Powered By Blogger

ಶುಕ್ರವಾರ, ಮಾರ್ಚ್ 19, 2021

ವೈನತೇಯವಿಜಯಂ- ಗರುಡನ ಕಥೆ-೬

(ಕದ್ರೂವಿನತೆಯರು ಪಂದ್ಯದ ಫಲವಾಗಿ ವಿನತೆ ದಾಸಿಯಾಗುವುದು,ಸಂಧ್ಯಾಕಾಲ ಚಂದ್ರೋದಯದ ವರ್ಣನೆ, ಗರುಡನ ಜನನ)

ವ॥ ಅಂತು ಸ್ತುತಿಸುತ್ತುಂ ನೋಡುತ್ತುಮಿರೆ

(ಹೀಗೆ ಸ್ತುತಿಸುತ್ತ ನೋಡುತ್ತಾ ಇರಲು)


ಕಂ॥ ಕಂಡುದು ಹಯಪುಚ್ಛಮೊ ಆ

ಖಂಡಲದಿಙ್ಮುಖದೊಳಿರ್ಪ ಸರ್ಪಗ್ರಸ್ತಾ-

ಖಂಡೇಂದುವೆಂಬ ತೆಱದಿಂ

ಮಂಡಿತಘನನೀಲವರ್ಣರೋಮದಿನಾಗಳ್ ॥೨೩॥

(ಕುದುರೆಯ ಪುಚ್ಛವೋ ಅಥವಾ, ಇಂದ್ರನ ದಿಕ್ಕಿನಲ್ಲಿರುವ (ಪೂರ್ವದಲ್ಲಿರುವ) ಸರ್ಪದಿಂದ ಕಚ್ಚಿಕೊಂಡಿರುವ ಚಂದ್ರನೋ (ಗ್ರಹಣ ಹಿಡಿದಿರುವ ಚಂದ್ರನೋ) ಎಂಬ ರೀತಿಯಲ್ಲಿ ಮೋಡಗಳಿಗಿರುವ ನೀಲವರ್ಣದಿಂದ ಕೂಡಿದ ಕೂದಲುಗಳನ್ನುಳ್ಳದ್ದಾಗಿ ಕಾಣುತ್ತಿತ್ತು)


ವ॥ ಆಗಳ್ ವಿನತೆಯಿಂತು ಚಿಂತಿಸಿದಳ್

(ಆಗ ವಿನತೆಯು ಹೀಗೆ ಚಿಂತಿಸಿದಳು)


ಕಂ॥ ಕಡುಗರ್ಪಿನ ಬಣ್ಣಮಿದೇಂ

ಕೆಡೆದಿರ್ಕುಂ ಬಾಲಕೆಂತುಟಿಂತಾಗಿರ್ಕುಂ

ಬಡಬಾನಲನಿಂ ಸುಟ್ಟುದೊ

ಕಡಲಿಂದೊಗೆತಂದ ವಿಷಮಡರ್ದುದೊ ಕಾಣೆಂ ॥೨೪॥

(ಕಡುಗಪ್ಪಾದ ಬಣ್ಣವಿದೇನು ಬಿದ್ದಿದೆ! ಬಾಲಕ್ಕೆ ಹೇಗೆ ಹೀಗಾಗಿದೆ! ಸಮದ್ರದಲ್ಲಿ ಇರುವ ಬಡಬಾಗ್ನಿಯಿಂದ ಕುದುರೆಯ ಬಾಲವು ಸುಟ್ಟು ಹೋಯಿತೋ! ಅಥವಾ ಕಡಲಿನಿಂದ ಹುಟ್ಟಿದ ವಿಷವು ಹೀಗೆ ಹತ್ತಿಕೊಂಡಿದೆಯೋ ಕಾಣೆ!)


ಕಡೆವಾಗಳ್ ಮಂದರಕಂ

ತೊಡೆದಿರ್ಕುಂ ಮೆಯ್ಯ ಬಣ್ಣಮಾ ವಾಸುಕಿಯಾ

ನಡೆಯುತೆ ಬೀಸಲ್ ಬಾಲಕೆ

ಬಡಿದಿರ್ಕುಂ ತೋರ್ಪ ಕರ್ಪುಮುಚ್ಛೈಶ್ರವದಾ ॥೨೫॥

(ಸಮುದ್ರವನ್ನು ಕಡೆಯುವಾಗ ಮಂದರಪರ್ವತಕ್ಕೆ ಆ ವಾಸುಕಿಯ ಮೈಯ ಕಪ್ಪು ಬಣ್ಣ ಮೆತ್ತಿಕೊಂಡಿದ್ದು,ಈಗ ಕಾಣುತ್ತಿರುವ ಕಪ್ಪು ಉಚ್ಚೈಶ್ರವಸ್ಸು ನಡೆಯುವಾಗ ಇದರ ಬಾಲಕ್ಕೆ ಬಡಿದಿದೆ.)


