Powered By Blogger

ಶುಕ್ರವಾರ, ಮೇ 5, 2017

ಸಹೃದಯಕಾಲ-೨೪ ಅವಧಾನ

ಅವಧಾನ  ಒಂದು ಅದ್ಭುತಕಲೆ ಎಂಬ ಲೇಖನವನ್ನು ಹಿಂದೆ ೨೦೧೧ರಲ್ಲಿ ಬರೆದಿದ್ದೆ. ಅಂದು ನನ್ನ ಬುದ್ಧಿಗೆ ಅರ್ಥವಾದಂತೆ ಅದನ್ನು ಬರೆದಿದ್ದೆ. ಅದರಲ್ಲಿ ಹಲವಾರು ಮಾಹಿತಿಗಳು- ಸ್ವಕೃತಪದ್ಯಗಳು ಅಪರಿಪೂರ್ಣವಾಗಿಯೂ ದೋಷಪೂರ್ಣವಾಗಿಯೂ ಇದ್ದವೆಂಬುದು ಆಗಳೇ ಅರಿವಿಗೆ ಬಂದಿದ್ದರೂ ಅವನ್ನು ತಿದ್ದುವಷ್ಟು ಅರಿವು ನನಗೇ ಇರಲಿಲ್ಲ. ಇಂದು ಕೂಡ ಅದನ್ನು ತಿದ್ದದೇ ಹೊಸದಾಗಿಯೇ ಬರೆಯುತ್ತಿರುವುದಕ್ಕೂ ಕಾರಣವೆಂದರೆ- ಆಗಿನ ನನ್ನ ಬರವಣಿಗೆಯೂ ಹಾಗೆಯೇ ಇರಲಿ, ತುಲನಾತ್ಮಕವಾಗಿ ಪರಿಶೀಲಿಸುವವರಿಗೆ ಅವಕಾಶವಾಗಲಿ ಎಂದಷ್ಟೆ!
"ಕನ್ನಡದಲ್ಲಿ ಅವಧಾನ ಕಲೆ" ಎಂಬ ಶತಾವಧಾನಿ ಡಾ।। ಆರ್ ಗಣೇಶ್ ಅವರ ಪುಸ್ತಕದಲ್ಲಿ ಕೂಲಂಕಷವಾಗಿ ಅವಧಾನಕಲೆಯ ಇತಿಹಾಸ ಸ್ವರೂಪ ಆಯೋಜನೆ ನಿರ್ವಹಣೆ ಮೊದಲಾದ ಪೂರಕವಾದ ಹಲವಾರು ಮಾಹಿತಿಗಳು ಬರೆಯಲ್ಪಟ್ಟಿವೆ. ಒಬ್ಬ ಕೃತಪರಿಶ್ರಮನಾದ ಪ್ರತಿಭಾನ್ವಿತ ಕವಿಯು ಆ ಕೃತಿಯನ್ನು ಅಧ್ಯಯನ ಮಾಡುವ ಮೂಲಕ ಅವಧಾನ ಕಲೆಯನ್ನು ಪ್ರವೇಶಿಸುವುದು ಸಾಧ್ಯ ಎಂಬುದಂತೂ ನಿಜ. ದಿಟವೇ! ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಬಹುತೇಕ ಜನರಿಗೆ ಪರಿಚಿತವೇ ಆಗಿರುವ ಕಾರಣ, ಕನ್ನಡದಲ್ಲಿ ಇಂದು ಇದಂಪ್ರಥಮವೆಂಬಂತೆ ಅವಧಾನದ ಕುರಿತು ಹೇಳಬೇಕಾದ ಅವಶ್ಯಕತೆ ಇಲ್ಲ. ಆದರೆ ಈ ಲೇಖನವಾದರೂ ಅವಧಾನದ ಪರಿಚಯವನ್ನು ಕೊಡುವ ಜೊತೆಗೆ ಅವಧಾನವನ್ನು ಆಸ್ವಾದಿಸಲು ಬೇಕಾದ ಪೂರ್ವಸಿದ್ಧತೆಯನ್ನೂ ಕೊಡುತ್ತದೆ.  ಈ ಪರಿಚಯವಿಲ್ಲದಿದ್ದರೂ ಕೂಡ  ಅವಧಾನವನ್ನು ಆಸ್ವಾದಿಸಬಹುದು. ಆದರೆ ಈ ಪರಿಚಯ ಸೂಕ್ಷ್ಮವಿವರಗಳನ್ನು ಆಸ್ವಾದಿಸಲು ಅನುಕೂಲವಾಗುವುದು. 
