Powered By Blogger

ಗುರುವಾರ, ಮೇ 1, 2014

ಸಹೃದಯಕಾಲ-೧೦:ನಾಂದೀಪದ್ಯದ ಮುಕ್ತಕ


















ಅವಧಾನ ಪದ್ಯಗಳೆಲ್ಲವೂ ಮುಕ್ತಕಗಳೇ. ಮುಕ್ತಕವೆಂದರೆ ಮುಕ್ತವಾಗಿರುವುವು ಎಂಬುದೂ ಹೌದು. ಹಾಗೆಯೇ ಮುತ್ತುಗಳೆಂದೂ ಹೌದು,  ನಿಜಾರ್ಥದಲ್ಲಿ ಕೂಡ ಈ ಪದ್ಯಗಳೆಲ್ಲ ಮುತ್ತುಗಳೆಂಬುದೇ ನಿಜ. ಅಲ್ಲಿನ ಸ್ವಾರಸ್ಯವೆಂದರೆ ಪೃಚ್ಛಕರು ಕೇಳಿದ ವಸ್ತುವನ್ನಾಧರಿಸಿ ಅವಧಾನಿಗಳು ಆಶುವಾಗಿ ಪದ್ಯ ರಚನೆ ಮಾಡುತ್ತಾರೆಂಬುದು. ಬಹಳಷ್ಟು ಜನರಿಗೆ ಅವಧಾನದ ಸ್ವರೂಪ ಹಾಗೂ ವೈಶಿಷ್ಟ್ಯಗಳು ಗೊತ್ತಿರುವ ವಿಷಯವೇ ಆದ ಕಾರಣ ಅದನ್ನು ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಅಲ್ಲದೇ ಅದಾಗಲೇ ಅವಧಾನದ ಬಗ್ಗೆ ಹಿಂದೊಮ್ಮೆ ಲೇಖನವನ್ನೂ ಬರೆದಿದ್ದೆ. ಹಿಂದೆ ನಡೆದ ಅವಧಾನದ ಪದ್ಯಗಳಲ್ಲಿ ಕೆಲವನ್ನು ಇದೇ ಕಥಾಕಾಲದಲ್ಲಿ ಪ್ರಸ್ತುತಪಡಿಸಿದ್ದೆ ಕೂಡ. (ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನ)
ಇಂದು ಕೂಡ ಶತಾವಧಾನಿ ಡಾ||ಗಣೇಶ್ ಅವರ ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಒಂದು ಪದ್ಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದರ ಸ್ವಾರಸ್ಯವನ್ನು ಹೇಳುವ ಮೊದಲು, ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಸ್ವಾರಸ್ಯವನ್ನು ಹೇಳುವುದು ಯುಕ್ತವೆನ್ನಿಸುತ್ತದೆ. ಸಂಪೂರ್ಣವಾಗಿ ಕನ್ನಡದಲ್ಲೇ ಶತಾವಧಾನ ನಡೆದ ದಾಖಲೆ ಹಿಂದಾಗಿರಲಿಲ್ಲ. ಹಾಗಾಗಿ ಪದ್ಯಪಾನ ಸಂಸ್ಥೆಯವರು ಆಯೋಜಿಸಿದ್ದ ಮೊತ್ತಮೊದಲ ತುಂಬುಗನ್ನಡದ ಶತಾವಧಾನ ಕಳೆದ ೨೦೧೨ನೇ ಇಸವಿಯ ನವೆಂಬರ್ ೩೦ರ ಅಪರಾಹ್ಣದಿಂದ ಪ್ರಾರಂಭವಾಗಿ ಡಿಸೆಂಬರ್ ೨ರ ರಾತ್ರಿಯವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪದಲ್ಲಿ ನಡೆದದ್ದು ಸಹೃದಯರೆಲ್ಲರಿಗೂ ಅವಧಾನರಸಿಕರೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಅವಧಾನದಲ್ಲಿ ಪೃಚ್ಛಕನಾಗಿ ಪಾಲ್ಗೊಳ್ಳುವ ಸುಯೋಗವೂ ನನ್ನ ಪಾಲಿಗೆ ಒದಗಿತ್ತು. ಅಲ್ಲದೇ  ಶತಾವಧಾನಿ ಗಣೇಶ್ ಅವರನ್ನು ನಾನು ಮುಖತಃ ನೋಡಿದ್ದೂ ಇಲ್ಲೇ ಮೊತ್ತಮೊದಲಬಾರಿಗೆ !! ಅಲ್ಲದೇ ಅವಧಾನವನ್ನು ನೇರವಾಗಿ ಪೂರ್ಣಸ್ವರೂಪದಲ್ಲಿ ಮೊದಲಬಾರಿಗೆ ನೋಡಿದ್ದೂ ಇದೇ ವೇದಿಕೆಯಲ್ಲಿ ಅದೂ ಪೃಚ್ಛಕನಾಗಿ !!
"ಶತಾವಧಾನ ಶಾಶ್ವತೀ"  ಮುಖಪುಟ 
