ಬಾೞ್ತೆಯ ಶೇಷಂ ಸವತಿಯ

ತೊೞ್ತಾಗುತೆ ಬಾೞ್ವುದಾಯ್ತೆ ಪರಿಕಿಸಿ ಹಯಮಂ

ತೞ್ತುದನೞಿಪೆಂ ನೋಡೆ ನೆ

ಗೞ್ತೆಯನಾಂ ಪಡೆವೆನೆಂದು ಯೋಚಿಸುತಿರ್ದಳ್ ॥೨೬॥

(ಬದುಕಿನ ಉಳಿದ ಭಾಗವನ್ನು ಸವತಿಗೆ ದಾಸಿಯಾಗಿ ಬಆಲಬೇಕಾಯ್ತೇ! ಕುದುರೆಯನ್ನು ಪರೀಕ್ಷಿಸಿ ಹತ್ತಿಕೊಂಡ (ಕಪ್ಪು ಬಣ್ಣವನ್ನು) ಅಳಿಸಿ ನೋಡಿ ಹೆಸರನ್ನು ಪಡೆಯುತ್ತೇನೆ- ಎಂದು ಯೋಚಿಸುತ್ತಿದ್ದಳು)


ಮ॥ ಭಳಿರೇ! ಭಾಗ್ಯಮಿದಾಯ್ತು ಪುತ್ರನಿಚಯಂ ಸೇರುತ್ತುಮೀ ಪುಚ್ಛಕಂ

ನೆಲೆಸಲ್ ಗೆಲ್ದೆನಲಾ ಸಪತ್ನಿಯೆನಗಂ ಸಂದಳ್ ಗಡಾ ದಾಸಿವೊಲ್

ಛಲದಿಂ ವೀಕ್ಷಿಸಲೀಯದಂತೆ ಭರದಿಂ ಸಾಗಿಪ್ಪೆನಿನ್ನೆಂದು ತಾಂ

ನಲವಿಂ ನಿಂತು ನಿರೀಕ್ಷಿಸುತ್ತೆ ನಿಡುಸುಯ್ದಳ್ ಕದ್ರುವಾ ವೇಳೆಯೊಳ್॥೨೭॥

(ಭಳಿರೇ! ಇದು ನನ್ನ ಭಾಗ್ಯವೇ ಆಯ್ತು. ನನ್ನ ಮಕ್ಕಳ ಗುಂಪು ಈ ಬಾಲವನ್ನು ಸೇರಿಕೊಂಡು ನೆಲೆಸಿರಲು ನಾನೇ ಗೆದ್ದೆನಲಾ! ಈ ಸವತಿ ನನಗೆ ದಾಸಿಯಾಗಿ ಸಂದಳು. ಈಗ ಛಲದಿಂದ ಇವಳು ನೋಡಲು ಕೊಡದೇ ಭರದಿಂದ ಸಾಗಿಸಿಕೊಂಡು ಹೋಗುತ್ತೇನೆ” ಎಂದು ಸಂತೋಷದಿಂದ ಅದನ್ನು ನೋಡುತ್ತಾ ನಿಂತ ಕದ್ರು ನಿಟ್ಟುಸಿರನ್ನು ಬಿಟ್ಟು ಹೀಗೆಂದುಕೊಂಡಳು)

ವ॥ ಬೞಿಕ್ಕಂ (ಆಮೇಲೆ)

ಕಂ॥ ಎಲಗೇ ದಾಸಿಯೆ ನಡೆ ನಡೆ

ನಿಲದೇ ಪೊತ್ತೆನ್ನನೇಗಳುಂ ಪೇೞ್ದೆಡೆಗಂ

ಚಲಿಸೌ ಮನೆಯೆಡೆಗೀಗಳ್

ಸಲೆ ಪುಸಿಯಾಡಿರ್ಪ ನಿನ್ನ ದೆಸೆಯಂ ನೋಡಾ!॥೨೮॥

(ಎಲೌ! ದಾಸಿಯೇ! ನಡೆ ನಡೆ! ನನ್ನನ್ನು ಹೊತ್ತುಕೊಂಡು ನಿಲ್ಲದೆಯೇ ನಾನು ಹೇಳಿದ ಕಡೆಗೆ ಚಲಿಸು. ಈಗ ಮನೆಯ ಕಡೆ ಹೊರಡು, ವೃಥಾ ಸುಳ್ಳು ಹೇಳಿದ ನಿನ್ನ ದೆಸೆಯನ್ನು ನೋಡು!)


ವ॥ ಎಂದು ಮೂದಲಿಸೆ ವಿನುತೆ 

(ಎಂದು ಮೂದಲಿಸಿರಲು, ವಿನತೆಯು-)


ಚಂ॥ಕೆಳದಿ! ವಿಚಿತ್ರಮಾದುದೆನಿಸಿರ್ಪುದು ವಾಜಿಯ ಪುಚ್ಛಮೀಗಳೇ!

ಬಳಿಗೆನೆ ಸಾಗುವಂ, ನಿರುಕಿಪಂ ದಿಟದಿಂದದು ಪಾಂಡುವೆಂಬುದಂ

ತಿಳಿದೊಡೆ ಸತ್ಯಮಂ ನಡೆವಮಿಲ್ಲಿಗೆ ಸಾಲ್ಗುಮಿದೆಲ್ಲ ಪಂಥಮುಂ

ನಳಿನಮುಖೀ! ಸಖಿತ್ವಮಿದೆ ಸಲ್ಗೆ ನಿವಾರಿಸಿ ಬೇಸರೆಲ್ಲಮಂ ॥೨೯॥

(ಗೆಳತಿಯೇ!ಈ ಕುದುರೆಯ ಬಾಲವು ವಿಚಿತ್ರವಾಗಿದೆ ಎನಿಸುತ್ತಿದೆ. ಈಗಳೇ ನಾವು ಅದರ ಬಳಿ ಸಾಗೋಣ.  ದಿಟವಾಗಿಯೂ ಅದು ಬಿಳಿಯ ಬಣ್ಣ ಎಂದು ನೋಡೋಣ. ಸತ್ಯವನ್ನು ತಿಳಿದ ಮೇಲೆ ಹೋಗೋಣ. ಈ ಪಂದ್ಯವೆಲ್ಲ ಸಾಕು. ನಳಿನಮುಖಿಯೇ! ಬೇಸರೆಲ್ಲವನ್ನೂ ಕಳೆದು ಈ ಗೆಳತಿಯಾಗಿರುವುದೇ ಸಲ್ಲುವಂತಿರಲಿ)

