Powered By Blogger

ಶುಕ್ರವಾರ, ಅಕ್ಟೋಬರ್ 18, 2024

ನನ್ನ ನವರಾತ್ರಿ

ಒಂಭತ್ತು ದಿನ ಎಲ್ಲಿ ನೋಡಿದರೂ ನವರಾತ್ರಿ ವೈಬ್ಸು. ನವರಾತ್ರಿಯನ್ನು ಆಚರಿಸಲಿ ಬಿಡಲಿ, ಮೊಬೈಲನ್ನಂತೂ ವ್ರತ ತೊಟ್ಟವರ ಹಾಗೆ ಕೈಯಲ್ಲೇ ಹಿಡಿದಿರುತ್ತೇನಲ್ಲ! ಹೀಗಾಗಿ ತಿಳಿದೋ ತಿಳಿಯದೆಯೋ ಪ್ರಥಮಂ ಶೈಲಪುತ್ರಿಯಿಂದ ಹಿಡಿದು ನವಮಂ ಸಿದ್ಧಿಧಾತ್ರಿಯವರೆಗೆ ಒಂಭತ್ತೂ ದಿನ, ಹಗಲು ರಾತ್ರಿಯೆನ್ನದೇ ನವರಾತ್ರಿ ಉತ್ಸವದಲ್ಲಿ ಭಾಗಿಯಾಗಿದ್ದೇನೆ ಎನ್ನಬಹುದು. ವಾಟ್ಸಪ್ಪು ಸ್ಟೇಟಸ್ಸುಗಳಲ್ಲಿ ಪ್ರತಿದಿನವೂ ಆಯಾ ದೇವಿಯ ಹೆಸರು, ಆ ದಿನದ ವಿಶೇಷ, ಅದರ ಹಿಂದಿನ ಕತೆಗಳನ್ನು ಒಬ್ಬರಲ್ಲ ಒಬ್ಬರು ಹಾಕಿಯೇ ಇರುತ್ತಿದ್ದರು. ಹಾಗಾಗಿ ನೋಡಿದ ಪುಣ್ಯವಂತೂ ದಕ್ಕಿದೆ ಅಂದುಕೊಂಡಿದ್ದೇನೆ. ಹಾಡುಗಾರರಂತೂ ಪ್ರತಿದಿನವೂ ಒಂದೊಂದು ದೇವಿಯ ಹಾಡನ್ನು ಹಾಡಿ ಸೋಶಿಯಲ್‌ ಮೀಡಿಯಾದಲ್ಲಿ ಬಿಟ್ಟಿದ್ದರಿಂದ ಅವನ್ನು ಕೇಳಿದ ಪುಣ್ಯವೂ ಸಿಕ್ಕಿದೆ ಅಂತ ನನ್ನ ಭಾವನೆ. ಆ ಮೂಲಕ ಎಷ್ಟೋ ಕೇಳಿರದ ದೇವಿ ಹಾಡುಗಳೂ, ಭಜನೆಗಳೂ ಸಜೆಸ್ಟ್‌ ಆಗತೊಡಗಿದವು. ಹಾಗೆಯೇ ಒಂದು ಹವ್ಯಕ ಭಜನೆಯೂ ಸಜೆಸ್ಟ್ ಆಗಿತ್ತು. ಹಾಡು ಆರಂಭವಾಗುವುದಕ್ಕೆ ಮುನ್ನ, ಆಕಾಶವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಹೇಳುವ ಹಾಗೆ ಹಾಡಿದವರು ಶ್ರೀಮತಿ ಸುಬ್ರಾಯ ಹೆಗಡೆ” ಎಂದು ಅನೌನ್ಸ್ ಮಾಡಿದರು. ಇದೇನು “ಸುಬ್ರಾಯ” ಎನ್ನುವವನಿಗೆ “ಶ್ರೀಮತಿ” ಎನ್ನುವ ಪೂರ್ವಪ್ರತ್ಯಯ ಸೇರಿಸಿದ್ದಾರಲ್ಲ ಅಂತ ನನ್ನ ತಲೆಯಲ್ಲಿ. ಅಥವಾ ಹವ್ಯಕರಲ್ಲಿ ಸುಬ್ಬಿ, ಗಣಪಿ ಎಂಬ ಹೆಸರುಗಳೆಲ್ಲ ಹಳೆ ಕಾಲದಲ್ಲಿ ಇರುತ್ತಿದ್ದರಿಂದ “ಸುಬ್ರಾಯಿ” ಅಂತಿಟ್ಟರೆ ಚೆನ್ನಾಗಿರುವುದಿಲ್ಲವೆಂದು “ಸುಬ್ರಾಯ” ಅಂತಲೇ ಇಟ್ಟಿರಬಹುದೆಂದೂ ಅಂದುಕೊಂಡೆ. ಇತ್ತೀಚೆಗೆ ಸಿನೆಮಾ ನಟಿಯೊಬ್ಬಳ ಮಗಳಿಗೆ “ನೇಸರ” ಎಂಬ ಹುಡುಗನ ಹೆಸರಿಟ್ಟಿದ್ದನ್ನು ಕೇಳಿದ್ದೆ. ಹಾಗಾಗಿ ಹಳೆಕಾಲದವರು ಹೆಣ್ಣುಮಕ್ಕಳಿಗೆ “ಸುಬ್ರಾಯ” ಅಂತಿಟ್ಟರೇನು ತಪ್ಪು ಅಂತ ನನ್ನ ತಲೆಯಲ್ಲಿ ಓಡುತ್ತಿತ್ತು. ಆ ಅನೌನ್ಸ್ಮೆಂಟನ್ನು ಕೇಳಿಸಿಕೊಂಡಿದ್ದ ನನ್ನ ಪತಿರಾಯ ನನ್ನ ಗೊಂದಲ ಅರ್ಥವಾದವನಂತೆ ನಗಲಿಕ್ಕಾರಂಭಿಸಿದ. ನನ್ನ ಟ್ಯೂಬ್‌ಲೈಟ್‌ ತಲೆಗೆ ಅವನು ಹೇಳಿದ ಮೇಲೆಯೇ ಹೊಳೆದದ್ದು. ಹಾಡುತ್ತಿರುವವರ ಹೆಸರೇ “ಶ್ರೀಮತಿ” ಎಂದು! ಶ್ರೀಮತಿ ಎಂಬ ಗೃಹಿಣಿಯ ಗಂಡನ ಹೆಸರು “ಸುಬ್ರಾಯ” ಎಂದಾಗಿದ್ದರಿಂದ ಅವರ ಹೆಸರು ಶ್ರೀಮತಿ ಸುಬ್ರಾಯ ಹೆಗಡೆ” ಎಂದಾಗಿತ್ತು. ಆದರೆ ನನ್ನ ಗೊಂದಲ ಅಲ್ಲಿಗೇ ನಿಲ್ಲಲಿಲ್ಲ. ಅವರನ್ನು ಯಾವುದಾದರೂ ಕಾರ್ಯಕ್ರಮಗಳಲ್ಲಿ ಗೌರವಪೂರ್ವಕವಾಗಿ ಸಂಬೋಧಿಸುವುದಾದರೆ, “ಶ್ರೀಮತಿ ಶ್ರೀಮತಿ ಸುಬ್ರಾಯ ಹೆಗಡೆ” ಎಂದು ಕರೆಯಬೇಕಲ್ಲಾ ಎಂದು ನನ್ನ ಸಮಸ್ಯೆ! ಅಲ್ಲಿಗೆ ನಮ್ಮ ಪ್ರತಿ ವಾರದ ವ್ಯಾಸಂಗಗೋಷ್ಠಿಯಲ್ಲಿ ಹವ್ಯಕರ ವಿಷಯ ಬಂದಾಗ ಹೇಳಿದ್ದೇ ಜೋಕುಗಳನ್ನು ಮತ್ತೆ ಮತ್ತೆ ಹೇಳಿ ಉಳಿದವರಿಗೂ ಅದನ್ನು ಗಟ್ಟು ಹೊಡೆಸಿದ್ದ ನನ್ನ ಪತಿರಾಯನಿಗೆ ಒಂದು ಹೊಸ ಜೋಕು ಸಿಕ್ಕ ಹಾಗಾಯ್ತು!

ಹೀಗೆ ಸೋಶಿಯಲ್‌ ಮೀಡಿಯಾದಲ್ಲಿ ಕೇಳಿದ ಹಾಡುಗಳ ಪೈಕಿ ಮೈಸೂರಿನ ನಾಡಗೀತೆಯಾಗಿದ್ದ ಕಾಯೌ ಶ್ರೀ ಗೌರಿ ಕರುಣಾಲಹರಿ” ಹಾಡು ತಲೆಯೊಳಗೆ ಹೊಕ್ಕಿಬಿಟ್ಟಿತ್ತು. ಅದೊಂದು ಸಾಲನ್ನು ಬಾಯಿ ತೆಗೆದಾಗೆಲ್ಲ ಹಾಡಲು ಆರಂಭಿಸಿದ್ದೆ. ಅದನ್ನು ಕೇಳಿ ಇವನಿಗೂ ಹಾಡಬೇಕಿನಿಸಿರಬಹುದು. ಅದನ್ನು ಮತ್ತೆ ಮತ್ತೆ ಯೂಟ್ಯೂಬಿನಲ್ಲಿ ಕೇಳಿ ತಾನೂ ಹಾಡಲಾರಂಭಿಸಿದ. ಇವನು ಎದ್ದೋಡಿ ರಾಗದಲ್ಲಿ ಹಾಡಲು ಶುರು ಮಾಡಿದ್ದಕ್ಕೆ ನಾನು ಅವನಿದ್ದಲ್ಲಿಂದ ಎದ್ಹೋಗಬೇಕಾಯ್ತು. ಹೇಗೋ ಅವನ ಬಾಯಿಯನ್ನು ಮುಚ್ಚಿಸಿ ನನ್ನ ಬಾಯನ್ನೂ ಮುಚ್ಚಿಕೊಂಡೆ!

ಹಬ್ಬವಾಗಿದ್ದರೂ ನಾನು ಮನೆಯಲ್ಲಿ ಟೀಶರ್ಟು ಪ್ಯಾಂಟು ಧರಿಸಿಕೊಂಡು ಹೋಮ್‌ಲೆಸ್‌ ತರ ಇದ್ದೆ. ಆದರೆ ಆಫೀಸಿಗೆ ಹೋಗುವ ಮಹಿಳೆಯರು, ಕಾಲೇಜಿಗೆ ಹೋಗುವ ಹುಡುಗಿಯರು ಪ್ರತಿದಿನ ಆಯಾ ದಿನದ ಕಲರ್‌ಕೋಡ್‌ ಪ್ರಕಾರ ಕಲರ್‌ ಕಲರ್‌ ಬಟ್ಟೆ ಧರಿಸಿ ತೆಗದುಕೊಂಡ ಸೆಲ್ಫಿ ಹಾಕುತ್ತಿದ್ದರಲ್ಲ. ಅದನ್ನು ನೋಡಿಯೇ ಕಣ್ಣು ತುಂಬಿಕೊಂಡೆ. ನಾವೆಲ್ಲಾ ಕಾಲೇಜಿಗೆ ಹೋಗುವಾಗ ಇದೆಲ್ಲ ಇರಲೇ ಇಲ್ಲವಲ್ಲ ಅಂತನಿಸಿತು. ಇದು ಶುರುವಾಗಿದ್ದು ಹೇಗೆಂಬ ಯೋಚನೆಯೂ ಬಂತು. ಇನ್ನು ಬರುವ ವರ್ಷಗಳಲ್ಲಿ ಗಂಡಸರಿಗೂ ಈ ಡ್ರೆಸ್‌ಕೋಡ್‌ ಬಂದರೆ... ಅವರು ಕಟ್ಟುನಿಟ್ಟಾಗಿ ಪಾಲಿಸಿದರೆ.. ನೋಡುವುದು ಕಷ್ಟವಿದೆ ಎಂದುಕೊಂಡೆ! ಕೆಲವರು ತಾವು ನಿತ್ಯವೂ ಮಾಡಿದ ಪೂಜೆಯ ಫೋಟೋಗಳನ್ನು ಹಾಕಿದ್ದರು. ಇನ್ನು ಕೆಲವರು ಹಾಕಿದ್ದ ನವರಾತ್ರಿಯ ಫಳಾರದ ಫೋಟೋವನ್ನು ನೋಡಿ ಬಾಯಲ್ಲಿ ನೀರೂರಿದ್ದು ಸುಳ್ಳಲ್ಲ. ಸೋಶಿಯಲ್‌ ಮೀಡಿಯಾ ಕೃಪೆಯಿಂದ ಈ ಬಾರಿ ನಮ್ಮ ಸ್ವರ್ಣವಲ್ಲಿಯ, ಶೃಂಗೇರಿಯ ದೇವಿಯರ ಅಲಂಕಾರವನ್ನು ನೋಡಿದ ಹಾಗೂ ಆಯ್ತು. ಈ ಬಾರಿ ನಮ್ಮೂರಿನ ಕವಡಿಕೆರೆ ಅಮ್ಮನವರ ನಿತ್ಯ ಅಲಂಕಾರವನ್ನೂ ನೋಡಲು ಸಿಕ್ಕಿದ್ದು ವಿಶೇಷ. ಹೀಗಾಗಿ ಆ ದೇವರುಗಳ ಮೇಲೆಲ್ಲ ನನ್ನ ದೃಷ್ಟಿ ಬಿದ್ದಿದೆ ಎನ್ನಬಹುದು!