ಅವಧಾನದ ಪರಿಭಾಷೆಯಲ್ಲಿ ಅವಧಾನಿ ಎಂದರೆ- ಅವಧಾನವನ್ನು ಮಾಡುವವನು- ಏಕಾಗ್ರತೆಯಿಂದ ಯಾವುದೇ ಲೇಖನದ ಸಲಕರಣೆಗಳ ಸಹಾಯವಿಲ್ಲದೇ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರಗಳನ್ನು ಕೊಡುತ್ತಾ ಸಮಸ್ಯೆಗಳನ್ನು ಬಗೆಹರಿಸುತ್ತಾ ಹಲವು ಅಂಗಗಳನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನು
ಪೃಚ್ಛಕ ಎಂದರೆ- ಪ್ರಶ್ನೆಗಳನ್ನು ಕೇಳುವವನು.ಅವಧಾನದಲ್ಲಿ ಚಿತ್ರ-ಗೀತ-ನೃತ್ಯ-ಸಾಹಿತ್ಯ-ಯಕ್ಷಗಾನ-ಗಣಿತ  ಇತ್ಯಾದಿ ಹಲವು ವಿಧಗಳು ಪ್ರಚಲಿತವಾಗಿವೆ.  ಇಲ್ಲಿ ಮುಖ್ಯವಾಗಿ ಸಾಹಿತ್ಯಾವಧಾನವನ್ನು ಕೇಂದ್ರೀಕರಿಸಿ ವಿಸ್ತರಿಸುವೆ. 
ಪೃಚ್ಛಕರ ಸಂಖ್ಯೆಗನುಗುಣವಾಗಿ ಅವಧಾನ ಅಷ್ಟಾವಧಾನ, ಗುಣಿತಾವಧಾನ, ದಶಾವಧಾನ, ಶತಾವಧಾನ, ಸಹಸ್ರಾವಧಾನ ಎಂದೆಲ್ಲ ವಿಧಗಳಿವೆಯಾದರೂ ಅವೆಲ್ಲವುಗಳ ಮೂಲಮಾತೃಕೆಯಾದ ಅಷ್ಟಾವಧಾನವೊಂದನ್ನು ತಿಳಿದುಕೊಂಡರೆ ಉಳಿದವುಗಳನ್ನೂ  ಕಲ್ಪಿಸಿಕೊಳ್ಳಬಹುದು. 
ಅಷ್ಟಾವಧಾನವೆಂದರೆ ಎಂಟು ಜನ ಪೃಚ್ಛಕರಿರುತ್ತಾರೆ. ಅದರಲ್ಲಿ ಎಂಟು ವಿಭಾಗಗಳು ನಿರ್ಧರಿಸಲ್ಪಟ್ಟಿರುತ್ತವೆ. ಆ ವಿಭಾಗಗಳಲ್ಲಿ ಕೆಲವನ್ನು ಸಾಮಾನ್ಯವಾಗಿ ಎಲ್ಲ ಅವಧಾನಗಳಲ್ಲಿ ಕೂಡ ಕಾಣಬಹುದು.  ಇನ್ನು ಕೆಲವನ್ನು ಅವಧಾನಿಗಳು ತಮ್ಮ ತಮ್ಮ ಶಕ್ತಿಗೆ ತಕ್ಕಂತೆ ಇರಿಸಿಕೊಳ್ಳುವುದು. ಉದಾಹರಣೆಗೆ ಚಿತ್ರಕಾವ್ಯವಿಭಾಗವು ಬಹುವ್ಯುತ್ಪತ್ತ್ಯಪೇಕ್ಷಕವಾದ ಕಾರಣ ಅದನ್ನು ಎಲ್ಲರೂ ನಿರ್ವಹಿಸುವುದಿಲ್ಲ. ತೆಲುಗಿನಲ್ಲಿ ಚಿತ್ರಕಾವ್ಯವನ್ನು ಅವಧಾನದಲ್ಲಿ ನಿರ್ವಹಿಸಲು ಸಾಧ್ಯವೇ ಇಲ್ಲವೆಂದೂ ಹೇಳಿದ್ದಾರೆ. ಹಾಗೆಯೇ ಧಾರಣಾಪ್ರಧಾನವಾದ ವ್ಯಸ್ತಾಕ್ಷರಿ, ಧಾರಣಾಶೂಭಯಪ್ರಧಾನವಾದ ಉದ್ದಿಷ್ಟಾಕ್ಷರಿ ಇತ್ಯಾದಿಗಳನ್ನು ಕೂಡ ಎಲ್ಲರೂ ನಿರ್ವಹಿಸುವುದಿಲ್ಲ. 
