Powered By Blogger

ಶುಕ್ರವಾರ, ಏಪ್ರಿಲ್ 11, 2014

ಸಹೃದಯಕಾಲ-೬ ಮಾರಿಯ ಮನೆಯೊಳಗೆ

ಹಿಂದಿನ  (ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು) ಲೇಖನದಲ್ಲಾಗಲೇ ಕವಿ ಜನ್ನನ ಹೆಸರೂ ಅವನು ಕವಿಚಕ್ರವರ್ತಿ ಹೆಸರು ಪಡೆದಿರುವುದೂ ಪ್ರಸ್ತಾಪಿಸಲ್ಪಟ್ಟಿದೆ. ಅವನ ಪದ್ಯಗಳಲ್ಲಿ ಕೆಲವನ್ನು ಈ ಸಂಚಿಕೆಯಲ್ಲಿ ನೋಡೋಣ.

 ಜನ್ನನ 'ಯಶೋಧರ ಚರಿತೆ' ಇದು ಸಂಸ್ಕೃತಮೂಲದ ಸೋಮದೇವ ಕವಿಯ 'ಯಶಸ್ತಿಲಕ ಚಂಪೂ'ಗ್ರಂಥದ ಕನ್ನಡರೂಪವೆಂದಾದರೂ ಜನ್ನನ ಕವಿತಾ ಶಕ್ತಿಯನ್ನೂ, ಲೋಕಾನುಭವವನ್ನೂ, ಅಲ್ಲದೇ ಕನ್ನಡ ನುಡಿಗಟ್ಟುಗಳನ್ನು ಅವನು ಬಳಸಿರುವ ರೀತಿಯನ್ನು ನೋಡಬೇಕು. ಒಂದು ಶಬ್ದಕ್ಕೆ ಹತ್ತುಹಲವು ಪರ್ಯಾಯಶಬ್ದಗಳನ್ನು ಬಳಸುವ ರೀತಿಯೂ ಅಲ್ಲದೇ ಅಲ್ಲಲ್ಲಿ ಲೋಕನೀತಿಯನ್ನು ಹೇಳುವುದೂ ಈ ಕಾವ್ಯದಲ್ಲಿ ಕಾಣುವ ಒಂದು ಸೊಗಸಾಗಿದೆ.

ಇದನ್ನು ನಾಲ್ಕು 'ಅವತಾರ'ಗಳೆಂಬ ಭಾಗಗಳನ್ನಾಗಿ ಮಾಡಿದ್ದಲ್ಲದೇ ಬಹುತೇಕ ಕಂದಪದ್ಯಗಳನ್ನೇ ಬಳಸಿದ್ದಾನೆ. ಸಂಸ್ಕೃತ ಮಹಾಕಾವ್ಯಗಳಲ್ಲಿ ಬರುವಂತೆಯೇ ಸರ್ಗಾರಂಭದಿಂದ ಕೊನೆಯವರೆಗೆ ಒಂದೇ ಛಂದಸ್ಸು ಬಳಸಿ ಸರ್ಗಾಂತ್ಯದಲ್ಲಿ ಬೇರೆ ಛಂದಸ್ಸನ್ನು ಬಳಸಿರುವುದೂ ವಿಶೇಷವಾಗಿದೆ. ಕನ್ನಡಕ್ಕೆ ವಿರಳವೆನ್ನಬಹುದಾದ 'ಮಂದಾಕ್ರಾಂತಾ' 'ಹರಿಣೀ' ಮೊದಲಾದ ವೃತ್ತವೈವಿಧ್ಯಗಳನ್ನೂ ಬಳಸಿದ್ದಾನೆ. ಅಷ್ಟೇ ಅಲ್ಲದೇ 'ಸರ್ಗಾಂತೇ ಮಾಲಿನೀ ಪ್ರೋಕ್ತಾ' ಎಂಬಂತೆ ಮಾಲಿನೀ ಛಂದಸ್ಸಿನಲ್ಲಿಯೂ 'ಅವತಾರ'ದ ಕೊನೆಯಲ್ಲಿ ಕಥೆಯ ಫಲಶ್ರುತಿಯನ್ನೂ ಹೇಳುತ್ತಾನೆ.

ಈ ಕೃತಿಯ ಕಥೆ ಯಶೋಧರ ಎಂಬ ರಾಜ ತನ್ನ ಪಾಪಕಾರ್ಯದಿಂದ ಜನ್ಮಜನ್ಮಾಂತರಗಳಲ್ಲಿ ಕಷ್ಟಕೋಟಲೆಗಳಿಗೆ ಒಳಗಾಗುವುದೂ ಕೊನೆಯಲ್ಲಿ ಜ್ಞಾನವನ್ನು ಹೊಂದಿ ಸದ್ಗತಿ ಹೊಂದುವುದೂ ಆಗಿದೆ.


