Powered By Blogger

ಗುರುವಾರ, ಸೆಪ್ಟೆಂಬರ್ 15, 2011

ಶ್ರಾವಣ ಬಂದ ಕಥೆ

        "ಇಂಜನಿಯರಿಂಗ್ ಕಲಿಯುತ್ತರುವ ನಮಗೇಕೆ ಕನ್ನಡವನ್ನು ಒಂದು ವಿಷಯವನ್ನಾಗಿ ಓದಲು ಇಟ್ಟಿದ್ದಾರಪ್ಪಾ?" ಎಂದು ಹಲವಾರು ಮಿತ್ರರು 3ನೇ ಸೆಮಿಸ್ಟರ್ ನಲ್ಲಿ ಬೇಸರಪಟ್ಟಿದ್ದರು.. ಅವರಿಗೆ ಕನ್ನಡವನ್ನು 25 ಅಂಕಕ್ಕೆ ಪರೀಕ್ಷೆಯಾಗಿ ಕೊಟ್ಟು ಬರೆಯಲು ಹೇಳುತ್ತಾರೆ ಎಂಬುದೇ ಯೋಚನೆಯಾಗಿತ್ತು,, ನನಗೆ ಇದೊಂದು ಆಸಕ್ತಿ ಹುಟ್ಟಿಸುವ ವಿಷಯ!! ಹೀಗಾಗಿ ಉಳಿದೆಲ್ಲಾ ಕ್ಲಾಸ್ ಗಳಿಗೆ ಬಂಕ್ ಹಾಕುತ್ತಿದ್ದೆನಾದರೂ ಕನ್ನಡ ತರಗತಿಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅದು ಶನಿವಾರ ಮಧ್ಯಾಹ್ನವಿದ್ದರೂ ಕೂಡ!!!
       ಅದರಲ್ಲಿ ಮೊದಲಿಗೆ ಇದ್ದದ್ದು ಬೇಂದ್ರೆಯವರ "ಶ್ರಾವಣ ಬಂತು"ಪದ್ಯ.. ಅದನ್ನ ನಮ್ಮ ಅಧ್ಯಾಪಕರು ವಿವರಿಸಿದ್ದು ನನಗೆ ಬಹಳ ಇಷ್ಟವಾಯಿತು. ಅದರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ "ನಾಕುತಂತಿ" ಕವನ ಸಂಕಲನದಲ್ಲಿರುವ "ಮತ್ತೆ ಶ್ರಾವಣ" "ಮತ್ತೆ ಶ್ರಾವಣ ಬಂದಾ" ಇವನ್ನೆಲ್ಲ ಓದಿದಾಗ ಬೇಂದ್ರೆಯವರು ಶ್ರಾವಣವನ್ನು ನೋಡಿದ ರೀತಿ ನನಗೆ ಬಹಳ ಹಿಡಿಸಿತು..