ಇನ್ನು ಅವಧಾನದ ಆದ್ಯಂತ ನಡೆದ ವಾಗ್ದೇವಿಯ ವಿಲಾಸದಲ್ಲಿ ಅದೆಷ್ಟು ರಸಮಯ ಪ್ರಸಂಗಗಳು ನಡೆದವೋ ಅವನ್ನೆಲ್ಲ ಇಲ್ಲಿ ಬರೆಯುವುದಂತೂ ಅಸಾಧ್ಯವೇ ಸರಿ!!! ಆದರೆ ಅವಧಾನ ಪದ್ಯಗಳಲ್ಲಿ ಕೆಲವನ್ನಾದರೂ ಆಗಾಗ ಹಂಚಿಕೊಳ್ಳುತ್ತೇನೆಂದು ಆಶ್ವಾಸನೆ ನೀಡಬಲ್ಲೆ.
ಈ ಅವಧಾನದ ಪದ್ಯಗಳೆಲ್ಲವೂ "ಶತಾವಧಾನಶಾಶ್ವತೀ" ಎಂಬ ಪುಸ್ತಕ ರೂಪದಲ್ಲಿ ಅದಾಗಲೇ ಪ್ರಕಟವಾಗಿವೆ. ಅಲ್ಲದೇ ಸಾಂದ್ರಮುದ್ರಿಕೆಗಳ(DVD) ರೂಪದಲ್ಲಿಯೂ ಲಭ್ಯವಿದೆ.(ಆಸಕ್ತರು ಪ್ರತಿಗಳಿಗೆ "ಪದ್ಯಪಾನ" ಇಲ್ಲಿ ಕ್ಲಿಕ್ಕಿಸಿ)

ಈ ಶತಾವಧಾನದ ಮೊದಲನೆಯ ನಾಂದಿ ಪದ್ಯ "ಖಚರಪ್ಲುತ" ಎಂಬ ವಿಭಿನ್ನವಾದ ವಿರಳಪ್ರಚುರವಾದ ಛಂದಸ್ಸಿನಲ್ಲಿದೆ. ಆ ಪದ್ಯವನ್ನೇ ಈ ಸಂಚಿಕೆಯ ಸಹೃದಯಕಾಲಕ್ಕೆ ಆರಿಸಿಕೊಂಡಿದ್ದು-

ರಕ್ತಚಂಚುಪದಂ ಚಿರನೀರಕ್ಷೀರವಿವೇಕವಿದಾಂವರಂ 
ಯುಕ್ತಸದ್ದ್ವಿಜಪಕ್ಷಮಲಾ ಕೀಲಾಲನಿವಾಸಮತಿದ್ರುತಂ
ಸಕ್ತಮಾನಸಮಾನಮೆನಲ್ ಮಜ್ಜಿಹ್ವೆ ನಿರಾಳಮರಾಳಮೆಂ-
ದುಕ್ತಿಶಕ್ತಿಶಿವೇ! ಇದನೇರುತ್ತೀ ಅವಧಾನಮನೋವುದೌ||


