Powered By Blogger

ಭಾನುವಾರ, ನವೆಂಬರ್ 2, 2014

ಸಹೃದಯಕಾಲ-೧೪ : ಮೊದಲ ಅವಧಾನದ ಪದ್ಯಗಳು

ಪ್ರಾರ್ಥನಾಪದ್ಯಗಳು:
ಸ್ರಗ್ಧರಾ||
ವಂದೇ ಕ್ಷಿಪ್ರಪ್ರಸಾದಂ ಕವಿಜನಹೃದಯಂ ಶೃಂಗಖಂಡೇ ನಿವಾಸಂ
ನಿತ್ಯಂ ಪುಷ್ಪೈಸ್ಸುಪೂಜ್ಯಂ ಪರಿಮಲಭರಿತೈರ್ವಾಸಿತಂ ಯಜ್ಞಧೂಪೈಃ
ಅಶ್ಮಪ್ರಾಪ್ತಸ್ವರೂಪಂ ಸಕೃದಪಿ ಚ ನಿಜಾಕಾರವದ್ರಾಜಮಾನಂ
ಕಾವ್ಯೋದ್ಯುಕ್ತಾಯ ರಕ್ತ್ಯಾ ದ್ವಿಪವದನ! ಸದಾ ದೀಯತಾಮಾಶುಧಾರಾ||
ಶಾರ್ದೂಲವಿಕ್ರೀಡಿತ||
ಮಾತೇ ಶಾರದೆ ಶುದ್ಧವರ್ಣಸಹಿತಂ ರಾಗಾನ್ವಿತಂ ಸಭ್ಯಸಂ-
ಪ್ರೀತಂ ತಾಂ ಸಗುಣಂ ಸದಾ ರಸಿಕರೀ ಸತ್ಸಂಗ ಸಂಪಾದಿತಂ
ಮಾತೇ ವೀಣೆಯೆನುತ್ತುಮೊಲ್ದು ನುಡಿಸೌ ನೀಂ ಪೊಣ್ಮಿಸುತ್ತಿರ್ದೊಡಂ
ಪೂತಂ ತಾನೆನಿಕುಂ ಮದೀಯವಚನಂ ಸಂಸ್ಕಾರಮಂ ಪೊಂದುಗುಂ||
ಉತ್ಪಲಮಾಲೆ||
ಕುಂದದೆ ಸೌರಭಂದಳೆದು ನಿಚ್ಚವುಮಿಚ್ಛಿಪರೆಂಬ ದುಂಬಿಯಂ
ಚಂದದೆ ಕರ್ಷಿಸುತ್ತೆ ರಸಮಂ ಮಿಗೆ ತಾನುಣಿಸುತ್ತೆ ರಾಗದಿಂ
ನಂದದ  ಸತ್ಪರಾಗನಿಭಕಾವ್ಯಕದಾಶ್ರಯಮಾದುದಂ ಸದಾ
ವಂದಿಪೆನೆಲ್ಲ ಪೂರ್ವಸುಕವೀಶ್ವರಹೃತ್ಸರಸೀರುಹಂಗಳಂ||

