ತಮ್ಮ ೧೮ನೇ ವಯಸ್ಸಿನಲ್ಲೇ ಕವಿತ್ವಶಕ್ತಿಯನ್ನು ಪ್ರದರ್ಶಿಸಿ ಮೈಸೂರು ಮುಮ್ಮಡಿಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಕವಿಯಾಗಿದ್ದರು ಬಸವಪ್ಪಶಾಸ್ತ್ರಿಗಳು. ತಮ್ಮ ಅತ್ಯಲ್ಪಜೀವಿತಕಾಲದಲ್ಲಿಯೇ(೧೮೪೩-೧೮೯೧) ಅನೇಕ ಸಂಸ್ಕೃತಕೃತಿಗಳನ್ನೂ ಆಂಗ್ಲನಾಟಕಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಷ್ಟೇ ಅಲ್ಲದೇ ಸ್ವತಂತ್ರವಾಗಿ ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದರು. ಅಂತಹ ಒಂದು ಸ್ವತಂತ್ರ ಕೃತಿ 'ದಮಯಂತೀಸ್ವಯಂವರ'. ಇದೊಂದು ಚಂಪೂಶೈಲಿಯ ಕೃತಿಯಾಗಿದ್ದಾದರೂ ಪದ್ಯಬಾಹುಳ್ಯವೇ ಕಾಣುತ್ತದೆ. ಅಲ್ಲದೇ ಬಗೆಬಗೆಯ ಛಂದಸ್ಸುಗಳ ಪ್ರಯೋಗವೂ ಅತ್ಯಂತ ಹೃದ್ಯವಾಗುವ ವರ್ಣನೆಗಳೂ ಸೊಗಸಾಗಿ ಮೇಳೈಸಿವೆ.
![]() |
| PC:Internet |
ಚಂಪಕಮಾಲೆ||
ನವಫಲಶಾಲಿ ಶಾಲಿವನದಿಂ ಜನನಂದನ ನಂದನಂಗಳಿಂ
ಕುವಲಯಸಾರ ಸಾರಸ ವಿರಾಜಿ ವಿರಾಜಿ ನದೀನದಂಗಳಿಂ
ಸುವಿಮಲ ರೂಪಶೀಲರಮಣೀ ರಮಣೀಯ ನರರ್ಕಳಿಂ ಸವೈ
(ಪ್ರಥಮಾಶ್ವಾಸ-೨)
ಭವಭವನಂಗಳಿಂ ಮೆರೆಗುಮಾ ನಿಷಧಂ ಜನಜೀವನೌಷಧಂ||
(ಹೊಸ ಫಲವನ್ನು ಹೊತ್ತುನಿಂತ ಶಾಲಿ(ಭತ್ತ)ಯ ವನದಿಂದಲೂ, ಜನರಿಗೆ ಆನಂದವನ್ನು ಕೊಡುವಂತಹ ಉದ್ಯಾನವನಗಳಿಂದಲೂ, ಕುವಲಯ(ಕೆನ್ನಯ್ದಿಲೆ)ಹೂವಿನ ಸಾರದಿಂದಲೂ ಸಾರಸ ಪಕ್ಷಿಗಳ ಸಮೂಹದಿಂದಲೂ ವಿರಾಜಿಸುತ್ತಿರುವ ನದೀನದಗಳಿಂದಲೂ, ಸುವಿಮಲವಾದ ರೂಪಶೀಲಗಳಿಂದ ಕೂಡಿದ ರಮಣಿಯರಿರುವ ರಮಣೀಯವಾದ ಜನರಿಂದಲೂ, ವೈಭವಸಹಿತವಾದ ದೊಡ್ಡದೊಡ್ಡ ಭವನಗಳಿಂದಲೂ ಜನಜೀವನಕ್ಕೆ ಔಷಧವಾದ ನಿಷಧದೇಶ ಮೆರೆಯುತ್ತಿತ್ತು.)
ಇಲ್ಲಿರುವ ನಿಷಧದ ವರ್ಣನೆ ಸಾಧಾರಣವಾದ ಉಲ್ಲೇಖಗಳಿಂದ ಕೂಡಿದ್ದರೂ ಮೊದಲೆರಡು ಪಾದಗಳಲ್ಲಿ ಪಾದಾಂತಯತಿಸಹಿತವಾಗಿ ಪದ್ಯದಲ್ಲಿ ಯಥೇಷ್ಟವಾಗಿ ಜೊತೆಜೊತೆಯಾಗಿ ಬರುವ ಛೇಕಾನುಪ್ರಾಸಗಳ ಸ್ವಾರಸ್ಯ ಮೆಚ್ಚುವಂತಿದೆ. '..ಫಲಶಾಲಿ ಶಾಲಿ..', '..ಜನನಂದನ ನಂದನಂಗಳಿಂ..' '..ಸಾರ ಸಾರಸ..'..ವಿರಾಜಿ ವಿರಾಜಿ..' '..ನದೀನದಂ..' '..ರಮಣೀ ರಮಣೀಯ..' '..ಸವೈಭವಭವನಂ..' ಎಂಬೆಲ್ಲ ಕಡೆಗಳಲ್ಲಿ ಬರುವ ಈ ಪದಯುಗ್ಮಗಳ ಸೊಗಸೇ ಸೊಗಸು. ಕೊನೆಯಲ್ಲಿ 'ನಿಷಧಂ ಜನಜೀವನೌಷಧಂ' ಎಂದು ಅವುಗಳಿಗೆಲ್ಲ ಪೂರ್ಣವಿರಾಮ ಹಾಕಿದಂತೆ 'ನಿಷಧಂ' ಎಂಬ ಪದಕ್ಕೆ ಪ್ರಾಸವಾಗಿ 'ಜನಜೀವನೌಷಧಂ' ಎಂದು ತಂದು ನಿಲ್ಲಿಸುವುದೂ ಅಷ್ಟೇ ಹೃದ್ಯವಾಗಿದೆ.