ಕೆಲವರ ಮನೆಯಲ್ಲಂತೂ ಗೊಂಬೆಗಳದ್ದೇ ದರ್ಬಾರು. ಚಂದ ಚಂದದ ಗೊಂಬೆಗಳು, ಕತೆ ಹೇಳುವ ಗೊಂಬೆಗಳು, ಬೇರೆ ಬೇರೆ ಕಾನ್ಸೆಪ್ಟುಗಳ ಪ್ರಕಾರ ಕ್ರಮವಾಗಿ ಜೋಡಿಸಿದ ಗೊಂಬೆಗಳು. ಆ ಮನೆಗಳಲ್ಲಿನ ಜನರ, ವಿಶೇಷವಾಗಿ ಹೆಂಗಸರ ಉತ್ಸಾಹಕ್ಕೆ ಕೈ ಮುಗಿಯಲೇ ಬೇಕು. ನಾನು ನವರಾತ್ರಿಯ ಮೊದಲ ದಿನ ಅಂದುಕೊಂಡಿದ್ದು, ದಿನವೂ ಲಲಿತಾ ಸಹಸ್ರನಾಮವನ್ನೋ ಸೌಂದರ್ಯಲಹರಿಯನ್ನೋ ಒಂಭತ್ತು ದಿನಗಳ ಕಾಲವೂ ಓದಿ ಸ್ವಲ್ಪವಾದರೂ ದೇವಿಯನ್ನು ನನ್ನ ಕಡೆಗೆ ಒಲಿಸಿಕೊಳ್ಳಬೇಕು ಎಂದು. ಎರಡು ದಿನ ಭರ್ಜರಿ ಉತ್ಸಾಹ. ಮೂರನೇ ದಿನವೇ ಯಾವುದೋ ಚಿಕ್ಕ ಕಾರಣಕ್ಕೆ ಟುಸ್‌ ಆಯಿತು. ನನ್ನ ಕನ್ಸಿಸ್ಟನ್ಸಿಯ ಕತೆ ಹೀಗಿರುವಾಗ ನವರಾತ್ರಿಗೆ ಇನ್ನೂ ಒಂದು ವಾರ ಬಾಕಿಯಿದೆಯೆನ್ನುವಾಗಲೇ ಗೊಂಬೆ ಜೋಡಿಸಿ ಎಲ್ಲ ರೀತಿಯ ತಯಾರಿಯನ್ನೂ ಮಾಡಿಕೊಂಡು ಒಂಭತ್ತು ದಿನವೂ ಉಪವಾಸ ವೃತಗಳನ್ನು ಮಾಡಿ, ಪೂಜೆ ಪುನಸ್ಕಾರಗಳನ್ನು ಮಾಡಿ ಗೊಂಬೆ ನೋಡಲು ಬಂದವರಿಗೆ ಆತಿಥ್ಯ ನೀಡಿ ಅವರೊಂದಿಗೆ ಒಂದಿಷ್ಟು ಸಮಯವನ್ನೂ ಕಳೆದು ಕಳಿಸುವ ಅವರ ಶ್ರದ್ಧೆ ಎಷ್ಟು ದೊಡ್ಡದು ಎಂದು ನನಗನಿಸಿತು. ಜೊತೆಗೆ ನನ್ನ ಬಗ್ಗೆ ನನಗೆ ಸ್ವಲ್ಪ ನಾಚಿಕೆಯೂ ಆಯಿತು. ಆದರೆ ಯೂಟ್ಯೂಬಿನಲ್ಲಿ ನವರಾತ್ರಿಗೆ ಸಂಬಂಧಪಟ್ಟ ವೀಡಿಯೋವೊಂದರಲ್ಲಿ “ಯಥಾಶಕ್ತಿ” ಆಚರಿಸಿದರೂ ದೇವಿಯ ಕೃಪೆಗೆ ಪಾತ್ರರಾಗುತ್ತೇವೆಂಬ ಮಾತನ್ನು ಕೇಳಿದ್ದೆ. ಹಾಗಾಗಿ ನನ್ನ ಶಕ್ತಿಯೇ ಏನನ್ನೂ ಆಚರಿಸಲಾರದಷ್ಟು ಕಮ್ಮಿ ಎಂದುಕೊಂಡು ಸುಮ್ಮನಾದೆ.

ನನ್ನ ಕತೆ ಹಾಗಿರಲಿ. ಊರಲ್ಲಿ ನನ್ನ ಗೆಳತಿಯ ಮನೆಯಲ್ಲಿ ಶಾರದೆಯನ್ನು ಪ್ರತಿಷ್ಠಾಪನೆ ಮಾಡಿ ಅದೆಷ್ಟು ಚೆನ್ನಾಗಿ ಅಲಂಕಾರ ಮಾಡಿದ್ದರು. ವೀಡಿಯೋ ನೋಡಿ ಅವರ ಮನೆಯ ಶಾರದೆ ನಿಜಕ್ಕೂ ಪುಣ್ಯ ಮಾಡಿದ್ದಳು ಅಂತನಿಸಿತು. ನಂದಬಟ್ಟಲಿನಿಂದ ಹಿಡಿದು ತಾವರೆ ಹೂವಿನವರೆಗೂ ಬಗೆಬಗೆಯ ಹೂವುಗಳ ಅಲಂಕಾರ. ಹುಲ್ಲುಮೀಸೆಯ ಹೂವಿನ ದಂಡೆ, ಶಂಖಪುಷ್ಪದ ಹೂವಿನ ಮಾಲೆ, ಹೆಸರೇ ಗೊತ್ತಿರದ ಕೆಲವು ವಿಶೇಷ ಹೂವುಗಳು.. ಬೆಂಗಳೂರಲ್ಲಿ ಸಾಮಾನ್ಯವಾಗಿ ಕರ್ನಾಟಕದ ಬಾವುಟದ ಎರಡು ಬಣ್ಣಗಳನ್ನು ಬಿಟ್ಟು ಬೇರಾವ ಬಣ್ಣದ ಹೂವನ್ನೂ ಏರಿಸಿಕೊಳ್ಳುವ ಭಾಗ್ಯ ದೇವಿಗಿರುವುದಿಲ್ಲ. ಇನ್ನು ಊರಿನ ನಮ್ಮ ಮನೆಗಳಲ್ಲಿ ದಿನವೂ ದೇವಿ ಪಾರಾಯಣ ಓದುವುದಂತೂ ಇದ್ದೇ ಇದೆ. ಏನಿಲ್ಲವೆಂದರೂ ತಟ್ಟೆ ಪಾಯಸವಾದರೂ (ಅನ್ನಕ್ಕೆ ಹಾಲು, ಬೆಲ್ಲ/ಸಕ್ಕರೆ ಹಾಕಿ ಒಂದು ತಟ್ಟೆಯಲ್ಲಿ ಮಿಕ್ಸ್‌ ಮಾಡಿದರೆ ಅದೇ ತಟ್ಟೆ ಪಾಯಸ!) ದೇವಿಗೆ ಸಿಗುತ್ತದೆ. ಬೆಂಗಳೂರಿನ ನಮ್ಮ ಮನೆಯ ದೇವಿಗೆ ನೈವೇದ್ಯದ ಭಾಗ್ಯ ಎಲ್ಲಿಂದ ಬರಬೇಕು? ನವರಾತ್ರಿಯ ಒಂಭತ್ತೂ ದಿನವೂ, ಸಾಲದೆಂಬಂತೆ ವಿಜಯದಶಮಿಯಂದೂ ಬೆಳ್ಳುಳ್ಳಿಯನ್ನೋ ಈರುಳ್ಳಿಯನ್ನೋ ತಿಂದವರಿಂದ ದೇವಿ ನೈವೇದ್ಯವನ್ನು ಬಯಸಿರಲಿಕ್ಕಿಲ್ಲ ಎಂದುಕೊಳ್ಳುತ್ತೇನೆ. ತನಗೆ ನೈವೇದ್ಯ ಮಾಡುವುದು ಹಾಗಿರಲಿ, ಇವರಾದರೂ ನೆಟ್ಟಗೆ ಹೊತ್ತಿಗೆ ಸರಿಯಾಗಿ ಮಾಡಿಕೊಂಡು ತಿನ್ನಲಿ ಎಂದು ಆಕೆ ಅಂದುಕೊಂಡಿರುತ್ತಾಳೆ.

ಇನ್ನು ದಸರೆಯ ವೈಭವ ನೋಡಲು ಮೈಸೂರಿಗೇ ಹೋಗಬೇಕಿಲ್ಲ, ಇನ್ಸ್ಟಾಗ್ರಾಂ ನೋಡಿದರೆ ಸಾಕು! ಬೇರೆ ಬೇರೆ ಆ್ಯಂಗಲ್ಲುಗಳಿಂದ ವೀಡಿಯೋ ಮಾಡಿ ಎಡಿಟ್‌ ಮಾಡಿದ ರೀಲುಗಳ ಮೂಲಕವೇ ಮೈಸೂರು ದಸರಾ ನೋಡಿದ್ದಾಯ್ತು. ಈ ನಡುವೆ ನನ್ನ ಪತಿರಾಯ ಗಜಾನನ ಶರ್ಮರ “ಕೆಂಪನಂಜಮ್ಮಣ್ಣಿ” ಕಾದಂಬರಿಯನ್ನು ಓದುತ್ತಿದ್ದ. ಅದರಲ್ಲಿ ಬಂದ ಇತಿಹಾಸದ ವಿವರಗಳನ್ನು ಸ್ವಲ್ಪಮಟ್ಟಿಗೆ ನನ್ನೊಟ್ಟಿಗೆ ಹಂಚಿಕೊಂಡಿದ್ದ. ಕೆಂಪನಂಜಮ್ಮಣ್ಣಿಯ ಪ್ರಭಾವವೇ ಇರಬೇಕು. ಒಂದೆರಡು ದಿನ ಕಳೆಯುವಷ್ಟರಲ್ಲಿ ಮನೆಗೆ ಮೈಸೂರ್‌ ಸ್ಯಾಂಡಲ್‌ ಸಾಬೂನುಗಳೂ ಪ್ರತ್ಯಕ್ಷವಾಗಿದ್ದವು! ಎರಡು ವರ್ಷದ ಹಿಂದೆ ಮೈಸೂರು ದಸರೆಗೆ ಹೋಗಿ ಬಂದು ಹುಷಾರು ತಪ್ಪಿದ್ದರ ನೆನಪಿದ್ದದ್ದರಿಂದ ಈ ಬಾರಿ ಮೈಸೂರಿಗೆ ಹೋಗುವ ಸುದ್ದಿಯನ್ನೇ ನಾನು ಎತ್ತಲಿಲ್ಲ. ಅಷ್ಟಕ್ಕೂ ಈ ಬಾರಿ ಎಲ್ಲೂ ಹೋಗದೆಯೇ ಹುಷಾರು ತಪ್ಪಿತ್ತು! ಕೆಲವಷ್ಟು ಜನರು ನವರಾತ್ರಿಯ ನೆಪದಲ್ಲಿ ಮೂರ್ನಾಲ್ಕು ದಿನ ದೂರದೂರಿಗೆ ಟ್ರಿಪ್ಪುಗಳನ್ನೂ ಮಾಡಿ ಫೋಟೋ ಹಾಕಿದ್ದರು. ಇವನೊಟ್ಟಿಗೆ ಸ್ವಲ್ಪ ರಗಳೆ ಮಾಡಿದ್ದರೆ ಎಲ್ಲಾದರೂ ಕರಕೊಂಡು ಹೋಗುತ್ತಿದ್ದ ಅಂತ ಅನಿಸಿದ್ದು ನಿಜ. ಆದರೆ ಈ ಉದ್ದ ವೀಕೆಂಡಿನಲ್ಲಿ ಎಲ್ಲ ಕಡೆ ಆಗಬಹುದಾದ ಜನಜಾತ್ರೆಯನ್ನು ನೆನೆಸಿಕೊಂಡೆ. “ಮನೆಯೇ ಮಂತ್ರಾಲಯ ಮನಸೇ ದೇವಾಲಯ” ಎಂದುಕೊಂಡು ತೆಪ್ಪಗೆ ಮನೆಯಲ್ಲಿಯೇ ನವರಾತ್ರಿ ರಜೆಯನ್ನು ಕಳೆಯುವುದೆಂದು ತೀರ್ಮಾನಿಸಿದ್ದೆ.

