Powered By Blogger

ಮಂಗಳವಾರ, ಮಾರ್ಚ್ 25, 2014

ಸಹೃದಯಕಾಲ-೨ ಲಕ್ಷ್ಮೀಶನ ಜೈಮಿನಿ ಭಾರತದಿಂದ ಒಂದು ಪದ್ಯ

ಚಿತ್ರ:ಅಂತರ್ಜಾಲಕೃಪೆ

      ಕನ್ನಡಕಾವ್ಯಪರಂಪರೆಯಲ್ಲಿ ಷಟ್ಪದಿಗಳದ್ದೇ ವಿಶೇಷ ಘಟ್ಟವಾಗಿ ರೂಪುಗೊಂಡಿತು. ಬಹಳಷ್ಟು ಕವಿಗಳ ಮೆಚ್ಚುಗೆಗೆ ಪಾತ್ರವಾದ ಷಟ್ಪದಿಗಳಲ್ಲೇ ಅನೇಕ ಮಹಾಕಾವ್ಯಗಳೂ ರಚನೆಯಾದವು. ಇಂತಹ ಹಲವು ಕವಿಗಳಲ್ಲಿ ಲಕ್ಷ್ಮೀಶ ತನ್ನದೇ ಆದ ಯಮಕ ಶ್ಲೇಷಾದಿ ಚಮತ್ಕಾರಗಳ ಮೂಲಕ ಪ್ರೌಢ ಶೈಲಿಯಮೂಲಕ ವಿಶಿಷ್ಟನಾಗಿದ್ದಾನೆ. ಇವನ ಕೃತಿ 'ಜೈಮಿನಿ ಭಾರತ' ಇದು ಪಾಂಡವರು ಅಶ್ವಮೇಧ ಯಾಗ ಮಾಡುವ ಕಥೆಯನ್ನೊಳಗೊಂಡಿದ್ದು ಮೂಲ ಸಂಸ್ಕೃತದ ಜೈಮಿನಿ ಮಹರ್ಷಿ ರಚಿಸಿದ್ದೆನ್ನಲಾದ 'ಅಶ್ವಮೇಧಿಕ ಪರ್ವ'ದ ಕಥೆಯಾಗಿದೆ. 
     ಪ್ರತಿಪದ್ಯದಲ್ಲೂ ಯಮಕವನ್ನೋ  ಅನುಪ್ರಾಸವನ್ನೋ ಅಥವಾ ಶ್ಲೇಷದಂತಹ ಚಮತ್ಕಾರವನ್ನೋ ಅಥವಾ ಒಂದು ದೃಷ್ಟಾಂತವನ್ನೋ ಕಟ್ಟಿಕೊಡುವ ಮೂಲಕ ಕಲ್ಪನೆಯ ಮಹಾಸಾಗರದ ಮಧ್ಯಕ್ಕೆಲ್ಲೋ ನಮ್ಮನ್ನು ಕರೆದೊಯ್ಯುವ ಲಕ್ಷ್ಮೀಶನ ಪದ್ಯಗಳು ವಾರ್ಧಕ ಷಟ್ಪದಿಯಾದರೂ ನಮ್ಮ ಮನಸ್ಸಿಗೆ ಹೊಸ ಉತ್ಸಾಹ ಮೂಡಿಸುತ್ತವೆಯೆಂಬುದರಲ್ಲಿ ಸಂದೇಹವಿಲ್ಲ!!