ನಿಷೇಧಾಕ್ಷರಿ-(ಪೃಚ್ಛಕರು-ಶ್ರೀ ಶ್ರೀಶ ಕಾರಂತ)
ವಸ್ತು: ಸರಸ್ವತಿಯ ಸ್ತುತಿ:-
ಕಂದಪದ್ಯ||(ಗೀಟು ಹಾಕಿದ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು)
೧.  ಕ ಲೆ   ಗಂ -- ನಾಂ -- ನಿ   ಚ್ಚಂ -- ಕೇಳ್
ಕಲೆಗಂ ನಾಂ ನಿಚ್ಚಂ ಕೇಳ್
೨.   ತಳೆ  ವೆಂ -- ಸೊ   ಗ  ದೊಳ್ -- ಮ  ಹಾ  ಙ್ಘ್ರಿ  ಕ  ಞ್ಜ   ದ   ಸ  ಯ್ಪಂ|
ತಳೆವೆಂ ಸೊಗದೊಳ್ ಮಹಾಂಘ್ರಿಕಂಜದ ಸಯ್ಪಂ|
೩. --ನೆಲೆ   ನೀಂ   ಬಾ   ಣೀ -- ರ  ಸ  ಕಂ
ನೆಲೆ ನೀಂ ಬಾಣೀ ರಸಕಂ
೪.(ನಾಲ್ಕನೇ ಸುತ್ತಿನಲ್ಲಿ  ಯಾವುದೇ ನಿಷೇಧ ಮಾಡಲಿಲ್ಲ)
 ಗೆಲಮಕ್ಕೆಲ್ಲರ್ಗೆನಿನ್ನನೆನಪಿಂದೇಗಳ್|
ಒಟ್ಟೂ ಪದ್ಯ-
ಕಲೆಗಂ ನಾಂ ನಿಚ್ಚಂ ಕೇಳ್
ತಳೆವೆಂ ಸೊಗದೊಳ್ ಮಹಾಂಘ್ರಿಕಂಜದ ಸಯ್ಪಂ|
ನೆಲೆ ನೀಂ ಬಾಣೀ ರಸಕಂ
ಗೆಲಮಕ್ಕೆಲ್ಲರ್ಗೆನಿನ್ನನೆನಪಿಂದೇಗಳ್|
(ತಾತ್ಪರ್ಯ: ವಾಣೀ! ನೀನು, ರಸಕ್ಕೆ ನೆಲೆಯಾಗಿದ್ದೀಯಾ. ಕಲೆಗೋಸ್ಕರವಾಗಿ ನಾನು ನಿನ್ನ ಪಾದವೆಂಬ ಕಮಲದ ಒಳ್ಳಿತ್ತನ್ನು ತಳೆಯುತ್ತೇನೆ. ನಿನ್ನ ನೆನಪಿಂದ ಯಾವಾಗಳೂ ಎಲ್ಲರಿಗೂ ಜಯವಾಗಲಿ)

ಸಮಸ್ಯೆ-(ಪೃಚ್ಛಕರು-ಶ್ರೀ ಕೆ.ಬಿ.ಎಸ್.ರಾಮಚಂದ್ರ)
ಸಮಸ್ಯೆಯ ಸಾಲು: ಸಾಕಾಗಿರ್ದುದು ಗಂಡಸಂಗಮೆನುತುಂ ಸಾರಿರ್ದಳಾ ದೇವಿತಾಂ
ಶಾರ್ದೂಲವಿಕ್ರೀಡಿತ||
ನಾಕಕ್ಕಂ ಮಿಗಿಲೆಂಬರಲ್ತೆ ಕುರುರಾಜ್ಯಶ್ರೀಯನಾಂ ಕೇಳ್ದೊಡಂ
ಲೋಕಖ್ಯಾತಿಯುಮೊಪ್ಪಿರಲ್ ಕಲಿಯವಂ ಕೊಂಡಿಂತು ಪೋಗಿರ್ದೊಡಂ|
ಹಾ! ಕಷ್ಟಂ ಪತಿಯಲ್ತು ತಾನನುಜನಂ ಪೊಂದೆಂದೊಡಂಬೆ ಸ್ವಯಂ
ಸಾಕಾಗಿರ್ದುದು ಗಂಡಸಂಗಮೆನುತುಂ ಸಾರಿರ್ದಳಾ ದೇವಿತಾಂ|
(ತಾತ್ಪರ್ಯ: "ಕುರುರಾಜ್ಯದ ಸಂಪತ್ತನ್ನು ಕೇಳಿದರೆ ಸ್ವರ್ಗಕ್ಕೂ ಮಿಗಿಲು ಎಂದು ಹೇಳುತ್ತಾರೆ. ಲೋಕದಲ್ಲಿ ಖ್ಯಾತಿಯೂ ಇದೆ ಎಂದುಕೊಂಡಿರುವಾಗ, ವೀರನಾದ ಇವನು(ಭೀಷ್ಮ) ನನ್ನನ್ನು ಕರೆದುಕೊಂಡು ಹೋಗಿರಲು, ಹಾ! ಕಷ್ಟವಾಯಿತು. ಪತಿಯಾಗಿ ಅವನು ನನ್ನನ್ನು ವರಿಸಲಿಲ್ಲ, ತನ್ನ ತಮ್ಮನನ್ನು ಮದುವೆಯಾಗು ಎಂದ." ಆಗ ಅಂಬೆ ಸ್ವಯಂ "ಗಂಡಿನ ಸಂಗ ಸಾಕಾಗಿದೆ" ಎಂದು ಹೇಳಿದಳು.)