ವ॥ವಿನತೆಯಿಂತೆನೆ ಕೋಪಾಟೋಪದಿಂ ಕದ್ರುವಿಂತೆಂದಳ್- (ವಿನತೆ ಹೀಗೆ ಹೇಳಿದಾಗ,ಕೋಪಾಟೋಪದಿಂದ ಕದ್ರು ಮಾರ್ನುಡಿದಳು)

ಶಾ॥ ನಿನ್ನೀ ಮಾತುಗಳೆನ್ನ ಕಾಣ್ಮೆ ಪುಸಿಯೆಂದೇಂ ಪೇೞ್ವುದೋ! ಮೋಸದಿಂ

ಬನ್ನಂಗೆಯ್ವೆನೆನುತ್ತೆ ಪೇೞ್ವೆಯೊ ವಲಂ! ಪಂಥಕ್ಕೆ ಮೇಣ್ ತಪ್ಪುತುಂ

ಮುನ್ನಂ ನಿನ್ನಯ ಸುಳ್ಳನಿಂತು ಜವದಿಂ ಕಾಪಿಟ್ಟೆಯೇಂ! ತೊೞ್ತೆ! ನೀ

ನೆನ್ನಂ ಪೊತ್ತು ವಿಲಂಬಮಾಗದೆಯೆ ಸಾಗೌ ಗೇಹಕಂ ಮೂಢೆಯೇ ॥೩೦॥

(ನಿನ್ನ ಈ ಮಾತುಗಳು ನನಗೆ ಕಂಡಿರುವುದು ಸುಳ್ಳು ಎಂದು ಹೇಳುವುದೇನು! ಮೋಸದಿಂದ ನಾನು ಕಷ್ಟವನ್ನು ಕೊಡುತ್ತೇನೆಂದು ಹೇಳುತ್ತೀಯೋ! ಪಂದ್ಯಕ್ಕೆ ತಪ್ಪುತ್ತಾ ಮೊದಲು ಹೇಳಿದ ನಿನ್ನ ಸುಳ್ಳನ್ನು ಕಾಪಾಡಿಕೊಳ್ಳುತ್ತಿದ್ದೀಯಾ! ದಾಸಿಯೇ! ನೀನು ನನ್ನನ್ನು ಹೊತ್ತುಕೊಂಡು ತಡಮಾಡದೆಯೇ ಮನೆಯ ಕಡೆ ಸಾಗು! ಮೂರ್ಖೆಯೇ!)


ವ॥ ಎಂತೆನೆ ಅನ್ಯಮಾರ್ಗಮಂ ಕಾಣದೆ ವಿನತೆ ದಾಸ್ಯಕೆ ನೋಂತಳಾಗಳ್

(ಎಂದು ಹೇಳಲು ಬೇರೆ ಮಾರ್ಗವನ್ನು ಕಾಣದೇ ವಿನತೆಯು ದಾಸ್ಯಕ್ಕೆ ನೋಂತಳು)


ಶಿಖರಿಣಿ॥ ಜಗುಳ್ದಂ ಸೂರ್ಯಂ ಕೆಂಪಡರ್ದ ಗಗನಂ ರಾಜಿಸುತಿರಲ್

ಸೊಗಂಗಾಣಂ ಚಿಂತಾಕುಲನೆನಿಸುವಂತತ್ತಲರುಣಂ

ಮಗಂ ತಾಯ್ಗಂ ಕಷ್ಟಂ ದೊರೆತುದಕಟಾ ಎಂದು ಮಱುಕಂ-

ಬುಗುತ್ತುಂ ನಿಂತಿರ್ಪಂತೆಸೆದುದಪರಾಂಬೋಧಿಯೆಡೆಯೊಳ್ ॥೩೧॥

(ಆಗ ಸೂರ್ಯನು ಸರಿಯತೊಡಗಿದನು. ಕೆಂಬಣ್ಣದಿಂದ ತುಂಬಿಕೊಂಡ ಆಕಾಶವು ರಾರಾಜಿಸುತ್ತಿರುವಾಗ, ಆ ಕಡೆ ಅರುಣನೂ ಸೊಗಸಿಲ್ಲದೇ ಚಿಂತೆಯಿಂದ ಕೂಡಿದವನಂತೆ ಕಾಣುತ್ತಿದ್ದ. ಪಶ್ಚಿಮ ದಿಕ್ಕಿನ ಸಮುದ್ರದ ಕಡೆಯಲ್ಲಿ ಆ ಅರುಣನು ತನ್ನ ತಾಯಿಗೆ ಕಷ್ಟವು ಬಂದಿದೆ ಎಂದು ಮರುಕದಿಂದ ನಿಂತುಕೊಂಡು ನೋಡುತ್ತಿರುವಂತೆ ಕಾಣುತ್ತಿತ್ತು)


