Powered By Blogger

ಶುಕ್ರವಾರ, ನವೆಂಬರ್ 18, 2011

ನಮ್ಮ ಪ್ರಾಥಮಿಕ ಶಾಲಾ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರ ನೆನಪಿನಲ್ಲಿ...

    ಇತ್ತೀಚೆಗೆ ನಮ್ಮ ಆತ್ಮೀಯ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರು ನಿಧನರಾದರೆಂಬ ವಿಷಯ ಕೇಳಿ ಬಹಳ ಖೇದವಾಯಿತು. ನಾವೆಲ್ಲ ಈವರೆಗೆ ಕಲಿತ ವಿದ್ಯೆಗಳಿಗೆಲ್ಲ ತಳಹದಿಯಾಗಿ ಅವರು ಕಲಿಸಿದ ಆ ಪ್ರಾಥಮಿಕ ಶಾಲಾ ಶಿಕ್ಷಣದ ಮಹತ್ವ ನಮಗೆ ಆಗ ಗೊತ್ತಿರಲಿಲ್ಲ. ಬಹುಶಃ ಈಗ ಅದು ಗೊತ್ತಾಗುತ್ತಿದೆ. ತಳಹದಿ ಗಟ್ಟಿಯಾಗಿದ್ದರೆ ಅದರ ಮೇಲೆ ಎಂತಹ ಬೃಹತ್ ಕಟ್ಟಡವನ್ನು ಬೇಕಾದರೂ ಕಟ್ಟಬಹುದೆಂದು ಲೋಕೋಕ್ತಿ. ಗುರವಃ ಬಹವಃ ಸನ್ತಿ ಶಿಷ್ಯವಿತ್ತಾಪಹಾರಕಾಃ| ಗುರವಃ ವಿರಲಾಃ ಸನ್ತಿ ಶಿಷ್ಯ ಚಿತ್ತಾಪಹಾರಕಾಃ || ಎಂಬಂತೆ ಅವರು ನಮ್ಮಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ.
   ಬಹುಕಾಲದ ಅನಾರೋಗ್ಯಕ್ಕೆ ತುತ್ತಾಗಿ ಅಕಾಲದಲ್ಲಿ ನಮ್ಮನ್ನಗಲಿದ ಅವರ ಆತ್ಮಕ್ಕೆ ದೇವರು  ಚಿರಶಾಂತಿಯನ್ನು ದಯಪಾಲಿಸಲಿ ಎಂದು ಆಶಿಸುತ್ತೇನೆ.

ಅವರ ನೆನಪಿನಲ್ಲಿ ಕೆಲವು ಕವಿತೆಗಳು..

ಕಂ||
ಗುರುವರ್ಯರೆ ಸತ್ಪಾದ-
ಕ್ಕೆರಗುವೆನಾಂ ನಿಜ ಸರೋಜಸಮ ಮೃದುಲ ಮನ-
ಸ್ಕರು ನೀವಶ್ಮವದಿಹ ಶಿ-
ಷ್ಯರ ಸುಂದರ ಶಿಲ್ಪವಾಗಿಸಿರ್ಪವರಲ್ತೇ||1||

ನರರೊಳ್ ವಿದ್ಯಾ ದಾತಂ
ಸುರರೊಳ್ ಶಂಭುವು ವಿರಿಂಚಿ ಪದವಿ ಸಮಾನಂ|
ಪುರದೊಳ್ ಪಾರ್ವಂ ಪೋಲಿಂ
ಸರದೋಳ್ ಕೋದಿರ್ಪ ಪವಳದೋಲ್ ಶೋಭಿಸುವಂ||2||

ಕಮಲಾಕರನೆಂತೆಂಬಾ 
ವಿಮಳಂ ನಾಮದಿ ಸುಶೋಭ್ಯರಾಗಿರ್ದಿರಯ್|
ಕಮಲೋಪಮ ಮೃದು ಶಿಷ್ಯರ್
ಸುಮನಂ ಪೋಲೆ ಕಮಲಾಕರ ಗುರೂದ್ಭವರಯ್||3||


ನೀವಿತ್ತಿರ್ಪ ಪ್ರಾಥಮಿ-
ಕಂ ವಿಷಯಂಗಳು ಸಮಾಜ ವಿಜ್ಞಾನಗಳ್|
ಕೋವಿದರಿಂ ಪಡೆದ ಗಣಿತ
ದೀವಿಟಿಯಾಯ್ತೈ ದಿನಂಪ್ರತಿಯ ಕಲ್ಕೆಗಳಲ್||4||