ಅವಧಾನಾಂಗಗಳು-
ಅವಧಾನವೊಂದರಲ್ಲಿ ನಾಲ್ಕು ಆವರ್ತಗಳು ಪೂರಣವೆಂದೂ ಒಂದು ಆವರ್ತ ಧಾರಣೆಯೆಂದೂ ಇರುತ್ತದೆ. ಸಾಮಾನ್ಯವಾಗಿ ಎಲ್ಲ ಛಂದಸ್ಸುಗಳೂ ನಾಲ್ಕು ಪಾದದವುಗಳಾಗಿರುವ ಕಾರಣ ಒಂದೊಂದು ಆವರ್ತದಲ್ಲಿ ಒಂದೊಂದು ಪಾದವನ್ನು ಪೂರಯಿಸುವುದು ಪೂರಣದ ಆವರ್ತಗಳಲ್ಲಿ ಆದರೆ, ಧಾರಣೆಯ ಆವರ್ತದಲ್ಲಿ ಮೊದಲಿನಿಂದ ಹೇಳಿದ  ಧಾರಣಾಪ್ರಧಾನವಾದ ಅಂಗಗಳನ್ನು ಮತ್ತು ಪದ್ಯಗಳನ್ನು ಮತ್ತೆ ನೆನಪಿನಿಂದ ಹೇಳಿ ಅರ್ಥವನ್ನು ವಿವರಿಸುವುದು. ಪ್ರತಿ ಸುತ್ತಿಗೆ ಒಂದರಂತೆ ಹೇಳುವ ಆಶುಕವಿತೆಗೆ ಧಾರಣೆಯಿಂದ ಹೇಳುವುದು ಇರುವುದಿಲ್ಲ. ಪ್ರತಿ ಆವರ್ತದಲ್ಲೂ ಒಂದೊಂದು ಪಾದವನ್ನು ಹೇಳುವ ನಿಷೇಧ ಸಮಸ್ಯೆ ದತ್ತಪದಿ ಚಿತ್ರಕವಿತೆ ಮೊದಲಾದವುಗಳನ್ನು ಧಾರಣೆಯಿಂದ ಹೇಳಿ ಅರ್ಥವನ್ನು ವಿವರಿಸುವುದು ಈ ಆವರ್ತದಲ್ಲಿ ನಡೆಯುತ್ತದೆ.  ಹಾಗಾಗಿ ಅವಧಾನಿಯು ಬರವಣಿಗೆಯ ಸಾಮಗ್ರಿಗಳನ್ನು ಬಳಸದೇ ಇವೆಲ್ಲವನ್ನೂ ಮನಸ್ಸಿನಲ್ಲೇ ನಿರ್ವಹಿಸಬೇಕು ಎಂಬುದಂತೂ ಸುವೇದ್ಯ!
೧. ನಿಷೇಧಾಕ್ಷರಿ- 
ಪೃಚ್ಛಕರು ವಸ್ತು ಮತ್ತು ಛಂದಸ್ಸನ್ನು ಕೊಟ್ಟು ಅದರ ಬಗ್ಗೆ ಪದ್ಯ ರಚಿಸಲು ಹೇಳುತ್ತಾರೆ. ಅವರು   ಅವಧಾನಿಯು ಪದ್ಯ ರಚಿಸುವಾಗ ಒಂದೊಂದು ಅಕ್ಷರವನ್ನೂ ಊಹಿಸಿ ನಿಷೇಧಿಸುತ್ತಾರೆ. 
ಉದಾಹರಣೆಗೆ- ಗಣಪತಿಯ ಸ್ತುತಿ. ಮೊದಲಿಗೆ ಅವಧಾನಿ "ಗ" ಎಂದರೆ ಪೃಚ್ಛಕ-ಗಣಪತಿ ಎಂದೇನಾದರೂ ಮಾಡಬಹುದು ಎಂದು "ಣ"ಕಾರವನ್ನು ನಿಷೇಧಿಸುತ್ತಾರೆ. ಆಗ ಅವಧಾನಿಯು "ಜ" ಎಂದು ಹೇಳುತ್ತಾನೆ. ಪೃಚ್ಛಕ-"ಗಜಮುಖ" ಎಂದು ಹೇಳಬಹುದು ಎಂದು "ಮ"ಕಾರವನ್ನು ನಿಷೇಧಿಸುತ್ತಾರೆ. ಅವಧಾನಿಯು "ವ" ಎಂದು ಹೇಳುತ್ತಾನೆ. ಪೃಚ್ಛಕ-"ಗಜವದನ" ಎಂದು ಹೇಳಬಹುದು ಎಂದು "ದ"ಕಾರವನ್ನು ನಿಷೇಧಿಸುತ್ತಾರೆ. ಒಳ್ಳೆಯ ಶಬ್ದಸಂಪತ್ತಿಯಿಲ್ಲದಿದ್ದರೆ ಇಲ್ಲಿಗೆ ಅವಧಾನಿಯ ಕಥೆ ಮುಗಿದಂತೆಯೇ! ತೊಡಕಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಾನೆ! ಆದರೆ "ವದನ" ಎಂಬಂತೆ ಸಂಸ್ಕೃತದಲ್ಲಿ ಮುಖ ಎಂಬ ಅರ್ಥದಲ್ಲಿ "ವಕ್ತ್ರ" ಎಂಬ ಶಬ್ದವಿದೆ. ಹಾಗೆ- "ಗಜವಕ್ತ್ರ" ಎಂಬಂತೆ ಪದವನ್ನು ಪೂರಯಿಸಿ ಮುಂದುವರೆಯಬೇಕು. ಅಥವಾ ಪೃಚ್ಛಕರು ಹೆಚ್ಚು ವ್ಯುತ್ಪನ್ನರಾಗಿದ್ದು ಅವಧಾನಿಯು "ವ"ಕಾರವನ್ನು ಹೇಳಿದಾಗ "ಕ"ಕಾರವನ್ನೋ "ತ"ಕಾರವನ್ನೋ ನಿಷೇಧಿಸಿದರೆ ಅವಧಾನಿಯು ಬೇರೆ ಮಾರ್ಗವನ್ನೇ ಹಿಡಿಯಬೇಕಾಗುತ್ತದೆ.