ಕಂ॥ವಿನತೆಯ ಭವಿತವ್ಯಮಿದೇಂ ಘನತಿಮಿರಾನ್ವಿತಮೆ ಸಲ್ಗುಮೆಂಬುದನುಲಿಯು- ತ್ತಿನಿತೇಂ ವಿರಿಂಚಿಯೇ ಗೆ- ಯ್ದನೊ ಎಂಬಂತಾಯ್ತು ಕೞ್ತಲೆತ್ತಲ್ ನೋಡಲ್ ॥೩೨॥ (ವಿನತೆಯ ಭವಿಷ್ಯವು ಇದೇನು ಪೂರ್ತಿ ಕತ್ತಲೆಯಿಂದಲೇ ಸಲ್ಲುತ್ತದೆ ಎಂದು ಹೇಳುತ್ತಾ ಹೀಗೆ ಬ್ರಹ್ಮನೇ ಮಾಡಿದನೋ ಎಂಬಂತೆ ಎತ್ತ ನೋಡಿದರೂ ಕತ್ತಲಾಗುತ್ತಿತ್ತು)

ಚಂ॥ ಅದೊ! ಅದೊ! ಆಕೆಯೇ ವಿನತೆ! ಕದ್ರುವಿಗಾದಳೆ ದಾಸಿ ನೋಡಿರೇ!

ಚದುರರೆ! ಕಾಣಿಮಾಕೆಯೆಸಗಿರ್ಪುದನೆಂದು ನಭಶ್ಚರರ್ ನಗ-

ಲ್ಕೊದವಿದ ದಂತಕಾಂತಿಯೆನಿಪಂದದೆ ತಾರಕೆ ಮಿಂಚುತಲ್ಲಿ ಸಂ

ದುದು ಪರಕಷ್ಟಕಂ ನಗುವರಿರ್ಪುದು ಸಾಜಮೆ ಸರ್ವಕಾಲದೊಳ್ ॥೩೩॥

(ಅದೊ ಅದೋ! ಆಕೆಯೇ ವಿನತೆ, ಕದ್ರುವಿಗೆ ದಾಸಿಯಾದಳು, ನೋಡಿರೇ! ಚತುರೆಯರೇ! ನೋಡಿ, ಆಕೆ ಮಾಡಿದ್ದನ್ನು ನೋಡಿ, ಎಂದು ಆಕಾಶಗಾಮಿಗಳು ಹೇಳಿಕೊಂಡು ನಗುತ್ತಿರುವಾಗ ಅವರ ದಂತಕಾಂತಿಯೇ ಕಾಣುತ್ತಿರುವುದೋ ಎಂಬಂತೆ ನಕ್ಷತ್ರಗಳು ಅಲ್ಲಲ್ಲಿ ಮಿಂಚತೊಡಗಿದವು. ಎಲ್ಲಾ ಕಾಲದಲ್ಲಿಯೂ ಬೇರೆಯವರ ಕಷ್ಟವನ್ನು ಕಂಡು ನಗುವವರು ಇರುವುದು ಸಹಜವೇ ಆಗಿದೆ.)


ಪೊಡವಿಯ ಮೇರೆಯಿಂದೆಸೆದು ಬಂದುದಮರ್ದಿನ ಕುಂಭಮೋ ಮಗುಳ್

ಜಡಧಿಯೊಳಿರ್ಪುದದ್ಭುತದ ರತ್ನಮೆ ಸಾರ್ದುದೊ ಅಲ್ತದಲ್ತು ಮೇ

ಣೊಡಲಿನಿನಿಟ್ಟ ಮೊಟ್ಟೆಯಿದೊ ಕಾಯುವರಿಲ್ಲಮೆನುತ್ತೆ ನನ್ನ ಪಿಂ

ನಡೆದುದೊ ಎಂಬವೊಲ್ ವಿನತೆ ಖೇದದೊಳೀಕ್ಷಿಪಳೈ ಶಶಾಂಕನಂ ॥೩೪॥

(ಭೂಮಿಯ ಒಂದು ಮೇರೆಯಿಂದ ಅಮೃತದ ಕಲಶವೇ ಎದ್ದು ಬರುತ್ತಿದೆಯೋ, ಅಥವಾ ಸಮುದ್ರದಲ್ಲಿ ಇದ್ದ ಒಂದು ಅದ್ಭುತವಾದ ರತ್ನವೇ ಬಂತೋ! "ಅಲ್ಲ ಅಲ್ಲ, ನನ್ನ ಬಸಿರಿನಿಂದಲೇ ಇಟ್ಟಿರುವ ಮೊಟ್ಟೆ ಇದು, ತನ್ನನ್ನು ಕಾಪಾಡುವವರಿಲ್ಲ ಎಂದು ನನ್ನ ಹಿಂದೆಯೇ ಬರುತ್ತಿದೆಯೋ!” ಎಂದು ದುಃಖದಲ್ಲಿ ಚಂದ್ರನನ್ನು ವಿನತೆ ನೋಡಿದಳು.)