ಜವರಂಗಿರ್ಪ ಕರುಣೆಯೇ 
ಬವರದಿ ಹತ್ಯಾ ನಿಷೇಧ ನಿಯಮಂ ಪೋಲಲ್ |
ಸವರಿರ್ಪರೆ ವಿಧಿಗೆ ಗಡಂ
ಕವಿಲೇಖನಮಂ ಲಲಾಟದಿಂದಳಿಸುವರಾರ್||5||


ಹೀರೋ ಹೊಂಡವ ನಿತ್ಯವು 
ಏರಿಂ ಬರುತಿರ್ದಿರಲ್ತೆ ಶಾಲೆಗೆ ದಿನದಿಂ |
ದಾರಿಯು ಬಾಳೇಗದ್ದೆಯ 
ಸೇರಿಂ ಕಾಲದಲಿ ಕಬ್ಬಿನ ಮನೆಯ ಗೃಹಮಂ ||6||


ಆಪತ್ತಂ ನೀವೆದುರಿಸು-
ತಾ  ಪರಕಾರ್ಯಕೆ ಸಹಿಷ್ಣುವಾಗಿಸಿದಿರೆಲಾ |
ಕೋಪಂಗೊಂಡರೆ ದೂರ್ವಾ-
ಸಂ ಪೋಲ್ತಿರ್ದಿರಿ ಮಹಾನುಭಾವಿಗಳೈ ನೀವ್ ||7||


ಸಮಯೋಚಿತಮಂ ಗೆಯ್ಯುತ 
ಕಮಲಾಕರದೋಲ್ ಸುಹೃನ್ಮನಸ್ಕರು ನೀವುಂ|
ಮಮಶಿಕ್ಷಕರೆಂಬಭಿಮಾ-
ನಮಂ ಮನಸಿಂದ ತೊರೆಯಲಹುದೇ ಪೇಳಿಂ||8||


ಮ||
ಕೃತಪಾಠಂಗಳ ಸತ್ಫಲಂ ಗಡ ಭವದ್ವಾಕ್ಯಂಗಳಿಂ ಹೃದ್ಗತಂ
ಧೃತವಿದ್ಯಾಬಲ ನಿಲ್ಲಿಸಿರ್ದು ಯಶವಂ ಸಂಪ್ರಾಪ್ತರಂ ಲೋಕದೋ
ಳತಿಯಾಗಿರ್ಪುದ ದುರ್ಗುಣಕ್ಕೆ ಖತಿಯಾಗಾರಾಧ್ಯರಾಗಿರ್ದಿರೈ
ಮಿತವಾಗಿರ್ದೊಡೆ ಸರ್ವವೂ ಶುಭಮಿರಲ್ ನೀವೇಕೆ ಮೀರಿರ್ಪಿರಿ||9||


8 ಕಾಮೆಂಟ್‌ಗಳು:

  1. ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾತಃಸ್ಮರಣೀಯರು, ಅಕ್ಷರಶಃವಾಗಿಯೂ. ಇತ್ತೀಚೆಗೆ ನನ್ನ ಶಾಲೆಯಲ್ಲಿದ್ದ ಒಬ್ಬರು ಶಿಕ್ಷಕರು ತೀರಿಕೊಂಡ ವಿಷಯ ತಿಳಿದಾಗ ನನ್ನ ಕಣ್ಣಾಲಿಗಳೂ ಒದ್ದೆಯಾಗಿದ್ದವು, ಅವರು ನನಗೆ ಒಂದು ವಿಷಯವನ್ನೂ ಸಹ ಕಲಿಸದೇ ಹೋದರೂ. ನಾವು ಇಂಜಿನಿಯರಿಂಗ್ ಶಿಕ್ಷಕರ ಬಗ್ಗೆ ಕೇವಲವಾಗಿ ಮಾತನಾಡಬಹುದು, ಆದರೆ ಪ್ರಾಥಮಿಕ ಶಾಲಾ ಶಿಕ್ಷಕರ ಬಗ್ಗೆ? ನಾನು ಇಲ್ಲಿಯವರೆಗೆ ಯಾರೂ ಕೆಟ್ಟ ಮಾತನ್ನಾಡಿದ್ದನ್ನು ಕೇಳಿದ್ದಿಲ್ಲ. ಅವರ ಬಗ್ಗೆ ಗೌರವವೇ ಭಾವವಾಗಿ ನಿಂತಿರಲು ಅಗೌರವದ ಅಸಹ್ಯ ಹೇಗೆ ತಾನೇ ಹುಟ್ಟೀತು?