ಇಲ್ಲಿನ ಕ್ಲೇಶ ಸುವೇದ್ಯ! ಪ್ರತ್ಯಕ್ಷರದಲ್ಲೂ ಯೋಚನೆ ಕವಲೊಡೆದು ಸಾಗಬೇಕು! ಪದ್ಯದಲ್ಲಿ ಪೃಚ್ಛಕರಿತ್ತ ವಸ್ತುವಿನ ವಿಷಯ ಬರಬೇಕು!
೨. ಸಮಸ್ಯಾಪೂರಣ-
ಸಮಸ್ಯಾಪೂರಣವೆಂದರೆ ಪದ್ಯದ ಕೊನೆಯ ಪಾದವೊಂದನ್ನು ಪೃಚ್ಛಕರು ಕೊಡುತ್ತಾರೆ. ಅದನ್ನು ಅವಧಾನಿಯು ಉಳಿದ ಮೂರು ಸಾಲುಗಳನ್ನು ಹೇಳಿ ಸಾರ್ಥಕವಾದ ಪದ್ಯ ಮಾಡಬೇಕು. ಪೃಚ್ಛಕರಿತ್ತ ಪಾದ ನಿರರ್ಥಕವೋ ಅಶ್ಲೀಲಾರ್ಥಕವೋ ಅಥವಾ ಇನ್ನಾವುದೋ ರೀತಿಯಲ್ಲಿರಬಹುದು. ಉದಾಹರಣೆಗೆ- ಶತಾವಧಾನಿ ಗಣೇಶರಿಗೆ ಆಂಧ್ರಸಾರಸ್ವತವಿಜ್ಞಾನಸಂಘದವರು ಆಯೋಜಿಸಿದ್ದ ೫೦ನೆಯ ವರ್ಷದ ಅವಧಾನದಲ್ಲಿ (೨೨ಜನವರಿ ೨೦೧೭) ನಾನು ಕೊಟ್ಟ ಸಮಸ್ಯೆ- "ಕುರಿಯುಂ ಸಿಂಗದಿನಂಜಲಿಲ್ಲಮಾಗಳ್"-  ಕುರಿ ಸಿಂಹಕ್ಕೆ ಆಗ ಹೆದರಲಿಲ್ಲ ಎಂದರ್ಥ! ಇದು ಔಪಚ್ಛಂದಸಿಕ ಎಂಬ ಅರ್ಧಸಮವೃತ್ತದಲ್ಲಿದೆ.  ಕುರಿ ಸಿಂಹಕ್ಕೆ ಹೆದರದಿರಲು ಸಾಧ್ಯವಿಲ್ಲ. ಅದೇ ಇಲ್ಲಿರುವ ತೊಡಕು.  ಅದಕ್ಕೆ ನನ್ನ ಪರಿಹಾರ
"ಕಿರುಗಂಬಕೆ ಪಗ್ಗಗಟ್ಟಿರಲ್ಕಂ
ತಿರೆ ವ್ಯಾಯಾಮಿಕಿಯೊಳ್ ಪ್ರದರ್ಶನಕ್ಕಂ
ಚರಿಸುತ್ತದನೇರ್ದು ಶಿಕ್ಷಿತಾತ್ಮಂ
ಕುರಿಯುಂ ಸಿಂಗದಿನಂಜಲಿಲ್ಲಮಾಗಳ್"
ತಾತ್ಪರ್ಯ-ಕಿರಿದಾದ ಕಂಬಕ್ಕೆ ಮೇಲೆ ಹಗ್ಗವನ್ನು ಕಟ್ಟಿ ಸರ್ಕಸ್ ಅಲ್ಲಿ ಪ್ರದರ್ಶನ ಮಾಡುವಾಗ ಅದನ್ನು ಏರಿ ನಡೆಯುತ್ತಿದ್ದ ಶಿಕ್ಷಣವನ್ನು ಹೊಂದಿದ ಕುರಿ ಸಿಂಹಕ್ಕೆ ಹೆದರಲಿಲ್ಲ. ಎಂದು ಪರಿಹಾರ.
ಶತಾವಧಾನಿಗಳು-  ಮೇಷಾತ್ಸಿಂಹಃ ಪಲಾಯತೇ ಎಂಬ ಪ್ರಸಿದ್ಧವಾದ ಸಂಸ್ಕೃತಸಮಸ್ಯಾಪೂರಣದ ಮಾದರಿಯಲ್ಲಿಯೇ ಅಗ್ನಿಗೆ ವಾಹನವಾದ ಕಾರಣ ಸಿಂಹಕ್ಕೆ ಮೇಷವು ಅಂಜಲಿಲ್ಲ ೆಂದು ಪೂರಣ ಮಾಡಿದರು.