ಇಷ್ಟೆಲ್ಲ ನೋಡಿದ ಮೇಲೆ ನಾನು ಏನೂ ಮಾಡದಿದ್ದರೆ ಹೇಗೆ? ಸ್ಟೇಟಸ್ಸಿಗೆ ಹಾಕುವುದು ಹಾಗಿರಲಿ, ಕನಿಷ್ಠ ಪಕ್ಷ ಅತ್ತೆ ಕಾಲ್‌ ಮಾಡಿದಾಗ ಹೇಳುವುದಕ್ಕಾದರೂ ಏನೋ ಒಂದು ಮಾಡಬೇಕಲ್ಲ! ಅವರಂತೂ ಅಲ್ಲಿ ನಿತ್ಯ ಪಾರಾಯಣ ಮಾಡಿ, ದಿನವೂ ಒಂದೊಂದು ಸಿಹಿತಿಂಡಿ ಮಾಡಿ ನೈವೇದ್ಯ ಮಾಡದೇ ಬಿಡುವವರಲ್ಲ. ಹೀಗೆಲ್ಲ ಯೋಚಿಸುವಾಗ ನೆನಪಾಗಿದ್ದು ನಾವು ಚಿಕ್ಕವರಿರುವಾಗ ಆಚರಿಸುತ್ತಿದ್ದ ನವರಾತ್ರಿ. ಆಗ ನವರಾತ್ರಿಯೆಂದರೆ ಅಕ್ಟೋಬರ್‌ ರಜೆ, “ದುರ್ಗೆಕೂಸು” ಮಾಡಿಸಿಕೊಳ್ಳುವುದು ಮತ್ತು ವಿಜಯದಶಮಿಯ ದಿನ ಶಾಲೆಯಲ್ಲಿ ನಡೆಯುತ್ತಿದ್ದ ಶಾರದಾ ಪೂಜೆ.

ಹೇಗೂ ರಜೆ ಇರುತ್ತಿದ್ದರಿಂದ ಓದಿ ಬರೆದು ಮಾಡುವ ತಲೆಬಿಸಿಯೂ ಇರುತ್ತಿರಲಿಲ್ಲ. ಯಾವ ಸಬ್ಜೆಕ್ಟಿನಲ್ಲಿ ಚೆನ್ನಾಗಿ ಮಾರ್ಕು ಬರಬೇಕೆಂದಿದೆಯೋ, ಅಥವಾ ಯಾವ ವಿಷಯ ಕಷ್ಟವೆನಿಸುತ್ತಿತ್ತೋ ಆ ಎಲ್ಲ ಪಠ್ಯಪುಸ್ತಕಗಳನ್ನೂ ಶಾರದೆಯ ಮುಂದೆ ಇಟ್ಟರಾಯ್ತು! ಮುಂದಿನ ಜವಾಬ್ದಾರಿಯೆಲ್ಲ ಅವಳದ್ದು. ಒಂದಾನುವೇಳೆ ಮೇಷ್ಟ್ರು ಹೋಂವರ್ಕ್‌ ಕೊಟ್ಟಿದ್ದರೂ, ನುಣುಚಿಕೊಳ್ಳಲು ಇದೊಂದು ಒಳ್ಳೇ ದಾರಿ. ಶಾರದಾಪೂಜೆಗೆ ಪುಸ್ತಕವನ್ನು ದೇವರೆದುರಿಗೆ ಇಟ್ಟಿದ್ದೆ ಎಂದು ಹೇಳಿದರೆ ಮೇಷ್ಟ್ರಿಗೂ ಬಯ್ಯುವುದು ಕಷ್ಟ!

ನಮ್ಮ ಊರಲ್ಲಿ ಇದ್ದವೇ ಕೇವಲ ಹತ್ತೋ ಹನ್ನೆರಡೋ ಮನೆಗಳು. ಹೆಣ್ಣು ಮಕ್ಕಳ ಸಂಖ್ಯೆಯೂ ಕಡಿಮೆಯಿತ್ತು. ಹಾಗಾಗಿ ನಾನು ಮತ್ತು ನನ್ನಕ್ಕ ನವರಾತ್ರಿಯ ಒಂಭತ್ತು ದಿನಗಳ ಮಟ್ಟಿಗಂತೂ ಊರಲ್ಲಿಯೇ “ಮೋಸ್ಟ್‌ ವಾಂಟೆಡ್‌” ಹೆಣ್ಣುಮಕ್ಕಳು. ಎಲ್ಲ ಮನೆಯಿಂದಲೂ ಆಹ್ವಾನ ಬರುತ್ತಿತ್ತೋ ಇಲ್ಲವೋ. ನಾವಂತೂ ಯಾವ ಮನೆಯನ್ನೂ ತಪ್ಪಿಸುತ್ತಿರಲಿಲ್ಲ. ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ನವರಾತ್ರಿ ಪೂಜೆ. ಪಾದಪೂಜೆ ಮಾಡಿ ನಮಗೆ ಅಕ್ಕಿ, ಕಾಯಿ, ಕಣ ಕೊಟ್ಟು, ದಕ್ಷಿಣೆಯನ್ನೂ ಇಟ್ಟು, ಹಬ್ಬದೂಟವನ್ನೂ ಹಾಕಿ ಕಳಿಸುತ್ತಿದ್ದರು. ಹೀಗಾಗಿ ನಾವು ಯಾರ ಮನೆಯನ್ನೂ ಬಿಡುವ ಮಾತೇ ಇರಲಿಲ್ಲ. ಅರಿಶಿನ ಕುಂಕುಮ ಹಚ್ಚಿಸಿಕೊಳ್ಳುವ, ಆರತಿ ಎತ್ತಿಸಿಕೊಳ್ಳುವ, ವರ್ಷದಲ್ಲಿ ಒಂದೇ ಬಾರಿ ಸಿಗುವ ಈ ಅವಕಾಶವನ್ನು ಹೇಗೆ ಬಿಡಲಾಗುತ್ತದೆ? ಹೀಗೆ ಈ ಎಲ್ಲ ಉಪಚಾರ ಮಾಡಿಸಿಕೊಳ್ಳಲು ಎಲಿಜಿಬಿಲಿಟಿ ಇರುವ ಹೆಣ್ಣುಮಕ್ಕಳಿಗೆ ನಮ್ಮ ಕಡೆ “ದುರ್ಗೆ ಕೂಸು” ಎನ್ನುತ್ತಾರೆ. ಕೆಲವರ ಮನೆಯಲ್ಲಿ ಹತ್ತು ರೂಪಾಯಿ ಕೊಟ್ಟರೆ ಕೆಲವು ಕಡೆ ಐದು ರೂಪಾಯಿ ಕೊಡುತ್ತಿದ್ದರು. ಒಂದೇ ದಿನ ಎರಡು ಮನೆಯಲ್ಲಿ ಪೂಜೆ ಇದ್ದರೆ, ನಮ್ಮ ಆದ್ಯತೆ ಯಾರ ಮನೆಯಲ್ಲಿ ದಕ್ಷಿಣೆ ಜಾಸ್ತಿಯೋ ಆ ಮನೆಗೆ! ಊಟಕ್ಕೆ ಮುಂಚೆ ಗಂಗೋದಕ ನೀಡುವಾಗ ಒಂದೋ ಎರಡೋ ರೂಪಾಯಿಯ ನಾಣ್ಯವೂ ನಮ್ಮ ಕೈ ಸೇರುತ್ತಿತ್ತು. ಹೀಗಾಗಿ ನವರಾತ್ರಿಯಲ್ಲಿ ನಮ್ಮ ಸಂಪಾದನೆ ಐವತ್ತರಿಂದ ನೂರು ರೂಪಾಯಿಗಳಿಗೆನೂ ಕಮ್ಮಿ ಇರುತ್ತಿರಲಿಲ್ಲ. ನಮಗಷ್ಟೇ ಅಲ್ಲ. ದಂಪತಿಪೂಜೆಯೂ ಇರುತ್ತಿತ್ತು, ಸ್ವಲ್ಪ ಹೊಸಜೋಡಿಯಾಗಿದ್ದರೆ ಅಥವಾ ದಂಪತಿಗಳು ಮುದ್ದಾಗಿದ್ದರೆ, ಅವರನ್ನು ನೋಡಿ ನಮ್ಮ ಫ್ಯೂಚರ್‌ ಬಗ್ಗೆ ಅಲ್ಪ-ಸಲ್ಪ ಡಿಸೈನ್‌ ಹಾಕಿರುತ್ತಿದ್ದೆವು. ಬಾಕಿ ಯಾವುದಾದರೂ ಪೂಜೆ ಮಾಡುತ್ತಿದ್ದರೂ ಇರಬಹುದು. ನಮ್ಮ ಕಣ್ಣಂತೂ ಕೊಡುತ್ತಿದ್ದ ದಕ್ಷಿಣೆಯ ಮೇಲೇ ಇರುತ್ತಿತ್ತು. ಶಕ್ತಿ ಮೀರಿ ಊಟ ಮಾಡುತ್ತಿದ್ದೆವೇ ಹೊರತು, “ಹೆಣ್ಣೆಂದರೆ ಶಕ್ತಿ” ಎಂಬುದೆಲ್ಲ ತಲೆಗೆ ಹೋಗುತ್ತಿರಲಿಲ್ಲ. ಎಲ್ಲ ಮುಗಿಸಿ ಮಟ ಮಟ ಮಧ್ಯಾಹ್ನ ಅರಿಶಿನ ಕುಂಕುಮ ಹಚ್ಚಿಸಿಕೊಂಡಿದ್ದ ಮುಖ ಹೊತ್ತು ಹೊರಬಿದ್ದರೆ ನಮ್ಮದು ಸಾಕ್ಷಾತ್‌ ದುರ್ಗಿಯ ಅಪರಾವತಾರ!

ಇದು ಬ್ರಾಹ್ಮಣರ ಮನೆಯ ಕತೆಯಾದರೆ, ಇತರೇ ಪೈಕಿಯವರಲ್ಲಿ ಒಬ್ಬರ ಮನೆಗೆ ಕರೆಯುತ್ತಿದ್ದರು. ಅವರಂತೂ ನಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡೇ ಹೋಗಿ ಮನೆಯೊಳಗೆ ಕೂಡಿಸುತ್ತಿದ್ದರು. ನಿಜಕ್ಕೂ ವಿಐಪಿ ಫೀಲ್‌ ಬರುತ್ತಿದ್ದುದು ಆವಾಗ. ನಮ್ಮವರ ಮನೆಗಳಲ್ಲಿ ಬ್ಲೌಸ್‌ಪೀಸ್‌ಗೇ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಅವರ ಮನೆಯಲ್ಲಿ ಮಾತ್ರ ಚಂದದೊಂದು ಡ್ರೆಸ್‌ ಭಾಗ್ಯ ನಮ್ಮ ಪಾಲಿಗೆ. ಅಲ್ಲಿಗೆ ಮುಂದಿನ ವರ್ಷದ ನವರಾತ್ರಿಗೆ ಕಾಯಲು ನಮಗೆ ಕಾರಣವೊಂದು ಸಿಕ್ಕಿರುತ್ತಿತ್ತು.

