Powered By Blogger

ಶುಕ್ರವಾರ, ನವೆಂಬರ್ 18, 2011

ನಮ್ಮ ಪ್ರಾಥಮಿಕ ಶಾಲಾ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರ ನೆನಪಿನಲ್ಲಿ...

    ಇತ್ತೀಚೆಗೆ ನಮ್ಮ ಆತ್ಮೀಯ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರು ನಿಧನರಾದರೆಂಬ ವಿಷಯ ಕೇಳಿ ಬಹಳ ಖೇದವಾಯಿತು. ನಾವೆಲ್ಲ ಈವರೆಗೆ ಕಲಿತ ವಿದ್ಯೆಗಳಿಗೆಲ್ಲ ತಳಹದಿಯಾಗಿ ಅವರು ಕಲಿಸಿದ ಆ ಪ್ರಾಥಮಿಕ ಶಾಲಾ ಶಿಕ್ಷಣದ ಮಹತ್ವ ನಮಗೆ ಆಗ ಗೊತ್ತಿರಲಿಲ್ಲ. ಬಹುಶಃ ಈಗ ಅದು ಗೊತ್ತಾಗುತ್ತಿದೆ. ತಳಹದಿ ಗಟ್ಟಿಯಾಗಿದ್ದರೆ ಅದರ ಮೇಲೆ ಎಂತಹ ಬೃಹತ್ ಕಟ್ಟಡವನ್ನು ಬೇಕಾದರೂ ಕಟ್ಟಬಹುದೆಂದು ಲೋಕೋಕ್ತಿ. ಗುರವಃ ಬಹವಃ ಸನ್ತಿ ಶಿಷ್ಯವಿತ್ತಾಪಹಾರಕಾಃ| ಗುರವಃ ವಿರಲಾಃ ಸನ್ತಿ ಶಿಷ್ಯ ಚಿತ್ತಾಪಹಾರಕಾಃ || ಎಂಬಂತೆ ಅವರು ನಮ್ಮಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ.
   ಬಹುಕಾಲದ ಅನಾರೋಗ್ಯಕ್ಕೆ ತುತ್ತಾಗಿ ಅಕಾಲದಲ್ಲಿ ನಮ್ಮನ್ನಗಲಿದ ಅವರ ಆತ್ಮಕ್ಕೆ ದೇವರು  ಚಿರಶಾಂತಿಯನ್ನು ದಯಪಾಲಿಸಲಿ ಎಂದು ಆಶಿಸುತ್ತೇನೆ.

ಅವರ ನೆನಪಿನಲ್ಲಿ ಕೆಲವು ಕವಿತೆಗಳು..

ಕಂ||
ಗುರುವರ್ಯರೆ ಸತ್ಪಾದ-
ಕ್ಕೆರಗುವೆನಾಂ ನಿಜ ಸರೋಜಸಮ ಮೃದುಲ ಮನ-
ಸ್ಕರು ನೀವಶ್ಮವದಿಹ ಶಿ-
ಷ್ಯರ ಸುಂದರ ಶಿಲ್ಪವಾಗಿಸಿರ್ಪವರಲ್ತೇ||1||

ನರರೊಳ್ ವಿದ್ಯಾ ದಾತಂ
ಸುರರೊಳ್ ಶಂಭುವು ವಿರಿಂಚಿ ಪದವಿ ಸಮಾನಂ|
ಪುರದೊಳ್ ಪಾರ್ವಂ ಪೋಲಿಂ
ಸರದೋಳ್ ಕೋದಿರ್ಪ ಪವಳದೋಲ್ ಶೋಭಿಸುವಂ||2||

ಕಮಲಾಕರನೆಂತೆಂಬಾ 
ವಿಮಳಂ ನಾಮದಿ ಸುಶೋಭ್ಯರಾಗಿರ್ದಿರಯ್|
ಕಮಲೋಪಮ ಮೃದು ಶಿಷ್ಯರ್
ಸುಮನಂ ಪೋಲೆ ಕಮಲಾಕರ ಗುರೂದ್ಭವರಯ್||3||