ವ॥ಅಂತು ನಿಶೆಯಾವರಿಸುತ್ತುಮಿರಲ್ ವಿನತೆ ಕದ್ರುವಿನೊಡಂ ನಡೆದು ದಾಸ್ಯದ ಕಾರಣದಿಂದಾಕೆಯ ಸೇವೆಯಂ ಗೆಯ್ಯುತ್ತೆ ನಿತಾಂತಮುವಳೊಡನೆಯೇ ಇರ್ದಪಳ್, ಆಗಳಿತ್ತಲ್

(ಹೀಗೆ ರಾತ್ರಿ ಆವರಿಸುತ್ತಿರುವಾಗ, ವಿನತೆ ಕದ್ರುವಿನ ಜೊತೆ ನಡೆದು, ದಾಸ್ಯದ ಕಾರಣದಿಂದ ಸದಾಕಾಲ ಅವಳ ಸೇವೆಯನ್ನು ಮಾಡುತ್ತ ಅವಳ ಜೊತೆಯಲ್ಲಿಯೇ ಇದ್ದಳು. ಆಗ ಇತ್ತ ಕಡೆಯಲ್ಲಿ)


ಕಂ॥ ಆರುಂ ಕಾಯ್ವರ್ಕಳ್ ಮೇ

ಣಾರೈವರ್ ನೋೞ್ಪರಂತೆ ಜತೆಯೊಳಗಿರದರ್

ಓರಂತಿರ್ದಪುದಂಡಂ

ಧೀರರ್ಗಂ ಸಾಹ್ಯಮೀವರೇತಕೆ ವೇಳ್ಕುಂ ॥೩೫॥

(ಯಾರೂ ಕಾಯುವವರೂ, ಆರೈಕೆ ಮಾಡುವವರೂ, ನೋಡುವವರೂ ಹಾಗೆ ಜೊತೆಯಲ್ಲಿ ಇರದವರು (ಆಗಿರಲು) ಆ (ಗರುಡನಿರುವ) ಮೊಟ್ಟೆಯು ಚೆನ್ನಾಗಿಯೇ ಇತ್ತು. ಧೀರರಾದವರಿಗೆ ಸಹಾಯವನ್ನು ಕೊಡುವವರು ಏಕೆ ಬೇಕು!)


ತೇಟಗೀತಿ॥ ಕಳೆಯುತಿರ್ದೊಡಂ ಕಾಲದೊಳಗೆಂತೊ ಗರುಡಂ

ತಳೆದು ನಿಸ್ತುಲಂ ಬಲ್ಮೆಯಂ ಲೋಕವೀರಂ

ಬಳೆದು ಪೊಱಮಡಲ್ ಶಕ್ತನಾಗುತ್ತುಮಿರ್ದಂ

ಪಳಿಕುಗವಿಯೊಳಗೆ ಕುಳಿತಿರ್ಪ ತವಸಿಯಂದಂ॥೩೬॥

(ಕಾಲವು ಕಳೆಯುತ್ತಿರುವಾಗ ಹೇಗೋ ಗರುಡನು, ಹೋಲಿಕೆಯಿಲ್ಲದ ಬಲ್ಮೆಯನ್ನು ಪಡೆದು, ಲೋಕವೀರನಾದವನು ಬೆಳೆಯುತ್ತಾ ಹೊರಗೆ ಬರಲು ಶಕ್ತನಾಗುತ್ತ ಇದ್ದನು. ಅವನು ಮೊಟ್ಟಯೊಳಗಿರುವುದು ಸ್ಫಟಿಕದ ಗುಹೆಯೊಳಗೆ ಕುಳಿತು ತಪಸ್ಸನ್ನು ಮಾಡುತ್ತಿರುವ ತಪಸ್ವಿಯ ಹಾಗೆ ಕಾಣುತ್ತಿತ್ತು)


ಆಟವೆಲದಿ॥ ತ್ರುಟಿತಮಿಲ್ಲದಂತೆ ಪ್ರತಿಯೊಂದು ಜೀವಿಗಂ

ಸ್ಫುಟಮೆನಿಪ್ಪ ತೆಱದೊಳಂ ಭವಿಷ್ಯಂ

ಘಟಿತಮಾಯ್ತಲಿಖತಲೇಖದೊಳ್ ಬ್ರಹ್ಮನಿಂ

ಚಟುಲಗತಿಯೊಳದುವೆ ಚಲಿಪುದನಿಶಂ ॥೩೭॥

(ಯಾವುದೇ ತ್ರುಟಿ ಇಲ್ಲದಂತೆ ಪ್ರತಿಯೊಂದು ಜೀವಿಗೂ ಸ್ಪಷ್ಟವಾದ ಭವಿಷ್ಯವು ಬ್ರಹ್ಮನಿಂದ ಹಣೆಯ ಬರೆಹದಲ್ಲಿ ಬರೆಯಲ್ಪಟ್ಟಿದೆ. ಅದು ವೇಗವಾದ ಗತಿಯಲ್ಲಿ ನಡೆಯುತ್ತಲೇ ಇರುತ್ತದೆ.)