    ಚಂದದ ಕಂದಪದ್ಯಗಳು. ಹ್ಯಾಟ್ಸ್ ಅಫ಼್ ಭಟ್ರೆ, ನಿಮ್ಮ ಬರಹದ ಬಗ್ಗೆ ಮಾತನಾಡುವ ಹಾಗೇ ಇಲ್ಲ ಬಿಡಿ.

    ಪ್ರತ್ಯುತ್ತರಅಳಿಸಿ
  2. ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾತಃ ಸ್ಮರಣೀಯರೆಂಬುದು ಶತಪ್ರತಿಶತ ದಿಟ..
    ಇವುಗಳಲ್ಲಿ ದೋಷಗಳಿವೆ. ಇದೇನು ಪರಿಪೂರ್ಣವಲ್ಲ.. ನಮ್ಮ ಕೈಗೆಟುಕುವವರೆಗೆ ನಮ್ಮ ಪ್ರಯತ್ನ ಮಾಡುತ್ತಿರುವುದು..

    ಪ್ರತ್ಯುತ್ತರಅಳಿಸಿ
  3. ಇದರಲ್ಲಿ ಕೆಲವು ದೋಷಗಳಿವೆ, ಪ್ರಾಸವಿಚಾರದಲ್ಲಿ ವೃಷಭಪ್ರಾಸ ಮತ್ತು ಗಜಪ್ರಾಸಗಳು ಒಂದೇ ಪದ್ಯದಲ್ಲಿ ಬಂದಿವೆ.ನಾಲ್ಕನೇ ಪದ್ಯ ಎರಡನೇ ಸಾಲಿನಲ್ಲಿ ಹಾಗೂ ಏಳನೇ ಪದ್ಯ ನಾಲ್ಕನೇ ಸಾಲಿನಲ್ಲಿ ಹೀಗಾಗಿದೆ.

    ಪ್ರತ್ಯುತ್ತರಅಳಿಸಿ
  4. ಪದ್ಯಗಳು ಚೆನ್ನಾಗಿದೆ. ಒಳ್ಳೆ ಪ್ರಯತ್ನ ನಿಮ್ಮದು ..

    ಪ್ರತ್ಯುತ್ತರಅಳಿಸಿ
  5. ಪದ್ಯಗಳು ಚೆನ್ನಾಗಿದ್ದು... ಎಲ್ಲ ನವ್ಯ ಹೇಳ್ತಿರೋ ಕಾಲದಲ್ಲಿ ಇಂಥ ಪ್ರಯತ್ನ ಖುಷಿ ಆತು :-) ಗುರುವಿನ ಬಗ್ಗೆ ಚೆನ್ನಾಗಿ ಬರದ್ದಿ :-)

    ಪ್ರತ್ಯುತ್ತರಅಳಿಸಿ
  6. ಬ್ಲಾಗೂ ಚೆನ್ನಾಗಿದೆ. ಗುರು ನಮನ, ಭಿಂಗಿ ಚಿತ್ರ, ದ್ವಿಸಂಧಾನ ಕಾವ್ಯದ ಬಗೆಗಿನ ಮಾಹಿತಿ. ನಿಮ್ಮ ಪ್ರಯತ್ನ ಎಲ್ಲಾ ಖುಷಿ ಕೊಡ್ತು..

    ಪ್ರತ್ಯುತ್ತರಅಳಿಸಿ
  7. ಧನ್ಯವಾದಗಳು ಪ್ರಶಸ್ತಿಯವರೇ.. ನಿಮಗೂ ಇದರಲ್ಲಿ ಆಸಕ್ತಿ ಹುಟ್ಟಿರುವುದು ಇನ್ನೂ ಸಂತೋಷ. ಬಹುತೇಕ ಇವೆಲ್ಲ "ಪದ್ಯಪಾನ"ದ ಪ್ರಭಾವ

    ಪ್ರತ್ಯುತ್ತರಅಳಿಸಿ