ದತ್ತಪದಿ-(ಪೃಚ್ಛಕರು- ಶ್ರೀ ಶ್ರೀಧರ)
ವಸ್ತು: ದ್ರೌಪದಿಯ ವಸ್ತ್ರಾಪಹರಣದ ಸಂಗತಿ
ಪದಗಳು-ಕಟ್,ಬಟ್,ಗಟ್,ನಟ್
ಚೌಪದಿ||
ಕಟ್ಟಿರ್ಪರಿವರಕ್ಷಿ ಪಾಶದಿಂ ನೀನೊಡಂ-
ಬಟ್ಟುಬಾರದೆ ಪೋದೆಯೇನೊ ಕೃಷ್ಣಾ|
ಗಟ್ಟಿಗರ್ ಪಾಂಡವರ್ ಸೋಲ್ತಿರ್ಪರಿಂತಿಲ್ಲಿ
ನಟ್ಟನಡು ನೀರಾಯ್ತೆ ಸಭೆಯದಿಂದು|
(ತಾತ್ಪರ್ಯ: ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಕೃಷ್ಣನನ್ನು ಕುರಿತು ಹೇಳುವುದು "ಇವರು ಅಕ್ಷಿಪಾಶ (ಕಣ್ಣುಗಳೆಂಬ ಹಗ್ಗದಿಂದ/ಜೂಜಿನ ಅಕ್ಷಿಗಳೆಂಬ ಹಗ್ಗದಿಂದ) ನನ್ನನ್ನು ಕಟ್ಟಿಹಾಕಿದ್ದಾರೆ. ನೀನು ಒಡಂಬಟ್ಟು(ನನ್ನನ್ನು ಕಾಪಾಡುವ ನಿಶ್ಚಯದಲ್ಲಿ) ಬಾರದೆ ಹೋದೆಯಾ ಕೃಷ್ಣಾ! ಗಟ್ಟಿಗರಾದ ಪಾಂಡವರು ಇಲ್ಲಿ ಸೋತಿದ್ದಾರೆ, ಈ ಸಭೆಯೇ ನನಗೆ ನಟ್ಟನಡು ನೀರಾಯಿತೇ!")

ಚಿತ್ರಕ್ಕೆ ಪದ್ಯ:(ಪೃಚ್ಛಕರು- ಶ್ರೀ ಜಿ.ಎಸ್ ರಾಘವೇಂದ್ರ)
ನವಿಲುಗಳ ಚಿತ್ರ
ತೇಟಗೀತಿ||
ನೀಲಕಂಠಂಗೆ ನೀಂ ಪೆರ್ಚೊ ನೋಳ್ಪೆನೆಂದು
ಸ್ಫಾಲಗೌರಾಂಗಪೂರ್ಣತ್ವದಿಂದೆ ಪಾರಲ್
ಮೇಲೆ ಕಂಡಿರ್ದುಮಾ ಪಕ್ಷಿ ಮೌನದಿಂದಂ
ನೀಲಕಂಠಂಗೆ ಪೋಲ್ತುದೇಂ ಧ್ಯಾನದಿಂದಂ।।
(ತಾತ್ಪರ್ಯ: "ನೀಲಕಂಠನಿಗೆ(ಶಿವನಿಗೆ/ನವಿಲಿಗೆ) ನೀನು ಹೆಚ್ಚೋ! ನೋಡುತ್ತೇನೆ" ಎಂದು ಬಿಳಿಮೆಯ್ಯ ನವಿಲು "ಪೂರ್ಣತ್ವದಿಂದ"(ಶಿವ ಬಿಳಿಯ ಬಣ್ಣದವನು, ತಾನೂ ಪೂರ್ಣಶರೀರ ಬಿಳಿ ಇರುವವನು ಎಂಬ ಕಾರಣದಿಂದ ಪೂರ್ಣ ಎಂದುಕೊಂಡು) ಹಾರಲು/ನೋಡಲು (ಪಾರ್=ಹಾರು/ನೋಡು), ಆ ಪಕ್ಷಿ (ನೀಲಿ ಬಣ್ಣದ್ದು) ಮೇಲೆ ಕಂಡರೂ ಕೂಡ ಮೌನದಿಂದ, ಸ್ವಯಂ ಧ್ಯಾನದಿಂದ ನೀಲಕಂಠ(ಶಿವ)ನಂತೆ ಇರುವುದೇ!")