ವ॥ಅಂತೆಯೆ ಗರುಡನ ಬಹಿರಾಗಮಸಮಯಮಾಗಲ್ಕೆ

(ಹಾಗೆಯೇ ಗರುಡನು ಹೊರಗೆ ಬರುವ ಸಮಯವಾಗಿರಲು)


ಮ.ಸ್ರ॥ಎರೞ್ವುಟ್ಟಂ ಪೊಂದಲಾಗಳ್ ನಿಡಿದೆನಿಸುತೆ ಮೆಯ್ಯಂ ಮಗುಳ್ ಸಾರ್ಚುತುಂ ತ-

ನ್ನೆರಡುಂ ಪಕ್ಷಂಗಳಂ ಬಿತ್ತರಿಸುತೆ ತೆರೆದಂ ಚಂಚುವಂ ಕ್ರೀಂಕರಿಪ್ಪಂ

ಗರುಡಂ ಭವ್ಯಾದ್ಭುತಾಂಗಸ್ಫುರಿತರುಚಿರರಾಗಂ ಜಗುಳ್ದೊಲ್ದು ನೋೞ್ಪಂ

ಬಿರಿಯಲ್ಕಿನ್ನೊಂದಜಾಂಡಂ ಜನಿಸಿದನಲನೆಂಬಂದದಿಂದಂ ನೆಗೞ್ದಂ ॥೩೮॥

(ಗರುಡನು ಎರಡನೇ ಜನ್ಮವನ್ನು ಪಡೆಯುವುದಕ್ಕೆಂದು ತನ್ನ ಮೈಯನ್ನು ಹಿಗ್ಗಿಸುತ್ತಾ, ರೆಕ್ಕೆಗಳೆರಡನ್ನೂ ಚಾಚುತ್ತಾ, ವಿಸ್ತರಿಸುತ್ತಾ, ಕೊಕ್ಕನ್ನು ತೆರೆದು ಕ್ರೀಂಕಾರವನ್ನು ಮಾಡಿದ. ಭವ್ಯವಾದ ಅದ್ಭುತವಾದ ದೇಹದ ಕಾಂತಿಯಿಂದ ಹೊಮ್ಮುತ್ತಿರುವ ಕೆಂಬಣ್ಣದಿಂದ ಸರಿಯುತ್ತಾ ಹೊರಗೆ ನೋಡುತ್ತಿರಲು, ಮತ್ತೊಂದು ಬ್ರಹ್ಮಾಂಡವೇ ಬಿರಿದು ಅಗ್ನಿಯೇ ಮತ್ತೆ ಹುಟ್ಟಿದಂತೆ ಕಾಣುತ್ತಿದ್ದ)


ಕಂ॥ ಅತಿಶಯರಾಗದ ರುಚಿಯಿಂ 

ಹುತಭುಙ್ನಿಭನೊಲ್ದು ವೈನತೇಯಂ ಪುಟ್ಟಲ್

ಚ್ಯುತಮಾದ ಕೋಶಮುಳಿದುದು

ಚಿತಮಾದುದು ಬೆಂಕೆಯಿತ್ತ ಭಸ್ಮದ ತೆಱದಿಂ ॥೩೯॥

(ಅತಿಶಯವಾದ ಕೆಂಬಣ್ಣದ ಕಾಂತಿಯಿಂದ ಅಗ್ನಿಯಂತೆ ಕಾಣುವ ಈ ವೈನತೇಯನು ಹುಟ್ಟಲು, ಹೊರಗೆ ಉಳಿದ ಮೊಟ್ಟೆಯ ಕೋಶವು ಬೆಂಕಿ ಕೊಟ್ಟ ಭಸ್ಮದಂತೆ ಸಂಚಿತವಾಗಿತ್ತು)


ವ॥ ಬೞಿಕ್ಕಂ ಕೋಶಮನೆರಡಾಗಿ ಸೀಳ್ದು ಪುಟ್ಟಿದ ಕೆಂಬಣ್ಣದ ಮುತ್ತಿನಂತೆ ಮೆಱೆದಪ ಗರುತ್ಮಂತಂ ಖೇಚರಕುಲಪತಿಯೆನಿಪ್ಪನೆಂಬುದನಱಿತು ಪಾಡಿರೆ ಪಿಕಂಗಳ್, ನರ್ತಿಸೆ ನವಿಲುಗಳ್, ಸ್ತುತಿಪದ್ಯಂಗಳಂ ಪಠಿಸೆ ಪಂಡಿತವಕ್ಕಿಗಳ್, ಮಚ್ಚರದೆ ಗೂಗೆ ಬಿಲ್ಲುಂಬೆಱಗಾದ ತೆಱದೆ ಮಿಳ್ಮಿಳನೆ ನೋಡೆ ಪಿಸುಣತೆಯಿಂ ಕಾಗೆ ಪಾರುತ್ತುಂ ಕರ್ಕಶರವಂಗೆಯ್ಯೆ ಶುಭಶಕುನಮಂ ಶಕುನಿಗಳ್ ಸೂಚಿಸೆ, ಪರ್ದುಗಳ್ ಪಾರೆ, ಸಿಂಹಾಸನಮಂ ಪಣ್ಣಿದಪೆನೆಂದು ಮರಕುಟಿಗಂ ಮರನಂ ಕಡಿಯುತಿರೆ,ಪದಾಯುಧಂಗಳ್ ಸುಭಟರಂತೆ ನಿಂತಿರೆ,ಕಾಜಾಣಮೊಲವಿಂದೆ ತೂರ್ಯಸ್ವನಂ ಗೆಯ್ಯೆ,