ಸಂದರ್ಭ : (ಮೊದಲನೆಯ ಅವತಾರ)
ಆಗತಾನೇ ಬಂದ ವಸಂತ ಋತುವಿನಲ್ಲಿ ಅಯೋಧ್ಯೆಯ ಮಾರಿದತ್ತನೆಂಬ ರಾಜನೂ ನಗರದ ಜನರೂ ಚಂಡಮಾರಿ ದೇವತೆಯನ್ನು ತುಷ್ಟಿಪಡಿಸಲು ಜಾತ್ರೆಯನ್ನು ನೆರವೇರಿಸಲು ಮಾರಿಯ ದೇವಾಲಯದಲ್ಲಿ ಸೇರುತ್ತಾರೆ. ಹರಕೆಯನ್ನು ಒಪ್ಪಿಸುವುದು ಹಾಗೇ ಬಲಿಯನ್ನು ಕೊಡುವುದೂ ಜಾತ್ರೆಯ ಒಂದು ಅಂಗವಾಗಿತ್ತಷ್ಟೆ. ಮಾರಿದತ್ತನು ತನ್ನ ತಳವಾರ ಚಂಡಕರ್ಮನನ್ನು ಕರೆದು  'ನೀನು ಈಗಲೇ ಬಲಿಗೆಂದು ಮನುಷ್ಯಯುಗ್ಮವನ್ನು ಕರೆ ತಾ' ಎಂದು ಅಣತಿ ಕೊಡುತ್ತಾನೆ. ಆಗ ಅವನು 'ಅಭಯಮತಿ ಮತ್ತು ಅಭಯರುಚಿಯರನ್ನು ಹಿಡಿದುಕೊಂಡು ಬರುತ್ತಾನೆ. ಅವರು ಒಬ್ಬರನ್ನೊಬ್ಬರು ಸಂತೈಸುತ್ತಾ ಬಂದಾಗ ಕಾಣುವ ಈ ಮಾರಿಯ ದೇವಾಲಯದ ವರ್ಣನೆಯೇ ಪ್ರಸ್ತುತ ಸಂಚಿಕೆಗೆ ಆಯ್ದುಕೊಂಡ ಪದ್ಯಗಳು.

ಇಂತಿಂತೊರ್ವರನೊರ್ವರ್ 
ಸಂತೈಸುತ್ತಂ ನೃಪೇಂದ್ರತನುಜಾತರ್ ನಿ
ಶ್ಚಿಂತಂ ಪೊಕ್ಕರ್ ಪಸಿದ ಕೃ
ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ||೫೩||

(ಹೀಗೆ ಒಬ್ಬರನ್ನೊಬ್ಬರು ಸಂತೈಸುತ್ತ ನೃಪೇಂದ್ರನ ಮಕ್ಕಳು(ಅಭಯಮತಿ ಮತ್ತು ಅಭಯರುಚಿ) ನಿಶ್ಚಿಂತರಾಗಿ ಹಸಿದುಕೊಂಡಿದ್ದ ಯಮನ ಅಡುಗೆಯಮನೆಯಂತಿದ್ದ ಮಾರಿಯ ಮನೆಯನ್ನು ಹೊಕ್ಕರು 
ಇಲ್ಲಿ ಯಮನ ಅಡುಗೆಯ ಮನೆ ಎಂಬ ಉಪಮಾನವನ್ನು ಕೊಟ್ಟಿರುವುದು ಮಾರಿಯ ಮನೆಯ ಭಯಂಕರ ರೂಪವನ್ನು ಪ್ರತಿನಿಧಿಸುತ್ತದೆ  )

ತಳಮನುಡಿದಿರುವ ಕಣ್ಣಂ
ಕಳೆದೇರಿಪ ಕರುಳ ತೋರಣಂಗಟ್ಟುವ ಕಾ
ಲ್ಗಳನುರಿಪಿ ನೆತ್ತರಾ ಕೂ
ೞ್ಗಳನಡುತಿಹ ವೀರರೆತ್ತ ನೋೞ್ಪೊಡಮದಱೊಳ್||೫೪||

(ಅಲ್ಲಿ ನೋಡಿದರೆ ವೀರರು ಹಲವರು (ಬಲಿಪಶುಗಳ) ಕೈಕಾಲುಗಳನ್ನು ಮುರಿದು  ಕಣ್ಣನ್ನು ಕಿತ್ತು  ದೇವಿಗೆ ಅರ್ಚನೆ ಮಾಡುತ್ತಿದ್ದರು. ಕೆಲವರು ಕರುಳ ತೋರಣವನ್ನು ಕಟ್ಟುತ್ತಿದ್ದರು. ಕೆಲವರು ರಕ್ತದಲ್ಲಿ ಅನ್ನವನ್ನು ಬೇಯಿಸುತ್ತಿದ್ದರು!!.)