ವಿಜಯದಶಮಿಯಂದು ಸಂಜೆ ನಮ್ಮ ಶಾಲೆಯಲ್ಲಿ ಶಾರದಾ ಪೂಜೆ. ಅದೊಂದು ರೀತಿ ನಮಗೆ ಆ್ಯನ್ಯುವಲ್‌ ಡೇ ಇದ್ದ ಹಾಗೆ. ನಾವು ಆ ದಿನವೂ ದುರ್ಗೆಕೂಸುಗಳಾಗಿ ನಮ್ಮ ದಕ್ಷಿಣೆ ಪಡೆದುಕೊಂಡಾದ ಮೇಲೆ ಪುರುಸೊತ್ತು ಮಾಡಿಕೊಂಡು ಶಾರದಾ ಪೂಜೆಗೆ ತಯಾರಾಗುತ್ತಿದ್ದುದು. ಸಂಜೆ ಹಾಡು, ನೃತ್ಯ, ಪೂಜೆ, ಪ್ರಸಾದ ವಿತರಣೆ, ಶಾಲೆಯ ಸ್ಥಿತಿಗತಿಗಳ ಕುರಿತು ಮಾತುಕತೆ, ಊರಿನ ಜನರಿಗೆ ಗಾಯನ ಸ್ಪರ್ಧೆ, ಅದಾದ ನಂತರ ಸವಾಲು ಕರೆಯುವುದು. ಇಷ್ಟಾದರೆ ವಾರ್ಷಿಕೋತ್ಸವ ಕಮ್ ಶಾರದಾ ಪೂಜೆ ಮುಗಿದಂತೆ. ಈ ಶಾರದಾ ಪೂಜೆಗೆ ಬರುತ್ತಿದ್ದ ನಮ್ಮ ಮೇಷ್ಟ್ರ ಹೆಂಡತಿ ಮತ್ತು ಅವರ ಮಗಳು ನಮಗೆ ಸ್ಪೆಷಿಯಲ್‌ ಗೆಸ್ಟ್‌ಗಳು. ಅವರಿಗೇ ಮುಜುಗರವಾಗುವಷ್ಟು ಅವರನ್ನು ನೋಡುವುದು! ಕೆಲವೊಮ್ಮೆ ಮೈಸೂರಲ್ಲಿದ್ದ ಅತ್ತೆಯ ಮಗಳೂ ಸಹ ರಜೆಗೆ ಬಂದಿರುತ್ತಿದ್ದಳು, ಎಷ್ಟೆಂದರೂ ಮೈಸೂರಿನ ಕಾನ್ವೆಂಟ್‌ ಶಾಲೆಯಲ್ಲಿ ಓದುತ್ತಿದ್ದವಳು. ಅವಳ ಅಲಂಕಾರಗಳು, ಅವಳ ಮೈಸೂರು ಭಾಷೆ, ಅವಳು ಕಲಿಯುತ್ತಿದ್ದ ಯೋಗ, ಭರತನಾಟ್ಯ ಇವೆಲ್ಲ ನಮಗೆ ಇಂದಿಗೂ ಸೋಜಿಗವೇ. ಹಾಗಾಗಿ ನಾವು ಅವಳೊಟ್ಟಿಗೆ ಓಡಾಡುತ್ತಿದ್ದೇವೆಂದರೆ ನಮಗೆ ಒಂದು ರೀತಿಯ ಕೋಡು ಬಂದ ಹಾಗೆ. ಶಾಲೆಯಲ್ಲಿದ್ದುದೇ ಹತ್ತೋ ಹನ್ನೆರಡೋ ಮಕ್ಕಳು. ಅವರ ಮುಂದೆಯೇ ಸಾಧ್ಯವಾದಷ್ಟು ಬೀಗುವುದು. ನಮ್ಮದೊಂದು ಹಾಡು ಇಲ್ಲವೇ ನೃತ್ಯ ಮಾಡಿಬಿಟ್ಟರೆ ಆಯಿತು. ಭಾರೀ ಚೆನ್ನಾಗಿ ಮಾಡಿಬಿಟ್ಟೆವು ಅಂತ ಓಡಾಡಿಕೊಂಡಿರುವುದೇ ನಮ್ಮ ಕೆಲಸ. ಊರ ಜನರಿಗಾಗಿ ದೇಶಭಕ್ತಿಗೀತೆಯೋ, ಭಾವಗೀತೆಯೋ, ಭಕ್ತಿಗೀತೆಯೋ ಯಾವುದಾದರೂ ಸ್ಪರ್ಧೆ ಇರುತ್ತಿತ್ತು. ಅಲ್ಲಿ ಹಾಡುತ್ತಿದ್ದ ದೊಡ್ಡವರೆಲ್ಲ ನಮ್ಮ ಲೆಕ್ಕದಲ್ಲಿ ಸೆಲೆಬ್ರಿಟಿಗಳು. ಈ ವೈಭವಗಳೆಲ್ಲ ಮುಗಿದ ಮೇಲೆ ಸವಾಲು. ದೇವಿಯ ಎದುರಿಗಿಟ್ಟಿದ್ದ ಅನೇಕ ವಸ್ತುಗಳ ಮೇಲೆ ಸವಾಲ್‌ ನಡೆಯುತ್ತಿತ್ತು. ನನ್ನ ಅಮ್ಮ ಅವಳಿಗೆ ಬೇಕಾದ್ದನ್ನು ಪಡೆದುಕೊಳ್ಳದೇ ಬಿಡುತ್ತಿರಲಿಲ್ಲ. ಆಮೇಲೆ ಮನೆಗೆ ಬಂದಮೇಲೆ ಅಪ್ಪನ ಬಳಿ ಬೈಸಿಕೊಳ್ಳುವುದು. ಸವಾಲಿನಲ್ಲಿ ತನಗಾಗದವರು ಬೇಕಂತಲೇ ತಾನು ಬಯಸಿದ್ದರ ಬೆಲೆಯನ್ನು ಏರಿಸಿ ಏರಿಸಿ ಕಡೆಗೆ ಅದನ್ನು ತನ್ನ ತಲೆಗೆ ಕಟ್ಟುತ್ತಿದ್ದರೆಂದು ಅವಳ ದೂರು. ಅವರಿಗೆ ಅದು ನಿಜವಾಗಿಯೂ ಬೇಕಿದ್ದರಿಂದಲೇ ಏರಿಸುತ್ತಿದ್ದರೊ ಅಮ್ಮನ ಹಠವನ್ನು ಗೊತ್ತಿದ್ದರಿಂದ ಹಾಗೆ ಮಾಡುತ್ತಿದ್ದರೋ ನಮಗಂತೂ ಬಗೆಹರಿಯುತ್ತಿರಲಿಲ್ಲ.

ಇನ್ನು ನಮ್ಮ ತಂಗಿ ನಮಗಿಂತ ಹತ್ತು ವರ್ಷ ಚಿಕ್ಕವಳು. ಹತ್ತು ವರ್ಷದಲ್ಲಿ ನಾವು ಬೇರೆ ಊರಿಗೆ ಬಂದಾಗಿತ್ತು. ಹೀಗಾಗಿ ತಂಗಿಗೆ ಆ ಊರಲ್ಲಿದ್ದ ಹಾಗೆ ಮನೆಮನೆಗೆ ಹೋಗುವ ಅವಕಾಶಗಳಿರಲಿಲ್ಲ. ಆದರೆ ಅವಳನ್ನು ನಮ್ಮ ಅಜ್ಜನಮನೆಯವರು ಪರ್ಮನೆಂಟ್‌ ದುರ್ಗಿಯನ್ನಾಗಿ ನೇಮಕ ಮಾಡಿಕೊಂಡಿದ್ದರು. ಅಲ್ಲಿ ನವರಾತ್ರಿಯ ನಿತ್ಯ ಪೂಜೆ ಪಾರಾಯಣಗಳು ನಡೆಯುತ್ತವೆ. ಹೀಗಾಗಿ ಅವಳು ಅಕ್ಟೋಬರ್‌ ರಜೆಗೆ ಅಲ್ಲಿ ಹೋದರೆ ನವರಾತ್ರಿ ಮುಗಿಸಿಕೊಂಡೇ ಬರುತ್ತಿದ್ದುದು. ಅವರಿಗೂ ಬೇರೆ ದುರ್ಗಿಯರು ಸಿಗುತ್ತಿರಲಿಲ್ಲ. ಅವಳೂ ತನ್ನ ಇಂಪಾರ್ಟನ್ಸ್ ಅನ್ನು ಗೊತ್ತುಮಾಡಿಕೊಂಡು ಹೆಚ್ಚು ದಕ್ಷಿಣೆಯನ್ನು ಡಿಮಾಂಡ್‌ ಮಾಡುತ್ತಿದ್ದಳಂತೆ. ಇಷ್ಟು ದಕ್ಷಿಣೆ ಕೊಟ್ಟರೆ ಮಾತ್ರ ಬರುತ್ತೇನೆಂದು ಅಜ್ಜನೊಟ್ಟಿಗೆ ಡೀಲ್‌ ಮಾಡಿಕೊಳ್ಳುತ್ತಿದ್ದಳು ಎಂಬುದೂ ನಮ್ಮ ಕಿವಿಗೆ ಬಿದ್ದಿತ್ತು. ಈಗ ಕೇಳಿದರೆ ಐದು ಹತ್ತು ರೂಪಾಯಿಗಳಿಗಿಂತ ಹೆಚ್ಚೇನೂ ದಕ್ಷಿಣೆ ಸಿಗುತ್ತಿರಲಿಲ್ಲ ಎನ್ನುತ್ತಾಳೆ. ಹೆಚ್ಚೇ ಸಂಪಾದಿಸಿರುತ್ತಾಳೆಂದು ನಮ್ಮ ಗುಮಾನಿ.

ಹೈಸ್ಕೂಲು ಕಾಲೇಜು ಕೆಲಸ ಮದುವೆ ಅಂತೆಲ್ಲ ಆದಮೇಲೆ ಈ ದುರ್ಗೆಕೂಸಿಗೆ ಹೋಗುವುದೆಲ್ಲ ನಮ್ಮ ಜೂನಿಯರ್‌ಗಳಿಗೆ ಬಿಟ್ಟುಕೊಟ್ಟಾಗಿತ್ತು. ಇಲ್ಲಿ ಬೆಂಗಳೂರಿನಲ್ಲಂತೂ ಯಾವುದೇ ಹಬ್ಬವಿರಲಿ ಹೆಂಗಸರದ್ದೇ ದರ್ಬಾರು. ಆದರೆ ನಮ್ಮಲ್ಲಿ ಹಾಗಲ್ಲವಲ್ಲ. ಗಂಡನ ಹಸ್ತ ಮುಟ್ಟಿದ್ದರೆ ಸಾಕಾಗುತ್ತದೆ. ಸಾಮಾನ್ಯವಾಗಿ ಹಬ್ಬಕ್ಕೆ ಊರಿಗೆ ಹೋಗಿರುತ್ತೇವೆ. ಅಲ್ಲಿ ಅತ್ತೆಯೋ ಅಮ್ಮನೋ ಹಾಗೆಲ್ಲ ಜವಾಬ್ದಾರಿಯನ್ನು ಬಿಟ್ಟುಕೊಡುವುದಿಲ್ಲ! ಒಂದು ವೇಳೆ ಬಿಟ್ಟುಕೊಟ್ಟರೂ ಅವರು ಹೇಳುವ ಮಡಿಯನ್ನು ನಾನು ಫಾಲೋ ಮಾಡುವ ರೀತಿಯನ್ನು ನೋಡಿ ತಲೆಕೆಟ್ಟು ತಾವೇ ಮಾಡಿಕೊಳ್ಳುತ್ತಾರೆ. ಇಲ್ಲಿದ್ದಾಗಲಂತೂ ಏನೇ ಮಾಡಿದರೂ ಮಾಡದಿದ್ದರೂ ಕೇಳುವವರಿಲ್ಲ. ಹೀಗಿರುವಾಗ ಬೆಂಗಳೂರಿನಲ್ಲಿದ್ದಾಗಿನ ನಮ್ಮ ಹಬ್ಬಗಳು ಎಷ್ಟೋ ಬಾರಿ ನಮ್ಮ ಓನರ್‌ ಆಂಟಿ ಕೊಡುವ ಸ್ವೀಟೊಂದರಿಂದಲೇ ಕೊನೆಗೊಂಡಿವೆ. ಆದರೂ ಎರಡು ವರ್ಷದ ಹಿಂದೆ ಏನೋ ಪ್ರೇರಣೆಯಾಗಿ ನವರಾತ್ರಿಗೆ ನಮ್ಮ ಬಿಲ್ಡಿಂಗಿನ ಇಬ್ಬರು ಹೆಣ್ಣುಮಕ್ಕಳಿಗೆ ದುರ್ಗೆಕೂಸಿಗೆ ಕರೆದಿದ್ದೆ! ಮತ್ತೆರಡು ವರ್ಷ ಏನೇನೋ ಕಾರಣಗಳಿಗಾಗಿ ಮಾಡಲಿಕ್ಕಾಗಿರಲಿಲ್ಲ. ಎರಡು ವರ್ಷ ಕಳೆಯುವಷ್ಟರಲ್ಲಿ ನಮ್ಮ ಬಿಲ್ಡಿಂಗಿನಲ್ಲಿ ಮತ್ತೆ ಮೂವರು ಪುಟ್ಟ ದುರ್ಗಿಯರು ಸೃಷ್ಟಿಯಾಗಿದ್ದರು. ಅಮ್ಮ ಇಲ್ಲಿ ಬಂದಾಗ ಅವರನ್ನೆಲ್ಲ ನೋಡಿದ್ದರಿಂದ ಅವರಿಗೆಲ್ಲ ಅರಿಶಿನ ಕುಂಕುಮವನ್ನಾದರೂ ಕೊಡು ಎಂದು ನವರಾತ್ರಿಯ ಮೊದಲ ದಿನವೇ ಕಾಲ್‌ ಮಾಡಿ ಹೇಳಿಯಾಗಿತ್ತು. ಅವರು ಹೇಳದಿದ್ದರೂ ನಾನು ಈ ಬಾರಿ ಮಾಡುವವಳೇ ಇದ್ದೆ ಎಂದುಕೊಳ್ಳಿ! ಆರನೆಯ ದಿನದವರೆಗೂ ತಯಾರಿಗೆ ಮುಹೂರ್ತ ಬರಲಿಲ್ಲ! ಇನ್ನು ತಡಮಾಡಿದರೆ ನವರಾತ್ರಿ ನನಗಾಗಿ ಕಾಯುತ್ತ ಕೂರುವುದಿಲ್ಲವೆಂದು ಬಳೆ ಅಂಗಡಿಗೆ ಓಡಿದೆ. ನಾನು ಹೇಗೂ ಖರೀದಿ ಮಾಡುತ್ತೇನೆಂದು ಗೊತ್ತಾಗಿ ಅಂಗಡಿಯವನೂ ಅವನ ಹೆಂಡತಿಯೂ ಒಂದಿಷ್ಟು ಸಲಹೆ ನೀಡಿದ್ದರು. ನಾನು ನನ್ನ ಲಿಸ್ಟಿನಲ್ಲಿದ್ದದ್ದರ ಜೊತೆಗೆ ಅವರು ಹೇಳಿದ್ದನ್ನೂ ಕೊಂಡುಕೊಂಡೆ. ಬಳೆ ಕ್ಲಿಪ್ಪು ನೇಲ್‌ಪಾಲಿಶ್‌ ಎನ್ನುತ್ತಾ ಸುಮಾರು ವ್ಯಾಪಾರವೇ ನಡೆಯಿತು. ಅವರಿಬ್ಬರೂ ಫುಲ್‌ ಖುಷ್‌. ಅದೇ ಖುಷಿಗೆ ಮಾತಾಡಲೂ ಆರಂಭಿಸಿದರು. ಆನ್ಲೈನ್‌ ಹಾವಳಿಯಿಂದ ತನ್ನ ಕಾಸ್ಮೆಟಿಕ್‌ ವ್ಯಾಪಾರಕ್ಕಾದ ನಷ್ಟವನ್ನು ಹೇಳಿಕೊಂಡರು. ನಾನು ಇವನ್ನೆಲ್ಲ ಆನ್ಲೈನ್‌ ತರಿಸಬೇಕು ಎಂದುಕೊಂಡಿದ್ದವಳು ಹಾಗೆ ಮಾಡದೇ ಒಳ್ಳೆಯದು ಮಾಡಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಕಷ್ಟಸುಖಗಳನ್ನೂ ಮಾತಾಡಿಯಾಯ್ತು. “ಮೇಡಂ.. ಎಲ್ಲರೂ ನಿಮ್ಮ ಹಾಗೆ ಮಾತಾಡ್ಸೊಲ್ಲ ಮೇಡಂ, ನೀವು ಇಷ್ಟೊತ್ತು ಮಾತಾಡಿದ್ದು ಖುಷಿ ಆಯ್ತು” ಅಂದಿದ್ದ. ಆಗ ನಾನೂ ಫುಲ್‌ ಖುಷ್‌! ಅಲ್ಲಿಗೆ ಮುಂದಿನ ವರ್ಷವೂ ಅವನಿಗೆ ನನ್ನ ಕಡೆಯಿಂದ ಒಳ್ಳೆ ವ್ಯಾಪಾರ ಆಗಲಿದೆ.