(ಆಮೇಲೆ, ಕೋಶವನ್ನು ಎರಡಾಗಿ ಸೀಳಿದ ಕೆಂಪು ಬಣ್ಣದ ಮುತ್ತಿನಂತೆ ಮೆರೆಯುವ ಗರುತ್ಮಂತನು ಪಕ್ಷಿಗಳ ಸಂಕುಲಕ್ಕೇ ರಾಜನಾಗುತ್ತಾನೆ ಎಂದು ತಿಳಿದುಕೊಂಡು ಕೋಗಿಲೆಗಳು ಹಾಡತೊಡಗಿದವು, ನವಿಲುಗಳು ನರ್ತಿಸತೊಡಗಿದವು, ಪಂಡಿತವಕ್ಕಿಗಳಾದ ಗಿಳಿಗಳು ಸ್ತುತಿಪದ್ಯಗಳನ್ನು ವಾಚಿಸಿದವು, ಮತ್ಸರದಿಂದ ಬೆರಗಾದಂತೆ ಗೂಬೆಗಳು ಮಿಳ್ಮಿಳನೆ ಕಣ್ಣನ್ನು ಅರಳಿಸಿ ನೋಡುತ್ತಿರಲು, ಕಾಗೆಗಳು ಪಿಸುಣತೆಯಿಂದ ಕರ್ಕಶವಾದ ಶಬ್ದವನ್ನು ಮಾಡಲು, ಶಕುನಿಪಕ್ಷಿಗಳು ಶುಭಶಕುನವನ್ನು ಸೂಚಿಸುತ್ತಿರಲು, ಹದ್ದುಗಳು ನೋಡಲು, ಸಿಂಹಾಸನವನ್ನೇ ನಿರ್ಮಾಣ ಮಾಡುತ್ತೇನೆ ಎಂದು ಮರಕುಟಿಗವು ಮರವನ್ನು ಕಡಿಯಲು ಪ್ರಾರಂಭಿಸಿರಲು, ಸುಭಟರ ಹಾಗೆ ಪದಾಯುಧಗಳಾದ ಕೋಳಿಗಳು ನಿಂತುಕೊಂಡಿರಲು, ಕಾಜಾಣಗಳು ತೂರ್ಯಧ್ವನಿಯನ್ನು ಮಾಡುತ್ತಿರಲು)


ಕಂ॥ಪರಿಕಿಸುತುಂ ಪರಿಪರಿಯಿಂ

ಪೊಱಮಡೆ ಬಂಧುಗಳದಾರೆನುತ್ತುಂ ಜಗದೊಳ್

ಗರುಡಂ ತಿಳಿಯದೆ ತಾಯಂ

ಭರದಿಂ ಕಾಣದೆಯೆ ಶೋಕದಿಂ ತಪಿಸಿರ್ದಂ ॥೪೦॥

(ಗರುಡನು ಪರಿಪರಿಯಾಗಿ ನೋಡುತ್ತಾ, ಹೊರಬರಲು, ಜಗತ್ತಿನಲ್ಲಿ ತನ್ನ ಬಂಧುಗಳು ಯಾರು ಎಂದು ಹುಡುಕಿ ತಿಳಿಯಲಾರದೇ, ತಾಯಿಯನ್ನೂ ಕಾಣದೆಯೇ ಬಹಳ ದುಃಖದಿಂದ ಪರಿತಪಿಸುತ್ತಿದ್ದ)


ಚಂ॥ ಅಕಟ! ಸಮಸ್ತಲೋಕದೊಳಗಿರ್ಪ ಸಮಸ್ತಚರಾಚರಪ್ರಜಾ

ನಿಕರಕೆ ಪುಟ್ಟಿದಾಗಳೆದುರಿರ್ದಪಳೊಲ್ಮೆಯ ಮೂರ್ತಿ ಪೆತ್ತವಳ್

ಸಕರುಣನಾದನಲ್ತೆ ಗರುಡಂ ಗಡ ಕೂರ್ಮೆಯ ತೋರುವರ್ಕಳಾರ್

ವಿಕಲತೆವೆತ್ತನಣ್ಣನೊ ತೆ! ದಾಸ್ಯದೆ ಸಿಲ್ಕಿದ ಮಾತೆಯೋ ವಲಂ! ॥೪೧॥

(ಅಯ್ಯೋ! ಎಲ್ಲಾ ಲೋಕದಲ್ಲಿರುವ ಎಲ್ಲಾ ಚರಾಚರವಾದ ವಸ್ತುಗಳಿಗೂ ಕೂಡ ಹುಟ್ಟಿದ ಹೊತ್ತಿನಲ್ಲಿ  ಪ್ರೀತಿಯ ಮೂರ್ತಿಯೇ ಆಗಿರುವ ಹೆತ್ತವಳು ಎದರಿನಲ್ಲಿ ಇರುತ್ತಾಳಲ್ಲವೇ!ಗರುಡನು ಕರುಣೆಗೆ ಪಾತ್ರನಾದನು. ಪ್ರೀತಿಯನ್ನು ತೋರುವವರಾದರೂ ಯಾರು! ಅಂಗವಿಕಲನಾದ ಅಣ್ಣನೋ! ಬಿಡು, ದಾಸ್ಯದಲ್ಲಿ ಸಿಕ್ಕಿಕೊಂಡಿರುವ ತಾಯಿಯೊ!)


ಉ॥ಜೀವನದಂತ್ಯದನ್ನೆಗಮುಮಿರ್ದೊಡೆ ತಾಯಿಯ ಕೂರ್ಮೆಯೆಲ್ಲರುಂ

ಭಾವಿಪರಲ್ತೆ ಪುಣ್ಯಮೆನುತುಂ ಗಡ! ಬಾಲ್ಯದೆ ಪೋಗೆ ಖೇದಮೈ!