 ಶ್ಲೇಷದಲ್ಲಿ ಅವಧಾನಿಗಳು ತಮ್ಮ ನಾಲಗೆ ಹಾಗೂ ಹಂಸವನ್ನು ಸಮೀಕರಿಸುತ್ತಾರೆ. 
ಅನ್ವಯಾರ್ಥ: ರಕ್ತಚಂಚುಪದಂ= ರಕ್ತವರ್ಣದ ಚಂಚು ಹಾಗೂ ಪಾದವುಳ್ಳದ್ದು (ಹಂಸ)/ ಕೆಂಪಾದ ತುದಿಯನ್ನು ಹಾಗೂ ಕೆಂಪಾದ ಪದ/ಸ್ಥಾನವನ್ನು ಹೊಂದಿರುವುದು(ನಾಲಗೆ). ಚಿರನೀರಕ್ಷೀರವಿವೇಕವಿದಾಂ ವರಂ= ಯಾವತ್ತೂ ನೀರು ಹಾಗೂ ಹಾಲಿನ ವ್ಯತ್ಯಾಸವನ್ನು ಅರಿಯುವ ವಿವೇಕವುಳ್ಳವರಲ್ಲಿ ಉತ್ತಮವಾದದ್ದು.(ರಾಜಹಂಸ ಹಾಲು ಮತ್ತು ನೀರನ್ನು ಮಿಶ್ರಮಾಡಿ ಕೊಟ್ಟಾಗ ಹಾಲನ್ನು ಮಾತ್ರ ಸ್ವೀಕರಿಸಿ ನೀರನ್ನು ಬಿಡುತ್ತದೆ ಎಂದು ಕವಿಸಮಯ. ಹಾಗಾಗಿ 'ನೀರಕ್ಷೀರವಿವೇಕ'ಹೊಂದಿರುವುದಾಗಿದೆ.ನಾಲಿಗೆಗೂ ನೀರು ಹಾಗೂ ಹಾಲಿನ ವ್ಯತ್ಯಾಸ ತಿಳಿಯುವುದರಿಂದ ಅದೂ ನೀರಕ್ಷೀರವಿವೇಕ ಹೊಂದಿದೆ.)ಯುಕ್ತಸದ್ದ್ವಿಜಪಕ್ಷಮಲಾ= ಯುಕ್ತವಾದ ಸದ್ದ್ವಿಜಪಕ್ಷ ಅಂದರೆ ಒಳ್ಳೆಯ ಹಕ್ಕಿಗಳ ಜೊತೆಯಲ್ಲಿರುವುದು(ಹಂಸ), ಒಳ್ಳೆಯ ಹಲ್ಲು(ದ್ವಿಜ)ಗಳ ಪಕ್ಕದಲ್ಲಿರುವುದು(ನಾಲಗೆ), ಕೀಲಾಲನಿವಾಸಂ= ನೀರಿನಲ್ಲಿ ವಾಸಮಾಡುವುದು(ಹಂಸ), ಜೊಲ್ಲಿನಲ್ಲಿ ಇರುವುದು (ನಾಲಗೆ), ಅತಿದ್ರುತಂ=ವೇಗವಾಗಿ ಸಂಚರಿಸುವುದು, ಸಕ್ತಮಾನಸಮಾನ= ಮಾನಸ ಸರೋವರದಲ್ಲಿ ಸಕ್ತವಾಗಿರುವುದು(ಹಂಸ), ಮನಸ್ಸಿನ ಹಿಡಿತದಲ್ಲಿರುವುದು (ನಾಲಗೆ), ಮಜ್ಜಿಹ್ವೆ=ನನ್ನ ನಾಳಗೆ ನಿರಾಳಮರಾಳಮೆಂದು= ನಿರಾಳವಾದ ಹಂಸವೆಂದು ಉಕ್ತಿಶಕ್ತಿಶಿವೇ= ಸರಸ್ವತಿಯೇ, ಇದನೇರುತ್ತೀ=ಇದನ್ನು ಏರುತ್ತಾ ಈ ಅವಧಾನಮನೋವುದೌ= ಅವಧಾನವನ್ನು ನೀನು ಮೆಚ್ಚುವಂತಾಗಲಿ.

ಇಲ್ಲಿ ಅವಧಾನದ ಪ್ರಾರಂಭದಲ್ಲಿ ಸರಸ್ವತಿಯ ಸ್ತುತಿ ಮಾಡುತ್ತಾ "ಸರಸ್ವತಿಯೇ, ನೀನು ಹಂಸವನ್ನೇರಿ ಸಂಚರಿಸುವವಳು,  ರಕ್ತಚಂಚುಪದವಾದ, ನೀರಕ್ಷೀರವಿವೇಕವಿದಾಂ ವರಮಾದ, ಯುಕ್ತಸದ್ದ್ವಿಜಪಕ್ಷವಾದ, ಕೀಲಾಲನಿವಾಸನವಾದ, ಅತಿದ್ರುತವಾದ, ಸಕ್ತಮಾನಸಮಾನವಾದ ನನ್ನ ನಾಲಗೆಯನ್ನೇ ನೀನು ಹಂಸವೆಂದು ತಿಳಿದು ಇದನ್ನೇ ಏರು. ನನ್ನ ಜಿಹ್ವೆಯಲ್ಲಿ ನಲಿ" ಎಂಬ ಅರ್ಥವನ್ನು ಹೊಮ್ಮಿಸಿ ಉತ್ತಮ ರಸಮಯ ಪದ್ಯವನ್ನು ಆ ವೇದಿಕೆಯಲ್ಲಿ ಆಶುವಾಗಿ ಹೊಮ್ಮಿಸಿದ್ದಾರೆ ಶತಾವಧಾನಿಗಳು.ಇಲ್ಲಿ ಸಭಂಗ ಅಭಂಗಶ್ಲೇಶಗಳೆರಡೂ ಇವೆ. ಅಲ್ಲದೇ ಜಿಹ್ವೆಯನ್ನು ಹಂಸವೆಂದು ತಿಳಿದು ಸರಸ್ವತಿ ಏರಲಿ ಎಂಬಲ್ಲಿ ಭ್ರಮಾಲಂಕಾರದ ಛಾಯೆ ಕೂಡ ಬರುತ್ತದೆ. ಹಾಗೆಯೇ  ಛಂದಸ್ಸು "ಖಚರ ಪ್ಲುತ" ಅಂದರೆ "ಹಕ್ಕಿಯ ನೆಗೆತ". ಪದ್ಯದಲ್ಲಿ ಕೂಡ ಹಂಸದ ಕುರಿತಾಗಿರುವುದೂ ಅಲ್ಲದೇ ಸರಸ್ವತಿ ಅದನ್ನೇರುವ ಉಲ್ಲೇಖವಿರುವುದು ಇವೆಲ್ಲ ಛಂದಸ್ಸಿನ ಹೆಸರಿನ ಜೊತೆಗೆ ಬಹುವಿಧವಾಗಿ ಹೊಂದಿರುವುದೂ ಒಂದು ವಿಶೇಷ. ಅಷ್ಟೇ ಸ್ವಾರಸ್ಯ!!