ಉದ್ದಿಷ್ಟಾಕ್ಷರಿ:(ಪೃಚ್ಛಕರು- ಶ್ರೀ ವಾಸುಕಿ ಹೆಚ್.ಎ)
ವಸ್ತು - ಮರಳುಗಾಡು
ಅನುಷ್ಟುಪ್||
ಕುಂದದಾ ಬೆಂಕಿಗಾಡೆನ್ನಲ್
ಮಂದಮಾರುತದೂರನುಂ|
ನಂದಿಸಲ್ಕಾರ್ಪೆಯಾ ನಿಚ್ಚಂ
ಪೊಂದುವರ್ ನಿನ್ನನಾರ್ ಸಖಾ|
(ತಾತ್ಪರ್ಯ: ಕುಂದಿಲ್ಲದ ಬೆಂಕಿಯ ಕಾಡು/ಸುಡುಗಾಡು ಎನ್ನಲು, ತಂಪು ಗಾಳಿಯಿಂದಲೂ ದೂರವಿರುವುದು, ನಿತ್ಯವೂ (ನಿನ್ನ ಉರಿಯನ್ನು)ನಂದಿಸಲು ನೀನು ಶಕ್ತನೇ! ಸಖಾ! ನಿನ್ನನ್ನು ಹೊಂದುವವರು(ಬಯಸುವವರು) ಯಾರು? )

ಆಶುಕವಿತೆ:(ಪೃಚ್ಛಕರು-ಅಷ್ಟಾವಧಾನಿ ಡಾ|| ಶಂಕರ್ ರಾಜಾರಾಮನ್)
೧. ವಸ್ತು : ನರಸಿಂಹನ ಉಗುರು
ಕಂದಪದ್ಯ ||
ಕುರುಳಂ ಪಿಡಿಯದೆ ರಕ್ಕಸ-
ಗರುಳಂ ಬಗೆಯುತ್ತೆ ರಾಗಿಯಾದುದದಾಗಳ್|
ಪೊರೆಗೆ ಜನರ್ಕಳನಾವಗ-
ಮರರೇ ಸಲ್ಪೀ ವಿರಾಗಿ ನರಸಿಂಹನಖಂ||
(ತಾತ್ಪರ್ಯ: ಸ್ತ್ರೀಯರ ಮುಂಗುರುಳುಗಳನ್ನು ಹಿಡಿಯದೆಯೇ, ರಾಕ್ಷಸನ ಕರುಳನ್ನು ಬಗೆಯುತ್ತ ಆಗ ರಾಗಿಯಾದ (ಅನುರಾಗಿ;ಪ್ರಣಯನಿರತ/ಕೆಂಪುಬಣ್ಣದ್ದು) ಆ ವಿರಾಗಿ (ಸಾಂಸಾರಿಕ ರಾಗದ್ವೇಷಗಳಿಲ್ಲದ/ಕೆಂಪಿಲ್ಲದ) ನರಸಿಂಹನ ಉಗುರು ಜನರನ್ನು ಯಾವಾಗಳೂ ಕಾಪಾಡಲಿ)

