(ನಳದಮಯಂತಿಯರ ಚಂಪೂ ಶೈಲಿಯ ಕಥನ)
ಶಾ||
ಕೈಲಾಸಾದ್ರಿನಿವಾಸಗಂ ಸುತನು ಕಾರ್ಯಾರಂಭದೊಳ್ ಪೂಜ್ಯನುಂ|
ಶೈಲೋತ್ತುಂಗಜೆ ಪುತ್ರನೇ! ಸಕಲಸಂಪತ್ತಿಂ ಸದಾಶೋಭಿತಂ|
ಮಾಲಾಕಾರದಿ ಕೋದುಮೀ ಕಥನಮಂ ತ್ವತ್ಕಂಠಕಿಂದರ್ಪಿಸಿಂ|
ಮಾಲಾಭಾರವ ಪೆರ್ಚಿಸಿಂ ಸ್ತುತಿಪೆನಾಂ ನೀಡೌ ಯಶಸ್ಸಂ ಸದಾ||
ಮ.ಸ್ರ||
ಕವಿಕಾವ್ಯಾರಂಭದೋಳ್ ದಲ್ ದ್ವಿಪವದನ ಭವತ್ ಸ್ತೋತ್ರಸಕ್ತಂ ಸುಧಾವಾಕ್-
ಸವಿಯಂ ಪೊಂದಲ್ಕೆ ಮೇಣ್ ಲೇಖನದ ನುಡಿಯೊಳುಂ ಧಾರೆಯಂ ಹೊಮ್ಮಿಸಲ್ಕೆಂ-
ದವನೀಪೂಜ್ಯಂ ಮಹಾಗ್ರಂಥಮಿದೆನಿಸಲು; ನಾಂ ಪೂಜಿಪೆಂ ನಿತ್ಯವುಂ ಸ-
ತ್ಕವಿಯೀ ಕಾರ್ಯಂ ಮನಸ್ಸಂ ತಲುಪಲಿಮಿಗೆ ಸಾಕೊರ್ವಗಂಗೋದುಗಂಗೆ||
ಉ||
ಶಾರದೆಯಲ್ತೆ ವಾಗಧಿಪಗಂ ಪ್ರಿಯೆ, ವಾಣಿ! ವರೋತ್ತರಮಂ ಕೊಡೌ
ನೀರಜದೋಲ್ ಸುಕೋಮಲಮಲರ್ ಸೊಗಮಂ ನುಡಿಯೊಳ್ಗೆ ಕಾವ್ಯದಾ
ಕಾರಿಣಿ ಮೇಣ್ ಕಲಂಕರಹಿತಂ ಮಿಗೆಯೊಪ್ಪಿಕೊಡೌ ಕವಿಪ್ರಸೂ
ವಾರಿಧಿ ವಿದ್ಯೆಯಂ ಮುದದಿ ನೀಂ ಕವಿಬಾಲಕಗಂ ಗಣೇಶಗಂ||
~*~*~*~*~*~*~*~*~*~*~*~*~*~*~*~*~*~*~
1.ಪೀಠಿಕಾಖ್ಯಾನಂ
(ಕಲಿಯುಗಂ ಸಂದು ಐದು ಸಾವಿರದ ನೂರಹದಿಮೂರು ವರ್ಷಂಗಳಾಗೆ ಖರಸಂವತ್ಸರದೆ ಹೇಮಂತರ್ತುವಿನ ಪುಷ್ಯಮಾಸದೆ ಸಿತೆಪಕ್ಷ ದಶಮಿಯ ದೆವಸಂ)
ಅಸಂಖ್ಯಾತ ವರ್ಷಂಗಳ ಪಿಂತೆಯೇ ಧರ್ಮಂ ಸಂಸ್ಕೃತಿಯುಂ ಪದ್ಧತಿಯುಮಾಚಾರವಿಚಾರಂಗಳುದಯಿಸಿರ್ದ ಭಾರತಮೆಂಬಭಿದಾನಪೊಂದಿರ್ಪೀ ದೇಶದೊಳೊಂದು ನಾಡಿರ್ಪುದದರ ನಾಮಧೇಯಂ ಕರ್ಣಾಟಕಮೆಂದುಮಾ ನಾಡೊಳ್ ಪೊಳಲಿರ್ಪುದೊಂದುಮದು ಬೆಂದಕಾಳೂರೆಂಬಭಿದಾನ ಪೊಂದಿರ್ಕುಮಾ ಪೊಳಲ್ ನಾಮಾಂತರಗೊಂಡುಮಿಂದುಮಾ ನಾಮದಪಭ್ರಂಶ ರೂಪಿಂದೆ ಬೆಂಗಳೂರೆಂದು ಶೋಭಿಸಿರ್ಪುದು