ಹೀಗೆ ಸಮಸ್ಯಾ ಪೂರಣಕ್ಕೆ ಹಲವಾರು ಆಯಾಮಗಳಿರುತ್ತವೆ. ಪೃಚ್ಛಕರು ಕೊಡುವ ಪಾದದ ಮೇಲೆ ಪರಿಹಾರ ಕ್ರಮದ ಮೇಲೆ ಇವುಗಳ ಸ್ವಾರಸ್ಯ ಗೊತ್ತಾಗುತ್ತದೆ.
೩. ದತ್ತಪದಿ-
ದತ್ತಪದಿಯಲ್ಲಿ ಪೃಚ್ಛಕರು ವಸ್ತು ಛಂದಸ್ಸು ಹಾಗೂ ನಾಲ್ಕು ಪದಗಳನ್ನು ಕೊಡುತ್ತಾರೆ. ಆ ನಾಲ್ಕು ಪದಗಳು ವಸ್ತುವಿಗೆ ಹೊಂದಿಕೆ ಆಗುವಂತೆ ಇರುವುದಿಲ್ಲ. ಅಲ್ಲದೇ ಯಾವುದೋ ಅನ್ಯಭಾಷೆಯ ಪದವಾಗಿರಬಹುದು. ವಿಪರೀತಾರ್ಥವನ್ನು ಹೊಂದಿರಬಹುದು. ಅಥವಾ ಛಂದಸ್ಸಿನಲ್ಲಿ ನಿಶ್ಚಿತವಾದ ಸ್ಥಾನದಲ್ಲಿಯೇ ಬರುವ ಇನ್ನೇನೋ ತೊಡಕನ್ನು ಹೊಂದಿರಬಹುದು.  ಉದಾಹರಣೆಗೆ-  "ಕಟ್" "ಬಟ್" "ಗಟ್" "ನಟ್" ಎಂಬ ನಾಲ್ಕು ಆಂಗ್ಲಶಬ್ದಗಳನ್ನು ಬಳಸಿ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಮಾಡಿದ ಶ್ರೀಕೃಷ್ಣಸ್ತುತಿ ಮಾಡಬೇಕೆಂದು ನನ್ನ ಮೊದಲ ಅವಧಾನದಲ್ಲಿ ಶ್ರೀಧರ ಸಾಲಿಗ್ರಾಮ ಅವರು ಪ್ರಶ್ನೆಯನ್ನಿತ್ತಿದ್ದರು. ಅಂದು ಚೌಪದಿಯಲ್ಲಿ ನಾನು ಮಾಡಿದ ಪರಿಹಾರ- (ಕೆಳಗೆ ಗೆರೆ ಎಳೆದು ದತ್ತಪದಗಳನ್ನು ಸೂಚಿಸಿದೆ)
ಕಟ್ಟಿರ್ಪರಿವರಕ್ಷಿ ಪಾಶದಿಂ ನೀನೊಡಂ-
ಬಟ್ಟು ಬಾರದೆ ಪೋದೆಯೇನೊ ಕೃಷ್ಣಾ!
ಗಟ್ಟಿಗರ್ ಪಾಂಡವರ್ ಸೋಲ್ತಿರ್ಪರಿಂತಿಲ್ಲಿ
ನಟ್ಟ ನಡು ನೀರಾಯ್ತೆ ಸಭೆಯದಿಂದು।।
(ತಾತ್ಪರ್ಯ- ಇವರೆಲ್ಲ ತಮ್ಮ ಕಣ್ಣೋಟವೆಂಬ ಪಾಶದಿಂದಲೇ ನನ್ನನ್ನು ಕಟ್ಟಿಹಾಕಿದ್ದಾರೆ. ನೀನು ಒಡಂಬಟ್ಟು ಬಾರದೇ ಹೋದೆಯಾ ಕೃಷ್ಣಾ! ಗಟ್ಟಿಗರಾದ ಪಾಂಡವರೂ ಹೀಗೆ ಸೋತು ಕುಳಿತಿದ್ದಾರೆ. ಈ ಸಭೆಯೇ ನನ್ನ ಪಾಲಿಗೆ ನಟ್ಟ ನಡು ನೀರಾಯ್ತೇ! )
೪. ಚಿತ್ರಕವಿತೆ.