    ಶ್ರಾವಣ ಕಾಡಿಗೆ ನಾಡಿಗೆ ಬೀಡಿಗೆ ಎಲ್ಲಾ ಕಡೆ ಬರುವಾಗ ಆಗುವ ಬದಲಾವಣೆಗಳನ್ನು ಹೇಳುತ್ತಾ ಕಡಲಿಗೆ ಬಂದದ್ದನ್ನು ವರ್ಣಿಸಿ ಹೇಳುತ್ತಾರೆ "ಕಡಲಿಗೆ ಬಂದ ಶ್ರಾವಣ | ಕುಣಿದ್ಹಾಂಗ ರಾವಣ ||" ಅಂದರೆ "ಶ್ರಾವಣ ಕಡಲಿಗೆ ಬಂದಾಗ ಬರುತ್ತಿದ್ದ ಅಲೆಗಳು ರಾವಣ ಕುಣಿದಾಗ ಅವನ ತಲೆಗಳು ಮೇಲೆ ಕೆಳಗೆ ಆದಂತೆ ಕಂಡವು"ಎಂದು ನಮ್ಮ ಅಧ್ಯಾಪಕರು ವಿವರಿಸಿದರು. ಗಾಳಿ ಭೈರವನ ರೂಪ ತಾಳಿ ಕುಣಿಯಿತಂತೆ! ಶ್ರಾವಣ ಸಾಗರ(ಕಡಲು)ದಿಂದ ಮೇಲೇರಿ ಘಟ್ಟಕ್ಕೆ ಬಂದು ರಾಜ್ಯ ಪಟ್ಟಕ್ಕೆ ಬಂತು.  ಶ್ರಾವಣ ಎಂದರೆ ಕೇವಲ ಅದೊಂದು ಮಾಸವಲ್ಲ.. ನನ್ನ ಅನಿಸಿಕೆಯಂತೆ (ಕವಿಯ ಭಾವ ಏನೆಂದು ಗೊತ್ತಿಲ್ಲ) 'ಒಂದು ಶುಭಗಳಿಗೆ ಬಂತು' ಎಂಬರ್ಥದಲ್ಲಿ ಹೇಳಿದ್ದಾರೆ... ಯಾಕೆಂದರೆ ಶ್ರಾವಣ ಮಾಸದ ಬಗ್ಗೆ ಹೇಳುತ್ತಾ ಕೊನೆಯ ಸಾಲುಗಳಲ್ಲಿ ಹೇಳುತ್ತಾರೆ "ಶ್ರಾವಣ ಮಾಸ ಶ್ರೀಕೃಷ್ಣ ಜನಿಸಿದ ಮಾಸ" ಎಂದು.. ಆದ ಕಾರಣ ಅದರಲ್ಲಿರುವ ವಿಶೇಷತೆ ಉಳಿದೆಲ್ಲಾ ಮಾಸಗಳಲ್ಲಿ ಇಲ್ಲ.. ಬಹುತೇಕ ಶ್ರಾವಣದಲ್ಲಿ ಬರುವಷ್ಟು ಹಬ್ಬಹರಿದಿನಗಳು ಬೇರೆ ಮಾಸಗಳಲ್ಲಿ ಇಲ್ಲ. ಈ ಶ್ರಾವಣ ಮಾಸದಲ್ಲಿ ಪೂರ್ಣ ಪ್ರಮಾಣದ ಮಳೆ ಬರುತ್ತಿರುತ್ತದೆ. ಆಗ ಗುಡ್ಡ ಗುಡ್ಡಗಳೆಲ್ಲ ಸ್ಥಾವರ ಲಿಂಗದಂತೆ ಕವಿಗೆ ಕಾಣುತ್ತವೆ.. ಈ ಮಳೆ ಆ ಲಿಂಗಗಳಿಗೆ ಅಭ್ಯಂಗ ಎರೆಯುವಂತೆ ಕಾಣುವುದು ಎಂತಹ ಅದ್ಭುತ ಕಲ್ಪನೆ ಅಲ್ಲವೇ!! ಬೆಟ್ಟಗಳೆಲ್ಲ ಕುತನಿಯ ಅಂಗಿ ತೊಟ್ಟು ಜಾತ್ರೆಗೆ ಹೊರಟ ಹಾಗೆ ಕಾಣುತ್ತದೆ. ಬನ ಬನಗಳೆಲ್ಲ ಮದುವೆ ಮಗನ ಹಾಗೆ ತಯಾರಾಗಿ ತಲೆಗೆ ಬಾಸಿಂಗ ಕಟ್ಟಿಕೊಂಡು ಹರ್ಷಗೊಂಡು ನಿಂತಿರುವಂತೆ ಕಾಣುತ್ತದೆ! ಜಗದ ಗುರು ಜನಿಸಿದ ಮಾಸ ಅದು ಎಲ್ಲ ರೀತಿಯಲ್ಲೂ ಶುಭಕಾರಕವಾಗಿರಲಿ ಎಂಬ ಆಶಯ ಕವಿಯದ್ದು..
  ನನ್ನ ಮಿತ್ರ ಶ್ರವಣ ಒಂದು ಮಾತು ಹೇಳುತ್ತಿದ್ದ.. "ನಿನ್ನ ಬರವಣಿಗೆ ವೇದಗಳಾಗದೇ ವಚನಗಳಾಗಲಿ" ಎಂದು ಅಂದರೆ ವಚನಗಳಾದರೆ ಎಲ್ಲರಿಗೂ ಅರ್ಥವಾಗುವಂತೆ ಸರಳ ಸುಲಭವಾಗಿರುತ್ತವೆ ವೇದಗಳನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟ ಪಡಬೇಕು ಎಂದು. ಹಾಗೇ ನಮ್ಮ ಕನ್ನಡ ಅಧ್ಯಾಪಕರೂ ಒಂದು ಮಾತು ಹೇಳುತ್ತಿದ್ದರು "ಬೇಂದ್ರೆಯವರು ಜನರ ನಡುವೆ ನಿಂತು ಜಗತ್ತನ್ನು ನೋಡಿದರು, ಕುವೆಂಪು ಅವರು ಬರವಣಿಗೆಯಲ್ಲಿ ಹೊಸ ಜಗತ್ತನ್ನೇ ತೋರಿಸಿದರು" ಎಂದು... ಬಹುಶಃ ಅವರು ಬಯಲು ಸೀಮೆಯವರಾದ ಕಾರಣ ಬೇಂದ್ರೆಯವರ ಕವನಗಳು ಅವರಿಗೆ ಬೇಗ ಆತ್ಮೀಯವಾದವೇನೋ?... ಕುವೆಂಪು ಅವರು ಇರುವ ಜಗತ್ತನ್ನೇ ಹೊಸರೀತಿಯಲ್ಲಿ ತೋರಿಸಿದರೇ ಹೊರತು ಯಾವ ಹೊಸ ಜಗತ್ತನ್ನೂ ತೋರಿಸಲಿಲ್ಲ ಎಂದು ನನ್ನ ಅನಿಸಿಕೆ. ಆದರೂ ಇಬ್ಬರು ಕವಿಗಳ ಪ್ರತಿಭೆಯನ್ನು ತುಲನೆ ಮಾಡಬಾರದು ಎಂಬುದೊಂದು ಅಭಿಪ್ರಾಯ.. ಯಾಕೆಂದರೆ ಅವರವರ ದೃಷ್ಡಿಕೋನದಲ್ಲಿ ಅವರವರ ಕೃತಿಗಳು ಚಿತ್ರಿಸಲ್ಪಟ್ಟಿರುತ್ತವೆ.. ಅದಕ್ಕೇ ಕಾಳಿದಾಸ " ಲೋಕೋ ಭಿನ್ನರುಚಿಃ" ಎಂದು ಹೇಳಿದ್ದಾನೆ.. ಅದೆಲ್ಲಾ ಹಾಗಿರಲಿ.. ಬೆಂದ್ರೆಯವರ ಕವಿತೆಗಳು ಬಹು ಬೇಗ ಜನರ ಮನಸ್ಸಿಗೆ ತಲುಪುತ್ತಿದ್ದುದಂತೂ ನಿಜ.. ಯಾಕೆಂದರೆ ಅವರದು ಆಡುಭಾಷೆ (ವಚನಗಳ ಹಾಗೆ) ಕುವೆಂಪು ಅವರದು ಪ್ರೌಢ ಗ್ರಾಂಥಿಕ ಭಾಷೆ (ವೇದಗಳಂತೆ)...
ಈ ಶ್ರಾವಣ ಬಂತು ಕವಿತೆಯಲ್ಲಿನ ಬೇಂದ್ರೆಯವರ ವರ್ಣನೆಗಳು ಬಹು ಬೇಗ ಮನಸ್ಸಿನಲ್ಲಿ ಚಿತ್ರಣಗೊಳ್ಳುತ್ತವೆ. ಅವರ ಕಲ್ಪನೆಗಳು ನಮ್ಮನ್ನು ಬೇಗ ಆವರಿಸಿಕೊಳ್ಳುತ್ತವೆ. ಯಾರು ಅವರ ಕವಿತೆಗಳನ್ನು ಓದಿಲ್ಲವೋ ಅವರು ಒಮ್ಮೆ ಓದಿ ನೋಡಿ.. ನಿಮ್ಮ ಮನಸ್ಸಿನಲ್ಲಿ  ಅನೇಕಾನೇಕ ಕಲ್ಪನೆಗಳು ಹಾದು ಹೋಗುತ್ತವೆ. ಹೃದಯಸ್ಪರ್ಷಿ ಭಾವಗಳ ಶರಧಿಯೇ ತೆರೆದುಕೊಳ್ಳುತ್ತದೆ.. "ಮತ್ತೆ ಶ್ರಾವಣ" ಮತ್ತೆ "ಶ್ರಾವಣ ಬಂದ" ಕವಿತೆಗಳ ಬಗ್ಗೆ ನನ್ನ ಅನಿಸಿಕೆಗಳೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತೇನೆ, ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.
ನಿಮ್ಮ
ಗಣೇಶ ಕೊಪ್ಪಲತೋಟ

