ಭಾನುವಾರ, ಫೆಬ್ರವರಿ 26, 2012

ಪುನರುತ್ಥಾನ ಪುನರುತ್ಥಾನ!!

ಕವಿತೆ||
ಪುನರುತ್ಥಾನ ಪುನರುತ್ಥಾನ
ನಿತ್ಯವು ಜಗದಲಿ ಪುನರುತ್ಥಾನ!!

ಕಾನನಜನ ಮಾನವರಾದೊಡೆ ;
ಕಾನೀನನು ರಿಸಿ; ವೇದವನುಲಿದೊಡೆ;
ಕೌಶಿಕ ವಿಶ್ವದ ಮೈತ್ರಿಯ ಪೊಕ್ಕೊಡೆ;
ಭಾರ್ಗವ ಕೊಡಲಿಯ ರಕ್ತವ ತೊಳೆದೊಡೆ;
ಉಗ್ರರ ವ್ಯಗ್ರತೆ ನಿಗ್ರಹವಾದೊಡೆ;
ಅಗ್ರರ ವಿಗ್ರಹ ಪ್ರಗ್ರಹ ಮೀರ್ದೊಡೆ;
ಪುನರುತ್ಥಾನ ಪುನರುತ್ಥಾನ...!!

ಚೈತ್ರವು ಜಗದಲಿ ಬಣ್ಣವ ತುಂಬಿರೆ;
ಭಾವಸ್ರಾವದಿ ಕಾವ್ಯವು ಸೃಜಿಸಿರೆ;
ಮಳೆಯೂ ಚಳಿಯೂ ಹೊಸತನವೂ
ಮನದಲಿ ಆಹ್ಲಾದತೆಯನು ತಂದರೆ;
ಚಿಂತನೆ ಗಡಿಗಳ ದಾಟುತ ಹಾರಿರೆ,
ಮುಗಿದರೆ ದುಃಖದ ಅನುರಣನ,
ಕಾಲಾತೀತನ ಸಮ್ಯಗ್ ಜ್ಞಾತನ -
ಭೌತಿಕ ದೇಹಕೆ ಬಂದರೆ ಮರಣ;
ಪುನರುತ್ಥಾನ ಪುನರುತ್ಥಾನ!!

ಕಿಟಕಿಬಾಗಿಲುಗಳ ತೆರೆದೊಡನೆ
ಹೊರಜಗತ್ತಿಗೆ ಸೇರಿದೊಡನೆ ;
ಕಾಲವು ಹಿಮ್ಮುಖ ನಡೆದೊಡನೆ;
ವಿಶ್ವಶಾಂತಿ ಮೈತಳೆದೊಡನೆ;
ಜಾತಿಮತತತ್ತ್ವರಾಗದ್ವೇಷವ ಮೀರಿ
ಮಾನವೀಯತೆಯ ಸಾರಿದರೆ;
ಪುನರುತ್ಥಾನ ಪುನರುತ್ಥಾನ!!

ಪ್ರಾತಃ ಕಾಲದ ಉತ್ಥಾನ,
ಉಷೆ ಮೈದೋರಲು ದಿನದಿನವೂ ಪುನರುತ್ಥಾನ!

ನೋವಿನ ಕಷ್ಟವ ದಾಂಟಿದ ಕೂಡಲೇ
ನಲಿವಿನ ತಂತಿಯ ಮೀಂಟುವ ಬಾರೆಲೆ
ಚಣಚಣಕೂ ಆಗಲಿ ಪುನರುತ್ಥಾನ!!
ಪುನರುತ್ಥಾನ ಪುನರುತ್ಥಾನ!!


-ಗಣೇಶ ಕೊಪ್ಪಲತೋಟ                                                                                   
8-7-2011
ಕವಿತೆಗೆ ತಕ್ಕಂತೆ ಬಿಡಿಸಿದ್ದು!
ಪದಾರ್ಥ;-)   
(ಪುನರುತ್ಥಾನ=ಪುನಃ+ಉತ್ಥಾನ-ಮತ್ತೆ ಎದ್ದೇಳುವುದು, ಕಾನನ-ಕಾಡು, ಕಾನೀನ-ಕನ್ಯೆಯಲ್ಲಿ ಜನಿಸಿದವನು;ವೇದವ್ಯಾಸ, ರಿಸಿ-ಋಷಿ, ಉಲಿ-ಹೇಳು, ಕೌಶಿಕ-ವಿಶ್ವಾಮಿತ್ರ ಋಷಿಯ ಮೊದಲಿನ ಹೆಸರು, ಭಾರ್ಗವ-ಪರಶುರಾಮ, ವ್ಯಗ್ರತೆ-ಕೋಪ, ವಿಗ್ರಹ-ಮೂರ್ತಿ/ಯುದ್ಧ, ಪ್ರಗ್ರಹ- ಬಂಧನ/ಹಗ್ಗ, ಅನುರಣನ-ಪುನಃ ಪುನಃ ಕೇಳುವಂತೆ ಭಾಸವಾಗುವುದು(?), ಕಾಲಾತೀತ-ಕಾಲ+ಅತೀತ-ಕಾಲವನ್ನು ಮೀರಿದವನು; ಸಮ್ಯಗ್- ಸರಿಯಾದ, ಪ್ರಾತಃಕಾಲ-ಮುಂಜಾನೆ, ದಾಂಟು-ದಾಟು, ಮೀಂಟು-ಮೀಟು, ಚಣ-ಕ್ಷಣ  )