೨. ವಸ್ತು: ಯಮುನೆಗೆ ಕೃಷ್ಣನ ಮೇಲಿನ ಪ್ರೀತಿ:
ಸಾಂಗತ್ಯ||
ಕಾಲಿಂದಿಯಾನಿರ್ಪೆ ಕಾಲಾಂಗ ನೀನಿರ್ಪೆ
ವೇಲೆಯೊಳಾಡುತ್ತೆ ಬೆಳೆದೆ
ಕಾಲಿಯನಂ ಕಟ್ಟಿ ದೂರಕೆ ಪೋದಪೆ
ಲೀಲೆಯೆ ನಿನಗೆಂತು ವಿರಹ||
(ತಾತ್ಪರ್ಯ:ನಾನು ಕಾಲಿಂದಿ,ಕಪ್ಪು ಬಣ್ಣವುಳ್ಳವಳು, ನೀನು ಕೃಷ್ಣ, ಕಪ್ಪು ಬಣ್ಣದವನು, ನನ್ನ ತೀರದಲ್ಲೇ ಆಡುತ್ತ ಬೆಳೆದವನು, ಕಾಲಿಯನನ್ನು (ಕಾಳಿಂಗ) ಕಟ್ಟಿಹಾಕಿ ಇಲ್ಲಿದ್ದ ವಿಷವನ್ನೆಲ್ಲಾ ತೆಗೆದು ಆ ಬಳಿಕ ದೂರಕ್ಕೆ ಹೋಗಿಬಿಟ್ಟೆ! ಕೃಷ್ಣಾ! ಈ ವಿರಹವೂ ನಿನಗೊಂದು ಲೀಲೆಯಾಯಿತೇ!)

೩. ವಸ್ತು: ಬೆಳಗಿನಜಾವದ ವರ್ಣನೆ (ಉಷೋ ವರ್ಣನೆ):
ಚತುರ್ಮಾತ್ರಾ ಚೌಪದಿ||
ಅನುರಾಗದೊಳುಷೆ  ವೆಣ್ಣಿವಳಾಣ್ಮ ನ
ದಿನಪನ ನೆನಪಿಂದಂಗಳಕೆ|
ತನಿನೀರ್ಚಿಮ್ಮಿಸೆ ಬಾನೊಳಗದರಿಂ
ದನಿತುಂ ಕೆಂಪದು ಪೊಣ್ಮಿರ್ತು||
(ತಾತ್ಪರ್ಯ : ಅನುರಾಗದಿಂದ ಮುಂಜಾವು ಎನ್ನುವಂತಹ ಹೆಣ್ಣು ತನ್ನ ಪ್ರಿಯಕರನಾದ ಸೂರ್ಯನ ನೆನಪಿಂದ ಅಂಗಳಕ್ಕೆ ತನಿ ನೀರನ್ನು ಚಿಮ್ಮಿಸಿದಳು. (ಮುಂಜಾವಿನಲ್ಲಿ ಅಂಗಳಕ್ಕೆ ನೀರು ಹಾಕುವಂತೆ) ಬಾನಿನಲ್ಲಿ ಅದರಿಂದ ಅಷ್ಟು ಕೆಂಪು ಹೊಮ್ಮಿತ್ತು. (ಅವಳ ಮುಖದಲ್ಲಿದ್ದ ಅನುರಾಗವನ್ನೇ ಬಿಂಬಿಸಿತ್ತು))

