ಬುಧವಾರ, ಫೆಬ್ರವರಿ 29, 2012

ನೀರಿಗಾಗಿ ಬೇಡಿಕೆ*

ಕೊಟ್ಟುಬಿಡಿ ಒಂಚೂರು ನೀರನ್ನು ನನಗಿಂದು 
ಇಟ್ಟುಕೊಳ್ಳುವೆನದರ ಕಾಪಾಡುತ |
ಹನಿಗೂಡಿಸೊಂದೆಡೆಗೆ ನಾಳೆಯಾವರೆಗೆಂದು
ವ್ಯರ್ಥವಾಗದೆ ಚೆಲ್ಲದಂತೆಂದು ನಾ  ||1||
ಬಾಯಾರಿಕೆಗೆ ತಣ್ಪನೀಯುವುದು ಎಂದಲ್ಲ
ನಾಳೆವರೆಗದನಿಡುವೆ ನಾನು ಹಾಗೇ |
ಸ್ನಾನ ಶೌಚಕ್ಕಲ್ಲ, ಅಡುಗೆ ಕೆಲಸಕ್ಕಲ್ಲ,
ಬರಿದೆ ನೀರನ್ನಿಟ್ಟುಕೊಳ್ಳುವಾಸೆ  ||2||
ಯಾರೆನ್ನ ಕೇಳಿದರು ಕೊಡಲಾರೆ ನಾನದನ
ಮಂತ್ರಿಗೂ ಮಾನ್ಯರಿಗು ಭಿಕ್ಷುಕರಿಗೂ |
ದೇವರೇ ಕೇಳಿದರು ಕೊಡದೆ ನಾನೋಡಿಸುವೆ
ಜೀವವಿರುವಾ ತನಕ ರಕ್ಷಿಸುತ್ತ  ||3||
ನನ್ನ ಮನೆ ಬದಿಯಲ್ಲಿ ಬಾವಿಯೂ ಇದ್ದಿದ್ದೆ
ಕೆರೆ ಹೊಳೆಗಳನ್ನು ಹತ್ತಿರದಿ ಕಂಡು |
ನೀರನ್ನು ಹನಿಗೂಡಿಸಿಡುವ ಬಯಕೆಯಲಿದ್ದೆ
ಬಿಂದಿಗೆಯ ತುಂಬಲ್ಲ ಲೋಟದಷ್ಟು ||4||
ಗೊತ್ತೆನಗೆ ಬರವಿಹುದು ಜಲಕಾಗಿ ಜಗದಲ್ಲಿ
ಮುಂದೊಮ್ಮೆ ನೀರೆಲ್ಲ ಖಾಲಿಯಾಗೆ |
ಸಿಹಿನೀರ ಮಾದರಿಗೆ ಜಗಕೆ ತೋರುವುದಕ್ಕೆ
ಉಪ್ಪುನೀರನ್ನೆಲ್ಲ ಕುಡಿಯುವಾಗ!! ||5||
ವನವ ಕಡಿದದ್ದನ್ನ ಮಲಿನ ಮಾಡಿದ್ದನ್ನ
ಹಸಿರಕೊಂದೆರಚಿದ್ದ ಕೆಸರ ಬಣ್ಣ |
ಸ್ವಾರ್ಥದಾ ಪರಿಣಾಮ ಆಗುತ್ತಲಿಹುದನ್ನ
ಅರಿತುಕೊಳ್ಳಲಿ ತಾವು ಮಾಡಿದುದನ ||6||
ಬುದ್ಧಿಕಲಿಸಲಿಕೆಂದು ಬೇಕೆನಗೆ ಹನಿನೀರು |
ಕೊಟ್ಟುಬಿಡಿ ಲೋಟದಷ್ಟೆನಗೆ ನೀವು ||
-ಗಣೇಶ ಕೊಪ್ಪಲತೋಟ 
                            
(*ಇದು ಪ್ರಾಸರಹಿತ ಚೌಪದಿ ಛಂದಸ್ಸಿನಲ್ಲಿದೆ. ಕೊನೆಯ ಎರಡು ಸಾಲುಗಳು ಅರ್ಧ ಚೌಪದಿ:-) ಗತಿಯ ವಿಶೇಷತೆಯಿಂದ ಗಮನಿಸಬಹುದಷ್ಟೆ!)