Powered By Blogger

ಮಂಗಳವಾರ, ಫೆಬ್ರವರಿ 13, 2018

ತಿಪ್ಪೆ ಸಾಗುತಿದೆ ನೋಡಿದಿರಾ!


(ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರಾ- ಪದ್ಯದ ಅಣಕು- ಬೆಂಗಳೂರಿನಲ್ಲಿ ಒಂದು ಕಸದ ಗಾಡಿಯನ್ನು ಕಂಡಾಗ ಹೊಳೆದದ್ದು.)

ಹಗಲಿರುಳುಳಿದಾ ಮನೆಮನೆಯಡುಗೆ
ಸುತ್ತಮುತ್ತಲೂ ಬೀದಿಯೆ ನಡುಗೆ
ಗಾವುದ ಗಾವುದ ಗಾವುದ ಮುಂದಕೆ
ತಿಪ್ಪೆ ಸಾಗುತಿದೆ ನೋಡಿದಿರಾ

ಕರಿನೆರೆ ಬಣ್ಣದ ಪುಚ್ಛಗಳುಂಟು
ಮೂಗನೆ ಸೀಳುವ ವಾಸನೆಯುಂಟು
ಕೊಳೆತಿಹ ಪಳೆತಿಹ ಕಸದ ರಾಶಿಯನೆ
ತುಂಬಿದ ಕಪ್ಪನೆ ವಾಹನವುಂಟು
ತಿಪ್ಪೆ ಸಾಗುತಿದೆ ನೋಡಿದಿರಾ

ಹೊಗೆಯನು ಬಿಡುತಿಹ ವಾಹನ ಬಂತೇ
ಒಸರಿಸಿ ನರಕದ ಕಾಲುವೆಯಂತೆ
ಆ ವೈತರಣಿಯ ನೀರನು ತಾನೇ
ಹೆಚ್ಚಿಸಲೆನ್ನುತ ಒಯ್ದಿರುವಂತೆ
ತಿಪ್ಪೆ ಸಾಗುತಿದೆ ನೋಡಿದಿರಾ!

ರಾಜ್ಯದ ಸಾಮ್ರಾಜ್ಯದ ಹೊಲಸೆಲ್ಲ
ಮಂಡಲಗಿಂಡಲಗಳ ಕೆಸರೆಲ್ಲ
ತೇಲಿಸಿ ಮುಳುಗಿಸಿ ಖಂಡಖಂಡಗಳ
ಸಾರ್ವಭೌಮರಾ ನೆತ್ತಿಗೆ ಸೋಕಿ!
ತಿಪ್ಪೆ ಸಾಗುತಿದೆ ನೋಡಿದಿರಾ

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತಾನೇ ಕೊಂಚ
ಬ್ರಹ್ಮಾಂಡವನೇ ಒಡೆಯಲು ಎಂತೋ
ಗುಂಪುಗಟ್ಟುತಿದೆ ಹಾಕಿದೆ ಹೊಂಚ
ತಿಪ್ಪೆ ಸಾಗುತಿದೆ ನೋಡಿದಿರಾ!

-ಗಣೇಶ ಭಟ್ಟ ಕೊಪ್ಪಲತೋಟ

ಮಂಗಳವಾರ, ಫೆಬ್ರವರಿ 6, 2018

ಕಾವ್ಯಾವಲೋಕನ ೧- ಕಾವ್ಯಗಳನ್ನು ಏಕೆ ಓದಬೇಕು!

(http://satwadhara.news ಎಂಬ ಅಂತರ್ಜಾಲ ಪತ್ರಿಕೆಗೆ ಬರೆದ ಲೇಖನ ಮಾಲಿಕೆಯ ಲೇಖನ)  
Image result for ತಾಳೆಗರಿ
ಚಿತ್ರಕೃಪೆ: ಗೂಗಲ್
             
    ಬಹುಶಃ ಬರವಣಿಗೆಗೆ ಮೊದಲು ಮಾಡುವವರೆಲ್ಲ
ಒಂದಿಷ್ಟು ಕವಿತೆಗಳನ್ನಂತೂ ಬರೆದಿರುತ್ತಾರೆ ಎಂಬುದು
ಹಲವರಲ್ಲಿ ಕಂಡು-ಕೇಳಿ ತಿಳಿದ ಸತ್ಯ. ಆ ಬಳಿಕ ಅವರ
ಮನೋಧರ್ಮಕ್ಕೆ ತಕ್ಕಂತೆ ಪದ್ಯವೋ
ಲಲಿತಪ್ರಬಂಧವೋ ಕಥೆಯೋ ಕಾದಂಬರಿಯೋ
ಅಥವಾ ಇನ್ನಾವುದೋ ಮಾರ್ಗವನ್ನು ಕಂಡುಕೊಂಡಿರುತ್ತಾರೆ.