ಷಷ್ಠಿಗೆ ಸಾಮಾನು ತಂದಿದ್ದು. ಸಪ್ತಮಿಯ ದಿನ ಎಲ್ಲ ತಯಾರಿ ನಡೆಸುವುದು, ಅಷ್ಟಮಿಯ ದಿನ ಎಲ್ಲರನ್ನೂ ಕುಂಕುಮಕ್ಕೆ ಕರೆಯುವುದು ಎಂಬುದು ನನ್ನ ಪ್ಲಾನ್‌. ನೋಡಿದರೆ ಅಷ್ಟಮಿಯ ದಿನ ಒಬ್ಬರು ಊರಿಗೆ ಹೊರಡುವರು, ಇನ್ನೊಬ್ಬರು ಆಸ್ಪತ್ರೆಗೆ, ಮತ್ತೊಬ್ಬರು ಟ್ರಿಪ್ಪಿಗೆ, ಮಗದೊಬ್ಬರು ದೇವಸ್ಥಾನಕ್ಕೆ ಹೋಗುವವರಿದ್ದಾರೆ ಎಂದಾಯ್ತು. ಸಪ್ತಮಿಗೇ ಕರೆಯೋಣವೆಂದರೆ ಮಧ್ಯಾಹ್ನ ಎರಡು ಗಂಟೆಯಾದರೂ ನನ್ನ ಸ್ನಾನವೂ ಆಗಿರಲಿಲ್ಲ. ಸ್ವಚ್ಛತಾ ಕಾರ್ಯಕ್ರಮವನ್ನಂತೂ ಶುರುವಿನಿಂದ ಮಾಡುವ ಅನಿವಾರ್ಯವಿತ್ತು. ನಿತ್ಯದ ಆಫೀಸ್ ಕೆಲಸವೂ ಮುಗಿದಿಲ್ಲ. ಬಂದವರಿಗೆ ಕೊಡಲಿಕ್ಕಾದರೂ ಏನಾದರೂ ಮಾಡಬೇಕು. ಆ ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಎಲ್ಲರೂ ಒಟ್ಟಿಗೇ ಸಿಗುವುದಿಲ್ಲ! ಒಂದೇ ಸಲಕ್ಕೆ ತಲೆಬಿಸಿಯಾಗಿ ಬಿಪಿ ಹಾರ್ಟ್‌ರೇಟ್‌ ಎಲ್ಲಾ ಔಟ್‌ ಆಫ್‌ ರೇಂಜ್‌ ಹೋಗಿದ್ದವು. ಆಗಿದ್ದಾಗಲಿ ಅಂದೇ ಮಾಡುವುದೆಂದು ಗಟ್ಟಿ ಮನಸು ಮಾಡಿಕೊಂಡೆ. ಉಳಿದಿದ್ದ ಆಫೀಸ್‌ ಕೆಲಸವನ್ನೆಲ್ಲ ಗೆಳತಿಯ ತಲೆಗೆ ಕಟ್ಟಿದೆ. ಹಾಗಾಗಿ ಸಲ್ಪ ಪುಣ್ಯ ಬಂದಿದ್ದರೆ ಅವಳಿಗೂ ಪಾಲುಕೊಡಬೇಕಾದ ಪರಿಸ್ಥಿತಿಯಿದೆ.

ನವದುರ್ಗಿಯರು ಮೈ ಮೇಲೆ ಬಂದರೋ, ನಾನೇ ಆವಾಹಿಸಿಕೊಂಡೆನೋ ಗೊತ್ತಿಲ್ಲ. ಆ ಅವತಾರವನ್ನು ನೋಡಬೇಕಿತ್ತು. ಗುಡಿಸುವುದೇನು, ನೆಲ ಒರೆಸುವುದೇನು, ಪಾತ್ರೆ ತಿಕ್ಕುವುದೇನು, ಜೊತೆಗೆ ಬಾತ್ರೂಮ್‌ ತೊಳೆಯುವುದೂ ಅದೇ ದಿನ ಆಗಬೇಕು. ನವದುರ್ಗಿಯರ ಜೊತೆ ಓಸಿಡಿ ದೇವಿಯ ಅವತಾರವೂ ಮೈಮೇಲೆ ಬಂದು ನನಗೆ ತಡೆಯಲಿಕ್ಕಾಗುತ್ತಿರಲಿಲ್ಲ. ವರ್ಷಾನುಗಟ್ಟಲೆಯಿಂದ ಸ್ವಚ್ಛಮಾಡದ ಯಾವುದೋ ಮೂಲೆ ಇಂದೇ ಸ್ವಚ್ಛಗೊಳ್ಳಬೇಕು. ಕಸ ಎಂದು ಕಾಣಿಸಿದ ಎಲ್ಲವನ್ನೂ ನಾಪತ್ತೆ ಮಾಡಿಬಿಡಬೇಕು. ಕೈಗಳು ಬುದ್ಧಿಗಿಂತ ವೇಗವಾಗಿ ಕೆಲಸ ಮಾಡಲು ತೊಡಗಿದವು. ಇನ್ನು ತಡೆಯಲಿಕ್ಕಾಗದು ಎಂದು ಹೇಗೋ ಸಮಾಧಾನ ತಂದುಕೊಂಡೆ.

ಇಷ್ಟೆಲ್ಲ ಮಾಡಿದ ಮೇಲೆ ತಲೆಯಿಂದಲೇ ಸ್ನಾನವಾಗಬೇಕು. ಸ್ನಾನವಾದ ಮೇಲೆ ಚಕಚಕನೆ ಒಂದು ಟೇಬಲ್ಲಿನ ಮೇಲೆ ಇವನ ಹೊಳೆಯುವ ಶಾಲನ್ನು ಹಾಸಿದೆ. ಅದರ ಮೇಲೆ ಶಾರದೆಯ ಮೂರ್ತಿಯನ್ನಿರಿಸಿದ್ದಾಯ್ತು. ಇನ್ನಾದರೂ ಓದಲು ಮನಸ್ಸು ಬರಲಿ ಎಂದು ದೇವಿಯೆದುರು ರಾಮಾಯಣ ಮಹಾಭಾರತದ ಪುಸ್ತಕಗಳನ್ನೂ ಇಟ್ಟೆ. ದೀಪ, ಆರತಿತಟ್ಟೆ, ಅರಿಶಿನಕುಂಕುಮದ ಬಟ್ಟಲು ಯಾವುದೂ ತೊಳೆಯದೇ ಇಡುವ ಪರಿಸ್ಥಿತಿಯಲ್ಲಿರಲಿಲ್ಲ. ಫ್ರಿಜ್ಜಿನ ವಾಸನೆಯನ್ನು ಹೀರಿಕೊಂಡು ಸ್ವಂತ ಪರಿಮಳವನ್ನು ಮರೆತು ಹೋದ ಅದೇ ಎರಡು ಜಾತಿಯ ಹೂಗಳನ್ನೇ ಇಡಬೇಕಾಯ್ತು. ಅದೇ ದಿನ ಪಾಟ್‌ನಲ್ಲಿದ್ದ ಶಂಖಪುಷ್ಪ ಬಳ್ಳಿಗೆ ಅಪರೂಪಕ್ಕೆ ಒಂದು ನೀಲಿ ಶಂಖಪುಷ್ಪವೂ ಅರಳಿತ್ತು. ಈ ಹೂವಿಗಾಗಿಯೇ ದೇವಿ ಇಂದೇ ಪೂಜೆ ಮಾಡಿಸಿಕೊಳ್ಳುತ್ತಿದ್ದಾಳೆ ಅಂದುಕೊಂಡೆ!

ಪುಟ್ಟ ಮಕ್ಕಳೂ, ಅವರ ಅಮ್ಮಂದಿರೂ ಸೇರಿ 12 ಜನ ಬರುವವರಿದ್ದರು. ಚಿಕ್ಕ ಕವರುಗಳಲ್ಲಿ ಪ್ರತ್ಯೇಕವಾಗಿ ಡ್ರೈಫ್ರೂಟ್‌ಗಳನ್ನು ತುಂಬಿ, ಮಕ್ಕಳಿಗೆಂದು ತಂದಿದ್ದ ನೇಲ್‌ಪಾಲಿಷ್‌, ಕ್ಲಿಪ್ಪು, ಬಳೆಯನ್ನೂ ಸೇರಿಸಿ, ಅಂಗಡಿಯವ ಕೊಟ್ಟಿದ್ದ ಹೊಳೆಯುವ ಕವರಿನಲ್ಲಿ ತುರುಕಿದೆ. ಇನ್ನು ಹೆಂಗಸಿರಿಗೆ ಅವರವರ ಅಳತೆಯ ಪ್ರಕಾರ ಗಾಜಿನ ಬಳೆಗಳು. ನನಗೆ ಬೇರೆಯವರು ಕೊಟ್ಟಿದ್ದ ಬ್ಲೌಸ್‌ ಪೀಸ್‌ಗಳು ಈಗ ಉಪಯೋಗಕ್ಕೆ ಬಂದವು! ಬೇರೆಯವರು ಕೊಟ್ಟಿದ್ದರಲ್ಲೇ ಚೆನ್ನಾಗಿರುವುದನ್ನು ಆರಿಸಿಕೊಂಡಿದ್ದರಿಂದ ಖಂಡಿತವಾಗಿಯೂ ಅವುಗಳಿಂದ ಬ್ಲೌಸ್‌ ಹೊಲಿಸಿಕೊಳ್ಳಬಹುದು! ಹೆಂಗಸಿರಿಗೆಲ್ಲ ಬಿಂಗ್ಲಿಟು ಕಿವಿಯೋಲೆ, ನಮ್ಮ ಓನರ್ ಆಂಟಿ ಬಂಗಾರ ಮಾತ್ರ ಧರಿಸುವುದರಿಂದ ಅವರಿಗೆ ಕಿವಿಯೋಲೆಯ ಬದಲಿಗೆ ಬಿಂದಿ. ಇದರ ಜೊತೆಗೆ ನೋಟನ್ನಾಗಲೀ, ನಾಣ್ಯವನ್ನಾಗಲೀ ಇಡಬೇಕಲ್ಲ. ಹಾಳಾದ್ದು ಈ ಆನ್ಲೈನ್‌ ಬಂದಾಗಿನಿಂದ ದುಡ್ಡಿನ ಮುಖವನ್ನೇ ಸರಿಯಾಗಿ ನೋಡಿಲ್ಲ. ಎಲ್ಲಿಂದ ತರುವುದು? ಇವನಿಗೆ ಬೇರೆ ಸಾಮಾನುಗಳ ಜೊತೆ ಚಿಲ್ಲರೆಯನ್ನೂ ತರಲು ಹೇಳಿದ್ದೆ. ಅವರ ಬಳಿಯೂ ಸಿಗಲಿಲ್ಲವಂತೆ. ಇದ್ದಬದ್ದ ಕಡೆಯೆಲ್ಲ ಹುಡುಕಿ ಹೇಗೋ ಸಲ್ಪ ಹರಿದ ನೋಟಿನಿಂದಲೇ ಮ್ಯಾನೇಜು ಮಾಡುವ ಹಾಗಾಯ್ತು.