ನೀವಿತ್ತಿರ್ಪ ಪ್ರಾಥಮಿ-
ಕಂ ವಿಷಯಂಗಳು ಸಮಾಜ ವಿಜ್ಞಾನಗಳ್|
ಕೋವಿದರಿಂ ಪಡೆದ ಗಣಿತ
ದೀವಿಟಿಯಾಯ್ತೈ ದಿನಂಪ್ರತಿಯ ಕಲ್ಕೆಗಳಲ್||4||


ಜವರಂಗಿರ್ಪ ಕರುಣೆಯೇ 
ಬವರದಿ ಹತ್ಯಾ ನಿಷೇಧ ನಿಯಮಂ ಪೋಲಲ್ |
ಸವರಿರ್ಪರೆ ವಿಧಿಗೆ ಗಡಂ
ಕವಿಲೇಖನಮಂ ಲಲಾಟದಿಂದಳಿಸುವರಾರ್||5||


ಹೀರೋ ಹೊಂಡವ ನಿತ್ಯವು 
ಏರಿಂ ಬರುತಿರ್ದಿರಲ್ತೆ ಶಾಲೆಗೆ ದಿನದಿಂ |
ದಾರಿಯು ಬಾಳೇಗದ್ದೆಯ 
ಸೇರಿಂ ಕಾಲದಲಿ ಕಬ್ಬಿನ ಮನೆಯ ಗೃಹಮಂ ||6||


ಆಪತ್ತಂ ನೀವೆದುರಿಸು-
ತಾ  ಪರಕಾರ್ಯಕೆ ಸಹಿಷ್ಣುವಾಗಿಸಿದಿರೆಲಾ |
ಕೋಪಂಗೊಂಡರೆ ದೂರ್ವಾ-
ಸಂ ಪೋಲ್ತಿರ್ದಿರಿ ಮಹಾನುಭಾವಿಗಳೈ ನೀವ್ ||7||


ಸಮಯೋಚಿತಮಂ ಗೆಯ್ಯುತ 
ಕಮಲಾಕರದೋಲ್ ಸುಹೃನ್ಮನಸ್ಕರು ನೀವುಂ|
ಮಮಶಿಕ್ಷಕರೆಂಬಭಿಮಾ-
ನಮಂ ಮನಸಿಂದ ತೊರೆಯಲಹುದೇ ಪೇಳಿಂ||8||


ಮ||
ಕೃತಪಾಠಂಗಳ ಸತ್ಫಲಂ ಗಡ ಭವದ್ವಾಕ್ಯಂಗಳಿಂ ಹೃದ್ಗತಂ
ಧೃತವಿದ್ಯಾಬಲ ನಿಲ್ಲಿಸಿರ್ದು ಯಶವಂ ಸಂಪ್ರಾಪ್ತರಂ ಲೋಕದೋ
ಳತಿಯಾಗಿರ್ಪುದ ದುರ್ಗುಣಕ್ಕೆ ಖತಿಯಾಗಾರಾಧ್ಯರಾಗಿರ್ದಿರೈ
ಮಿತವಾಗಿರ್ದೊಡೆ ಸರ್ವವೂ ಶುಭಮಿರಲ್ ನೀವೇಕೆ ಮೀರಿರ್ಪಿರಿ||9||


ಶನಿವಾರ, ನವೆಂಬರ್ 5, 2011

ಭಿಂಗಿ ಕುಣಿತ




ಶಿರಸಿ ಸುತ್ತಮುತ್ತ ಕೆಲವು ಹಳ್ಳಿಗಳಲ್ಲಿ ದೀಪಾವಳಿಯ ದಿನಗಳಲ್ಲಿ ಮಾಡುವ ನೃತ್ಯ ಭಿಂಗಿ ಕುಣಿತ.
ಇದು ಒಂದು ಜಾನಪದ ಕಲೆ.. ದೀಪಾವಳಿಯ ಸಮಯದಲ್ಲಿ ಇದನ್ನು ಮಾಡುತ್ತಾರೆ.. ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಶೀಘ್ರದಲ್ಲೇ ಕಥಾಕಾಲದ ಮೂಲಕ ಬರುತ್ತೇನೆ.

ಸೋಮವಾರ, ಅಕ್ಟೋಬರ್ 24, 2011

ದ್ವಿಸಂಧಾನ ಕಾವ್ಯಗಳು...