ಈ ಎಲ್ಲವೂ ಸಾಹಿತ್ಯ ಎಂಬ ವರ್ಗಕ್ಕೆ ಸೇರುತ್ತದೆಯಷ್ಟೆ.
ಸಹಿತತೆಯೇ ಸಾಹಿತ್ಯ. ಇವೆಲ್ಲವನ್ನೂ ಆಲಂಕಾರಿಕರು
ಕಾವ್ಯ ಎಂಬ ಒಂದೇ ಪದದಿಂದ ಗುರುತಿಸುತ್ತಾರೆ.
ವರ್ಣನೆಯಲ್ಲಿ ನಿಪುಣನಾದವನು ಕವಿ.
ಕವಿಯ ರಚನೆ ಕಾವ್ಯ, ಶಬ್ದಾರ್ಥಗಳಿಂದ ಕೂಡಿರುವುದು ಕಾವ್ಯ,
ರಸಾತ್ಮಕವಾದ ವಾಕ್ಯವೇ ಕಾವ್ಯ,ರಮಣೀಯಾರ್ಥಪ್ರತಿಪಾದಕವಾದ
ಶಬ್ದವೇ ಕಾವ್ಯ- ಹೀಗೆ ಹಲವು ವಿಧದಲ್ಲಿ ಕಾವ್ಯ ಎಂಬ ಶಬ್ದಕ್ಕೆ
ಅರ್ಥವನ್ನು ವಿವರಿಸುತ್ತಾರೆ. ಅದೆಂತೇ ಇರಲಿ.
ಕಾವ್ಯವೆಂದರೇನು ಎಂಬುದರ ಸ್ಥೂಲ ಕಲ್ಪನೆಯಂತೂ
ನಮಗೆಲ್ಲ ಇದ್ದೇ ಇದೆ.
    ಇನ್ನು ಕಾವ್ಯಪ್ರಯೋಜನವೇನು ಎಂಬುದನ್ನು
ಸ್ವಲ್ಪ ಅವಲೋಕಿಸಿದರೆ ಯಶಸ್ಸನ್ನು ಪಡೆಯಲು,
ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಕೆಟ್ಟದ್ದನ್ನು
ಕಳೆದುಕೊಳ್ಳುವುದಕ್ಕಾಗಿ, ತತ್ಕ್ಷಣದ ನಿರ್ವೃತಿಗೆ
(ಪರಮಾನಂದವನ್ನು ಅನುಭವಿಸುವುದಕ್ಕೆ) ಕಾಂತೆಯಂತೆ
ಉಪದೇಶಿಸುವುದಕ್ಕೆ ಎಂದೆಲ್ಲ ಮಮ್ಮಟ
ತನ್ನ ಕಾವ್ಯಪ್ರಕಾಶದಲ್ಲಿ ಸಂಗ್ರಹಿಸಿ ಹೇಳುತ್ತಾನೆ..
ಹಾಗಿದ್ದರೂ ಕಾವ್ಯದ ಮೂಲ ಪ್ರಯೋಜನ ಎಂದರೆ
ಆನಂದವನ್ನು ಹೊಂದುವುದಷ್ಟೇ ಆಗಿದೆ. ಯಾರಾದರೂ
ಯಾವುದಾದರೂ ಕೆಲಸವನ್ನು ತಾವಾಗಿಯೇ
ಮಾಡುತ್ತ ಇದ್ದಾರೆ ಎಂದರೆ ಅದು ಅವರಿಗೆ ಇಷ್ಟವಾಗಿದೆ,
ಸಂತೋಷವನ್ನು ಕೊಡುತ್ತದೆ ಎಂಬುದೇ ಕಾರಣವಲ್ಲವೇ!