ನೋವಿದು ಪುಟ್ಟಿದಾಗಳಿರದಾದೊಡೆ ಪಾರಲದೆಂತು ಶಕ್ಯಮೈ

ತೀವಿದ ಲೋಕದೊಳ್ ಜನನಿಗಂ ಸರಿಸಾಟಿಯೆನಿಪ್ಪರಾರೊಳರ್ ॥೪೨॥

(ಎಲ್ಲರೂ ತಮ್ಮ ಜೀವನದ ಕೊನೆಯ ವರೆಗೂ ತಾಯಿಯ ಪ್ರೀತಿ ಇದೆ ಎಂದಾದರೆ ತಾವೇ ಪುಣ್ಯಶಾಲಿಗಳು ಎಂದು ಭಾವಿಸುತ್ತಾರಲ್ಲವೇ! ಬಾಲ್ಯದಲ್ಲೇ ಹೋದರೆ ದುಃಖವೇ ಸರಿ. ಹುಟ್ಟಿದಾಗಳೇ ಇಲ್ಲ ಎಂದರೆ ಎಷ್ಟೊಂದು ನೋವಲ್ಲವೇ! ನೋಡುವುದಕ್ಕೆ ಹೇಗೆ ಸಾಧ್ಯ! ತುಂಬಿಕೊಂಡಿರುವ ಲೋಕದಲ್ಲಿ ತಾಯಿಗೆ ಯಾರು ತಾನೇ ಸಾಟಿಯಾಗುತ್ತಾರೆ!)


ಪಟ್ಟಮನಿತ್ತೊಡೆಂತು ಬಹುಶಕ್ತಿಯುಮಿರ್ದೊಡಮೆಂತು ಲೋಕದೊಳ್

ಗಟ್ಟಿಗನಾದೊಡೆಂತು ಚಿರಜೀವನಮಿರ್ದೊಡಮೆಂತು ವಿತ್ತಮಂ

ಕಟ್ಟುತುಮಿಟ್ಟೊಡೆಂತು ಘನಸಿದ್ಧಿಯುಮಿರ್ದೊಡಮೆಂತು ತನ್ನವರ್

ಗೊಟ್ಟಿಯೊಳಿಲ್ಲದಿರ್ದೊಡನಿದೆಲ್ಲಮುಮಪ್ಪುದು ತುಚ್ಛಮೇ ವಲಂ ॥೪೩॥

(ದೊಡ್ಡ ಅಧಿಕಾರದ ಪಟ್ಟವಿದ್ದರೇನು, ಬಹಳ ಶಕ್ತಿಯಿದ್ದರೇನು, ಲೋಕದಲ್ಲಿ ಗಟ್ಟಿಗನಾದರೇನು, ಚಿರಂಜೀವಿಯಾದರೂ ಏನು, ಧನವನ್ನು ಗಂಟುಕಟ್ಟಿಟ್ಟರೇನು, ದೊಡ್ಡ ಸಿದ್ಧಿಗಳಿದ್ದರೇನು! ತನ್ನವರು ಎಂಬವರು ಜೊತೆಯಲ್ಲಿ ಇಲ್ಲದಿದ್ದರೇ ಇದೆಲ್ಲವೂ ತುಚ್ಛವೇ ಆಗುತ್ತವೆಯಲ್ಲವೇ!)


ವ॥ಅಂತೆನಿಸೆ ಗರುತ್ಮಂತಂ ಬಹುಖೇದದಿಂ ತನ್ನವರಂ ಪಂಬಲಿಸುತೊರ್ಮೆಗಂ ಕ್ರೇಂಕಾರಮಂ ಗೆಯ್ದೊಡಂ

(ಹೀಗೆನ್ನಿಸಿ, ಗರುತ್ಮಂತನೂ ಬಹಳ ಖೇದದಿಂದ ತನ್ನವತನ್ನು ಹಂಬಲಿಸಿ ಒಮ್ಮೆ ಕ್ರೇಂಕಾರವನ್ನು ಮಾಡಲು-)


ಕಂ॥ಮುನಿಪಂ ತಂದೆಯೆ ಬಂದಂ

ವಿನತೆಯೆ ತಾನಿರ್ಪ ತಾಣಮಂ ಮೇಣ್ ಪೇೞ್ದಂ

ಘನತರಬಲಯುತಪಕ್ಷಿಯೆ

ತನೂಜನಾಗಿರ್ಪನೆಂದು ಮುದಮಂ ತಾಳ್ದಂ ॥೪೪॥

(ಮುನೀಂದ್ರನಾದ ಕಶ್ಯಪನು ಬಂದನು. ವಿನತೆಯು ಇರುವ ತಾಣವನ್ನೂ ಹೇಳಿದನು. ಬಲಶಾಲಿಯಾದ ಪಕ್ಷಿಯೇ ತನಗೆ ಮಗನಾಗಿದ್ದಾನೆ ಎಂದು ಸಂತೋಷವನ್ನೂ ತಳದೆನು.)


(ಮುಂದಿನ ಸಂಚಿಕೆಯಲ್ಲಿ ಗರುಡನು ತಾಯಿಯನ್ನು ಕಂಡು ಅವಳ ಜೊತೆಯಲ್ಲಿ ಕದ್ರುವಿನ ಹಾಗೂ ಅವಳ ಮಕ್ಕಳ ಸೇವೆಯನ್ನು ಮಾಡುತ್ತ ಇರುವುದು)