(ಎಡಗೈಲಿ ಕೊಟ್ಟಿದ್ದು ಬಲಗೈಗೂ ತಿಳಿಯಬಾರದು ಅನ್ನುತ್ತಾರೆ. ಅಂಥದ್ದರಲ್ಲಿ ನಾನು ಮಾಡಿದ ಇಷ್ಟು ಸಣ್ಣ ಕೆಲಸಕ್ಕೆ ಇಷ್ಟುದ್ದ ಬರೆಯುತ್ತಿದ್ದೇನೆಂದು ತಪ್ಪು ತಿಳಿದುಕೊಳ್ಳಬೇಡಿ. ನಿಮ್ಮ ಹಿತಾಸಕ್ತಿಯನ್ನು ತಲೆಯಲ್ಲಿಟ್ಟುಕೊಂಡು ಒಂದಷ್ಟು ವಿವರಗಳನ್ನು ಬರೆಯದೇ ಬಿಟ್ಟಿದ್ದೇನೆ! ಆವತ್ತಿದ್ದ ಸಮಯ ಕಡಿಮೆ. ದಿಢೀರನೇ ಮಾಡುವುದೆಂದು ನಿಕ್ಕಿ ಮಾಡಿದ್ದರಿಂದ ಟೆನ್ಶನ್ನಿಗೆ ಕೈಕಾಲೇ ಬಿದ್ದು ಹೋದಂತಾಗಿತ್ತು. ನನಗಾದ ಗಡಿಬಿಡಿಯನ್ನು ಹೇಳುವುದಷ್ಟೇ ಉದ್ದೇಶ.)

ಇಷ್ಟೆಲ್ಲ ಮಾಡುವಷ್ಟರಲ್ಲಿ ಅನ್ನಪೂರ್ಣೆಯನ್ನು ಆವಾಹನೆ ಮಾಡಿಕೊಳ್ಳುವ ಸಮಯವಾಗಿತ್ತು. ಆ ದಿನದ ಮಟ್ಟಿಗೆ ಅನ್ನಪೂರ್ಣೆಯೇನು ಅಷ್ಟೊಂದು ದಯೆ ತೋರಲಿಲ್ಲ. ಉಸ್ಳಿ ಹೋಗಿ ಕಿಚ್ಡಿಯಾಗಿತ್ತು. ಮಸಾಲೆ ರೈಸ್‌ ಮಾಡಿದ್ದು ಚಿತ್ರಾನ್ನಕ್ಕೂ ಕಡೆಯಾಗಿತ್ತು. ನನ್ನ ತಂಗಿಯಾದರೂ ಇದ್ದಿದ್ದರೆ ರುಚಿ ನೋಡಿ ಅದು ಕಮ್ಮಿ ಇದು ಜಾಸ್ತಿ ಅಂತ ಹೇಳಿ ನನಗೆ ಸಹಾಯ ಮಾಡುತ್ತಿದ್ದಳು! ಪಣಚಾಕರಿ ಕೆಲಸಕ್ಕೆ, ವೀಡಿಯೋಗ್ರಫಿ ಮಾಡುವುದಕ್ಕೆಲ್ಲ ಜನ ಬೇಕಿತ್ತು ಎಂದು ಅವಳನ್ನು ತುಂಬಾ ಮಿಸ್‌ ಮಾಡಿಕೊಂಡೆ. ಈ ಮಧ್ಯೆ ನನ್ನ ಪತಿರಾಯನ ಆಗಮನವಾಗಿ ಅವನಿಂದ ತಯಾರಾಗುವ ಅದೃಷ್ಟ ಪಾಯಸಕ್ಕೆ ಬಂತು. ತಕ್ಕಮಟ್ಟಿಗೆ ಪಾಸಿಂಗ್‌ ಮಾರ್ಕ್ಸ್‌ ಬಂದಿದ್ದು ಪಾಯಸಕ್ಕೆ ಮಾತ್ರವೇ.

ಎಲ್ಲ ತಯಾರಿಗಳು ಒಂದು ಹಂತಕ್ಕೆ ಬಂದಿದೆ ಎನ್ನುವಾಗ ನನಗೆ ತಯಾರಾಗುವ ಸಂಭ್ರಮ. ಕುಂಕುಮಕ್ಕೆ ಕರೆದು ನಾನೇ ಸೀರೆ ಉಡದಿದ್ದರೆ ಹೇಗೆ? ಫಟಾ ಫಟ್‌ ಸೀರೆಯುಟ್ಟು ಲೈಟಾಗಿ ಬಣ್ಣ ಬಳಿದುಕೊಂಡು ರೆಡಿಯಾದೆ ಎನ್ನುವಷ್ಟರಲ್ಲಿ ಎಲ್ಲರೂ ಒಬ್ಬಬ್ಬೊರಾಗಿ ಬರತೊಡಗಿದರು. ನಾನು ನನ್ನ ಟೆನ್ಶನ್ನನ್ನೂ, ಎಕ್ಸೈಟ್‌ಮೆಂಟನ್ನೂ ಸ್ವಲ್ಪವೂ ತೋರಿಸದೇ ಅವರನ್ನು ಬರಮಾಡಿಕೊಂಡೆ. ಇನ್ನೂ ಜನ ಬರುವವರಿದ್ದ ಕಾರಣ ಸ್ಟೇಜ್‌ ಖಾಲಿ ಬಿಡಬಾರದೆಂದು ಈಗಾಗಲೇ ಬಂದಿದ್ದ ಹುಡುಗಿಯಿಂದ ಶ್ಲೋಕ ಹೇಳಿಸಿದೆ. ನಂತರ ಅವಳೂ ಆಂಟಿ ನೀವೊಂದು ಹಾಡ್ಹೇಳಿ ಎಂದು ಕ್ಯೂಟಾಗಿ ಕೇಳಿದಾಕ್ಷಣ ಅದಕ್ಕೇ ಕಾದಿದ್ದೆ ಎನ್ನುವಳ ಹಾಗೆ ಹಾಡನ್ನೂ ಹೇಳಿದೆ. ಈ ಮಧ್ಯೆ ದುರ್ಗೆಕೂಸಿಗೆ ಕರೆದಿದ್ದ ಹುಡುಗಿಯೊಟ್ಟಿಗೆ ಅವಳ ಅಣ್ಣನೂ ಬಂದಿದ್ದ. ಒಟ್ಟಿಗೇ ಇಷ್ಟೊಂದು ಹೆಣ್ಣು ಜೀವಗಳನ್ನು ನೋಡಿ ಹೆದರಿದನೋ ನಾಚಿದನೋ ಗೊತ್ತಾಗಲಿಲ್ಲ. ಕರೆದರೂ ಬರದೇ ಓಡಿ ಹೋಗಿದ್ದ!

ಎಲ್ಲರೂ ಬಂದ ಮೇಲೆ ಓನರ್‌ ಆಂಟಿಯ ಕೈಯಿಂದಲೇ ಶಾರದೆಗೆ ಆರತಿ ಎತ್ತಿಸಿ ಅವರಿಗೂ ಗೌರವ ಸೂಚಿಸಿದ್ದಾಯಿತು. ಈ ಮಹಿಳಾಮಣಿಗಳ ಮಧ್ಯೆ ನನ್ನ ಪತಿರಾಯ ಒಬ್ಬ ಗಂಡು ಜೀವ. ಬೆಕ್ಕಿನಮರಿಯ ಹಾಗೆ ಸುಳಿಮಿಳಿ ಮಾಡುತ್ತಾ ಏನು ಮಾಡುವುದೆಂದು ತಿಳಿಯದೇ ಮುಖಮುಖ ನೋಡುತ್ತಿದ್ದ. ಹಾಗಾಗಿ ಅವನಿಗೆ ಅಡುಗೆ ಮನೆಯ ಜವಾಬ್ದಾರಿ ಕೊಟ್ಟಿದ್ದೆ. ಪುಟ್ಟ ದುರ್ಗೆಯರಿಗೆ ಅರಿಶಿನ ಕುಂಕುಮ ಹಚ್ಚಿ ಹೂವು ಹಣ್ಣು ಕೊಡುವಾಗ ತಮಗ್ಯಾಕೆ ಇಷ್ಟು ಮರ್ಯಾದಿ ಕೊಡುತ್ತಿದ್ದಾರೆ ಅಂತ ಅವರಿಗೆ ಮಜಾ ಅನಿಸಿತೇನೋ. ಹೊಳೆಯುವ ಬಣ್ಣದ ಕವರಿನಲ್ಲಿ ಏನಿರಬಹುದೆಂದು ಕುತೂಹಲ ಅವರಿಗೆ! ಇನ್ನೂ ಎರಡು ಮೂರು ವರ್ಷದ ಕೂಸುಗಳು. ಒಬ್ಬಳಂತೂ ಹೆಂಗಸರು ತಾಳಿಗೆ ಅರಿಶಿನ-ಕುಂಕುಮ ಹಚ್ಚಿಸಿಕೊಳ್ಳುವ ಹಾಗೆ ಅವಳ ಕುತ್ತಿಗೆಯಲ್ಲಿರುವ ದೃಷ್ಟಿ ಲಾಕೆಟ್ಟಿಗೂ ಹಚ್ಚು ಅಂತ ಹೇಳಿ ಹಚ್ಚಿಸಿಕೊಂಡಳು. ಈ ಕಾರ್ಯಕ್ರಮ ಮುಗಿಯುವವರೆಗೆ ರಾತ್ರಿ ಊಟದ ಸಮಯವೂ ಕಳೆದಿತ್ತು, ಎಲ್ಲರಿಗೂ ಹೊರಡುವ ಗಡಿಬಿಡಿ. ಹೆಂಗಸರ ಕೈಯಲ್ಲೂ ಹೊಳೆಯುವ ಕವರು ಹಿಡಿಸಿದ್ದಾಯ್ತು. ಪ್ರಸಾದದ ಲೆಕ್ಕದಲ್ಲಿ ಮಾಡಿದ್ದ ಅಡುಗೆಯನ್ನು ಕೊಟ್ಟುಕಳಿಸುವವರೆಗೆ ಹೆಂಗಸರಿಗೆ ಕುಂಕುಮ ಕೊಡುವ ಮುಖ್ಯ ಕಾರ್ಯಕ್ರಮವೇ ಮರೆತು ಹೋಗಿತ್ತು!



ನನ್ನ ಗೆಳತಿ ಬಂದವಳಿಗೆ ನನ್ನ ಸಾಹಸವನ್ನು ಸ್ವಲ್ಪ ಕೇಳು ಅಂತ ಸ್ವಲ್ಪ ಹೊತ್ತು ಕೂರಿಸಿಕೊಂಡೆ. ನನ್ನ ಕ್ಲೀನಿಂಗ್‌ನ ಗೋಳನ್ನು ಹೇಳಿದಾಗ, ನೀನು ಮಾಡಿದ್ದು ಒಳ್ಳೆಯದೇ ಆಯ್ತು ನೋಡು, ಬಂದವರಲ್ಲಿ ಕೆಲವರು ಬಾತ್ರೂಮಿಗೆ ಕೈತೊಳೆಯಲಿಕ್ಕೆ ಹೋಗಿದ್ದರು ಎಂದಳು. ಆಮೇಲೆ ಗೊತ್ತಾಗಿದ್ದು, ಅವರು ಬಾತ್ರೂಮಿನ ಲೈಟ್‌ ಹಾಕಿಕೊಳ್ಳದೆಯೇ ಹೋಗಿದ್ದರಂತೆ! ಇಷ್ಟೆಲ್ಲ ಕಷ್ಟಪಟ್ಟಿದ್ದು ನೋಟೀಸ್‌ ಆಗದೇ ಹೋಯ್ತಲ್ಲ ಎಂದು ನಿರಾಶೆ ನನಗೆ. ಹೀಗಾಗಿ ನೀನಾದರೂ ಲೈಟ್‌ ಹಾಕಿಕೊಂಡು ಹೋಗಿ ಬಾ ಎಂದು ಅವಳಿಗೆ ಹೇಳಿ ಕಳಿಸಿದ್ದೆ!