ಎಲ್ಲರಿಗೂ  ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..


ನನ್ನ ಮೊಟ್ಟಮೊದಲ ಕಾದಂಬರಿಯಲ್ಲಿ - (ರಾಮಾಯಣ ಮಹಾಭಾರತಗಳ ಆಧಾರದ) ಕನ್ನಡ ದ್ವಿಸಂಧಾನ ಕಾವ್ಯವನ್ನು  ಬರೆಯುವ ಜಗನ್ನಾಥ ಎಂಬ ವ್ಯಕ್ತಿಯ ಪಾತ್ರ ಚಿತ್ರಣ ಮಾಡಿದ್ದೆ. ಕಾದಂಬರಿಯಲ್ಲಿ ಕಾವ್ಯವೊಂದರ ಪರಿಚಯ ಮಾಡಿಕೊಡುವ ಈ ವಿಧವಾದ ಪ್ರಯತ್ನ ಇದೇ ಮೊದಲೇನಲ್ಲ. ಪೂರ್ಣ ಚಂದ್ರ ತೇಜಸ್ವಿಯವರೂ ಸಹ "ಜುಗಾರಿ ಕ್ರಾಸ್" ಕಾದಂಬರಿಯಲ್ಲಿ ಕಾಲ್ಪನಿಕ ಪಾತ್ರವಾದ ಗುರುರಾಜ ಪಂಡಿತ ಎಂಬ ವ್ಯಕ್ತಿ 'ರತ್ನಮೂಲ' ಎಂಬ ನದಿಯ ಕುರಿತೂ ಹಾಗೇ ರತ್ನಮಾಲಾ ಎಂಬ ನರ್ತಕಿಯ ಕುರಿತೂ  ದ್ವಿಸಂಧಾನ ಕಾವ್ಯ ರಚಿಸಿದ್ದನೆಂದೂ ಕಥಾನಾಯಕ ಅದನ್ನು  ಓದಿ ವಿಶ್ಲೇಷಣೆ ಮಾಡುತ್ತಿದ್ದುದನ್ನೂ ವಿವರಿಸಿದ್ದಾರೆ. ನನ್ನ ಬಳಿ ಕೆಲವು ಮಿತ್ರರು ಈ ದ್ವಿಸಂಧಾನ ಕಾವ್ಯ ಎಂದರೆ ಏನು ಎಂದೂ ಕೇಳಿದರು. ಕೆಲವರು ಇಂತಹ ಕಾವ್ಯವೊಂದು ಇದೆಯಾ ಎಂದು ಕೇಳಿದರು, ಕೆಲವರು ಬ್ಲಾಗಿನಲ್ಲಿ ವಿವರ ಹಾಕಲೂ ಸಲಹೆ ನೀಡಿದರು.

                ಈ ಕುರಿತು ಕೆಲವೆಡೆ ನನಗೆ ಸಿಕ್ಕಮಾಹಿತಿ ಪ್ರಕಾರ ಸಂಸ್ಕೃತದಲ್ಲಿ ಬಹಳಷ್ಟು ದ್ವಿಸಂಧಾನ ಕಾವ್ಯಗಳು ಸಿಗುತ್ತವೆ ಎಂದೂ ಕನ್ನಡದಲ್ಲಿ ಕೂಡ ಎಲ್ಲೋ ಬೆರಳೆಣಿಕೆಯಲ್ಲಿ ಕೆಲವು ಸಿಗುತ್ತವೆ ಎಂದೂ ತಿಳಿಯಿತು
               ಹಾಗಾದರೆ ದ್ವಿಸಂಧಾನ ಕಾವ್ಯ ಎಂದರೇನು? ಅದರ ರೂಪ ಹೇಗೆ? ಅದನ್ನು ಯಾಕೆ ದ್ವಿಸಂಧಾನ ಕಾವ್ಯ ಎನ್ನುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಈ ಸಣ್ಣ ಲೇಖನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದ ತೃಪ್ತಿಯನ್ನಾದರೂ ನೀಡಲಿ.
           ಒಂದೇ ಕಾವ್ಯದಲ್ಲಿ ಒಂದು ಪದ್ಯ ಅಥವಾ ಶ್ಲೋಕವನ್ನು ಒಂದು ರೀತಿಯಲ್ಲಿ ಅರ್ಥೈಸುತ್ತಾ ಹೋದರೆ ಅದು ಒಂದು ಕಥೆ ಆಗುತ್ತದೆ ಹಾಗೇ ಅದನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸುತ್ತಾ ಹೋದರೆ ಅದು ಇನ್ನೊಂದೇ ಬೇರೆಯ ಕಥೇಯಾಗುತ್ತದೆ.  ಇಂತಹ ಕಾವ್ಯಕ್ಕೆ ದ್ವಿಸಂಧಾನ ಕಾವ್ಯವೆಂದು ಹೆಸರು..ಸಂಸ್ಕೃತದಲ್ಲಿರುವ ಕೆಲವು ಇಂತಹ ಕಾವ್ಯಗಳು ಹಾಗೂ ಅವುಗಳ ಕರ್ತೃಗಳ ವಿವರ ಹೀಗಿದೆ,
ಪಾರ್ವತೀ ರುಕ್ಮಿಣಿಯ - ವಿದ್ಯಾಮಾಧವ ವಿರಚಿತ (ಪಾರ್ವತಿ ಹಾಗೂ ರುಕ್ಮಿಣಿಯರ ಕಥೆಗಳು ಏಕಕಾಲದಲ್ಲಿ ಬರುತ್ತವೆ)
ಯಾದವರಾಘವೀಯ- ವೆಂಕಟಾಧ್ವರಿ ವಿರಚಿತ ( ಕೃಷ್ಣ ಹಾಗೂ ರಾಮನ ಕಥೆಗಳ ಸಂಯೋಗ) 
ರಾಘವನೈಷಧೀಯ - ಹರದತ್ತ ಸೂರಿ ವಿರಚಿತ ( ರಾಮ ಹಾಗೂ ನಳಮಹಾರಾಜನ ಕಥೆಗಳ ಸಂಗಮ) 
ರಾಘವಪಾಂಡವೀಯ - ಕವಿರಾಜ ವಿರಚಿತ ( ರಾಮಾಯಣ ಹಾಗೂ ಮಹಾಭಾರತಗಳೆರಡರ ಕಥೆಗಳು, ಈ ಕವಿ ಕದಂಬ ರಾಜರ ಆಸ್ಥಾನದಲ್ಲಿ ಕವಿಯಾಗಿದ್ದ.)  
ರಸಿಕರಂಜನ - ಇದನ್ನು ಬರೆದವರು ಯಾರು ಎಂದು ನನಗೆ ತಿಳಿದಿಲ್ಲ, ಇದೊಂದು ಶೃಂಗಾರ ಹಾಗೂ ವೈರಾಗ್ಯ ಕಾವ್ಯಗಳ ಸಮ್ಮಿಶ್ರಣ ಎಂಬುದು ಆಶ್ಚರ್ಯಕರ ವಿಚಾರ. ಏಕೆಂದರೆ ಎರಡೂ ಪರಸ್ಪರ ತದ್ವಿರುದ್ಧ ವಿಚಾರಗಳನ್ನು ಒಂದೇ ಕಾವ್ಯದಲ್ಲಿ ಪ್ರಸ್ತುತಪಡಿಸಿದ ಕವಿ ಪ್ರತಿಭೆಯನ್ನು ಮೆಚ್ಚಿ ತಲೆಬಾಗದೇ ಅನ್ಯ ಮಾರ್ಗವಿಲ್ಲ.
ಕನ್ನಡದಲ್ಲಿ ಶತಾವಧಾನಿ ಡಾ|| ಆರ್ ಗಣೇಶ ಅವರು ರಚಿಸಿದ ಕುಮಾರಾನಿರುದ್ಧ ಪರಿಣಯ ಎಂಬ ದ್ವಿಸಂಧಾನ ಚಂಪೂ ಕಾವ್ಯ ಇದೆ ಎಂದು ಕೇಳಲ್ಪಟ್ಟಿದ್ದೇನೆ. .