ಪಿಂತಿರ್ದರಸರ್ಕಳ ಶಾಸನಕಾಲಂ ತೀರಿದೊಡಂ ಪ್ರಜಾಪ್ರಭುತ್ವಮುದಯಿಸಿರ್ಪುದೀ ದೇಶದೊಳೇತನ್ಮಧ್ಯೆಯೊರ್ಮೆ ಮ್ಲೇಚ್ಛರ್ಕಳ ಯಾವನರ್ಕಳ ಶಾಸನಮಂ ಪಾಶ್ಚಾತ್ಯರಾಂಗ್ಲರ ಶಾಸನಮಂ ಕಂಡಿರ್ದಪರ್ ಮತ್ತದರಿಂ ರೋಸಿಂ ಲೋಗರ್ ಪ್ರತಿಭಟಿಸೆ ಸ್ವಾತಂತ್ರ್ಯಮಂ ಕೊಟ್ಟು ಪೋದರಾಂಗ್ಲಕುಲಭವರಂದಿನಿಂ ಶೈಕ್ಷಣಿಕ ಸಾಂಸ್ಕೃತಿಕಮಾಗೆಲ್ಲ ಪದ್ಧತಿವಿಚಾರಂಗಳು ಬದಲಾಗುತ್ತೆ ಆಂಗ್ಲರ್ ಎಮ್ಮನಾಳ್ದರ್ ಅಂತುಮವರೇ ಶ್ರೇಷ್ಠರೆಂಬ ಭಾವನೆಯೊಳ್ ಭ್ರಾಂತಿಯೊಳ್ ಸರ್ವರೀತ್ಯಾ ಪಾಶ್ಚಾತ್ಯರನ್ನನುಕರಣೆ ಮಾಡುತ್ತಿರಲೊರ್ಮೆಗೆ ಪಳ್ಳಿವಾಸಿಗಳಾಗಿರ್ದ ಲೋಗರ್ ಬೇಸಾಯದಿಂ ಬೇಸತ್ತು ಪುತ್ರರ್ಕಳ್ಗೆ ಬಿಜ್ಜೆಯಂ ಕಲಿಸಿ ಪೊಳಲತ್ತ ಪೋಗಿ ಉದ್ಯೋಗಮಂ ಮಾಡಲ್ಕೆ ಪ್ರೋತ್ಸಾಹಮಂ ಕೊಟ್ಟರಂತುಮಾ ಪಳ್ಳಿಗರಿಂ ಪಟ್ಟಣಿಗರಿಂದಮೀ ಬೆಂದಕಾಳೂರು ತುಂಬಿವೋಗೀ ಕೇವಲ ಜನಸಾಗರಮಾಗಿರಲೊರ್ಮೆಗೆ ಪೊಸದಾಗೊರ್ವನೀ ಪೊಳಲ್ಗುದ್ಯೋಗಮನರಸಿಂ ಬಂದಂ
ರಾಮಚಂದ್ರನೆಂಬಭಿದಾನಮಂ ಪೊಂದಿರ್ದ ಮಾನಿಸಂ ಪೊಳಲೊಳ್ ತಂತ್ರಜ್ಞಾನ ವಿದ್ಯಾಭ್ಯಾಸ ಮಾಳ್ಪ ವಿದ್ಯಾಲಯದೊಳ್ ಕಲ್ತು ವಿಶೇಷಪರಿಣತನಾಗಿ ಪ್ರಾಪ್ತೋದ್ಯೋಗನುಮಾಗಿ ಗೇಹಮಂ ವಿಕ್ರಯಿಪನೊರ್ವನಿಂ ಲಕ್ಷಾಂತರರೂಪಾಯಿಗಳಂಗೊಟ್ಟು ಖರೀದಿಸಿ ವಾಸಿಸುತ್ತಿರ್ದಂ
ಮುಂದುವರೆಯುವುದು.....
ಮುಂದುವರೆಯುವುದು.....