೪. ವಸ್ತು: ನಕ್ಷತ್ರ
ರಥೋದ್ಧತಾ||
ದೂರದೂರದೊಳೆ ನೋಂತು ನಿಂತಿರಲ್
ದಾರಿಹೋಕರೆನುವುಲ್ಕೆಯೈದಿರಲ್
ತಾರೆಗಳ್ ರಜತಕಾಮದಿಂದಿದೇಂ
ಚಾರುಚಂದ್ರನನೆ ಪೊಂದುತಿರ್ಪರೈ||
(ತಾತ್ಪರ್ಯ :ದೂರದೂರದಲ್ಲಿ ತಾವು ವ್ರತತೊಟ್ಟವರಂತೆ ನಿಂತಿದ್ದರೂ, ದಾರಿಹೋಕರಂತೆ ಉಲ್ಕೆಗಳು ಸಾಗುತ್ತಿದ್ದರೂ, ಬೆಳ್ಳಿಯ ಆಸೆಯಿಂದ ನಕ್ಷತ್ರಗಳು ಚಂದ್ರನನ್ನೇ ಹೊಂದುತ್ತಿವೆ. (ನಕ್ಷತ್ರಗಳ ಪತಿ ಚಂದ್ರ ಎಂಬ ಕಾರಣದಂದ. ಇಲ್ಲಿ "ರಜತದ ಹಾಗಿರುವ ಚಾರುಚಂದ್ರ ದಾರಿಹೋಕರಿಗಾರಿಗೂ ಸಿಗದೇ ಅವನಿಗಾಗೇ ವ್ರತತೊಟ್ಟು ನಿಂತ ನಕ್ಷತ್ರಗಳಿಗೇ ಸಿಕ್ಕ" ಎಂಬ ಭಾವ) )

ಕಾವ್ಯವಾಚನ:(ಪೃಚ್ಛಕರು-ಶತಾವಧಾನೀ ಡಾ| ಆರ್ ಗಣೇಶ್)
೧. "ಬ್ರಹ್ಮ ಮಾನಸಮಹದ್ಗರ್ಭಸಂಭವೆ...."

ಕುವೆಂಪು ಅವರ "ಚಿತ್ರಾಂಗದಾ" ಕಾವ್ಯಖಂಡದ ಆರಂಭದ ಸರಸ್ವತೀಸ್ತವನ
೨. "ಫಲಿತ ಚೂತದ ಬಿಣ್ಪು ನೆರೆ
ತಳಿತಶೋಕೆಯ ಕೆಂಪು...."
 ಕುಮಾರವ್ಯಾಸನ "ಕರ್ಣಾಟಭಾರತಕಥಾಮಂಜರಿ"ಯ ಆದಿಪರ್ವ; ಶತಶೃಂಗ ಪರ್ವತಪ್ರದೇಶದಲ್ಲಿ ಪಾಂಡು ಸತಿಯರ ಜೊತೆ ಇರುವಾಗಳಿನ ಸಂದರ್ಭದಲ್ಲಿ ವಸಂತ ಋತು ಬಂದದ್ದರ ವರ್ಣನೆ.
೩."ಚಳಮತಿಯಾದೆ ನೀಂ ಜಡಧಿಸಂಭವೆಯಪ್ಪುದಱಿಂ........ "
ರನ್ನನ "ಸಾಹಸಭೀಮವಿಜಯಂ" ಕೃತಿಯಲ್ಲಿ ದುರ್ಯೋಧನನ ಊರುಭಂಗವಾದ ಸಂದರ್ಭದಲ್ಲಿ ರಾಜ್ಯಲಕ್ಷ್ಮಿ ಅವನನ್ನು ಬಿಟ್ಟು ಹೊರಟಿರುತ್ತಾಳೆ. ಆಗ ಅವಳನ್ನು ಕಂಡು ಅಶ್ವತ್ಥಾಮ ನಿಂದಿಸಿ ಅವಳನ್ನು ಪುನಃ ಸುರ್ಯೋಧನನಲ್ಲಿಗೆ ಕರೆದುಕೊಂಡು ಹೋಗುವ ಸಂದರ್ಭ
೪. ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿಯಣಬೆ ತಾಳಿ....
ಬೇಂದ್ರೆಯವರ ಕಾಳಿದಾಸನ ಮೇಘಸಂದೇಶವನ್ನು ಆಶ್ರಯಿಸಿ ಬರೆದ "ಕನ್ನಡ ಮೇಘದೂತ"ದ ಪದ್ಯ
ಅಪ್ರಸ್ತುತಪ್ರಸಂಗ: (ಪೃಚ್ಛಕರು-ಶ್ರೀ ಸೋಮಶೇಖರ ಶರ್ಮ)