ಈ ನಿಟ್ಟಿನಲ್ಲಿ ನಾನೂ ಒಂದು ಸಣ್ಣ ಪ್ರಯತ್ನವನ್ನೇಕೆ ಮಾಡಬಾರದು ಎಂದೆನಿಸಿತು. ಹಾಗೇ ಎರಡು ಸಣ್ಣ ಪೌರಾಣಿಕ ಘಟನೆಗಳನ್ನು ಆಯ್ದುಕೊಂಡೆ. ಒಂದು ಸೀತೆಯ ಸ್ವಯಂವರ. ಇನ್ನೊಂದು ದ್ರೌಪದಿಯ ಸ್ವಯಂವರ. ಇವೆರಡಕ್ಕೂ ಬಹಳ ಸಾಮ್ಯತೆ ಇದೆ, ಹಾಗೇ ಎರಡರಲ್ಲೂ ಸ್ವಯಂವರದಲ್ಲಿ ಬಿಲ್ಲುವಿದ್ಯೆಯನ್ನೇ ಮುಖ್ಯವಾಗಿಟ್ಟ ಕಾರಣ ಅದೂ ಸಹ ಒಂದು ರೀತಿಯಲ್ಲಿ ಸುಲಭವಾಯಿತು. ಕಥೆಯ ಮೂಲಕ್ಕೆ ಧಕ್ಕೆಯಾಗದ ಹಾಗೆ ಅಲ್ಲಲ್ಲಿ ಕೆಲವು ಹೊಸ ಸನ್ನಿವೇಶಗಳನ್ನ ಹಾಗೂ ಮಾತುಕಥೆಗಳನ್ನು ಸೇರಿಸಿ ವಿಸ್ತರಿಸಿಕೊಂಡು ಒಟ್ಟೂ ತೊಂಭತ್ತಮೂರು(93) ಭಾಮಿನಿ ಷಟ್ಪದಿಗಳಲ್ಲಿ "ಅಯೋನಿಜಾ ಪರಿಣಯಂ"  ಎಂಬ ಈ ಖಂಡಕಾವ್ಯವನ್ನು ಕಷ್ಟ ಪಟ್ಟು ಮುಗಿಸಿದೆ.