ತಾಳುಗೆಯನುರ್ಚಿ ನೆತ್ತಿಯ 
ಗಾಳಂ ಗಗನದೊಳೆೞಲ್ವ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ 
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಱದಿಂ||೫೫||

(ಬಾಯಿಯನ್ನು ಬಗೆದು ನೆತ್ತಿಗೆ ಗಾಳವನ್ನು ಚುಚ್ಚಿ ಎತ್ತರದಲ್ಲಿ ತೂಗಾಡಿಸುತ್ತಿರುವ ವೀರರು ಮಾರಿಯ ದೇವಾಲಯದ ಪಾಳಿ/ಗೋಡೆಗಳ ಮೇಲೆ ಎತ್ತಿ ಕಟ್ಟಿದುದು 'ಪಾಪದ ಜೋಳದ ಬೆಳೆಯನ್ನು ಕಾಪಾಡಲು ಕಟ್ಟಿದ್ದ ಬೆರ್ಚಿನ ಹಾಗೆ ಕಾಣುತ್ತಿತ್ತು!!'
-ಇಲ್ಲಿ ಪಾಪವೆಂಬುದನ್ನೇ ಬೆಳೆಯೆಂದಿದ್ದಲ್ಲದೇ ಆ ತಲೆಗಳನ್ನು ಗಾಳ ಹಾಕಿ ಚುಚ್ಚಿ ನಿಲ್ಲಿಸುತ್ತಿದ್ದುದು ಆ ಪಾಪದ ಬೆಳೆಯ ಹೊಲದಲ್ಲಿ ನಿಲ್ಲಿಸಿದ್ದ 'ಬೆಚ್ಚು'/ಬೆರ್ಚು ಕಂಡಂತೆ ಕಾಣುತ್ತದೆಯೆಂದಿರುವುದೂ ವಿಶೇಷ. ಗದ್ದೆಗಳಲ್ಲಿ ಪಕ್ಷಿಗಳ ಹಾಗೂ ಹಲಕೆಲವು ಪ್ರಾಣಿಗಳ ಹಾವಳಿ ತಡೆಯಲು ಬೆರ್ಚನ್ನು ನಿಲ್ಲಿಸಿಡುವಂತೆ ಬಲಿಪಶುಗಳ ತಲೆಯನ್ನು ನೆಟ್ಟಿದ್ದರೆಂಬ ಚಿತ್ರಣ ಕೊಡುತ್ತಾನೆ )

ಆಡು ಕುಱಿ ಕೋೞಿ ಕೋಣನ
ಕೂಡಿದ ಪಿಂಡೊಳಱಿ ಪೆಳಱಿ ಮಾರ್ದನಿಯಿಂದಂ
ಕೂಡೆ ಬನಮೞ್ತುದುರ್ವರೆ
ಬೀಡೆಯಿನೆರ್ದೆಯೊಡೆದುದವಱ ಕೋಟಲೆಗಾಗಳ್ ||೫೬||

(ಆಡು ಕುರಿ ಕೋಳಿ ಕೋಣಗಳೆಲ್ಲ ಹೆದರಿ ಅರಚುತ್ತಿದ್ದವು. ಅವು ಕೂಗುತ್ತಿದ್ದುದು ಇಡೀ ವನವೇ ಆಳುತ್ತಿರುವಂತೆಯೂ ಅವರ ಕೋಟಲೆಯಿಂದ ಭೂಮಿಯೇ ಎದೆ ಒಡೆದುಕೊಂಡಂತಯೂ ಕಾಣುತ್ತಿತ್ತು!! )

ದೆಸೆದೆಸೆಗೆ ನರಶಿರಂ ತೆ
ತ್ತಿಸಿ ಮೆಱೆದುವು ಮದಿಲೊಳಬ್ಬೆ ಪೇರಡಗಿನ ಪೆ
ರ್ಬೆಸನದೆ ಪೊಱಗಣ ಜೀವ
ಪ್ರಸರಮುಮಂ ಪಲವು ಮುಖದಿನವಳೋಕಿಪವೊಲ್||೫೭||

(ಎಲ್ಲ ದಿಕ್ಕುಗಳಲ್ಲಿಯೂ ಬಲಿಯಾದ ಮನುಷ್ಯರ ತಲೆಗಳನ್ನು ಸಾಲಾಗಿ ಇಟ್ಟಿದ್ದರು. ಅದು ದೊಡ್ಡದಾದ ಮಾಂಸದ ಊಟ ಬೇಕೆಂಬ ಬಯಕೆಯಿಂದ ಮಾರಿಯೇ ಹಲವು ಮುಖಗಳಿಂದ ಹೊರಗಿನ ಜೀವಸಮುದಾಯವನ್ನೆಲ್ಲ ನೋಡುತ್ತಿದ್ದಾಳೇನೋ ಎಂಬಂತೆ ಭಾಸವಾಗುತ್ತಿತ್ತು ) 
ಯಶೋಧರಚರಿತೆಯಲ್ಲಿ ಕಥೆಯ ಸ್ವಾರಸ್ಯ ಅಷ್ಟೇನೂ ಇಲ್ಲದಿದ್ದರೂ ಕಾವ್ಯವ್ಯಾಸಂಗದ ದೃಷ್ಟಿಯಿಂದ, ಕವಿಯ  ಕಲ್ಪನೆಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಓದಬಹುದಾದ ಒಳ್ಳೆಯ ಕಾವ್ಯವಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