ಕವಿಯಾದರೂ ಯಾರ ಒತ್ತಾಯಕ್ಕೆ ಬರೆಯುವುದಿಲ್ಲ.
ತಾನಾಗಿಯೇ ತನ್ನಿಷ್ಟದಂತೆ ಬರೆಯುತ್ತಾನೆ.
ಹಾಗಾಗಿ ಅಲ್ಲಿ ಆನಂದದ ಅನುಭವವೇ ಮುಖ್ಯ
ಎಂಬುದು ಸ್ಪಷ್ಟ. ಇನ್ನು ಓದುಗರಿಗಾದರೂ ಅಷ್ಟೇ!
ಓದುತ್ತ ರಸಾಸ್ವಾದನೆಯನ್ನು ಮಾಡುವುದು
ಹಾಗೂ ಸಂತೋಷ ಪಡುವುದು ಇದೇ ಕಾವ್ಯವನ್ನು
ಓದುವಾಗ ಇರುವ ಪರಮಾರ್ಥ. ಅದಿಲ್ಲದಿದ್ದರೆ
ಯಾರು ತಾನೇ ಕಾವ್ಯಗಳನ್ನು ಓದುತ್ತಾರೆ.
ಈ ಆನಂದಾನುಭೂತಿ ಉನ್ನತ ಮಟ್ಟದಲ್ಲಿ
ದೊರೆತಾಗ ಅದನ್ನು ಉತ್ತಮಕಾವ್ಯವೆಂದು
ಪುರಸ್ಕರಿಸುತ್ತಾರೆ,ಅಂತಹ ಅನುಭವ ಆಗದಿದ್ದಾಗ
ಅದನ್ನು ಕೆಟ್ಟ ಕಾವ್ಯ ಎಂದು ತಿರಸ್ಕರಿಸುತ್ತಾರೆ.
    ಹೀಗೆ ಕವಿಗಳು ಆತ್ಮಾನಂದಕ್ಕಾಗಿ ರಚಿಸಿದ
ಕಾವ್ಯವೆಂಬ ಹೂವಿನಿಂದ ರಸವೆಂಬ
ಮಕರಂದವನ್ನುದುಂಬಿಯಂತೆ ನಾವೂ ಆಸ್ವಾದಿಸೋಣ.
ಕಾವ್ಯಗಳ ಅವಲೋಕನವೇ ಕಾವ್ಯಾವಲೋಕನ.
ಇದೇ ಹೆಸರಿನಲ್ಲಿ ನಾಗವರ್ಮನು ಒಂದು ಗ್ರಂಥವನ್ನು
ರಚಿಸಿದ್ದಾನೆ ಕೂಡ. ಅದರಲ್ಲಿ ಕೂಡ ಕಾವ್ಯದ
ಲಕ್ಷಣಗಳನ್ನು ಲಕ್ಷ್ಯಗಳನ್ನು ವಿವಿಧ
ಸಂಸ್ಕೃತಾಲಂಕಾರಗ್ರಂಥಗಳ ಆಧಾರದ ಮೂಲಕ
ವಿಸ್ತರಿಸಿದ್ದಾನೆ.
ನಾವೂ ಇಲ್ಲಿ ಬೇರೆ ಬೇರೆ ಕಾವ್ಯಗಳ ಸ್ವಾರಸ್ಯವನ್ನು
ಹುಡುಕಾಡುತ್ತಾ ಹೋಗುವ ಕಾರಣದಿಂದ
ಇದೂ ಕಾವ್ಯಾವಲೋಕನವೇ ಆಗಿದೆ. ಈ
ಲೇಖನಮಾಲಿಕೆಯಲ್ಲಿ ಕಾವ್ಯವೆಂದರೆ
ಮಾರ್ಗಕಾವ್ಯವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುವುದು.
ರಸಮಯವಾದ ಪದ್ಯಗಳನ್ನು ಅಥವಾ
ಕಥಾನಕಗಳನ್ನು ಹಾಗೂ ಅವುಗಳ ಸೂಕ್ಷ್ಮತೆಯನ್ನು
ಅವಲೋಕಿಸಲು ಇದು ಸಹಾಯಕವಾಗಬಲ್ಲದು
ಎಂದು ನಂಬಿರುವೆ.
    ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಲು ಮುಖ್ಯವಾಗಿ
ಬೇಕಾಗಿರುವುದು ಆ ಭಾಷೆಯಲ್ಲಿ ಹಿಡಿತ.
ಗ್ರೀಕಿನ ನಾಟಕವೊಂದನ್ನು ಕವಿಗಳೊಬ್ಬರು
ಹಳಗನ್ನಡಕ್ಕೆ ಅನುವಾದ ಮಾಡಿದಾಗ ಇನ್ನೊಬ್ಬ
ಕವಿಗಳು ಹೇಳಿದ್ದರಂತೆ- ನೀವು ಒಂದು ಗ್ರೀಕಿನಿಂದ
ಇನ್ನೊಂದು ಗ್ರೀಕಿಗೆ ಅನುವಾದ ಮಾಡಿದ್ದೀರಾ ಅಂತ!
ಹಳಗನ್ನಡ ಈಗಿನವರಿಗೆ ಏಕೆ ಕಬ್ಬಿಣದ ಕಡಲೆಯಾಗಿದೆ
ಎಂದರೆ ಅದರಲ್ಲಿ ಹಿಡಿತವಿಲ್ಲದ ಕಾರಣಕ್ಕೆ.
ಹಳಗನ್ನಡವೇ ಇಂದಿನ ಕನ್ನಡಕ್ಕೆ ಮೂಲವೆಂಬುದರ
ಅರಿವಿದ್ದರೂ ಆ ಸೂಕ್ಷ್ಮರೂಪಾಂತರಗಳನ್ನು
ಅಧ್ಯಯನ ಮಾಡದಿದ್ದರೆ ಅರಿತುಕೊಳ್ಳುವುದು
ಕಷ್ಟವೇ ಸರಿ! ಹಾಗಾಗಿಯೇ ಭಾಷೆಯನ್ನೇ ಅಧ್ಯಯನ
ಮಾಡುವವರಿಗೂ ಎಷ್ಟೋ ಕಾವ್ಯಗಳನ್ನು ಕೋಶಗಳು
ಹಾಗೂ ಟೀಕೆಗಳಿಲ್ಲದೇ ಅರ್ಥ ಮಾಡಿಕೊಳ್ಳಲಾಗದ
ಪರಿಸ್ಥಿತಿ ಉಂಟಾಗಿದೆ. ಆದರೆ ಒಂದು ಉಪಾಯವುಂಟು!
ಹೇಗೆ ಅನ್ಯಭಾಷೆಯ ಚಲನಚಿತ್ರವನ್ನು ನೋಡಿ
ನೋಡಿ ನಮಗೆ ಆ ಭಾಷೆಯ ಸ್ಥೂಲ
ಪರಿಚಯವಾಗುತ್ತದೆಯೋ ಹಾಗೇ ಹಳಗನ್ನಡದ
ಕಾವ್ಯಗಳನ್ನು ಓದಿ ಓದಿ ಅದರ ಸ್ಥೂಲಪರಿಚಯವಾಗಬಲ್ಲದು.
ಆಮೇಲೆ ಉಳಿದ ರಸಾಸ್ವಾದಕ್ಕೇನೂ ತೊಂದರೆ ಇರುವುದಿಲ್ಲ.
ಹಾಗಾಗಿ ನಮಗೆ ಅರ್ಥವಾಗದಿದ್ದರೂ ಅರ್ಥ/ಅನುವಾದವನ್ನು
ಓದಿಕೊಂಡು ಆಮೇಲೆ ಎರಡು ಬಾರಿ ಮೂಲವನ್ನು ಓದಿದಾಗ
ಆಸ್ವಾದನೆ ಸಾಧ್ಯವಾಗುತ್ತದೆ. ಕಾಲಕ್ರಮದಲ್ಲಿ ಪದ್ಯದ
ಆಶಯವಂತೂ ಸ್ಪಷ್ಟವಾಗುವ ಮಟ್ಟಕ್ಕೆ ಓದಿ ಅರ್ಥೈಸಿಕೊಳ್ಳಲು
ಸಾಧ್ಯವಾಗುತ್ತದೆ. ಇದಕ್ಕೆ ಸ್ವಾನುಭವವೇ ಪ್ರಮಾಣ!