ಜೈಮಿನಿ ಭಾರತದಲ್ಲಿ ಬರುವ ಒಂದು ಸೊಗಸಾದ ವರ್ಣನೆ ಹೀಗಿದೆ-
ಸಂದರ್ಭ-ಭದ್ರಾವತಿಯೆಂಬ ನಗರದಲ್ಲಿ ಯೌವನಾಶ್ವನೆಂಬ ರಾಜ ಆಡಳಿತ ನಡೆಸುತ್ತಿರಲು ಅಶ್ವಮೇಧ ಯಾಗಕ್ಕೆ ಸೂಕ್ತವಾದ ಕುದುರೆ ಅಲ್ಲಿರುವುದನ್ನು ತಿಳಿದು ಕೃಷ್ಣನ ಅಣತಿಯ ಮೇರೆಗೆ ಭೀಮ, ಘಟೋತ್ಕಚನ ಮಗ ಹಾಗೂ ಕರ್ಣನ ಮಗ ವೃಷಸೇನ ಈ ಮೂವರೂ ಕುದುರೆಯನ್ನು ಅಪಹರಿಸಿಕೊಂಡು ತರಲು ಅಲ್ಲಿಗೆ ಹೋಗುತ್ತಾರೆ. ಆಗ ಕಾಣುವ ಭದ್ರಾವತೀ ನಗರದ ವರ್ಣನೆಯನ್ನು ಮಾಡುತ್ತಾ ಕವಿ ಹೇಳುವ ಈ ಪದ್ಯ  ಸಹೃದಯರು ಆಸ್ವಾದಿಸಲೇ ಬೇಕಾದಂತಹ ಒಂದು ಪದ್ಯ (ಮೂರನೆಯ ಸಂಧಿಯ ೧೯ನೆಯ ಪದ್ಯ)
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ
ದ್ವಿಸಹಸ್ರ ನಯನಂಗಳಿಂದ ನೋಡಿದೊಡೆ ಕಾ
ಣಿಸಿಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು 
ಬಿಸಜ ಸಂಭವನ ಪೊರೆಗೆಂದಿಳೆಯನುಗಿದುಚ್ಚ
ಳಿಸಿ ಬಳೆದ ಫಣಿಪತಿಯ ಮಣಿವಡೆಯ ಸಾಲಿವೆನ
ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾದೆಸೆಯೊಳು||

"ಕುಸಿದು ಪಾತಾಳಲೋಕದಲ್ಲಿ ಹಲವು ಕಾಲಗಳಿಂದ ವಾಸವಾಗಿದ್ದ ವಾಸುಕಿ "ತನ್ನ ಎರಡು ಸಾವಿರ ಕಣ್ಣುಗಳಿಂದ ನೋಡಿದರೆ ಈ ನಗರದ ವಿಸ್ತೀರ್ಣ ಕಾಣಿಸುತ್ತಿಲ್ಲ, ಬ್ರಹ್ಮನಿಗೇನಾದರೂ ಗೊತ್ತಿದೆಯೋ ಕೇಳಿನೋಡೋಣ" ಎಂದುಕೊಳ್ಳುತ್ತಾ ಬಿಸಜಸಂಭವನಾದ ಬ್ರಹ್ಮನ ಬಳಿಗೆ ಹೋಗಲು ಭೂಮಿಯನ್ನು ಉಗಿದು ದೊಡ್ಡದಾಗಿ ಬೆಳೆದ ಫಣಿಪತಿಯ ಹೆಡೆಯ ಮಣಿಗಳ ಸಾಲುಗಳೋ ಎಂಬಂತೆ  ಆಕಾಶದೆತ್ತರಕ್ಕಿದ್ದ ಭದ್ರಾವತಿಯೆಂಬ ಪಟ್ಟಣದ ಕೋಟೆಯ ರತ್ನಮಯವಾದ ಶಿಖರಗಳು ಎಲ್ಲಾ ದಿಕ್ಕಿನಲ್ಲೂ ಕಂಡವು." 

ನಗರದ ಕೋಟೆಯ ರನ್ನದೆನೆಗಳು ಸಾವಿರಾರು ರತ್ನಗಳಿಂದ ಕೂಡಿರುವುದು ಕವಿಯ ಕಣ್ಣಿಗೆ ನಾಗರಾಜನ ಸಾವಿರ ಹೆಡೆಗಳ ಮೇಲಿರುವ ಮಣಿಗಳಂತೆ ಕಂಡಿತು. ಅದನ್ನು ಅಷ್ಟೇ ಹೇಳದೇ ವಿವರಿಸುತ್ತಾ "ತನ್ನ ಎರಡು ಸಾವಿರ ಕಣ್ಣುಗಳಿಗೆ ಕಾಣದ ಈ ನಗರದ ಅಗಲ ಬ್ರಹ್ಮನಿಗೇನಾದರೂ ಗೊತ್ತಿರಬಹುದೇ ಕೇಳಿ ನೋಡೋಣ' ಎಂದುಕೊಂಡು ಬಂದ ಫಣಿಪತಿಯ ಮಣಿವೆಡೆಯ ರತ್ನಗಳ ಸಾಲಿನಂತೆ ಕಂಡಿತು" ಎಂದು ಹೇಳುವ ರೀತಿ ಅಲ್ಲಿರುವ ವಕ್ರತೆ ಇವುಗಳ ಸ್ವಾದವನ್ನು ವರ್ಣಿಸಲು ಸಾಧ್ಯವೇ?

3 ಕಾಮೆಂಟ್‌ಗಳು: