Powered By Blogger

ಶುಕ್ರವಾರ, ಡಿಸೆಂಬರ್ 24, 2010

ಒಂದು ಕ್ಷಮೆ ಕೋರಿಕೆ.

ಹಿಂದೆ "ಭಕ್ತಿಯಲ್ಲೆಂತು ಈ ಪರಿ ನಾರಯಣ" ಎಂದು ಬರೆದಿದ್ದ ಲೇಖನದಲ್ಲಿ ಒಂದು ತಪ್ಪು ಆಗಿತ್ತು. ಬಹುಶಃ ಯಾರೂ ಗಮನಿಸಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ.

ವೇದ ಪುರುಷನ ಸುತನ ಸುತನ ಸ-
-ಹೋದರನ "ಮೊಮ್ಮಗನ" ಮಗನ ತ
-ಳೋದರಿಯ ಮಾತುಳನ "ಮಾವನನ"ತುಳ ಭುಜ ಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ-
-ನಾದಿ ಮೂರುತಿ ಸಲಹೊ ಗದುಗಿನ ವೀರ ನಾರಯಣ

ಎಂಬ ಪಾಠ ಸರಿಯಾದದ್ದು. ಉದ್ಧರಣ ಚಿಹ್ನೆಯಲ್ಲಿ ಬಳಸಿದ ಶಬ್ದಗಳು ಬದಲಾಗಿವೆ.
ಉತ್ತರ:- ಮೊದಲಿನಂತೆಯೇ ಆದರೂ ನಾರದನ ಸಹೋದರ ಮರೀಚಿ ಹಾಗು ಅವನ 'ಮೊಮ್ಮಗ' ಇಂದ್ರ ಎಂಬ ಅರ್ಥ ಕೊಡುತ್ತದೆ. ಹಿಂದೆ ತಿಳಿಸಿದ್ದ ನಾರದನ ಸಹೋದರ ಕಶ್ಯಪ ಎಂಬುದು ಸರಿ ಅಲ್ಲ. ಕಶ್ಯಪ ಮರೀಚಿಯ ಮಗ. ಆನಂತರ 'ರೂಪನನ' ಎಂಬ ಶಬ್ದದ ಬದಲು ಮಾವನನ ಅಂಬುದನ್ನು ಹಾಕಿದಾಗ ಕೂಡಾ ಅದೇ ಅರ್ಥ ಸರಿಯಾಗಿದೆ.

ಮಂಗಳವಾರ, ಡಿಸೆಂಬರ್ 21, 2010

ಪರಾಗ ಸ್ಪರ್ಶ

ಪ್ರತಿಯೊಬ್ಬರಿಗೂ ಇಷ್ಟಾಗುವಂತೆ, ಅರ್ಥವಾಗುವಂತೆ ಸರಳವಾಗಿ "ವಿಜಯ ಕರ್ನಾಟಕ" ಪತ್ರಿಕೆಯಲ್ಲಿ ಪ್ರತಿ ಭಾನುವಾರ ಅಂಕಣ ಬರೆಯುವ  ಶ್ರೀವತ್ಸ ಜೋಶಿ ಅವರ ಪರಾಗ ಸ್ಪರ್ಶದ ಲೇಖನ ಓದಲು/ಕೇಳಲು/ನೋಡಲು http://www.sjoshi.podbean.com/ ಗೆ ಭೇಟಿ ಕೊಡಿ.

ಭಾನುವಾರ, ನವೆಂಬರ್ 21, 2010

ಬಣ್ಣ ಬಣ್ಣದ ಕಾಗದ

ಸೇರಿಸಿಟ್ಟಿಹೆ ನಾನು ಹತ್ತೆಂಟು ಪುಟಗಳ
ಬರೆದವೋ-ಖಾಲಿಯೋ? ಮರೆತೇ ಬಿಟ್ಟೆ!
ಕರಿಯವೋ-ಬಿಳಿಯವೋ? ಬಣ್ಣಬಣ್ಣದವುಗಳ
ದಾರದಿಂದ ಗಂಟುಕಟ್ಟಿ ಸುತ್ತಿ ಬಿಟ್ಟೆ ಬಿಳಿಬಟ್ಟೆ!

         ಒಳಗಿನಾ ಬಣ್ಣ ಮರೆಮಾಚಿದ ಮೋಸ ನಂದಲ್ಲ!
         ಬಣ್ಣಗಳ ವ್ಯತ್ಯಾಸ ತಿಳಿಯದವ ನಾನಲ್ಲ!
          ಒಂದರ ಬಣ್ಣ ಇನ್ನೊಂದಕ್ಕೆ; ಅದರ ಬಣ್ಣ ಮತ್ತೊಂದಕ್ಕೆ
           ಬಳಿಯಲೂ ಬಹುದು, ಇಲ್ಲದೆಯೂ ಇರಬಹುದು.
"ದೇಶದ ಮಾದರಿಗೆ ಇದನ್ನು ತೋರಿಸುವೆ
ಎಲ್ಲರನು ಛೇಡಿಸಿ ಬಣ್ಣ ಬಯಲಿಗೆಳೆಯುವೆ"
ಇತ್ಯಾದಿ ಬಯಕೆಯಲ್ಲ!!
"ಮೂಢ ಜನರೇ ನಿಮ್ಮತನ ನಿಮ್ಮಲ್ಲಿರಲಿ
ಹೇರಬೇಡಿರಿ ಇತರರಿಗೆ, ಅವರಿಷ್ಟ  ಅವರಿರಲಿ!"
ಎಂದು ಹೇಳಲೂ ಅಲ್ಲ!
ಕಲಿಸಬೇಕಿರುವವ ನಾನಲ್ಲ!
          "ನಿಮ್ಮ ಗುದ್ದಾಟದಲಿ ಬಣ್ಣ ಬಳಿಯುವ  ನೆಪದಲ್ಲಿ  
           ಶುಭ್ರವಾಗಿಹ  ಹೊರಬಟ್ಟೆ ಹೊಲಸಾಗದಿರಲಿ!
           ದೇಶದ ಭದ್ರತೆ ಹಾಳಾಗದಿರಲಿ
           ನಮ್ಮಲ್ಲಿ ಇಕ್ಕಟ್ಟು ಬಿಕ್ಕಟ್ಟು ಬಿಟ್ಟು ಒಗ್ಗಟ್ಟು ಬರಲಿ!"
           ಇದನ್ನು ಹೇಳಿ ಕಲಿಸಲು ಇವರೆಲ್ಲ ಚಿಕ್ಕವರಲ್ಲ!

ಸೇರಿಸಿಟ್ಟಿಹೆ ನಾನು ಹತ್ತೆಂಟು ಪುಟಗಳ!
ಏಕೆಂದರೆ ಇಷ್ಟೇ " ರದ್ದಿಯೊಡನೆ ಸೇರಿ ಕಸವಾಗದಿರಲಿ!
                       ಗಾಳಿಯಲಿ ಹಾರಿ ದೂರವಾಗದಿರಲಿ
                        ಕಳೆದು ಮತ್ತೆ ಹುಡುಕುವ ಸ್ಥಿತಿ ಬಾರದಿರಲಿ!!"

ಶುಕ್ರವಾರ, ನವೆಂಬರ್ 19, 2010

ಮೇಘ

ದಾರಿಹೋಕರ ಸೆಳೆವ ನೀಳವೃಕ್ಷದ ಹಣ್ಣು
ತೊಪತೊಪನೆ ಇಳೆ ಸೇರಿ ಆಗಿಹುದು ಅದು ಮಣ್ಣು.
ಶ್ರುತಿಯ ಹಿಡಿದಳು ತನ್ನ ದನಿಯಲ್ಲಿ ಆ ಹೆಣ್ಣು,
ಏರ ತೊಡಗಿದಳಯ್ಯ ಮೇಘ ರಾಗದಿ ಕಣ್ಣು-
ಅರ್ಧ ತೆರೆದಿರೆ ಮಂದ ಗಾಳಿ ಸಂಚರಿಸಿರಲು,
ಮೃದುದನಿಗೆ ಇಹಮರೆತು ಎಲ್ಲ ತಲೆದೂಗಿರಲು,
ಸಕಲ ಜಗವೇ ಸ್ತಬ್ದ,ಮೌನವಾ ಹೊಂದಿರಲು,
ಸ್ವರದ ಮೇಲೆಲ್ಲ ನಲಿದಾಡಿ ಮೇಲೆರಿರಲು,
ಸುತ್ತಮುತ್ತಲ ಜಗದಿ ಬೆಳಕು ಕಳೆಯುತ್ತಿರುಳು-
ಬಂದು, "ಸರೆಮಪನಿಸ"ವ ನುಡಿಸುತ್ತ ಕೊಳಲಿರಲು,
ಘನ ಮೆಘವೆಲ್ಲವೂ ಹನಿಗೂಡಿ ಅಳುವಂತೆ,
ಭುವಿಯ ತೊಯಿಸಲವನಿಯಾಯ್ತು ಸಜ್ಜನವಂತೆ!
ಬೆಳಗಿನಸ್ತದ ವೇಳೆ ಹಸಿರು ಸುತ್ತಲು ಹೊರಗೆ
ಬದುಕ ಬವಣೆಯ ತೆರೆದು ತೋರ್ವ ತರದಲಿ ಭುವಿಗೆ,
ತಟತಟನೆ ಜಲಬಿಂದು ಪತನದಾ ಜೊತೆಜೊತೆಗೆ,
ಗುಡುಗು ಸಿಡಿಲೈ ಭರದಿ ತಲೆಗಪ್ಪಳಿಸಿತಿಳೆಗೆ!
ಕಟಕಟನೆ ನಡುಗುತ್ತ ಸಾಗೋ ನಡೆಯೊಡಲಿಗೆ
ಭರಭರದಿ ಬೆಳೆದಿರುವ ತೃಣ,ತುಷ್ಟಿಯವುಗಳಿಗೆ.
ಮನಸೋತು ತನ್ನಯಾ ರಾಗಕ್ಕೆ ತಾನಾಗೆ
ರಾಗಲೋಕವ ಬಿಟ್ಟು ತಾ ಹೊರಗೆ ಬರುತಾಳೆ.
ಜಿಟಿಜಿಟಿಯ ಮಳೆಕಂಡು ನಾಚಿದಳು ಆ ಬಾಲೆ,
ಗಾನ ನಿಂತೊಡನಿಲ್ಲಿ ನಿಲ್ಲುವುದು ಮಳೆಯೆಲ್ಲಿ ?
ತನ್ನ ರಭಸವ ಬಿಡದೆ ಭೋರ್ಗರೆಯಿತಿಳೆಯಲ್ಲಿ!!
**********************************
*ನವೆಂಬರ್ ೨೦೧೦ ರ 'ಪತ್ರ-ಸಂಸ್ಕೃತಿ' ಮಿತ್ರರ "ಪಿಸುಮಾತು" ತ್ರೈಮಾಸಿಕ ದಲ್ಲಿ ಪ್ರಕಟವಾಗಿದೆ.
*"ಸರೆಮಪನಿಸ" - ಮೇಘರಾಗದಲ್ಲಿ ಈ ಸ್ವರಗಳು ಮಾತ್ರ ಬರುತ್ತವೆ. ರಾಗಗಳ ಬಗ್ಗೆ ಸೂಕ್ತವಾದ ರೀತಿಯಲ್ಲಿ ವಿವರಿಸಿ ತಿಳಿಸುತ್ತಿರುವ ಮಿತ್ರ "ವಿನಾಯಕ ಹೊನ್ನಾವರ" ಇವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆ ಸಂಗೀತಾಸಕ್ತಿ ಹುಟ್ಟಿಸಿ ಹೆಚ್ಚಿಸಿದ ಮಿತ್ರ "ಮಹೇಂದ್ರ ಸ್ವಾಮಿ ಹಿರೇಮಠ" ಇವನಿಗೂ ಕೃತಜ್ಞತೆಗಳು.

ಸೋಮವಾರ, ನವೆಂಬರ್ 15, 2010

ಕನ್ನಡ ತಾಯಿಗೆ ನಮನ

ಕನ್ನಡಾಮ್ಬೆಯೆ ನಿನ್ನ ಪದಗಳಿಗೆ ನಮಿಸುವೆನು
ಮುನ್ನ ನೀನೆನಗಿತ್ತೆ ಮಧುರಸದ ಹನಿಗಳನು!
ಆಹ!! ಸವಿರುಚಿಯೇನದರದ್ದು ಮಾತೆ !
ಜಗದಿ ನಾ ಹರಡುವೆನು ನಿನ್ನ ಯಶಗಾಥೆ!

ಬುಧವಾರ, ನವೆಂಬರ್ 3, 2010

ಸೋಮವಾರ, ಅಕ್ಟೋಬರ್ 18, 2010

ಉತ್ತರ ಸಿಕ್ಕಿತಾ ???

ವೇದ ಪುರುಷ -'ಶ್ರೀಮನ್ನಾರಾಯಣ'ನ
 ಸುತನಾದ -ಬ್ರಹ್ಮನ
ಸುತನಾದ -ನಾರದನ
ಸಹೋದರನಾದ -ಕಶ್ಯಪನ
ಹಿರಿ ಮಗನಾದ -ಇಂದ್ರನ
ಮಗನಾದ -ಅರ್ಜುನನ
ತಳೋದರಿ(ಹೆಂಡತಿ)ಯಾದ -ಸುಭದ್ರೆಯ
ಮಾತುಲನಾದ -ಕಂಸನ
ರೂಪದವನಾದ (ಮಾವನ ರೂಪದ) -ಜರಾಸಂಧನ
ಅತುಲ ಭುಜ ಬಲದಿ  ಕಾದಿಗೆಲಿದವನಾದ -ಭೀಮನ
ಅಣ್ಣನಾದ  -ಯುಧಿಷ್ಠಿರನ
ಅವ್ವೆಯಾದ  -ಕುಂತಿಯ
ನಾದಿನಿಯಾದ  -ದೇವಕಿಯ
ಜಠರದಲ್ಲಿ ಜನಿಸಿದ ಆದಿ ಮೂರುತಿ
ಗದುಗಿನ ವೀರ ನಾರಯಣ(ಕೃಷ್ಣ) ನಮ್ಮನ್ನು ಸಲಹು.

ಬುಧವಾರ, ಅಕ್ಟೋಬರ್ 6, 2010

ಭಕ್ತಿಯಲ್ಲೆಂತು ಈ ಪರಿ ನಾರಯಣ!!!!!

ಉಳಿದೆಲ್ಲ ಯೋಗಕ್ಕಿಂತ ಭಕ್ತಿ ಯೋಗವೇ ಶ್ರೇಷ್ಠ ಎಂದು ಹಲವಾರು ಸಂತ ಮಹಂತರು ಹೇಳಿದ್ದಾರೆ.
         ತುಲ್ಯ ನಿಂದಾ ಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್
         ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ
                                                      (ಭಗವದ್ಗೀತಾ-ಅ.೧೨ ಭಕ್ತಿಯೋಗ)
ಎಂದು ಶ್ರೀ ಕೃಷ್ಣ ಭಕ್ತರ ಕುರಿತಾಗಿ ಹೇಳಿದ್ದಾನೆ. ಅಂದರೆ-"ನಿಂದೆ ಮತ್ತು ಸ್ತುತಿಗಳೆರಡರಲ್ಲು ಸಮಾನ ಮನಸ್ಕನಾದ ಮೌನಿಯಾದ ಸಿಕ್ಕಿದ್ದಷ್ಟಕ್ಕೆ ಸಂತುಷ್ಟನು ಸ್ಥಿರವಾದ ಮನೆಯಿಲ್ಲದವನು ಸ್ಥಿರವಾದ ಮನಸ್ಸಿನವನು ಭಕ್ತನು ಆದ ನರನೇ  ನನಗೆ ಪ್ರೀತಿಪಾತ್ರ" ಎಂದು.ಹೀಗೆ ನಿರಂತರವಾಗಿ ದೇವರಲ್ಲಿ ಭಕ್ತಿಯನ್ನಿಡುವ ಅನೇಕ ಭಕ್ತರ ಕಥೆ ಕೇಳಿದ್ದೇವೆ.
          'ಕಥಾಕಾಲ'ಕ್ಕೆ ಬಂದಾಗ ಬೇಡರ ಕಣ್ಣಪ್ಪನ ಭಕ್ತಿಯ ಕುರಿತೂ, ಭಸ್ಮಾಸುರನಂತಹವರ ಭಕ್ತಿಯ ಕುರಿತೂ, ರಾವಣನ ಕಥೆಯನ್ನೂ ಧ್ರುವ ಕುಮಾರನ ಪ್ರಹ್ಲಾದನ ಚರಿತ್ರೆಯ ಕಥೆಗಳನ್ನೂ ಕೇಳಿದ್ದೇವೆ. ಇವರೆಲ್ಲರದ್ದೂ ಭಿನ್ನ ಭಿನ್ನವಾದ ಭಕ್ತಿಯ ರೂಪಗಳು. ತಾಮಸಿಕ ರಾಜಸಿಕ ಸಾತ್ವಿಕ ಹೀಗೆ,
         ನಾವೆಲ್ಲಾ ತಿಳಿದಂತೆ ಡಾ.ರಾಜಕುಮಾರ್ ಅವರು ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದರು. ಆ ನಂತರ ಭಕ್ತ ಪ್ರಹ್ಲಾದ ದಂತಹ ಭಕ್ತಿ ಪ್ರಧಾನ ಚಲನಚಿತ್ರಗಳು ಹೊರಬಂದವು.(ಇತ್ತೀಚಿನ ಚಲನಚಿತ್ರಗಳಲ್ಲಿ ಕೇವಲ ಪ್ರೇಮ ಕಥೆಗಳೇ ಇರುತ್ತವೆ.) ಅಂತಹದೇ  ಚಿತ್ರ 'ಕೈವಾರ ತಾತಯ್ಯ'. ಭಕ್ತಿಯ ಪರಾಕಾಷ್ಟತೆಯಲ್ಲಿ ,ಬಾಯಲ್ಲಿಟ್ಟುಕೊಂಡ ಕಲ್ಲಿನ ಪ್ರಭಾವದಿಂದಾಗಿ ಕೈವಾರದ ಮುನಿಗಳು 'ಓಂ ನಮೋ ನಾರಾಯಣಾಯ' ಎನ್ನಲು ಸಾಧ್ಯವಾಗದೆ "ಓಂ ನಮೋ ನಾರೇಯಣಾಯ " ಎಂದು ಉಚ್ಚರಿಸಿ ನಾರೇಯಣ ಮುನಿಗಳು ಎಂದೇ ಹೆಸರಾದರು. ಕಾಲಜ್ಞಾನ ಗ್ರಂಥವನ್ನೆಲ್ಲ ರಚಿಸಿದರು.ಬಾಯಲ್ಲಿಟ್ಟುಕೊಂಡ ಕಲ್ಲು ಕಲ್ಲುಸಕ್ಕರೆಯಾಗಿ ಬದಲಾದಾಗ ನಿನಗೆ ಸಿದ್ಧಿಸುವುದು ಎಂದು ಅವರ ಗುರುಗಳು ಹೇಳಿದ್ದರು ಎಂಬ ಕಥೆ ಇದೆ.
       ಅದಂತಿರಲಿ ಭಕ್ತಿಯಿಂದ ದೇವರನ್ನು ಏನೆಂದು ಕರೆದರೂ ಅವನಿಗೆ ಪ್ರೀತಿಯೇ ಎಂದು ಇದರಿಂದ ತಿಳಿಯುತ್ತದೆ.
       ಆದರೆ ವಾಙ್ಮಯ ಕ್ಷೇತ್ರದಲ್ಲಿ ಉತ್ಕೃಷ್ಟ ಕೃತಿಯಾದ ಕುಮಾರವ್ಯಾಸಗದುಗಿನ ಭಾರತ ಅಥವಾ ಕರ್ಣಾಟ ಭಾರತ ಕಥಾ ಮಂಜರಿಯ ವಿಚಾರಕ್ಕೆ ಬರುತ್ತಾ  ಹೇಳುವುದಾದರೆ ಭಾಮಿನೀಷಟ್ಪದಿ ಯ ಈ ಮಹಾಕಾವ್ಯದಲ್ಲಿ ಮಾತ್ರೆಗಳ ಲೆಕ್ಕಾಚಾರ ಸರಿಹೊಂದಲು ಕವಿ "ಗದುಗಿನ ವೀರ ನಾರಾಯಣ"ನನ್ನು  "ವೀರ ನಾರಯಣ"ನನ್ನಾಗಿ ಮಾಡಿದ್ದಾನೆ.ಅದೂ ಪೀಠಿಕಾ ಸಂಧಿಯ ಮೊದಲ ಪದ್ಯದಿಂದಲೇ ಆರಂಭ. ನಂತರ   ೭ನೆ ಪದ್ಯದಲ್ಲಿ "ವೀರ ನಾರಾಯಣನೆ ಕವಿ ಲಿಪಿಕಾರ ಕುವರ ವ್ಯಾಸ ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು"ಎಂದು ನಾರಾಯಣನಲ್ಲಿನ ತನ್ನ ಭಕ್ತಿಯನ್ನು ನಿವೇದಿಸಿದ್ದಾನೆ. ಕಾವ್ಯದಲ್ಲಿ ನೋಡಬೇಕಾದದ್ದು "ಪದುಮನಾಭನ ಮಹಿಮೆ" ಎಂದು ಹೇಳಿದ್ದಾನೆ.ನಂತರ ತನ್ನೆಲ್ಲ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ "ವೀರ ನಾರಾಯಣನ ಕಿಂಕರಗೆ" ಅಂದು ಧನ್ಯತಾ ಭಾವ ತೋರಿಸುತ್ತಾನೆ. "ಬಣಗು  ಕವಿಗಳ ಲೆಕ್ಕಿಪನೆ ಸಾಕೆಣಿಸದಿರು ಶುಕ ರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ" ಎಂದು ಮತ್ತೆ ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತಾನೆ. (ರಾಮಕೃಷ್ಣ ಪರಮಹಂಸರು 'ಸಾತ್ವಿಕ ಅಹಂಕಾರ ಇರಬೇಕು ಇಲ್ಲದಿದ್ದರೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ' ಎನ್ನುತ್ತಾರೆ.)
      ಇನ್ನು ೨೩ ನೇ ಪದ್ಯದ ಕುರಿತೂ ಹೇಳ ಹೊರಟರೆ ಕಾವ್ಯವನ್ನು ಕೇಳುವವರಿಗೂ ಓದುವವರಿಗೂ "ನಾರಯಣ" ಎನ್ನುತ್ತಲೇ ಒಗಟಿನಂತೆ ಈ ಸವಾಲನ್ನು ಕವಿ ಮುಂದಿಡುತ್ತಾನೆ.
                          ವೇದಪುರುಷನ ಸುತನ ಸುತನ ಸ-
                         -ಹೋದರನ ಹೆಮ್ಮಗನ ಮಗನ ತ-
                         -ಳೋದರಿಯ ಮಾತುಳನ ರೂಪನನತುಳ ಭುಜಬಲದಿ
                          ಕಾದಿಗೆಲಿದವನಣ್ಣನವ್ವೆಯ
                          ನಾದಿನಿಯ ಜಠರದಲಿ ಜನಿಸಿದ-
                         -ನಾದಿ ಮೂರುತಿ ಸಲಹೊ ಗದುಗಿನ ವೀರ ನಾರಯಣ.
ಕೊನೆಗೆ ನಾರಾಯಣನ ಹೆಸರು ಬರಬೇಕು. ಮೊದಲು ವೇದಪುರುಷನಿಂದ ಪ್ರಾರಂಭವಾಗಬೇಕು. ವೇದಪುರುಷನೆಂದರೆ ಯಾರು? ಅವನೂ ನಾರಾಯಣನೇ! ಅವನಿಂದ ಪ್ರಾರಂಭವಾಗಿ ಅವನಲ್ಲೇ ಅಂತ್ಯವಾಗುವ ಪದ್ಯದ ಮೂಲಕ ಕವಿ ಸೃಷ್ಟಿ ಸ್ಥಿತಿ ಲಯಗಳನ್ನು ಸೂಚಿಸುತ್ತಿರಬಹುದು. ಹಾಗೆ ಮಹಾಭಾರತದ ಕಥೆಯಲ್ಲಿ ಬರುವ ಅನೇಕ ಪಾತ್ರಗಳನ್ನೂ ಇದರಲ್ಲಿ ಎಳೆದು ತಂದು ಸಂಕ್ಷಿಪ್ತವಾಗಿ ಮಹಾಭಾರತವನ್ನೇ ಹೇಳುತ್ತಿರಲೂ ಬಹುದು.ಹೀಗೆ ಪದ್ಯವೊಂದಕ್ಕೆ ಅಪಾರ ಅರ್ಥ ಕಲ್ಪಿಸಬಹುದು. 'ದಶಾರ್ಥೇ ಮಹಾಭಾರತಃ' ಎನ್ನುತ್ತಾರಲ್ಲ ಹಾಗೆ!...
       ಈ ಪದ್ಯದಲ್ಲಿ ಕವಿ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದಾನೋ ಅಥವಾ ಓದುಗ/ಕೇಳುಗನನ್ನು ಗೊಂದಲಕ್ಕೀಡುಮಾಡುತ್ತಿದ್ದಾನೋ 'ನಾರಯಣ'ನಿಗೇ ಗೊತ್ತು. ಭಕ್ತಿಯಿಂದ ಈ ಪದ್ಯ ಹಾಡುತ್ತ ಸಂಬಂಧಗಳ ಬಗ್ಗೆ ಯೋಚಿಸಿ. ಒಮ್ಮೆ ಹುಡುಕಿ ನೋಡಿ. ಪುರಾಣ ಕಥೆಗಳನ್ನೆಲ್ಲ ಈಗಿನ ತಲೆಮಾರಿನವರು ಕೇಳುತ್ತಿಲ್ಲ,ನಿರ್ಲಕ್ಷಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ, ಹೀಗಾಗಿ ಈ ಒಗಟಿಗೆ ಉತ್ತರ ಹುಡುಕಿ ನೋಡೋಣ. ಉತ್ತರ ಸಿಕ್ಕಿದವರು 'ಕಮೆಂಟಿ'ಸಿ. ಇಲ್ಲದಿದ್ದರೆ ಮುಂದಿನ ವಾರದವರೆಗೆ ಕಾಯಿರಿ.

