ಬಹಳ ದಿನಗಳ ಹಿಂದೆ ಒಮ್ಮೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಗುರುರಾಜ ಕರ್ಜಗಿಯವರು ತಮ್ಮ ಅಂಕಣ "ಕರುಣಾಳು ಬಾ ಬೆಳಕೆ" ಇದರಲ್ಲಿ ಬರೆದಿದ್ದರು. ಅದನ್ನು ಓದಿದ ನಂತರ ತುಂಬಾ ದಿನಗಳ ಕಾಲ ನನ್ನ ಮನಸ್ಸಿನಲ್ಲೇ ಕೊರೆಯುತ್ತಿತ್ತು. ತುಂಬಾ ಕಾಡುತ್ತಿತ್ತು. ಅದನ್ನು ಮತ್ತೆ ನಾಲ್ಕು ಜನರಿಗೆ ತಿಳಿಸಿದರೆ ಸ್ವಲ್ಪ ಸಮಾಧಾನ ಅಲ್ಲವೇ?
ಅದನ್ನು ಓದಿದ ನಂತರ, ನಮ್ಮ ದೃಷ್ಟಿ ಯಾವ ರೀತಿಯಲ್ಲಿ ವಿಸ್ತಾರಗೋಳ್ಳಬೇಕಿದೆ, ಕೆಲವೊಮ್ಮೆ ಹೇಗೆ ಯೋಚಿಸಿ ಮಾತನಾಡಬೇಕಾಗುತ್ತದೆ, ಎಂದೆಲ್ಲ ಚಿಂತಿಸತೊಡಗಿದೆ. ಆ ಕಥೆ ಇಲ್ಲಿದೆ(ಯಥಾವತ್ತಾಗಿ ಅಲ್ಲ ಸಾರ ಸಂಗ್ರಹ ಮಾತ್ರ.). ಅದನ್ನು ಓದಿ ನಿಮ್ಮ ಮನಸ್ಸಿಗೆ ಏನೆನ್ನಿಸುತ್ತೆ ಅನ್ನುವುದನ್ನು ತಿಳಿಸಿ.
"ಒಬ್ಬ ವಯೋವೃದ್ಧ ತಂದೆ ತನ್ನ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಬಹುಶಃ ಅವರ ವಯಸ್ಸು ಅರವತ್ತಕ್ಕೆ ಸಮೀಪ ಇತ್ತು. ಅವರ ಮಗನ ವಯಸ್ಸು ಸುಮಾರು ಇಪ್ಪತ್ತೈದು ಇರಬಹುದು. ಆ ಮಗ ಕಿಟಕಿಯಂಚಿಗೆ ಕುಳಿತಿದ್ದ. ಹೊರಗಡೆ ನೋಡುತ್ತಾ ಆಶರ್ಯ ಪಟ್ಟು ಪ್ರತಿಯೊಂದನ್ನೂ ತನ್ನ ತಂದೆಗೆ ಹೇಳುತ್ತಿದ್ದ," ಅಪ್ಪ ಅಲ್ಲಿ ನೋಡು ಹಸು ಹುಲ್ಲು ತಿಂತಾ ಇರೋದು, ಅಪ್ಪ ಅಲ್ಲಿ ನೋಡು ಹಕ್ಕಿ ಹಾರ್ತ ಇರೋದು, ಅಪ್ಪ ಅಲ್ಲಿ ನೋಡು ಮರ ಗಿಡ." ಹೀಗೆ. ಅದಕ್ಕೆ ಅವನ ತಂದೆ ವಿಶೇಷ ಪ್ರತಿಕ್ರಿಯೆಯನ್ನೇನೂ ತೋರಿಸದೆ ಸಹಜವೆಂಬಂತೆ ಕುಳಿತಿದ್ದರು. ಅವರ ಎದುರಿಗೆ ಕುಳಿತಿದ್ದ ಒಬ್ಬರಿಗೆ ಇದು ತೀರ ವಿಚಿತ್ರವಾಗಿ ಕಂಡಿತು. ಅವರು "ಸಾರ್ ನಿಮ್ಮ ಮಗನ್ನ ಒಂದು ಬಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸ್ಕೊಂಡು ಬರೋದು ಒಳ್ಳೇದು"ಎಂದು ಪುಕ್ಕಟೆ ಸಲಹೆ ಕೊಟ್ಟರು! ಅದಕೆ ಅವರು "ಇಲ್ಲ ಸಾರ್ ನಾವು ಈಗ ಆಸ್ಪತ್ರೆಯಿಂದಾನೆ ಬರ್ತಾ ಇದ್ದೀವಿ. ನನ್ನ ಮಗ ಹುಟ್ಟು ಕುರುಡ. ಇವತ್ತು ಅವನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಕಣ್ಣು ಬಂತು.!!! ಅದಕ್ಕೆ ಅವನು ಈ ಜಗತ್ತನ್ನು ನೋಡಿ ಅನುಭವಿಸ್ತಾ ಇದ್ದಾನೆ." ಎಂದರು. ಅದಕ್ಕೆ ಇವರು ಪೆಚ್ಚಾಗಿ ಸುಮ್ಮನೆ ಕುಳಿತರು."