ಚಿತ್ರವೆಂದರೆ ಆಶ್ಚರ್ಯವನ್ನು ಹುಟ್ಟಿಸುವುದು, ಬೆರಗಳನ್ನು ಹುಟ್ಟಿಸುವುದು. ಇಲ್ಲಿ ಗತಿಚಿತ್ರ, ವರ್ಣಚಿತ್ರ, ಗೂಢಚಿತ್ರ, ಬಂಧಚಿತ್ರ ಇತ್ಯಾದಿ ಹಲವು ಪ್ರಕಾರಗಳನ್ನು ಕಾಣಬಹುದು. ಇವುಗಳನ್ನು ಅವಧಾನದಲ್ಲಿ ಮಾಡುವುದು ದೊಡ್ಡ ಸಾಹಸವೇ ಸರಿ. ಏಕೆಂದರೆ ಮನೆಯಲ್ಲಿ ಕುಳಿತು ಒಂದು ಚಿತ್ರಕವಿತೆ ಮಾಡಬೇಕೆಂದರೆ ಸಾಧಾರಣವಾಗಿ ನಿಘಂಟು ಮೊದಲಾದ ಎಲ್ಲ ಸಲಕರಣೆಗಳ ಸಹಾಯದಿಂದ ಎರಡು ಮೂರು ಗಂಟೆಗಳಷ್ಟು ಕಾಲಾವಕಾಶ ಹಿಡಿಯುತ್ತದೆ. ಮೊದಲು ಅವಧಾನಗಳಲ್ಲಿ ಚಿತ್ರಕವಿತೆಯನ್ನು ಪರಿಚಯಿಸಿದ್ದು ಶತಾವಧಾನಿ ಡಾ|| ಗಣೇಶ್ ಅವರೇ! ಆ ಬಳಿಕ ಸಂಸ್ಕೃತಾವಧಾನಿ ಡಾ|| ಆರ್ ಶಂಕರ್ ಅವರು ಚಿತ್ರಕವಿತೆಯನ್ನು ಮಾಡಬಲ್ಲವರು. ಇತ್ತೀಚೆಗೆ ಅವಧಾನ ಮಾಡಿದ ಎಚ್ ಎ ವಾಸುಕಿ ಅವರು ಕೂಡ ಅವಧಾನದಲ್ಲಿ ಚಿತ್ರಕವಿತೆಯನ್ನು ರಚನೆ ಮಾಡಿದ್ದಾರೆ. ಹಿಂದೆ ಕೆಲವು ಚಿತ್ರಕವಿತೆಗಳನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದೆ. ಅಲ್ಲದೇ ಚಿತ್ರಕವಿತೆಯ ವಿವರಗಳನ್ನು ಬೇರೆಯದೇ ಲೇಖನದಲ್ಲಿ ಮುಂದೆ ಸಮಯವಾದಾಗ ವಿಸ್ತರಿಸುವೆ.
೫. ಆಶುಕವಿತೆ ಅಥವಾ ವರ್ಣನೆ
ಆಶುಕವಿತೆ ಎಂದರೆ ಆಶುವಾಗಿ - ವೇಗವಾಗಿ ಶೀಘ್ರದಲ್ಲಿ ಕವಿತೆಯನ್ನು ರಚಿಸಿ ಹೇಳುವುದೇ ಆಗಿದೆ. ಆಶುಕವಿಯಾಗಿರುವುದು ಅವಧಾನಿಯಾಗುವವರಿಗೆ ಬೇಕಾದ ಮೊದಲ ಅರ್ಹತೆ. ಪೃಚ್ಛಕರಿಂದ ಕೊಡಲ್ಪಟ್ಟ  ವಸ್ತು ಛಂದಸ್ಸುಗಳಿಗನುಗುಣವಾಗಿ ತತ್ಕ್ಷಣದಲ್ಲಿ ಪದ್ಯವೊಂದನ್ನು ಹೇಳುವುದು ಆಶುಕವಿತೆ. ವರ್ಣನೆಯೆಂದರೆ ಆಶುಕವಿತೆಯಂತೆಯೇ. ಆದರೆ ಒಂದೊಂದು ಆವರ್ತಕ್ಕೆ ಒಂದೊಂದು ಪಾದವನ್ನು ಹೇಳಿ ಕೊನೆಯಲ್ಲಿ ಧಾರಣೆಯಿಂದ ಪೂರ್ತಿ ಪದ್ಯವನ್ನೂ ಹೇಳಬೇಕಾಗುತ್ತದೆ.
೬. ಕಾವ್ಯವಾಚನ- ಅಥವಾ ಪುರಾಣಪಠನ
ಕಾವ್ಯವಾಚನದಲ್ಲಿ ಮಹಾಕವಿಗಳ ರಸವತ್ಪ್ರಸಂಗದಿಂದ ಆರಿಸಿದ ಪದ್ಯವನ್ನು ಪೃಚ್ಛಕರು ಗಮಕಿಸಿದರೆ ರಾಗಬದ್ಧವಾಗಿ ಹಾಡಿದರೆ ಅವಧಾನಿಯು ಆ ಪದ್ಯ ಯಾವ ಕಾವ್ಯದ್ದು ಯಾವ ಸಂದರ್ಭದ್ದು ಹಾಗೂ ಅಲ್ಲಿ ಸ್ವಾರಸ್ಯವೇನು ಎಂಬುದನ್ನು ವಿಸ್ತರಿಸಬೇಕು. ಪುರಾಣಪಠನವೆಂಬ ವಿಭಾಗವಾದರೂ ಅಷ್ಟೇ! ಇಲ್ಲಿ ಅವಧಾನಿಯು ಕಾವ್ಯರಚನೆಯಷ್ಟೇ ಅಲ್ಲದೇ ಇತರ ಕವಿಗಳ ಕಾವ್ಯವನ್ನೂ ಓದಿ ಆಸ್ವಾದಿಸಿ ಅದನ್ನು ಇತರರಿಗೂ ರಸ್ಯವಾಗುವಂತೆ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರಬೇಕೆಂಬುದೇ ತಾತ್ಪರ್ಯ.