    ಹಿರಿಯರೊಬ್ಬರು ಪದ್ಯ ಹೇಗೆ ಸಹಜವಾದ ಅಭಿವ್ಯಕ್ತಿ
ಎಂಬುದಕ್ಕೆ ಒಂದು ಸುಂದರವಾದ ದೃಷ್ಟಾಂತವನ್ನು ಹೇಳುತ್ತಾರೆ.
ರಸ್ತೆಯಲ್ಲಿ ಹೋಗುವ ವ್ಯಕ್ತಿಯೊಬ್ಬ ಸುಮ್ಮನೆ ಗದ್ಯದಲ್ಲಿ
ಏನಾದರೂ ಹೇಳುತ್ತಾ ಹೋದರೆ "ಪಾಪ! ಹುಚ್ಚು ಹಿಡಿದಿರಬೇಕು"
ಎಂದು ಹೇಳುತ್ತೇವೆ. ಅದೇ ಆತ ಪದ್ಯವನ್ನು ಹಾಡಿಕೊಂಡು
ಹೋಗುತ್ತಿದ್ದರೆ "ಏನೋ ತುಂಬಾ ಸಂತೋಷದಲ್ಲಿರಬೇಕು!"
ಎಂದು ಮೆಚ್ಚಿಕೊಳ್ಳುತ್ತೇವೆ. ಅದೇ ರೀತಿ ಮುಷ್ಕರಗಳಲ್ಲಿ
"ಬೇಕೇ ಬೇಕು ನ್ಯಾಯ ಬೇಕು" ಎಂದೋ ಅಥವಾ ಇನ್ನಾವುದೋ
ಘೋಷಣೆಯನ್ನು ಕೂಗುವಾಗ, ಗಾದೆಗಳಲ್ಲಿ ಮೊದಲಾಗಿ
ಹಲವು ಕಡೆಗಳಲ್ಲಿ ಆ ಪದ್ಯದ ಛಾಯೆಯನ್ನು ಕಾಣುತ್ತೇವೆ.
ಅಲ್ಲಿರುವುದೇ ಛಂದಸ್ಸು. ಇದು ಕವಿತೆಗೆ ಒಂದು
ಗೇಯತ್ವವನ್ನು ಕೊಡುತ್ತದೆ. ಆಹ್ಲಾದವನ್ನು ಉಂಟು ಮಾಡುತ್ತದೆ.
ಛಂದಸ್ಸಿನ ಆವಶ್ಯಕತೆಯ ಬಗ್ಗೆ ಚರ್ಚಿಸುವವರು
ಈ ಅಂಶವೊಂದನ್ನು ಗಮನಿಸಿದರೆ ಸಾಕು.
ತೀನಂಶ್ರೀ ಅವರು ಕೂಡ "ಭಾರತೀಯಕಾವ್ಯಮೀಮಾಂಸೆ"ಯಲ್ಲಿ
ಭಾವಾಭಿವ್ಯಕ್ತಿಗೆ ಪದ್ಯಗಳೇ ಸೂಕ್ತ ಎಂಬುದನ್ನು ಹೇಳಿದ್ದಾರೆ.
ಚಂಪೂಕಾವ್ಯಗಳಲ್ಲಿ ಗದ್ಯಪದ್ಯಗಳು ಮಿಶ್ರ ವಾಗಿರುತ್ತವೆ
ಆದರೂ ಉತ್ಕಟವಾದ ಭಾವವನ್ನು ವ್ಯಕ್ತ ಪಡಿಸುವಾಗ
ಕವಿ ಗದ್ಯಕ್ಕಿಂತ ಪದ್ಯವನ್ನೇ ಆಶ್ರಯಿಸುತ್ತಾನೆ ಎಂಬುದೂ
ಕಾಣುತ್ತದೆ. ಈ ಎಲ್ಲವನ್ನು ಅವಲೋಕಿಸಿದರೆ
ಛಂದೋಮಯಪದ್ಯದ ವಿಶಾಲತೆ ಮತ್ತು ಸಹಜತೆಯ ಅರಿವಾಗುತ್ತದೆ
    ಇನ್ನು ಕೆಲವು ಕವಿಸಮಯವನ್ನು ಇಲ್ಲಿ ವಿವೇಚಿಸೋಣ.
