Powered By Blogger

ಸೋಮವಾರ, ಡಿಸೆಂಬರ್ 17, 2012

ಶತಾವಧಾನ ಶಂಸನ

ಇಂದುನಂದನ।।
ಧಾರೆಯಿರೆ  ಮೀರೆಶತಪದ್ಯಪಥ  ಪನ್ಥಂ
ಸಾರತರ ಮೇಣ್ ರಸದೆ ಮಗ್ನಮದು ಮತ್ತಂ ।
ಸ್ಫಾರವಿರಲೂರ  ಜನಕಣ್ಪಕತ ಕಜ್ಜಂ
ಧೀರ ವರ-ಧಾರಕಗೆ ಸತ್ವಸರ ಸಲ್ಗುಂ ।।
(ಇಂದುನಂದನ ವೃತ್ತದಲ್ಲಿ ಹಾರಬಂಧ -ಶತಾವಧಾನ ಶಾರ್ವರೀ ಶಶಾಂಕ ಎಂಬ ಬಿರುದು ಪಡೆದ ಶತಾವಧಾನೀ ಆರ್ ಗಣೇಶ  ಅವರಿಗೆ "ಇಂದು ನಂದನ" ಛಂದಸ್ಸಿನಲ್ಲಿ ವಂದಿಸುವುದು ಸೂಕ್ತ ಎನಿಸಿತು. ಅಲ್ಲದೆ ಹಾರ ಬಂಧ ದ ಮೂಲಕ ಗೌರವ
ಸಲ್ಲಿಸಿದ ಹಾಗೂ ಆಯಿತು)
(ಅರ್ಥ-ಧಾರೆ ಯಲ್ಲಿ ನೂರಕ್ಕೂ ಹೆಚ್ಚು ಪದ್ಯರಚಿಸುವ ಪಂಥ ಇದು. ಸಾರದಿಂದ ಕೂಡಿದ ರಸ ದಲ್ಲಿ ಮುಳುಗಿತ್ತು ಮತ್ತು ವಿಸ್ತಾರವಾಗಿತ್ತು ಊರ ಜನರಿಗೆ (ಅಣ್ಪು-)ಬಾಂಧವ್ಯಕ್ಕೆ  (ಕತ -)ಕಾರಣವಾದ (ಕಜ್ಜ -)ಕಾರ್ಯವಾಗಿತ್ತು ಧೀರರಾದ (ವರಧಾರಕ-)ಇದನ್ನು ಧರಿಸಿದ ಶ್ರೇಷ್ಠ ಶತಾವಧಾನಿಗಳಿಗೆ ಸತ್ವಯುತ ಸರ-ಹಾರ ಶೋಭಿಸುತ್ತದೆ.)

ಹಾರಬಂಧ

ಚಂಪಕ ಮಾಲೆ ।।
ಸರಸತಿಯಾಡಿದಳ್ ಶತವಧಾನದೆ ರಾಗರ ಜಿಹ್ವೆಯೊಳ್ ಗಡಂ 
ಸುರುಚಿರ ಪದ್ಯಪಾನದೊಳು ಮತ್ತರೆನಲ್ ಸಕಲರ್ ನೋಡುಗರ್ ।
ಧರಣಿಯೊಳೇಗಳುಂ ನೆನೆವ ಕಜ್ಜಮಿದಲ್ತೆ ಎನುತ್ತೆ ಪೃಚ್ಛಕರ್ 
ಪರವಶರಾದರೈ ನಮಿಪೆನೀತೆರ ಚಂಪಕಮಾಲೆಯಿತ್ತು ನಾಂ ।।
(ಚಂಪಕ ಮಾಲೆ ಅಂದರೆ ಸಂಪಿಗೆಯ ಮಾಲೆ ಇದರ ಮೂಲಕ ಶತಾವಧಾನಿಗಳಿಗೆ ಇನ್ನೊಂದು ಹಾರ ಸಮರ್ಪಣೆ )
(ಅರ್ಥ-ಸರಸ್ವತಿ ಶತಾವಧಾನದಲ್ಲಿ ಗಣೇಶರ ನಾಲಿಗೆಯಲ್ಲಿ ಆಡಿದಳು. ರುಚಿರ ಪದ್ಯ ಪಾನದಲ್ಲಿ ನೋಡುಗರು ಮತ್ತರಾದರು "ಭೂಮಿಯಲ್ಲಿ ಯಾವತ್ತೂ ನೆನೆಯುವ ಕಾರ್ಯವಿದಲ್ಲವೇ?" ಎಂದು ಪೃಚ್ಛಕರು ಪರವಶರಾದರು. ಅದಕ್ಕೆ ಈ ಚಂಪಕಮಾಲೆಯಿತ್ತು ನಮಿಸುತ್ತೇನೆ.)

ಮದನವತಿ ।।
ಸೊಗಯಿಸಿ ಮೂರ್ದಿನ ಜಗವನ್ನಾಂ ಮರೆತಿರ್ದೆ ಶತವಧಾನಂ 
ಯುಗಗಳ ಪಿಂತಿರ್ದ ರಾಯರ ಕಾಲದ ಸಭೆಯೆಂಬಂತೆ 
ನಗಿಸುತ್ತೆ ವಿದ್ವದ್ವಿಷಯಗಳಂ  ತಿಳಿಸುತ್ತೆ ಮೆರೆದಿತ್ತು ಮೇಣ್ 
ನೊಗ ಪೊತ್ತ ಸಕಲರ್ಗೆ ವಂದಿಪೆಂ ಮುದದಿಂದೊಳ್ಳಿತ್ತಾಗಲೈ ।।
(ಶತಾವಧಾನ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೆ ಮದನವತಿ ಎಂಬ ಅಪರೂಪದ ಅಂಶ ಛಂದಸ್ಸಿನಲ್ಲಿ ವಂದನೆ)
(ಅರ್ಥ- ಸಂತಸದಿಂದ ಮೂರು ದಿನ ಜಗತ್ತನ್ನೇ ಮರೆತಿದ್ದೆ. ಶತಾವಧಾನವು ಯುಗ ಯುಗಗಳ ಹಿಂದೆ ಇದ್ದ ರಾಜರ ಒಡ್ಡೋಲಗ ಎಂಬಂತೆ ನಗಿಸುತ್ತ ಹಲವು ವಿದ್ವದ್ ವಿಷಯಗಳನ್ನು ತಿಳಿಸುತ್ತ ಮೆರೆದಿತ್ತು. ಇದರ ಭಾರವನ್ನು ಹೊತ್ತ ಎಲ್ಲರಿಗೆ ವಂದಿಸುತ್ತೇನೆ. ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