೭. ಸಂಖ್ಯಾಬಂಧ, ಘಂಟಾಗಣನ ಅಥವಾ ಪುಷ್ಪಗಣನ
ಸಂಖ್ಯಾಬಂಧವೆಂದರೆ magic square ಎಂದು ಹೇಳುವುದೇ ಆಗಿದೆ. 5 ಅಡ್ಡಸಾಲುಗಳಲ್ಲಿ ಹಾಗೂ 5 ಕಂಬಸಾಲುಗಳಲ್ಲಿ ಸಂಖ್ಯೆಗಳನ್ನು ತುಂಬಿಸಿ ಪೃಚ್ಛಕರು ಅವಧಾನದ ಆರಂಭದಲ್ಲಿ ನೀಡಿದ ಮೊತ್ತ ಬರುವಂತೆ ಅವಧಾನಿಯು ಪೂರಣ ಮಾಡಬೇಕು. ಇಲ್ಲಿಯೂ ಕೂಡ ಯಾವುದೇ ಬರವಣಿಗೆಯ ಉಪಕರಣಗಳನ್ನಾಗಲೀ ಅಥವಾ ಕ್ಯಾಲ್ಕುಲೇಟರ್ ಮೊಬೈಲ್ ಇತ್ಯಾದಿಗಳನ್ನು ಬಳಸಬಾರದು ಎಂಬುದು ಮೂಲಭೂತ ನಿಯಮ. ಹಾಗೆ ಮನಸ್ಸಿನಲ್ಲೇ ಪೂರಣ ಮಾಡಿಕೊಂಡ ಬಂಧವನ್ನು ಪೃಚ್ಛಕರು ಕೇಳಿದಾಗ ಕೇಳಿದ ಮನೆಯ ಸಂಖ್ಯೆಗಳನ್ನು ಹೇಳುತ್ತ ಪೂರಣ ಮಾಡಬೇಕು. ಪೃಚ್ಛಕರೂ ಅವಧಾನಿಯು ಯಾವುದಾದರೂ ಬೇರೆಯ ವಿಭಾಗಕ್ಕೆ ಉತ್ತರಿಸುವಾಗ ಅವನ ಚಿಂತನೆಯ ಪ್ರವಾಹಕ್ಕೆ ತಡೆಯೊಡ್ಡಲು ಒಂದು ಸಂಖ್ಯೆಯನ್ನು ಕೇಳುತ್ತಾರೆ. ಹೀಗೆ ಉಳಿದ ವಿಭಾಗಗಳ ನಿರ್ವಹಣೆ ಮಾಡುವಾಗ ಮಧ್ಯದಲ್ಲಿ ಏಕಾಗ್ರತೆಗೆ ಭಂಗ ಪಡಿಸಲೆಂದೇ ಈ ಅಂಶಗಳು ನಿರೂಪಿತವಾಗಿವೆ. ಇದರ ಬದಲಿಗೆ ಘಂಟಾಗಣನವನ್ನೂ ಇಟ್ಟುಕೊಳ್ಳಬಹುದು. ಅದರಲ್ಲಿ ಪೃಚ್ಛಕರು ಜಾಗಟೆಯನ್ನು ಬಡಿಯುತ್ತಾರೆ. ಒಂದು ಬಾರಿಗೆ ಒಂದು "ಠಂ"ಕಾರವನ್ನು ಮಾತ್ರ ಮಾಡುತ್ತಾರೆ. ಅವಧಾನಿಯು ಕೊನೆಯಲ್ಲಿ ಒಟ್ಟೂ ಎಷ್ಟು ಬಾರಿ ಘಂಟೆಯನ್ನು ಬಾರಿಸಿದರು ಎಂದು ನೆನಪಿಟ್ಟುಕೊಂಡು ಹೇಳಬೇಕು.