ಈ ವಿಷಯದಲ್ಲಿ ನೇರವಾಗಿ ನಾಗವರ್ಮನ
ಕಾವ್ಯಾವಲೋಕನದಿಂದಲೇ ಆಯ್ದ ಪದ್ಯಗಳನ್ನೂ ಸರಳವಾದ
ಗದ್ಯಾನುವಾದಗಳನ್ನು ಪ್ರಸ್ತುತಪಡಿಸುವೆ.
ಕವಿಸಮಯ ಎಂದರೇನು-
ಆವುದಶೇಷಲೋಕವಿಷಯಸ್ಥಿತಿಯಲ್ತಖಿಳಾಗಮಾರ್ಥಮುಂ
ಭಾವಿಪೊಡಲ್ತು ಸತ್ಕವಿಪರಂಪರೆಯಿಂ ಪರಿಗೀತಮಾಗಿ ನಿ-
ಷ್ಕೇವಳಮಾದ ರೂಢಿವಶದಿಂ ಸಲೆ ಸಲ್ವುದಿದಲ್ತೆ ಶಿಷ್ಟಸಂ-
ಭಾವಿತಮಪ್ಪ ಕಾವ್ಯಸಮಯಂ ಭುವನತ್ರಯವಸ್ತುಗೋಚರಂ ||೮೪೪||
(ಆವುದು-ಯಾವುದು, ಅಶೇಷ-ಸಂಪೂರ್ಣವಾದ, ಲೋಕವಿಷಯಸ್ಥಿತಿ- 
ಲೋಕದ ವಾಸ್ತವಿಕಸ್ಥಿತಿ, ಅಲ್ತು- ಅಲ್ಲವೋ, ಅಖಿಳಾಗಮಮಾರ್ಥಮುಂ-
ಎಲ್ಲ ಆಗಮಗಳ ಅರ್ಥವೂ, ಭಾವಿಪೊಡೆ-ಭಾವಿಸಿದರೆ, 
ಅಲ್ತು-ಅಲ್ಲವೋ, ಸತ್ಕವಿಪರಂಪರೆಯಿಂ-ಸತ್ಕವಿಗಳ ಪರಂಪರೆಯಿಂದ, 
ಪರಿಗೀತಮಾಗಿ-ಹೇಳಲ್ಪಟ್ಟು, ನಿಷ್ಕೇವಳಮಾದ ರೂಢಿವಶದಿಂ-
ಕೇವಲವಲ್ಲದ ರೂಢಿಯಿಂದ, ಸಲೆ ಸಲ್ವುದು-ಎಲ್ಲರಿಂದಲೂ 
ಒಪ್ಪಿಕೊಳ್ಳಲ್ಪಟ್ಟಿದೆಯೋ, ಭುವನತ್ರಯವಸ್ತುಗೋಚರಂ-ಮೂರು 
ಲೋಕಗಳಲ್ಲಿಯ ವಸ್ತುಗಳಲ್ಲೂ ಗೋಚರವಾಗುವುದು, 
ಶಿಷ್ಟಸಂಭಾವಿತಂ ಅಪ್ಪ-ಶಿಷ್ಟರಿಂದ ಒಪ್ಪಿಗೆ ಆಗುವ, ಕಾವ್ಯಸಮಯಂ-
 ಕವಿಸಮಯ/ಕಾವ್ಯಸಮಯ, ಇದಲ್ತೆ- ಇದಲ್ಲವೇ!)
ಅಂದರೆ ವಾಸ್ತವದಲ್ಲಿ ಸಾಧ್ಯವಲ್ಲದ ಆದರೆ ಕವಿಗಳ
ಪರಂಪರೆಯಿಂದಲೂ ಶಿಷ್ಟರಿಂದಲೂ ಸಹೃದಯದರಿಂದಲೂ
ಒಪ್ಪಿಕೊಳ್ಳಲ್ಪಟ್ಟಕೆಲವು ರೂಢಿವಶದಿಂದ ಬಂದ ವಿಶೇಷವಾದ
ವಿಷಯಗಳೇ ಕವಿಸಮಯಗಳು. ಇದಕ್ಕೆ ಉದಾಹರಣೆಗಳನ್ನು
ನೋಡಿದರೆ ಗೊತ್ತಾಗುತ್ತದೆ.