ಇಷ್ಟೆಲ್ಲ ಆಗುವವರೆಗೆ ರಾತ್ರಿ 9:30 ದಾಟಿತ್ತು. ನನಗೆ ನಾನೇನೋ ಮಾಡಿದೆ ಎನ್ನುವ ಆನಂದ. ಮಕ್ಕಳು ಬಂದು ಬಳೆ ಹಾಕಿಕೊಂಡು ವಯ್ಯಾರದಿಂದ ತೋರಿಸಿ ಹೋದರು. ಇಷ್ಟು ಕಡಿಮೆ ಸಮಯದಲ್ಲಿ ಚೆನ್ನಾಗಿ ಮಾಡಿದಿರಿ ಎಂದು ಕೆಲವರು ಮೆಸೇಜೂ ಮಾಡಿದ್ದರು. ನನಗೆ ಆದಿನ ನಿದ್ರೆ ಬಾರದಿರಲು ಅಷ್ಟು ಸಾಕಾಗಿತ್ತು!

ಇವೆಲ್ಲ ಯಾರೂ ಮಾಡದಿರುವ ಕೆಲಸವೇನಲ್ಲ. ನಮ್ಮ ಓನರ್‌ ಆಂಟಿ ಪ್ರತಿ ಹಬ್ಬಕ್ಕೂ ಎಲ್ಲರನ್ನೂ ಕುಂಕುಮಕ್ಕೆ ಕರೆದು ಎಂಟ್ಹತ್ತು ಮನೆಗೆ ಮಾಡಿದ ಅಡುಗೆಯನ್ನೆಲ್ಲ ಹಂಚುತ್ತಾರೆ. ಊರಲ್ಲಿ ನನ್ನ ವಾರಗೆಯ ಹೆಣ್ಣುಮಕ್ಕಳು ತಿಂಗಳಿಗೆ ಇಂತಹ ಒಂದೆರಡು ಕಾರ್ಯಕ್ರಮವನ್ನಾದರೂ ಮಾಡಿರುತ್ತಾರೆ. ಅತ್ತೆಮಾವನನ್ನೂ ಸಂಭಾಳಿಸಿಕೊಂಡು, ಮಕ್ಕಳನ್ನೂ ನೋಡಿಕೊಂಡು ಇವೆಲ್ಲವನ್ನ ಚಾಚೂ ತಪ್ಪದೇ ಮಾಡುತ್ತಾರೆ. ನನಗೆ ಮಾಡಬಾರದು ಅನ್ನುವುದೇನಿಲ್ಲ. ಹಾಗೆಯೇ ಮಾಡದಿದ್ದರೇನಾಗುತ್ತದೆ ಅಂತಲೂ ಅನಿಸುತ್ತಿರುತ್ತದೆ. ಭಕ್ತಿ ಮನಸ್ಸಲ್ಲಿದ್ದರೆ ಸಾಕು ಎನ್ನುವ ಅಸಡ್ಡೆ ಬೇರೆ ಸೇರಿಕೊಂಡಿದೆ. ಇದೆಲ್ಲ ಮನೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಿರುವುದರ ಸೈಡ್‌ ಇಫೆಕ್ಟು ಅಂತ ನನ್ನ ವಿಶ್ಲೇಷಣೆ.

ಊರಲ್ಲಿ ಎಲ್ಲ ಆಚರಣೆಗಳಲ್ಲಿ ಪಾಲ್ಗೊಂಡರೂ ಇಲ್ಲಿ ಎಂದಿಗೂ ಇವುಗಳನ್ನೆಲ್ಲ ಮಾಡದ ನನಗೆ ಇದೊಂದು ವಿಶೇಷ. ದಿನವೂ ಮನೆ ಗುಡಿಸಿ ಒರೆಸಿ ಮಾಡಲು ಆಲಸ್ಯ. ಈವತ್ತಿಗೂ ಬ್ಯಾಚ್ಯುಲರ್‌ ರೀತಿಯೇ ಬದುಕು. ಯಾರಾದರೂ ನೋಡಿದರೆ ಏನಾದರೂ ಅಂದುಕೊಂಡಾರೆಂದು ಬಾಗಿಲು ಹಾಕಿಕೊಂಡು ಗುಮ್ಮನ ಹಾಗೆ ಕೂತಿರುವವರ ಪೈಕಿ ನಾನು. ಯಾರನ್ನಾದರೂ ಮನೆಗೆ ಕರೆಯಬೇಕೆಂದರೆ ಅಥವಾ ಅವರೇ ಬರುತ್ತೇನೆಂದರೆ ಮನೆ ಸ್ವಚ್ಛ ಮಾಡಬೇಕಲ್ಲಾ ಎನ್ನುವುದರೊಂದಿಗೆ ಚಿಂತೆ ಆರಂಭವಾಗುತ್ತದೆ. ಮನೆಯೂ ಚಿಕ್ಕದು, ಜಾಗವೂ ಸಾಲದೆಂಬ ಯೋಚನೆ ಇದಕ್ಕೆ ಸಾಥ್‌ ಕೊಡುತ್ತದೆ. ಯಾರನ್ನೂ ಕರೆದಿಲ್ಲವಂತಲ್ಲ. ಆದರೂ ನಾಲ್ಕು ಜನ ಊಟಕ್ಕೆ ಬರುತ್ತಾರೆಂದರೆ ಚಕಚಕನೇ ಮಾಡಿ ಬಡಿಸುವ ರೂಢಿಯಿಲ್ಲ. ಯೂಟ್ಯೂಬು ನೋಡಿ ಮಾಡಬೇಕಲ್ಲ!

ಯಾವ ಆಚರಣೆಯೂ ನಾನೊಬ್ಬಳು ಮಾಡಿದ್ದರಿಂದ ಮುಂದುವರೆಯುತ್ತದೆ ಅಥವಾ ಮಾಡದಿದ್ದರೆ ಅಳಿದುಹೋಗುತ್ತದೆ ಎನ್ನುವ ಭ್ರಮೆ ನನಗಿಲ್ಲ. ಆದರೆ ಇವೆಲ್ಲ ಮಾಡುವುದರಿಂದ ಮನಸಿಗಾಗುವ ಸಂಸ್ಕಾರ ಎಂತಹುದೆಂದು ಮಾಡಿದಾಗಲೇ ನನ್ನ ಅನುಭವಕ್ಕೆ ಬಂದದ್ದು. ನಮ್ಮ ಆಚಾರವಿಚಾರಗಳು, ನಮ್ಮ ಸಂಸ್ಕೃತಿ-ಪರಂಪರೆಗಳು ನಮ್ಮ ಭಾವ ಸೌಂದರ್ಯವನ್ನು ಹೆಚ್ಚು ಮಾಡುವುದರಲ್ಲಿ ಸಂದೇಹವಿಲ್ಲವೆನಿಸಿದ್ದು ಆಗಲೇ. ಈ ನಡುವೆ ಡಿವಿಜಿಯವರು ಸಂಸ್ಕೃತಿ ಪುಸ್ತಕದಲ್ಲಿ ಹೇಳಿದ್ದು ನೆನಪಿಗೆ ಬಂತು. ಅದನ್ನು ಇಲ್ಲಿ ಹಾಗೆಯೇ ಪೇಸ್ಟು ಮಾಡಿದ್ದೇನೆ.

“ಸೊಗಸೆಂಬುದು ಎಲ್ಲರೂ ಎಲ್ಲೆಲ್ಲಿಯೂ ಬಯಸುವ ಒಂದು ಪರಿಸ್ಥಿತಿಯಲ್ಲವೇ? ನಾವು ಮೈಯನ್ನು ತೊಳೆದು ವಸ್ತ್ರಾಭರಣಗಳಿಂದ ಸೊಗಸುಪಡಿಸುತ್ತೇವೆ. ಮನೆಗೆ ಸುಣ್ಣ ಬಣ್ಣ ಮಾಡಿಸುತ್ತೇವೆ. ನಮ್ಮ ಕಣ್ಣಿಗೆ ಕಾಣಬರುವುದರಲ್ಲೆಲ್ಲ ಅಂದ ಚಂದಗಳನ್ನು ಹುಡುಕುತ್ತೇವೆ. ಅದರಂತೆ ನಮ್ಮ ಲೋಕಸಂಬಂಧಗಳಲ್ಲಿಯೂ ಒಂದು ಇಂಪು ಬೇಡವೇ ? ಆ ನಡೆನುಡಿಗಳ ಸೊಗಸೇ ಸಂಸ್ಕೃತಿ. ಅದು ಭಾವಸೌಂದರ್ಯ ಮತ್ತು ಶೀಲಸೌಂದರ್ಯ, ಆ ಆಭರಣವನ್ನು ತೊಡದಿರುವ ಜೀವ ಕಾಡುಮೃಗ, ನಾವು ದೇಹಗೇಹಗಳನ್ನು ಚೊಕ್ಕಟ ಚೆಲುವೆನಿಸಲು ಪ್ರಯತ್ನ ಪಡುವಂತೆ ನಮ್ಮ ಲೋಕಬಾಂಧವ್ಯವನ್ನು ರಮ್ಯವೆನಿಸುವುದಕ್ಕೂ ಬುದ್ಧಿಪೂರ್ವಕವಾಗಿ ಪರಿಶ್ರಮಿಸಬೇಕು. ಅದೇ ಸಂಸ್ಕೃತಿಯ ಸಾರಾಂಶ.

ನಡೆ ನುಡಿಗಳ ಚೊಕ್ಕಟವೇ ಸಂಸ್ಕೃತಿ. ಚೊಕ್ಕಟವೆಂದರೆ ಕೊಳಕನ್ನು ಕಳೆದುಹಾಕುವುದು. ಆದದ್ದರಿಂದ ಸಂಸ್ಕೃತಿಯು ಮನಸ್ಸನ್ನು ತಿಕ್ಕಿ, ತೊಳೆದು. ಶುಚಿಮಾಡುವ ಕೆಲಸ.

ಸಂಸ್ಕೃತಿಯಲ್ಲಿ ಜೀವನ ಸಂದರ್ಭಗಳ ಯುಕ್ತಾಯುಕ್ತ ವಿವೇಚನೆ ಒಂದು ಅಂಶ; ವಸ್ತುಗಳ ಮೂಲ್ಯ ತಾರತಮ್ಯಗಣನೆ ಇನ್ನೊಂದಂಶ; ಪರೇಂಗಿತ ಪರಿಜ್ಞಾನ ಮತ್ತೊಂದು ಅಂಶ; ಸರಸತಾಭಿರುಚಿ ಮತ್ತೊಂದು ಅಂಶ; ಧರ್ಮ ಚಿಂತನೆಯ ಜಾಗರೂಕತೆ ಮತ್ತೊಂದಂಶ. ಆತ್ಮಶೋಧನೆ ಆತ್ಮಸಂಯಮಗಳು ಮತ್ತೊಂದಂಶ, ಹೀಗೆ ನಾನಾ ವಿಜ್ಞಾನ ನಾನಾ ವಿವೇಕಗಳ ಸಮಾವೇಶದ ಫಲಿತಾಂಶ ಸಂಸ್ಕೃತಿ.”

ನಾನು ನೋಡಿ ಬೆಳೆದ ಸಂಸ್ಕೃತಿಯ ಅನುಸರಣೆ ನನ್ನ ಪುಟ್ಟ ಪ್ರಪಂಚವನ್ನು ಆ ದಿನದ ಮಟ್ಟಿಗಾದರೂ ರಮ್ಯವೆನಿಸುವಂತೆ ಮಾಡಿದ್ದು ನಿಜ.