ಅದರ ಕೆಲವು ಪದ್ಯ ವಿವರಣೆಗಳನ್ನು ಇಲ್ಲಿ ಅಲ್ಪಸ್ವಲ್ಪವಾಗಿ ಕೊಡುತ್ತಿದ್ದೇನೆ.
ಮೊದಲನೇಯದಾಗಿ "ಪೀಠೀಕಾಖ್ಯಾನಂ" ಎಂದು ಕಾವ್ಯದ ಪೀಠಿಕೆಯನ್ನು ಹಾಕಿ ಪ್ರಾರಂಭಿಸಿ ಮೊದಲ ಪದ್ಯದಲ್ಲಿ ಗಣಪತಿ ಹಾಗೂ ಸರಸ್ವತಿಯನ್ನು ಏಕಕಾಲಕ್ಕೆ ಸ್ತುತಿಸಿದೆ. ಆ ಪದ್ಯ ಇಂತಿದೆ,
ಸಾಮಜಾನನ ಪಂಕರುಹ ವಿ-
ಶ್ರಾಮದಾಸನ ನೇತ್ರವಿಂದ್ವ-
ರ್ಕಾ ಮಹಾ ಜಗ ನಿನ್ನ ಮನಸಿಜ ವಿದ್ಯೆ ವಾರಿಧಿ ನೀ |
ಕಾಮದಾಯಕ ಶಕ್ತಿ ನಿನ್ನಂ 
ನೇಮದಿಂದಲಿ ಪೂಜಿಸುವೆನಾಂ 
ಹೇಮವರ್ಣದ ನಿಖಿಳ ತೇಜೋಮೂರ್ತಿ ರೂಪದಲಿ||
         ಅರ್ಥ- (ಗಣಪತಿ ಪರ) ಸಾಮಜ (ಆನೆ) ಯ ಆನನ(ಮುಖ)ದವನೇ ಕಮಲಾಸನದಲ್ಲಿ (ಪಂಕರುಹ-ವಿಶ್ರಾಮದಾಸನ) ವಿಶ್ರಮಿಸಿದವನೇ ನಿನ್ನ ನೇತ್ರಗಳು ಚಂದ್ರ ಸೂರ್ಯರು (ನೇತ್ರವು ಇಂದು ಅರ್ಕ) ಆ ಮಹಾ ಜಗತ್ತು ನಿನ್ನ ಮನಸ್ಸಿನಲ್ಲಿ ಹುಟ್ಟಿದ್ದು. ವಿದ್ಯೆಗೆ ಸಮುದ್ರ (ವಾರಿಧಿ) ನೀನು. ಬೇಡಿದ್ದನ್ನು ಕೊಡುವ (ಕಾಮದಾಯಕ) ಶಕ್ತಿಯಾದ ನಿನ್ನನ್ನು ನೇಮದಿಂದಲಿ ಹೇಮವರ್ಣದ ಎಲ್ಲಾ ತೇಜಸ್ಸಿನ ಮೂರ್ತಿಯ ರೂಪದಲ್ಲಿ ಪೂಜಿಸುತ್ತೇನೆ
            (ಸರಸ್ವತಿಯ ಪರ) ಸಾಮಜ ( ಸಾಮವೇದದಿಂದ ಹುಟ್ಟಿದ್ದು ; ಅಂದರೆ ಸಂಗೀತ) ವೇ ನಿನ್ನ ಮುಖ, ಕಮಲದ ಮೇಲೆ ವಿಶ್ರಮಿಸಿರುವೆ.ನಿನ್ನ ನೇತ್ರಗಳು ಚಂದ್ರ ಸೂರ್ಯರು ಆ ಮಹಾ ಜಗತ್ತು ನಿನ್ನ ಮನಸ್ಸಿನಲ್ಲಿ ಹುಟ್ಟಿದ್ದು. ವಿದ್ಯೆಗೆ ಸಮುದ್ರ ನೀನು. ಬೇಡಿದ್ದನ್ನು ಕೊಡುವ (ಕಾಮದಾಯಕ) ಶಕ್ತಿಸ್ವರೂಪಿಣಿಯಾದ ನಿನ್ನನ್ನು ನೇಮದಿಂದಲಿ ಹೇಮವರ್ಣದ ಎಲ್ಲಾ ತೇಜಸ್ಸಿನ ಮೂರ್ತಿಯ ರೂಪದಲ್ಲಿ ಪೂಜಿಸುತ್ತೇನೆ. 
ಹೀಗೇ ಪ್ರಾರಂಭಿಸಿದ ಪೀಠಿಕೆ 5 ಭಾಮಿನಿ ಷಟ್ಪದಿಗಳಿಗೆ ಮುಗಿದು ಆಮೇಲೆ ಕಥೆ ಪ್ರಾರಂಭವಾಗುತ್ತದೆ.

 ಆಮೇಲೆ "ಕಥಾಮುಖಂ"ಎಂದು ಕಥೆ ಪ್ರಾರಂಭಿಕ ಸನ್ನಿವೇಶ.. ರಾಮ ಲಕ್ಷ್ಮಣರು ಜನಕರಾಜನ ಪಟ್ಟಣಕ್ಕೆ ಬರುವುದು ಒಂದೆಡೆಯಾದರೆ ಇನ್ನೊಂದೆಡೆ ಧರ್ಮಜಭೀಮಾರ್ಜುನನಕುಲಸಹದೇವರು ನಗರ ಪ್ರವೇಶ ಮಾಡುವುದು ಕಥಾಮುಖ.. ಅಲ್ಲಿ ಕೆಲವು ಸಾಂದರ್ಭಿಕ ನಗರ ವರ್ಣನೆಗಳು.. ಇತ್ಯಾದಿ ಇತ್ಯಾದಿ... 
ಒಂದೇ ಬಾರಿಗೆ ತುಂಬಾ ಕಥೆ ಹೇಳಿದರೆ ಚೆನ್ನಾಗಿರೋದಿಲ್ಲ. ಇದನ್ನು ಓದಿ ಹೇಗನಿಸಿತು ಎಂದು ಹೇಳಿ.. ಅದನ್ನು ಮುಂದೊಮ್ಮೆ ಹಾಕುತ್ತೇನೆ..
ನಿಮ್ಮ
ಗಣೇಶ ಕೊಪ್ಪಲತೋಟ