿಕ್ರಮಾರ್ಜುನವಿಜಯದಲ್ಲಿ ಮಹಾಭಾರತ ಕಥೆಯನ್ನು ಹಲವು ಬದಲಾವಣೆಗಳೊಂದಿಗೆ ಕನ್ನಡದಲ್ಲಿ ಚಂಪೂ(ಗದ್ಯಪದ್ಯಮಿಶ್ರಿತ)ಶೈಲಿಯಲ್ಲಿ ಬರೆದಿದ್ದಾನೆ. ಇದರಲ್ಲಿ ತನಗೆ ಆಶ್ರಯವನ್ನು ಕೊಟ್ಟ ಚಾಲುಕ್ಯರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಡನೆ ಸಮೀಕರಿಸಿ ವರ್ಣಿಸುತ್ತಾನೆ. ಕೆಲವುಕಡೆಗಳಲ್ಲಿ ಇದು ರಸಾಭಾಸಕ್ಕೆ ಕಾರಣವಾದರೂ ಕೆಲವು ಅರಿಕೇಸರಿಯನ್ನು ವರ್ಣಿಸುವ ಪದ್ಯಗಳಲ್ಲಿ ಒಳ್ಳೆಯ ಕಲ್ಪನೆಯನ್ನು ಕಾಣಬಹುದಾಗಿದೆ. ಅಂತಹ ಒಂದು ಪದ್ಯ ಮೊದಲ ಆಶ್ವಾಸದ ೪೬ನೆಯದು-

ಕಂದಪದ್ಯ
ಉಡೆವಣಿ ಪಱಿಯದ ಮುನ್ನಮೆ
ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡ
ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ||

ಈ ಪದ್ಯದಲ್ಲಿ ಪಂಪನು ಅರಿಕೇಸರಿಯ ಬಗ್ಗೆ ಹೀಗೆ ಹೇಳುತ್ತಾನೆ :- "ಅರಿಕೇಸರಿ ರಾಜನು ಹುಟ್ಟಿ ಇನ್ನೂ ಉಡುದಾರ ಹರಿದುಹೋಗುವ ಮುನ್ನವೇ( ಅಂಬೆಗಾಲಿಕ್ಕುವ ಕಾಲದಲ್ಲಿ)  ಅವನ ಸಾಹಸವು ಬೆಳೆದು ಶತ್ರುಗಳ ಬಲವನ್ನು ನಾಶಮಾಡಿ ಶತ್ರುಬಲದ ರಕ್ತವೆಂಬ ಸಮುದ್ರದಲ್ಲಿ ಜಿಗಳೆ(ಜಿಗಣೆ/ಜಿಗುಳೆ/leach) ಬೆಳೆಯುವಂತೆ (ಅಂಬೆಗಾಲಿಕ್ಕುತ್ತಾ/ತೆವಳುತ್ತಾ) ಬೆಳೆದ"
ಇಲ್ಲಿ 'ಶತ್ರುಗಳ ಬಲದ ರಕ್ತಸಮುದ್ರದ ಜಿಗಳೆ' ಎಂಬ ಒಂದು ರೂಪಕವನ್ನು ಕೊಡುವುದರ ಮೂಲಕ ತನ್ನ ರಾಜನು ಹುಟ್ಟುವಾಗಳೇ ಶತ್ರುರಾಜರು (ಅರಿಕೇಸರಿಯ ತಂದೆಯಿಂದಲೋ ತಾತನಿಂದಲೋ-ಇರಬಹುದು-) ನಾಶವಾದದ್ದನ್ನೂ ರಿಪುಗಳ ಬಲದ ರಕ್ತವೇ ಸಮುದ್ರದಂತಿತ್ತೆಂಬುದನ್ನೂ ಅರಿಕೇಸರಿ ಅಂಬೆಗಾಲಿಕ್ಕುವುದು ಜಿಗಳೆ ಹೋದಂತಿತ್ತೆಂಬ ಅತಿಶಯೋಕ್ತಿಯ ಭಾವವನ್ನೂ ಅತಿಚಿಕ್ಕ ಛಂದಸ್ಸಾದ ಕಂದಪದ್ಯದಲ್ಲಿ ತಂದು ಸೊಗಸಾದ ಪದ್ಯ ರಚಿಸಿದ್ದಾನೆ.