ಇಂತಹ ರಸಾಸ್ವಾದವನ್ನು ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟವಲ್ಲದೇ ಇನ್ನೇನು.?

7 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಬಹಳ ರಸವತ್ತಾಗಿದೆ ಬರಹ..
    ನಿನ್ನ ವಿವರಣೆಗಳಿಲ್ಲದೆ ಈ ಪದ್ಯಗಳ ಅರ್ಥವಂತೂ ನನಗಾಗುವುದಿಲ್ಲವಷ್ಟೇ..


    ಅಂದ ಹಾಗೆ, ಈ ಸಭಂಗ ಅಭಂಗ ಶ್ಲೇಷಗಳು ಅಂದರೇನು ಅಂತ ಗೊತ್ತಾಗ್ಲಿಲ್ಲ.
    ವಿವರಣೆಯ ನಿರೀಕ್ಷೆಯಲ್ಲಿ..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು :-)
      ಸಭಂಗ ಎಂದರೆ ಒಂದು ಸಮಸ್ತಪದವನ್ನು ಎರಡು ರೀತಿಯಲ್ಲಿ ಒಡೆದು ಬೇರೆಬೇರೆ ಅರ್ಥ ಹೊಮ್ಮುವಂತಿರುವುದು. ಅಭಂಗ ಎಂದರೆ ಶಬ್ದಕ್ಕೇ ಎರಡು ಅರ್ಥ ಇರುವಂತಹದ್ದು. ನಾನು "ಸಕ್ತಮಾನಸಮಾನಮೆನಲ್" ಇಲ್ಲಿ ಸಭಂಗಶ್ಲೇಷವಿದೆಯೆಂದು ಭಾವಿಸಿದ್ದೆನಾದರೂ ಅದೂ ಅಭಂಗ ಶ್ಲೇಷವೇ ಆಗುತ್ತದೆ. ಹಾಗಾಗಿ ಈ ಮಾಹಿತಿ ತಪ್ಪಿದೆ. ಅಭಂಗ ಶ್ಲೇಷಕ್ಕೆ "ರಕ್ತಚಂಚುಪದಂ" ಇತ್ಯಾದಿಯಾಗಿ ಎಲ್ಲವೂ ಉದಾಹರಣೆಯಾಗುತ್ತವೆ.

      ಅಳಿಸಿ
  3. ಆಹಾ, ಸೊಗಸಾದ ಪದ್ಯ, ಸಮರ್ಪಕವಾದ ವಿವರಣೆ. ಅವಧಾನದಲ್ಲಿ ಸಾಮಾನ್ಯವಾಗಿ ಹಲವು ಪದ್ಯಗಳನ್ನು ಕೇಳುತ್ತೇವೆ, ಆ ಕ್ಷಣಕ್ಕೆ ಆದ ಅರ್ಥಸ್ಫುರಣಕ್ಕೆ ತಲೆದೂಗುತ್ತೇವೆ, ಮರೆಯುತ್ತೇವೆ. ಆದರೆ ಸ್ವಾರಸ್ಯಗಳನ್ನು ನೆನಪಿಟ್ಟುಕೊಂಡು, ಹಂಚಿಕೊಳ್ಳುವ ನಿಮ್ಮ ಪ್ರಯತ್ನ ಸ್ತುತ್ಯವಾದದ್ದು. ಉತ್ತಮ ಅಭಿರುಚಿ, ಸ್ವಾರಸ್ಯಗಳುಳ್ಳ ಇಂಥ ಬರಹಗಳು ಹೆಚ್ಚುಹೆಚ್ಚು ಬರಲಿ.

    ಪ್ರತ್ಯುತ್ತರಅಳಿಸಿ
  4. ತುಂಬ ಸೊಗಸಾಗಿದೆ. ಧನ್ಯವಾದಗಳು. ಕೀಲಾಲನಿವಾಸಮತಿದ್ರುತಂ ಎಂದಿರಬೇಕಿತ್ತೇನೋ.

    ಪ್ರತ್ಯುತ್ತರಅಳಿಸಿ