ಪುಷ್ಪಗಣನವೆಂದರೆ ಕೂಡ ಘಂಟೆಯ ಶಬ್ದದ ಬದಲು ಹೂವಿನಿಂದ ಅವಧಾನಿಗೆ ಹೊಡೆಯುವುದು. ಪೃಚ್ಛಕರು ಚೆಂಡು ಹೂವನ್ನೋ ಅಥವಾ ಇನ್ನಾವುದೋ ಸ್ಪರ್ಶವೇದ್ಯವಾಗುವಂತಹ ಹೂವನ್ನು ತೆಗೆದು ಆಗೊಮ್ಮೆ ಈಗೊಮ್ಮೆ ಹೊಡೆಯುತ್ತಾರೆ. ಆ ಲೆಕ್ಕವನ್ನೂ ಇಟ್ಟುಕೊಂಡು ಕೊನೆಯಲ್ಲಿ ಎಷ್ಟಾಯಿತೆಂದು ಹೇಳಬೇಕಾದುದು ಅವಧಾನಿಯ ಕರ್ತವ್ಯ.
೮. ಅಪ್ರಸ್ತುತಪ್ರಸಂಗ
ಇದರಲ್ಲಿ ಅವಧಾನಿಯ ಯೋಚನಾಸರಣಿಗೆ ಭಂಗಪಡಿಸುವುದಕ್ಕೆ ಪೃಚ್ಛಕರು ಪ್ರಸ್ತುತವಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ. ಇದೂ ಕೂಡ ಸಂಖ್ಯಾಬಂಧದಂತೆಯೇ ಉಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಏಕಾಗ್ರತೆಯನ್ನು ಮುರಿಯುವುದಕ್ಕೂ ಸಭಾರಂಜನೆಗೂ ಕೇಳುವುದಾಗುತ್ತದೆ. ಇಲ್ಲಿ ವಿಷಯನಿರ್ಬಂಧವಿಲ್ಲ. ಹಾಸ್ಯವೂ ಗಂಭೀರವೂ ಇರಬಹುದು. ಪ್ರಶ್ನೆಯ ಗುರುತ್ವಲಘುತ್ವಗಳಿಗನುಸಾರವಾಗಿ ಅವಧಾನಿಯು ಉತ್ತರಿಸಬೇಕು.
ಉದಾಹರಣೆಗೆ ಕೆಲವನ್ನು ಗಮನಿಸಬಹುದು-
೧. ಪೃ- ಅವಧಾನಿಗಳೇ- ಪ್ರಾಣಿಗಳೆಲ್ಲ ಸಂಸ್ಕೃತದಲ್ಲೇ ಮಾತನಾಡುತ್ತವೆ ನೋಡಿ- ಹಸು- ಅಂಬಾ ಎನ್ನುತ್ತದೆ! ಮೇಕೆ- ಮೇ ಮೇ ಅಂತ! ನಾಯಿ - ಬಭೌ ಬಭೌ ಎಂದು! ಪಕ್ಷಿಗಳಲ್ಲಿ ಕಾಗೆ- ಕಾ ಕಾ! ಎಂದು ಹೀಗೆ! ಹಾಗಾಗಿ ಸಂಸ್ಕೃತ ತುಂಬಾ ಹಳೆಯ ಭಾಷೆ ಎಂದು ಹೇಳಬಹುದೇ!
ಅ- ಹೌದು! ಆದರೆ ಕೆಲವೊಂದು ಪ್ರಾಣಿಗಳು ಬೇರೆ ಭಾಷೆಯಲ್ಲಿಯೂ ಮಾತನಾಡುತ್ತವೆ ನೋಡಿ- ಕಪ್ಪೆ- ವಾಟರ್ ವಾಟರ್ ವಾಟರ್!
೨. ಪೃ- ಅವಧಾನಿಗಳೇ "ದುಷ್ಟರಿಂದ ದೂರವಿರು" ಅಂತ ಹೇಳ್ತಾರೆ! ಎಷ್ಟು ದೂರವಿರಬೇಕು?
ಅ- "ನಿಮ್ಮಿಂದ ನಾನು ಇರುವಷ್ಟು ದೂರದಲ್ಲಿ"

ಹೀಗೆ ಅವಧಾನದ ವಿಭಾಗಗಳು ಸಾಗುತ್ತವೆ. ಈ ಅವಧಾನಕಲೆಯನ್ನು ಪ್ರತ್ಯಕ್ಷವಾಗಿ ನೋಡಿಯೇ ಆಸ್ವಾದಿಸಬೇಕಲ್ಲದೇ ಕೇವಲ ಓದುವುದರಿಂದ ಸಾಧ್ಯವಿಲ್ಲ. ಕೆಲವಷ್ಟು  ಅವಧಾನದ ದೃಶ್ಯಾವಳಿಗಳನ್ನು Youtube ಅಲ್ಲಿ ನೋಡಬಹುದು.
ಇನ್ನು ಕೆಲವೊಂದು ಅವಧಾನದ ಪದ್ಯಗಳನ್ನು ಇಲ್ಲಿ ಗಮನಿಸಬಹುದು
http://kathaakaala.blogspot.in/2014/11/blog-post.html
http://padyapaana.com/?cat=104 (ಇಲ್ಲಿ ವಿವಿಧ ಅವಧಾನದ ಪದ್ಯಗಳನ್ನು ಹಾಕಲಾಗುತ್ತದೆ.)