ಬುಧವಾರ, ಸೆಪ್ಟೆಂಬರ್ 15, 2010

ಮತ್ತೊಂದೆರಡು ಹವಳಗಳು

ಹಿಂದಿನ ಪೋಸ್ಟ್ ನಲ್ಲಿ ತಿಳಿಸಿದ ಕಿರಾತಾರ್ಜುನೀಯದ ಮತ್ತೆರಡು ಚಾಟು ಶ್ಲೋಕಗಳು ಇಲ್ಲಿವೆ.
ಅವು ಗತ ಪ್ರತ್ಯಾಗತ ಅಥವಾ ಪ್ರತಿಲೋಮಾನುಲೋಮಪಾದ ರೂಪದವು. ಇಂಗ್ಲಿಷ್ ನಲ್ಲಿ palindrome sequence ಎನ್ನುತ್ತಾರೆ. ಅಂದರೆ ಆ ಶ್ಲೋಕಗಳ ಪಾದಗಳನ್ನು ಹಿಂದೂ ಮುಂದಾಗಿ ಓದಿದರೂ ಅದೇ ರೀತಿಯಲ್ಲೇ ಇರುತ್ತದೆ.
ಅವುಗಳೆಂದರೆ
ವೇತ್ರ ಶಾಕಕುಜೇ ಶೈಲೇ ಲೇಶೈ ಜೇ ಕುಕ ಶಾತ್ರ ವೇ
ಯಾತ ಕಿಂ ವಿದಿಶೋ ಜೇತುಂ ತುಂಜೇಶೋ ದಿವಿ ಕಿಂ ತಯಾ
ಅದರ ಅರ್ಥ
(ಷಣ್ಮುಖ, ಅರ್ಜುನ ಮತ್ತು ಪ್ರಮಥ ಗಣಗಳ ನಡುವೆ ಯುದ್ಧ ನಡೆಯುತ್ತಿದ್ದಾಗ ಹೇಳುವುದು)
 ಸ್ವರ್ಗದಲ್ಲಿ ತುಂಜ(ದೈತ್ಯ)ರನ್ನು ಗೆಲ್ಲಲು ಸಮರ್ಥರಾದ ಪ್ರಮಥರೇ ಬೆತ್ತದ ರೂಪದಲ್ಲಿಯೂ ಒರಟಾಗಿಯೂ ಇರುವ ಗಿಡಗಳಿರುವ ಅಲ್ಲಾಡದಿರುವ (ನಿಮ್ಮನ್ನು) ಹಿಡಿಯಲು  ಅಸಮರ್ಥನಾದ ಶತ್ರುವಿರುವ ಈ ಪರ್ವತದಲ್ಲಿ ನಿಂದೆಯಿಂದ ಯುಕ್ತರಾಗಿ ದಿಕ್ಕಿನ ಮೂಲೆಗಳನ್ನು ಗೆಲ್ಲಲು ಹೋಗುತ್ತಿರುವಿರಾ?)
(ಪುಸ್ತಕ - ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ )
देवाकानिनि कावादे
वाहिकास्वस्वकाहि वा ।
काकारेभभरे का का
निस्वभव्यव्यभस्वनि ॥

Translation: "O man who desires war! This is that battlefield which excites even the gods, where the battle is not of words. Here people fight and stake their lives not for themselves but for others. This field is full of herds of maddened elephants. Here those who are eager for battle and even those who are not very eager, have to fight."
(wikipedia)

ಕರಿಮಣಿಯ ಸರದೊಳ್ ಚೆಂಬವಳಮಂ ಕೋದಂತೆ

    ಸಂಸ್ಕೃತದಲ್ಲಿ ಪಂಚ ಮಹಾ ಕಾವ್ಯಗಳು ಎಂದು ಪ್ರಸಿದ್ಧವಾಗಿರುವವು ಕಾಳಿದಾಸ'ರಘುವಂಶ' ಮತ್ತು 'ಕುಮಾರಸಂಭವ', ಭಾರವಿ'ಕಿರಾತಾರ್ಜುನೀಯ' ಮಾಘ'ಶಿಶುಪಾಲ ವಧ' ಶ್ರೀಹರ್ಷ'ನೈಷಧೀಯ ಚರಿತ' ಕನ್ನಡದಲ್ಲಿಯೂ ಹೀಗೆ ಅಸಂಖ್ಯಾತ ಕಾವ್ಯಗಳು ಮಹಾಕಾವ್ಯಗಳು ಸೃಷ್ಟಿಯಾಗಿವೆ.
    ಕಾವ್ಯವೊಂದು ಮಹಾಕಾವ್ಯ ಎಂದೆನಿಸಬೇಕಾದರೆ ಅದು ಹತ್ತು ಹಲವು ಲಕ್ಷಣಗಳನ್ನು ಹೊಂದಿರಬೇಕು. ಲಕ್ಷಣ ಕಾವ್ಯಗಳು ಈ ಲಕ್ಷಣಗಳನ್ನು ವಿವರಿಸುತ್ತವೆ. ಅಷ್ಟಾದಶ ವರ್ಣನೆಗಳು ಸರ್ಗ ಪ್ರತಿಸರ್ಗಗಳು ಇರಬೇಕಂಬ ನಿಯಮಗಳನ್ನು ಅಳವಡಿಸಿಕೊಂಡ ಕಾವ್ಯವನ್ನು ಮಹಾಕಾವ್ಯ ಎಂದು ವಿದ್ವಾಂಸರು ಪರಿಗಣಿಸುತ್ತಾರೆ.ಒಂದು ಕಾವ್ಯ ಮಹಾಕಾವ್ಯ ಎಂದೆನಿಸಿಕೊಳ್ಳಬೇಕಾದರೆ- ಚಿನ್ನವನ್ನು ಅದರ ಶುದ್ಧತೆಯ ಕುರಿತು ಪರೀಕ್ಷಿಸಿದಂತೆ  ಹತ್ತು ಹಲವು ರೀತಿ ಪರಿಶೀಲಿಸುತ್ತಾರೆ.
    'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಯಂತೆ ಜನರಿಗೆ ವಿವಿಧ ರೀತಿಯ ಹವ್ಯಾಸ ಆಸಕ್ತಿಗಳು ಇರುವುದು ಸಹಜ. ವಾಙ್ಮಯ ಜಗತ್ತಿನಲ್ಲಿ ಆಸಕ್ತರಾದವರಿಗೆ ವಿಹಾರ ಮಾಡಲಾಗದಷ್ಟು ಕಾವ್ಯರಾಶಿಯಿದೆ! ಅದರಲ್ಲಿ ಅಲ್ಪ ಮಾತ್ರ ರುಚಿ ತೋರಿಸುವ ಪ್ರಯತ್ನ ಇದು. ಒಬ್ಬ ವ್ಯಕ್ತಿ ಕ್ರೀಡೆಗಳಲ್ಲಿ ಆಸಕ್ತ, ಇನ್ನೊಬ್ಬ ಶಿಕ್ಷಣದಲ್ಲೇ ಆಸಕ್ತ, ಮತ್ತೊಬ್ಬ ಮತ್ತೊಂದರಲ್ಲಿ ಆಸಕ್ತ, ಹೀಗೆ ಆಸಕ್ತರಾದವರನ್ನು ತನ್ನೆಡೆಗೆ ಅತ್ಯಂತ ವಿಶಿಷ್ಟವಾಗಿ ಆಕರ್ಷಿಸುವುದು ಸಂಗೀತ ಮತ್ತು ಸಾಹಿತ್ಯ.
     ಮಹಾಕಾವ್ಯಗಳು ಕರಿಮಣಿಯ ಸರದಂತೆ ಆದರೆ ಅದರಲ್ಲಿ ಕೆಂಪು ಹವಳದಂತೆ ಕಾಣುವ ಒಂದು ಸುಂದರ ಶ್ಲೋಕ ಹಾಗು ಅದರ ಹಿನ್ನೆಲೆಯ ಕುರಿತು ಇಲ್ಲಿ ವಿವರಣೆ ಕೊಡಲ್ಪಟ್ಟಿದೆ.
    ಮಹಾಕವಿ ಭಾರವಿ 'ಶ್ರೇಷ್ಠ ಕವಿ' ಎಂದು ಊರಿಡೀ ಹೆಸರುವಾಸಿಯಾಗಿದ್ದ. ಅವನ ಕುರಿತು ಎಲ್ಲರೂ ಹೊಗಳುವವರೇ ಆಗಿದ್ದರು. ಭಾರವಿಗೆ ಅದೊಂದು ಹೆಮ್ಮೆ. ಆದರೆ ಅವನ ತಂದೆ ಒಮ್ಮೆಯೂ ಪ್ರಶಂಸಿಸದ ಕಾರಣ ತಂದೆಯೇ ತನ್ನ ಶತ್ರು ಎಂದು ಭಾವಿಸಿದ್ದ. ಒಂದು ಕೆಟ್ಟ ಗಳಿಗೆಯಲ್ಲಿ  ತಂದೆಯ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಸಾಯಿಸಿಬಿಡಬೇಕು ಎಂದು ಯೋಚಿಸಿಕೊಂಡ.
     ಆ ದಿನ ಕಲ್ಲನ್ನು  ಇಟ್ಟುಕೊಂಡು ಅಟ್ಟದ ಮೇಲೆ ಕುಳಿತಿದ್ದ. ಅದೇ ವೇಳೆ ಕೆಳಗಿನಿಂದ ಅವನ ತಂದೆ ತಾಯಿಯರ ಮಾತು ಕೇಳಿತು. ತಾಯಿ"ಊರವರೆಲ್ಲ ನಮ್ಮ ಮಗನನ್ನು ಹೊಗಳಿದರೂ ನೀವು ಮಾತ್ರ ಯಾಕೆ ನಮ್ಮ ಮಗನನ್ನು ಹೊಗಳುವುದಿಲ್ಲ?" ಎಂದು ಕೇಳಿದಳು. ಅದಕ್ಕೆ ಭಾರವಿಯ ತಂದೆ"ಯಾವತ್ತು ತಂದೆ ತಾಯಿಯರು ಮಕ್ಕಳನ್ನು ಹೊಗಳಬಾರದು ಅದರಿಂದ ಅವರಿಗೆ ಗರ್ವ ಬರುತ್ತದೆ. ಒಬ್ಬರ ದುರ್ಬಲತೆಯನ್ನು ಎದುರಿಗೆ ಹೇಳಬೇಕು, ಅವರ ಕುರಿತು ಹಿಂದಿನಿಂದ ಹೊಗಳಬೇಕು" ಎಂದು ಹೇಳಿದ. ಅದನ್ನು ಕೇಳಿ ಭಾರವಿಗೆ ಸಖೇದಾಶ್ಚರ್ಯವಾಯಿತು. ಅವನು ತಕ್ಷಣ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಏನು ಮಾಡಿಕೊಳ್ಳಬೇಕೆಂದು ತಂದೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಆಗ ಅವನ ತಂದೆ " ಆರು ತಿಂಗಳುಗಳ ಕಾಲ ಮಾವನ ಮನೆಯಲ್ಲಿ ವಾಸ ಮಾಡಬೇಕು" ಎಂದು ಶಿಕ್ಷೆ ನೀಡಿದ. ಮಾವನ ಮನೆಯಲ್ಲಿ ವಾಸ ಮಾಡುವಾಗ ಬಹಳಷ್ಟು ವಿಷಯಗಳು ಅನುಭವಕ್ಕೆ ಬಂದವು. ಹೆಂಡತಿಗೆ ಹಣದ ಅವಶ್ಯಕತೆಯಾದಾಗ ಏನು ಮಾಡಲೂ ತೋಚದೇ ಒಂದು ಶ್ಲೋಕವನ್ನು ಬರೆದು ಕೊಟ್ಟ.
   "ಸಹಸಾ ವಿಧಧೀತ ನ ಕ್ರಿಯಾಮವಿವೇಕ: ಪರಮಾಪದಾಂ
    ವೃಣತೇ ಹಿ ವಿಮೃಶ್ಯಕಾರಿಣಂ ಗುಣಲುಬ್ಧಾ: ಸ್ವಯಮೇವಂ ಸಂಪದ:"
ಅವನ ಕುರಿತೇ ಬರೆದಂತಿರುವ ಶ್ಲೋಕ ೧೦೦ ಸುವರ್ಣಕ್ಕೆ ಮಾರಾಟವಾಯಿತು. ಅವನು ಮಾವನ ಮನೆಯಲ್ಲಿನ ಪರಿಸ್ಥಿತಿಯ ಕುರಿತು ವ್ಯಂಗ್ಯ ವಾಗಿ ಒಂದು ಶ್ಲೋಕವನ್ನು ಹೇಳುತ್ತಾನೆ.
ಶ್ವಶುರಗೃಹನಿವಾಸಃ ಸ್ವರ್ಗ ತುಲ್ಯೋ ನರಾಣಾಂ
 ಯದಿ ವಸತಿ ದಿನಾನಿ ತ್ರೀಣಿ ಪಂಚಾಥ ಸಪ್ತ !
ದಧಿಮಧುಘೃತಭಕ್ಷ್ಯಕ್ಷೀರಸಾರಪ್ರವಾಹಃ
ತದುಪರಿ ನಿವಸೇತ್ ಚೇತ್ ಪಾದರಕ್ಷಾ ಪ್ರಯೋಗಃ!"
"ಮಾವನ ಮನೆಯಲ್ಲಿ ವಾಸ ಮಾಡುವುದು ಸ್ವರ್ಗಕ್ಕೆ ಸಮಾನ ಒಂದು ವೇಳೆ ಅವನು ಮೂರು ಐದು ಅಥವಾ ಏಳುದಿನ ವಾಸ ಮಾಡಿದರೆ ಮೊಸರು ಜೇನುತುಪ್ಪ ತುಪ್ಪ ಭಕ್ಷ್ಯ ಕ್ಷೀರ ಸಾರಗಳ ಪ್ರವಾಹವೇ ಹರಿದು ಬರುತ್ತದೆ. ಅದಕ್ಕೂ ಹೆಚ್ಚು ದಿನವಿದ್ದರೆ ಪಾದರಕ್ಷೆ ಪ್ರಯೋಗವಾಗುತ್ತದೆ." ಎಂದು.
 ಅವನು ಮಾವನ ಮನೆಯಲ್ಲಿದ್ದಾಗ ನಿತ್ಯವೂ ಹೊಲ ಕಾಯಲು ಹೋಗುತ್ತಿದ್ದ.ಆ ವೇಳೆಯಲ್ಲೇ "ಕಿರಾತಾರ್ಜುನೀಯಂ" ಮಹಾಕಾವ್ಯವನ್ನು ಬರೆದನೆಂದು ಹೇಳುತ್ತಾರೆ. ಈ ಕಥೆಯ ಸತ್ಯಾಸತ್ಯತೆಗಳ ಬಗ್ಗೆ ವಿವಾದವಿದ್ದು,ಇದು ಕೇವಲ ದಂತಕಥೆಯಾದರೂ ತಿಳಿದುಕೊಳ್ಳಲು ಬಹಳಷ್ಟು ಅಂಶಗಳಿವೆ.
   ಕಿರಾತಾರ್ಜುನೀಯದಲ್ಲಿ ೧೮ ಸರ್ಗಗಳಿವೆ.ಅದರಲ್ಲಿ ಮೂರು ಅಧ್ಯಾಯಗಳನ್ನು 'ಪಾಷಾಣ ತ್ರಯೀ' ಎಂದಿದ್ದಾರೆ. ರಾಜನೀತಿ ಶಾಸ್ತ್ರಾದಿ ಹತ್ತು ಹಲವು ವಿಷಯಗಳು ಇದರಲ್ಲಿ ವಿವರಿಸಲ್ಪಟ್ಟಿವೆ. ಅದರಲ್ಲಿ ೧೫ನೆ ಅಧ್ಯಾಯದ ೧೪ನೆ ಶ್ಲೋಕವೇ ಆ ಹೇಳಲಿಚ್ಚಿಸಿರುವಂತಹ 'ಕೆಂಪು ಹವಳ'
    ನ ನೋ ನನುನ್ನೋ ನುನ್ನೋನೋ ನಾನಾನಾನಾನನಾ ನನು
    ನುನ್ನೋ ನುನ್ನೋ ನನುನ್ನೇನೋ ನಾನೇನಾ ನುನ್ನ ನುನ್ನ ನುತ್
ಕೊನೆಯ ಅಕ್ಷರ 'ತ್' ಆಗಿದ್ದರೂ "ನಾಂತ್ಯ ವರ್ಣಸ್ತು ಭೇಧಕ:" ಎಂದು ಲಾಕ್ಷಣಿಕರು ಹೇಳಿದ್ದಾರೆ. ಇದೊಂದು ಏಕಾಕ್ಷರಿ ಶ್ಲೋಕ. ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣುವ ಇದರ ಅರ್ಥ ಹೀಗಿದೆ (ಕಿರಾತ ರೂಪಿ ಶಿವನು ಅರ್ಜುನನ ಕುರಿತು ಹೇಳುವುದು)
"(ಎಲೈ) ವಿವಿಧ ಮುಖಗಳಿರುವ ಪ್ರಮಥಗಣಗಳೇ , ಈತನು ಕ್ಷುದ್ರ ವಿಚಾರಗಳಿರುವಂತಹ ವ್ಯಕ್ತಿ ಅಲ್ಲ. ಈತನು ನ್ಯೂನತೆಗಳನ್ನು ಸಮೂಲವಾಗಿ ನಾಶ ಗೈಯುವ ಪುರುಷನಿಗಿಂತ ವಿಶೇಷ ರೀತಿಯ ಯಾವನೋ ಒಬ್ಬ ದೇವತೆಯಿರಬೇಕು. ಈತನಿಗೆ ಒಬ್ಬ ಒಡೆಯನೂ ಇರುವನೆಂದು ತಿಳಿದುಬರುತ್ತದೆ. ಬಾಣಗಳ ಹೊಡೆತ ತಿಂದರೂ ಏಟನ್ನು ತಿನ್ನದವನಂತೆ ಕಾಣುತ್ತಾನೆ.ದುಃಖದಿಂದ ಇರುವ ವ್ಯಕ್ತಿಗೆ ಇನ್ನಷ್ಟು ತೊಂದರೆ ಕೊಡುವ  ದೋಷಪೂರ್ಣ ಎಂಬ ಆಪಾದನೆಯಿಂದಲೂ ವಿಮುಕ್ತನಾಗಿದ್ದಾನೆ.(ಆದ್ದರಿಂದ ನೀವು ಯುದ್ಧದಿಂದ ವಿಮುಖರಾಗಿ ಹೋಗುವುದು ಸರಿಯಲ್ಲ)"
    ಕೇವಲ ಒಂದೇ ಅಕ್ಷರದಿಂದ ಇರುವ ಶಬ್ದಗಳಿಂದಲೇ ಸಂಧಿಪದ ಸಮಸ್ತಪದಗಳನ್ನು ರಚಿಸಿ ಅರ್ಥಗರ್ಭಿತವಾದ ಶ್ಲೋಕ ರಚನೆ ಮಾಡಿರುವುದರಲ್ಲಿ ಕವಿಯ ಪಾಂಡಿತ್ಯ ಕೌಶಲ ಹಿರಿಮೆಗಳು ಕಂಡುಬರುತ್ತವೆ. ಹೀಗೆ ಇದೊಂದೇ ಅಲ್ಲದೇ ಇನ್ನೂ ಹತ್ತು ಹಲವು ಚಾಟು ಶ್ಲೋಕಗಳು ಇವನಿಂದ ರಚನೆಯಾಗಿವೆ.ಇತರ ಹಲವು ಕವಿಗಳೂ ಇಂತಹ ಶ್ಲೋಕ ರಚನೆಯಲ್ಲಿ ಪಾಂಡಿತ್ಯ ತೋರಿದ್ದಾರೆ.
   "ಇದು ಒಂದು ಕರಿಮಣಿಯ ಸಾರದಲ್ಲಿ ಕಂಡ ಒಂದು ಕೆಂಪು ಹವಳ!"
(ಶ್ಲೋಕದ ಅರ್ಥ ತಿಳಿಸಿದವರು:- ಡಾ.ಈ.ಮಹಾಬಲ ಭಟ್ಟ, ಸಂಸ್ಕೃತ ವಿಭಾಗ ಶ್ರೀ ಧ ಮಂ ಕಾಲೇಜು  ಉಜಿರೆ.
                                       ಶತಾವಧಾನಿ ಡಾ.ಆರ್.ಗಣೇಶ ಬೆಂಗಳೂರು.
ಶ್ಲೋಕ ನನಗೆ ಕಂಡ ಪುಸ್ತಕ:- ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ - ವಿದ್ವಾನ್.ಎನ್ ರಂಗನಾಥ ಶರ್ಮ ಮತ್ತು ಇತರರು.
'ವಿಕಿಪೀಡಿಯ' ದಲ್ಲಿ ಕಿರಾತಾರ್ಜುನೀಯ ದ ಕುರಿತ ವಿವರಕ್ಕೆ:
http://en.wikipedia.org/wiki/Kir%C4%81t%C4%81rjun%C4%ABya)
ಈ ಲೇಖನ ೪-೧೦-೨೦೦೯ರ ಸಂಯುಕ್ತ ಕರ್ನಾಟಕಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿತ್ತು.

ಸೋಮವಾರ, ಸೆಪ್ಟೆಂಬರ್ 6, 2010

ಬಂತು ಚೌತಿ

"ಶ್ರೀ ಗಣೇಶಾಯ ನಮಃ" ಹೇಳಿ ಅಂತು ಇಂತೂ ಒಂದೆರಡು ವಾರ ಕಳೆಯುವಷ್ಟರಲ್ಲಿ ಚೌತಿ ಹಬ್ಬ ಬಂದೇ ಬಿಡ್ತು. ಗಣಪತಿ ಹಬ್ಬದ ಶುಭಾಶಯ ತಿಳಿಸುತ್ತಾ  ಗಣಪತಿ ಎಲ್ಲರಿಗು ಒಳ್ಳೆಯದು ಮಾಡಲಿ ಎಂದು ಆಶಿಸುತ್ತೇನೆ.
 ಚಕ್ಕುಲಿ ಪಂಚಕಜ್ಜಾಯ ತಿನ್ನಲು ಎಲ್ಲರೂ ನಮ್ಮ ಮನೆಗೆ ಬನ್ನಿ.:)

ಬುಧವಾರ, ಸೆಪ್ಟೆಂಬರ್ 1, 2010

ಚಾಪ್ಲಿನ್ ಬೀನ್ ಹಾಗು ಟಾಮ್ ಅಂಡ್ ಜೆರ್ರಿ

                    ಇಲ್ಲಿ ಮೂರು ಹಾಸ್ಯ ಕಥಾನಕಗಳ ಪಾತ್ರಧಾರಿಗಳನ್ನು ಹೆಸರಿಸಿದ ಕಾರಣ ಇದೊಂದು ಹಾಸ್ಯದ ಕುರಿತ ಲೇಖನ ಎಂದು ನೀವು ಊಹಿಸಿರಬಹುದು. ಖಂಡಿತ ಹೌದು.ನವರಸಗಳಲ್ಲಿ 'ಹಾಸ್ಯ'ವೇ ಪ್ರಮುಖವಾದದ್ದು, ಏಕೆಂದರೆ ಆಬಾಲವೃದ್ಧರೆಲ್ಲರೂ ಸಂತೋಷಪಡುವುದು ಹಾಸ್ಯದಿಂದ ಮಾತ್ರವೇ! ಶೃಂಗಾರ ಕೇವಲ ಯುವಕರಿಗೆ ಸಂತಸ ನೀಡಿದರೆ ಕರುಣಾ ರಸ ದುಃಖವನ್ನು ಪ್ರತಿನಿಧಿಸುತ್ತದೆ.ರೌದ್ರ ಕೂಡ ದುಃಖಕ್ಕೆ ಕಾರಣ;ಕೋಪದ ಪ್ರತೀಕ.ವೀರ ಭಯಾನಕಗಳು ಭೀಭತ್ಸ ಅಧ್ಭುತಗಳು ವಿಭಿನ್ನ ಭಾವಗಳನ್ನು ಹುಟ್ಟಿಸುತ್ತವೆ ಅಷ್ಟೇ! ಎಲ್ಲೂ ಸಹ ಹಾಸ್ಯದಂತೆ ಮನರಂಜನೆ ಸಿಗದು.'ಶಾಂತ'ರಸದ್ದು ವಿಭಿನ್ನ, ಸಂಪೂರ್ಣವಾದ ಶಾಂತರಸದ ಸೃಷ್ಟಿ ಸಾಧ್ಯವಿಲ್ಲ ಎಂದು ಕೆಲವರು ವಾದಿಸುತ್ತಾರೆ.
            ಅಭಿನಯದಲ್ಲಿ ವಾಚಿಕ ಆಂಗಿಕ ಎರಡನ್ನು ಗುರುತಿಸಬಹುದು.ಹಾಸ್ಯದಲ್ಲೂ ಸಹ. ಅಷ್ಟೇ ಅಲ್ಲದೆ ಹಾಸ್ಯದಲ್ಲಿ ಸುಶೀಲ ಮತ್ತು ಅಶ್ಲೀಲ ಇವೆರಡು ವಿಭಾಗಗಳು.ಅಶ್ಲೀಲ ಬರವಣಿಗೆಗೆ ಹೊರತಾಗಿದ್ದು ಮತ್ತು ಅನುಸಾಂಧರ್ಭಿಕವಾದದ್ದು. ಸುಶೀಲ ಬರವಣಿಗೆಗೆ ಪೂರಕ ಹಾಗು ಸದಾ ಯುಕ್ತವಾದದ್ದು.
        ಇಂಗ್ಲಿಷ್ ಮಾಧ್ಯಮಗಳಲ್ಲಿ ಈಗೀಗ ಜನ ಖುಷಿ ಪಡುತ್ತಿರುವುದು Mr.Bean ಅಥವಾ Tom and Jerry ನೋಡುವುದರ ಮೂಲಕ.ಸ್ವಲ್ಪ ಹಿಂದೆ ಸರಿದರೆ ಚಾರ್ಲಿ ಚಾಪ್ಲಿನ್ ನ ಕಾಲದಲ್ಲಿ ಅವನ ಸಿನಿಮಾಗಳು ಈ ಸ್ಥಾನವನ್ನ ಆಕ್ರಮಿಸಿದ್ದವು.
       
ಈ ಮೂರರಲ್ಲಿ ಟಾಮ್ ಅಂಡ್ ಜೆರ್ರಿ ಇದು ಕಾರ್ಟೂನ್-ಅನಿಮೇಷನ್. ಆದರು ಸಹ ಆಬಾಲವೃದ್ಧರೆಲ್ಲರೂ ನೋಡಿ ಖುಷಿ ಪಡಬಹುದು. ಬೆಕ್ಕು ಇಲಿಗಳ ನಡುವಿನ ಹೋರಾಟ, ಇಲಿಯ ಜಾಣತನ ಹೀಗೆ ಪ್ರತಿ ಸಂಚಿಕೆಯಲ್ಲೂ ವಿಭಿನ್ನ ರೀತಿಯ ಕಲ್ಪನೆ ಇದರ ಕರ್ತೃವಿನದ್ದಾಗಿದೆ. ಬೆಕ್ಕು ಹಾಗು ಇಲಿಗಳೆರಡೂ ಶತ್ರುಗಳಾದರೂ ಒಂದಕ್ಕೆ ಇನ್ನೊಂದನ್ನು ಬಿಟ್ಟಿರಲಾಗದು. ಅನೇಕ ಬಾರಿ ತನ್ನನ್ನು ತಿನ್ನಲು ಬರುವ ಬೆಕ್ಕನ್ನು ಇಲಿ ಹೊಡೆದು ಹೆದರಿಸಿ ಕಾಡುತ್ತದೆ.ಅಕಸ್ಮಾತ್ ಅದು ಪ್ರಾಣಾಪಾಯಕ್ಕೆ ಸಿಕ್ಕಿಕೊಂಡರೆ ಕಾಪಾಡುತ್ತದೆ. ಒಮ್ಮೊಮ್ಮೆ ಬೇರೆ ಬೆಕ್ಕು ಅಥವಾ ಇಲಿಯೊಡನೆ ಇವುಗಳ ಪ್ರೇಮ ಪ್ರಸಂಗ ನಡೆಯುತ್ತದೆ.ಇಲಿಯ ಕಡೆಯಿಂದ ನಾಯಿಯೊಂದು ಬಂದು ಬೆಕ್ಕನ್ನು ಹೆದೆರಿಸುತ್ತದೆ.
            ಇವುಗಳು ಯಾವ ಪಾತ್ರೆ ಅಥವಾ ಪೆಟ್ಟಿಗೆ ಇತ್ಯಾದಿಗಳಲ್ಲಿ ಬೀಳುತ್ತವೆಯೋ ಅದೇ ಆಕಾರ ಪಡೆದುಕೊಳ್ಳುತ್ತವೆ. ಅಕಸ್ಮಾತ್ ಏನಾದರು ನುಂಗಿ ಬಿಟ್ಟರೆ ಅದರದ್ದೇ ಆಕಾರ ಇವುಗಳ ದೇಹದ್ದಾಗುತ್ತದೆ. ಆಕಾಶದಲ್ಲಿ ಎಷ್ಟೋ ದೂರ ಹೋದ ನಂತರ ಕೆಳಗೆ ನೋಡಿಕೊಂಡಾಗ ತಾನು ನೆಲದ ಮೇಲಿಲ್ಲ ಎಂಬ ಅರಿವಾಗಿ ಬೀಳುತ್ತವೆ.ಬಾಗಿಲಿಗೆ ಬಡಿದರೆ ಚಪ್ಪಟೆಯಾಗುತ್ತವೆ ಏನಾದರು ಏಟು ಬಿದ್ದು ತಲೆಯ ಮೇಲೆ ಉಬ್ಬು ಬಂದು,ಅದನ್ನು ಒಳ ತಳ್ಳುತ್ತವೆ, ಆದರೆ ಅದು ಮತ್ತೊಂದು ಕಡೆ ಹೊರ ಬರುತ್ತದೆ. ಏನೇ ಆದರೂ ದೇಹದ ಯಾವ ಭಾಗವೂ ಊನವಾಗುವುದಿಲ್ಲ,ಹೀಗೆ ನಿಜವಾಗಿಯೂ ಸಾಧ್ಯವಲ್ಲದ ಊಹೆಗಳೇ ನಮಗೆ ಮನೋರಂಜನೆ ನೀಡುತ್ತವೆ.ಅದರ ಜೊತೆಗೆ ಅವುಗಳ ಮುಖ ಭಾವ ಹಾಗು ಪರಸ್ಪರ ವಿರುದ್ಧವಾಗಿ ಮಾಡುವ ಉಪಾಯಗಳು ಶಕ್ತಿಯ ಅಪರಿಮಿತಿ ಇವಷ್ಟೇ ಅಲ್ಲದೆ ಓಡುವುದು ಜಿಗಿಯುವುದು,ಹೀಗೆ ಎಲ್ಲವು ಹಾಸ್ಯವನ್ನು ಸೃಷ್ಟಿಸಿ ನೋಡುಗನನ್ನು ನಗಿಸುತ್ತದೆ.
                         ಇನ್ನು Mr.Bean ಬಗ್ಗೆ ಹೇಳಹೊರಟರೆ ಅವನೊಬ್ಬ ಸಾಮಾನ್ಯ ಮನುಷ್ಯ ಆದರೆ ವಿಭಿನ್ನ ಸಂಧರ್ಭಗಳಲ್ಲಿ ಅವನ ಪ್ರತಿಕ್ರಿಯೆ ಅನೂಹ್ಯವಾಗಿರುತ್ತದೆ.ಪಕ್ಕದವನೊಡನೆ ಇರುವುದು ತನಗಿಲ್ಲ ಎಂದು ಅಸೂಯೆಯಿಂದ ಅವನು ಅದಕ್ಕೆ ಸಮನಾಗಿ ಮಾಡುವ ಕೆಲಸಗಳು ಸಿಟ್ಟು ಬಂದಾಗ ಕುಣಿಯುವುದು ಕಷ್ಟಕರ ಪರಿಸ್ಥಿತಿಯಲ್ಲಿ ಕಂಗಾಲಾಗುವುದು,ಮುಖದ ವಿವಿಧ ಭಂಗಿಗಳು,ಕಾರು ನಡೆಸುವುದು ಟೆಡ್ಡಿಯೊಂದಿಗೆ ವರ್ತಿಸುವುದು ಇವೆಲ್ಲವೂ ನೋಡುಗರನ್ನು ಮನದಣಿಯೆ ನಗಿಸುತ್ತವೆ. ಏನೋ ಒಂದು ಕೆಲಸ ಮಾಡಲು ಹೋಗಿ ಇನ್ನೇನೋ ಮಾಡುವುದು ಅದನ್ನು ಸರಿಪಡಿಸಲು ಹೋಗಿ ಮತ್ತೇನೋ ಮಾಡುವುದು, ಘಂಟೆಗಟ್ಟಲೆ ಏನೋ ಒಂದನ್ನು ಸಾಧಿಸಿ ಆಮೇಲೆ ಅಂತ್ಯದ ವೇಳೆಯಲ್ಲಿ ಸಂಪೂರ್ಣ ಹಾನಿ ಮಾಡಿಕೊಳ್ಳುವುದು, ಹೀಗೆ ಇನ್ನು ಏನೇನೋ ರೀತಿಯಲ್ಲಿ ನೋಡುಗನನ್ನು ನಗಿಸುವುದರಲ್ಲಿ ಯಶಸ್ವಿಯಾಗುತ್ತಾನೆ  ಈತ. ಕೆಲವೊಮ್ಮೆ ಸಮಯೋಚಿತ ನಿರ್ಧಾರ ತೆಗೆದುಕೊಂಡು ಕೊನೆಯಲ್ಲಿ ಎಲ್ಲರ ಮನ್ನಣೆಗೆ ಪಾತ್ರನಾಗುವಂತಹ ಸನ್ನಿವೇಶಗಳು, ಆಗ ಅವ್ನು ಸಂತಸ ಪಡುವುದು ಊಟಮಾಡುವಾಗ ತನಗೆ ತಿನ್ನಲಾಗದ್ದನ್ನು ಹೇಗಾದರೂ ಮಾಡಿ ಖಾಲಿ ಮಾಡಬೇಕೆಂದು ಅದನ್ನು ಅವಿಸಿಡುವುದು ಇತ್ಯಾದಿ ಇತ್ಯಾದಿ, Rowan Atkinson ಇನ್ನು ಹಲವು ಗಂಭೀರ ಚಲನ ಚಿತ್ರಗಳಲ್ಲೂ ಅಭಿನಯಿಸಿದ್ದಾನೆ,ಆದರೆ ಅಲ್ಲಿ ಈ ತರಹದ ಆಂಗಿಕ ಅಭಿನಯಗಳಿಲ್ಲಡಿದ್ದರು ಮಾತುಗಳಲ್ಲಿ ಸರಳವಾದ ಹಾಸ್ಯ ತುಂಬಿದೆ.