1 ಕಾಮೆಂಟ್‌:

  1. ನಮ್ಮ ಕನ್ನಡ ಶಿಕ್ಷಕರು ಈ ಪದ್ಯವನ್ನು ಸ್ವಲ್ಪ ತಮಾಷೆಯಾಗಿ ವಿವರಿಸುತ್ತಿದ್ದರು..
    ಶ್ರಾವಣ ಬಂತು ನಾಡಿಗೆ (ಕೈಯ ನಾಡಿಯನ್ನು ಮುಟ್ಟಿಕೊಳ್ಳುತ್ತಾ )
    ಬಂತು ಕಾಡಿಗೆ (ಕಣ್ಣಿನ ಕಾಡಿಗೆಯನ್ನು ಸೂಚಿಸುತ್ತಾ )
    ಬಂತು ಬೀಡಿಗೆ ( ಬೀಡಿ ಸೇದುವ ಭಂಗಿಯೊಂದಿಗೆ ) :)
    ಹೀಗೆ ವಿವರಿಸುತ್ತಿದ್ದ ಮೇಷ್ಟ್ರಿಗೆ ಬೇಂದ್ರೆಯವರ ಬಗ್ಗೆ ತುಂಬಾ ಗೌರವವಿತ್ತು .

    ಪ್ರತ್ಯುತ್ತರಅಳಿಸಿ