ಕೀರ್ತಿ ಬಿಳಿ ಬಣ್ಣ, ಪಾಪ ಕಪ್ಪು ಬಣ್ಣ. ಇತ್ಯಾದಿಗಳು.
“ಅವನ ಕೀರ್ತಿ ಹಾಲಿನಂತೆ ಬೆಳ್ಳಗೆ" “ಆದರೆ ಇದೊಂದು ಕೆಲಸ
ಅವನ ಕೀರ್ತಿಗೆ ಕಳಂಕ ತಂದುಬಿಟ್ಟಿತು" ಇಲ್ಲಿ ಕಳಂಕ ಎಂದಾಗ
ಕಪ್ಪು ಎಂಬುದು ವೇದ್ಯವಾಗುತ್ತದೆ. ಇನ್ನೂ ಹಲವು
ಉದಾಹರಣೆಗಳನ್ನು ಹೇಳುವುದಿದ್ದರೆ-
ಸೂರ್ಯ ಬಂದಾಗ ಕಮಲಗಳು ಅರಳುತ್ತವೆ. ನೈದಿಲೆಗಳು
ಬಾಡುತ್ತವೆ. ಚಂದ್ರ ಬಂದಾಗ ಕಮಲಗಳು ಬಾಡುತ್ತವೆ.
ನೈದಿಲೆಗಳು ಅರಳುತ್ತವೆ.ಮೋಡಗಳನ್ನು ಕಂಡು ನವಿಲು
ನರ್ತಿಸುತ್ತದೆ. ಚಾತಕಪಕ್ಷಿ ಮಳೆಯ ನೀರನ್ನು ಮಾತ್ರ
ಕುಡಿದು ಬದುಕಿರುತ್ತದೆ. “ಅವನ ಬರುವಿಕೆಗೆ ಅವಳು
ಚಾತಕಪಕ್ಷಿಯಂತೆ ಕಾಯುತ್ತಿದ್ದಳು" ಎಂದೆಲ್ಲ ಹೇಳುತ್ತೇವೆ.
ಹಾಗೆಯೇ ಚಕೋರ ಬೆಳದಿಂಗಳನ್ನು ಕುಡಿದು ಜೀವಿಸಿರುತ್ತದೆ.
ಕೋಗಿಲೆ ವಸಂತಋತುವಿನಲ್ಲಿ ಮಾವಿನ ಚಿಗುರನ್ನು
ತಿಂದು ಪಂಚಮಸ್ವರದಲ್ಲಿ ಹಾಡುತ್ತದೆ. ಆನೆಯ ಕುಂಭಸ್ಥಲದಲ್ಲಿ
ಮುತ್ತು ಇರುತ್ತದೆ. ಬಿದಿರನಲ್ಲಿ ಮುತ್ತು ಇರುತ್ತದೆ.
ರೋಹಣಗಿರಿಯಲ್ಲಿ ರತ್ನ ಸಿಗುತ್ತದೆ. ಚಕ್ರವಾಕ ಪಕ್ಷಿಗಳಿಗೆ ರಾತ್ರಿ 
ಹೊತ್ತು ವಿರಹ!ಪಕ್ಕದಲ್ಲೇ ಇದ್ದರೂ ತನ್ನ ಜೋಡಿಹಕ್ಕಿಯನ್ನು 
ಕಾಣಲಾರದೇ ರಾತ್ರಿಯಿಡೀ ಗೋಳಾಡುತ್ತದೆ.
ಇವೆಲ್ಲ ಕವಿಸಮಯಗಳು. ಕೆಲವು ಹೂವಿನ ಗಿಡಗಳು ಹೂಬಿಡಲು
 ಸುಂದರಿಯರಾದ ಸ್ತ್ರೀಯರು ದೋಹದವನ್ನು ಮಾಡಬೇಕು. 
ಉದಾಹರಣೆಗೆ- ಅಶೋಕವೃಕ್ಷ ಹೂಬಿಡಲು
ಸುಂದರಸ್ತ್ರೀ ಅದನ್ನು ಒದೆಯಬೇಕು. ತಿಲಕವೆಂಬ ಹೂವಿನ 
ಗಿಡವನ್ನು ಸುಂದರಿ ನೋಡಿದರೇ ಅದು ಹೂ ಬಿಡುತ್ತದೆ. 
ಕುರವಕವನ್ನು ಆಲಿಂಗಿಸಿಕೊಂಡರೆ ಹೂ ಬಿಡುತ್ತದೆ. 
ಕರ್ಣಿಕಾರದ ಎದುರು ನರ್ತನ ಮಾಡಿದರೆ ಅದು ಹೂ ಬಿಡುತ್ತದೆ.
ಹೀಗೇ ಇನ್ನೂ ಹಲವು ಕವಿಸಮಯಗಳು. ಇವನ್ನೆಲ್ಲ ಯಥೋಚಿತವಾಗಿ 
ಕವಿಗಳು ಬಳಸಿದಾಗ ಪದ್ಯಗಳ ಸೊಗಸು ಇನ್ನೂ ಹೆಚ್ಚುತ್ತದೆ.
ಅವುಗಳೆಲ್ಲವುಗಳಿಗೆ ಉದಾಹರಣೆಗಳನ್ನು ಆಯಾ ಸಂದರ್ಭದಲ್ಲೇ ನೋಡೋಣ.
    ಇಂತಹ ಈ ಕಾವ್ಯವೆಂಬ ವಿಸ್ತಾರವಾದ ಪ್ರಪಂಚಕ್ಕೆ ಕವಿಯೇ ಬ್ರಹ್ಮ. 
ಅವನಿಗೆ ಹೇಗೆ ರುಚಿಸುತ್ತದೆಯೋ ಹಾಗೇ ಈ ಜಗತ್ತೂ 
ಪರಿವರ್ತನೆಯಾಗುತ್ತದೆ ಎಂಬುದೊಂದು ಸಂಸ್ಕೃತದ ಶ್ಲೋಕವಿದೆ. 
ಮುಂದುವರೆದು ಹೇಳಿದರೆ ಈ ಜಗತ್ತಿಗೆ ಯಾರಿಗೆ ಬೇಕಾದರೂ 
ಮುಕ್ತವಾದ ಪ್ರವೇಶವಿದೆ. ವೀಸಾ ಪಾಸ್ಪೋರ್ಟ್ ಏನೂ ಬೇಡ! 
ಇಲ್ಲಿ ಯಾವಾಗ ಬೇಕಾದರೂ ಬರಬಹುದು. ಯಾರ ಅಡೆತಡೆಗಳಿಲ್ಲದೇ 
ವಿಹಾರ ಮಾಡಬಹುದು. ಹೋಗುವ ಮನಸ್ಸಾದರೆ ಯಾವಾಗ ಬೇಕಾದರೂ 
ನಿರ್ಗಮಿಸಬಹುದು. ಇದಕ್ಕೆ ಯಾವ ತೆರಿಗೆ ಸುಂಕ ಇಲ್ಲ!
ಕಾಲದ ನಿಯಮ ಇಲ್ಲಿ ನಡೆಯುವುದಿಲ್ಲ! ಇಲ್ಲಿರುವ ಕವಿಗಳೆಲ್ಲ 
ಚಿರಂಜೀವಿಗಳು! ಬಂದ ರಸಿಕರಿಗೆ ರೋಗವಾಗಲೀ 
ಮುಪ್ಪಾಗಲೀ ಬಾಧಿಸುವುದಿಲ್ಲ! ಎಷ್ಟು ಜನರು ಬಂದರೂ
ಸಾಕಷ್ಟು ಅವಕಾಶವುಳ್ಳ ಈ ಜಗತ್ತಿನಲ್ಲಿ ಇಂತಹ ಅನ್ಯಾದೃಶವಾದ 
ಆನಂದವನ್ನು ಅನುಭವಿಸುವುದಕ್ಕೋಸ್ಕರವಾಗಿಯೇ ಇಷ್ಟೊಂದು
 ಜನರು ಇಷ್ಟೊಂದು ಕಾಲದಿಂದ ಇಲ್ಲಿ ವಿಹರಿಸುತ್ತಿದ್ದಾರೇನೋ! 
ಹೀಗೆ ವಿಹರಿಸಿಕೊಂಡು ಬರಲು ಈ ಕಾವ್ಯಾವಲೋಕನದ 
ಯಾನವಂತೂ ಸಿದ್ಧವಾಗಿದೆ.