  ಇನ್ನು  ಚಾರ್ಲಿ ಚಾಪ್ಲಿನ್ ಬಗ್ಗೆ ಹೇಳುವುದಾದರೆ ಅವನೊಬ್ಬ ವಿಶಿಷ್ಟ ಕಲಾವಿದ. ಹಾಡು ನೃತ್ಯ ಅಭಿನಯ ಸಂಗೀತ ಹೀಗೆ ಹಲವಾರು ಕಲೆಗಳನ್ನು ಸಮರ್ಥವಾಗಿ ನಿರ್ವಹಿಸುವ ನಟ. ಕಪ್ಪು ಕೋಟು,ವಾಕಿಂಗ್ ಸ್ಟಿಕ್,ದೊಗಲೆ ಪ್ಯಾಂಟು ಬಂಡಿ ಟೊಪ್ಪಿ ಇವುಗಳು ಅವನ ಯಾವತ್ತು ವಸ್ತ್ರ. ಕಣ್ಣು ಹುಬ್ಬು ಹಾರಿಸುವುದು,ಸಣ್ಣ ಹಿಟ್ಲರ್ ಮೀಸೆ,ನಡೆಯುವ ಶೈಲಿ, ಕೈ ಕಾಲುಗಳನ್ನು ಬೀಸುವುದು,ಮಖಭಾವದಲ್ಲಿ ಮನಸ್ಸಿನಲ್ಲಿದ್ದುದನ್ನು ವ್ಯಕ್ತಪಡಿಸುವುದು, ಇವೆಲ್ಲವೂ ಅವನು ಜನರನ್ನು ನಗಿಸುವ ಮಾಧ್ಯಮ.
      ಹಿಟ್ಲರ್ ನ ಸರ್ವಾಧಿಕಾರಿ ನೀತಿಯನ್ನು ನೋಡಿ ಅವನನ್ನು ಅನುಕರಿಸಿ The Great  Dictator ಎಂಬ ಚಿತ್ರ ನಿರ್ಮಿಸಿದ.ಇದರಲ್ಲಿ ಗಂಭೀರ ಚಿಂತನೆಗಳಿದ್ದರೂ ಅವನ ಹಾಸ್ಯ ಪೂರಿತ ನಟನೆಯಿಂದ ಅದು ಕೇವಲ ಗಂಭೀರ ಚಿತ್ರವಾಗದೇ ನೋಡುಗನಿಗೆ ಪೂರ್ತಿ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಒಬ್ಬ ಸಾಧಾರಣ ಕ್ಷೌರಿಕ Dictator ನಂತೆ ಕಂಡು ಕೊನೆಯಲ್ಲಿ ಅವನು ಮಾಡುವ ಭಾಷಣ ಹಾಗು ಬೇಧ ಭಾವ ತೊರೆಯಬೇಕೆಂಬ ಸಂದೇಶ ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕಾದದ್ದು. ಚಾಪ್ಲಿನ್ ಸಮಕಾಲೀನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಗಳನ್ನು ತಯಾರಿಸುತ್ತಿದ್ದ. The modern times ಎಂಬ ಇನ್ನೊಂದು ಚಿತ್ರ ಬಹುತೇಕ 'ಮೂಕಿ'ಯಾದರು ನಿರುದ್ಯೋಗ ಸಮಸ್ಯೆ ಹಾಗು ಆಹಾರಕ್ಕಾಗಿ ಪರದಾಡುವುದು,ಅವನಿಗೊಬ್ಬಳು ಗೆಳತಿ ಸಿಕ್ಕಿ ಅವಳೊಡನೆ ಮನೆ ಮಾಡುವ ಯೋಚನೆ ಮಾಡುವುದು,ಕೆಲವು ಬಾರಿ ಜೈಲಿಗೆ ಹೋಗಿ ಬರುವುದು,ತನ್ನ ಒಳ್ಳೆ ತನದಿಂದ ಎಲ್ಲರಲ್ಲಿಯೂ ಒಳ್ಳೆ ಹೆಸರು ಪಡೆದರು ಮಾಡುವ ಕೆಲಸದಲ್ಲಿ ಅರಿವಿಲ್ಲದೆ ವ್ಯತ್ಯಾಸವಾಗಿ ಬೇರೊಬ್ಬರಿಗೆ ತೊಂದರೆಯಾಗುವುದು ಕೊನೆಯಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ಹಾಡುವುದು ನೃತ್ಯ ಮಾಡುವುದು ಇವನ್ನೆಲ್ಲ  ಮಾತಿಲ್ಲದೇಯೂ ಸಮರ್ಥವಾಗಿ ನಿರ್ವಹಿಸುವುದು ಚಾಪ್ಲಿನ್ ನ ನಟನಾ ಕೌಶಲವನ್ನು ತೋರಿಸುತ್ತದೆ. ಅವನು ಕೊನೆಯಲ್ಲಿ ಹೇಳುವ ಹಾಡು ಹಾಗು ಅವನ ನೃತ್ಯ  ವಿಶಿಷ್ಟವಾಗಿದ್ದು ಅವನ ಅವನ ಸಂಪೂರ್ಣ ಕೌಶಲ ಅದರಲ್ಲಿ ತಿಳಿಯುತ್ತದೆ.
          Mr Bean ಪಾತ್ರಧಾರಿ ಚಾಪ್ಲಿನ್ ನಿಂದ ಪ್ರಚೋದನೆ ಪಡೆದ ಮತ್ತು ಟಾಮ್ ಅಂಡ್ ಜೆರ್ರಿ ಯಲ್ಲಿ ಚಾಪ್ಲಿನ್ ನ ನಡೆ ಮತ್ತು ಓಡುವಿಕೆಯ ಸ್ವಲ್ಪ ಅನುಕರಣೆ ಕಾಣುತ್ತದೆಯಾದರೂ ಮೂರು ವಿಭಿನ್ನ ರೀತಿಯಲ್ಲಿ ಮನರಂಜನೆಗೆ ಮಾಧ್ಯಮವಾಗಿದೆ. ಇವು ಮೂರು ಆಂಗಿಕ  ನಟನೆಯಿಂದ ಸುಶೀಲ ಹಾಸ್ಯಗಳನ್ನು ಪ್ರತಿಬಿಂಬಿಸುತ್ತವೆ. ಈ ಮೂರು ಅಲ್ಲದೇ ಇನ್ನೂ ಹಲವು ಪ್ರಸಿದ್ಧವಿದ್ದರೂ ಇವುಗಳಷ್ಟು ಖ್ಯಾತಿ ಪೂರ್ಣತೆ ಅಥವಾ ಅನುಭವ ಅವಕ್ಕಿಲ್ಲ. ಹಿಂದಿನಿಂದಲೂ ನಾಟಕಗಳಲ್ಲಿ ವಿದೂಷಕರಿದ್ದು ಹಾಸ್ಯ ಮಾಡುತ್ತಿದ್ದರಾದರೂ ಅವರೇ ನಾಯಕರಾಗುತ್ತಿರಲಿಲ್ಲ. ನಾಯಕ,ಪ್ರತಿನಾಯಕ,ನಾಯಿಕೆಯರೆಲ್ಲರೂ ಬೇರೆ ಬೇರೆಯಾಗಿದ್ದು ಅವನೊಬ್ಬ ಪೋಷಕ ನಟ ಮಾತ್ರ ಆಗಿರುತ್ತಿದ್ದನಷ್ಟೇ!  (ನಾನು ಕೇಳಿದಂತೆ 'ಭಾಸ'ನ ಚಾರುದತ್ತ ಇದಕ್ಕೆ ಹೊರತಾದದ್ದು.) ಆದರೆ ಇದರಲ್ಲಿ ವಿದೂಷಕರೇ  ನಾಯಕರು ಅಥವಾ ಹಾಸ್ಯಗಾರ ನಾಯಕರು. ರಂಗದಲ್ಲಿ ವಿಭಿನ್ನ ಪ್ರಯೋಗ ಮಾಡಿ ಅವುಗಳ ಮುಖ್ಯ ಉದ್ದೇಶ ಈಡೇರಿಸಿದ್ದಾರೆ.
       ಹಿರಿಯರು ಮಕ್ಕಳ ಜೊತೆ ಕೂತು ನೋಡಬಹುದಾದ ಕಾರ್ಯಕ್ರಮಗಳು ಇಂದು ಬರುತ್ತಲೇ ಇಲ್ಲ, ಇಂತಹ ಸರಳ ಹಾಸ್ಯಗಾರರು ಕನ್ನಡದಲ್ಲಿಯೂ ಇದ್ದರೂ ಅವರು ಅಷ್ಟು ಪ್ರಸಿದ್ಧಿಗೆ ಬರಲಿಲ್ಲ.'ನಾ ನಾ ರೀತಿಯ ಕೊಲೆ ಧರೋಡೆಗಳನ್ನೇ ಪ್ರಧಾನವಾಗಿರಿಸಿಕೊಂಡು ಬರುತ್ತಿರುವ ಚಲನ ಚಿತ್ರಗಳನ್ನು ನೋಡಿ ನೋಡಿಯೇ ಒಬ್ಬ ವ್ಯಕ್ತಿ ಕೊಲೆಗಾರ ಅಥವಾ ರೌಡಿಯಾದ!' ಎಂದರೆ ಅದರಲ್ಲಿ ಆಶ್ಚರ್ಯಪಡುವಂತಹದ್ದೇನೂ ಇಲ್ಲ. ಅರೆಬೆತ್ತಲೆ ನೃತ್ಯ ,ಪ್ರೀತಿ ಪ್ರೇಮಗಳಿಗಾಗಿ ನಡೆವ ಜಗಳ ಹೊಡೆದಾಟ ಕೊಲೆ ಇವೆಲ್ಲವೂ ಮನರಂಜನೆ ನೀಡುತ್ತವೆ ಎಂದು ತಿಳಿದ ನಟ ನಿರ್ದೇಶಕ ಕಥೆಗಾರರು ತಮಗರಿವಿಲ್ಲದೆ ಸಮಾಜವನ್ನು ಕೆಡಿಸುತ್ತಿದ್ದಾರೆಂದರೆ ತಪ್ಪಲ್ಲ!
   ಭರತಮುನಿ 'ನಾಟ್ಯಶಾಸ್ತ್ರ'ದಲ್ಲಿ " ಸಾಯುವ ಸನ್ನಿವೇಶ,ಅಗ್ನಿ,ಮೈಥುನ ಕದನ ಇತ್ಯಾದಿಗಳನ್ನೆಲ್ಲ ರಂಗದ ಮೇಲೆ ತೋರಿಸಬಾರದು" ಎಂದಿದ್ದಾನೆ, ಅವುಗಳ ಮೂಲ ಉದ್ದೇಶ ಅರಿಯುವುದು ಅಗತ್ಯ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಎಂದರೂ ಮೇಲೆ ಹೇಳಿದ ಮೂರು ಹಾಸ್ಯಗಳ ಮೂಲ ಕರ್ತೃಗಳು ಪಾಶ್ಚಾತ್ಯರೇ ಆಗಿದ್ದಾರೆ. ದಿನ ರಾತ್ರಿ ಕ್ರೈಂ ಸುದ್ದಿಗಳೊಂದಿಗೆ ಮಲಗುವ ಜನರ ಮನಸ್ಸಿನಲ್ಲಿ ಶಾಂತಿ ಸಂತೋಷ ಮೂಡಲು ಹಾಸ್ಯ ಕಾರ್ಯಕ್ರಮಗಳನ್ನು ನೋಡಬೇಕು, ಅದು ಶುದ್ಧ ಸುಶೀಲವಾಗಿದ್ದರೆ ಉತ್ತಮ. ಭಾಷೆಯೊಂದೇ ಭಾವಾಭಿವ್ಯಕ್ತಿಗೆ ಮಾಧ್ಯಮವಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸ್ವಭಾಷಾಭಿಮಾನ ಇರಲಿ ಅನ್ಯ ಭಾಷಾ ದ್ವೇಷ ಬೇಡ. " ನೂರು ಮತದ ಹೊಟ್ಟ ತೂರಿ ಎಲ್ಲ ತತ್ತ್ವದೆಲ್ಲೆ ಮೀರಿ" ಎಂಬ ಕವಿ ವಾಣಿ ಸಾರಿದ ಸತ್ಯವನ್ನು ಅಳವಡಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳೋಣ,ಸಂತಸವನ್ನು ಹೊಂದೋಣ.
   ಭದ್ರಂ ಕರ್ಣೇಭಿ: ಶೃಣುಯಾಮ ದೇವಾ: ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:
ಸ್ಥಿರೈರಂಗೈ: ಸ್ತುಷ್ಟುವಾಂ ಸಸ್ತನೂಭಿ: ವ್ಯಶೇಮ ದೇವ ಹಿತಂ ಯದಾಯು:
ಸ್ವಸ್ತಿ ನ ಇಂದ್ರೋ ವೃದ್ಧ ಶ್ರವಾ: ಸ್ವಸ್ತಿ ನಃ ಪೂಷಾ ವಿಶ್ವ ದೇವಾ:
ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿ: ಸ್ವಸ್ತಿ ನೋ ಬೃಹಸ್ಪತಿರ್ದಧಾತು
ಓಂ ಶಾಂತಿ:ಶಾಂತಿ:ಶಾಂತಿ:

ಗುರುವಾರ, ಆಗಸ್ಟ್ 19, 2010

ತಬ್ಬಲಿಯು ನೀನಾದೆ ಮಗನೆ

       ಹೆಸರನ್ನು ಓದಿ ತಕ್ಷಣ ಭೈರಪ್ಪನವರ ಕಾದಂಬರಿಯ ಬಗ್ಗೆ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಪುಣ್ಯಕೋಟಿಯ ಹಾಡಿನಲ್ಲಿ ಬರುವ ಈ ಸಾಲಿನಿಂದ ಭೈರಪ್ಪನವರು ಒಂದು ಕಾದಂಬರಿಯನ್ನು ಬರೆದದ್ದಂತೂ ಹೌದು. ಇತ್ತೀಚಿಗೆ ಸ್ವರ್ಣವಲ್ಲಿ ಮಠದಲ್ಲಿ ಅವರ 'ಕವಲು' ಕಾದಂಬರಿಯ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾಗ ಅದರಲ್ಲಿ "ಪುಣ್ಯಕೋಟಿಯಂತಹ ಮೌಲ್ಯಯುತ ಕಥೆಗಳು ಇಂದಿನ ಪಟ್ಯಪುಸ್ತಕಗಳಲ್ಲಿ  ಕಾಣುತ್ತಿಲ್ಲ.ಹಸು ಮಾತನಾಡುವುದೆಲ್ಲ unscientific ಎಂದು ಹೇಳಿಬಿಡುತ್ತಾರೆ. ಅದರ ಮೌಲ್ಯವನ್ನು ಅರಿತುಕೊಳ್ಳುತ್ತಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
    'ಮೌಲ್ಯ ಶಿಕ್ಷಣ ಎಂಬುದು ಬೋಧಿಸಿ ಅದಕ್ಕೊಂದು ಪರೀಕ್ಷೆ ಇಟ್ಟು ಅದರಿಂದ ತಿಳಿದುಕೊಳ್ಳುವಂತಹದ್ದಲ್ಲ.' ಎಂದೂ ಹೇಳಿದರು.ಆಗ ನನಗೆ ಅನ್ನಿಸಿದ್ದು ಮೌಲ್ಯ ಶಿಕ್ಷಣದ ಮೌಲ್ಯವನ್ನು ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ತಿಳಿಸಿ ಹೇಳಬೇಕು ಎಂದು.ಹಿರಿಯರು ತಂದೆತಾಯಿಯರು ನಡೆದಂತೆ ಮಕ್ಕಳು ಅನುಸರಿಸುತ್ತಾರೆ. 
ನಿತ್ಯವೂ ದೇವರಿಗೆ ಕೈಮುಗಿಯುವ ತಾಯಿಯೊಡನೆ ಮಗಳೂ ಕೈ ಮುಗಿಯುತ್ತಾಳೆ. ಅಪ್ಪ ಸಿಗರೇಟು ಸೇದುವುದನ್ನು  ನೋಡಿದ ಮಗ ಅದನ್ನೇ ಅನುಕರಿಸುತ್ತಾನೆ. ಹೀಗಾಗಿ ತಮ್ಮ ಮಕ್ಕಳ ಉನ್ನತಿಗೆ ಹಾಗು ಮೌಲ್ಯಯುತ ಜೀವನಕ್ಕೆ ತಂದೆತಾಯಿಯರೂ ಮೌಲ್ಯಯುತವಾಗಿ ಬದುಕುವುದು ಅವಶ್ಯಕ.
Domenico Ghirlandaio
          ಹಠಮಾರಿ ಮಗನೊಬ್ಬನ ತಾಯಿಗೆ ಏನು ಮಾಡಿದರೂ ಮಗನನ್ನು ತಿದ್ದಲಾಗಲಿಲ್ಲ. ಶಾಲೆಯಿಂದ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ತರುತ್ತಿದ್ದ. ಅವನು ದೊಡ್ಡವನಾದಾಗ ತಾಯಿ ಒಂದು ದಿನ ನಿಶ್ಚಯ ಮಾಡಿ ಹೇಳಿದಳು "ಮಗೂ ಕದಿಯುವುದು ಕೆಟ್ಟ ಕೆಲಸ ಎಂದು ನಿನಗೆ ಗೊತ್ತಿಲ್ಲವೇ? " ಎಂದು. ಆಗ ಮಗ "ನನಗೆ ಬೇಕಾದ್ದನ್ನು ನಾನೂ ಮಾಡುತ್ತೀನಿ" ಎಂದ. ಅದಕ್ಕೆ ತಾಯಿ "ಸರಿ ಹಾಗಾದರೆ ನೀನು ಒಂದೊಂದು ಕಳ್ಳತನ ಮಾಡಿದಾಗಲೂ ನಾನೂ ಒಂದೊಂದು ಮೊಳೆ ತಂದು ಈ ಗೋಡೆಗೆ ಹೊಡೆಯುತ್ತೇನೆ" ಎಂದಳು. ಅವನು ಅದರಿಂದ ತನ್ನ ಗಂಟೇನು ಹೋಗುವುದಿಲ್ಲ ಎಂದು ಸುಮ್ಮನಿದ್ದ. ಕೆಲವು ತಿಂಗಳು ಕಳೆದ ನಂತರ ಗೋಡೆಯ ಮೇಲೆಲ್ಲಾ ಮೊಳೆಗಳಿದ್ದವು. ಮತ್ತೂ ಕೆಲವು ಕಾಲ ಕಳೆದ ನಂತರ ಒಮ್ಮೆ ಮಗ ಆ ಗೋಡೆಯನ್ನು ನೋಡಿ "ಛೆ.. ಎಷ್ಟೊಂದು ಕಳ್ಳತನ ಮಾಡಿಬಿಟ್ಟೆ.ತಪ್ಪು ಮಾಡಿಬಿಟ್ಟೆ." ಎಂದು ಪಶ್ಚಾತ್ತಾಪ ಪಟ್ಟು ತಾಯಿಯ ಬಳಿ ಕ್ಷಮೆ ಯಾಚಿಸಿದ.ತನು ಕದ್ದದ್ದೆಲ್ಲವನ್ನು ಹಿಂತಿರುಗಿಸುವುದಾಗಿ ಹೇಳಿದ. ಅವನ ತಾಯಿ ಆಗ ಗೋಡೆಯ ಮೇಲಿದ್ದ ಮೊಳೆಗಳನ್ನೆಲ್ಲ ಕಿತ್ತು ಹಾಕಿದಳು. ಗೋಡೆಯ ಮೇಲಿದ್ದ ಕಲೆಗಳನ್ನು ತೋರಿಸಿ " ನೋಡಿದೆಯಾ? ಒಂದು ಬಾರಿ ಕೆಟ್ಟ ಕೆಲಸ ಮಾಡಿದರೂ ಅಳಿಸಲಾಗದ ಕಲೆ ಬಿದ್ದು ಹೋಗುತ್ತದೆ. ಈಗ ನೀನು ಸುಮ್ಮನಿದ್ದರೆ ಆ ಕಲೆಗಳು ಹಾಗೆ ಇರುತ್ತವೆ.ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡು. ಸುಣ್ಣ ತುಂಬಿಸಿ ಅದನ್ನು ಮುಚ್ಚು." ಎಂದಳು.  ಎಷ್ಟು ಅರ್ಥವತ್ತಾದ ಮಾತು. ಕೆಟ್ಟ ಕೆಲಸದಿಂದ ಕಳಂಕ ಬರುತ್ತದೆ ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡಬೇಕು. ಅದೇ ಒಳ್ಳೆ ಕೆಲಸಗಳಲ್ಲೇ ತೊಡಗಿಕೊಂಡಿದ್ದರೆ ಎಂತಹ ಸುಂದರವಾಗುತ್ತದೆ ಈ ಜೀವನ!
                 ಆದರೆ ಈಗಿನ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ, ಅಜ್ಜ ಅಜ್ಜಿ ಇಬ್ಬರೂ ವೃದ್ಧಾಶ್ರಮದಲ್ಲಿದ್ದಾರೆ.ಮಕ್ಕಳು ಭಾರವಾದ ಪುಸ್ತಕದ ಹೊರೆ ಹೊತ್ತು ಕಾನ್ವೆಂಟ್ ಗೆ ಹೋಗುತ್ತಾರೆ ಅಥವಾ ಇನ್ನು ಚಿಕ್ಕವರಾದರೆ ತಂದೆ ತಾಯಿಯರು ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ  ಸಾವಿರಾರು ರೂಪಾಯಿ ತೆತ್ತು ಅವರ ಬಳಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳಿಗೆ ಎಲ್ಲಿಂದ ಸಿಗಬೇಕು ನೈತಿಕ ಅಥವಾ ಮೌಲ್ಯ ಶಿಕ್ಷಣ? ಅಜ್ಜ ಅಜ್ಜಿಯರು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರೆ ಅವರು ಅಲ್ಪ ಸ್ವಲ್ಪ ಮೌಲ್ಯಯುತ ಜ್ಞಾನವನ್ನು ಮಕ್ಕಳಿಗೆ ಉಣಿಸಬಹುದು. ಅನವರತ " ಓದು ಓದು ಓದು" ಎಂದು ಹೇಳುತ್ತಿದ್ದಾರೆ ಮಕ್ಕಳಲ್ಲಿರುವ ಉಳಿದ ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ, ಓದೂ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಮಕ್ಕಳು ಆಟವಾಡಿಕೊಂಡು ನಲಿದಾಡುತ್ತಾ ಕಲಿಯಬೇಕು.ಇಲ್ಲದಿದ್ದರೆ ಜೀವನ ಕೇವಲ ಯಾಂತ್ರಿಕವಾಗುತ್ತದೆ. ಹಿಂದೆ ಸಮಾಜದಲ್ಲಿದ್ದ ಎಲ್ಲ ಸಮಸ್ಯೆಗಳಿಗಿಂತ ಭೀಕರವಾಗಿ ಇಂದು ಈ ಸಮಸ್ಯೆ ನಮ್ಮೆಲ್ಲರ ಮುಂದೆ ನಿಂತಿದೆ. ಅದನ್ನು ಸಮರ್ಥವಾಗಿ ಎದುರಿಸುವ ಉಪಾಯವೂ ನಮ್ಮ ಬಳಿಯಲ್ಲೇ ಇದೆ.
             ತಂದೆ ತಾಯಿಯರಿದ್ದೂ ತಬ್ಬಲಿಗಳಂತಾಗಿರುವ ಇಂದಿನ ಮಕ್ಕಳನ್ನು 'ಕಿಡ್ಸ್ ಗಾರ್ಡಿಂಗ್ ಹೋಂ' ನಲ್ಲೋ ಅಥವಾ ಮತ್ತೆಲ್ಲೋ ಬಿಡುವಾಗಲಾದರೂ ತಾಯಂದಿರಿಗೆ ಎಂದೋ ಕೇಳಿದ "ತಬ್ಬಲಿಯು ನೀನಾದೆ ಮಗನೆ" ಹಾಡು ನೆನಪಿಗೆ ಬರಲಿ..
                                          ಸರ್ವೇ ಭವಂತು ಸುಖಿನಃ

ಮಂಗಳವಾರ, ಆಗಸ್ಟ್ 17, 2010

ಶ್ರೀ ಗಣೇಶಾಯ ನಮಃ

               ಪ್ರತಿಯೊಂದು ಕಾರ್ಯದ ಅಥವಾ ಕಾವ್ಯದ ಪ್ರಾರಂಭದಲ್ಲಿ ವಿಘ್ನ ನಿವಾರಕ ಗಣೇಶನ ಪೂಜೆ ಅಥವಾ ಪ್ರಾರ್ಥನೆ ಮಾಡುವುದು ಭಾರತೀಯರ ಸಂಪ್ರದಾಯವಾಗಿದೆ. ಯಕ್ಷಗಾನಗಳಲ್ಲಿ "ಗಣಪತಿ ಪೂಜೆ" ಎಂತಿದ್ದರೆ ನಾಟಕಗಳಲ್ಲಿ "ನಾಂದಿ" ಎಂದಿರುತ್ತಿತ್ತು. ಒಂದು ಒಳ್ಳೆಯ ಕಾರ್ಯಕ್ರಮ ಮದುವೆ,ಚೌಲ,ಉಪನಯನಗಳೆನಾದರೂ ನಡೆಯುವುದಿದ್ದರೆ ನಾಂದಿ ಮಾಡುವುದು ಇಂದಿಗೂ ನಡೆದು ಬಂದಿದೆ. ಒಂದು ಕೆಲಸದ ಪ್ರಾರಂಭದಲ್ಲಿ ದೇವರನ್ನು  ಬೇಡಿಕೊಂಡರೆ ಅದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದ ಇಂದಿನವರೆಗೂ ನಡೆದು ಬಂದದ್ದ್ದು. ವೈಜ್ಞಾನಿಕವಾಗಿ ಏನೇ ಸಾಧನೆ ಮಾಡುತ್ತ ಹೋದರೂ ಮನುಷ್ಯ ಪ್ರಕೃತಿಯ ಹಿಂದಿರುವ ಈ ದೈವೀ ಶಕ್ತಿಗೆ ತಲೆಬಾಗದೇ ಇರಲಾರ.
          ಒಂದು ಸಣ್ಣ ಉದಾಹರಣೆಯಲ್ಲಿ ಹೇಗೆ ವಿಜ್ಞಾನ ಮತ್ತು ಆಸ್ತಿಕ್ಯ ಭಾವನೆಗಳು ಭಿನ್ನವಾಗುತ್ತವೆ ಎಂದು ಹೇಳಿ ಮುಖ್ಯ ವಿಷಯಕ್ಕೆ ಬರುತ್ತೇನೆ. ಒಂದು ಭಯಂಕರ ಚಂಡಮಾರುತ ಬರುತ್ತಿದೆ ಎಂಬುದನ್ನು ಹವಾಮಾನ ವರದಿಕಾರರು ಎಷ್ಟೋ ಮೊದಲೇ ಕರಾರುವಕ್ಕಾಗಿ ತಿಳಿಸಿಬಿಡುತ್ತಾರೆ. ಆದರೆ ಆಸ್ತಿಕನಾದ ವ್ಯಕ್ತಿ ಪರಮ ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರೆ  ಆ ಚಂಡಮಾರುತ ತನ್ನ ದಿಕ್ಕನ್ನೇ ಬದಲಿಸಬಹುದು. ನಾಸ್ತಿಕರು ಇದನ್ನು ಒಪ್ಪದಿರಬಹುದು, ಆದರೆ ಆಸ್ತಿಕರೆಲ್ಲರು ಒಪ್ಪುತ್ತಾರೆ.
          ಪ್ರಸ್ತುತ ನಾನು ಹೇಳ ಹೊರಟಿರುವುದು ಒಂದು ಉದ್ಭವ ಗಣಪತಿಯ ವಿಚಾರ ಹಾಗು ಅವನನ್ನು ಪೂಜೆ ಮಾಡುತ್ತಿರುವವರ ಪೂರ್ವಿಕರ ವಿಚಾರಗಳು.
        ಉತ್ತರ ಕನ್ನಡದ ಕರಾವಳಿ ತೀರದ ಹೊನ್ನಾವರ ತಾಲ್ಲೂಕಿನ 'ಹಳದೀಪುರ'ದ 'ಕುದುಬೈಲು' ಎಂಬ ಊರಲ್ಲಿ ಹಿಂದೆ ಎರಡು ಜನ ಕೃಷ್ಣ ಭಟ್ಟರೆಂಬ ನಾಮದಿಂದ ಪ್ರಖ್ಯಾತರಾಗಿದ್ದರು. ಒಬ್ಬರು ಅಂಗಡಿ ಕೃಷ್ಣ ಭಟ್ಟರು, ಇನ್ನೊಬ್ಬರು ಸಾಹುಕಾರ ಕೃಷ್ಣ ಭಟ್ಟರು. ಈ ಸಾಹುಕಾರ ಭಟ್ಟರಿಗೆ ಒಬ್ಬ  ಪುತ್ರ ತಿರುಮಲೇಶ್ವರ ಭಟ್ಟ. ಇವರು ವೈದಿಕಾನುಷ್ಟಾನ ತತ್ಪರರಾಗಿದ್ದರು. ಇವರಿಗೆ ವೆಂಕಟರಮಣ ಭಟ್ಟ ಮತ್ತು ಕೃಷ್ಣ ಭಟ್ಟ ರೆಂಬ ಇಬ್ಬರು ಪುತ್ರರಿದ್ದರು.
        ವೆಂಕಟರಮಣ ಭಟ್ಟರು ಧಾರ್ಮಿಕ ಕಾರ್ಯಗಳಿಗೆ ಆಗಾಗ ಘಟ್ಟದ ಮೇಲೆ ಬರುತ್ತಿದ್ದರು. ಹಾಗೆ ಬಂದಾಗ ಸಿದ್ದಾಪುರ ತಾಲ್ಲೂಕು ಹೆಗ್ಗರಣಿ-ಹೊಸ್ತೋಟ ಗ್ರಾಮದ "ಕೋಡಖಂಡ"ದ ಮಾದೇವಿ ಮತ್ತು ಮಂಜುನಾಥ ಎಂಬ ದಂಪತಿಗಳ ಮನೆಯಲ್ಲಿ ತಂಗುತ್ತಿದ್ದರು. ಮಂಜುನಾಥ ಭಟ್ಟರಿಗೆ ಇಬ್ಬರು ಪುತ್ರಿಯರು ಮಾತ್ರ ಇದ್ದರು. ಅವರಿಬ್ಬರೂ ಅಕಾಲ ಮೃತ್ಯುವಿಗೆ ತುತ್ತಾದರು. ಮಂಜುನಾಥ ಭಟ್ಟರ ವೃದ್ಧಾಪ್ಯದಲ್ಲಿ ಹೊಟ್ಟೆ ಬೇನೆ ಬಂದು ಪ್ರಾಣೋತ್ಕ್ರಮಣ ಹಂತದಲ್ಲಿದ್ದಾಗ ತನ್ನ ಪತ್ನಿಗೆ " ಈ ಜಮೀನನ್ನು  ಮತ್ತು ಶಿಷ್ಯವರ್ಗವನ್ನು  ವೆಂಕಟರಮಣ ಭಟ್ಟರಿಗೆ ಕೊಟ್ಟು ದೀವಿಗೆ ನಡೆಸಿಕೊಂಡು ಬಾ" ಎಂದು ತಿಳಿಸಿದ್ದರು.ಅಂತೆಯೇ ವೆಂಕಟರಮಣ ಭಟ್ಟರು ಕರ್ಕಿ ಮಾಣಕೋಜಿ ಹರಿ ಭಟ್ಟರ ಸಹೋದರಿಯನ್ನು ಮದುವೆಯಾಗಿ ಇಲ್ಲಿ ನೆಲೆಸಿದರು. ಅವರಿಗೆ ಒಬ್ಬ ಗಂಡು ಮಗು ಜನಿಸಿದರೂ ಹೆಚ್ಚು ದಿನ ಬದುಕಲಿಲ್ಲ. ಇನ್ನೊಬ್ಬ ಗಂಡು ಮಗು ಆದರೆ ಬಾದ್ರಪದ ಶುಕ್ಲ ಚೌತಿಯಂದು ಗಣಪತಿ ಮೂರ್ತಿ ಮಾಡಿಸುವೆನೆಂದು  ಹರಕೆ ಹೊತ್ತರು. ಆಗ ಶ್ರೀ ಗಣೇಶನ ಅನುಗ್ರಹದಿಂದ ಮಹಾಬಲೇಶ್ವರ ಎಂಬ ಪುತ್ರನ ಜನನವಾಯಿತು. ಮಹಾಬಲೇಶ್ವರ ಭಟ್ಟರಿಗೆ ಸೂಕ್ತ ಶಿಕ್ಷಣ ಕೊಟ್ಟು ಹೊನ್ನಾವರ ಕರ್ಕಿ ಕೆಳಗಿನ ಕೇರಿಯ ಪಾರ್ವತೀ ರಾಮಯ್ಯ ಹೆಗಡೆಯವರ ಲಕ್ಷ್ಮಿ ಎಂಬ ಏಕೈಕ ಪುತ್ರಿಯನ್ನು ತಂದು ವಿವಾಹ ನೆರವೇರಿಸಿದರು. ಅವಳು ಓರ್ವ ಪುತ್ರನಿಗೆ ಜನ್ಮ ನೀಡಿ ಕೀರ್ತಿಶೇಷಳಾದಳು. ಅವ್ರಿಗೆ ವೆಂಕಟರಮಣ ಎಂಬ ಹೆಸರನ್ನಿಟ್ಟರು. ನಂತರ ಮಹಾಬಲೇಶ್ವರ ಭಟ್ಟರು  ಕರ್ಕಿಯ ಕಲ್ಲು ಪುಟ್ಟಿ ಮನೆಯ ಕಮಲಿ ಎಂಬುವವಳನ್ನು ವಿವಾಹವಾಗಿ ಐವರು ಪುತ್ರರನ್ನು ಮೂವರು ಪುತ್ರಿಯರನ್ನು ಪಡೆದರು. ಇವರು ತಮ್ಮ ಜೀವಿತದಲ್ಲಿ ಷಟ್ಕರ್ಮ ಅನುಷ್ಟಾನಗಳಲ್ಲಿ ತೊಡಗಿಕೊಂಡಿದ್ದರು.
    ಕ್ರಿ.ಶ.೧೯೮೦ ರ ಅಕ್ಟೋಬರ್ ನಲ್ಲಿ ಮಹಾಬಲೇಶ್ವರ ಭಟ್ಟರ ಪುತ್ರ ವೆಂಕಟರಮಣ ಭಟ್ಟರಿಗೆ ಕನಸಿನಲ್ಲಿ ಯಾರೋ ಒಬ್ಬರು " ನಾನು ನಿಮ್ಮ ಮನೆಗೆ ಬರುತ್ತೇನೆ" ಎಂದನ್ತಯಿತಂತೆ. ಅಡಗಿ ನಾಲ್ಕು ದಿನಗಳ ನಂತರ ಗಂಗಾಷ್ಟಮಿಯ ಶುಭ ದಿನದಂದು ಇದೇ ವೆಂಕಟರಮಣ ಭಟ್ಟರಿಗೆ ಅಡಿಕೆ ಗಿಡ ನೆಡಲು ಗುಂಡಿ  ತೆಗೆಯುತ್ತಿದ್ದಾಗ ಕಲ್ಲೊಂದು ಸಿಕ್ಕಿ ಅದನ್ನು ಕೆಲಸದವರ ಸಹಾಯದಿಂದ ಕಿತ್ತು ಮನೆಯ ಅಂಗಳದಲ್ಲಿದ್ದ ಎಕ್ಕದಗಿಡದ ಅಡಿಯಲ್ಲಿಟ್ಟರು. ಅಲ್ಲಿ ಮನೆಯ ಮಕ್ಕಳು  ಅದಕ್ಕೆ ಪೂಜೆ ಮಾಡುವ ಆಟದಲ್ಲಿ ತೊಡಗಿದ್ದರು. ಮಕ್ಕಳಿಂದ ಪೂಜಿಸಲ್ಪಟ್ಟ ಆ ಶಿಲೆ ಮುಂದೆ ತನ್ನಿಂದ ತಾನೇ ಪ್ರಚಾರ ಪಡೆದುಕೊಂಡು ನೋಡುವವರಿಗೆ ಮಹಾಗಣಪತಿಯೇ ಉದ್ಭವವಾದಂತೆ ಕಂಡು ಮಹಾಬಲೇಶ್ವರ ಭಟ್ಟರು ಹಾಗು ವೆಂಕಟರಮಣ ಭಟ್ಟರು ಅದನ್ನು ಪ್ರತಿಷ್ಟಾಪಿಸಿ ದೈನಿಕ ಪೂಜೆಯಲ್ಲಿ ತೊಡಗಿಕೊಂಡರು.
     ಮುಂದೆ ೧೯೯೦ರ ನಂತರ ಮಹಾಬಲೇಶ್ವರ ಭಟ್ಟರು ಇಹ ಲೋಕ ತ್ಯಜಿಸಿದ ನಂತರ ವೆಂಕಟರಮಣ ಭಟ್ಟರು ಹಾಗು ಅವರ ಪುತ್ರ ಭಾಲಚಂದ್ರ ಭಟ್ಟರು ಶ್ರೀ ಮಹಾಗಣಪತಿಯ ಪೂಜಾ ಕರ್ಮ ನಡೆಸುತ್ತಿದ್ದಾರೆ. ಮುಂದೆ ೨೦೦೩ರ ಜನವರಿ ೨೪ಕ್ಕೆ ರಜತ ಕವಚ ಸಮರ್ಪಿಸಲಾಗಿದೆ. ಅನೇಕಾನೇಕ ವೈದಿಕ ಕಾರ್ಯಗಳು ಪ್ರತಿವರ್ಷವೂ ದೇವಾಲಯದಲ್ಲಿ ನಡೆಯುತ್ತವೆ. ರಾಜ್ಯದ ಹಲವು ದಿಕ್ಕುಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ವರ ಪಡೆದು ಹೋಗುತ್ತಿದ್ದಾರೆ. ಕೇಳಿದ ವರವನ್ನು ಕ್ಷಿಪ್ರದಲ್ಲಿ ನೀಡುವ ಮಹಾಗಣಪತಿ "ಶ್ರೀ ಕ್ಷಿಪ್ರ ಪ್ರಸಾದ ವರದ ಗಣಪತಿ" ಎಂದು ಪ್ರಸಿದ್ಧನಾಗುತ್ತಿದ್ದಾನೆ. ಪ್ರಸ್ತುತ ವೆಂಕಟರಮಣ ಭಟ್ಟರ ಮಗಳು ನನ್ನ ತಾಯಿ.ಹೀಗೆ ನನ್ನ ಮೇಲೆ ಅವನ ಕೃಪೆ ಹರಿದು ನನಗೂ ಒಂದು ದಿನ ಈ ಗಣಪತಿಯ ಪೂಜೆ ಮಾಡುವ ಅವಕಾಶ ಸಿಕ್ಕಿತ್ತು ಎಂಬುದೇ ನನ್ನ ಅದೃಷ್ಟ.
      ಹೀಗೆ ಮಹಾಗಣಪತಿಯ ಪೂರ್ವ ಪ್ರಸಂಗವನ್ನು ಉಲ್ಲೇಖಿಸುತ್ತಾ ನನ್ನ "ಬ್ಲಾಗಿ"ಗೆ ಗಣಪತಿ ಪೂಜೆಯಿಂದ ನಾಂದಿ ಹಾಡುತ್ತಿದ್ದೇನೆ. ಯಶಸ್ಸು ಸಿಗಲಿ ಎಂದು ಅವನಲ್ಲಿ ಬೇಡಿಕೊಂಡು ಸಕಲ ಜೀವರಾಶಿಗಳಿಗೆ ಒಳಿತನ್ನು ಬೇಡಿಕೊಳ್ಳುತ್ತೇನೆ.
ಕಲ್ಲಿನ ಉದ್ಭವ ಮೂರ್ತಿ

                                                                                         
     
ಬೆಳ್ಳಿ ಕವಚ ಸಹಿತ
<><>
<>
<><>
ಮಹಾಬಲೇಶ್ವರ ಭಟ್ಟರು
ಪೂಜಾನಿರತ ವೆಂಕಟರಮಣ ಭಟ್ಟರು



ಕೋಡಖಂಡ ದ ಅಕ್ಷಾಂಶ ರೇಖಾಂಶ  14°25'38"N 74°44'46"E
ಲೋಕಾ: ಸಮಸ್ತಾ: ಸುಖಿನೋ ಭವಂತು  

ಮಂಗಳವಾರ, ಆಗಸ್ಟ್ 10, 2010

ನನಗೆ ತೋಚಿದ್ದು ನಾನು ಗೀಚಿದ್ದು

ಗೆಳೆಯರೇ
             ನಾನು ಈ ಮೂಲಕ ನನ್ನ ಅನುಭವಗಳನ್ನು ನಿಮಗೆಲ್ಲ ತಿಳಿಸುತ್ತೇನೆ. ದಯವಿಟ್ಟು ಓದಿ ಪ್ರತಿಕ್ರಿಯೆ ನೀಡಿ.
                                                                                                ನಿಮ್ಮ
                                                                                         ಗಣೇಶ ಭಟ್ಟ ಕೊಪ್ಪಲತೋಟ