ಬೇರೆಯವರು ಕರೆದಾಗ ಅಯ್ಯೋ ಹೋಗಬೇಕಲ್ಲ ಅಂದುಕೊಂಡು ಹೋಗುವವಳು ನಾನು. ಕೈಬೀಸಿಕೊಂಡು ಹೋದವಳಿಗೆ ಅವರು ಏನಾದರೂ ಕೈತುಂಬಿಸಿ ಕೊಡುತ್ತಿದ್ದರು. ಅದರ ಮೇಲೂ ನನ್ನದು ಮನಸ್ಸಿನೊಳಗೇ ಏನಾದರೂ ಅಸಮಧಾನ ಇರುತ್ತಿತ್ತು. ಅಷ್ಟೆಲ್ಲ ಮಾಡುವುದರ ಹಿಂದಿನ ಶ್ರಮ ಶ್ರದ್ಧೆ ಮನಸ್ಸಿಗೆ ಮುಟ್ಟುತ್ತಿರಲಿಲ್ಲ. ಆ ದಿನ ನನಗೆ ನಿದ್ರೆ ಬೇಗ ಹತ್ತಲಿಲ್ಲ. ಅವರ್ಯಾರೂ ನಾನು ಕರೆದ ಕೂಡಲೇ ಬರಲೇಬೇಕೆಂದಿರಲಿಲ್ಲವಲ್ಲ! ಅವರಲ್ಲಿ ಇಬ್ಬರು ಆಫೀಸು ಕೆಲಸ ಮುಗಿಸಿ ಸುಸ್ತಾಗಿ ಬಂದವರು. ಇನ್ನೊಬ್ಬರಿಗೆ ಇದನ್ನು ಮುಗಿಸಿ ಮನೆಗೆ ಹೋಗಿ ಅಡುಗೆ ಮಾಡಬೇಕು. ಮತ್ತೊಬ್ಬರು ಹುಷಾರಿಲ್ಲದಿದ್ದರೂ ಬಂದಿದ್ದರು. ಇನ್ನುಳಿದವರು ಇನ್ನೆಲ್ಲೋ ಹೋಗಿ ಬಂದವರು. ಆದರೂ ಬಂದಿದ್ದರು. ಅವರನ್ನು ಬರುವಂತೆ ಮಾಡಿದ್ದು ಯಾವುದು? ನನ್ನ ಮೇಲಿದ್ದ ಆದರವಾ, ದೇವರ ಮೇಲಿದ್ದ ಭಕ್ತಿಯಾ? ನನಗೆ ಎಲ್ಲ ಮಕ್ಕಳು ಬಂದ ಮೇಲೆ ಎಲ್ಲರಿಗೂ ಒಟ್ಟಿಗೆ ಕುಂಕುಮವಿಟ್ಟು ಅವರ ಕಣ್ಣಲ್ಲಿ ಖುಷಿಯನ್ನು ನೋಡುವ ಆಸೆ. ನಾನು ದುರ್ಗೆ ಕೂಸಾಗಿ ಪಟ್ಟ ಖುಷಿಯನ್ನು ಆ ಮಕ್ಕಳಲ್ಲಿಯೂ ಒಟ್ಟೊಟ್ಟಿಗೇ ನೋಡುವಾಸೆ. ಮೊದಲು ಬಂದಿದ್ದವರು ಅರ್ಧಗಂಟೆಗೂ ಹೆಚ್ಚು ಹೊತ್ತು ಕಾಯಬೇಕಾಯ್ತು. ಎಲ್ಲರನ್ನು ಕರೆಯುವುದು ಎಷ್ಟು ದೊಡ್ಡದೋ ಕರೆದಾಗ ಬಂದು, ಇದ್ದು, ಕಾದು ವಾತಾವರಣ ಕಳೆಗಟ್ಟುವ ಹಾಗೆ ಮಾಡುವುದೂ ದೊಡ್ಡದೆಂದು ನನಗನಿಸಿತು. ಕಪಾಟಿನಲ್ಲಿರುವ ಬ್ಲೌಸ್‌ಪೀಸುಗಳು ನಾನು ಎಷ್ಟು ಜನರ ಮನೆಗೆ ಹೋಗಿ ಆತಿಥ್ಯ ಪಡೆದಿದ್ದೇನೆಂಬುದನ್ನು ಈಗಾಗಲೇ ತೋರಿಸಿದ್ದವು. ಜೊತೆಗೆ ಒಮ್ಮೆಯಾದರೂ ನಾನು ಅವರನ್ನೆಲ್ಲ ಕರೆದು ಊಟಹಾಕಬೇಕೆಂಬುದನ್ನೂ ನೆನಪಿಸಿದ್ದವು.

ಅವರ್ಯಾರಿಗೂ ಇದು ಹೊಸದೇನಲ್ಲ. ನಾನು ಕೊಡುವ ಬಳೆ ಕ್ಲಿಪ್ಪಿನ ಆಸೆಯಿಂದ ಕಾದವರೂ ಅಲ್ಲ. ಇಲ್ಲಿ ಅವರಿಗಾದ ಲಾಭವೇನೂ ಇಲ್ಲ. ಆದ ಲಾಭವೆಲ್ಲ ನನಗೆ. ಇದೆಲ್ಲ ಮಾಡಿದ ಆನಂದವೂ ನನಗೆ. ಎಷ್ಟುದ್ದ ಬರೆದರೂ ನನ್ನಲ್ಲುಂಟಾದ ಸದ್ಭಾವವನ್ನು ವರ್ಣಿಸುವ ಸಾಮರ್ಥ್ಯ ನನಗಿಲ್ಲ. ಆ ತಾಯಿ ನನ್ನಿಂದ ಇಷ್ಟನ್ನಾದರೂ ಮಾಡಿಸಿಕೊಳ್ಳುವ ಮನಸ್ಸು ಮಾಡಿದಳಲ್ಲ ಎನ್ನುವ ಭಾವವೇ ನನ್ನ ಕಣ್ಣನ್ನು ಈಗಲೂ ಒದ್ದೆಯಾಗಿಸುತ್ತದೆ. ಆಕೆಗೆ ನನ್ನ ಮೇಲೆ ಅದೆಷ್ಟು ಕರುಣೆಯೆಂದು ಅನಿಸುತ್ತದೆ. ಅಪ್ಪ ಅಮ್ಮ ಏನಾದರೂ ದಾನ ಮಾಡಿದರೆ ಹೇಳುವ ಮಾತು, “ಹೂ ಕೊಡುವಲ್ಲಿ ಹೂವಿನ ಎಸಳನ್ನಾದರೂ ಕೊಡುವುದು”. ಇದರ ಭಾವ ನನ್ನ ಅನುಭವಕ್ಕೆ ಬಂತೆಂದು ಅಂದುಕೊಂಡಿದ್ದೇನೆ. ಇನ್ನೂ ಮಾಡಬೇಕಿತ್ತು, ಇನ್ನೂ ಕೊಡಬೇಕಿತ್ತು. ಆದರೆ ಕೈಲಾದಷ್ಟನ್ನು ಮಾಡಿದ್ದೇನೆನ್ನುವ ಭಾವ. ಊರಲ್ಲೆಲ್ಲ ಎಷ್ಟು ಜನರನ್ನು ಕರೆಯುತ್ತಾರೆ, ಎಷ್ಟೆಲ್ಲ ಅನ್ನದಾನ ಮಾಡುತ್ತಾರೆ, ಅವರಿಗೆ ಎಷ್ಟೆಲ್ಲ ಒಳ್ಳೆಯ ಅನುಭೂತಿಯಾಗಿರಬೇಡ ಎಂದೂ ಅಂದುಕೊಂಡೆ. ಇದೇ ರೀತಿಯ ಅನುಭವ ರಾಮನ ಪ್ರತಿಷ್ಠೆಗೆಂದು ಬಿಲ್ಡಿಂಗಿನ ಎಲ್ಲರನ್ನೂ ಸಂಜೆ ಮನೆಗೆ ಕರೆದು ಭಜನೆ ಆರತಿ ಎಲ್ಲ ಮಾಡಿದಾಗ ಆಗಿತ್ತು. ಆದರೆ ಆವಾಗ ಇಷ್ಟು ಗಡಿಬಿಡಿಯಾಗಿರಲಿಲ್ಲ. ಎಲ್ಲವನ್ನೂ ಸ್ಲೋ ಮೋಷನ್ನಿಗೆ ತಂದುಕೊಂಡು ಮಾಡುವ ನಾನು, ಸ್ವಲ್ಪ ಹಸಿವು ಆಯಾಸವನ್ನೂ ತಡೆಯದ ನಾನು, ಆದಿನ ಎಲ್ಲವನ್ನೂ ತಡೆದುಕೊಂಡು ಚುರುಕಿನಿಂದ ಅಂದುಕೊಂಡದ್ದನ್ನೆಲ್ಲ ತಕ್ಕಮಟ್ಟಿಗೆ ಮಾಡಿದೆನೆಂದರೆ ಅದೆಲ್ಲ ಅವಳಿಚ್ಛೆಯೇ ಇರಬೇಕೆಂದು ಭಾವಿಸುತ್ತೇನೆ. ಚಿಕ್ಕವಳಿರುವಾಗ ದುರ್ಗೆಕೂಸಾಗಿ ಎಷ್ಟು ಖುಷಿ ಪಟ್ಟೆನೋ, ಈಗ ದೊಡ್ಡವಳಾಗಿ ಈ ಮಕ್ಕಳನ್ನು ದುರ್ಗೆಕೂಸು ಮಾಡಿದಾಗಲೂ ಅಷ್ಟೇ ಖುಷಿಪಟ್ಟಿದ್ದೇನೆ. ಆಗ ಅರಿಶಿನಕುಂಕುಮ ಹಚ್ಚಿಸಿಕೊಂಡಿದ್ದೂ, ಈಗ ಇವರಿಗೆ ಹಚ್ಚಲು ಸಾಧ್ಯವಾಗಿದ್ದು ಎರಡೂ ನನ್ನ ಸೌಭಾಗ್ಯವೇ ಸರಿ. ಅಷ್ಟಾದರೂ ಯಾವ ಆಯಾಸವೂ ಆದಿನ ನನ್ನನ್ನು ಬಾಧಿಸಲಿಲ್ಲ. ದೇವರ ಕಾರ್ಯವನ್ನು ಎಷ್ಟು ಮಾಡಿದರೂ ಆಯಾಸವಾಗುವುದಿಲ್ಲವಂತೆ! ಅತ್ತೆ ಹೇಳಿದ್ದು ನೆನಪಾಯ್ತು.

ಮಾಡಿದ ಅಡುಗೆ ಅಷ್ಟೇನೂ ರುಚಿಯಾಗಿರಲಿಲ್ಲ, ಯಾವುದಕ್ಕೆ ಕರೆದಿದ್ದೆನೋ ಅದನ್ನೇ ಮರೆತಿದ್ದೆ. ಮುಖ್ಯ ಕೆಲಸವಾಗಿದ್ದ ಹೆಂಗಸರಿಗೆ ಕುಂಕುಮ ಹಚ್ಚುವುದನ್ನೇ ಮರೆತಿದ್ದೆ. ಎಲ್ಲರೂ ಬರಲಿ ಅಂತ ಬಂದವರನ್ನೂ ಕಾಯಿಸಿ ಎಲ್ಲರಿಗೂ ತಡಮಾಡಿದೆ ಅಂತ ಇವನೂ ಸಲ್ಪ ತಕರಾರು ಮಾಡಿದ. ಯಾವುದೂ ನನ್ನ ಆನಂದಕ್ಕೆ ಭಂಗ ತರಲಿಲ್ಲ.

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ।

ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।

ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು?

ಒರಟು ಕೆಲಸವೋ ಬದುಕು – ಮಂಕುತಿಮ್ಮ ಎಂದುಕೊಂಡು ಸಮಾಧಾನದಿಂದಿದ್ದೆ.

ಮುಂದೆ ಇಂತಹ ಸಂದರ್ಭದಲ್ಲಿ ಟೆನ್ಶನ್ನು ಮಾಡಿಕೊಳ್ಳದೇ ಹೇಗೆ ಪೂರ್ವತಯಾರಿ ಮಾಡಿಕೊಳ್ಳಬೇಕೆಂಬ ಪಾಠವೂ ನನಗೆ ಆದಂತಾಗಿದೆ. ಇದಕ್ಕೆ ಸಂಬಂಧಿಸಿದ ಟೈಮ್‌ ಮ್ಯಾನೇಜ್ಮೆಂಟ್‌, ಪ್ರಯಾರಿಟೀಸ್‌ ಎಲ್ಲ ಅರ್ಥವಾದವು. ಅತ್ತೆಗೂ ಅಮ್ಮನಿಗೂ ಪೋಟೋ ವೀಡಿಯೋಗಳನ್ನು ಕಳಿಸಿ ಶಹಭಾಸ್‌ ಅನಿಸಿಕೊಂಡಿದ್ದೇನೆ. ಮುಂದಿನ ನವರಾತ್ರಿಯಷ್ಟರಲ್ಲಿ ಈ ವಿಷಯದಲ್ಲಿ ಪ್ರೋ ಆಗಿರುತ್ತೇನೆಂದು ನಿರೀಕ್ಷಿಸಬಹುದು. ಏನೋ ಮಾಡಿ ಅಲ್ಪಸ್ವಲ್ಪ ಪುಣ್ಯ ಸಂಪಾದಿಸಿಕೊಂಡೆ ಅಂದುಕೊಂಡಿದ್ದೆ. ಆದರೆ ಈಗ ಇಷ್ಟೆಲ್ಲ ಬರೆದು ಅದನ್ನು ಓದುವ ತಲೆನೋವನ್ನು ನಿಮಗೆ ಕೊಟ್ಟು ಮಾಡಿದ ಪುಣ್ಯವನ್ನೆಲ್ಲ ವ್ಯಯಮಾಡಿಕೊಂಡೆನೇನೋ!

 

-      ಸುಮನ